Tag: treatment

  • ವೈದ್ಯನ ಎಡವಟ್ಟಿನಿಂದ ಕಣ್ಣು ಕಳೆದುಕೊಂಡ ಬಾಲಕ – ಮಗನಿಗಾಗಿ ಜಮೀನು ಮಾರಿದ ತಂದೆ

    ವೈದ್ಯನ ಎಡವಟ್ಟಿನಿಂದ ಕಣ್ಣು ಕಳೆದುಕೊಂಡ ಬಾಲಕ – ಮಗನಿಗಾಗಿ ಜಮೀನು ಮಾರಿದ ತಂದೆ

    – ಎಫ್‍ಐಆರ್ ಆದ್ರೂ ಚಾರ್ಜ್‍ಶೀಟ್ ಸಲ್ಲಿಸದ ಪೊಲೀಸರು

    ಶಿವಮೊಗ್ಗ: ನಗುನಗುತ್ತಾ ಎಲ್ಲ ಮಕ್ಕಳಂತೆ ಆಡಿ, ಕುಣಿದು ಬೆಳೆಯಬೇಕಿದ್ದ ಮಗು ಇದೀಗ ತಂದೆಯನ್ನು ಬಿಟ್ಟು ಇರದಂತಹ ಸ್ಥಿತಿಗೆ ಬಂದಿದೆ. ಆರ್.ಎಂ.ಪಿ ವೈದ್ಯ ಮಾಡಿದ ನಿರ್ಲಕ್ಷತೆ ಹಾಗೂ ಎಡವಟ್ಟಿನಿಂದ ಬಾಲಕ ತನ್ನ ಎರಡು ಕಣ್ಣನ್ನು ಕಳೆದುಕೊಳ್ಳುವಂತಾಗಿದೆ.

    ಸೊರಬ ತಾಲೂಕಿನ ಚಿಟ್ಟೂರು ಗ್ರಾಮದ ನಿವಾಸಿ ಗಿರೀಶ್ ಅವರ ಪುತ್ರ ಶರತ್ ಹುಟ್ಟಿದಾಗ ಎಲ್ಲರಂತೆ ಕಣ್ಣು ಚೆನ್ನಾಗಿಯೇ ಇತ್ತು. ಎಲ್ಲರ ಜೊತೆ ಆಡಿ ಕುಣಿದು ನಲಿಯುತ್ತಿದ್ದ. ಆದರೆ ಇದೀಗ ತಂದೆಯ ಆಶ್ರಯ ಇದ್ದರೆ ಮಾತ್ರ ಓಡಾಟ. ಇಲ್ಲದಿದ್ದರೆ ಕುಳಿತಲ್ಲಿಯೇ ಕುಳಿತುಕೊಳ್ಳುವಂತಹ ದಯನೀಯ ಸ್ಥಿತಿ ಬಂದಿದೆ.

    ಬಾಲಕ ಶರತ್‍ನಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಒಂದು ದಿನ ಏಕಾಏಕಿ ಜ್ವರ ಕಾಣಿಸಿಕೊಂಡಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಂದೆ ಗಿರೀಶ್ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಶಿರಾಳಕೊಪ್ಪದ ಕ್ಲಿನಿಕ್‍ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯ ಯಾವ ರೀತಿ ಚಿಕಿತ್ಸೆ ಕೊಟ್ಟನೋ ಏನೋ? ವೈದ್ಯ ಚಿಕಿತ್ಸೆ ಕೊಟ್ಟ ಕೆಲ ಸಮಯದ ನಂತರವೇ ಶರತ್ ಮೈಮೇಲೆ ಬೊಬ್ಬೆ ಬಂದಿದೆ. ನಂತರ ಕಣ್ಣು ಸಹ ಕಾಣದಂತಾಗಿದೆ. ವೈದ್ಯನ ಎಡವಟ್ಟಿಗೆ ಬಾಲಕ ಕಣ್ಣು ಕಳೆದುಕೊಂಡು ಕುರಡನಾಗಿದ್ದಾನೆ. ಕಣ್ಣು ಕಾಣಿಸದೇ ಇದ್ದಾಗ ಈತನ ತಂದೆ ಶಿವಮೊಗ್ಗದ ಇತರೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಸಹ ಚಿಕಿತ್ಸೆ ಫಲಕೊಟ್ಟಿಲ್ಲ.

    ಮೊದಲೇ ಕೂಲಿ ಮಾಡಿಕೊಂಡು ಬದುಕುತ್ತಿದ್ದ ಗಿರೀಶ್‍ನಿಗೆ ವೈದ್ಯನ ಎಡವಟ್ಟಿನಿಂದ ಮಗನ ಎರಡು ಕಣ್ಣು ಹೋಗಿರುವುದು ಗರ ಬಡಿದಂತಾಗಿದೆ. ಮಗನಿಗೆ ಚಿಕಿತ್ಸೆ ಕೊಡಿಸಲು ಇದ್ದ ಎರಡು ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ನಂತರ ಇದು ಸಾಲದ್ದಕ್ಕೆ ಜೀವನಕ್ಕೆ ಆಧಾರವಾಗಿದ್ದ ಎರಡು ಹಸುಗಳನ್ನು ಸಹ ಮಾರಾಟ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮಗನಿಗೆ ಕಣ್ಣು ಕೊಡಿಸಲು ತಂದೆ ಗಿರೀಶ್ ಅಲೆದಾಡಿದ ಊರಿಲ್ಲ, ನಗರಗಳಿಲ್ಲ. ಆದರೆ ಎಡವಟ್ಟು ಮಾಡಿದ ವೈದ್ಯ ಮಾತ್ರ ಆರಂಭದಲ್ಲಿ ಯಾರಿಗೂ ಗೊತ್ತಾಗದಿರಲಿ ಎಂಬ ಕಾರಣದಿಂದ ಚಿಕಿತ್ಸೆಗೆ ಸ್ವಲ್ಪ ಹಣದ ಸಹಾಯ ಮಾಡಿ ನಂತರ ಸುಮ್ಮನಾಗಿ ಬಿಟ್ಟಿದ್ದಾನೆ.

    ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿದ ಆರ್.ಎಂ.ಪಿ ವೈದ್ಯನ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ. ಎಫ್‍ಐಆರ್ ದಾಖಲಾಗಿ 8 ತಿಂಗಳು ಕಳೆದಿವೆ. ಆದರೆ ಪೊಲೀಸರು ಮಾತ್ರ ಇನ್ನೂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಚಾರ್ಜ್ ಶೀಟ್ ಹಾಕಲು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಯಾವ ಕಾಣದ ಶಕ್ತಿ ತಡೆಯುತ್ತಿವೆಯೋ ಗೊತ್ತಿಲ್ಲ.

  • ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗೆ ಗುಂಡೇಟು

    ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗೆ ಗುಂಡೇಟು

    ಬೆಂಗಳೂರು: ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ಹೊಡೆದು ಬಂಧಿಸಿರುವ ಘಟನೆ ಬೆಂಗಳೂರಿನ ಆರ್.ಆರ್.ಕೆ ಕಲ್ಯಾಣಮಂಟಪದ ಬಳಿ ನಡೆದಿದೆ.

    ದಿನೇಶ್ ಗುಂಡೇಟು ತಿಂದ ಆರೋಪಿ. ಶ್ರೀರಾಮಪುರ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿ ದಿನೇಶ್ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದನು. ಕಳೆದ ಎರಡು ದಿನದಿಂದ ತಲೆ ಮರಿಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

    ಖಚಿತ ಮಾಹಿತಿ ಮೇರೆಗೆ ಇಂದು ಮುಂಜಾನೆ ಆರೋಪಿಯನ್ನ ಬಂಧಿಸಲು ಪೊಲೀಸರು ಹೋಗಿದ್ದರು. ಈ ವೇಳೆ ಆರೋಪಿ ದಿನೇಶ್ ಎಎಸ್‍ಐ ಮೇಲೆ ಹಲ್ಲೆ ಮಾಡಿದ್ದನು. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

    ಸದ್ಯಕ್ಕೆ ಹಲ್ಲೆಗೊಳಗಾದ ಎಎಸ್‍ಐ ಮತ್ತು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 8 ತಾಸಿನ ದಾರಿಯನ್ನು 3 ಗಂಟೆಯಲ್ಲಿ ಕ್ರಮಿಸಿದ ಅಂಬುಲೆನ್ಸ್ ಚಾಲಕನಿಗೆ ಮೆಚ್ಚುಗೆ

    8 ತಾಸಿನ ದಾರಿಯನ್ನು 3 ಗಂಟೆಯಲ್ಲಿ ಕ್ರಮಿಸಿದ ಅಂಬುಲೆನ್ಸ್ ಚಾಲಕನಿಗೆ ಮೆಚ್ಚುಗೆ

    – 2 ತಿಂಗಳ ಕಂದನಿಗಾಗಿ ಶಿವಮೊಗ್ಗ ಟು ಮಂಗಳೂರು ಪ್ರಯಾಣ

    ಚಿಕ್ಕಮಗಳೂರು: ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿದ್ದ ಅಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟ ಕಾಫಿನಾಡ ಪೊಲೀಸರಿಗೆ ಚಿಕ್ಕಮಗಳೂರು ಜನ ಶ್ಲಾಘಿಸಿದ್ದಾರೆ.

    ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಎರಡು ತಿಂಗಳ ಮಗುವಿಗೆ ತುರ್ತಾಗಿ ಹೃದಯ ಸಂಬಂಧಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಬಡ ಕುಟುಂಬದ ಮಗುವಿನ ಪೋಷಕರು ಆಸ್ಪತ್ರೆಯಲ್ಲಿನ ಅಂಬುಲೆನ್ಸ್ ಹಣ ಹೆಚ್ಚಾಗಿದ್ದರಿಂದ ಟ್ರಸ್ಟ್ ಮೂಲಕ ಚಿಕ್ಕಮಗಳೂರಿನ ಅಂಬುಲೆನ್ಸ್ ಗೆ ಸಂಪರ್ಕಿಸಿದ್ದರು.

    ಕೂಡಲೇ ಶಿವಮೊಗ್ಗಕ್ಕೆ ಹೋಗಿ ಮಗುವನ್ನು ಕರೆದುಕೊಂಡು ಹೊರಟ ಅಂಬುಲೆನ್ಸ್ ಚಾಲಕ ಆಗುಂಬೆ ಘಾಟ್ ಮೂಲಕ ಹೋಗಲು ರಸ್ತೆ ಜಾಮ್ ಆಗಿದ್ದ ಕಾರಣ ಚಿಕ್ಕಮಗಳೂರು ಮೂಲಕ ಮಂಗಳೂರಿಗೆ ಹೊರಟಿದ್ದಾರೆ. ಈ ವೇಳೆ ಅಂಬುಲೆನ್ಸ್ ಚಾಲಕ ಚಿಕ್ಕಮಗಳೂರು ಪೊಲೀಸರಿಗೆ ಮನವಿ ಮಾಡಿದ್ದರಿಂದ ಕಾಫಿನಾಡ ಖಾಕಿಗಳು ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದ ಗಡಿ ದಾಟುವವರೆಗೂ ಅಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದಾರೆ. ರಸ್ತೆಯುದ್ದಕ್ಕೂ ಕಾಫಿನಾಡ ಜನರೂ ಕೂಡ ದಾರಿ ಮಾಡಿಕೊಟ್ಟಿದ್ದಾರೆ.

    ಶಿವಮೊಗ್ಗ – ಚಿಕ್ಕಮಗಳೂರು – ಮಂಗಳೂರು ಪ್ರಯಾಣಕ್ಕೆ ಸಾಧಾರಣ ಎಂಟು ಗಂಟೆ ಬೇಕು. ಆದರೆ ಅಂಬುಲೆನ್ಸ್ ಚಾಲಕ ಜೀಶಾನ್ ಮೂರೇ ಗಂಟೆಯಲ್ಲಿ ಮಂಗಳೂರು ತಲುಪಿದ್ದಾರೆ. ಚಾಲಕನ ಚಾಕಚಕ್ಯತೆಯ ಚಾಲನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾರ್ಮಾಡಿ ಘಾಟಿನಲ್ಲಿ ಡ್ರೈವಿಂಗ್ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿರುತ್ತದೆ. ಹೀಗಿರುವಾಗ ಒಂದೇ ವೇಗವನ್ನು ಕಾಪಾಡಿಕೊಂಡು ಮೂರೇ ಗಂಟೆಗೆ ಶಿವಮೊಗ್ಗದಿಂದ ಮಂಗಳೂರಿಗೆ ತಲುಪಿರುವ ಡ್ರೈವರ್ ಜೀಶಾನ್ ಚಾಲನೆಗೂ ಜನ ಭೇಷ್ ಅಂದಿದ್ದಾರೆ.

  • ಅಮ್ಮನು ಜೊತೆಗಿಲ್ಲ, ಎದ್ದು ಓಡಾಡೋಕು ಆಗ್ತಿಲ್ಲ- ಹಾಸನದ ಮಳಲಿಯಲ್ಲಿ ಮರಿಯಾನೆಯ ಯಾತನೆ

    ಅಮ್ಮನು ಜೊತೆಗಿಲ್ಲ, ಎದ್ದು ಓಡಾಡೋಕು ಆಗ್ತಿಲ್ಲ- ಹಾಸನದ ಮಳಲಿಯಲ್ಲಿ ಮರಿಯಾನೆಯ ಯಾತನೆ

    ಹಾಸನ: ನಡೆಯಲು ಸಾಧ್ಯವಾಗದ ನಾಲ್ಕು ದಿನಗಳ ಆನೆಮರಿಯೊಂದು ಕಾಫಿ ತೋಟವೊಂದರಲ್ಲಿ ಒಂದೇ ಕಡೆ ಮಲಗಿದ್ದು, ಮರಿಯನ್ನು ಕರೆದೊಯ್ಯಲು ತಾಯಿ ಆನೆ ಸಂಕಟ ಪಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಸಮೀಪ ನಡೆದಿದೆ.

    ಜಿಲ್ಲೆಯ ಸಕಲೇಶಪುರದ ಮಳಲಿ ಗ್ರಾಮದ ಅನೀಲ್ ಎಂಬುವರ ತೋಟದಲ್ಲಿ ನಾಲ್ಕು ದಿನಗಳ ಹಿಂದಷ್ಟೆ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಆನೆ ಮರಿ ಹುಟ್ಟಿದ ದಿನದಿಂದಲೂ ನಡೆಯಲು ಸಾಧ್ಯವಾಗದೆ ಕಾಫಿ ತೋಟದಲ್ಲೇ ಮಲಗಿದೆ. ಆರಂಭದಲ್ಲಿ ತನ್ನೊಂದಿಗೆ ತನ್ನ ಕಂದಮ್ಮನನ್ನು ಕರೆದೊಯ್ಯಲು ತಾಯಿ ಆನೆ ಪ್ರಯತ್ನಿಸಿದೆ. ಆದರೆ ಎದ್ದು ನಿಲ್ಲಲು ಆಗದ ಮರಿಯಾನೆಯನ್ನು ನೋಡಿ ಮೂಕವೇದನೆ ಅನುಭವಿಸುತ್ತಿದೆ.

    ಆಹಾರ ತಿನ್ನಲು ಕಾಫಿ ತೋಟದ ಒಳಗೆ ಹೋಗುವ ತಾಯಿ ಆನೆ ಮತ್ತೆ ತನ್ನ ಕಂದನ ಬಳಿಗೆ ಬಂದು ಹಾಲುಣಿಸಲು ಯತ್ನಿಸುತ್ತಿದೆ. ಆದರೂ ಮರಿಯಾನೆ ಮೇಲೆಳಲಾಗದೇ ಮಲಗಿದ್ದಲ್ಲೇ ಒದ್ದಾಡುತ್ತಿದೆ ಎಂದು ತೋಟದ ಮಾಲೀಕ ಅನೀಲ್ ಹೇಳಿದ್ದಾರೆ.

    ತಾಯಿ ಆನೆ ಆಹಾರ ಸೇವನೆಗೆ ಹೋದ ತಕ್ಷಣ ಮರಿಯಾನೆ ಬಳಿ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರು ಬಂದು ಚಿಕಿತ್ಸೆ ನೀಡಿ ಕೃತಕವಾಗಿ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೂ ಮರಿಯಾನೆ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಸ್ಥಳೀಯ ಸುರೇಶ್ ಆಳ್ವ ತಿಳಿಸಿದ್ದಾರೆ. ಹೀಗಾಗಿ ಮರಿಯಾನೆಯನ್ನು ಬೇರೆ ಕಡೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡಿ ಅಂತ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

  • ಮನೆಯ ಗೋಡೆಯಲ್ಲಿ ಕ್ಷಮೆಯ ಬರಹ – ಶವವಾಗಿ ಖ್ಯಾತ ಡಾಕ್ಟರ್ ಪತ್ತೆ

    ಮನೆಯ ಗೋಡೆಯಲ್ಲಿ ಕ್ಷಮೆಯ ಬರಹ – ಶವವಾಗಿ ಖ್ಯಾತ ಡಾಕ್ಟರ್ ಪತ್ತೆ

    – ಬಾಲಕಿ ಸಾವಿನ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ್ರಾ?

    ತಿರುವನಂತಪುರಂ: ವೈದ್ಯರೊಬ್ಬರು ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯನಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆಯಷ್ಟೆ ವೈದ್ಯರ ಆಸ್ಪತ್ರೆಯಲ್ಲಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಹೀಗಾಗಿ ಬಾಲಕಿಯ ಸಾವಿಗೂ ಇವರ ಸಾವಿಗೂ ಏನಾದರೂ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಡಾ.ಅನೂಪ್ ಕೃಷ್ಣ (32) ಮೃತ ವೈದ್ಯ. ಡಾ.ಕೃಷ್ಣ ಜಿಲ್ಲೆಯ ಕಡಪ್ಪಕಡದಲ್ಲಿರುವ ಅನೂಪ್ ಆರ್ಥೋ ಕೇರ್ ಆಸ್ಪತ್ರೆ ನಡೆಸುತ್ತಿದ್ದಾರೆ. ಒಂದು ವಾರದ ಹಿಂದೆ ಆರು ವರ್ಷದ ಬಾಲಕಿ ವೈದ್ಯರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಮೃತಪಟ್ಟಿದ್ದಳು. ಆದರೆ ಅನಸ್ತೇಶಿಯಾದಿಂದ ನಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಪೋಷಕರು ಆಸ್ಪತ್ರೆಯ ವಿರುದ್ಧ ದೂರು ನೀಡಿದ್ದರು.

    “ಅಸಹಜ ಸಾವು ಎಂದು ನಾವು ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಿದ್ದೆವು. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಳು. ಆದರೆ ಈ ಎರಡು ಘಟನೆಗಳು ಸಂಬಂಧ ಹೊಂದಿದೆಯೇ ಎಂದು ನಮಗೆ ಖಚಿತವಿಲ್ಲ. ವೈದ್ಯರು ಆತ್ಮಹತ್ಯೆ ಮಾಡಿಕೊಂಡಿರಹುದು. ಆದರೆ ಅವರ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಮನೆಗೆ ಗೋಡೆಯ ಮೇಲೆ ಕ್ಷಮಿಸಿ ಎಂದು ಬರೆದಿದ್ದರು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಅನಸ್ತೇಶಿಯಾ ನೀಡಿದ್ದರಿಂದ ನಮ್ಮ ಮಗು ಸಾವನ್ನಪ್ಪಿದೆ ಎಂದು ಸಂಬಂಧಿಕರು ಆರೋಪಿಸಿದ್ದರು. ಕಳೆದ ವಾರ ಆಧ್ಯಾ ಲಕ್ಷ್ಮಿಯನ್ನು ಶಸ್ತ್ರಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೃದಯಾಘಾತದಿಂದ ಬಾಲಕಿ ಮೃತಪಟ್ಟಿದ್ದಳು.  ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯ ಮರಣೋತ್ತರ ವರದಿ ಇನ್ನೂ ಬಂದಿಲ್ಲ. ಹೆಚ್ಚಿನ ವಿವರಗಳು ಮರಣೋತ್ತರ ವರದಿಯ ನಂತರವೇ ತಿಳಿಯುತ್ತದೆ. ಈ ಘಟನೆಯ ನಂತರ ವೈದ್ಯರು ಖಿನ್ನತೆಗೆ ಒಳಗಾಗಿದ್ದಾರೆಯೇ ಎಂಬುದು ನಮಗೆ ಖಚಿತವಿಲ್ಲ. ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಡಾ.ಅನೂಪ್ ಕೃಷ್ಣ ಅವರ ಆರ್ಥೋ ಕೇರ್ ಆಸ್ಪತ್ರೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಇದು ಮೂಳೆ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಒದಗಿಸುತ್ತದೆ. ಆಸ್ಪತ್ರೆಯಲ್ಲಿ ಮಕ್ಕಳ ಮೂಳೆ ಕಾಯಿಲೆಗಳ ಚಿಕಿತ್ಸೆಗೆ ವಿಶೇಷ ವಿಭಾಗವಿದೆ. ಡಾ.ಅನೂಪ್ ಕೃಷ್ಣ ಆರ್ಥೋದಲ್ಲಿ ಮಾಸ್ಟರ್ ಆಫ್ ಸೈನ್ಸ್ (ಎಂಎಸ್) ಮಾಡಿದ್ದರು. ಅಲ್ಲದೇ ಅನೂಪ್ ಮೂಳೆಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದರು ಎಂದು ವರದಿಯಾಗಿದೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಬಾಲಕಿ ಸಾವನ್ನಪ್ಪಿದ್ದರಿಂದ ಖಿನ್ನತಗೆ ಒಳಗಾಗಿ ಡಾ.ಅನೂಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಕೋವಿಡ್‍ಗೆ ಕೊರೊನಾ ವಾರಿಯರ್ ಬಲಿ – ಸಹ ಸಿಬ್ಬಂದಿ ಕಣ್ಣೀರು

    ಕೋವಿಡ್‍ಗೆ ಕೊರೊನಾ ವಾರಿಯರ್ ಬಲಿ – ಸಹ ಸಿಬ್ಬಂದಿ ಕಣ್ಣೀರು

    – ಆರೋಗ್ಯ ಸಚಿವ ಶ್ರೀರಾಮುಲುರಿಂದ ಸಂತಾಪ

    ಯಾದಗಿರಿ: ಒಂದು ಕಡೆ ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಕೊವೀಡ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ಕೊರೊನಾ ಚಿಕಿತ್ಸೆ ಫಲಕಾರಿಯಾಗದೆ ನರ್ಸ್ ಒಬ್ಬರು ಬಲಿಯಾಗಿದ್ದಾರೆ. ಸಹೋದ್ಯೋಗಿ ಮೃತ ದೇಹಕಂಡು ಯಾದಗಿರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

    ಯಾದಗಿರಿ ತಾಲೂಕಿನ ಕೌಳ್ಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, 12 ವರ್ಷದಿಂದ ಸ್ಟಾಫ್ ನರ್ಸ್ ಆಗಿದ್ದ 34 ವರ್ಷದ ಗೀತಾ ಮೃತಪಟ್ಟಿರುವ ಕೊರೊನಾ ವಾರಿಯರ್. ಗೀತಾ ಅವರಿಗೆ ಕಳೆದ ಸೆಪ್ಟೆಂಬರ್ 19ರಂದು ಕೊರೊನಾ ದೃಢವಾಗಿತ್ತು. ಹೀಗಾಗಿ ಗೀತಾ ಅವರನ್ನು ಯಾದಗಿರಿ ಹೊರವಲಯದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಮೊದಲ ಬಾರಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಗೀತಾ ಆಸ್ಪತ್ರೆಯಿಂದ ಬಹು ಬೇಗನೆ ಬಿಡುಗಡೆಯಾಗಿದ್ದರು. ಆದರೆ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಗೀತಾ ಅವರಿಗೆ ಮತ್ತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆ ಸೆಪ್ಟೆಂಬರ್ 29ರಂದು ಎರಡನೇ ಬಾರಿಗೆ ಕೊರೊನಾ ದೃಢವಾಗಿತ್ತು. ಮತ್ತೆ ಯಾದಗಿರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೀತಾ ಅವರಿಗೆ ತೀವ್ರ ಉಸಿರಾಟದ ತೊಂದರೆ ಇದ್ದ ಕಾರಣ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಮೃತ ಗೀತಾ ಅವರ ಗಂಡನ ಜೊತೆ ಯಾದಗಿರಿ ನಗರದ ನಜರಾತ್ ಕಾಲೋನಿಯಲ್ಲಿ ವಾಸವಾಗಿದ್ದರು. ಕೊರೊನಾ ವಾರಿಯರ್ ಗೀತಾ ಸಾವಿಗೆ ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ. ಗೀತಾ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು, ಗೀತಾ ಅವರ ಕುಟುಂಬಕ್ಕೆ ಆರೋಗ್ಯ ಇಲಾಖೆಯಿಂದ, ಸಿಗುವ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸುವ ಭರವಸೆ ನೀಡಿದ್ದಾರೆ.

  • ಹಾಸನ ಜಿಲ್ಲೆಯಲ್ಲಿಂದು 419 ಜನರಿಗೆ ಕೊರೊನಾ – 13 ಮಂದಿ ಸೋಂಕಿಗೆ ಬಲಿ

    ಹಾಸನ ಜಿಲ್ಲೆಯಲ್ಲಿಂದು 419 ಜನರಿಗೆ ಕೊರೊನಾ – 13 ಮಂದಿ ಸೋಂಕಿಗೆ ಬಲಿ

    – 14,687ಕ್ಕೆ ಏರಿಕೆಯಾಗಿದೆ ಸೋಂಕಿತರ ಸಂಖ್ಯೆ

    ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು 419 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14,687ಕ್ಕೆ ಏರಿಕೆಯಾಗಿದೆ.

    ಜಿಲ್ಲೆಯಲ್ಲಿಂದು 13 ಜನ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 2,583 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 11,815 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಪತ್ತೆಯಾದ 419 ಕೊರೊನಾ ಪ್ರಕರಣಗಳಲ್ಲಿ 65 ಮಂದಿ ಅರಸೀಕೆರೆ ತಾಲೂಕಿನವರಾಗಿದ್ದು, 50 ಮಂದಿ ಚನ್ನರಾಯಪಟ್ಟಣ, ಆಲೂರು ತಾಲೂಕಿನಲ್ಲಿ 14 ಜನ, 186 ಮಂದಿ ಹಾಸನ ತಾಲೂಕು, 7 ಜನ ಹೊಳೆನರಸೀಪುರ ತಾಲೂಕು, 70 ಮಂದಿ ಅರಕಲಗೂಡು ತಾಲೂಕು, ಬೇಲೂರು ತಾಲೂಕಿನ 8 ಜನ, ಸಕಲೇಶಪುರ ತಾಲೂಕಿನಲ್ಲಿ 17 ಮಂದಿಗೆ ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಅವರು ತಿಳಿಸಿದ್ದಾರೆ.

  • ರಾಜ್ಯದಲ್ಲಿ ಇಂದಿನಿಂದ ಹೆಲ್ತ್ ಎಮರ್ಜೆನ್ಸಿ- ಕೋವಿಡ್ ಸೇರಿದಂತೆ ಯಾವುದೇ ಟ್ರೀಟ್‍ಮೆಂಟ್ ಕೊಡಲ್ಲ ಡಾಕ್ಟರ್ಸ್

    ರಾಜ್ಯದಲ್ಲಿ ಇಂದಿನಿಂದ ಹೆಲ್ತ್ ಎಮರ್ಜೆನ್ಸಿ- ಕೋವಿಡ್ ಸೇರಿದಂತೆ ಯಾವುದೇ ಟ್ರೀಟ್‍ಮೆಂಟ್ ಕೊಡಲ್ಲ ಡಾಕ್ಟರ್ಸ್

    ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಹೆಲ್ತ್ ಎಮೆರ್ಜೆನ್ಸಿ ಎದುರಾಗಲಿದೆ. ಕೊರೊನಾ ರಿಪೋರ್ಟ್ ಸೇರಿ ಬೇರೆ ಯಾವುದೇ ಆರೋಗ್ಯ ಸಂಬಂಧಿ ರಿಪೋರ್ಟ್ ಸಿಗಲ್ಲ. ಯಾಕಂದರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರು, ಇಂದಿನಿಂದ ಆರೋಗ್ಯ ಸೇವೆಯಲ್ಲಿ, ಕೆಲಸಗಳಲ್ಲಿ ತೊಡಗಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.

    ಆರೋಗ್ಯ ವರದಿಗಳನ್ನ ಸರ್ಕಾರಕ್ಕೆ ಸಲ್ಲಿಸದೇ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ಒಂದು ವಾರದೊಳಗೆ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಆಸ್ಪತ್ರೆ ಬಂದ್ ಮಾಡುತ್ತೇವೆ. ಕೇವಲ ಎಮರ್ಜೆನ್ಸಿ ಮಾತ್ರ ಓಪನ್ ಇರಲಿದೆ ಅನ್ನೋ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.

    ಐಎಎಸ್ ಅಧಿಕಾರಿಗಳ ತಮ್ಮನ್ನು ಮುಕ್ತ ಮಾಡಬೇಕು. ನಂಜನಗೂಡು ಆಸ್ಪತ್ರೆ ವೈದ್ಯರ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ವೈದ್ಯಕೀಯ ಸಂಘ ಸರ್ಕಾರದ ಮುಂದೆ ಇಟ್ಟಿದೆ.

    ಬೇಡಿಕೆಗಳು ಏನೇನು?
    * ಸರ್ಕಾರದಿಂದ ಡಾಕ್ಟರ್ಸ್ ಡೇ ಮಾಡುವಂತೆ ಬೇಡಿಕೆ
    * ಕೋವಿಡ್ ವೇಳೆ ಮೃತ ಪಟ್ಟ ವೈದ್ಯರಿಗೆ ಸರ್ಕಾರ ಪರಿಹಾರ ನೀಡಿಲ್ಲ, ಪರಿಹಾರ ನೀಡುವಂತೆ ಬೇಡಿಕೆ
    * ಪ್ರಮುಖವಾಗಿ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯ
    * ಬಿಬಿಎಂಪಿಗೆ ನೀಡಿರುವ 48 ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನ ವಾಪಸ್ ನೀಡುವಂತೆ ಒತ್ತಾಯ
    * ಡಿಸಿ ಮತ್ತು ಸಿಇಓಗಳ ದಬ್ಬಾಳಿಕೆಯನ್ನ ತಪ್ಪಿಸಿಬೇಕು

    ಪ್ರತಿಭಟನೆ ಯಾವ ರೀತಿ ಇರುತ್ತೆ ?
    * ಇಂದಿನಿಂದ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
    * ಆನ್‍ಲೈನ್ ಆಗಲಿ ಅಥವಾ ಆಫ್‍ಲೈನ್ ಆಗಲಿ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
    * ಕೋವಿಡ್ ರಿಪೋರ್ಟ್ ಗಳನ್ನು ಸಲ್ಲಿಸದಿರಲು ನಿರ್ಧಾರ
    * ರಾಷ್ಟ್ರೀಯ ಕಾರ್ಯಕ್ರಮಗಳ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
    * ಮಲೇರಿಯಾ, ಜಂತುಹುಳು, ಕುಷ್ಟರೋಗ ಸೇರಿದಂತೆ ಇನ್ನಿತರ ವರದಿಗಳನ್ನ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
    * ಡಿಸಿ ಮತ್ತು ಸಿಇಓ ಮೀಟಿಂಗ್ ಗಳಲ್ಲಿ ಭಾಗವಹಿಸದಿರಲು ನಿರ್ಧಾರ

    ಸರ್ಕಾರ ವೈದ್ಯರ ಪ್ರತಿಭಟನೆಯಿಂದ ಆಗುವ ಅನಾಹುತಗಳೇನು?
    * ಕೋವಿಡ್ ವರದಿಗಳನ್ನ ನೀಡದಿದ್ದರೆ ಮತ್ತಷ್ಟು ಕೋವಿಡ್ ಕೇಸ್ ಹೆಚ್ಚಾಗ್ತಾವೆ
    * ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಆಸ್ಪತ್ರೆ ಕ್ಲೋಸ್ ಮಾಡಿದ್ರೆ ಕೋವಿಡ್ ಉಲ್ಬಣಗೊಳ್ಳುತ್ತೆ
    * ರಾಜ್ಯದಲ್ಲಿ ಸಾವು ನೋವು ಹೆಚ್ಚಾಗುವ ಸಾಧ್ಯತೆ
    * ರಾಷ್ಟ್ರೀಯ ಕಾರ್ಯಕ್ರಮಗಳ ವರದಿ ನೀಡದಿದ್ದರೆ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮರ್ಯಾದೆ ಹೋಗುತ್ತೆ
    * ವೈದ್ಯರ ಪ್ರತಿಭಟನೆಯಿಂದ ಆರೋಗ್ಯ ತುರ್ತು ಪರಿಸ್ಥಿತಿ ಉಲ್ಬಣಗೊಳ್ಳುತ್ತೆ
    * ಡಿಸಿ ಮತ್ತು ಸಿಇಓ ಮೀಟಿಂಗ್‍ಗಳಿಗೆ ವೈದ್ಯರು, ವೈದ್ಯಾಧಿಕಾರಿಗಳು ಅಟೆಂಡ್ ಆಗದಿದ್ದರೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಷ್ಟ

    ಇಂದಿನಿಂದ ಒಂದು ವಾರದ ಒಳಗೆ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಆಸ್ಪತ್ರೆಗಳನ್ನು ಕ್ಲೋಸ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಇದೇ ತಿಂಗಳ 21 ರಿಂದ ಆಸ್ಪತ್ರೆ ಕ್ಲೋಸ್ ಮಾಡಲು ನಿರ್ಧಾರ ಮಾಡಲಾಗಿದ್ದು, ಎಮರ್ಜೆನ್ಸಿ ಮಾತ್ರ ಓಪನ್ ಮಾಡಲಾಗುತ್ತಿದೆ. ಅಲ್ಲದೇ ಸೆಪ್ಟೆಂಬರ್ 21 ರಿಂದ ಬೆಂಗಳೂರು ಚಲೋ ಆರಂಭ ಮಾಡಲಿದ್ದಾರೆ. ಬೆಂಗಳೂರು ಚಲೋ ಆರಂಭ ಮಾಡಿ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ.

  • ಕೊರೊನಾ ವಾರಿಯರ್ಸ್‍ಗೆ ಸಿಗುತ್ತಿಲ್ಲ ಸೂಕ್ತ ಚಿಕಿತ್ಸೆ- ವಿಡಿಯೋ ಮಾಡಿ ಅಳಲು

    ಕೊರೊನಾ ವಾರಿಯರ್ಸ್‍ಗೆ ಸಿಗುತ್ತಿಲ್ಲ ಸೂಕ್ತ ಚಿಕಿತ್ಸೆ- ವಿಡಿಯೋ ಮಾಡಿ ಅಳಲು

    – ಕೊರೊನಾ ವರದಿ ವಿಳಂಬ, ಚಿಕಿತ್ಸೆ ನಿರ್ಲಕ್ಷದ ಬಗ್ಗೆ ಕಿಡಿ

    ಚಿತ್ರದುರ್ಗ: ಇಷ್ಟು ದಿನ ಜನ ಸಾಮಾನ್ಯರು ಕೋವಿಡ್ ಕೇಂದ್ರಗಳಲ್ಲಿ ಹಾಗೂ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವ್ಯವಸ್ಥೆ ಸರಿ ಎಲ್ಲ ಎಂದು ವಿಡಿಯೋ ಹರಿಬಿಟ್ಟು ಅಳಲು ತೋಡಿಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇದೀಗ ಕೊರೊನಾ ವಾರಿಯರ್ಸ್‍ಗೂ ಇದೇ ರೀತಿ ಸಮಸ್ಯೆಯಾಗುತ್ತಿದ್ದು, ಇದೀಗ ಜೀವ ಉಳಿಸುವ ಕೆಲಸ ಮಾಡುವರಿಗೇ ಜೀವ ಭಯ ಶುರುವಾಗಿದೆ.

    ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಹಿರೇಗುಂಟನೂರು ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ವಿಡಿಯೋ ಮಾಡಿ ಅವ್ಯವಸ್ಥೆ ಕುರಿತು ಅಳಲು ತೋಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದು, ಚಿಕಿತ್ಸೆ ಹಾಗೂ ವಾರ್ಡ್‍ಗಳಲ್ಲಿ ಯಾವುದೇ ರೀತಿಯ ವ್ಯವಸ್ಥೆಗಳು ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲ ನಮ್ಮಂಥ ಕೊರೊನಾ ವಾರಿಯರ್ಸ್‍ಗೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ತೀರ್ವ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕೊರೊನಾ ಟೆಸ್ಟ್ ವರದಿ ವಿಳಂಬ, ಚಿಕಿತ್ಸೆಯಲ್ಲಿಯೂ ನಿರ್ಲಕ್ಷದ ವಹಿಸುತ್ತಿರುವ ಬಗ್ಗೆ ಕಿಡಿ ಕಾರಿದ್ದಾರೆ. ಅಲ್ಲದೆ ಕೋವಿಡ್ ವಾರ್ಡ್ ಅವ್ಯವಸ್ಥೆ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸೋಂಕಿತ ಆರೋಗ್ಯ ಇಲಾಖೆ ಸಿಬ್ಬಂದಿಗಾಗಿ ಪ್ರತ್ಯೇಕ ವ್ಯವಸ್ಥೆಗೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

  • ಒಂದೇ ದಿನ ಕೊರೊನಾಗೆ 1,115 ಮಂದಿ ಬಲಿ – 33,98 ಲಕ್ಷ ಮಂದಿ ಗುಣಮುಖ

    ಒಂದೇ ದಿನ ಕೊರೊನಾಗೆ 1,115 ಮಂದಿ ಬಲಿ – 33,98 ಲಕ್ಷ ಮಂದಿ ಗುಣಮುಖ

    ನವದೆಹಲಿ: ದೇಶದಲ್ಲಿ ಕೊರೊನಾ ಮರಣಮೃದಂಗ ಬಾರಿಸುತ್ತಿದ್ದು, ದಿನೇ ದಿನೇ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೇ ದಿನ ಬರೋಬ್ಬರಿ 1,115 ಮಂದಿ ಕೊರೊನಾಗೆ ಬಲಿ ಆಗಿದ್ದು, ಇವರಲ್ಲಿ ಬಹುತೇಕರು ಅನ್ಯ ರೋಗಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

    ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 1,115 ಮಂದಿ ಮೃತಪಟ್ಟಿದ್ದು, ಇದುವರೆಗೂ 73,890 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಂದೇ ದಿನ 89,706 ಮಂದಿಗೆ ಸೋಂಕು ದೃಢವಾಗಿದ್ದು, ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 43,70,129ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    43,70,129 ಪೈಕಿ 8,97,394 ಸಕ್ರಿಯ ಪ್ರಕರಣಗಳಿದ್ದು, 33,98,845 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಸಿಎಂಆರ್ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸಿದೆ. ಮಂಗಳವಾರ 11,54,549 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಈವರೆಗೆ 5,18,04,677 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.