Tag: treatment

  • ಭಾರತದಲ್ಲಿ ಪಾಕ್ ಮಗುವಿನ ಚಿಕಿತ್ಸೆಗೆ ಸುಷ್ಮಾ ನೆರವು

    ಭಾರತದಲ್ಲಿ ಪಾಕ್ ಮಗುವಿನ ಚಿಕಿತ್ಸೆಗೆ ಸುಷ್ಮಾ ನೆರವು

    ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಾಯದಿಂದಾಗಿ ಪಾಕಿಸ್ತಾನದ ಮೂಲದ ಕುಟುಂಬವೊಂದು ಮಗನ ಚಿಕಿತ್ಸೆಗೆ ಭಾರತಕ್ಕೆ ಆಗಮಿಸಿದೆ.

    ನಾಲ್ಕು ತಿಂಗಳ ಬಾಲಕ ರೋಹನ್ ಹೃದಯದಲ್ಲಿ ರಂಧ್ರ ಇರುವ ಹಿನ್ನೆಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ಹೇಳಿದ್ದರು. ಹಾಗೆ ದೆಹಲಿಯಲ್ಲಿರುವ ನೋಯ್ಡಾದ ಜೆಪಿ ಆಸ್ಪತ್ರೆಯಲ್ಲಿ ರೋಹನ್‍ಗೆ ಚಿಕಿತ್ಸೆ ನೀಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದರು.

    ಭಾರತ ಮತ್ತು ಪಾಕ್ ಸಂಬಂಧ ಸರಿ ಇಲ್ಲದಿರುವುದರಿಂದ ರೋಹನ್ ಪೋಷಕರಿಗೆ ವೈದ್ಯಕೀಯ ವೀಸಾ ಸಿಕ್ಕರಲಿಲ್ಲ. ಹಾಗಾಗಿ ರೋಹನ್ ತಂದೆ ಕನ್ವಾಲ್ ಸಾಧಿಕ್ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿ, ವೈದ್ಯಕೀಯ ವೀಸಾ ಕೊಡಿಸುವಂತೆ ಮನವಿ ಮಾಡಿಕೊಂಡರು. ಸಾಧಿಕ್ ಮನವಿಗೆ ಸ್ವಂದಿಸಿ ರೋಹನ್ ಪೋಷಕರಿಗೆ ವೀಸಾ ದೊರಕಿಸುವಂತೆ ಮಾಡಿದ್ದರು.

    ಪೋಷಕರು ಮತ್ತು ರೋಹನ್ ಸೇರಿ ಸೋಮವಾರ ಸಂಜೆ ನೋಯ್ಡಾ ಜೆಪಿ ಆಸ್ಪತ್ರೆಗೆ ಬಂದಿದ್ದಾರೆ. ಈ ಆಸ್ಪತ್ರೆ ರೋಹನ್‍ಗೆ ಚಿಕಿತ್ಸೆ ಕೊಡಿಸಲು ಮುಂದಾಗಿದೆ.

  • ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿದ್ದ ಆನೆಯ ರಕ್ಷಣೆ

    ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿದ್ದ ಆನೆಯ ರಕ್ಷಣೆ

    ಕೊಡಗು: ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

    ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ವಲ್ಲೂರು ಗ್ರಾಮದ ಕಾಡಂಚಿನ ಕೆರೆಯಲ್ಲಿ ಗಾಯಗೊಂಡಿತ್ತು. ಆನೆ ಕಳೆದ ಎರಡು ತಿಂಗಳಿನಿಂದ ಗಾಯಗೊಂಡು ಕೆರೆಯ ದಡದಲ್ಲಿಯೇ ವಾಸ್ತವ್ಯ ಹೂಡಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ಪಶು ವೈದ್ಯರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿತ್ತು.

    ಕಾಡಾನೆಯನ್ನು ರಕ್ಷಿಸಲು ಅಭಿಮನ್ಯು. ಕೃಷ್ಣ, ಭೀಮ, ಗೋಪಾಲಕೃಷ್ಣ ಮತ್ತು ದ್ರೋಣ ಎಂಬ ಐದು ಸಾಕಾನೆಗಳನ್ನು ಕಾರ್ಯಚಾರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಅನೆಯ ಕಾಲಿನ ಬಲ ಭಾಗದ ತೊಡೆಯಲ್ಲಿ ದೊಡ್ಡ ಗಾಯವಾಗಿದ್ದು, ಗಾಯದಿಂದ ಹುಳುಗಳು ಉದುರುತ್ತಿದವು ಹಾಗು ಬೆನ್ನಿನ ಭಾಗದಲ್ಲಿಯೂ ಸಹ ಗಾಯಗಳಾಗಿವೆ. ಪಶುವೈದ್ಯಾಧಿಕಾರಿಗಳು ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆನೆ ಸಂಪೂರ್ಣ ಗುಣಮುಖವಾದ ನಂತರ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

  • ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ

    ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ

    ಉಡುಪಿ: ತುಂಬು ಗರ್ಭಿಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ ಅಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.

    ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಆಶಾ ಎಂಬ ಮಹಿಳೆಗೆ ಭಾನುವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಶಾ ಅವರನ್ನು ಆಟೋ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ಉತ್ತರ ಸಿಬ್ಬಂದಿಯಿಂದ ಬಂದಿದೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತ ಬಿಟ್ಟಿ ಸಲಹೆ ಕೊಟ್ಟಿದ್ದಾರೆ.

    ಕೊನೆಗೆ ಆಶಾ ಅವರನ್ನು ಅದೇ ಆಟೋದಲ್ಲಿ ಕುಂದಾಪುರದ ಶ್ರೀದೇವಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆಸ್ಪತ್ರೆ ಸೇರಿದ 10 ನಿಮಿಷಕ್ಕೆ ಆಶಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಬಗ್ಗೆ ಸೋಮವಾರ ಆಶಾ ಅವರ ಕುಟುಂಬಸ್ಥರು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಲಿಖಿತ ದೂರು ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಬೇಜಾವಬ್ದಾರಿ ಮತ್ತು ಅವ್ಯವಸ್ಥೆಯ ಕುರಿತು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸಾಂತ್ವಾನ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ಕೊಟ್ಟು ಆಶಾ ಅವರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.

    ವೈದ್ಯರು ಆಸ್ಪತ್ರೆಯಲ್ಲಿ 24 ಗಂಟೆ ಇರಬೇಕು. 108 ಗೆ ಕರೆ ಮಾಡಿದರೆ ಅದೂ ಬರಲಿಲ್ಲ. ತುಂಬು ಗರ್ಭಿಣಿಯರನ್ನು ಮೊದಲು ದಾಖಲು ಮಾಡಿಕೊಳ್ಳಬೇಕು. ನಂತರ ಕೂಡಲೇ ವೈದ್ಯರನ್ನು ಕರೆಸಬೇಕು. ಒಬ್ಬ ವೈದ್ಯರು ರಜೆಯಲ್ಲಿದ್ದರೆ, ಇನ್ನೊಬ್ಬರು ವೈದ್ಯರು ಆಸ್ಪತ್ರೆಯಲ್ಲಿ ಇರಲೇಬೇಕು. ಡಾ. ರೋಹಿಣಿ ಮತ್ತು ಡಾ. ಉದಯ ಶಂಕರ್ ಗೆ ದೂರಿನ ಪ್ರತಿಯನ್ನು ರವಾನೆ ಮಾಡಿದ್ದೇನೆ. ನರ್ಸ್‍ಗಳದ್ದೂ ಇದರಲ್ಲಿ ಬೇಜವಾಬ್ದಾರಿಯಿದೆ. ಬಡವರಿಗೆ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೀಗೆ ಆದ್ರೆ ಹೇಗೆ ಎಂದು ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರದ ಮುಖ್ಯಸ್ಥೆ ರಾಧಾ ದಾಸ್ ಪ್ರಶ್ನೆ ಮಾಡಿದ್ದಾರೆ.

     

  • ಎತ್ತಿನಗಾಡಿಗೆ ಮಿನಿ ಬಸ್ ಡಿಕ್ಕಿ- ಓರ್ವನಿಗೆ ಗಂಭೀರ ಗಾಯ, ಚಿಕಿತ್ಸೆ ಸಿಗದೆ ನರಳಾಡುತ್ತಿರುವ ಎತ್ತುಗಳು

    ಎತ್ತಿನಗಾಡಿಗೆ ಮಿನಿ ಬಸ್ ಡಿಕ್ಕಿ- ಓರ್ವನಿಗೆ ಗಂಭೀರ ಗಾಯ, ಚಿಕಿತ್ಸೆ ಸಿಗದೆ ನರಳಾಡುತ್ತಿರುವ ಎತ್ತುಗಳು

    ಮಂಡ್ಯ: ಎತ್ತಿನಗಾಡಿ ಮತ್ತು ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಎತ್ತುಗಳು ರಸ್ತೆಯಲ್ಲಿ ನರಳಾಡುತ್ತಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ತಾಲೂಕಿನ ಪಣಕನಹಳ್ಳಿ ಬಳಿ ಇಂದು ಬೆಳಗ್ಗೆ ಮಿನಿ ಬಸ್ ಮತ್ತು ಎತ್ತಿನಗಾಡಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎತ್ತಿನಗಾಡಿ ಮಾಲೀಕ ಹೊಳಲು ಗ್ರಾಮದ ಕೃಷ್ಣ ಗಾಯಗೊಂಡಿದ್ದಾರೆ. ಮೈಸೂರಿನ ಇಲವಾಲ ಮೂಲದವರು ಬೀಗರ ಊಟಕ್ಕೆಂದು ಹೊಳಲಿನ ದೇವಸ್ಥಾನಕ್ಕೆಂದು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

    ಸ್ಥಳದಲ್ಲಿದ್ದ ಜನರು ಗಾಯಾಳು ಕೃಷ್ಣ ಅವ್ರನ್ನ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲು ರವಾನಿಸಿದ್ರು. ಆದ್ರೆ ಎತ್ತುಗಳನ್ನು ಕರೆದುಕೊಂಡು ಹೋಗಲು ವಾಹನದ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಎತ್ತುಗಳು ಅಲ್ಲಿಯೇ ನರಳುವಂತಾಗಿದೆ. ಘಟನೆ ಸಂಬಂಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=OxCoWc2NcIY

     

  • ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

    ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

    ಕಾರವಾರ: ಮುಪ್ಪು ಆವರಿಸಿದಾಗ ಮಕ್ಕಳು ತಮ್ಮ ಆಸರೆಗೆ ಇರಬೇಕು ಎಂದು ಪ್ರತಿಯೊಬ್ಬ ಹೆತ್ತವರು ಬಯಸುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೇರಿ ಗ್ರಾಮದಲ್ಲಿರುವ ಕುಟುಂಬದಲ್ಲಿ ಬೆಳೆದು ನಿಂತ ಮೂವರು ಮಕ್ಕಳನ್ನ ಕಡು ಬಡತನದ ಮುಪ್ಪಿನಲ್ಲೂ ಪೊಷಕರೇ ನೋಡಿಕೊಳ್ಳಬೇಕಾದ ಸ್ಥಿತಿಯಿದೆ. ಎಂಡೋಸಲ್ಫಾನ್ ನಿಂದಾಗಿ ಮೂವರು ಮಕ್ಕಳಿಗೆ ಬುದ್ದಿಮಾಂದ್ಯತೆ ಆವರಿಸಿದ್ದು ಈ ಕುಟುಂಬದ ಬೆಳಕನ್ನೇ ಕಿತ್ತುಕೊಂಡಿದೆ.

    ಕಿತ್ತು ತಿನ್ನುವ ಬಡತನದ ಸ್ಥಿತಿಯಲ್ಲೂ ತನ್ನ ಮೂವರು ಮಕ್ಕಳನ್ನು ಸಾಕಿ ಸಲುಹುತ್ತಿರುವ 52 ವರ್ಷದ ತಾಯಿ ವತ್ಸಲಾ. ತಂದೆ ಚಂದ್ರಕಾಂತ್ ಲಕ್ಷ್ಣಣ್ ಶೇಟ್ ವಯಸ್ಸು 60. ವತ್ಸಲಾ ಮತ್ತು ಚಂದ್ರಕಾಂತ್ ದಂಪತಿ ತಮ್ಮ ಮೂವರು ಮಕ್ಕಳಾದ ನಾಗರಾಜ್, ಹೇಮಲತಾ, ಜಗದೀಶ್ ಎಂಬುವವರೊಂದಿಗೆ ವಾಸವಾಗಿದ್ದಾರೆ. ಇನ್ನು ಈ ಕುಟುಂಬ ಜೀವನೋಪಯಾಕ್ಕಾಗಿ ಕೂಲಿ ಕೆಲಸವನ್ನು ನಂಬಿಕೊಂಡಿದೆ. ಲಕ್ಷ್ಮಣ್ ಅವರು ಚೀರೆಕಲ್ಲು ಕೋರೆಯಲ್ಲಿ ಕಲ್ಲು ಕೀಳುವ ಕೆಲಸ ಮಾಡಿದರೆ, ವತ್ಸಲಾ ಸಹ ಮಕ್ಕಳ ಆರೈಕೆ ಜೊತೆ ಕೂಲಿ ಕೆಲಸ ಮಾಡುತ್ತಾರೆ.

    ಈ ಕುಟುಂಬಕ್ಕೆ ಇರಲು ಸಹ ಒಂದು ಸ್ವಂತ ಮನೆಯಿಲ್ಲ. ಅರಣ್ಯ ಒತ್ತುವರಿ ಪ್ರದೇಶದಲ್ಲಿ ಚಿಕ್ಕ ಗೂಡನ್ನ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಮೊದಲು ಒಂದು ಗಂಡುಮಗುವಿನ ಜನನವಾಯ್ತು. ಆದ್ರೆ ಆ ಮಗು ಎಂಡೋಸಲ್ಫಾನ್ ನಿಂದ ಬುದ್ದಿಮಾಂದ್ಯತೆಯಿಂದ ಹುಟ್ಟಿರುವುದನ್ನ ವೈದ್ಯರು ತಿಳಿಸಿದ್ರು. ಹೀಗಾಗಿ ಒಂದರ ಮೇಲಂತೆ ಮೂರು ಮಕ್ಕಳು ಜನಿಸಿದ್ರೂ ಎಲ್ಲಾ ಮಕ್ಕಳೂ ಬುದ್ದಿಮಾಂದ್ಯರಿದ್ದು ಇದರಲ್ಲಿ 31 ವರ್ಷದ ಹೇಮಲತಾ ಹಾಗೂ 29 ವರ್ಷದ ಜಗದೀಶ್ ಬುದ್ದಿಮಾಂದ್ಯತೆಯ ಜೊತೆಯಲ್ಲಿ ಇರುಳುಗಣ್ಣಿನ ಸಮಸ್ಯೆ ಯಿಂದ ಬಳಲಿದ್ರೆ 33 ವರ್ಷದ ಹಿರಿಯ ಮಗ ನಾಗರಾಜ್ ಬುದ್ದಿಮಾಂದ್ಯತೆಯನ್ನ ಹೊಂದಿದ್ದು ಇವರನ್ನ ನೋಡಿಕೊಳ್ಳುವ ಹೊಣೆಭಾರ ವತ್ಸಲಾ ಮೇಲಿದೆ.

    ವಯೋಸಹಜ ಅನಾರೋಗ್ಯ: ಒಂದರ ನಂತರ ಹುಟ್ಟಿದ ಮೂರು ಮಕ್ಕಳೂ ಸಹ ಎಂಡೋಸಲ್ಫಾನ್ ಕಾಯಿಲೆಯಿಂದ ಬಳಲುತ್ತಿದ್ದರೆ, ಮನೆಯ ಯಜಮಾನ ಚಂದ್ರಕಾಂತ್ ಚಿಕ್ಕ ಅಪಘಾತದಲ್ಲಿ ಕೈಗೆ ಪೆಟ್ಟಾಗಿ ರಾಡನ್ನ ಹಾಕಿಸಿಕೊಳ್ಳಬೇಕಾಯ್ತು, ಇನ್ನು ಸರ್ಕಾರ ಚೀರೇಕಲ್ಲಿನ ಗಣಿಗಾರಿಕೆ ನಿಷೇಧಿಸಿದ್ದರಿಂದ ಇರುವ ಕೆಲಸವೂ ಇಲ್ಲದಂತಾಗಿದೆ. ಜೊತೆಯಲ್ಲಿ ಇಬ್ಬರಿಗೂ ವಯೋಸಹಜತೆಯಿಂದಾಗಿ ಆರೋಗ್ಯ ಹದಗೆಟ್ಟಿದ್ದು ಇಬ್ಬರೂ ಕೆಲಸ ಮಾಡಲು ಸಾಧ್ಯವಾಗದೇ ಮನೆಯಲ್ಲಿರುವಂತೆ ಮಾಡಿದೆ. ಒಂದು ಕಡೆ ಬೆಳದು ನಿಂತ ಈ ಮಕ್ಕಳ ಪೋಷಣೆ ಇನ್ನೊಂದೆಡೆ ತಮ್ಮ ನಂತರ ಇವರ ಪಾಲನೆಯ ಚಿಂತೆ ಹೀಗೆ ಎಂದು ಚಂದ್ರಕಾಂತ್ ಮತ್ತು ವತ್ಸಲಾ ದಂಪತಿ ಚಿಂತೆಯಲ್ಲಿದ್ದಾರೆ.

    ಹುಸಿ ಭರವಸೆ: ಇವರಿಗೆ ಸ್ಥಳೀಯ ಶಾಸಕರಿಂದ ಹಿಡಿದು ಕೆಲವು ರಾಜಕಾರಣಿಗಳು ಸಹಾಯ ಮಾಡುವ ಭರವಸೆ ನೀಡಿದ್ರು. ಆದ್ರೆ ಕೇವಲ ಪ್ರಚಾರಕ್ಕೆ ಇವರನ್ನ ಬಳಸಿಕೊಂಡು ನಂತರ ಯಾವ ಸಹಾಯವನ್ನೂ ಮಾಡಲಿಲ್ಲ. ಇನ್ನು ಕೂಲಿ ಕೆಲಸ ಮಾಡುತಿದ್ದ ಇವರಿಗೆ ಆರೋಗ್ಯ ಹದಗೆಟ್ಟು ಜೀವನ ನೆಡೆಸದಷ್ಟು ಸಂಕಷ್ಟ ಎದುರಾಗಿದೆ. ಜೊತೆಯಲ್ಲಿ ಜೀವನ ಸಾಗಿಸಲು ಇದ್ದ ಮನೆಕೂಡ ಶಿಥಿಲಾವಸ್ಥೆ ತಲುಪಿದ್ದು ಆಗಲೋ ಈಗಲೂ ಬೀಳುವ ಸ್ಥಿತಿಯಲ್ಲಿದೆ.

    ಪುಟ್ಟ ಅಂಗಡಿಯ ಕನಸು: ಮೂರು ಮಕ್ಕಳ ವೈದ್ಯಕೀಯ ವೆಚ್ಚ ನೋಡಿಕೊಲ್ಳಲು ಕಷ್ಟವಾಗುತಿದ್ದು, ಸರ್ಕಾರದಿಂದ ಬರುತ್ತಿರುವ ಸಹಾಯ ಹಣವೂ ಸಾಲುತಿಲ್ಲ. ತಮ್ಮ ಆರೋಗ್ಯ ಹದಗೆಡುತ್ತಿರುವುದರಿಂದ ಮೂರು ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಇವರನ್ನ ಕಾಡುತ್ತಿದೆ. ಊರಿನಲ್ಲಿ ಚಿಕ್ಕದೊಂದು ಅಂಗಡಿ ಇಟ್ಟು ಮಕ್ಕಳ ಭವಿಷ್ಯ ರೂಪಿಸುವುದರ ಜೊತೆ ತಮ್ಮ ಬದುಕು ಕಟ್ಟಿಕೊಳ್ಳು ಹಂಬಲ ಈ ದಂಪತಿಯದು. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ಆರ್ಥಿಕ ಸಹಾಯ ಬಯಸಿದ್ದಾರೆ. ಇನ್ನು ಇದೇ ಊರಿನ ವೆಂಕಟರಮಣ ವೈದ್ಯ ಎಂಬುವವರು ಇವರ ಸಹಾಯಕ್ಕೆ ಬಂದಿದ್ದು ಅಂಗಡಿ ನೆಡೆಸಲು ಜಾಗವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಲ್ಲದೇ ಗ್ರಾಮ ಪಂಚಾಯ್ತಿಯಿಂದ ಮನೆ ಕಟ್ಟಿಸಿಕೊಡುವ ಪ್ರಯತ್ನದಲ್ಲಿದ್ದಾರೆ.

    ಆರೋಗ್ಯ ಸರಿಯಿಲ್ಲದ ಕಾರಣ ಕೂಲಿ ಕೆಲಸ ಕಷ್ಟಸಾಧ್ಯ. ಹೀಗಾಗಿ ಚಿಕ್ಕದೊಂದು ಅಂಗಡಿ ಇಟ್ಟುಕೊಂಡರೆ ಕುಳಿತಲ್ಲಿ ಕೆಲಸ ಮಾಡಿಕೊಳ್ಳಬಹುದು. ಜೊತೆಯಲ್ಲಿ ಮಕ್ಕಳನ್ನೂ ಇದರಲ್ಲಿ ತೊಡಗಿಸಿಕೊಂಡು ಕ್ರೀಯಾ ಶೀಲರಾಗಿರುವಂತೆ ನೋಡಿಕೊಂಡು ಬದುಕು ರೂಪಿಸಿಕೊಳ್ಳುವ ಆಸೆಯಿದೆ.

     

  • ಚಿತ್ರದುರ್ಗ: ಹೋಳಿಗೆ ಊಟ ಮಾಡಿ 138 ಜನ ಅಸ್ವಸ್ಥ

    ಚಿತ್ರದುರ್ಗ: ಹೋಳಿಗೆ ಊಟ ಮಾಡಿ 138 ಜನ ಅಸ್ವಸ್ಥ

    ಚಿತ್ರದುರ್ಗ: ಹೋಳಿಗೆ ಊಟ ಮಾಡಿದ 138 ಜನರು ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಹಾಯ್ಕಲ್ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬೋರಯ್ಯ ಎಂಬವರ ಮನೆಯಲ್ಲಿ ಯಲ್ಲಮ್ಮ ದೇವರ ಪೂಜೆಯ ನಂತರ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಸೇವಿಸಿದ ಕೆಲವೇ ಸಮಯದಲ್ಲಿ ನೂರಾರು ಜನರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. 78 ಪುರಷರು, 40 ಜನ ಮಹಿಳೆಯರು ಮತ್ತು 20 ಜನ ಮಕ್ಕಳು ಹೋಳಿಗೆ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದಾರೆ.

    ವಿಷಯ ತಿಳಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಯ್ಕಲ್ ಗ್ರಾಮಕ್ಕೆ ತೆರಳಿದ್ದಾರೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ತಂಡ ಗ್ರಾಮದಲ್ಲಿ ತಾತ್ಕಾಲಿಕ ಕ್ಯಾಂಪ್ ತೆರೆದು ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಫುಡ್ ಪಾಯ್ಸನ್ ನಿಂದ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 15 ಕ್ಕೂ ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಮುಂದಿನ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

     

  • ಮದುವೆಯಾಗಿ 10 ವರ್ಷವಾದ್ರೂ ಹತ್ರಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಮದುವೆಯಾಗಿ 10 ವರ್ಷವಾದ್ರೂ ಹತ್ರಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಬೆಂಗಳೂರು: ನನ್ನ ಪತಿಗೆ ಪುರಷತ್ವವಿಲ್ಲ ಎಂದು ಗೃಹಿಣಿಯೊಬ್ಬರು ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಮೇರಿ (ಹೆಸರು ಬದಲಾಯಿಸಿದೆ) ಎಂಬ ಮಹಿಳೆ ಪತಿ ಆಂಟೋನಿ ಪ್ರವೀಣ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಾಗಿ ಹತ್ತು ವರ್ಷವಾದರೂ ಪತಿ ನನ್ನ ಮೈ ಮುಟ್ಟಿಲ್ಲ. ದೈಹಿಕ ಸಂಪರ್ಕಕ್ಕೆ ಕರೆದರೆ ಜಗಳದ ನೆಪ ಮಾಡಿ ಎಸ್ಕೇಪ್ ಆಗ್ತಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

    ಮೇರಿ ಮತ್ತು ಆಂಟೋನಿ 2007 ರಲ್ಲಿ ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಮೈಕೋ ಲೇಔಟ್ ನ ಸಾರ್ವಭೌಮ ನಗರದಲ್ಲಿ ವಾಸವಾಗಿದ್ದರು. ಮದುವೆಯ ನಂತರ ಮೇರಿ ಅವರು ಫರ್ಟಿಲಿಟಿ ಚಿಕಿತ್ಸೆ ಪೆಡದು ಮಗು ಪಡೆದಿದ್ದಾರೆ. ಗಂಡನಿಗೆ ಪುರಷತ್ವ ಇಲ್ಲದಿರುವುದು ಗೊತ್ತಿದ್ರೂ ವಂಚಿಸಿ ಮದುವೆ ಆಗಿದ್ದಾನೆ. ಅಲ್ಲದೇ ಅನುಮಾನದಿಂದ ಗಂಡ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದಾರೆ.

     

  • ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ : ತುಂಬು ಗರ್ಭಿಣಿಯನ್ನ ನಡುರಾತ್ರಿ ಹೊರಗೆ ಕಳಿಸಿದ ಸಿಬ್ಬಂದಿ

    ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ : ತುಂಬು ಗರ್ಭಿಣಿಯನ್ನ ನಡುರಾತ್ರಿ ಹೊರಗೆ ಕಳಿಸಿದ ಸಿಬ್ಬಂದಿ

    ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಅನ್ನೋ ಕಾರಣ ಹೇಳಿ ಮಧ್ಯರಾತ್ರಿ ವೇಳೆ ತುಂಬು ಗರ್ಭಿಣಿಯನ್ನ ಆಸ್ಪತ್ರೆಯಿಂದ ಹೊರಗೆ ಕಳುಹಿಸಿರುವ ಅಮಾನವೀಯ ಘಟನೆ ನಡೆದಿದೆ.

    ಹೆರಿಗೆಗಾಗಿ ಯಾದಗಿರಿಯ ಮುಂಡರಗಿಯಿಂದ ಬಂದ ಒಂಭತ್ತು ತಿಂಗಳ ಗರ್ಭಿಣಿ ಮಹಾದೇವಮ್ಮ ಎರಡು ದಿನಗಳಿಂದ ರಿಮ್ಸ್ ಆಸ್ಪತ್ರೆಯಲ್ಲಿದ್ದರು. ಮೊದಲಿಗೆ ತಪಾಸಣೆ ನಡೆಸಿದ ವೈದ್ಯರು ಎರಡು ದಿನದಲ್ಲಿ ಹೆರಿಗೆಯಾಗುವುದಾಗಿ ಹೇಳಿದ್ದರು, ಆದ್ರೆ ಬಳಿಕ ಗರ್ಭಿಣಿಯನ್ನ ನೋಡಲು ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ ಎನ್ನಲಾಗಿದೆ. ಹೀಗಾಗಿ ರಾತ್ರಿವೇಳೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಏಕಾಏಕಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಕೂಡಲೇ ಬೆಡ್ ಖಾಲಿ ಮಾಡುವಂತೆ ಒತ್ತಾಯಿಸಿ ಆಸ್ಪತ್ರೆಯಿಂದ ಹೊರಗಡೆ ಕಳುಹಿಸಿದ್ದಾರೆ.

    ತುಂಬು ಗರ್ಭಿಣಿ ಆಸ್ಪತ್ರೆ ಮುಂದೆ ಅಸಹಾಯಕಳಾಗಿ ನಿಂತಿರುವುದನ್ನ ಪಬ್ಲಿಕ್ ಟಿವಿ ಚಿತ್ರಿಕರಿಸುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಕೂಡಲೇ ಅಂಬುಲೆನ್ಸ್ ತಂದು ಮಹಾದೇವಮ್ಮರನ್ನ ಮರಳಿ ಆಸ್ಪತ್ರೆಗೆ ಕರೆದ್ಯೊಯ್ದು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

    ದೂರದ ಊರುಗಳಿಂದ ಬರುವ ಬಡ ರೋಗಿಗಳಿಗೆ ವರದಾನವಾಗಬೇಕಾದ ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯದ ಕೂಪವಾಗಿದೆ. ವೈದ್ಯರ ಕೊರತೆ ಮೊದಲಿನಿಂದಲೂ ಕಾಡುತ್ತಿದ್ದು, ರಾತ್ರಿ ವೇಳೆ ಯಾವೊಬ್ಬ ವೈದ್ಯರೂ ಆಸ್ಪತ್ರೆ ಕಡೆ ತಲೆ ಹಾಕದಿರುವುದು ಇಲ್ಲಿಗೆ ಬರುವ ರೋಗಿಗಳಲ್ಲಿ ಆತಂಕ ಮೂಡಿಸಿದೆ. ರಾತ್ರಿ ಪಾಳೆಯಲ್ಲಿ ಕೇವಲ ವೈದ್ಯಕೀಯ ವಿದ್ಯಾರ್ಥಿಗಳಿಂದಲೇ ಆಸ್ಪತ್ರೆ ನಡೆಯುತ್ತಿರುವುದು ಹಲವಾರು ಯಡವಟ್ಟುಗಳಿಗೆ ಕಾರಣವಾಗಿದೆ.

  • ಉಡುಪಿ: ಹೆರಿಗೆಗೆ ಹೋದ ಉಪನ್ಯಾಸಕಿಯನ್ನ ಕೆಲಸದಿಂದ ವಜಾಗೊಳಿಸಿದ ಆಡಳಿತ ಮಂಡಳಿ

    ಉಡುಪಿ: ಹೆರಿಗೆಗೆ ಹೋದ ಉಪನ್ಯಾಸಕಿಯನ್ನ ಕೆಲಸದಿಂದ ವಜಾಗೊಳಿಸಿದ ಆಡಳಿತ ಮಂಡಳಿ

    – ಮಾನವೀಯತೆ ಮರೆತ ಕಾಲೇಜು ವಿರುದ್ಧ ದೂರು

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಭಂಡಾರ್‍ಕಾರ್ಸ್ ಕಾಲೇಜಿನ ಕನ್ನಡ ಉಪನ್ಯಾಸಕಿಯೊಬ್ಬರು ಹೆರಿಗೆಗೆ ಹೋದಾಗ ಕಾಲೇಜು ಆಡಳಿತ ಮಂಡಳಿ ಅವರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.

    ಡಾ.ಸೌಮ್ಯ ಕಾಲೇಜಿನಿಂದ ವಜಾಗೊಂಡ ಉಪನ್ಯಾಸಕಿ. 7 ತಿಂಗಳ ಗರ್ಭಿಣಿಯಾಗಿದ್ದ ಸೌಮ್ಯಾ ಅವರು ಜನವರಿ 30 ರಂದು ಕಾಲೇಜಿನಲ್ಲಿ ಕನ್ನಡ ಕ್ಲಾಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವಿಗೆ ಒಳಗಾದರು. ಕೂಡಲೇ ಸೌಮ್ಯಾ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯ್ತು. ಸೌಮ್ಯಾ ಅವರಿಗೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಲಾಯ್ತು.

    ಮಗುವಿಗೆ ಜನ್ಮ ನೀಡಿದ ನಂತರ ಸೌಮ್ಯ ಅವರು 15 ದಿನ ಆಸ್ಪತ್ರೆಯ ಐಸಿಯುನಲ್ಲೇ ಮಗುವಿನ ಜೊತೆ ಇರಬೇಕಾಯ್ತು. ಚಿಕಿತ್ಸೆ ಪಡೆದು ಸುಧಾರಿಸಿಕೊಂಡು ಮನೆಗೆ ಬಂದ ಕೂಡಲೇ ಸೌಮ್ಯಾ ಅವರಿಗೆ ಶಾಕ್ ಕಾದಿತ್ತು. ರಜೆಯ ಬಗ್ಗೆ ಲಿಖಿತ ಮಾಹಿತಿ ನೀಡದಿರುವುದರಿಂದ ನಿಮ್ಮನ್ನು ಸೇವೆಯಿಂದ ವಜಾ ಮಾಡಿದ್ದೇವೆ ಎಂದು ನಿಷ್ಕರುಣಿ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಡಿಸ್ಮಿಸ್ ನೋಟೀಸ್ ಕಳುಹಿಸಿದ್ದಾರೆ.

    ಮಂಗಳೂರು ವಿವಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿರುವ ಸೌಮ್ಯಾ, ಪಿಎಚ್‍ಡಿ ಕೂಡಾ ಮಾಡಿದ್ದಾರೆ. ಗರ್ಭಿಣಿಯರಿಗೆ 6 ತಿಂಗಳು ರಜೆ ನೀಡಬೇಕೆಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ರಾಜ್ಯದ ಎಲ್ಲಾ ವಲಯಗಳಲ್ಲಿ 3 ತಿಂಗಳು ಕಡ್ಡಾಯ ರಜೆಯಿದೆ. ಆದರೆ ಬಾಣಂತಿ ಆಸ್ಪತ್ರೆಯಲ್ಲಿರುವಾಗಲೇ ಸೇವೆಯಿಂದ ವಜಾಗೊಳಿಸಿದ ಪ್ರಾಂಶುಪಾಲ ನಾರಾಯಣ ಶೆಟ್ಟಿ ಮತ್ತು ಆಡಳಿತ ಮಂಡಳಿ ವಿರುದ್ಧ ಸೌಮ್ಯಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ದೌರ್ಜನ್ಯ ತಡೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಅಮಾನವೀಯವಾಗಿ ನಡೆದುಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

     

  • ಧಾರವಾಡ: ಸ್ಟೇರಿಂಗ್ ರಾಡ್ ಕಟ್ ಆಗಿ ಖಾಸಗಿ ಬಸ್ ಪಲ್ಟಿ – 9 ಮಂದಿಗೆ ಗಾಯ

    ಧಾರವಾಡ: ಸ್ಟೇರಿಂಗ್ ರಾಡ್ ಕಟ್ ಆಗಿ ಖಾಸಗಿ ಬಸ್ ಪಲ್ಟಿ – 9 ಮಂದಿಗೆ ಗಾಯ

    ಧಾರವಾಡ: ಬಸ್‍ನ ಸ್ಟೇರಿಂಗ್ ರಾಡ್ ತುಂಡಾಗಿ ಖಾಸಗಿ ಬಸ್ ಪಲ್ಟಿ ಹೊಡೆದ ಘಟನೆ ಧಾರವಾಡದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಹುಬ್ಬಳ್ಳಿ ನಗರದಿಂದ ಧಾರವಾಡ ನಗರಕ್ಕೆ ಬರುವ ವೇಳೆ ನಗರದ ಹೊರವಲಯದ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ಬಸ್‍ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿದಂತೆ 9 ಜನರು ಪ್ರಯಾಣಿಸುತ್ತಿದ್ದರು.

    ಬಸ್ ಪಲ್ಟಿಯಾದ ಪರಿಣಾಮ 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಗುರಪ್ಪ ಎಂಬವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.