Tag: treatment

  • ಮನೆಗೆ ವಾಪಸ್ ಬರುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ವಿಮಾನ ನಿಲ್ದಾಣದಲ್ಲೇ ಸಾವು

    ಮನೆಗೆ ವಾಪಸ್ ಬರುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ವಿಮಾನ ನಿಲ್ದಾಣದಲ್ಲೇ ಸಾವು

    – ಅನಾರೋಗ್ಯವಿದ್ರೂ ವಿದ್ಯಾಭ್ಯಾಸ ಮುಂದುವರಿಸಿದ್ದ ವಿದ್ಯಾರ್ಥಿನಿ
    – ಆಕೆಯ ಪಾಲಿಗೆ ಅಧ್ಯಯನದ ಮೇಲಿನ ಉತ್ಸಾಹ ಎಲ್ಲಕ್ಕಿಂತ ಹೆಚ್ಚಾಗಿತ್ತು

    ತಿರುವನಂತಪುರಂ: ಕೇರಳ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ತಮ್ಮ ಮನೆಗೆ ವಾಪಸ್ ಬರುವ ಮೊದಲೇ ವಿಮಾನ ನಿಲ್ದಾಣದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಲೀಜಾ ಜೋಸ್ (28) ಮೃತ ಸಂಶೋಧನಾ ವಿದ್ಯಾರ್ಥಿನಿ. ಇವರು ದಕ್ಷಿಣ ಕೊರಿಯಾದಿಂದ ಕೇರಳದ ಇಡುಕ್ಕಿಯಲ್ಲಿರುವ ತಮ್ಮ ಮನೆಗೆ ವಾಪಸ್ ಬರುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಲೀಜಾ ಜೋಸ್ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಇಡುಕ್ಕಿ ಜಿಲ್ಲೆಯ ಚೆರುಥೋನಿ ಮೂಲದ ಲೀಜಾ ಜೋಸ್, ದಕ್ಷಿಣ ಕೊರಿಯಾದ ಪುಸಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದರು. ಮನೆಗೆ ವಾಪಸ್ ಬರಲು ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದಿದ್ದಾರೆ. ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಲೀಜಾ ಜೋಸ್ ಮೃತಪಟ್ಟಿದ್ದರು. ಆದರೆ ವಿದ್ಯಾರ್ಥಿನಿಯ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

    ಕುಟುಂಬದವರು ಆಕೆ ಅನಾರೋಗ್ಯದಿಂದ ಬಳಲುತ್ತಿದ್ದು, ಕಿವಿ ನೋವಿತ್ತು ಎಂದು ಹೇಳಿದ್ದಾರೆ. ಮೃತ ಲೀಜಾ ಜೋಸ್ ದಕ್ಷಿಣ ಕೊರಿಯಾದಲ್ಲಿ ನಾಲ್ಕು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಫೆಬ್ರವರಿಯಲ್ಲಿ ಕೇರಳಕ್ಕೆ ಬಂದಿದ್ದಾಗ ಲೀಜಾ ಜೋಸ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ವೀಸಾ ಅವಧಿ ಮುಗಿಯಲಿದ್ದರಿಂದ ಲೀಜಾ ಮತ್ತೆ ದಕ್ಷಿಣ ಕೊರಿಯಾಕ್ಕೆ ಹೋಗಿದ್ದರು.

    ನಾನು ಇಲ್ಲಿಯವರೆಗೆ ಮಾಡಿದ ಪ್ರಾಜೆಕ್ಟ್‌ಗಳನ್ನು ಹಿಂತಿರುಗಿಸದಿದ್ದರೆ ನನ್ನ ಸಂಶೋಧನೆ ವ್ಯರ್ಥವಾಗುತ್ತದೆ ಎಂದು ಪೋಷಕರಿಗೆ ಹೇಳಿದ್ದಳು. ದಕ್ಷಿಣ ಕೊರಿಯಾಕ್ಕೆ ಹಿಂದಿರುಗಿದ ನಂತರ ಲೀಜಾ 14 ದಿನಗಳ ಕಾಲ ಕ್ವಾರಂಟೈನಲ್ಲಿದ್ದರು. ಈ ಸಮಯದಲ್ಲಿಯೇ ಅವಳಿಗೆ ಕಿವಿ ನೋವು ಕಾಣಿಸಿಕೊಂಡಿದೆ. ಅಲ್ಲದೇ ಕಫ ಕೂಡ ಇತ್ತು. ಆದರೆ ಕೋವಿಡ್ ಟೆಸ್ಟ್ ಮಾಡಿಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿತ್ತು. ನಂತರ ವೈದ್ಯಕೀಯ ಸಲಹೆ ಮೇರೆಗೆ ಕ್ಯಾರೆಂಟೈನ್ ಅವಧಿ ಮುಗಿದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

    ಲೀಜಾಗೆ ವೈದ್ಯರು ಔಷಧಿ ನೀಡಿದ್ದರು. ಒಂದು ವೇಳೆ ಔಷಧಿಗಳಿಂದ ಗುಣಮುಖವಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುತ್ತದೆ ಎಂದು ತಿಳಿಸಿದ್ದರು. ಲೀಜಾ ಪೋಷಕರು ಮಗಳ ಆರೋಗ್ಯ ಸ್ಥಿತಿಯನ್ನು ತಿಳಿದ ನಂತರ ಶೀಘ್ರದಲ್ಲೇ ಮನೆಗೆ ವಾಪಸ್ ಬರುವಂತೆ ಕೇಳಿಕೊಂಡಿದ್ದರು. ಆದರೆ ಲೀಜಾ ತನ್ನ ಅಧ್ಯಯನವನ್ನು ಮುಂದುವರಿಸಲು ಮತ್ತು ಪಿಎಚ್‍ಡಿ ಪಡೆಯಲು ನಿರ್ಧರಿಸಿದ್ದಳು. ಅವಳ ಪಾಲಿಗೆ ಅಧ್ಯಯನದ ಮೇಲಿನ ಉತ್ಸಾಹ ಎಲ್ಲಕ್ಕಿಂತ ಹೆಚ್ಚಾಗಿತ್ತು ಎಂದು ಲೀಜಾ ಚಿಕ್ಕಪ್ಪ ಹೇಳಿದ್ದಾರೆ.

  • ಅನ್ನ, ನೀರು ಸಿಗದೆ ನರಳಿ ಪ್ರಾಣ ಬಿಟ್ಟ ಕೊರೊನಾ ಸೋಂಕಿತ

    ಅನ್ನ, ನೀರು ಸಿಗದೆ ನರಳಿ ಪ್ರಾಣ ಬಿಟ್ಟ ಕೊರೊನಾ ಸೋಂಕಿತ

    ಬಳ್ಳಾರಿ: ಹೋಂ ಐಸೊಲೇಷನ್‍ನಲ್ಲಿದ್ದ ಕೊರೊನಾ ಸೋಂಕಿತ ಹಸಿವಿನಿಂದ ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿಯ ಬಿ ಬೆಳಗಲ್ಲು ಗ್ರಾಮದಲ್ಲಿ ಈ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿದ್ದು, ಮನೆಯಲ್ಲೇ ಪ್ರತ್ಯೇಕವಾಗಿದ್ದ ಕೊರೊನಾ ಸೋಂಕಿತ ವೃದ್ಧ ವ್ಯಕ್ತಿ ಊಟ ಸಿಗದೇ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಬಳ್ಳಾರಿ ಜಿಲ್ಲಾಡಳಿತ ಆದೇಶ ನೀಡಿದೆ.

    ಮೂಲಗಳ ಪ್ರಕಾರ ಬಳ್ಳಾರಿಯ ಟಿ ಬೆಳಗಲ್ಲು ಗ್ರಾಮದ ವೃದ್ಧ ವ್ಯಕ್ತಿಗೆ ಸೋಂಕು ತಗುಲಿರುವ ವಿಚಾರ ತಿಳಿಯುತ್ತಲೇ ಅವರನ್ನು ಕುಟುಂಬಸ್ಥರು ಮನೆಯಲ್ಲೇ ಬಿಟ್ಟು ಪ್ರತ್ಯೇಕವಾಗಿ ಹೊರಟು ಹೋಗಿದ್ದಾರೆ. ಮನೆಯಲ್ಲೇ ಇದ್ದ ಸೋಂಕಿತ ವೃದ್ಧ ಕೋವಿಡ್ ಸಹಾಯವಾಣಿಗೆ ನಿರಂತರವಾಗಿ ಕರೆ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ.

    ಹೀಗಾಗಿ ಅನ್ನ ನೀರು, ಸೂಕ್ತ ಚಿಕಿತ್ಸೆ ಸಿಗದೇ ವೃದ್ಧ ಮನೆಯಲ್ಲೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ತನಿಖೆಗೆ ಆದೇಶ ಮಾಡಿದ್ದಾರೆ.

  • ತಂದೆಯ ಆರೋಗ್ಯ ಸ್ಥಿರವಾಗಿದೆ- ಪ್ರಣಬ್ ಮುಖರ್ಜಿ ಪುತ್ರ

    ತಂದೆಯ ಆರೋಗ್ಯ ಸ್ಥಿರವಾಗಿದೆ- ಪ್ರಣಬ್ ಮುಖರ್ಜಿ ಪುತ್ರ

    – ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಆರೋಗ್ಯದಲ್ಲಿ ಸುಧಾರಣೆಯಾಗಿದೆ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಅವರ ಆರೋಗ್ಯ ಸುಧಾರಿಸುತ್ತಿದ್ದು, ಸ್ಥಿರವಾಗಿದ್ದಾರೆ ಎಂದು ಅವರ ಪುತ್ರ ಹಾಗೂ ಕಾಂಗ್ರೆಸ್ ನಾಯಕ ಅಭಿಜಿತ್ ಮುಖರ್ಜಿ ಮಾಹಿತಿ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅಭಿಜಿತ್ ಬ್ಯಾನರ್ಜಿ, ನಾನು ಆಸ್ಪತ್ರೆಗೆ ಭೇಟಿ ನೀಡಿದ್ದು, ದೇವರ ಆಶೀರ್ವಾದದಿಂದಾಗಿ ನಿಮ್ಮೆಲ್ಲರ ಹಾರೈಕೆಯಿಂದ ಈ ಹಿಂದಿನ ದಿನಗಳಿಗಿಂತ ಇದೀ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸ್ಥಿರವಾಗಿದ್ದಾರೆ. ಅಲ್ಲದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರವೇ ಅವರು ಮತ್ತೆ ನಮ್ಮನ್ನು ಸೇರಲಿದ್ದಾರೆ ಎಂದು ನಾವು ಬಲವಾಗಿ ನಂಬಿದ್ದೇವೆ ಎಂದು ತಿಳಿಸಿದ್ದಾರೆ.

    ಆಗಸ್ಟ್ 10ರಂದು ಪ್ರಣಬ್ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆ ಬಳಿಕ ಸೋಮವಾರ ರಾತ್ರಿಯಿಂದಲೇ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ರೀತಿ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ಅವರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿತ್ತು. ನಂತರ ಚಿಕಿತ್ಸೆ ಮುಂದುವರಿಸಿದ್ದು, ವೆಂಟಿಲೇಟರ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಸ್ವತಃ ಮಾಜಿ ರಾಷ್ಟ್ರಪತಿಗಳೇ ಟ್ವೀಟ್ ಮಾಡಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾದೆ. ಇದೀಗ ವರದಿ ಪಾಸಿಟಿವ್ ಎಂದು ಬಂದಿದ್ದು, ಯಾರೂ ಆತಂಕ ಪಡಬೇಡಿ. ಹಾಗೆಯೇ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಪರೀಕ್ಷೆಗೆ ಒಳಗಾಗಿ, ಹೋಂ ಐಸೋಲೇಟ್ ಆಗಿ ಎಂದು ಮನವಿ ಮಾಡಿಕೊಂಡಿದ್ದರು.

  • ಕೋವಿಡ್ ಆಸ್ಪತ್ರೆ ಎಡವಟ್ಟು – ಊಟದ ಸ್ಥಳದಲ್ಲೇ ಮೃತದೇಹದ ಆತಂಕ

    ಕೋವಿಡ್ ಆಸ್ಪತ್ರೆ ಎಡವಟ್ಟು – ಊಟದ ಸ್ಥಳದಲ್ಲೇ ಮೃತದೇಹದ ಆತಂಕ

    ರಾಯಚೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನ ಕೂಡಲೇ ಶವಾಗಾರಕ್ಕೆ ಸಾಗಿಸಬೇಕು. ಆದರೆ ರಾಯಚೂರಿನ ಕೋವಿಡ್ ಆಸ್ಪತ್ರೆಯಲ್ಲಿ ಸುಮಾರು ಗಂಟೆಗಳ ಕಾಲ ಸೋಂಕಿತರ ಪಕ್ಕದಲ್ಲೇ ಶವವನ್ನು ಇಡಲಾಗಿತ್ತು.

    ಸೋಂಕಿತರಿಗೆ ಊಟ ನೀಡುವ ಸ್ಥಳದಲ್ಲಿಯೇ ಮೃತದೇಹವನ್ನ ಪ್ಯಾಕ್ ಮಾಡಿ ಇಡಲಾಗಿತ್ತು. ಹೀಗಾಗಿ ಊಟ ತೆಗೆದುಕೊಂಡು ಹೋಗಲು, ಬರುವ ಪ್ರತಿಯೊಬ್ಬರು ಮೃತದೇಹದ ಪಕ್ಕದಲ್ಲೇ ನಿಂತುಕೊಂಡು ಊಟ ತೆಗೆದುಕೊಳ್ಳಬೇಕಾದ ಅವ್ಯವಸ್ಥೆಗೆ ಜನರನ್ನು ಹೈರಾಣಾಗಿಸಿದೆ.

    ಸಾಮಾಜಿಕ ಅಂತರ ಕಾಪಾಡಲು ಹೇಳುವ ವೈದ್ಯರೇ ಈ ರೀತಿಯ ಕೆಲಸ ಮಾಡುತ್ತಾರೆ. ರೋಗಿಗಳನ್ನ ನೋಡಲು ಸಹ ಪ್ರತಿದಿನ ಬರುವುದಿಲ್ಲ. ಮೃತದೇಹವನ್ನ ಮಾತ್ರ ಗಂಟೆಗಟ್ಟಲೇ ಆಸ್ಪತ್ರೆಯಲ್ಲಿ ಎಲ್ಲಂದರಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಊಟಕ್ಕಾಗಿ ಕೊರೊನಾ ಸೋಂಕಿತರು ಗ್ರೌಂಡ್ ಫ್ಲೋರ್ ಗೆ ಬರಬೇಕು. ಒಂದೊಂದು ಸಾರಿ ಸಮಯಕ್ಕೆ ಊಟ ಸಿಗುತ್ತೆ. ಮತ್ತೆ ಒಂದೊಂದು ಬಾರಿ ಸರಿಯಾಗಿ ಸಿಗಲ್ಲ. ಕೋವಿಡ್ ವಾರ್ಡಿನ ಗೇಟ್ ಯಾವಾಗಲೂ ತೆರೆದಿರುತ್ತೆ. ರೋಗಿಗಳು, ಸೋಂಕು ಅಲ್ಲದೆ ಇರುವವರು ಸಹ ಹೊರಗೆ ಒಳಗೆ ಓಡಾಡುತ್ತಲೇ ಇರುತ್ತಾರೆ. ಕೊರೊನಾ ಸೋಂಕಿತರು ಬಂದು ಎರಡು ಗಂಟೆಗಳಾದರೂ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯವಹಿಸುತ್ತದೆ ಎಂದು ಸೋಂಕಿತ ವ್ಯಕ್ತಿ ಹೇಳಿದ್ದಾರೆ.

    ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಜೊತೆಗೆ ಧೈರ್ಯ ತುಂಬಿ ಗುಣಮುಖರನ್ನಾಗಿ ಮಾಡಬೇಕಾದ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಕನಿಷ್ಠ ಸೌಲಭ್ಯ ಒದಗಿಸುವುದರ ಜೊತೆ ಆಸ್ಪತ್ರೆಯ ಪರಿಸ್ಥಿತಿ ಸುಧಾರಿಸಬೇಕಿದೆ ಎಂದು ಸೋಂಕಿತರು ಹೇಳುತ್ತಿದ್ದಾರೆ.

  • ಕೇವಲ 7 ದಿನಗಳಲ್ಲಿ 36 ಸಾವು – 3,935 ಪಾಸಿಟಿವ್ ಪ್ರಕರಣ

    ಕೇವಲ 7 ದಿನಗಳಲ್ಲಿ 36 ಸಾವು – 3,935 ಪಾಸಿಟಿವ್ ಪ್ರಕರಣ

    ಬಳ್ಳಾರಿ: ಸದ್ಯಕ್ಕೆ ಕೊರೊನಾ ಅಟ್ಟಹಾಸ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲೂ ಗಣಿ ನಾಡು ಬಳ್ಳಾರಿಯಲ್ಲಿ ಮಾತ್ರ ಕೊರೊನಾ ಮಹಾಮಾರಿ ರುದ್ರ ನರ್ತನ ಮಾಡುತ್ತಿದ್ದು, ಕೇವಲ ಒಂದೇ ಒಂದು ವಾರದಲ್ಲಿ 3,935 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯ ಜನತೆಯ ನಿದ್ದೆಗೆಡಿಸಿದೆ.

    ಕಳೆದ ಏಳು ದಿನಗಳಲ್ಲಿ 36 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗೆ ಹೋಲಿಕೆ ಮಾಡಿಕೊಂಡರೆ ಬಳ್ಳಾರಿ ಅಗ್ರಸ್ಥಾನದಲ್ಲಿ ಇದೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು 12,527 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಪರೀಕ್ಷೆ ಮಾಡುವಲ್ಲಿಯೂ ಸಹ ಜಿಲ್ಲೆ ಎರಡನೇ ಸ್ಥಾನದಲ್ಲಿ ಇದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಮೂರು ಕೃಷಿ ಅಧಿಕಾರಿಗಳು ಸಹ ಸಾವಿಗೀಡಾಗಿದ್ದಾರೆ. ಜೊತೆಗೆ ನಾಲ್ಕು ಜನ ಪೊಲೀಸ್ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಕಳೆದ ವಾರದಲ್ಲಿ ಎರಡು ದಿನಗಳ ಅಂತರದಲ್ಲಿ 18 ಸಾವನ್ನಪ್ಪಿದ್ದಾರೆ. ಬಳ್ಳಾರಿ ನಗರದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿದೆ. ಬಳ್ಳಾರಿ ನಗರದಲ್ಲೇ 5,429 ಜನರು ಸೋಂಕಿತರಾಗಿದ್ದಾರೆ. ಬಳ್ಳಾರಿ ಹಾಗೂ ಹೊಸಪೇಟೆ ಈ ಎರಡು ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

  • ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ

    ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ

    ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ಈವರೆಗೂ 10,263 ಜನರಿಗೆ ಸೋಂಕು ತಗಲಿದೆ. ಅದರಲ್ಲಿ ಸುಮಾರು 296 ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ ನೂರು ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ತಲೆ ಎತ್ತಿದೆ.

    296 ಜನರಲ್ಲಿ ಬಹುತೇಕ ಸಿಬ್ಬಂದಿ ಎ ಸಿಮ್ಟಮ್ಯಾಟಿಕ್ ಹೊಂದಿರುವ ಕಾರಣ ಪೊಲೀಸ್ ಇಲಾಖೆ ತನ್ನ ಎಲ್ಲಾ ಸಿಬ್ಬಂದಿಯನ್ನು ಒಂದೇ ಕಡೆಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದೆ. ಹೀಗಾಗಿ ಬಳ್ಳಾರಿಯ ಕೌಲ್ ಬಜಾರ್ ಬಳಿ ಇರುವ ವಾಲ್ಮೀಕಿ ಭವನವನ್ನು ಕೋವಿಡ್ ಕೇರ್ ಸೆಂಟರ್ ಮಾಡಿಕೊಂಡಿದ್ದು, ಸುಮಾರು ನೂರು ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಇರುವ ಸೋಂಕಿತ ಪೊಲೀಸರಿಗೆ ಇನ್ನು ಮುಂದೆ ವಾಲ್ಮೀಕಿ ಭವನದಲ್ಲಿ ಚಿಕಿತ್ಸೆ ನೀಡಲಾಗುವುದು.

    ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಎಸ್.ಪಿ. ಸಿಕೆ ಬಾಬಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆಯಲ್ಲಿ ಮಾತನಾಡಿದ ಜಿಲ್ಲಾ ಎಸ್.ಪಿ., ದಿನೇ ದಿನೇ ಪೊಲೀಸರು ಹೆಚ್ಚು ಸೋಂಕಿತರಾಗುತ್ತಿದ್ದಾರೆ. ಅವರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಅವರಿಗೆ ಪ್ರತ್ಯೇಕವಾದ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿ, ಬೇಗ ಚಿಕಿತ್ಸೆ ನೀಡಿ ಮತ್ತೆ ಅವರನ್ನು ಕೆಲಸಕ್ಕೆ ಹಾಜರಾಗುವಂತೆ ಮಾಡಲಾಗುವುದು ಎಂದಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ ನಾಲ್ವರು ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣ ನೀಡಿದ್ದಾರೆ. ಅವರಿಗೆ ಸರ್ಕಾರ ಹಾಗೂ ಇಲಾಖೆಯಿಂದ ಸಿಗಬೇಕಾದ ಗೌರವ ನೀಡಲಾಗಿದೆ ಎಂದು ತಿಳಿಸಿದ್ದಾರೆ.

  • ಖಾಸಗಿ ಆಸ್ಪತ್ರೆ ಮೊಂಡಾಟ ಮುಂದುವರಿಕೆ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಸಾವು

    ಖಾಸಗಿ ಆಸ್ಪತ್ರೆ ಮೊಂಡಾಟ ಮುಂದುವರಿಕೆ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಸಾವು

    ಬೆಂಗಳೂರು: ಸರ್ಕಾರ ಎಷ್ಟು ಬಾರಿ ಎಚ್ಚರಿಕೆ ಕೊಟ್ಟಿದ್ದರೂ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.

    70 ವರ್ಷದ ವೃದ್ಧೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಮಹಾಲಕ್ಷ್ಮಿ ಲೇಔಟ್‍ನಲ್ಲಿ ವೃದ್ಧೆಗೆ ಆರೋಗ್ಯ ಸಮಸ್ಯೆ ಕಾಣಿಸಿದೆ. ತಕ್ಷಣ ಅವರನ್ನು ವೆಸ್ಟ್ ಆಫ್ ಕಾರ್ಡ್ ರೋಡ್‍ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಆಸ್ಪತ್ರೆಯಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಾಗಿದೆ. ಆದರೆ ಇಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಇಲ್ಲ ಎಂದು ಹೇಳಿ ವೈದ್ಯರು ಕಳುಹಿಸಿದ್ದಾರೆ. ಕೊನೆಗೆ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ವೃದ್ಧೆ ಮೃತಪಟ್ಟಿದ್ದಾರೆ.

    ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಬೆಡ್ ಇಲ್ಲ ಅಂತ ನೆಪ ಹೇಳಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಪರಿಣಾಮ 70 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಇದರಿಂದ ಸರ್ಕಾರ ಎಷ್ಟೇ ಎಚ್ಚರಿಕೆ ಕೊಟ್ಟರೂ ಖಾಸಗಿ ಆಸ್ಪತ್ರೆ ಮಾತ್ರ ಅಮಾನವೀಯವಾಗಿ ವರ್ತಿಸುತ್ತಿರುವುದು ಪದೇ ಪದೇ ಸಾಬೀತಾಗುತ್ತಿದೆ.

  • ಮಣಿಪಾಲ ಆಸ್ಪತ್ರೆಯಲ್ಲಿ ಶಿರಾ ಶಾಸಕ ಸತ್ಯನಾರಾಯಣ ವಿಧಿವಶ

    ಮಣಿಪಾಲ ಆಸ್ಪತ್ರೆಯಲ್ಲಿ ಶಿರಾ ಶಾಸಕ ಸತ್ಯನಾರಾಯಣ ವಿಧಿವಶ

    ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಶಿರಾ ಶಾಸಕ ಸತ್ಯನಾರಾಯಣ (69) ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಶಾಸಕ ಸತ್ಯನಾರಾಯಣ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ರಾತ್ರಿ 10.45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

    ಸತ್ಯನಾರಾಯಣ ಅವರು ನಾನ್ ಕೋವಿಡ್ ಆಗಿದ್ದು, ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಬಂದಿದೆ. ಇವರಿಗೆ ಅನೇಕ ವರ್ಷಗಳಿಂದ ಲಿವರ್ ಸಮಸ್ಯೆ ಇತ್ತು ಎಂದು ತಿಳಿದುಬಂದಿದೆ.

    ಶಾಸಕ ಸತ್ಯನಾರಾಯಣ ಅವರು ನಾಲ್ಕು ಬಾರಿ ಶಿರಾದಲ್ಲಿ ಶಾಸಕರಾಗಿದ್ದು, ಎರಡು ಬಾರಿ ಸಚಿವರಾಗಿದ್ದರು. ಸಣ್ಣ ಕೈಗಾರಿಕಾ, ನೀರಾವರಿ ಮತ್ತು ಲಾಟರಿ ಸಚಿವರಾಗಿದ್ದರು. ಸತ್ಯನಾರಾಯಣ ಅವರು ಮೂಲತಃ ಶಿರಾದ ಭುವನಹಳ್ಳಿ ಗ್ರಾಮದವರಾಗಿದ್ದು, ವಕೀಲರಾಗಿದ್ದರು. ಇವರು ಓರ್ವ ಪುತ್ರ ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

    ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಸತ್ಯನಾರಾಯಣ ನಿಧನ ಬಗ್ಗೆ ಸಂತಾಪ ಸೂಚಿಸಿದ್ದಾರೆ. “ಮಾಜಿ ಸಚಿವರು ಮತ್ತು ಶಾಸಕರು ಹಾಗೂ ನನ್ನ ಸನ್ಮಿತ್ರರು ಆದ ಶ್ರೀ ಬಿ. ಸತ್ಯನಾರಾಯಣ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಸತ್ಯನಾರಾಯಣ್ ಮತ್ತು ನನ್ನ ಸ್ನೇಹ ಸುಮಾರು 3 ದಶಕಗಳದ್ದು ಅವರಿಲ್ಲದ ದಿನಗಳನ್ನು ನೆನೆಯಲು ನನ್ನಿಂದ ಸಾಧ್ಯವೇ ಇಲ್ಲ” ಎಂದು ನೆನಪಿಸಿಕೊಂಡಿದ್ದಾರೆ.

    ಸತ್ಯನಾರಾಯಣ್ ಅವರು ತುಂಬಾ ಮೃದು ಸ್ವಭಾವದವರು ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಮೃತರ ಆತ್ಮಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

  • ಸಿಎಂ ಬೇಗ ಗುಣಮುಖರಾಗಲಿ – ಮುಸ್ಲಿಂ ಬಾಂಧವರಿಂದ ದರ್ಗಾದಲ್ಲಿ ಪ್ರಾರ್ಥನೆ

    ಸಿಎಂ ಬೇಗ ಗುಣಮುಖರಾಗಲಿ – ಮುಸ್ಲಿಂ ಬಾಂಧವರಿಂದ ದರ್ಗಾದಲ್ಲಿ ಪ್ರಾರ್ಥನೆ

    ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಮುಸ್ಲಿಂ ಬಾಂಧವರು ದರ್ಗಾದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

    ನಗರದ ಕೋರ್ಟ್ ವೃತ್ತದ ಬಳಿ ಇರುವ ಹಜ್ರತ್ ಸಯ್ಯದ್ ಶಾ ಅಲೀಂ ದಿವಾನ್ ದರ್ಗಾದಲ್ಲಿ ಮುಸ್ಲಿಂ ಬಾಂಧವರು ಪೂಜೆ ಸಲ್ಲಿಸಿದರು. ಅಲ್ಲಾಗೆ ಹೂವಿನ ಚಾದರ ಹಾಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊರೊನಾದಿಂದ ಬೇಗ ಗುಣಮುಖರಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಸಿಎಂ ಯಡಿಯೂರಪ್ಪ ಅವರು ಕೊರೊನಾ ದೃಢವಾದ ತಕ್ಷಣ ಆಗಸ್ಟ್ 2 ರಂದು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಳಿಕ ಮೊದಲ ವಿಡಿಯೋ ಸಂದೇಶ ಕಳುಹಿಸಿದ್ದು, ಯಾರಿಗೂ ಆತಂಕ ಬೇಡ, ಆರೋಗ್ಯವಾಗಿದ್ದೇನೆ. ಬೇಗ ಗುಣಮುಖನಾಗುತ್ತೇನೆಂದು ವೈದ್ಯರು ಹೇಳಿರುವುದಾಗಿ ತಿಳಿಸಿದ್ದರು.

    ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಸುದರ್ಶನ್ ಬಲ್ಲಾಳ್ ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಸಿಎಂ ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಕೊರೊನಾ ರೋಗ ಲಕ್ಷಣದ ತೀವ್ರತೆ ಕಡಿಮೆ ಇದೆ. ಸದ್ಯಕ್ಕೆ ಸಿಎಂ ಅವರ ಆರೋಗ್ಯ ಉತ್ತಮವಾಗಿದೆ. ಪ್ರೋಟೋಕಾಲ್‍ಗಳ ಪ್ರಕಾರ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ನುರಿತ ವೈದ್ಯರ ತಂಡದಿಂದ ಸಿಎಂಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದರು.

  • ನನ್ನ ತಂದೆಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ, ಶೀಘ್ರ ಗುಣಮುಖರಾಗ್ತಾರೆ- ಸಿಎಂ ಪುತ್ರಿ ಅರುಣಾದೇವಿ

    ನನ್ನ ತಂದೆಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ, ಶೀಘ್ರ ಗುಣಮುಖರಾಗ್ತಾರೆ- ಸಿಎಂ ಪುತ್ರಿ ಅರುಣಾದೇವಿ

    ಶಿವಮೊಗ್ಗ: ನಮ್ಮ ತಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗುತ್ತಾರೆ ಎಂದು ಪುತ್ರಿ ಅರುಣಾದೇವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆತಂಕ ಬೇಡ, ಆರೋಗ್ಯವಾಗಿದ್ದೇನೆ- ಆಸ್ಪತ್ರೆಯಿಂದ ಸಿಎಂ ವಿಡಿಯೋ ಸಂದೇಶ

    ಶಿವಮೊಗ್ಗದ ಗೋಪಾಳ ಬಡಾವಣೆಯ ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರುಣಾದೇವಿ, ನನ್ನ ತಂದೆಯವರಾದ ಯಡಿಯೂರಪ್ಪ ಅವರಿಗೆ ಭಾನುವಾರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೊರೊನಾದಿಂದ ಬೇಗ ಗುಣಮುಖರಾಗಿ ರಾಜ್ಯವನ್ನು ಮುನ್ನಡೆಸಲಿದ್ದಾರೆ. ಯಾರೂ ಆತಂಕ ಪಡುವುದು ಬೇಡ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

    ನನ್ನ ತಂದೆ ಅವರಿಗೆ ಮುಂಜಾನೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಆರೋಗ್ಯವಾಗಿದ್ದೇನೆ ಯಾರೂ ಆತಂಕ ಪಡುವುದು ಬೇಡ ಎಂದು ಅವರು ಸಹ ತಿಳಿಸಿದ್ದಾರೆ. ನಿನ್ನೆಯಿಂದಲೂ ಜನ ಕರೆ ಮಾಡಿ ತಂದೆಯವರ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದರು.

    ವಿರೋಧ ಪಕ್ಷದ ನಾಯಕರುಗಳು ಸಹ ಟ್ವೀಟ್, ಮೆಸೇಜ್ ಮೂಲಕ, ರಾಜ್ಯದಾದ್ಯಂತ ಕಾರ್ಯಕರ್ತರು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಎಲ್ಲರ ಹಾರೈಕೆಯಿಂದಾಗಿ ಶೀಘ್ರ ಗುಣಮುಖರಾಗುತ್ತಾರೆ ಎಂದರು.

    ಅಲ್ಲದೇ ನನ್ನ ಅಪ್ಪ ಯಡಿಯೂರಪ್ಪ ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಅವರು ಉತ್ತಮ ಆರೋಗ್ಯದೊಂದಿಗೆ ಇದ್ದವರು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಅಷ್ಟೇ. ಶೀಘ್ರ ಗುಣಮುಖರಾಗಿ ಕೊರೊನಾ ಗೆದ್ದು ಬರಲಿದ್ದಾರೆ ಎಂದು ಸಿಎಂ ಪುತ್ರಿ ಅರುಣಾದೇವಿ ತಿಳಿಸಿದರು.