Tag: treatment

  • ತಂದೆಯ ಆರೋಗ್ಯದ ಬಗ್ಗೆ ಮಗಳು ಚೇತನಾ ಬೆಳಗೆರೆ ಹೇಳಿದ್ದು ಹೀಗೆ

    ತಂದೆಯ ಆರೋಗ್ಯದ ಬಗ್ಗೆ ಮಗಳು ಚೇತನಾ ಬೆಳಗೆರೆ ಹೇಳಿದ್ದು ಹೀಗೆ

    ಬೆಂಗಳೂರು: ತಂದೆ ರವಿಬೆಳಗೆರೆ ಅವರಿಗೆ ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೊದಲ ಹಂತದ ಆರೋಗ್ಯ ಪರೀಕ್ಷೆ ನಡೆದಿರುವುದಿರಂದ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ ಎಂಬುದಾಗಿ ಚೇತನಾ ಬೆಳಗೆರೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂಬ ಪ್ರಕರಣದ ಕುರಿತು ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಧೀಶ ಜಗದೀಶ್ ಅವರು ರವಿಬೆಳಗೆರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲು ಆದೇಶ ನೀಡಿದ್ದಾರೆ. ಅಲ್ಲದೇ ಜೈಲಿನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂಬುದಾಗಿ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.

    ನಮ್ಮ ತಂದೆ ಆನಾರೋಗ್ಯ ಸಮಸ್ಯೆಯಿಂದ ಬಳಸುತ್ತಿದ್ದು, ಈಗಾಗಲೇ ಈ ಕುರಿತು ಚಿಕಿತ್ಸೆಯ ದಾಖಲೆಗಳನ್ನು ಕೋರ್ಟ್‍ಗೆ ಸಲ್ಲಿಸಲಾಗಿದೆ. ನ್ಯಾಯಾಲಯದ ಮೂಲಕವೇ ಈ ದಾಖಲೆಗಳನ್ನು ಸರ್ಕಾರಿ ವೈದ್ಯರಿಗೆ ಸಲ್ಲಿಸಲಾಗುತ್ತದೆ. ವೈದ್ಯರು ಸಲ್ಲಿಸುವ ವರದಿಯ ಆಧಾರ ಮೇಲೆ ನಮ್ಮ ಫ್ಯಾಮಿಲಿ ಡಾಕ್ಟರ್ ಅವರ ಮೂಲಕ ಚಿಕಿತ್ಸೆ ನೀಡಬೇಕೇ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕೇ ಎಂಬುದನ್ನು ಕಾನೂನು ನಿಯಮಗಳ ಆಧಾರ ಮೇಲೆ ನಿರ್ಧರಿಸಲಾಗುತ್ತದೆ ಎಂದರು.

    ಅನಾರೋಗ್ಯ ಸಮಸ್ಯೆ ಇರುವ ಕಾರಣ ನಮ್ಮ ತಂದೆಗೆ ಸೂಕ್ತ ಚಿಕಿತ್ಸೆ ನೀಡಲು ಮಾತ್ರ ನಾವು ಮನವಿ ಮಾಡಿದ್ವಿ. ಆದರೆ ಕೋರ್ಟ್ ಜಾಮೀನು ನೀಡುವುದು, ಬಿಡುವುದು ನಿರ್ಧರಿಸುತ್ತದೆ. ಆದರೆ ನಾವು ನಮ್ಮ ತಂದೆಯ ಆರೋಗ್ಯದ ಕುರಿತು ಚಿಂತೆಗೆ ಒಳಗಾಗಿದ್ದು, ಅವರಿಗೆ ನಿಲ್ಲಲು, ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕೋರ್ಟ್ ಮೆಡಿಕಲ್ ಚಿಕಿತ್ಸೆ ನೀಡಲು ಸಮ್ಮತಿ ನೀಡಿರುವುದಕ್ಕೆ ನಮಗೆ ಸಮಾಧಾನ ನೀಡಿದೆ ಎಂದು ತಿಳಿಸಿದರು.

    ರವಿಬೆಳಗೆರೆ ಅವರ ಕಾಲಿಗೆ ಗಾಯವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಭಾನುವಾರ ಅವರನ್ನು ವಿಲ್ ಚೇರ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಗಾಯವಾಗಿದೆ. ಅವರಿಗೆ ಈಗಾಗಲೇ ಸಕ್ಕರೆ ಕಾಯಿಲೆ ಇರುವುದರಿಂದ ಅದು ಗ್ಯಾಂಗ್ರಿನ್ ಆಗಿ ತಿರುಗುವ ಸಾಧ್ಯತೆಗಳಿವೆ. ಆದ್ದರಿಂದ ಅವರನ್ನು ಹೆಚ್ಚು ಜಾಗ್ರತೆಯಿಂದ ನೋಡಿಕೊಳ್ಳಬೇಕಿದೆ. ಕೋರ್ಟ್ ಗೆ ತೆರಳುವ ವೇಳೆಯೂ ಅವರನ್ನು ನಡೆಸಿಕೊಂಡು ಹೋಗಲಾಗಿದೆ. ಇದರಿಂದ ಅವರ ದೇಹಕ್ಕೆ ಹೆಚ್ಚು ಬಳಲಿಕೆಯಾಗಿದ್ದು, ವಿಶ್ರಾಂತಿಯ ಅಗತ್ಯವಿದೆ ಎಂದರು.

    ಜಾಮೀನು ಅರ್ಜಿ ಸಲ್ಲಿಸುವ ಕುರಿತು ನಮ್ಮ ವಕೀಲರು ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದು, ಯಾವಾಗ ಸಲ್ಲಿಸುತ್ತಾರೆ ಎಂಬುವುದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.

    https://www.youtube.com/watch?v=0wDpeO8ZHxk

    https://www.youtube.com/watch?v=-Eeqo83EKnM

     

     

     

     

     

     

     

     

  • ಮನೆಯಲ್ಲಿಯ ದೀಪ ಬಿದ್ದು ಸುಟ್ಟಹೋಯ್ತು ಬಾಲಕಿಯ ಕಾಲು-ಚಿಕಿತ್ಸೆಗೆ ಬೇಕಿದೆ ಸಹಾಯ

    ಮನೆಯಲ್ಲಿಯ ದೀಪ ಬಿದ್ದು ಸುಟ್ಟಹೋಯ್ತು ಬಾಲಕಿಯ ಕಾಲು-ಚಿಕಿತ್ಸೆಗೆ ಬೇಕಿದೆ ಸಹಾಯ

    ಕಲಬುರಗಿ: ಜಿಲ್ಲೆಯ ತಾಲೂಕಿನ ನ ಸಾವಳಗಿ ಗ್ರಾಮದ ಮಲ್ಲಿಕಾರ್ಜುನ ಮತ್ತು ಶಶಿಕಲಾ ಎಂಬ ಬಡದಂಪತಿ ಮಗಳು ಲಕ್ಷ್ಮೀ ಒಂದೇ ಕಾಲಿನ ಆಸರೆಯಲ್ಲಿ ನಡೆಯುತ್ತಿದ್ದಾಳೆ. ಈ ಬಾಲಕಿ 6 ವರ್ಷದವಳಿದ್ದಾಗ ಮನೆಯಲ್ಲಿನ ಚಿಮುಣಿ(ಕ್ಯಾಂಡಲ್) ಕಾಲಿನ ಮೇಲೆ ಬಿದ್ದು ಕಾಲು ಸಂಪೂರ್ಣ ಸುಟ್ಟಿದೆ. ನಂತರ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆಗ ಲಕ್ಷ್ಮೀ ಕಾಲಿನ ಆಪರೇಷನ್‍ಗೆ ಒಂದೂವರೆ ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚ ಆಗುವದ್ದಾಗಿ ವೈದ್ಯರು ತಿಳಿಸಿದ್ದಾರೆ.

    ಆದರೆ ಕೂಲಿ ಮಾಡಿ ಬದುಕುವ ಈ ಕುಟುಂಬಕ್ಕೆ ಯಾರು ಸಹ ನಯಾ ಪೈಸೆ ಸಹಾಯ ಮಾಡಿಲ್ಲ. ಹೀಗಾಗಿ ಈ ಬಾಲಕಿ ಅಂದಿನಿಂದ ಇಂದಿನವರೆಗೆ ಅಂದ್ರೆ 6 ವರ್ಷದಿಂದ ಒಂದೆ ಕಾಲಿನ ಮೇಲೆ ತನ್ನ ಜೀವನ ಕಳೆಯುತ್ತಿದ್ದಾಳೆ. ಇನ್ನು ಲಕ್ಷ್ಮಿಯ ಚಿಕಿತ್ಸೆಯ ಚಿಂತೆ ಮಾಡುತ್ತ ತಂದೆ ಮಲ್ಲಿನಾಥ್ 2 ವರ್ಷದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಸದ್ಯ ಲಕ್ಷ್ಮಿಯ ತಾಯಿ ತಮ್ಮ ಮೂರು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದಾರೆ.

    ಲಕ್ಷ್ಮಿಯ ಕಾಲಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ರೆ, ಸ್ವಲ್ಪ ಪ್ರಮಾಣದಲ್ಲಿ ಗುಣವಾಗಬಹುದು ನಂತರದ ದಿನಗಳಲ್ಲಿ ಲಕ್ಷ್ಮಿ ತನ್ನ ಕಾಲಿನ ಮೇಲೆ ನಿಲ್ಲಬಹುದು ಅಂತಾ ಬಸವೇಶ್ವರ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆದ್ರೆ ಈ ಆಪರೇಷನ್ ಮಾಡಿಸಲು ಕನಿಷ್ಟ ಅಂದ್ರು ಒಂದುವರೆಯಿಂದ-ಎರಡು ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಹೀಗಾಗಿ ಯಾರಾದರೂ ದಾನಿಗಳು ಚಿಕಿತ್ಸಾ ವೆಚ್ಚ ಭರಿಸಿದರೆ ಲಕ್ಷ್ಮಿ ಸಹ ತನ್ನ ಕಾಲಿನ ಮೇಲೆ ತಾನು ಇಲ್ಲಬಹುದು. ಯಾರಾದರೂ ದಾನಿಗಳು ಮುಂದೆ ಬಂದು ಲಕ್ಷ್ಮಿಯ ಚಿಕಿತ್ಸಾ ವೆಚ್ಚ ಭರಿಸಿದ್ರೆ ಈ ಬಾಲಕಿ ಸಹ ಇತರೆ ಮಕ್ಕಳಂತೆ ಜೀವಿಸುತ್ತಾಳೆ.

    https://www.youtube.com/watch?v=wvNc5K2BzGc

  • ಮದ್ವೆಯಾಗಿ 6 ವರ್ಷದ ನಂತ್ರ ಜನಿಸಿದ ಹಸುಗೂಸು ವೈದ್ಯರ ಮುಷ್ಕರಕ್ಕೆ ಬಲಿ

    ಮದ್ವೆಯಾಗಿ 6 ವರ್ಷದ ನಂತ್ರ ಜನಿಸಿದ ಹಸುಗೂಸು ವೈದ್ಯರ ಮುಷ್ಕರಕ್ಕೆ ಬಲಿ

    ಕೋಲಾರ: ಖಾಸಗಿ ವೈದ್ಯರ ಮುಷ್ಕರಕ್ಕೆ 4 ತಿಂಗಳ ಹಾಲುಗಲ್ಲದ ಹಸುಗೂಸು ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

    ಹಿರೇಕಟ್ಟಿಗೇನಹಳ್ಳಿಯ ಶ್ವೇತಾ ಹಾಗೂ ಮುನಿಕೃಷ್ಣ ದಂಪತಿಯ 4 ತಿಂಗಳ ಗಂಡು ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದೆ. ಅಂದಹಾಗೆ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಮಗುವಿನ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ.

    ಚಿಂತಾಮಣಿ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಮುಷ್ಕರದ ಹಿನ್ನೆಲೆಯಲ್ಲಿ ಅಲ್ಲಿ ಚಿಕಿತ್ಸೆ ಸಿಕ್ಕಿಲ್ಲ. ಕೊನೆಗೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಹೋದರೂ ಅಲ್ಲೂ ಕೂಡ ಚಿಕಿತ್ಸೆ ದೊರೆತಿಲ್ಲ. ಇನ್ನೇನು ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಆಂಬುಲೆನ್ಸ್ ನಲ್ಲೇ ಮಗು ಪ್ರಾಣ ಬಿಟ್ಟಿದೆ.

    ಶ್ವೇತಾ-ಮುನಿಕೃಷ್ಣ ದಂಪತಿಗೆ ಮದುವೆಯಾದ 6 ವರ್ಷಗಳ ನಂತರ ಈ ಮುದ್ದಾದ ಮಗು ಜನಿಸಿತ್ತು.

  • ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

    ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

    ಬೆಂಗಳೂರು: ಮಂಗಳವಾರ ಮಕ್ಕಳ ದಿನಾಚರಣೆ ಒಂದು ಕಡೆಯಾದರೆ ಮತ್ತೊಂದು ಕಡೆ, ವೈದ್ಯರು ಮತ್ತು ಸರ್ಕಾರ ನಡುವಿನ ಹೋರಾಟ ಮಕ್ಕಳ ಜೀವವನ್ನೇ ಪರೋಕ್ಷವಾಗಿ ಬಲಿ ಪಡೆದಿದೆ.

    ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ಜಟಾಪಟಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಎನ್ನುವುದು ದುರದೃಷ್ಟಕರ ಸಂಗತಿ. ಮಸೂದೆ ಮಂಡಿಸಿಯೇ ಸಿದ್ಧ ಎಂದು ಸರ್ಕಾರ ಬಿಗಿಪಟ್ಟು ಹಿಡಿದಿದ್ದರೆ, ಮಸೂದೆ ವಿರೋಧಿಸಿ ವೈದ್ಯರು ಬೀದಿಗೆ ಇಳಿದ ಪರಿಣಾಮ ಅಮಾಯಕರು ಪರಿತಪಿಸುವಂತಾಗಿದೆ.

    ರಾಜ್ಯದ ವಿವಿಧೆಡೆ ವೈದ್ಯರು ಲಭ್ಯವಿಲ್ಲದಿರುವುದರಿಂದ, ಸೂಕ್ತ ಸೌಲಭ್ಯಗಳಿಲ್ಲದೇ ಜನಸಾಮಾನ್ಯರು ಜೀವ ತೆತ್ತಿದ್ದಾರೆ. ವಿಧೇಯಕ ವಿಚಾರದಲ್ಲಿ ವೈದ್ಯರೊಂದಿಗೆ ಜಿದ್ದಿಗೆ ಬಿದ್ದಿರುವ ಸರ್ಕಾರ, ರಾಜ್ಯದ ಜನತೆಗೆ ಸಾವಿನ ಭಾಗ್ಯ ಕರುಣಿಸಿದೆ.

    ಎಲ್ಲಿ ಯಾರು ಮೃತಪಟ್ಟಿದ್ದಾರೆ?
    ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 3 ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ 12 ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ.

    ಬೆಳಗಾವಿಯ ಅಥಣಿಯಲ್ಲಿ 12 ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಮಹೇಶ್ ವಾಘ್ಮೋರ್ ಸಾವನ್ನಪ್ಪಿದ್ದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 52 ವರ್ಷದ ಶೇಖಪ್ಪ ಎಂಬುವರು ಹೃದಯಾಘಾತದಿಂದ ಚಿಕಿತ್ಸೆ ಸಿಗದೆ ಮೃತ ಪಟ್ಟಿದ್ದಾರೆ. ಕೊಪ್ಪಳದಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಸಿಗದೆ 55 ವರ್ಷದ ಗ್ಯಾನಪ್ಪ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ಪರಿಷತ್‍ನಲ್ಲಿ ಕಣ್ಣೀರಿಟ್ಟ ರಮೇಶ್ ಕುಮಾರ್: ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?

  • ರಾಜ್ಯದಲ್ಲಿ ಖಾಸಗಿ ಆಸ್ಪತ್ರೆ ಬಂದ್: ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ ಗರ್ಭಿಣಿಯರು

    ರಾಜ್ಯದಲ್ಲಿ ಖಾಸಗಿ ಆಸ್ಪತ್ರೆ ಬಂದ್: ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ ಗರ್ಭಿಣಿಯರು

    ಬೀದರ್: ಖಾಸಗಿ ಆಸ್ಪತ್ರೆ ಬಂದ್ ಆಗಿದ್ದರಿಂದ ನೂರಾರು ಗರ್ಭಿಣಿಯರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹುಮ್ನಾಬಾದ್, ಔರಾದ್, ಭಾಲ್ಕಿ, ಬಸವಕಲ್ಯಾಣದ ದೂರದ ಹಳ್ಳಿಗಳಿಂದ ಬಂದಿದ್ದರೂ ಯಾರು ಚಿಕಿತ್ಸೆಗೆ ಸ್ಪಂದಿಸಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತು ಗರ್ಭಿಣಿಯರು ಚಿಕಿತ್ಸೆ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

    ಹೀಗಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಚಿಕಿತ್ಸೆ ಸಿಗದೆ ಇದ್ದಾಗ ನೂರಾರು ಗರ್ಭಿಣಿಯರು ಸೇರಿ ಆಸ್ಪತ್ರೆಯ ಸೂಪರ್ ಇಂಡೆಟ್ ರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡಾ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತ್ತು.

    ನಾವು ಪ್ರತಿದಿನ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದೇವೆ. ಇಂದೂ ಕೂಡಾ ಯಾವ ವೈದ್ಯರು ನಮಗೆ ಚಿಕ್ಸಿತ್ಸೆ ನೀಡುತ್ತಿಲ್ಲವಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

  • ಮಂಡ್ಯ: ಪ್ರಾಣ ಉಳಿಸಿದ ವೈದ್ಯರಿಗೆ ಸನ್ಮಾನ ಮಾಡಿದ ಮಹಿಳೆ

    ಮಂಡ್ಯ: ಪ್ರಾಣ ಉಳಿಸಿದ ವೈದ್ಯರಿಗೆ ಸನ್ಮಾನ ಮಾಡಿದ ಮಹಿಳೆ

    ಮಂಡ್ಯ: ಸರಿಯಾಗಿ ಚಿಕಿತ್ಸೆ ನೀಡದೇ ರೋಗಿಗಳ ಸಾವಿಗೆ ಕಾರಣವಾಗೋ ವೈದ್ಯರಿಗೆ ಸಾರ್ವಜನಿಕರೇ ಬುದ್ಧಿ ಕಲಿಸಿದ ಅದೆಷ್ಟೋ ಉದಾಹರಣೆಗಳನ್ನ ನೀವು ಕೇಳಿರುತ್ತೀರಿ. ಅದಕ್ಕೆ ಭಿನ್ನ ಎಂಬಂತೆ ರೋಗಗ್ರಸ್ಥವಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತನ್ನನ್ನು ಉಳಿಸಿದ ವೈದ್ಯರಿಗೆ ಮಂಡ್ಯದ ಬಡ ಮಹಿಳೆಯೊಬ್ಬರು ಸನ್ಮಾನ ಮಾಡಿದ್ದಾರೆ. ಈ ಮೂಲಕ ಒಳ್ಳೆ ಕೆಲಸ ಮಾಡಿದರೆ ಸನ್ಮಾನ ತಾನಾಗೇ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಎಂಬ ಸಂದೇಶವನ್ನು ವೈದ್ಯಲೋಕಕ್ಕೆ ರವಾನಿಸಿದ್ದಾರೆ.

    ಮಂಡ್ಯ ಮಿಮ್ಸ್ ಆಸ್ಪತ್ರೆ ಹಲವು ಬಾರಿ ತನ್ನ ಅವ್ಯವಸ್ಥೆಗಳಿಂದಾಗಿ ಸುದ್ದಿಯಾಗಿತ್ತು. ಆದರೆ ಇದೀಗ ಮಂಡ್ಯ ಮಿಮ್ಸ್ ವೈದ್ಯರ ಕಾಳಜಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರು ಬದುಕುಳಿದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಮದ್ದೂರು ತಾಲೂಕಿನ ತೊರೆಬೊಮ್ಮನಹಳ್ಳಿ ಗ್ರಾಮದ ದಿವ್ಯರಾಣಿ ಎಂಬ ಮಹಿಳೆಗೆ ಏಳು ತಿಂಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಆಗಸ್ಟ್ ತಿಂಗಳಲ್ಲಿ ದಿವ್ಯರಾಣಿ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಸ್ಕ್ಯಾನ್ ಮಾಡಿ ನೋಡಿದಾಗ ಮಗುವಿಗೆ ತೊಂದರೆಯಾಗಿದೆ ಎಂಬುದು ಗೊತ್ತಾಗಿತ್ತು. ಜೊತೆಗೆ ಒಂದೂವರೆ ಲೀಟರ್‍ನಷ್ಟು ಪಸ್ ಆಗಿದ್ದು, ಅಪೆಂಡಿಕ್ಯುಲರ್ ಗ್ಯಾಂಗ್ರಿನ್ ಆಗಿತ್ತು. ದೇಹದ ಕೆಲವು ಭಾಗ ಅದಾಗಲೇ ಕೊಳೆಯಲಾರಂಭಿಸಿತ್ತು. ಗರ್ಭಿಣಿಯ ಪ್ರಾಣಕ್ಕೆ ತೊಂದರೆಯಿರುವುದನ್ನು ಅರಿತ ವೈದ್ಯರು ತಕ್ಷಣ ಆಕೆಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಿದ್ದರು.

    ಅಪೆಂಡಿಕ್ಯುಲರ್ ಗ್ಯಾಂಗ್ರಿನ್ ಇಡೀ ಶರೀರಕ್ಕೆ ಹರಡೋ ಇನ್ಫೆಕ್ಷನ್ ಇರೋ ಖಾಯಿಲೆಯಾಗಿದ್ದು, ತಕ್ಷಣ ವೈದ್ಯರು ಇನ್ಫೆಕ್ಷನ್ ಆಗಿರುವ ಸಣ್ಣ ಕರುಳನ್ನು ತೆಗೆದು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಆದರೆ ಮಗು ಹೊಟ್ಟೆಯಲ್ಲೇ ಸತ್ತು ಹೋಗಿತ್ತು. ಶಸ್ತ್ರ ಚಿಕಿತ್ಸೆ ಆದ ನಂತರ ದಿವ್ಯರಾಣಿಗೆ 14 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಇರಿಸಿದ್ದರು. ಸತತ 52 ದಿನಗಳ ಕಾಲ ಆಸ್ಪತ್ರೆಯಲ್ಲೇ ವೈದ್ಯರು ದಿವ್ಯರಾಣಿಗೆ ಸೂಕ್ತ ಚಿಕಿತ್ಸೆ ನೀಡಿ ಆಕೆ ಗುಣಮುಖರಾದ ನಂತರ ಡಿಸ್ಚಾರ್ಜ್ ಮಾಡಿದ್ದರು.

    ಸಂಪೂರ್ಣ ಪ್ರಜ್ಞಾಹೀನರಾಗಿದ್ದ ದಿವ್ಯರಾಣಿಗೆ ವೈದ್ಯರು ನೀಡಿದ ಚಿಕಿತ್ಸೆ ಬಗ್ಗೆ ಅರಿವಿಲ್ಲ. ಕುಟುಂಬಸ್ಥರು ದಿವ್ಯರಾಣಿಗೆ ವೈದ್ಯರು ಆಕೆಯನ್ನು ಉಳಿಸಲು ತೆಗೆದುಕೊಂಡ ಕಾಳಜಿ ಬಗ್ಗೆ ವಿವರಿಸಿ ಹೇಳಿದ್ದರು. ಇದರಿಂದ ಮಿಮ್ಸ್ ಆಸ್ಪತ್ರೆಗೆ ಬಂದ ದಿವ್ಯರಾಣಿ ತನ್ನ ಪ್ರಾಣ ಉಳಿಸಿದ ವೈದ್ಯರಿಗೆ ಶಾಲು ಹೊದಿಸಿ, ಹೂ ಮತ್ತು ಸಿಹಿ ನೀಡಿ ತನ್ನ ಕೈಲಾದ ಮಟ್ಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸೋ ವೈದ್ಯರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳೋದು ಎಷ್ಟು ನಿಜವೋ ಅದೇ ರೀತಿ ರೋಗಿಗಳ ಉಳಿವಿಗೆ ಶ್ರಮಿಸೋ ಉತ್ತಮ ವೈದ್ಯರಿಗೆ ಸನ್ಮಾನ ಕೂಡ ಮಾಡಿ ಗೌರವಿಸ್ತಾರೆ ಎನ್ನುವುದಕ್ಕೆ ಮಂಡ್ಯದ ದಿವ್ಯರಾಣಿ ಪ್ರಕರಣ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಬಹುದು.

  • ಹೆಚ್‍ಐವಿ ಯಿಂದ ಬಳಲುತ್ತಿರೋ ದಂಪತಿಯ 6 ವರ್ಷದ ಮಗನಿಗೆ ಬೇಕಿದೆ ಸಹಾಯ

    ಹೆಚ್‍ಐವಿ ಯಿಂದ ಬಳಲುತ್ತಿರೋ ದಂಪತಿಯ 6 ವರ್ಷದ ಮಗನಿಗೆ ಬೇಕಿದೆ ಸಹಾಯ

    ಬಾಗಲಕೋಟೆ: ಪೋಷಕರಿಂದ ಬಳವಳಿಯಾಗಿ ಬಂದ ಆ ಕಾಯಿಲೆ ಇಡೀ ಕುಟಂಬವನ್ನೇ ಸಾವಿನಂಚಿಗೆ ತಂದು ನಿಲ್ಲಿಸಿದೆ. ದುಡಿಯಲು ಮೈಯಲ್ಲಿ ಶಕ್ತಿಯಿಲ್ಲ, ಕುಳಿತು ತಿನ್ನಲು ಸ್ಥಿತಿವಂತರಲ್ಲ, ಬೆಂಬಿಡದೇ ಕಾಡ್ತಿರೋ ಬಡತನದ ಮಧ್ಯೆ ಮಹಾಮಾರಿ ಖಾಯಿಲೆಯ ಕಾಟ. ಈ ಕುಟುಂಬವು ಸಹಾಯ ಕೇಳಿಕೊಂಡು ಇದೀಗ ಬೆಳಕು ಕಾರ್ಯಕ್ರಮಕ್ಕೆ ಬಂದಿದೆ.

    ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣದ ನಿವಾಸಿಗಳಾದ ದಂಪತಿಯ ಹೆಸರು ಈರಪ್ಪ ಸೈದಾಪುರ ಮತ್ತು ಪತ್ನಿ ಕವಿತಾ ಸೈದಾಪುರ. ಇವರ 9 ವರ್ಷದ ದಾಂಪತ್ಯಕ್ಕೆ ಸಾಕ್ಷಿಯಂತೆ ಇಬ್ಬರೂ ಮಕ್ಕಳಿದ್ದಾರೆ. 6 ವರ್ಷದ ಮಗಳು ಭಾಗ್ಯಶ್ರೀ ಹಾಗೂ 3 ವರ್ಷದ ಮಗ ವಿಶಾಲ್. ದುರಂತ ಅಂದರೆ ಅಪ್ಪ-ಅಮ್ಮ ಇಬ್ಬರಿಗೂ ಎಚ್‍ಐವಿ ಕಾಯಿಲೆ ಇದ್ದು, ಇವರ ಜೊತೆಗೆ 3 ವರ್ಷದ ಪುಟಾಣಿಗೂ ಸೊಂಕು ತಗುಲಿದೆ. ಅದೃಷ್ಟವಶಾತ್ ಮಗಳು ಭಾಗ್ಯಶ್ರೀಗೆ ಯಾವುದೇ ರೀತಿಯ ಸೊಂಕು ತಗುಲಿಲ್ಲ. ಕೊನೆ ದಿನಗಳನ್ನು ಎಣಿಸುತ್ತಿರುವ ಈ ದಂಪತಿ ಕಾಯಿಲೆಯ ಚಿಕಿತ್ಸೆಗಾಗಿ ಹಲವೆಡೆ ಸುತ್ತಾಡಿ 5 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದಾರೆ.

    ಬೆಂಬಿಡದೇ ಕಾಡ್ತಿರೋ ಎಚ್‍ಐವಿ ಸೊಂಕಿನಿಂದಾಗಿ ನನ್ನ ಪತಿಗೆ ಕೆಲಸ ಮಾಡಲು ಆಗುತ್ತಿಲ್ಲ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿದೆ. ಇತ್ತ ನಾನು ಕೂಡ ಅದೇ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದೇನೆ. ಜೊತೆಗೆ ಸೊಂಕಿನಿಂದ ನನ್ನ ಮಗ ಪುಟಾಣಿ ವಿಶಾಲ್‍ನ ಮಾತನ್ನೂ ಕಸಿದುಕೊಂಡು ಮೂಕನನ್ನಾಗಿಸಿದೆ. ಮತ್ತೊಂದು ಕಡೆ ಸಾಲ ಕೊಟ್ಟವರ ಕಾಟ. ಚಿಕಿತ್ಸೆಗೆ ದುಡ್ಡಿಲ್ಲ, ಮಕ್ಕಳನ್ನ ಸಾಕಲು ಶಕ್ತಿ ಇಲ್ಲ, ಮಾಡಿದ ಸಾಲ ತೀರಿಸಲು ದಾರಿ ಕಾಣುತ್ತಿಲ್ಲ. ಆರೋಗ್ಯವಾಗಿರುವ ನನ್ನ ಮಗಳನ್ನು ಯಾರಾದರೂ ದತ್ತು ಪಡೆಯಿರಿ, ಇಲ್ಲವೇ ಬಾಲಮಂದಿರಕ್ಕೆ ಸೇರಿಸಿ ಎಂದು ತಾಯಿ ಕವಿತಾ ಅಂಗಲಾಚಿಕೊಂಡು ನೋವಿನಲ್ಲಿ ಹೇಳಿದ್ದಾರೆ.

    ಬದುಕಬೇಕೆಂಬ ಕನಸಿದ್ದರೂ ಸಾವಿನ ಆಟವಾಡುವ ಕಾಯಿಲೆ ಈ ಕುಟುಂಬವನ್ನು ಬೆಂಬಿಡುತ್ತಿಲ್ಲ. ಏನೇ ಆಗಲಿ ಎನೂ ಅರಿಯದ ಈ ಪುಟಾಣಿಗಳ ಬದುಕಿನಲ್ಲಿ ಬೆಳಕು ಹಚ್ಚುವವರು ಬೇಕಾಗಿದೆ.

    https://www.youtube.com/watch?v=FvXddLSAMKw

  • ಚಿಕಿತ್ಸೆ ಸಿಗದೆ ಆಂಬುಲೆನ್ಸ್ ನಲ್ಲೇ ಮಹಿಳೆಗೆ ಹೆರಿಗೆ- ಮಗು ಸಾವು

    ಚಿಕಿತ್ಸೆ ಸಿಗದೆ ಆಂಬುಲೆನ್ಸ್ ನಲ್ಲೇ ಮಹಿಳೆಗೆ ಹೆರಿಗೆ- ಮಗು ಸಾವು

    ಬಾಗಲಕೋಟೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗದ ಕಾರಣ ಮಹಿಳೆಯೊಬ್ಬರಿಗೆ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿ ಮಗು ಹುಟ್ಟಿದ ತಕ್ಷಣವೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ನಡೆದಿದೆ.

    ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ತಡರಾತ್ರಿ ಆಸ್ಪತ್ರೆ ಮುಂದೆ ಮಗುವಿನ ಶವ ಹೊತ್ತು ತಾಯಿ, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಭಾರತಿ ತೊಗಲದೋಣಿ ಎಂಬ 31 ವರ್ಷದ ಗರ್ಭಿಣಿ ಹೆರಿಗೆಗಾಗಿ ಹಲಕುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಮಂಜುಳಾ ಗುರಾಣಿ ನಿಲರ್ಕ್ಷ್ಯದ ಹಿನ್ನೆಲೆಯಲ್ಲಿ ಹುಟ್ಟಿದ ಮಗು ಸಾವನ್ನಪಿದೆ ಎಂದು ಗರ್ಭಿಣಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಭಾರತಿ ಹೆರಿಗೆ ಬೇನೆಯಿಂದ ಶುಕ್ರವಾರ ಸಂಜೆ ಆರು ಗಂಟೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎನ್ನಲಾಗಿದೆ. ಎರಡು ಗಂಟೆಗಳ ಕಾಲ ಗರ್ಭಿಣಿ ಮತ್ತು ಕುಟುಂಬಸ್ಥರು ವೈದ್ಯರಿಗಾಗಿ ಕಾಯ್ದಿದ್ದಾರೆ. ಆದರೆ ವೈದ್ಯರು ಬಾರದಿದ್ದಾಗ ಬಾದಾಮಿ ತಾಲೂಕಾಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಭಾರತಿಗೆ ಹೆರಿಗೆ ನೋವು ಜಾಸ್ತಿಯಾಗಿ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿದೆ. ಹೆರಿಗೆಯಾದ ತಕ್ಷಣವೇ ಹೆಣ್ಣುಮಗು ಸಾವನ್ನಪ್ಪಿದೆ. ಇದರಿಂದ ಕುಟುಂಬಸ್ಥರು ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.

    24×7 ಹೆರಿಗೆ ಮತ್ತು ಚಿಕಿತ್ಸಾ ಸೌಲಭ್ಯವಿರಬೇಕಾದ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದಿರೋದು ಮಗುವನ್ನು ಬಲಿ ಪಡೆದುಕೊಂಡಂತಾಗಿದೆ. ಇನ್ನು ಆಸ್ಪತ್ರೆ ವೈದ್ಯೆ ಮಂಜುಳಾ ಗುರಾಣಿ ಅವರು ಆಸ್ಪತ್ರೆಗೆ ಬಂದಿರದಿದ್ದಾಗ ಸ್ಥಳದಲ್ಲಿದ್ದ ನರ್ಸ್ ಗಳು ನಮ್ಮ ಡ್ಯೂಟಿ ಇಲ್ಲ ಎಂದು ನಿರ್ಲಕ್ಷ್ಯ ಮಾಡಿದ್ದಾರೆ. ಘಟನೆ ಬಗ್ಗೆ ಮಂಜುಳಾ ಗುರಾಣಿ ಅವರಿಗೆ ಕರೆ ಮಾಡಿದರೆ ನನ್ನದು ಸಂಜೆ ಆರು ಗಂಟೆವರೆಗೂ ಮಾತ್ರ ಡ್ಯೂಟಿ. ಏನೇ ಹೇಳೋದಿದ್ದರೂ ಡಿಹೆಚ್‍ಓ ಗೆ ಹೇಳ್ರಿ ಎಂದು ಬೇಜವಾಬ್ದಾರಿತನದಿಂದ ಉತ್ತರಿಸಿದ್ದಾರೆ.

    ಸದ್ಯ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

  • ಮತ್ತೆ ಆಸ್ಪತ್ರೆಗೆ ದಾಖಲಾದ ಪೇಜಾವರ ಶ್ರೀಗಳು

    ಮತ್ತೆ ಆಸ್ಪತ್ರೆಗೆ ದಾಖಲಾದ ಪೇಜಾವರ ಶ್ರೀಗಳು

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಗಳಿಗೆ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ರಾತ್ರಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪೇಜಾವರ ಶ್ರೀಗಳಿಗೆ ಆರೋಗ್ಯ ತಪಾಸಣೆ ಮಾಡಬೇಕೆಂದು ಮಣಿಪಾಲ ಕೆಎಂಸಿ ವೈದ್ಯರು ಸಲಹೆ ನೀಡಿದ್ದರು. ದಾಖಲಾದ ವಿಶ್ವೇಶತೀರ್ಥರನ್ನು, ಸ್ಕ್ಯಾನಿಂಗ್ ಗೆ ಒಳಪಡಿಸಲಾಯ್ತು. ತಿಂಗಳ ಹಿಂದೆ ಹರ್ನಿಯಾ ಆಪರೇಷನ್ ಗೆ ಒಳಗಾಗಿದ್ದ ಶ್ರೀಗಳು ಇದೀಗ ಕೆಎಂಸಿಗೆ ದಾಖಲಾಗಿದ್ದಾರೆ. ಎರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವ ಸಾಧ್ಯತೆಯಿದೆ. ಸ್ಕಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿರುವ ವೈದ್ಯರು ತಪಾಸಣೆ ನಡೆಸಿದ್ದಾರೆ.

    ರಾತ್ರಿಯ ಪೂಜೆ ಪೂರೈಸಿ, ಕೆಎಂಸಿ ಆಸ್ಪತ್ರೆಗೆ ತೆರಳಿರುವ ಸ್ವಾಮೀಜಿ ಅನುಷ್ಟಾನಗಳನ್ನೂ ಪೂರೈಸಿದ್ದಾರೆ. ಸ್ವಾಮೀಜಿ ಆರೋಗ್ಯವಾಗಿದ್ದಾರೆ, ಭಕ್ತರಿಗೆ ಆತಂಕ ಬೇಡ ಎಂದು ಉಡುಪಿ ಕೃಷ್ಣ ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಪರೇಶನ್ ನಂತರ ಕೂಡಾ ಹೊಟ್ಟೆ ನೋವು ಕಾಣಿಸಿಕೊಂಡದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಬಿಎಸ್‍ವೈ ಆರೋಗ್ಯ ವೃದ್ಧಿಯಾಗಲೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೂಜೆ

    ಬಿಎಸ್‍ವೈ ಆರೋಗ್ಯ ವೃದ್ಧಿಯಾಗಲೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೂಜೆ

    ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆರೋಗ್ಯ ವೃದ್ಧಿಯಾಗಲಿ, ಅವರಿಗೆ ಯಾವುದೇ ಕಂಟಕ ಬಾರದಿರಲಿ ಎಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಬೆಳ್ಳಂಬೆಳಗ್ಗೆ ಮಂಡ್ಯದ ವಿದ್ಯಾನಗರದಲ್ಲಿರುವ ವಿದ್ಯಾಗಣಪತಿ ದೇವಾಲಯಕ್ಕೆ ಆಗಮಿಸಿದ ಯಡಿಯೂರಪ್ಪ ಅಭಿಮಾನಿಗಳು, ಮೊದಲು ಗಣಪತಿಗೆ ಹಾಲಿನ ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಮುಂದೆ ಯಡಿಯೂರಪ್ಪ ಅವರಿಗೆ ಜೈಕಾರ ಹಾಕುತ್ತಾ ತೆಂಗಿನ ಕಾಯಿ ಒಡೆದರು.

    ಆರೋಗ್ಯ ವೃದ್ಧಿಯ ಜೊತೆಗೆ ರಾಜಕೀಯ ವಲಯದಲ್ಲಿ ಯಡಿಯೂರಪ್ಪ ಅವರನ್ನು ಹಿತಶತೃಗಳಿಂದ ಕಾಪಾಡಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು.

    ಇದನ್ನೂ ಓದಿ: ಬಿ.ಎಸ್.ವೈ ಆಸ್ಪತ್ರೆಗೆ ದಾಖಲು – ಎಲ್ಲ ವಿಚಾರವೂ ಗುಪ್ತ್ ಗುಪ್ತ್!

    ಬಿಎಸ್‍ವೈ ಅವರ ಆರೋಗ್ಯದಲ್ಲಿ ಏರುಪೇರಾಗಿ ಇದ್ದಕಿದ್ದಂತೆ ಅಧಿಕ ರಕ್ತದೊತ್ತಡ ಹಾಗೂ ಜ್ವರದಿಂದ ಬಳಲುತ್ತಿದ್ದರು. ಬುಧವಾರ ರಾತ್ರಿ ಬನ್ನೇರಘಟ್ಟ ರಸ್ತೆಯಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.