Tag: treatment

  • ಕೊರೊನಾ ಭಯದಿಂದ ಚಿಕಿತ್ಸೆ ನೀಡದ ವೈದ್ಯರು- ಹೃದಯಾಘಾತದಿಂದ ವ್ಯಕ್ತಿ ಸಾವು

    ಕೊರೊನಾ ಭಯದಿಂದ ಚಿಕಿತ್ಸೆ ನೀಡದ ವೈದ್ಯರು- ಹೃದಯಾಘಾತದಿಂದ ವ್ಯಕ್ತಿ ಸಾವು

    ಕಾರವಾರ: ಹೃದಯಾಘಾತವಾದ ವ್ಯಕ್ತಿಗೆ ಕೊರೊನಾ ಭಯದಿಂದ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ ಹಿನ್ನೆಲೆ ರೋಗಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಮುರುಡೇಶ್ವರ ನಿವಾಸಿ ಹುಕ್ಮಾರಾಮ್ ಬೊರಾನ (65) ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ವ್ಯಕ್ತಿ. ಮೂಲತಃ ರಾಜಸ್ಥಾನದ ಹುಕ್ಮಾರಾಮ್ ಬೋರಾನ್ ಕಳೆದ 35 ವರ್ಷಗಳಿಂದ ಮುರುಡೇಶ್ವರದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದರು. ಸೋಮವಾರ ಬೆಳಗ್ಗೆ ಎದೆನೋವಿನಿಂದ ಅಸ್ವಸ್ಥಗೊಂಡ ಖಾಸಗಿ ಕ್ಲಿನಿಕ್‍ಗೆ ತೆರಳಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮರಳುವಾಗ ಮೂರ್ಚೆ ಹೋಗಿದ್ದಾರೆ.

    ನಂತರ ಕೂಡಲೇ ಸಂಬಂಧಿಕರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ವೈದ್ಯ ಪ್ರಿಯಾ ಗೋನ್ಸಾಲಿಸ್ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಚಿಕಿತ್ಸೆ ಕೊಡಲು ನಿರಾಕರಿಸಿ ಇಲ್ಲಿಂದ ತೆಗೆದುಕೊಂಡು ಹೋಗಿ ಇಲ್ಲವಾದರೆ ಪೊಲೀಸ್ ಠಾಣೆಗೆ ದೂರು ನೀಡುವೆ ಎಂದು ಬೆದರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಅಲ್ಲಿಂದ ನೇರವಾಗಿ ಮುರುಡೇಶ್ವರದ ಆರ್.ಎನ್.ಎಸ್. ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಚಿಕಿತ್ಸೆ ದೊರಕದೆ ಸುಮಾರು ಎರಡು ಗಂಟೆ ಅಲೆದಾಡಿದ ನಂತರ ಸ್ಥಳೀಯ ಕ್ಲಿನಿಕ್ ವೈದ್ಯರು ಪರೀಶೀಲನೆ ನಡೆಸಿ, ರೋಗಿ ಉಸಿರಾಡುತ್ತಿದ್ದು ಕೂಡಲೆ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿ ರೋಗಿ ಮೃತಪಟ್ಟಿದ್ದಾರೆ.

    ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ತಮ್ಮ ತಂದೆಯನ್ನು ಕಳೆದುಕೊಳ್ಳುವಂತಾಯಿತು ಎಂದು ಮೃತ ವ್ಯಕ್ತಿಯ ಮಗ ರಿತೇಶ್ ದೂರಿದ್ದಾರೆ. ಇನ್ನು ವೈದ್ಯರ ನಿರ್ಲಕ್ಷ್ಯಕ್ಕೆ ಮುರಡೇಶ್ವರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  • ಕೊರೊನಾ ಶುಲ್ಕದಿಂದ ಶಾಕ್- ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆದ ಬ್ಯುಸಿನೆಸ್ ಮ್ಯಾನ್

    ಕೊರೊನಾ ಶುಲ್ಕದಿಂದ ಶಾಕ್- ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆದ ಬ್ಯುಸಿನೆಸ್ ಮ್ಯಾನ್

    – ಕಚೇರಿಯನ್ನೇ ಆಸ್ಪತ್ರೆಯಾಗಿ ಪರಿವರ್ತಿಸಿದ

    ಗಾಂಧಿನಗರ: ಕೊರೊನಾ ಸೋಂಕಿನಿಂದ ಗುಣಮುಖರಾದ ಬ್ಯುಸಿನೆಸ್ ಮ್ಯಾನ್ ಬಡವರಿಗೆ ಉಚಿತ ಚಿಕಿತ್ಸೆ ನೀಡಲು ತಮ್ಮ ಕಚೇರಿಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಮಾನವೀಯತೆ ಮೆರೆದಿದ್ದಾರೆ.

    ಗುಜರಾತ್‍ನ ಸೂರತ್‍ನಲ್ಲಿ ಕಾದರ್ ಶೈಖ್ ಅವರು ಕೊರೊನಾ ಸೋಂಕಿತ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, 85 ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ. ತಮಗೆ ಕೊರೊನಾ ತಗುಲಿ 20 ದಿನಗಳ ಕಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು, ಗುಣಮುಖರಾದ ಬಳಿಕ ಶೈಖ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕೊರೊನಾ ಚಿಕಿತ್ಸೆಗೆ ತಗಲುವ ಭಾರೀ ಪ್ರಮಾಣದ ವೆಚ್ಚದಿಂದ ಬೇಸತ್ತು, ಬಡವರು ಈ ಪರಿಪ್ರಮಾಣದ ಶುಲ್ಕವನ್ನು ಹೇಗೆ ಭರಿಸುತ್ತಾರೆ ಎಂದು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

    ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ಚಿಕಿತ್ಸೆಯ ಶುಲ್ಕ ಕಂಡು ಬೆಚ್ಚಿಬಿದ್ದೆ. ಇಷ್ಟೊಂದು ಶುಲ್ಕವನ್ನು ಬಡವರು ಹೇಗೆ ಭರಿಸುತ್ತಾರೆ ಎಂಬ ಪ್ರಶ್ನೆ ಮೂಡಿತು. ಹೀಗಾಗಿ ಏನಾದರೂ ಮಾಡಬೇಕು, ಕೊರೊನಾ ವಿರುದ್ಧದ ಹೋರಾಟದಲ್ಲಿ ನಾನೂ ಕೊಡುಗೆ ನೀಡಬೇಕು ಎಂದೆನಿಸಿ ನನ್ನ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯನ್ನಾಗಿ ಬದಲಿಸಿದೆ ಎಂದು ಪ್ರಾಪರ್ಟಿ ಡೆವಲಪರ್ ತಿಳಿಸಿದ್ದಾರೆ.

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಶೈಖ್ ಅವರು ತನ್ನ 30,000 ಚ.ಅಡಿ ಕಚೇರಿ ಜಾಗದಲ್ಲಿ ಆಸ್ಪತ್ರೆ ಸೆಟ್ ಹಾಕಲು ಸ್ಥಳೀಯ ಆಡಳಿತದಿಂದ ಅವಕಾಶ ಪಡೆದಿದ್ದಾರೆ. ಸರ್ಕಾರ ಅಗತ್ಯ ಸೌಲಭ್ಯ, ಸಿಬ್ಬಂದಿ, ವೈದ್ಯಕೀಯ ಸಲಕರಣೆ ಹಾಗೂ ಔಷಧಿಯನ್ನು ನೀಡಿದೆ. ಶೈಖ್ ಅವರು ತಮ್ಮದೇ ಖರ್ಚಿನಲ್ಲಿ ಹಾಸಿಗೆ, ಇತರೆ ಸಲಕರಣೆ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದಾರೆ.

    ಯಾವುದೇ ಜಾತಿ, ಧರ್ಮದವರಾಗಿರಲಿ ಯಾರಾದರೂ ಆಸ್ಪತ್ರೆಗೆ ದಾಖಲಾಗಬಹುದು ಎಂದು ಶೈಖ್ ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಲಕ್ಷ ದಾಟುತ್ತಿದ್ದು, 35 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.

  • 4 ದಿನದ ಮಗುವಿಗೆ ಬ್ಲಡ್ ಕ್ಯಾನ್ಸರ್ -ಶಿವಮೊಗ್ಗ ಟು ಮಣಿಪಾಲ್ ಝೀರೋ ಟ್ರಾಫಿಕ್‍

    4 ದಿನದ ಮಗುವಿಗೆ ಬ್ಲಡ್ ಕ್ಯಾನ್ಸರ್ -ಶಿವಮೊಗ್ಗ ಟು ಮಣಿಪಾಲ್ ಝೀರೋ ಟ್ರಾಫಿಕ್‍

    ಶಿವಮೊಗ್ಗ : ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಲ್ಕು ದಿನದ ಮಗುವನ್ನು ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ನಲ್ಲಿ ರವಾನೆ ಮಾಡಲಾಯಿತು.

    ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಿಂದ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಭದ್ರಾವತಿಯ ಅಶ್ವಥ್ ನಗರದ ದೇವೆಂದ್ರ ಮತ್ತು ಸುಪ್ರಿಯಾ ದಂಪತಿಗೆ ನಾಲ್ಕು ದಿನದ ಹಿಂದೆ ಹೆಣ್ಣು ಮಗು ಜನಿಸಿತ್ತು. ಜನಿಸಿದ ಸಮಯದಲ್ಲಿಯೇ ಹಸುಗೂಸು ತನ್ನೂಂದಿಗೆ ರಕ್ತದ ಕ್ಯಾನ್ಸರ್ ಹೂತ್ತು ತಂದಿದೆ. ಇದನ್ನು ಪತ್ತೆ ಹಚ್ಚಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಮಗುವನ್ನು ಶಿವಮೊಗ್ಗದಿಂದ ಮಣಿಪಾಲ್ ವರೆಗೂ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಮಾಡಿದ್ದರು. ಶಿವಮೊಗ್ಗದಿಂದ ಉಡುಪಿಯ ಗಡಿ ಭಾಗದ ತನಕ ಶಿವಮೊಗ್ಗ ಜಿಲ್ಲೆಯ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ನಂತರ ಉಡುಪಿ ಪೊಲೀಸರು ಝೀರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

  • 24 ಗಂಟೆಯಲ್ಲಿ 5 ಬಲಿ – ಹಾಸನದಲ್ಲಿ 50ಕ್ಕೇರಿದ ಕೊರೊನಾ ಸಾವಿನ ಸಂಖ್ಯೆ

    24 ಗಂಟೆಯಲ್ಲಿ 5 ಬಲಿ – ಹಾಸನದಲ್ಲಿ 50ಕ್ಕೇರಿದ ಕೊರೊನಾ ಸಾವಿನ ಸಂಖ್ಯೆ

    ಹಾಸನ: ಹಾಸನದಲ್ಲಿ ಇಂದು ಕೊರೊನಾಗೆ ಐವರು ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದೆ.

    ಇಂದು ಮತ್ತೆ 104 ಕೊರೊನಾ ಪಾಸಿಟಿಸ್ ಪ್ರಕರಣಗಳು ಪತ್ತೆಯಾಗಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹಾಸನ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 1,842 ಕೊರೊನಾ ಸೋಂಕಿತರು ಕಂಡು ಬಂದಿದ್ದು, ಅದರಲ್ಲಿ 912 ಮಂದಿ ಸಕ್ರಿಯ ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 33 ಮಂದಿ ಸೇರಿ 880 ಮಂದಿ ಗುಣಮುಖರಾಗಿ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 25 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಹಾಸನ ತಾಲೂಕಿನಲ್ಲಿ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಇಂದಿಗೆ ಕೋವಿಡ್‍ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದ್ದು, ಜಿಲ್ಲೆಯ ಜನ ಆತಂಕದಲ್ಲಿ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ಹೆಗಲ ಮೇಲೆ ಆಕ್ಸಿಜನ್ ಸಿಲಿಂಡರ್, ಟ್ರೇಯಲ್ಲಿ ಕಂದಮ್ಮ- ಬದುಕುಳಿಯಲಿಲ್ಲ ಮಗು

    ಹೆಗಲ ಮೇಲೆ ಆಕ್ಸಿಜನ್ ಸಿಲಿಂಡರ್, ಟ್ರೇಯಲ್ಲಿ ಕಂದಮ್ಮ- ಬದುಕುಳಿಯಲಿಲ್ಲ ಮಗು

    -ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಕ್ಷೇತ್ರದಲ್ಲಿ ಅಮಾನವೀಯ ಘಟನೆ

    ಪಾಟ್ನಾ: ಬಿಹಾರದ ಆರೋಗ್ಯ ವ್ಯವಸ್ಥೆಯನ್ನು ತೋರಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ತಂದೆ ಹೆಗಲ ಮೇಲೆ ಆಕ್ಸಿಜನ್ ಸಿಲಿಂಡರ್ ಹೊತ್ತುಕೊಂಡಿದ್ರೆ, ತಾಯಿ ಟ್ರೇಯಲ್ಲಿ ನವಜಾತ ಶಿಶುವನ್ನು ಹಿಡಿದುಕೊಂಡಿದ್ದಾರೆ. ಕೇಂದ್ರ ರಾಜ್ಯ ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಕ್ಷೇತ್ರದಲ್ಲಿಯೇ ಘಟನೆ ನಡೆದಿದೆ.

    ಜುಲೈ 23ರಂದು ಈ ಘಟನೆ ನಡೆದಿದೆ. ರಾಜಪುರದ ಸುಖೌನಾ ಗ್ರಾಮದ ನಿವಾಸಿ ಸುಮನ್ ಕುಮಾರ್ ಗರ್ಭಿಣಿ ಪತ್ನಿಯನ್ನು ಬಕ್ಸರ್ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಆಸ್ಪತ್ರೆ ಸಿಬ್ಬಂದಿ ಗರ್ಭಿಣಿಯನ್ನು ದಾಖಲಿಸಿಕೊಂಡಿಲ್ಲ. ಕೊನೆಗೆ ಸುಮನ್ ಕುಮಾರ್ ಪತ್ನಿಯನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.

    ಸುಮನ್ ಪತ್ನಿಗೆ ಹೆರಿಗೆಯ ಬಳಿಕ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಖಾಸಗಿ ಆಸ್ಪತ್ರೆ ತಂದೆಯ ಹೆಗಲ ಮೇಲೆ ಆಕ್ಸಿಜನ್ ಸಿಲಿಂಡರ್ ಹೊರಿಸಿನ ಟ್ರೇಯಲ್ಲಿ ಮಗುವನ್ನು ಇರಿಸಿ ತಾಯಿಯ ಕೈಗೆ ಕೊಟ್ಟು ಹೊರಗೆ ಕಳುಹಿಸಿದ್ದಾರೆ. ಮಗುವಿಗೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಪೋಷಕರು ಆಕ್ಸಿಜನ್ ಸಿಲಿಂಡರ್ ಹೊತ್ತು ಆಸ್ಪತ್ರೆ ತಿರುಗಾಡಿದ್ದಾರೆ. ಕೊನೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವಷ್ಟರಲ್ಲಿ ಕಂದಮ್ಮನ ಪ್ರಾಣಪಕ್ಷಿ ಹಾರಿತ್ತು.

    ಫೋಟೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

  • ಕೊರೊನಾ ಟೆಸ್ಟ್ ಮಾಡದೆ ಮಾತ್ರೆ ಕೊಟ್ಟು ಕಳುಹಿಸಿದ್ರು – ಸೋಂಕಿನಿಂದ ವ್ಯಕ್ತಿ ಸಾವು

    ಕೊರೊನಾ ಟೆಸ್ಟ್ ಮಾಡದೆ ಮಾತ್ರೆ ಕೊಟ್ಟು ಕಳುಹಿಸಿದ್ರು – ಸೋಂಕಿನಿಂದ ವ್ಯಕ್ತಿ ಸಾವು

    – ಮೃತಪಟ್ಟ ನಂತರ ಕೊರೊನಾ ಟೆಸ್ಟ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಗೆ ಮತ್ತೊಂದು ಬಲಿಯಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

    ವಿರಾಜಪೇಟೆ ಪಟ್ಟಣದ ನಿವಾಸಿ ಸೈಯದ್ ಇಸ್ಮಾಯಿಲ್ ಮೃತಪಟ್ಟ ವ್ಯಕ್ತಿ. ಸೈಯದ್ ಇಸ್ಮಾಯಿಲ್ ಕಳೆದ 3 ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ನೀಡದೆ ಕೊರೊನಾ ಟೆಸ್ಟ್ ಕೂಡ ಮಾಡದೆ, ಕೇವಲ ಮಾತ್ರೆ ಕೊಟ್ಟು ಕಳುಹಿಸಿದ್ದರು ಎನ್ನಲಾಗಿದೆ.

    ಆದರೆ ಜ್ವರ ತೀವ್ರಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಅವರ ರಕ್ತ ಪರೀಕ್ಷೆ ನಡೆಸಲಾಗಿತ್ತು. ಅವರಿಗೆ ಡೆಂಗ್ಯೂ ಇದೆ ಎಂದು ವರದಿ ಬಂದಿತ್ತು. ಈ ಮಧ್ಯೆ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಿಗೆ ರ‍್ಯಾಪಿಡ್ ಕೋವಿಡ್ ಟೆಸ್ಟ್ ನಡೆಸುವಂತೆ ಮೃತ ವ್ಯಕ್ತಿಯ ಸಂಬಂಧಿಗಳು ಒತ್ತಾಯಿಸಿದ್ದರೂ ವೈದ್ಯರು ಟೆಸ್ಟ್ ಮಾಡುವುದಕ್ಕೆ ನಿರಾಕರಿಸಿದ್ದರು ಎಂದು ಸೋಂಕಿತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

    ಶನಿವಾರ ರಾತ್ರಿ ವ್ಯಕ್ತಿಗೆ ಜ್ವರ ತೀವ್ರಗೊಂಡಿದ್ದರಿಂದ ಮತ್ತೆ ವಿರಾಜಪೇಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟೊತ್ತಿಗಾಗಲೇ ವ್ಯಕ್ತಿಗೆ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿಯೂ ವೈದ್ಯರು ನೋಡದೆ, ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಹೀಗಾಗಿ ಮೃತ ವ್ಯಕ್ತಿಯ ಸಂಬಂಧಿಗಳು ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಇಸ್ಮಾಯಿಲ್ ಮೃತಪಟ್ಟಿದ್ದಾರೆ. ಬಳಿಕ ವೈದ್ಯರು ರ‍್ಯಾಪಿಡ್ ಟೆಸ್ಟ್ ನಡೆಸಿದಾಗ ಮೃತ ಸೈಯದ್ ಇಸ್ಮಾಯಿಲ್‍ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

    ಒಟ್ಟಿನಲ್ಲಿ ವಿರಾಜಪೇಟೆ ತಾಲೂಕು ಆಸ್ಪತ್ರೆ ವೈದ್ಯರು ಶುಕ್ರವಾರವೆ ಕೊರೊನಾ ಟೆಸ್ಟ್ ಮಾಡಿದರೆ. ಮೃತ ವ್ಯಕ್ತಿ ಬದುಕುತ್ತಿದ್ದರು. ನಾವೇ ಕೇಳಿದರೂ ಕೋವಿಡ್ ಟೆಸ್ಟ್ ನಡೆಸದೆ ನಿರ್ಲಕ್ಷ್ಯವಹಿಸಿದ್ದೇ ತಮ್ಮ ಸಂಬಂಧಿ ಸಾವನ್ನಪ್ಪಲು ಕಾರಣ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

  • ಆಶಾ ಕಾರ್ಯಕರ್ತೆ, ಆಟೋ ಚಾಲಕಿಗೆ ಉಪರಾಷ್ಟ್ರಪತಿ ಶ್ಲಾಘನೆ

    ಆಶಾ ಕಾರ್ಯಕರ್ತೆ, ಆಟೋ ಚಾಲಕಿಗೆ ಉಪರಾಷ್ಟ್ರಪತಿ ಶ್ಲಾಘನೆ

    – ಕನ್ನಡದಲ್ಲೇ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು

    ನವದೆಹಲಿ: ಬೆಳಗ್ಗಿನ ಜಾವ 3ಕ್ಕೆ ಕರೆ ಮಾಡಿದರೂ ನಿರ್ಲಕ್ಷ್ಯ ಮಾಡದೆ ತಾವೇ ಆಟೋ ಚಲಾಯಿಸಿಕೊಂಡು ಹೆರಿಗೆಗಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಮಹಿಳೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಕರ್ನಾಟಕದ ಉಡುಪಿಯಲ್ಲಿ ಬೆಳಗ್ಗಿನ ಜಾವ 3 ಗಂಟೆಯಲ್ಲಿ ಗರ್ಭಿಣಿ ಮಹಿಳೆಯನ್ನು ತಮ್ಮ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ಆಶಾ ಕಾರ್ಯಕರ್ತೆ  ರಾಜೀವಿ ಅವರ ಉದಾತ್ತ ಕಾರ್ಯವನ್ನು ಶ್ಲಾಘಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‍ನಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸುವ ರಾಜೀವಿ ಅವರು ಗರ್ಭಿಣಿಯರಿಗೆ ಉಚಿತ ಸವಾರಿಯ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ದೇವರು ಆಕೆಗೆ ಮಂಗಳವನ್ನುಂಟು ಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಆಶಾ ಕಾರ್ಯಕರ್ತೆ, ಮಧ್ಯಾಹ್ನ ನಂತರ ಆಟೋ ಚಾಲಕಿ

    ಇಂದು ಬೆಳಗ್ಗಿನ ಜಾವ 3.15ಕ್ಕೆ ಮಹಿಳೆಯೊಬ್ಬರು ರಾಜೀವಿ ಅವರಿಗೆ ಕರೆ ಮಾಡಿ ಹೆರಿಗೆ ನೋವು ಆಸ್ಪತ್ರೆಗೆ ಹೋಗಬೇಕು ಎಂದಿದಾರೆ. ತಕ್ಷಣವೇ ಎಚ್ಚೆತ್ತ ರಾಜೀವಿ ಅವರು, ಮಹಿಳೆಯನ್ನು ಕರೆದುಕೊಂಡು ಉಡುಪಿಯ ಆಸ್ಪತ್ರೆಗೆ ಹೋಗಿದ್ದಾರೆ. ಈ ಮೂಲಕ ಇಬ್ಬರ ಜೀವವನ್ನು ಉಳಿಸಿದ್ದಾರೆ. ಈ ಕುರಿತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಸ್ವತಃ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಐಸೋಲೇಷನ್ ವಾರ್ಡ್‍ನಲ್ಲಿ ಆರೈಕೆಯಿಲ್ಲದೆ ಅನ್ನಾಹಾರ ತ್ಯಜಿಸಿದ ಕಾಮೇಗೌಡರು

    ಐಸೋಲೇಷನ್ ವಾರ್ಡ್‍ನಲ್ಲಿ ಆರೈಕೆಯಿಲ್ಲದೆ ಅನ್ನಾಹಾರ ತ್ಯಜಿಸಿದ ಕಾಮೇಗೌಡರು

    ಮಂಡ್ಯ: ಐಸೋಲೇಷನ್ ವಾರ್ಡ್ ನಲ್ಲಿ ಆರೈಕೆ ಮಾಡುವವರು ಇಲ್ಲದ ಕಾರಣ ಕಾಮೇಗೌಡರು ಅನ್ನ ನೀರು ಸೇವಿಸುವುದನ್ನು ತ್ಯಜಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡು ಕೆರೆ ಕಟ್ಟೆಗಳು ನಿರ್ಮಿಸಿ ಪ್ರಖ್ಯಾತಿಯಾಗಿದ್ದಾರೆ. ಇತ್ತೀಚೆಗೆ ಕಾಲು ನೋವಿನಿಂದ ಬಳಲುತ್ತಿದ್ದ ಕಾಮೇಗೌಡರು ಮಳವಳ್ಳಿ ಮತ್ತು ಮಂಡ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿದ್ದು ದೃಢವಾಗಿದ್ದರಿಂದ ಕಾಮೇಗೌಡರನ್ನು ಮಂಡ್ಯದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ ಕಾಮೇಗೌಡರು- ಸಿನಿಮಾ ಆಗಲಿದೆ ಸಾಧನೆ

    ಕಾಲು ನೋವಿನಿಂದ ಬಳಲುತ್ತಿದ್ದ ಕಾಮೇಗೌಡರು ಮನೆಯಲ್ಲಿ ಶೌಚಾಲಯ ಸೇರಿದಂತೆ ಎಲ್ಲದಕ್ಕೂ ಮಕ್ಕಳನ್ನೇ ಅವಲಂಬಿಸಿದ್ದರು. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿದ್ದು, ಇತರೆ ಕೆಲಸಗಳ ಆರೈಕೆ ಇಲ್ಲದೆ ಕಾಮೇಗೌಡರು ಸೊರಗಿದ್ದಾರೆ. ಅನ್ನ ಆಹಾರ ಸೇವಿಸಿದ್ರೆ ಶೌಚಾಲಯಕ್ಕೆ ಹೋಗಬೇಕಾಗುತ್ತೆ ಎಂಬ ಕಾರಣಕ್ಕೆ ಊಟವನ್ನು ಕಾಮೇಗೌಡರು ಸೇವಿಸುತ್ತಿಲ್ಲ. ಇತ್ತ ಕಾಮೇಗೌಡರ ಇಬ್ಬರು ಮಕ್ಕಳು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಇದನ್ನೂ ಓದಿ: ಗುಡ್ಡಗಾಡಿನಲ್ಲಿ 16 ಕೆರೆ- ಮಂಡ್ಯದ ಕಾಮೇಗೌಡರ ಸಾಧನೆಗೆ ಮೋದಿ ಮೆಚ್ಚುಗೆ

  • ಸೋಂಕಿನಿಂದ ಗುಣಮುಖವಾದ 7 ದಿನದ ನಂತರ ಪೇದೆ ಸಾವು

    ಸೋಂಕಿನಿಂದ ಗುಣಮುಖವಾದ 7 ದಿನದ ನಂತರ ಪೇದೆ ಸಾವು

    – ಆರೋಗ್ಯ ಇಲಾಖೆಗೆ ತಲೆನೋವಾದ ಪೇದೆ ಪ್ರಕರಣ

    ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಮುಖ್ಯ ಪೇದೆಯ ಸಾವು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವು ತಂದಿದೆ.

    ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ಮುಖ್ಯ ಪೇದೆ ಗೌರಿಹಳ್ಳಿ ರವಿ (44) ಇಂದು ಮುಂಜಾನೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಆದರೆ ರವಿ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಂಡ ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋವಿಡ್ ಸೆಂಟರ್ ನಲ್ಲಿ 14 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅವರನ್ನು ಇದೇ ತಿಂಗಳು 17ರಂದು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

    ಇದಾದ ಬಳಿಕ ಮನೆಯಲ್ಲಿ ಇದ್ದ ರವಿ ಹೋಂ ಕ್ವಾರೆಂಟೈನ್ ಆಗಿದ್ದರು. ಅಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಅವರನ್ನು ಮತ್ತೆ ಪರೀಕ್ಷೆ ಮಾಡಿದಾಗಲೂ ಕೊರೊನಾ ಸೋಂಕು ಇರಲಿಲ್ಲ. ಹೀಗಾಗಿ ಅವರನ್ನು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ 7 ದಿನಗಳ ಬಳಿಕ ಮತ್ತೆ ರವಿ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಮೃತಪಟ್ಟಿದ್ದಾರೆ. ಹೀಗಾಗಿ ಈ ಸಾವು ಅರೋಗ್ಯ ಇಲಾಖೆಗೆ ಸವಾಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖ ಆದ ಬಳಿಕವೂ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.

     

    ಈಗ ಆರೋಗ್ಯದ ಇಲಾಖೆ ರವಿ ಶವದ ಸ್ವಾಬ್ ಟೆಸ್ಟ್ ಕಲೆಕ್ಟ್ ಮಾಡಿದ್ದು, ಮತ್ತೊಂದು ಬಾರಿ ಕೋವಿಡ್ ಪರೀಕ್ಷೆ ಮಾಡಲು ಮುಂದಾಗಿದೆ.

  • ನೆಗೆಟಿವ್ ರಿಪೋರ್ಟ್ ಬಂದ್ರೂ ಚಿಕಿತ್ಸೆ ಸಿಕ್ಕಿಲ್ಲ- ಸಹೋದರಿಯ ಮೃತದೇಹದ ಮುಂದೆ ತಮ್ಮನ ಅಳಲು

    ನೆಗೆಟಿವ್ ರಿಪೋರ್ಟ್ ಬಂದ್ರೂ ಚಿಕಿತ್ಸೆ ಸಿಕ್ಕಿಲ್ಲ- ಸಹೋದರಿಯ ಮೃತದೇಹದ ಮುಂದೆ ತಮ್ಮನ ಅಳಲು

    ಬೆಂಗಳೂರು: ಐದು ದಿನ ಆಸ್ಪತ್ರೆಗೆ ಅಲೆದಾಟ ಮಾಡಿದರೂ ಚಿಕಿತ್ಸೆ ಸಿಗದೇ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದೀಗ ಸಹೋದರಿಯ ಮೃತದೇಹದ ಎದುರು ಸಹೋದರ ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಐದು ದಿನ ಆಸ್ಪತ್ರೆಗೆ ಅಲೆದಾಟ ಮಾಡಿದರೂ ಚಿಕಿತ್ಸೆ ಸಿಗದೆ ಕಾಮಾಕ್ಷಿಪಾಳ್ಯದ ಮಹಿಳೆ ಮೃತಪಟ್ಟಿದ್ದಾರೆ. ಹೀಗಾಗಿ ಅಕ್ಕನ ಮೃತದೇಹದ ಮುಂದೆ ಸಹೋದರ ತನ್ನ ಅಳಲನ್ನು ಹೇಳಿಕೊಂಡಿದ್ದಾರೆ. ನಾವು ಮೂರು ದಿನ ಕೊರೊನಾ ರಿಪೋರ್ಟಿಗಾಗಿ ಆಸ್ಪತ್ರೆಯಲ್ಲಿ ಅಲೆದಾಡಿದ್ದೇವೆ. ಆಂಟಿಜೆನ್ ಮೂಲಕ ಕೋವಿಡ್ ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಹೋದ್ರೆ, ಆಂಟಿಜೆನ್ ಟೆಸ್ಟಿಂಗ್ ರಿಪೋರ್ಟ್ ನಾವು ನಂಬಲ್ಲ. ಆರ್‌ಟಿಪಿಸಿಆರ್ ಲ್ಯಾಬ್ ರಿಪೋರ್ಟ್ ಬೇಕು ಎಂದು ಹೇಳಿದರು. ಕೊನೆಗೆ ಐದು ದಿನ ಆಸ್ಪತ್ರೆಗೆ ಅಲೆದಾಟ ಮಾಡಿದರೂ ಚಿಕಿತ್ಸೆ ಸಿಗದೆ ನಮ್ಮ ಅಕ್ಕ ಮೃತಪಟ್ಟಿದ್ದಾರೆ ಎಂದು ಅಕ್ಕನ ಸಾವಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

    ಕೊನೆಗೆ ಸಾವನ್ನಪ್ಪಿದ ಮೇಲೆ ಕೊರೊನಾ ಪಾಸಿಟಿವ್ ಅಂತ ಗೊತ್ತಾಗುತ್ತೆ. ಮೃತದೇಹವನ್ನು ಮಣ್ಣು ಮಾಡಲು ಮತ್ತೆ ಈ ವ್ಯವಸ್ಥೆ ಅಲೆದಾಡಿಸಿತು. ಹೀಗಾಗಿ ಸರ್ಕಾರದ ಈ ವ್ಯವಸ್ಥೆಯಿಂದ ಬದುಕಿದ್ದಾಗಲೂ ಕಷ್ಟ, ಮೃತಪಟ್ಟ ಮೇಲೂ ಕಷ್ಟ ಎಂದು ಅಕ್ಕನ ಶವಪೆಟ್ಟಿಗೆ ಮುಂದೆ ತಮ್ಮ ಕಣ್ಣೀರು ಹಾಕಿದ್ದಾರೆ.

    ಏನಿದು ಪ್ರಕರಣ?
    ಕಾಮಾಕ್ಷಿಪಾಳ್ಯದ ಮಹಿಳೆಗೆ ಉಸಿರಾಟದ ತೊಂದರೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಆಕೆಯನ್ನು ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಕೋವಿಡ್ ರಿಪೋರ್ಟ್ ತೆಗೆದುಕೊಂಡು ಬನ್ನಿ ಅಂತ ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಕುಟುಂಬಸ್ಥರು ಮೂರು ದಿನದ ಬಳಿಕ ಹೇಗೋ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ವೆಂಟಿಲೇಟರ್ ವ್ಯವಸ್ಥೆ ಇರಲಿಲ್ಲ.

    ತದನಂತರ ಆಂಟಿಜೆನ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ಸರಿ ರಿಪೋರ್ಟ್ ಬಂದಿದೆ ಅಂತ ವೆಂಟಿಲೇಟರ್ ಇರುವ ಖಾಸಗಿ ಆಸ್ಪತ್ರೆಗೆ ಕೆಸಿ ಜನರಲ್‍ನಿಂದ ಕರೆದುಕೊಂಡು ಹೋಗಿದ್ದಾರೆ. ಆಗ ಆಂಟಿಜೆನ್ ಟೆಸ್ಟ್ ನಾವು ನಂಬಲ್ಲ ಲ್ಯಾಬ್ ರಿಪೋರ್ಟ್ ಬೇಕು ಎಂದು ಖಾಸಗಿ ಆಸ್ಪತ್ರೆಯವರು ಹೇಳಿದ್ದಾರೆ. ಕೊನೆಗೆ ಮತ್ತೆ ಟೆಸ್ಟ್ ಮಾಡಿಸಿ ರೋಗಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೆಂಟಿಲೇಟರ್ ಸಿಗದೆ ಒದ್ದಾಡಿ ಮಹಿಳೆ ಮೃತಪಟ್ಟಿದ್ದಾರೆ.

    ಅಷ್ಟರಲ್ಲಿ ಮೃತಪಟ್ಟ ದಿನ ಪಾಸಿಟಿವ್ ಎಂದು ಬಿಬಿಎಂಪಿ ಅಧಿಕಾರಿಗಳು ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಆದರೂ ಮೃತ ದೇಹವನ್ನು ನೀವೆ ಪ್ಯಾಕ್ ಮಾಡಿ ಕೊಡಬೇಕು. ನಾವು ಮುಟ್ಟಲ್ಲ ಎಂದು ಮತ್ತೆ ನಿರ್ಲಕ್ಷ್ಯ ತೋರಿಸಿದ್ದಾರೆ. ಕೊನೆಗೆ ಕುಟುಂಬಸ್ಥರೇ ಮೃತದೇಹವನ್ನು ಪ್ಯಾಕ್ ಮಾಡಿ ಬಿಬಿಎಂಪಿ ಸಿಬ್ಬಂದಿಗೆ ಕೊಟ್ಟಿದ್ದಾರೆ.