Tag: treatment

  • ಆತ್ಮಹತ್ಯೆ ಮಾಡಲೆತ್ನಿಸಿದ ಅಂಗವಿಕಲನಿಗೆ ತಂದೆ-ತಾಯಿಗಾಗಿ ಬದುಕುವಾಸೆ..!

    ಆತ್ಮಹತ್ಯೆ ಮಾಡಲೆತ್ನಿಸಿದ ಅಂಗವಿಕಲನಿಗೆ ತಂದೆ-ತಾಯಿಗಾಗಿ ಬದುಕುವಾಸೆ..!

    ಗದಗ: ಎದ್ದು ನಿಲ್ಲಲಾಗದಂತಹ ಸ್ಥಿತಿ, ಕಿತ್ತು ತಿನ್ನುವ ಬಡತನ, ವಯಸ್ಸಾದ ತಂದೆ ತಾಯಿ. ಈ ಎಲ್ಲದರ ಮಧ್ಯೆ ನರರೋಗ ಹಾಗೂ ಸಂದು ನೋವು. ಹೌದು ನಾವು ಹೇಳಲು ಹೊರಟಿರುವುದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ವಾಸಿ 23 ವರ್ಷದ ಮೌನೇಶ್ ಎಂಬ ಅಸಹಾಯಕ ಯುವಕನ ಕಥೆ.

    ಸದಾ ಹುಮ್ಮಸ್ಸಿನಿಂದ ಕೆಲಸ ಮಾಡಿಕೊಳ್ಳುತ್ತಾ, ಹಿರಿಯರಿಗೆ ಗೌರವಿಸುತ್ತಾ, ಓದುತ್ತಾ. ತಂದೆ ತಾಯಿಯನ್ನು ಸಾಕುತ್ತಿದ್ದರು. ಇರುವ ಅಲ್ಪ ಜಮೀನಿನಲ್ಲಿ ಸಣ್ಣ ಬೆಳೆ ಬೆಳದು ಜೀವನ ನಡೆಸುತ್ತಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಆಟವಾಡುವ ವೇಳೆ ಬಿದ್ದು ತೊಡೆ ಭಾಗ ಪೆಟ್ಟಾಗಿತ್ತು. ಗಾಯಾಳುವಾಗಿದ್ದು ಮೌನೇಶ್‍ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ನರರೋಗ, ಸಂದು ನೋವು ಸಮಸ್ಯೆ ಇದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

    ಕಿತ್ತು ತಿನ್ನುವ ಬಡತನವಿದ್ದರೂ ಸ್ವಾಭಿಮಾನದಿಂದ ಬದುಕುತ್ತಿದ್ದ ಮೌನೇಶ್‍ನ ತಂದೆ ತಾಯಿ ಮಗನಿಗಾಗಿ ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮಗನ ಚಿಕಿತ್ಸೆಗಾಗಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಎಲ್ಲ ನಗರಗಳಲ್ಲೂ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಮಗನಲ್ಲಿ ಯಾವುದೇ ಚೇತರಿಕೆಯಾಗಿಲ್ಲ.

    ವಯಸ್ಸಾದ ತಂದೆ ತಾಯಿಗಳನ್ನು ನಾನು ನೋಡಿಕೊಳ್ಳಬೇಕಾಗಿತ್ತು. ಆದರೆ ನನ್ನನ್ನು ನೋಡಿಕೊಳ್ಳುವದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದಾರೆ ಎಂದು ಮೌನೇಶ್ ಕೊರಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಲು ಹಾಗೂ ತಂದೆ ತಾಯಿಗೆ ಹೊರೆ ಕಡಿಮೆ ಮಾಡಲು ಮೌನೇಶ್ ಆತ್ಮಹತ್ಯೆಗೆ ಯತ್ನಿಸಿದ್ದರು.

    ಛಲ ಬಿಡದ ತಂದೆ ತಾಯಿ ಮಗ ಮೌನೇಶ್‍ನನ್ನು ದೊಡ್ಡ ದೊಡ್ಡ ಆಸ್ಪತ್ರೆಗೆಲ್ಲಾ ತೋರಿಸಿದ್ದಾರೆ. ನೋಡಿದ ವೈದ್ಯರಲ್ಲಿ ಕೆಲವರು ಸಾಧ್ಯವಿಲ್ಲ ಎಂದರೆ ಇನ್ನು ಕೆಲವರು ತುಂಬಾ ಹಣ ಖರ್ಚಾಗುತ್ತದೆ ಎಂದು ಹೇಳುತ್ತಾರೆ. ಇದ್ದ ಹಣವನ್ನೆಲ್ಲ ಅಲ್ಲಿ ಇಲ್ಲಿ ಅಂತ ಬರೀ ಔಷಧಿಗೆ ಖರ್ಚಾಗಿದೆ.

    ನಿತ್ಯ ಕರ್ಮಕ್ಕೂ ಇನ್ನೊಬ್ಬರನ್ನ ಆಶ್ರಯಿಸಬೇಕಾದ ಅನಿವಾರ್ಯತೆ ಮೌನೇಶನದ್ದು ಜೊತೆಗೆ ವೃದ್ಧ ತಂದೆ-ತಾಯಿ. ಬಡತನ ಈ ಕುಟುಂಬದ ಅಸಹಾಯಕತೆಯನ್ನ ಮತ್ತಷ್ಟು ಹೆಚ್ಚಿಸಿದೆ. ಇನ್ನೂ ಮೌನೇಶನ ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕುಟುಂಬ ದಿಕ್ಕು ತೋಚದಂತಾಗಿ ಕುಳಿತಿದೆ.

    https://www.youtube.com/watch?v=hsSmHabjUhE

  • ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು

    ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಮಟ್ಟಿನ ಏರುಪೇರು ಕಂಡುಬಂದಿದ್ದು, ಆರೋಗ್ಯ ತಪಾಸಣೆಗಾಗಿ ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿದೆ. ಬುಧವಾರ ಸಂಜೆ ವೇಳೆಗೆ ಶ್ರೀಗಳಿಗೆ ಜ್ವರ ಹಾಗೂ ಕಫ ಕಾಣಿಸಿಕೊಂಡಿತ್ತು.

    ತಕ್ಷಣ ಸಿದ್ದಗಂಗಾ ಡಾಯಾಗ್ನಾಸ್ಟಿಕ್ ನಲ್ಲಿ ರಕ್ತ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಲಾಯಿತು. ರಕ್ತ ಪರೀಕ್ಷೆ ವರದಿ ಕೂಡಾ ನಾರ್ಮಲ್ ಆಗಿ ಬಂದಿದ್ದು, ಭಕ್ತಾಧಿಗಳು ಆತಂಕ ಪಡುವ ಅವಶ್ಯವಿಲ್ಲ ಎಂದು ಶ್ರೀಗಳ ತಪಾಸಣೆ ನಡೆಸಿದ ಸ್ಥಳೀಯ ವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ.

    ಎಂದಿನಂತೆ ಇಂದು ಬೆಳಗ್ಗೆ ಶ್ರೀಗಳು ಇಷ್ಠಲಿಂಗ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಕೆಲವೊಂದು ಪರೀಕ್ಷೆಗಳನ್ನು ನಡೆಸಲು ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿದೆ.

  • ಸಾಯೋ ಸ್ಥಿತಿಯಲ್ಲಿದ್ರೂ ಕಾರ್ಡ್ ಇಲ್ಲದಿದ್ರೆ ಚಿಕಿತ್ಸೆ ಸಿಗಲ್ಲ-ಇದು ಹಾಸನ ಜಿಲ್ಲಾಸ್ಪತ್ರೆಯ ಸ್ಥಿತಿ

    ಸಾಯೋ ಸ್ಥಿತಿಯಲ್ಲಿದ್ರೂ ಕಾರ್ಡ್ ಇಲ್ಲದಿದ್ರೆ ಚಿಕಿತ್ಸೆ ಸಿಗಲ್ಲ-ಇದು ಹಾಸನ ಜಿಲ್ಲಾಸ್ಪತ್ರೆಯ ಸ್ಥಿತಿ

    ಹಾಸನ: ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಹೊಂದಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಹಾಸನ ಜಿಲಾಸ್ಪತ್ರೆಯೂ ಒಂದಾಗಿದೆ. ಆದರೆ ರೋಗಿಗಳು ಚಿಕಿತ್ಸೆಗಾಗಿ ಬಂದ್ರೆ ಆಸ್ಪತ್ರೆಯಲ್ಲಿ ಇನ್ನಷ್ಟು ನರಳುವ ಪರಿಸ್ಥಿತಿಯಿದೆ.

    ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ರೋಗಿಯೂ ಚಿಕಿತ್ಸಾ ಕಾರ್ಡ್ ಪಡೆಯುವುದು ಕಡ್ಡಾಯ. ಆದ್ರೆ ಗಂಟೆಗಟ್ಟಲೆ ಕಾಯಿಸ್ತಾರೆ. ನಿತ್ರಾಣಗೊಳ್ಳುವಷ್ಟು ಸರದಿ ಸಾಲಲ್ಲಿ ನಿಲ್ಲಬೇಕು. ಬಡ ಹಾಗೂ ಮಧ್ಯಮ ವರ್ಗದವರು ಅದರಲ್ಲೂ ತೀವ್ರ ನಿತ್ರಾಣವಾಗಿರುವ ರೋಗಿಗಳಂತೂ ಚೀಟಿ ಕೈ ಸೇರೋವರೆಗೆ ನೆಲದಲ್ಲೇ ಮಲಗಿ ಕಣ್ಣೀರಿಡುತ್ತಿದ್ದಾರೆ.

    ವಯೋ ವೃದ್ಧರು ಗಂಟೆ ಗಟ್ಟಲೆ ಸಾಲಿನಲ್ಲಿ ನಿಲ್ಲಲಾಗದೇ ಸುಸ್ತುಪಡುವ ದೃಶ್ಯ ನೋಡಿದವರನ್ನು ಅಯ್ಯೋ ಎನ್ನಿಸುತ್ತದೆ. ರೋಗಿಗಳು ಒಬ್ಬೊಬ್ಬರೇ ಆಸ್ಪತ್ರೆಗೆ ಬಂದರೆ ಮುಗಿದು ಹೋಯ್ತು. ಎಷ್ಟೇ ನೋವಾದ್ರೂ, ಸುಸ್ತಾದರೂ ಕಾರ್ಡ್ ಪಡೀಲೇಬೇಕು. ಸಾಯೋ ಸ್ಥಿತಿಯಲ್ಲಿದ್ರೂ ನಿಮಗೆ ಕಾರ್ಡ್ ಇಲ್ದೆಯಿದ್ರೆ ಚಿಕಿತ್ಸೆ ಸಿಗುವುದಿಲ್ಲ.

    ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿಯವರನ್ನು ಈ ಬಗ್ಗೆ ಕೇಳಿದ್ರೆ ಸಿಸ್ಟಂ ಪ್ರಾಬ್ಲಂ ಇತ್ಯಾದಿ ಕಾರಣ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ಹೆಚ್ಚು ಕಡಿಮೆ ಆಗಿ ಸಾವು-ನೋವು ಸಂಭವಿಸಿದ್ರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಸಂಬಂಧಪಟ್ಟವರೇ ಉತ್ತರಿಸಬೇಕು.

     

  • ಚಿಕಿತ್ಸೆಯೂ ಇಲ್ಲ, ಆಂಬುಲೆನ್ಸ್ ಇಲ್ಲ- ಮಗುವಿನ ಶವವನ್ನ ಹೆಗಲ ಮೇಲೆ ಹೊತ್ತುಕೊಂಡೇ ನಡೆದ ತಂದೆ

    ಚಿಕಿತ್ಸೆಯೂ ಇಲ್ಲ, ಆಂಬುಲೆನ್ಸ್ ಇಲ್ಲ- ಮಗುವಿನ ಶವವನ್ನ ಹೆಗಲ ಮೇಲೆ ಹೊತ್ತುಕೊಂಡೇ ನಡೆದ ತಂದೆ

    ಜೈಪುರ: ಸೂಕ್ತ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಯದ ಕಾರಣ ಮಗುವೊಂದು ಸಾವನ್ನಪ್ಪಿದ್ದು, ಮಗುವಿನ ಶವವನ್ನು ಸಾಗಿಸಲು ಆಂಬುಲೆನ್ಸ್ ನೀಡದ ಕಾರಣ ಪೋಷಕರು ಮಗುವಿನ ಶವವನ್ನು ಸುಮಾರು 6 ಕಿಮೀ ವರೆಗೆ ಹೆಗಲ ಮೇಲೆ ಹೊತ್ತಿಕೊಂಡು ನಡೆದಿದ್ದಾರೆ.

    ಹೌದು, ರಾಜಸ್ಥಾನ ರಾಜ್ಯದ ಬಾರಾ ಜಿಲ್ಲೆಯ ಶಾಹಬಾದ್ ಹೋಬಳಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಶಾಹಬಾದ್ ಹೋಬಳಿಯ ವ್ಯಾಪ್ತಿಯಲ್ಲಿ ಬುಡಕಟ್ಟು ಜನಾಂಗ ವಾಸವಾಗಿದೆ. ಈ ಬುಡಕಟ್ಟು ಜನಾಂಗದ ಕೌಂಸಾ ಬಾಯಿ ಎಂಬವರ ಮೊಮ್ಮಗ ರವಿವಾರ ತೀವ್ರ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದನು. ಸೋಮವಾರ ಬೆಳಗ್ಗೆ ಮಗುವಿನ ತಂದೆ ಹಾಗು ತಾಯಿ ಮಗುವನ್ನು ಚಿಕಿತ್ಸೆಗಾಗಿ ಶಾಹಬಾದ್ ಆಸ್ಪತ್ರೆಗೆ ತೆರಳಿದ್ದಾರೆ. ಇವರುಗಳು ಹೋದಾಗ ಆಸ್ಪತ್ರೆಯಲ್ಲಿ ಸಿಬ್ಬಂದಿಯೇ ಇರಲಿಲ್ಲ.

    ಕೊನೆಗೆ ಪೋಷಕರು ವೈದ್ಯರ ವಸತಿ ನಿಲಯಕ್ಕೆ ಹೋಗಿ ಮಗುವಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ರೋಗಿಗಳ ಕಷ್ಟಕ್ಕೆ ಸ್ಪಂದಿಸದೇ ಡಾಕ್ಟರ್ ಸಂಜೆ 5 ಗಂಟೆಗೆ ಬರುವಂತೆ ತಿಳಿಸಿದ್ದಾರೆ. ಕೊನೆಗೇ ಬಾರಾ ಜಲ್ಲಾಸ್ಪತ್ರೆಗೆ ತೆರಳುವಂತೆ ಉಚಿತ ಸಲಹೆಯನ್ನ ನೀಡಿದ್ದಾರೆ. ವೈದ್ಯರು ಶಿಫಾರಸ್ಸು ಪತ್ರ ನೀಡುವ ಸಮುದಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆಯನ್ನು ಸಹ ನೀಡಲಿಲ್ಲ. ಕೊನೆಗೆ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಲಿಲ್ಲ ಎಂದು ಮಗುವಿನ ಅಜ್ಜಿ ಕೌಂಸಾ ಬಾಯಿ ಹೇಳಿದ್ದಾರೆ.

    ಕೊನೆಗೆ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲು ಹಣ ಹೊಂದಾಯಿಸಲು ನಾವು ಮನೆಗೆ ತೆರಳುವ ಮಾರ್ಗ ಮಧ್ಯೆಯೇ ಮಗು ಸಾವನ್ನಪ್ಪಿದೆ. ಕೊನೆಗೆ ತಂದೆ ತನ್ನ ಮಗುವನ್ನು ಸುಮಾರು 6 ಕಿಮೀ ವರೆಗೆ ಹೊತ್ತುಕೊಂಡು ನಡೆದಿದ್ದಾರೆ. ಅದೇ ಮಾರ್ಗವಾಗಿ ಹೊರಟಿದ್ದ ಕಾರ ಚಾಲಕರೊಬ್ಬರು ಅವರನ್ನು ಮನೆಯವರೆಗೂ ತಲುಪಿಸಿದ್ದಾರೆ.

    ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ, ಶಾಹಬಾದ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಅಟಲರಾಜ್ ಮೆಹ್ತಾ, ಮಗುವಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿತ್ತು ಮತ್ತು ಹೆಚ್ಚಿನ ಚಿಕಿತ್ಸೆಗೆ ಬಾರಾ ಜಿಲ್ಲಾಸ್ಪತ್ರೆಗೆ ತೆರಳುವಂತೆ ಶಿಫಾರಸ್ಸು ಮಾಡಲಾಗಿತ್ತು. ಪೋಷಕರು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸದೇ ಹೊರ ಹೋಗಿದ್ದಾರೆ. ಮಗು ಸಾವನ್ನಪ್ಪಿರುವ ಮಾಹಿತಿ ನನಗಿಲ್ಲ ಎಂದು ತಿಳಿಸಿದ್ದಾರೆ.

     

  • ಕೇವಲ 7 ನಿಮಿಷಗಳಲ್ಲಿ ಏರ್ ಆಂಬುಲೆನ್ಸ್ ಮೂಲಕ ನಾರಾಯಣ ಹೃದಯಾಲಯಕ್ಕೆ 2 ತಿಂಗಳ ಮಗು ರವಾನೆ

    ಕೇವಲ 7 ನಿಮಿಷಗಳಲ್ಲಿ ಏರ್ ಆಂಬುಲೆನ್ಸ್ ಮೂಲಕ ನಾರಾಯಣ ಹೃದಯಾಲಯಕ್ಕೆ 2 ತಿಂಗಳ ಮಗು ರವಾನೆ

    ಬೆಂಗಳೂರು: ಎರಡು ತಿಂಗಳ ಮಗುವನ್ನು ಏರ್ ಆಂಬುಲೆನ್ಸ್ ಮುಖಾಂತರ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.

    ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಿಂದ ಹೊಸೂರು ರಸ್ತೆಯ ನಾರಾಯಣ ಹೆಲ್ತ್ ಸಿಟಿಗೆ ಕೇವಲ 7  ನಿಮಿಷಗಳಲ್ಲಿ ಮಗುವನ್ನ ಸ್ಥಳಾಂತರಿಸಲಾಯಿತು. ಎರಡು ತಿಂಗಳ ಮಗುವು ಶ್ವಾಸಕೋಶ ತೊಂದರೆ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು 2 ದಿನಗಳಿಂದ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ತ್ವರಿತ ಮತ್ತು ಹೆಚ್ಚಿನ ಚಿಕಿತ್ಸೆಗೆಗಾಗಿ ಮಗುವನ್ನು ನಾರಾಯಣ ಹೆಲ್ತ್ ಸಿಟಿಗೆ ಸ್ಥಳಾಂತರಿಸಬೇಕಾಗಿತ್ತು.

    ಬೆಂಗಳೂರಿನ ಟ್ರಾಫಿಕ್ ಜಂಜಾಟದಲ್ಲಿ ಮಗುವನ್ನು ಅಷ್ಟು ಬೇಗ ಆಸ್ಪತ್ರೆಗೆ ಸಾಗಿಸುವುದು ಕಷ್ಟವೇ ಆಗಿತ್ತು. ಆಗ ಮಗುವಿನ ಪೋಷಕರು ಏರ್ ಆಂಬುಲೆನ್ಸ್ ಸಹಾಯ ಪಡೆದು ಕೇವಲ 7 ನಿಮಿಷಗಳಲ್ಲಿ ಮಗುವನ್ನು ರವಾನಿಸಿದ್ದಾರೆ. ಮಗುವನ್ನು ದಾಖಲಿಸಿಕೊಂಡಿರುವ ನಾರಾಯಣ ಹೆಲ್ತ್ ಸಿಟಿ ವೈದ್ಯರು ಮಗುವಿಗೆ ಚಿಕಿತ್ಸೆಗೆ ಆರಂಭಿಸಿದ್ದು, ಮಗು ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಶೀಘ್ರವೇ ಮಗುವನ್ನು ಗುಣಮುಖವಾಗಿಸುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ.

  • 24 ಕೆಜಿ ತೂಕದ ಒಂದು ವರ್ಷದ ಮಗು-ಪೋಷಕರಿಗೆ ಕಂದಮ್ಮನದೇ ಚಿಂತೆ

    24 ಕೆಜಿ ತೂಕದ ಒಂದು ವರ್ಷದ ಮಗು-ಪೋಷಕರಿಗೆ ಕಂದಮ್ಮನದೇ ಚಿಂತೆ

    ಹಾಸನ: ಜನನ ಸಂದರ್ಭದಲ್ಲಿ ಅತ್ಯಂತ ತೂಕ ಹೊಂದಿರುವ ಮಗು ಹೆಗ್ಗಳಿಕೆ ಹೊಂದಿದ್ದ ಮಗು ಇಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಬಂದಿದೆ. ಸದ್ಯ ಒಂದು ವರ್ಷ ಎರಡು ತಿಂಗಳು ತುಂಬಿರುವ ಮಗು ಬರೋಬ್ಬರಿ 24 ಕೆಜಿ ತೂಕವನ್ನು ಹೊಂದಿದೆ. ಆದ್ರೆ ಪೋಷಕರಿಗೆ ಮಾತ್ರ ಮಗುವಿನ ಅಸಹಜ ತೂಕ ಗಾಬರಿ ತರಿಸಿದೆ.

    ಮೂಲತಃ ಹಾಸನ ಜಿಲ್ಲೆಯ ಅರುಣ್ ಕುಮಾರ್ ಮತ್ತು ನಂದಿನಿ ದಂಪತಿಯ ಮುದ್ದಾದ ಮಗು ಸುಖಿ. ಅಹಜ ತೂಕದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಜನನವಾದ ಸಂದರ್ಭದಲ್ಲಿಯೇ ಸುಖಿ ತೂಕ 7.25 ಕೆಜಿ ತೂಕವಿತ್ತು. ಮಗುವಿಗೆ ಈಗ ಒಂದು ವರ್ಷ ತುಂಬಿದೆ. ಈಗಾಗಲೇ ಸುಖಿ ತೂಕ 24 ಕೆಜಿ ಆಗಿದೆ.

    ಸಹಜ ಮಕ್ಕಳಂತೆಯೇ ಆಹಾರ ತಿನ್ನುವ ಸುಖಿ ಆರೋಗ್ಯವಾಗಿದ್ದಾಳೆ. ಮಗುವನ್ನು ಪ್ರೀತಿಯಿಂದ ಸಾಕುತ್ತಿರುವ ಅರುಣ್ ದಂಪತಿಗೆ ಈಗ ಈ ತೂಕದ ಕುರಿತು ಒಂದು ಚಿಂತೆಯಾಗಿದೆ. ಅಸಹಜ ತೂಕಕ್ಕೆ ಕಾರಣ ಏನೂ ಅಂತಲೂ ತಿಳಿದಿಲ್ಲ. ಆದ್ರೆ ಮುಂದೇನು ಎನ್ನುವ ಸಹಜವಾದ ಸಂದೇಹ ಪೋಷಕರಲ್ಲಿ ಮನೆ ಮಾಡಿದೆ.

    ಎಲ್ಲಾ ಅಪ್ಪಾ ಅಮ್ಮಂದಿರಂತೆ ಅರುಣ್ ಮತ್ತು ನಂದಿನಿ ಮಗುವನ್ನು ಮುದ್ದುಮುದ್ದಾಗಿ ಸಾಕುತಿದ್ದಾರೆ. ಆದ್ರೆ ಅಸಹಜ ತೂಕ ಮುಂದಕ್ಕೇನಾದ್ರು ತೊಂದರೆ ಆಗಬಹುದಾ ಎನ್ನುವ ಸಣ್ಣ ಸಂಶಯವಿದೆ. ಹಾಸನ ಮೂಲದ ಅರುಣ್ ದಂಪತಿ ಈಗ ವಾಸ ಇರೋದು ಬಳ್ಳಾರಿಯಲ್ಲಿ ತಮ್ಮ ಚಿಕ್ಕಪ್ಪನ ಬೇಕರಿಯಲ್ಲಿ ಕೆಲಸ ಮಾಡುವ ಅರುಣ್ ಸದ್ಯ ತಮ್ಮ ಸಂಸಾರ ಸಾಗಿಸಲು ಆಗುವಷ್ಟು ದುಡಿಯುತ್ತಿದ್ದಾರೆ.

    https://www.youtube.com/watch?v=wS-RjE18O1Q

    ತಮ್ಮ ಮಗುವಿನ ಈ ಅಸಹಜ ತೂಕಕ್ಕೆ ಏನಾದ್ರು ಚಿಕಿತ್ಸೆಯ ಅಗತ್ಯ ಇದಿಯಾ, ಎನೂ ತೊಂದ್ರೆ ಆಗೋಲ್ವ ಅಥವಾ ಮುಂದೆ ಸರಿಯಾಗಬಹುದಾ? ಎನ್ನುವ ಕುರಿತು ಸಹಜ ಪ್ರಶ್ನೆಗಳು ಅವರನ್ನು ಕಾಡುತ್ತಿವೆ. ಮಗುವಿಗೆ ಚಿಕಿತ್ಸೆ ಮಾಡಿಸಲೇಬೇಕಾದ್ರೆ ನಮಗೆ ಯಾರಾದ್ರೂ ಉಚಿತವಾಗಿ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಮುಗ್ಧತೆಯಿಂದ ಕೇಳಿಕೊಂಡಿದ್ದು, ದಂಪತಿಗೆ ಸಹಾನೂಭೂತಿಯ ಅವಶ್ಯಕತೆ ಇದೆ.

     

     

  • ನಲಿಯುತ್ತಾ ಆಡಬೇಕಿದ್ದ ಕಂದನಿಗೆ ಬ್ಲಡ್ ಕ್ಯಾನ್ಸರ್- ಚಿಕಿತ್ಸೆಗೆ ಬೇಕಿದೆ ಸಹಾಯ

    ನಲಿಯುತ್ತಾ ಆಡಬೇಕಿದ್ದ ಕಂದನಿಗೆ ಬ್ಲಡ್ ಕ್ಯಾನ್ಸರ್- ಚಿಕಿತ್ಸೆಗೆ ಬೇಕಿದೆ ಸಹಾಯ

    ವಿಜಯಪುರ: ಎಲ್ಲ ಮಕ್ಕಳಂತೆ ಕಲಿಯುತ್ತಾ, ನಲಿಯುತ್ತಾ ಆಡಬೇಕಿದ್ದ ಮಗನಿಗೆ ಬ್ಲಡ್ ಕ್ಯಾನ್ಸರ್ ರೋಗ ಬಂದು ಮನೆಯಲ್ಲಿ ಕೂರುವಂತೆ ಮಾಡಿದೆ. ಇರುವ ಓರ್ವ ಮಗನನ್ನು ಬದುಕಿಸಿಕೊಳ್ಳಲು ಬಡ ಪೋಷಕರು ಶಕ್ತಿಮೀರಿ ಪ್ರಯತ್ನ ಮಾಡ್ತಾಯಿದ್ದಾರೆ.

    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಡಕೋಳ ಗ್ರಾಮದ ಮೀನಪ್ಪ ಮಾದರ ಮತ್ತು ಲಗಮವ್ವ ಎಂಬವರ ಮಗ ಮಡಿವಾಳಪ್ಪ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾನೆ. ಮೂರನೇ ತರಗತಿ ವರೆಗೂ ಚೆನ್ನಾಗಿಯೇ ಇದ್ದ ಮಡಿವಾಳಪ್ಪ ಏಕಾಏಕಿ ಒಂದು ದಿನ ಅಸ್ವಸ್ಥನಾಗಿದ್ದಾನೆ. ಆಗ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಬೆಂಗಳೂರು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಮಡಿವಾಳಪ್ಪನನ್ನು ಪರೀಕ್ಷಿಸಿದಾಗ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದಿದೆ.

    ನಾಲ್ಕು ತಿಂಗಳು ಚಿಕಿತ್ಸೆ ನೀಡಿದರೆ ಮಡಿವಾಳಪ್ಪ ಆರೋಗ್ಯ ಸರಿ ಹೋಗುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಸಿಗದ ಕೆಲ ಔಷಧಿಗಳನ್ನು ಹೊರಗಡೆಯಿಂದ ತರಬೇಕಾಗುತ್ತದೆ. ಆದ್ರೆ ತೀವ್ರ ಬಡ ಕುಟುಂಬವಾದ ಕಾರಣ ಇವರ ಹತ್ತಿರ ಹೊರಗಿನಿಂದ ಔಷದಿಯನ್ನು ತರಲು ಆಗುತ್ತಿಲ್ಲ. ಈಗ ಅಲ್ಲಿ ಇಲ್ಲಿ ಸಾಲ ಮಾಡಿ ಒಂದು ತಿಂಗಳು ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

    ಯಾರಾದರು ಸಹಾಯ ಮಾಡಿದ್ದಲ್ಲಿ ಒಂದು ಸಣ್ಣ ಜೀವ ಬದುಕಿಕೊಳ್ಳುತ್ತದೆ. ಈಗ ಸಹಾಯ ಹಸ್ತಕ್ಕಾಗಿ ಮಡಿವಾಳಪ್ಪ ಮತ್ತು ಕುಟುಂಬಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    https://www.youtube.com/watch?v=91rZJHXOods

  • ಅಂಬುಲೆನ್ಸ್ ನೀಡದ್ದಕ್ಕೆ ಮಗುವಿನ ಶವ ಹೊತ್ತು ಸೈಕಲ್‍ನಲ್ಲೇ ಪ್ರಯಾಣ

    ಅಂಬುಲೆನ್ಸ್ ನೀಡದ್ದಕ್ಕೆ ಮಗುವಿನ ಶವ ಹೊತ್ತು ಸೈಕಲ್‍ನಲ್ಲೇ ಪ್ರಯಾಣ

    ಲಕ್ನೋ: ಆಸ್ಪತ್ರೆಯವರು ಅಂಬುಲೆನ್ಸ್ ನೀಡದ ಕಾರಣ ಸಹೋದರನ 7 ತಿಂಗಳ ಮಗುವಿನ ಮೃತದೇಹವನ್ನ ಹೆಗಲ ಮೇಲೆ ಹಾಕಿಕೊಂಡು ಚಿಕ್ಕಪ್ಪ ಸೈಕಲ್ ತುಳಿದುಕೊಂಡು ಹೋದ ದಾರುಣ ಘಟನೆ ಉತ್ತರಪ್ರದೇಶದ ಕೌಸಂಬಿಯಲ್ಲಿ ನಡೆದಿದೆ.

    ಜಿಲ್ಲಾಸ್ಪತ್ರೆಯಲ್ಲಿ ಮಗು ದಾಖಲಿಸಿದ ಅಪ್ಪ, ಹಣ ಹೊಂದಿಸಲು ಅಲಹಾಬಾದ್‍ಗೆ ಹೋಗಿದ್ದರು. ಈ ವೇಳೆ ಮಗು ಮೃತಪಟ್ಟಿದ್ದು ಚಿಕ್ಕಪ್ಪ ಬ್ರಿಜ್‍ಮೋಹನ್ ಆಸ್ಪತ್ರೆಯಲ್ಲಿದ್ದರು. ಶವ ಸಾಗಿಸಲು ಅಂಬುಲೆನ್ಸ್ ಡ್ರೈವರ್‍ಗೆ ಹಲವು ಬಾರಿ ಕೇಳಿದ್ರೂ ಆತ ಬರೋಕೆ ನಿರಾಕರಿಸಿದ್ದಕ್ಕೆ ಸೈಕಲ್‍ನಲ್ಲೇ ಶವ ಸಾಗಿಸಿದ್ದಾರೆ.

    ಘಟನೆ ಬಗ್ಗೆ ಡ್ಯೂಟಿ ಡಾಕ್ಟರ್ ಹಾಗೂ ಅಂಬುಲೆನ್ಸ್ ಡ್ರೈವರ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಸೋದಾಗಿ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

    ಅಂಬುಲೆನ್ಸ್ ನಿಡದೇ ಇರೋ ಕಾರಣಕ್ಕೆ ಇಂಥ ಘಟನೆಗಳು ದೇಶದಲ್ಲಿ ಈ ಹಿಂದೆಯೂ ನಡೆದಿತ್ತು. ಒಡಿಶಾದ ಮಾಂಝಿ ತನ್ನ ಪತ್ನಿಯ ಶವ ಹೊತ್ತು 10 ಕಿ.ಮೀಟರ್ ನಡೆದಿದ್ದರೆ, ಅಸ್ಸಾಂನ ಸಿಎಂ ಕ್ಷೇತ್ರದಲ್ಲೇ ಶವವನ್ನ ಸೈಕಲ್‍ನಲ್ಲಿ ಸಾಗಿಸಲಾಗಿತ್ತು. ಕೆಲ ದಿನಗಳ ಹಿಂದೆ ಬಿಹಾರದಲ್ಲೂ ಮೃತ ಪತ್ನಿ ಶವವನ್ನ ಗಂಡ ಬೈಕ್‍ನಲ್ಲಿ ಸಾಗಿಸಿದ್ದ.

     

    https://youtu.be/O4XoCO_SpmI