Tag: treatment

  • ಪಾಸಿಟಿವ್ ಬಂದ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕೆಲಸ ಮಾಡಿಸಿದ  ವೈದ್ಯ

    ಪಾಸಿಟಿವ್ ಬಂದ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕೆಲಸ ಮಾಡಿಸಿದ ವೈದ್ಯ

    ಮಡಿಕೇರಿ: ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಿಬ್ಬಂದಿಯನ್ನು ಕರೆಸಿ ಕರ್ತವ್ಯ ಮಾಡಿಸಿ ವೈದ್ಯರೊಬ್ಬರು ಎಡವಟ್ಟು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಸಿಬ್ಬಂದಿ ಲ್ಯಾಬ್ ಟೆಕ್ನಿಷಿಯನ್‍ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಎಂಟು ದಿನ ಕಳೆದ ಬಳಿಕ ಮತ್ತೆ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಅಗಲೂ ಅವರಿಗೆ ಪಾಸಿಟಿವ್ ಎಂದು ವರದಿ ಬಂದಿದೆ. ಅದ್ರೂ ಅರೋಗ್ಯ ಇಲಾಖೆ ವೈದ್ಯ ಸಿಬ್ಬಂದಿ ಕೊರತೆಯಿಂದ ಲ್ಯಾಬ್ ಟೆಕ್ನಿಷಿಯನ್ ಕರೆಸಿ ಕರ್ತವ್ಯ ಮಾಡುವಂತೆ ಸೂಚನೆ ನೀಡಿದ್ದಾರೆ.

    ಸಾರ್ವಜನಿಕರು ಅಸ್ಪತ್ರೆಯ ಸಿಬ್ಬಂದಿಯಿಂದ ಕೊರೊನಾ ಮಾಹಾಮಾರಿ ಊರಿಗೆ ಹರಡುವ ಸಾಧ್ಯತೆ ಇದೆ. ಕೆಲವು ಜನರಿಗೆ ಸೋಂಕು ಹರಡಿದೆ ಎಂದು ಸಾರ್ವಜನಿಕರು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅಲ್ಲಿನ ಪಂಚಾಯಿತಿ ಸದಸ್ಯರಿಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿಯ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಅಸ್ಪತ್ರೆಯ ವೈದ್ಯ ಜೀವನ್ ಅವರ ಬಳಿ ಕೇಳುಲು ಮುಂದಾಗುತ್ತಿದಂತೆ. ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರ ವಿರುದ್ಧವೇ ವೈದ್ಯ ಜೀವನ್ ಕರ್ತವ್ಯ ಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ವೈದ್ಯರ ದೂರು ಪಡೆದ ಠಾಣಾಧಿಕಾರಿ ಪುನೀತ್ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರುಗಳನ್ನು ಠಾಣೆಗೆ ಕರೆಸಿ ಪಂಚಾಯಿತಿ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದೀರಾ. ಪಂಚಾಯಿತಿ ಸದಸ್ಯರು ಟೆಕ್ನಿಷಿಯನ್ ಹಾಗೂ ವೈದ್ಯರ ವಿರುದ್ದವೇ ದೂರು ನೀಡಲು ಪಂಚಾಯಿತಿ ಅಡಳಿತ ಮಂಡಳಿಯಿಂದ ಮುಂದಾಗಿದ್ದರು. ಆಗ ಠಾಣಾಧಿಕಾರಿ ಪುನೀತ್ ರಾಜಿ ಮಾಡಿಕೊಳ್ಳುವಂತೆ ಹೇಳಿ ಕಳುಹಿಸಿದ್ದಾರೆ. ಸದ್ಯ ಪಾಸಿಟಿವ್ ಬಂದ ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಯನ್ನು ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಗಿದೆ ಎಂದು ಪಂಚಾಯತಿ ಪಿಡಿಓ ವೇಣುಗೋಪಾಲ್ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ವೈದ್ಯರೇ ಈ ರೀತಿ ಎಡವಟ್ಟು ಮಾಡಿ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

  • ಗ್ರಾಮಸ್ಥರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಗ್ರಾಮಪಂಚಾಯತ್

    ಗ್ರಾಮಸ್ಥರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಗ್ರಾಮಪಂಚಾಯತ್

    ಮುಂಬೈ: ಗ್ರಾಮಸ್ಥರಿಗೆ ಕೋವಿಡ್-19 ಸೋಂಕು ಕಂಡು ಬಂದರೆ ಅಂತವರ ಕೊರೊನಾ ಪರೀಕ್ಷೆಯಿಂದ ಹಿಡಿದು, ಆಸ್ಪತ್ರೆ ಹಾಗೂ ಚಿಕಿತ್ಸಾ ವೆಚ್ಚವನ್ನು ಪೂರ್ತಿ ಭರಿಸಲು ಖತಿವಾಲಿ ಗ್ರಾಮಪಂಚಾಯತ್ ಸಜ್ಜಾಗಿದೆ.

    ಮಹಾರಾಷ್ಟ್ರದ ಖತಿವಾಲಿ ಗ್ರಾಮಪಂಚಾಯತ್ ತನ್ನ ಗ್ರಾಮದ ಜನರಿಗೆ ಕೊರೊನಾ ಸೋಂಕು ಬಂದರೆ ಅವರ ಚಿಕಿತ್ಸಾ ವೆಚ್ಚ, ಆಸ್ಪತ್ರೆ ಖರ್ಚು ಎಲ್ಲವನ್ನು ಪಂಚಾಯತ್ ವತಿಯಿಂದ ಕೊಡುವುದಾಗಿ ನಿರ್ಧಾರ ಕೈಗೊಂಡಿದೆ. ಗ್ರಾಮಸ್ಥರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದ ಬಿಲ್‍ನ್ನು ಪಂಚಾಯತ್‍ಗೆ ಕೊಟ್ಟರೆ ಪಂಚಾಯತ್ ವೆಚ್ಚವನ್ನು ಭರಿಸುವುದಾಗಿ ಪಂಚಾಯತ್‍ನ ಸದಸ್ಯರು ತಿಳಿಸಿದ್ದಾರೆ.

    ಮಹಾರಾಷ್ಟ್ರದ ಶಹಾಪುರ ತಾಲೂಕಿನಲ್ಲಿ ಖತಿವಾಲಿ ಗ್ರಾಮವಿದ್ದು, ಗ್ರಾಮದಲ್ಲಿ 6000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಾಲೂಕಿನಲ್ಲಿ ಕೇವಲ 1 ಕೊರೊನಾ ಚಿಕಿತ್ಸಾ ಆಸ್ಪತ್ರೆ ಇದ್ದು, ಈ ಆಸ್ಪತ್ರೆಗಾಗಿ ಖತಿವಾಲಿ ಗ್ರಾಮದಿಂದ 8 ಕಿಲೋ ಮೀಟರ್ ಬರಬೇಕಾಗಿದೆ. ಅದಲ್ಲದೆ ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿ ಭರ್ತಿಗೊಂಡಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಅದರೆ ಗ್ರಾಮದ ಜನರಿಗೆ ಖಾಸಗಿ ಅಸ್ಪತ್ರೆಯ ವೆಚ್ಚ ಭರಿಸುವ ಸಾಮರ್ಥ್ಯ ವಿಲ್ಲದೆ ಇರುವುದರಿಂದಾಗಿ ಪಂಚಾಯತ್‍ನಿಂದ ಆಸ್ಪತ್ರೆ ಖರ್ಚು ಭರಿಸುವ ನಿರ್ಧಾರ ಮಾಡಲಾಗಿದೆ.

    ಈಗಾಗಲೇ ಶಹಾಪುರ ತಾಲೂಕಿನಲ್ಲಿ 6,660 ಕೊರೊನಾ ಕೇಸ್ ದಾಖಲಾಗಿದ್ದು,ಇದೀಗ 241 ಸಕ್ರಿಯ ಪ್ರಕರಣಗಳಿವೆ. 170 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಮಾತನಾಡಿರುವ ಖತಿವಾಲಿ ಗ್ರಾಮಪಂಚಾಯತ್ ಸದಸ್ಯರಾದ ದೇವಿದಾಸ್ ಜಾಧವ್, ಕೊರೊನಾದಿಂದಾಗಿ ಗ್ರಾಮದ ಹಲವು ಜನ ಕೆಲಸ ಕಳೆದುಕೊಂಡಿದ್ದಾರೆ. ಗ್ರಾಮಕ್ಕೆ ಹೊರಭಾಗದ ಜನರ ಆಗಮನವನ್ನು ನಿಷೇಧಿಸಿದ್ದೇವೆ. ಆದರು ಕೂಡ ಗ್ರಾಮದಲ್ಲಿ ಸೋಂಕು ಕಂಡುಬರುತ್ತಿದೆ. ಗ್ರಾಮದ ಜನರು ಸರಿಯಾದ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಹಾಗಾಗಿ ಪಂಚಾಯತ್ ವತಿಯಿಂದ ಚಿಕಿತ್ಸಾ ವೆಚ್ಚಭರಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

  • ಬಿಹಾರದ ಮಾಜಿ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಕೋವಿಡ್‍ಗೆ ಬಲಿ

    ಬಿಹಾರದ ಮಾಜಿ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಕೋವಿಡ್‍ಗೆ ಬಲಿ

    ಪಾಟ್ನಾ: ಬಿಹಾರದ ಮಾಜಿ ಶಿಕ್ಷಣ ಸಚಿವ ಹಾಗೂ ಜನತಾ ದಳದ ಶಾಸಕ ಮೇವಲಾಲ್ ಚೌಧರಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

    ಕಳೆದ ಕೋವಿಡ್-19ಗೆ ಒಳಗಾಗಿದ್ದ ಸಚಿವರು ಪ್ಯಾರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಕೋವಿಡ್ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

    ಮೇವಲಾಲ್ ಚೌಧರಿ, ಬಿಹಾರದ ತಾರಾಪುರ ಕ್ಷೇತ್ರದ ವಿಧಾನಸಭೆಯ ಸದಸ್ಯರಾಗಿದ್ದರು. ಆದರೆ ಭ್ರಷ್ಟಾಚಾರದ ಆರೋಪದಡಿ ರಾಜ್ಯ ಶಿಕ್ಷಣ ಸಚಿವ ಹುದ್ದೆಯಿಂದ ಅವರನ್ನು ತೆಗೆದುಹಾಕಲಾಯಿತು.

    ಭಾನುವಾರ ರಾತ್ರಿಯಿಂದ ಬಿಹಾರದ ಸರ್ಕಾರ ರಾಜ್ಯದಲ್ಲಿ ನೈಟ್ ಕಫ್ರ್ಯೂ ಜಾರಿಗೊಳಿಸಿದ್ದು, ಮೇ 15ರವರೆಗೂ ಬಿಹಾರದ ಶಾಲಾ-ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದೆ. ಇತ್ತೀಚೆಗೆ ಆರೋಗ್ಯ ಸಿಬ್ಬಂದಿಗೆ ಸಂಬಳದ ಜೊತೆಗೆ ಒಂದು ತಿಂಗಳು ಬೋನಸ್ ನೀಡಲು ಬಿಹಾರ ಸರ್ಕಾರ ಘೋಷಿಸಿದೆ.

  • ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ, ಕಾನೂನು ಚೌಕಟ್ಟನ್ನು ಮೀರಬೇಡಿ: ನಿವೃತ್ತ ಪೊಲೀಸ್ ಅಧೀಕ್ಷಕ ಬಡಿಗೇರ

    ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ, ಕಾನೂನು ಚೌಕಟ್ಟನ್ನು ಮೀರಬೇಡಿ: ನಿವೃತ್ತ ಪೊಲೀಸ್ ಅಧೀಕ್ಷಕ ಬಡಿಗೇರ

    ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುವ ಅವಕಾಶ ಎಲ್ಲರಿಗೂ ಲಭ್ಯವಾಗುವುದಿಲ್ಲ. ಸಮಾಜದಲ್ಲಿ ಹಿಂದೇ ಉಳಿದವರು, ಮಹಿಳೆಯರು ಅಶಕ್ತರು ಪೊಲೀಸರಲ್ಲಿ ನೆರವು ಕೋರಿ ಆಗಮಿಸುತ್ತಾರೆ. ಇವರ ಅಳುಲುಗಳನ್ನು ಆಲಿಸಿ, ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ, ಕಾನೂನು ಚೌಕಟ್ಟನ್ನು ಮೀರಬೇಡಿ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎ.ಆರ್.ಬಡಿಗೇರ ಹೇಳಿದ್ದಾರೆ.

    ಹುಬ್ಬಳ್ಳಿ ಗೋಕುಲದ ಹೊಸ ಸಿ.ಆರ್. ಮೈದಾನದಲ್ಲಿ ಆಯೋಜಿಸಲಾಗಿದ್ದ 2021 ನೇ ಸಾಲಿನ ಪೊಲೀಸ್ ಧ್ವಜದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, 1992 ರಿಂದ 2000 ವರೆಗೆ ಹುಬ್ಬಳ್ಳಿ ಅತಿ ಸೂಕ್ಷ್ಮ ಪ್ರದೇಶವಾಗಿತ್ತು. ಕೋಮು ಘರ್ಷಣೆಗಳಾಗುತ್ತಿದ್ದ ನಗರದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲಾಗಿದೆ. ಈಗ ಹುಬ್ಬಳ್ಳಿಯಲ್ಲಿ ಶಾಂತ ಪರಿಸ್ಥಿತಿ ಇದೆ. ಅವಳಿ ನಗರದ ಪೊಲೀಸರ ಶ್ರಮ ಇದಕ್ಕೆ ಕಾರಣವಾಗಿದೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಶಿಸ್ತು ಅವಶ್ಯಕವಾಗಿದೆ. ಪೊಲೀಸರು ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು. ಬಡವರ ಸಮಸ್ಯೆಗಳನ್ನು ಕಳಕಳಿಯಿಂದ ಬಗೆಹರಿಸಿ ಕಾನೂನು ನೆರವು ನೀಡಿದರೆ, ಜೀವನ ಪೂರ್ತಿ ನಿಮಗೆ ಅಭಾರಿಯಾಗಿರುತ್ತಾರೆ. ಇಲಾಖೆಯಲ್ಲಿ ಸುಧಾರಣೆಯಾಗಿದ್ದು, ಉತ್ತಮ ವಾಹನ, ಕಟ್ಟಡ, ಕಂಪ್ಯೂಟರ್ ಸೌಲಭ್ಯಗಳಿವೆ. ವೈದ್ಯರ ಹಾಗೆ ಪೊಲೀಸರು ಸಮಾಜವನ್ನು ಚಿಕಿತ್ಸೆ ದೃಷ್ಟಿಯಿಂದ ನೋಡಿ ಸರಿಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು ಪೊಲೀಸ್ ವೃತ್ತಿ ಆಗಮಿಸುತ್ತಿದ್ದೀರಿ. ನಿಮಗೆಲ್ಲ ಒಳ್ಳೆಯದಾಗಲಿ ಎಂದರು.

    ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಆಯುಕ್ತ ಲಾಭುರಾಮ್, ಏಪ್ರಿಲ್ 2 ಮಹತ್ವದ ದಿನವಾಗಿದೆ. 1965 ರಲ್ಲಿ ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಯ ಮೂಲಕ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯನ್ನು ಪುನ್ರರಚಿಸಿ ಅಸ್ತಿತ್ವಕ್ಕೆ ತರಲಾಯಿತು. ಇದರ ನೆನಪಿಗಾಗಿ ಧ್ವಜ ದಿನಾಚರಣೆಯಲ್ಲಿ ಆಚರಿಸಲಾಗುತ್ತದೆ. ಪೊಲೀಸ್ ಧ್ವಜ ಮಾರಾಟದಿಂದ ಬರುವ ಹಣವನ್ನು ನಿವೃತ್ತ ಸಿಬ್ಬಂದಿಗಳ ಕಲ್ಯಾಣ ನಿಧಿಗೆ ಬಳಕೆ ಮಾಡಿಕೊಳ್ಳಲಾಗುವುದು. ನಿವೃತ್ತಿ ಸಿಬ್ಬಂದಿಯ ವೈದ್ಯಕೀಯ ವೆಚ್ಚ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡಲಾಗುವುದು. ಧ್ವಜ ಮಾರಾಟದ ಹಣದಲ್ಲಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ ಶೇ.50, ಕಾರ್ಯ ನಿರತ ಪೊಲೀಸರ ನಿಧಿಗೆ ಶೇ.25 ಹಾಗೂ ಕೇಂದ್ರ ಪೊಲೀಸ್ ನಿಧಿಗೆ ಶೇ.25 ರಷ್ಟು ಹಣ ಸಲ್ಲಿಕೆಯಾಗುತ್ತದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಿವಪ್ಪ ಕಮಟಗಿ, ಕುಶಲ್ ಪಂಡ್ರೆ ಅವರಿಗೆ ಮುಖ್ಯ ಮಂತ್ರಿಗಳ ಪದಕ ದೊರತಿರುವುದು ಸಂತಸವಾಗಿದೆ ಎಂದು ನುಡಿದರು.

    ಈ ಸಂದರ್ಭದಲ್ಲಿ 2021 ಸಾಲಿನ ಧ್ವಜ ಬಿಡುಗಡೆ ಮಾಡಲಾಯಿತು. ಸ್ಥಳದಲ್ಲಿ ಸಾಂಕೇತಿಕವಾಗಿ ಧ್ವಜ ಮಾರಾಟ ಮಾಡಿ ಪೊಲೀಸ್ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸಲಾಯಿತು. ಮಾರ್ಚ್ ತಿಂಗಳಲ್ಲಿ ನಿವೃತ್ತರಾದ ಸಹಾಯಕ ಆರಕ್ಷಕ ನಾಗರಾಜ್ ಪಾಟೀಲ, ಪೊಲೀಸ್ ದಲಾಯತ್ ಶಕುಂತಲ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

    ಸಿ.ಎ.ಆರ್ ತುಕಡಿ, ಉತ್ತರ, ದಕ್ಷಿಣ, ಧಾರವಾಡ, ಮಹಿಳಾ, ಸಂಚಾರ ಉಪವಿಭಾಗದ ಪೊಲೀಸ್ ಸಿಬ್ಬಂದಿಯಿಂದ ಪಥ ಸಂಚಲನ ಜರುಗಿತು. ಸಶಸ್ತೃ ಮೀಸಲು ಪಡೆ ಆರಕ್ಷಕ ಮಹದೇವ ಅಥಣಿ ನೇತೃತ್ವದಲ್ಲಿ ರಾಷ್ಟಧ್ವಜ ಹಾಗೂ ಪೊಲೀಸ್ ಧ್ವಜಗಳ ಆಗಮನ ಹಾಗೂ ನಿರ್ಗಮನವಾಯಿತು. ಆರ್.ಎಸ್.ಐ ಸಂತೋಷ್ ಬೋಜಪ್ಪಗೋಳ್ ಪಥ ಸಂಚಲದ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದರು. ಡಿಸೋಜಾ ತಂಡದಿಂದ ಪೊಲೀಸ್ ಬ್ಯಾಂಡ್ ನುಡಿಸಲಾಯಿತು.

    ನಿವೃತ್ತ ಪೊಲೀಸ್ ಅಧೀಕ್ಷಕರಾದ ಎಸ್.ಎಂ.ಸಂದಿಗಾವಡ, ರವಿ ಹೆಚ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪ ಪೊಲೀಸ್ ಆಯುಕ್ತ ರಾಮರಾಜನ್, ಆರ್.ಬಿ.ಬಸರಗಿ, ಸಶಸ್ತ್ರ ಮೀಸಲ ಪಡೆ ಉಪ ಪೊಲೀಸ್ ಆಯುಕ್ತ .ಎಸ್.ವಿ.ಯಾದವ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

  • ಮಿಲಿಟರಿ ಕ್ಯಾಂಪ್‍ನಲ್ಲಿ ಸ್ಫೋಟ- 20 ಸಾವು, 600 ಮಂದಿಗೆ ಗಂಭೀರ ಗಾಯ

    ಮಿಲಿಟರಿ ಕ್ಯಾಂಪ್‍ನಲ್ಲಿ ಸ್ಫೋಟ- 20 ಸಾವು, 600 ಮಂದಿಗೆ ಗಂಭೀರ ಗಾಯ

    – ಸುಟ್ಟು ಕರಕಲಾದ ಕಟ್ಟಡಗಳು

    ಲಾಗೋಸ್: ಈಕ್ವಟೋರಿಯಲ್ ಗಿನಿಯದ ಮಿಲಿಟರಿ ಕ್ಯಾಂಪ್ ಮತ್ತು ವಸತಿ ಗೃಹ ಪ್ರದೇಶಗಳಲ್ಲಿ ಆಕಸ್ಮಿಕವಾಗಿ 4 ಸ್ಫೋಟಕಗಳು ಸ್ಫೋಟಗೊಂಡಿದ್ದು, 20 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

    ಘಟನೆ ವೇಳೆ ಬಾಟಾದ ಎನ್‍ಕೋವಾ ಎನ್ಟೋಮಾ ಶಿಬಿರದ ಸುತ್ತಲಿನ ಕಟ್ಟಡಗಳು ಸುಟ್ಟುಕರಕಲಾಗಿದೆ. ಆಕಾಶದೆತ್ತರಕ್ಕೆ ಕಪ್ಪು ಹೊಗೆ ಹಾರಿದೆ. ಅಲ್ಲದೆ ಅನೇಕ ಮನೆಗಳು ನೆಲಕ್ಕೂರುಳಿದೆ. ಕಟ್ಟಡಗಳಲ್ಲಿ ಸಿಲುಕಿದ್ದ ಮಕ್ಕಳು ಹಾಗೂ ವಯಸ್ಕರನ್ನು ರಕ್ಷಿಸಲಾಗಿದ್ದು, ಇದೀಗ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಲ್ಲದೆ ಆರೋಗ್ಯ ಸಚಿವಾಲಯವು ಟ್ವಿಟ್ಟರ್ ಮೂಲಕ ಇನ್ನೂ ಅನೇಕ ಮಂದಿ ಕೆಳಗೆ ಸಿಲುಕಿಕೊಂಡಿರಬಹುದು ಎಂದು ಎಚ್ಚರಿಸಿದೆ. ಮಿಲಿಟರಿ ಕ್ಯಾಂಪ್‍ನಲ್ಲಿ ಸೈನಿಕರು ಸಂಗ್ರಹಿಸಿದ್ದ ಸ್ಫೋಟಗಳ ಪ್ರದೇಶದಲ್ಲಿ ರೈತರು ಬೆಂಕಿಯನ್ನು ಹೊತ್ತಿಸಿದ ಕಾರಣ ಘಟನೆ ಸಂಭವಿಸಿದೆ. ಅಲ್ಲದೆ ಎನ್ಕೋಮಾ ಮಿಲಿಟರಿ ಕ್ಯಾಂಪ್‍ನಲ್ಲಿ ಸ್ಫೋಟಕಗಳು, ಡೈನಮೈಟ್ ಹಾಗೂ ಸಿಡಿಮದ್ದುಗಳನ್ನು ಸಂಗ್ರಹಿಸುವ ಉಸ್ತುವಾರಿ ಘಟಕದ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಅಧ್ಯಕ್ಷ ಟಿಯೊಡೊರೊ ಒಬಿಯಾಂಗ್ ನ್ಗುಮಾ ಹೇಳಿದ್ದಾರೆ.

    ಸದ್ಯ ಘಟನೆಯಲ್ಲಿ 20 ಮಂದಿ ಮೃತಪಟ್ಟಿದ್ದು, ಸುಮಾರು 600 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯ ಆಫ್ರಿಕಾ ದೇಶದಲ್ಲಿ ಬಾಟಾ ಅತಿದೊಡ್ಡ ನಗರವಾಗಿದ್ದು, 1.4 ದಶಲಕ್ಷಜನಸಂಖ್ಯೆಹೊಂದಿದೆ.

  • 2 ಲಾರಿ, ಕಾರು ನಡುವೆ ಸರಣಿ ಅಪಘಾತ – ಇಬ್ಬರು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

    2 ಲಾರಿ, ಕಾರು ನಡುವೆ ಸರಣಿ ಅಪಘಾತ – ಇಬ್ಬರು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿ ಸರಣಿ ಅಪಘಾತವಾಗಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮೂರು ಲಾರಿ ಮತ್ತು ಒಂದು ಕಾರು ನಡುವೆ ಸರಣಿ ಅಪಘಾತ ನಡೆದಿದೆ.

    ಲಾರಿಗಳ ಮುಖಾಮುಖಿ ಡಿಕ್ಕಿಯಿಂದ ಅಪಘಾತ ಸಂಭವಿಸಿದೆ. ಮೃತರನ್ನ ದೇವದುರ್ಗ ಮೂಲದ ಹರ್ಷಿತಾ(18) ಹಾಗೂ ಭುವನ್(16) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

    ಲಾರಿ ಹಿಂದೆ ಬರುತ್ತಿದ್ದ ಕಾರಿಗೆ ಹಿಂಬದಿಯಲ್ಲಿನ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಇದ್ದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ವ್ಯಕ್ತಿ ಬದುಕಿದ್ದಾಗಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದ ಖಾಸಗಿ ಆಸ್ಪತ್ರೆ!

    ವ್ಯಕ್ತಿ ಬದುಕಿದ್ದಾಗಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದ ಖಾಸಗಿ ಆಸ್ಪತ್ರೆ!

    ಕೊಪ್ಪಳ: ಜೀವ ಇರುವಾಗಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ವೈದರು ಎಡವಟ್ಟು ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳದ ಕೆ ಎಸ್ ಆಸ್ಪತ್ರೆಯ ವೈದ್ಯರ ಈ ಎಡವಟ್ಟನ್ನ ಮಾಡಿಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ಲಾಚನಕೇರಿ ಬಳಿ ಜ.3 ರಂದು ಅಪಘಾತ ಸಂಭವಿಸಿತ್ತು. ಅಪಘಾತಕ್ಕೆ ತುತ್ತಾಗಿದ್ದ ಪಕೀರಪ್ಪ ದೊಡಮನಿಯನ್ನು ರಾತ್ರಿ 9 ಘಂಟೆಗೆ ಕೊಪ್ಪಳದ ಕೆ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮರುದಿನ ದಿನ ಆ ವ್ಯಕ್ತಿಗೆ ಜೀವ ಇದ್ದರೂ ಡಿಸ್ಚಾರ್ಜ್ ಸಮ್ಮರಿಯಲ್ಲಿ ಡೆತ್ ಎಂದು ಬರೆದಿದ್ದನ್ನ ನೋಡಿ ಬಾಡಿ ಕೊಡಿ ಎಂದು ಕೇಳಿದಾಗ ಜೀವ ಇರುವುದು ಬೆಳಕಿಗೆ ಬಂದಿದೆ.

    ಕುಟುಂಬಸ್ಥರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಆ ರೋಗಿಯನ್ನ ಜಿಲ್ಲಾ ಆಸ್ಪತ್ರೆಗೆ ಕರದೊಯ್ದರು ಅಲ್ಲಿ ಎರಡು ಗಂಟೆಗೆಗಳ ಕಾಲ ಚಿಕ್ಸಿತೆ ನೀಡಿದ್ದಾರೆ. ತೀವ್ರ ಉಸಿರಾಟದ ನಂತರ ಈಗ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದರು. ನಂತರ ಕೆಎಸ್ ಆಸ್ಪತ್ರೆಗೆ ವಿರುದ್ಧ ರೋಗಿಯ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ವೈದ್ಯರು ಬರುವಂತೆ ಒತ್ತಾಯ ಮಾಡಿದ್ದಾರೆ.

  • ಶ್ವಾನದ ಹೊಟ್ಟೆಯಿಂದ ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ತೆಗೆದ ವೈದ್ಯರು

    ಶ್ವಾನದ ಹೊಟ್ಟೆಯಿಂದ ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ತೆಗೆದ ವೈದ್ಯರು

    ಧಾರವಾಡ: ಕ್ಯಾನ್ಸರ್‍ನಿಂದ ಬಳಲುತ್ತಿರುವ ಶ್ವಾನದ ಹೊಟ್ಟೆಯಿಂದ 10 ಕ್ಯಾನ್ಸರ್ ಗಡ್ಡೆಗಳನ್ನು ವೈದ್ಯರು ತೆಗೆದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾ ವಿಭಾಗದ ವೈದ್ಯ ಡಾ. ಅನಿಲಕುಮಾರ ಪಾಟೀಲ ಮತ್ತು ತಂಡ, ಕ್ಯಾನ್ಸರ್‍ನಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ವಿಶೇಷ ಚಿಕಿತ್ಸೆ ಮಾಡಿ, ಅದರ ಹೊಟ್ಟೆ ಒಳಗಿದ್ದ ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ಹೊರತೆಗೆದಿದ್ದಾರೆ.

    ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಲ್ಯಾಬ್ರಡಾರ್ ನಾಯಿಯೇ ಈ ವಿಶೇಷ ಚಿಕಿತ್ಸೆಗೆ ಒಳಗಾಗಿತ್ತು. ಈ ನಾಯಿ ಅಬ್ಡೋಮಿನಲ್ ಟ್ಯೂಮರ್ ಎಂಬ ಕ್ಯಾನ್ಸರ್ ಗಡ್ಡೆ ಕಾಯಿಲೆಗೆ ತುತ್ತಾಗಿತ್ತು. ಇದೇ ನಾಯಿಗೆ ಒಂದೂವರೆ ವರ್ಷ ಇದ್ದಾಗಲೂ ಸಹ ಶಸ್ತ್ರ ಚಿಕಿತ್ಸೆಯನ್ನು ಈ ಹಿಂದೆ ಮಾಡಲಾಗಿತ್ತು.

    ಕಳೆದ ಹತ್ತು ದಿನಗಳಿಂದ ನಾಯಿ ಸರಿಯಾಗಿ ಆಹಾರ ಸೇವಿಸದೇ ಒದ್ದಾಡುತಿತ್ತು. ಏನೇ ತಿಂದರೂ ವಾಂತಿ ಮಾಡಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಯಿಯನ್ನು ಡಾ. ಅನಿಲಕುಮಾರ ಬಳಿ ನಾಯಿ ಮಾಲೀಕರು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಸೋನೋಗ್ರಾಫಿ ಮಾಡಿ ನೋಡಿದಾಗ ಹೊಟ್ಟೆಯೊಳಗೆ ಗಂಟುಗಳಿರುವುದು ಪತ್ತೆಯಾಗಿದ್ದವು. ಈ ಹಿನ್ನೆಲೆ ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಅನೀಲ ಕುಮಾರ್ ಪಾಟೀಲ ನೇತೃತ್ವದ ತಂಡ, ನಾಯಿಯ ಹೊಟ್ಟೆಯಿಂದ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾಗಿದೆ.

  • ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಕೀಲ ಹೃದಯಾಘಾತದಿಂದ ಸಾವು

    ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಕೀಲ ಹೃದಯಾಘಾತದಿಂದ ಸಾವು

    ಚಿಕ್ಕಬಳ್ಳಾಪುರ: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ನವೀನ್ ಕುಮಾರ್ ಮೃತ ವಕೀಲ. ಚಿಕ್ಕಬಳ್ಳಾಪುರ ನ್ಯಾಯಾಲಯದ ಕೋರ್ಟ್ ಸಿಬ್ಬಂದಿ ನವೀನ್ ಕುಮಾರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ, ವಿಚಾರಣಾಧೀನ ಕೈದಿ ವಕೀಲ ನವೀನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

     

    ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿದ್ದ ನವೀನ್ ಇಂದು ದಿಢೀರ್ ಅಂತ ಅಸ್ವಸ್ಥಗೊಂಡಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆ ತರತಲಾಯಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗದ ಮಧ್ಯೆದಲ್ಲಿ ನವೀನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

     

    ಚಿಕ್ಕಬಳ್ಳಾಪುರ ನ್ಯಾಯಾಲಯದ ಮಹಿಳಾ ಸಿಬ್ಬಂದಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ನವೀನ್, ಅದೇ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮತ್ತೊಬ್ಬ ನವೀನ್ ಕುಮಾರ್ ತನ್ನ ಪರಿಚಯಸ್ಥರಿಂದ ಕೊಲೆ ಮಾಡಿಸಿದ್ದ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಜೈಲು ಸೇರಿದ್ದರು.

    ಮೃತ ನವೀನ್‍ಗೆ ಕೆಳ ಹಂತದ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಹೈಕೋರ್ಟ್‍ನಲ್ಲಿ ಜಾಮೀನು ಮಂಜೂರಾಗಿ ಇನ್ನೆರೆಡು ದಿನಗಳಲ್ಲಿ ಜಾಮೀನಿನ ಮೂಲಕ ಕಾರಾಗೃಹದಿಂದ ಹೊರಬರುತ್ತಿದ್ದ ಎನ್ನಲಾಗಿದೆ. ಆದರೆ ಅಷ್ಟರಲ್ಲೇ ನವೀನ್ ಮೃತಪಟ್ಟಿದ್ದಾನೆ. ಜೈಲು ಅಧಿಕಾರಿ ಸಿಬ್ಬಂದಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿಲ್ಲ ಅಂತ ಮೃತ ನವೀನ್ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • 12 ವರ್ಷದ ಸಮಸ್ಯೆಯನ್ನ 11 ಗಂಟೆಯಲ್ಲಿ ಪರಿಹರಿಸಿದ ಸೋನು ಸೂದ್

    12 ವರ್ಷದ ಸಮಸ್ಯೆಯನ್ನ 11 ಗಂಟೆಯಲ್ಲಿ ಪರಿಹರಿಸಿದ ಸೋನು ಸೂದ್

    ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅಭಿಮಾನಿಯ 12 ವರ್ಷದ ಸಮಸ್ಯೆಗೆ ಕೇವಲ 11 ಗಂಟೆಯಲ್ಲಿ ಪರಿಹಾರ ಒದಗಿಸಿದ್ದಾರೆ.

    ಸೋನು ಸೂದ್ ಕೇವಲ ಓರ್ವ ಕಲಾವಿದನಾಗಿ ಇಂದು ಗುರುತಿಸಿಕೊಂಡಿಲ್ಲ. ಕತ್ತಲೆಯಲ್ಲಿ ಜೀವನ ನೀಡುತ್ತಿದ್ದ ಅದೆಷ್ಟೋ ಜನರಿಗೆ ಬೆಳಕು ನೀಡಿದ್ದಾರೆ. ಅದರಂತೆ ಲಾಕ್‍ಡೌನ್ ವೇಳೆ ಕೆಲಸವೂ ಇಲ್ಲದೇ ಊರಿಗೆ ಹೋಗಲಾರದೇ ರಸ್ತೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದ ಜನರಿಗೆ ಶ್ರವಣಕುಮಾರ್ ಆಗಿದ್ದು ಇದೇ ಸೋನು ಸೂದ್. ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಸೋನು ಸೂದ್ ಅಭಿಮಾನಿಯ 12 ವರ್ಷದ ಸಮಸ್ಯೆಗೆ ಪರಿಹಾರ ನೀಡಿದ್ದಾರೆ.

    ಸೋನು ಸೂದ್ ಅಭಿಮಾನಿ ಅಮನ್‍ಜಿತ್ ನರ ದೌರ್ಬಲ್ಯದಿಂದಾಗಿ ಮಾತನಾಡಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ವಿಷಯ ತಿಳಿದ ಸೋನು ಸೂದ್, ನಿಮ್ಮ 12 ವರ್ಷದ ಕಷ್ಟ ದೂರವಾಯ್ತು ಎಂದು ತಿಳಿದುಕೊಳ್ಳಿ. ನೀವು ಚಿಕಿತ್ಸೆಗಾಗಿನವೆಂಬರ್ 20ರಂದು ಪ್ರಯಾಣಿಸುತ್ತಿದ್ದೀರಿ. ನವೆಂಬರ್ 24ರಂದು ನಿಮ್ಮ ಶಸ್ತ್ರಚಿಕಿತ್ಸೆ ನಡೆಸಯಲಿದೆ ಎಂದು ಮಾಹಿತಿ ನೀಡಿದ್ದರು.

    ಶಸ್ತ್ರಚಿಕಿತ್ಸೆ ಬಳಿಕ ಟ್ವೀಟ್ ಮಾಡಿರುವ ವೈದ್ಯ ಅಶ್ವನಿಕುಮಾರ್, ಅಮನ್‍ಜಿತ್ ಗುಣಮುಖರಾಗುತ್ತಿದ್ದಾರೆ. 11 ಗಂಟೆಯ ದೀರ್ಘ ಶಸ್ತ್ರ ಚಿಕಿತ್ಸೆಯಿಂದಾಗಿ ಅಮನ್‍ಜಿತ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಿಮ್ಮ ಕಾಳಜಿ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ಬರೆದು ಸೋನು ಸೂದ್ ಅವರಿಗೆ ಟ್ಯಾಗ್ ಮಾಡಿದ್ದರು. ವೈದ್ಯರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸೋನು ಸೂದ್, ಇದು ಇವತ್ತಿನ ಶುಭ ಸುದ್ದಿ. 12 ವರ್ಷದ ಸಮಸ್ಯೆ 11 ಗಂಟೆಯಲ್ಲಿ ಪರಿಹಾರವಾಗಿದೆ ಎಂದು ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.