Tag: treatment

  • ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋದ ಪತಿ!

    ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋದ ಪತಿ!

    ಬೆಂಗಳೂರು: ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಬಾಗಿಲು ಹಾಕಿಕೊಂಡು ಹೋದ ಘಟನೆ ಬೆಂಗಳೂರಿನ ಚೋಳೂರುಪಾಳ್ಯದ ಮಂಜುನಾಥನಗರದಲ್ಲಿ ನಡೆದಿದೆ.

    ಮಂಜುನಾಥ್ ಚಾಕು ಇರಿದ ಆರೋಪಿ. ಸೋಮವಾರ ತಡರಾತ್ರಿ ಮಂಜುನಾಥ್ ತನ್ನ ಪತ್ನಿ ವೇದಕುಮಾರಿಗೆ ಚಾಕುವಿನಿಂದ ಇರಿದಿದ್ದನು. ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೇ ಮಂಜುನಾಥ್ ಪ್ರತಿದಿನ ಕುಡಿದು ಮನೆಗೆ ಹೋಗುತ್ತಿದ್ದನು.

    ಮಂಜುನಾಥ್ ಸೋಮವಾರ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು ಚಾಕುವಿನಿಂದ ಇರಿದಿದ್ದಾನೆ. ವೇದಕುಮಾರಿಯ ನರಳಾಟ ಕೇಳಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸದ್ಯ ವೇದಕುಮಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಈ ಪ್ರಕರಣ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪಘಾತಕ್ಕೀಡಾಗಿ ರಸ್ತೆಯಲ್ಲಿ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ!

    ಅಪಘಾತಕ್ಕೀಡಾಗಿ ರಸ್ತೆಯಲ್ಲಿ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ!

    ಬಳ್ಳಾರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ದಾರಿ ಮಧ್ಯೆ ನರಳಾಡುತ್ತಿದ್ದ ವ್ಯಕ್ತಿಗೆ ವೈದ್ಯರೊಬ್ಬರು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

    ಡಾ. ಯುವರಾಜ್ ಮಾನವೀಯತೆ ಮೆರೆದ ವೈದ್ಯ. ಬುಧವಾರ ಹೊಸಪೇಟೆ ಬಳ್ಳಾರಿ ಮಾರ್ಗ ಮಧ್ಯೆ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಹೊಸಪೇಟೆ ವೈದ್ಯ ಯುವರಾಜ್, ಗಾಯಾಳುವಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

    ಅಲ್ಲದೇ ವಿಡಿಯೋ, ಫೋಟೋ ತಗೆಯಲು ಮುಂದಾದ ಜನರಿಗೆ ತಿಳಿ ಹೇಳಿ ಫೋಟೋ ತೆಗೆಯದೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವಂತೆ ಮನವಿ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    ವೈದ್ಯರು ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನೂರಾರು ಜನರ ಜೀವ ಉಳಿಸುತ್ತಿರುವ 68ರ ವೃದ್ಧೆ!

    ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನೂರಾರು ಜನರ ಜೀವ ಉಳಿಸುತ್ತಿರುವ 68ರ ವೃದ್ಧೆ!

    ಕಾರವಾರ: ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ತೋರಿಸಲು ಬಹಳಷ್ಟು ಸಾಧಕಿಯರು ನಮ್ಮ ಮುಂದಿದ್ದಾರೆ. ಆದರೆ ಯಾವ ಪ್ರತಿಫಲಾಪೇಕ್ಷೆ ನಿರೀಕ್ಷಿಸದೇ ಜನರ ಸೇವೆ ಮಾಡುತ್ತಾ ತೆರೆಮರೆಯಲ್ಲಿರುವವರು ಕೂಡ ಅನೇಕರಿದ್ದಾರೆ. ಎಲೆಮರೆಯ ಕಾಯಿಯಾಗಿ ಸಂಪ್ರದಾಯಿಕ ನಾಟಿ ಔಷಧಿ ನೀಡುವ ಮೂಲಕ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನೂರಾರು ಜನರ ಪ್ರಾಣ ರಕ್ಷಿಸಿದ ವೃದ್ಧೆಯೊಬ್ಬರ ಯಶೋಗಾಥೆ ಇದು.

    ದೇವಿ ಗೌಡ(68) ವಿಷ ಜಂತುಗಳು ಕಚ್ಚಿದ ವ್ಯಕ್ತಿಗಳ ಗಾಯದ ಮೇಲೆ ಕೊಳವೆ ಇಟ್ಟಕೊಂಡು ತನ್ನ ಬಾಯಿಯಿಂದ ಉಸಿರನ್ನ ತೆಗೆದುಕೊಂಡು ಅವರ ದೇಹದೊಳಗೆ ಸೇರಿರುವ ವಿಷವನ್ನು ತೆಗೆದು ಇನ್ನೊಬ್ಬರ ಉಸಿರು ಉಳಿಸುತ್ತಾರೆ.

    ಇವರು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿ ಗ್ರಾಮದ ಹಡವು ಎಂಬ ಪುಟ್ಟಹಳ್ಳಿ ಬುಡಕಟ್ಟು ಜನಾಂಗದ ಮಹಿಳೆಯಾಗಿದ್ದು, ಯಾವುದೇ ವೈದ್ಯಕೀಯ ತರಬೇತಿ ಪಡೆದುಕೊಂಡವರಲ್ಲ. ತಲೆತಲಾಂತರದಿಂದ ಹಿರಿಯರು ಕಲಿಸಿಕೊಟ್ಟ ನಾಟಿವೈದ್ಯ ವಿದ್ಯೆಯಿಂದ ಹಲವರ ಬದುಕನ್ನು ಬೆಳಗಿಸುತ್ತಿದ್ದಾರೆ.

    ಕಾಡಿನಲ್ಲಿ ಸಿಗುವ ವಿವಿಧ ಜಾತಿಯ ಬೇರುಗಳನ್ನು ತೆಗೆದುಕೊಂಡು ಬಂದು ಅದರಿಂದ ಔಷಧಿ ತಯಾರಿಸಿ ಹಾವು, ನಾಯಿ ಕಡಿದವರಿಗೆ ಹಚ್ಚಿ ಗುಣಮುಖರನ್ನಾಗಿಸುತ್ತಿದ್ದಾರೆ. ನರ ವ್ಯಾಧಿ ಇರುವ ಮಕ್ಕಳಿಗೆ, ಸಂತಾನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಗಿಡಮೂಲಿಕೆ ಔಷಧಿಯನ್ನ ನೀಡೋ ಮೂಲಕ ಅವರ ಕೊರಗನ್ನ ದೂರ ಮಾಡುತ್ತಾ ಬಂದಿದ್ದಾರೆ. ಈ ಕಾಯಕವನ್ನ ಯಾವುದೇ ಪ್ರತಿಫಲವಿಲ್ಲದೇ ಮಾಡುತಿದ್ದು ನೂರಾರು ಜನರ ಪ್ರಾಣ ಉಳಿಸಿದ್ದಾರೆ.

    ಇವರು ಚಿಕಿತ್ಸೆ ನೀಡುವ ಪದ್ಧತಿಯೂ ವಿಶಿಷ್ಟವಾಗಿದ್ದು ಕೊಳವೆ ಮೂಲಕ ವಿಷಜಂತುಗಳು ಕಚ್ಚಿದ ಜಾಗದಿಂದ ರಕ್ತ ಸಮೇತ ವಿಷವನ್ನು ತನ್ನ ಬಾಯಿ ಮೂಲಕ ಹೊರತೆಗೆಯುತ್ತಾರೆ. ಸ್ವಲ್ಪ ಯಾಮಾರಿದರೂ ಇವರ ಜೀವಕ್ಕೆ ತೊಂದರೆ. ಆದರೆ ಕಳೆದ 35 ವರ್ಷಗಳಿಂದ ನೂರಾರು ಜನರಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ಇದಕ್ಕಾಗಿ ಹಣ ಪಡೆಯದಿದ್ದರೂ ಇವರ ಬಡತನ ನೋಡಿ ಜನ ಹಣ ನೀಡುತ್ತಾರೆ. ಆದರೆ ಇದೊಂದು ಸೇವೆ ಎಂದು ಮಾಡಿಕೊಂಡು ಬರುತ್ತಿರುವ ಇವರು ಯಾರ ಮುಂದೆಯೂ ಕೈಚಾಚದೇ, ಹೆಸರಿಗಾಗಿ ನೋಡದೇ ಸೇವೆ ನೀಡುತಿದ್ದು ಇಂತವರನ್ನು ಸರ್ಕಾರ ಗುರುತಿಸಬೇಕೆಂಬುದು ಸ್ಥಳೀಯ ಜನರ ಹಂಬಲ.

    ಅನಕ್ಷರಸ್ತೆಯಾದರೂ ಪಾರಂಪರಿಕ ಔಷಧಿ ನೀಡವ ಮೂಲಕ ಸಂಪ್ರದಾಯಿಕ ಪದ್ಧತಿಯನ್ನು ಉಳಿಸಿ ಬೆಳಸಿಕೊಂಡು ಬರುತ್ತಿದ್ದಾರೆ. ತಮ್ಮ ವಿದ್ಯೆಯನ್ನು ಧಾರೆ ಎರೆಯಲು ಸದಾ ಸಿದ್ಧರಿರುವ ಇವರ ಸೇವೆ ನಿಜವಾಗಿಯೂ ಸ್ಮರಿಸುವಂತದ್ದು. ಮಹಿಳೆಯರಿಗಾಗಿ ಮಹಿಳಾ ದಿನಾಚರಣೆ ಆಚರಿಸುವ ನಾವು ತೆರೆ ಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಂತವರನ್ನು ಸ್ಮರಿಸಬೇಕಿದೆ.

  • ಲೋಕಾಯುಕ್ತರಿಗೆ ಎಲ್ಲೆಲ್ಲಿ ಇರಿಯಲಾಗಿದೆ? ಈಗ ಹೇಗಿದ್ದಾರೆ: ಮಲ್ಯ ಆಸ್ಪತ್ರೆ ವೈದ್ಯರು ಹೇಳ್ತಾರೆ ಓದಿ

    ಲೋಕಾಯುಕ್ತರಿಗೆ ಎಲ್ಲೆಲ್ಲಿ ಇರಿಯಲಾಗಿದೆ? ಈಗ ಹೇಗಿದ್ದಾರೆ: ಮಲ್ಯ ಆಸ್ಪತ್ರೆ ವೈದ್ಯರು ಹೇಳ್ತಾರೆ ಓದಿ

    ಬೆಂಗಳೂರು: ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಎದೆ ಹಾಗೂ ತೊಡೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಅಪರೇಷನ್ ಮಾಡಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಲ್ಯ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡಾ. ದಿವಾಕರ್ ಭಟ್, ವಿಶ್ವನಾಥ್ ಶೆಟ್ಟಿ ಅವರ ಎದೆ ಭಾಗಕ್ಕೆ ಮೂರು ಇರಿತ, ಹೊಟ್ಟೆಗೆ, ತೊಡೆ, ಕೈ ಹಾಗೂ ಮುಖದ ಭಾಗದಲ್ಲಿ ತಲಾ ಒಂದು ಇರಿತ ಸೇರಿದಂತೆ ಹಲವಾರು ಕಡೆ ಇರಿತವಾಗಿದೆ. ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸತತ ಮೂರು ಗಂಟೆಗಳ ಕಾಲ ಸರ್ಜರಿ ನಡೆಸಿದ್ದಾಗಿ ಹೇಳಿದರು.

    ಎದೆ ಹಾಗೂ ಹೊಟ್ಟೆ ಭಾಗದಲ್ಲಿ ತೀವ್ರಗಾಯ ಉಂಟಾಗಿರುವ ಕಾರಣ ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ಇದರಿಂದ ಸರ್ಜರಿ ನಡೆಸಿ ರಕ್ತಸ್ರಾವನ್ನು ತಡೆಯಲಾಗಿದೆ. ನ್ಯಾ.ವಿಶ್ವನಾಥ್ ಅವರಿಗೆ ಈಗಾಗಲೇ ಬೈಪಾಸ್ ಸರ್ಜರಿ ನಡೆದಿರುವ ಕಾರಣ ಚಾಕುವಿನ ಇರಿತದಿಂದ ಹೆಚ್ಚಿನ ತೊಂದರೆ ಉಂಟಾಗಿದೆ. ಅದ್ದರಿಂದ ಅವರಿಗೆ ಮೂರು ನಾಲ್ಕು ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಟೇಬಲ್ ಆಗಿದೆ. ಐದು ಜನರ ತಜ್ಞರ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದರು. ಇದನ್ನೂ ಓದಿ: ದೂರುಗಳ ಮೇಲೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ- ಪೊಲೀಸ್ ಮುಂದೆ ತಪ್ಪೊಪ್ಪಿಕೊಂಡ ತೇಜರಾಜ್

    ನ್ಯಾ. ಮೂರ್ತಿ ವಿಶ್ವನಾಥ್ ಅವರಿಗೆ 74 ವರ್ಷ ಆಗಿರುವುದರಿಂದ ಅವರು ತೀರಾ ನೋವು ತಡೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಅವರಿಗೆ ಡಯಾಬಿಟಿಸ್ ಕೂಡ ಇದೆ. ತೀವ್ರ ರಕ್ತಸ್ರಾವ ಆಗಿರುವುದರಿಂದ ಅವರಿಗೆ ರಕ್ತವನ್ನು ನೀಡಲಾಗಿದೆ. ಸದ್ಯ ಅವರು ಮಾತನಾಡುತ್ತಿದ್ದು, ಅವರ ದೇಹದ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ಮುಂದುವರೆಸುವುದಾಗಿ ತಿಳಿಸಿದರು. ಇದನ್ನೂ ಓದಿ:  ಇದು ಸರ್ಕಾರ ಏನ್ರೀ? ಮೊದಲು ಈ ಸರ್ಕಾರ ತೊಲಗಬೇಕು: ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ

  • ಚಿಕಿತ್ಸೆಗಾಗಿ ಕರುವನ್ನು ವಾಹನದಲ್ಲಿ ಕರೆದೊಯ್ದರೆ, ಆಸ್ಪತ್ರೆವರೆಗೂ ಓಡೋಡಿ ಬಂತು ತಾಯಿ ಹಸು

    ಚಿಕಿತ್ಸೆಗಾಗಿ ಕರುವನ್ನು ವಾಹನದಲ್ಲಿ ಕರೆದೊಯ್ದರೆ, ಆಸ್ಪತ್ರೆವರೆಗೂ ಓಡೋಡಿ ಬಂತು ತಾಯಿ ಹಸು

    ಹಾವೇರಿ: ಗಾಯದ ಸಮಸ್ಯೆಯಿಂದ ನಿತ್ರಾಣಗೊಂಡು ಬಳಲುತ್ತಿದ್ದ ಕರುವನ್ನು ಪಶು ಆಸ್ಪತ್ರೆಗೆ ಸಾಗಿಸುತ್ತಿದ್ದರೆ ತಾಯಿ ಹಸು ಆಸ್ಪತ್ರೆವರೆಗೂ ವಾಹನದ ಹಿಂದೆಯೇ ಓಡೋ ಬಂದಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.

    ಹಾವೇರಿ ನಗರದ ಜೆ.ಪಿ.ವೃತ್ತದ ಬಳಿ ಬೀದಿ ಹಸುವಿನ ಕರುವೊಂದು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಅನಾರೋಗ್ಯದಿಂದ ಅಸ್ವಸ್ಥವಾಗಿದ್ದ ಕರುವನ್ನು ಸ್ಥಳೀಯರು ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ತನ್ನ ಕಂದನನ್ನು ಯಾರೋ ಕರೆದುಕೊಂಡು ಹೋಗುತ್ತಿದ್ದನ್ನು ಕಂಡ ತಾಯಿ ಹಸು ವಾಹನದ ಹಿಂದೆಯೇ ಬೆನ್ನತ್ತಿ ಹೋಗಿದೆ.

    ಕರುವಿಗೆ ಚಿಕಿತ್ಸೆ ನೀಡುವವರೆಗೂ ತಾಯಿ ಹಸು ಮಾತ್ರ ಆಸ್ಪತ್ರೆಯ ಎದುರುಗಡೆಯೇ ನಿಂತಿತ್ತು. ವೈದ್ಯರ ಚಿಕಿತ್ಸೆ ನಂತರ ಕರುವನ್ನು ಕಂಡು ಮುದ್ದಾಡಿದ ಹಾಲು ಉಣಿಸಿ ಹೆತ್ತತಾಯಿ ಪ್ರೀತಿಗಿಂತ ಮಿಗಿಲಾಗಿದ್ದು ಯಾವುದು ಇಲ್ಲ ಅನ್ನೋದನ್ನ ಹಸು ಸಾಬೀತು ಮಾಡಿತು. ಈ ತಾಯಿ ಮಮತೆ ಕಂಡು ಜನರು ಬೆರಗಾಗಿ ನೋಡಿ ಒಂದು ಕ್ಷಣ ಭಾವುಕರಾದರು.

    https://youtu.be/7f6RWSSVRaQ

  • ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ಬಿಗಿದಪ್ಪಿದ ಪತಿ!

    ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ಬಿಗಿದಪ್ಪಿದ ಪತಿ!

    ಚಿಕ್ಕಬಳ್ಳಾಪುರ: ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದು, ಬೆಂಕಿಯಿಂದ ಒದ್ದಾಡುತ್ತಿದ್ದ ಪತ್ನಿಯನ್ನು ಬಿಗಿದಪ್ಪಿ ಹಿಡಿದ ಕಾರಣ ಪತಿಯೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

    ನಗರದ 35 ವರ್ಷದ ಚಂದ್ರಕಲಾ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಶಂಕರ್ ಪತ್ನಿಯನ್ನ ರಕ್ಷಿಸಲು ಮುಂದಾಗಿದ್ದಾರೆ. ಘಟನೆಯಲ್ಲಿ ಚಂದ್ರಕಲಾ ದೇಹದ ಶೇ.80 ರಷ್ಟು ಹಾಗೂ ಪತಿ ಶಂಕರ್ ಶೇ.30 ರಷ್ಟು ಭಾಗ ಸುಟ್ಟು ಹೋಗಿದ್ದು, ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಸದ್ಯ ಪ್ರಾಥಮಿಕ ಚಿಕಿತ್ಸೆ ನಂತರ ಇಬ್ಬರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

  • ಬೆಳಕು ಇಂಪ್ಯಾಕ್ಟ್: ನರರೋಗ, ಸಂದುನೋವಿನಿಂದ ಬಳಲುತ್ತಿದ್ದು 23ರ ಯುವಕನಿಗೆ ಸಿಕ್ತು ಚಿಕಿತ್ಸೆ

    ಬೆಳಕು ಇಂಪ್ಯಾಕ್ಟ್: ನರರೋಗ, ಸಂದುನೋವಿನಿಂದ ಬಳಲುತ್ತಿದ್ದು 23ರ ಯುವಕನಿಗೆ ಸಿಕ್ತು ಚಿಕಿತ್ಸೆ

    ಗದಗ: ಮೊದಲು ಚೆನ್ನಾಗಿಯೇ ಇದ್ದ ಯುವಕ, ನಾಲ್ಕು ವರ್ಷದ ಹಿಂದೆ ಬಿದ್ದ ನೆಪದಿಂದ ಮೂಲೆ ಗುಂಪಾಗಿಬಿಟ್ಟಿದ್ದ. 23 ವರ್ಷದ ಯುವಕ ನರರೋಗ, ಸಂದುನೋವಿನಿಂದ ಬಳಲುತ್ತಿದ್ದು, ಕಡು ಬಡತನ ಆತನ ಬದುಕನ್ನೆ ಕಸಿದುಕೊಳ್ಳುತ್ತಿತ್ತು. ಬಡತನದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರ ಗ್ರಾಮದ ನಿವಾಸಿ ಮೌನೇಶ ದೇವೆಂದ್ರಪ್ಪ ಕಮ್ಮಾರ ನಾಲ್ಕು ವರ್ಷಗಳ ಹಿಂದೆ ಆಟವಾಡುವ ವೇಳೆ ಬಿದ್ದು ಕಾಲುಗಳಲ್ಲಿ ಶಕ್ತಿ ಹೀನಗೊಂಡಿತ್ತು. ಎದ್ದೇಳಲು, ಓಡಾಡಲು ಆಗದೇ ನರರೋಗ, ಸಂದು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದರು. ಕುಟುಂಬ ಬಡತನ ಇರುವುದರಿಂದ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗಿರಲಿಲ್ಲ.

    ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದ ಮೌನೇಶನ ಕುಟುಂಬಸ್ಥರು ವೈದ್ಯಕೀಯ ನೆರವು ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ರು. ಗದಗ ಜಿಲ್ಲಾ ವೈದ್ಯಾಧಿಕಾರಿ ಪಾಂಡುರಂಗ ಕಬಾಡಿ ಅವರು ಮೌನೇಶನ ಚಿಕಿತ್ಸೆಗೆ ಕೊಡಿಸುವುದಾಗಿ ಬೆಳಕು ಕಾರ್ಯಕ್ರಮದಲ್ಲಿ ಭರವಸೆ ನೀಡಿದರು. ಜಿಲ್ಲಾ ವೈದ್ಯಾಧಿಕಾರಿಗಳು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ ಚಿಕಿತ್ಸೆ ಪಡೆಯುತ್ತಿರುವ ಮೌನೇಶ ಬೆಳಕು ಕಾರ್ಯಕ್ರಮ ನನ್ನ ಬಾಳಿಗೆ ಬೆಳಕಾಗುತ್ತಿರುವುದು ಖುಷಿ ತಂದಿದೆ ಅಂತ ಹೇಳುತ್ತಾರೆ.

    ಆಸ್ಪತ್ರೆಯಲ್ಲಿ ನಿತ್ಯ ಇಂಜಕ್ಷನ್, ಮಾತ್ರೆ, ಮಸಾಜ್, ಕಾಲುಗಳಿಗೆ ವ್ಯಾಯಾಮ ಮಾಡಿಸಲಾಗುತ್ತಿದೆ. ಅಲ್ಲದೇ ಎಚ್.ಎಲ್.ಎ ಬಿ-27 (ಅಂಕಲಾಜಿಂಗ್ ಸ್ಪಂಡಲೆಜಿಸ್) ಎಂಬ ಕಾಯಿಲೆ ಇರಬಹುದು ಎಂದು ಊಹಿಸಿ ಪುಣೆ ಲ್ಯಾಬಿಗೆ ರಕ್ತ ತಪಾಸಣೆಗೆ ಸಹ ಕಳುಹಿಸಿದ್ದಾರೆ. ಸಂದು ನೋವಿಗೆ ಚಿಕಿತ್ಸೆ ಮುಂದುವರೆದಿದ್ದು ಈಗ ಮೌನೇಶ, ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.

    ನನ್ನ ಮಗ ಗುಣಮುಖವಾಗಲು, ಒಳ್ಳೆಯ ಚಿಕಿತ್ಸೆ ಸಿಗಲು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಕಾರಣ. ಒಟ್ನಲ್ಲಿ ತನ್ನಷ್ಟಕ್ಕೆ ತಾನು ನಡೆದಾಡಲು ಬಂದ್ರೆ ಅಷ್ಟೇ ಸಾಕು ಅಂತಿದ್ದಾರೆ ಮೌನೇಶನ ತಾಯಿ ಸರೋಜಾ ಹೇಳುತ್ತಾರೆ. ಮೌನೇಶನ ಕಾಯಿಲೆ ಗುಣಮುಖವಾಗಿ ಎಲ್ಲರಂತೆ ಎದ್ದು ನಿಂತು ಓಡಾಡಿ ತನ್ನ ಕಾಲ ಮೇಲೆ ನಿಂತು ಜೀವನ ಕಟ್ಟಿಕೊಳ್ಳಲಿ ಎಂಬುದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಆಶಯವಾಗಿದೆ.

  • ಬೆಳಕು ಇಂಪ್ಯಾಕ್ಟ್: ಕುಂಚದಲ್ಲಿ ಕೋಟೆ ನಾಡಿನ ಇತಿಹಾಸ ಬರೆಯುತ್ತಿದ್ದ ಕಲಾವಿದನ ಬಾಳಲ್ಲಿ ಮೂಡಿತು ರಂಗಿನೋಕುಳಿ

    ಬೆಳಕು ಇಂಪ್ಯಾಕ್ಟ್: ಕುಂಚದಲ್ಲಿ ಕೋಟೆ ನಾಡಿನ ಇತಿಹಾಸ ಬರೆಯುತ್ತಿದ್ದ ಕಲಾವಿದನ ಬಾಳಲ್ಲಿ ಮೂಡಿತು ರಂಗಿನೋಕುಳಿ

    ಚಿತ್ರದುರ್ಗ: ತಮ್ಮ ಕಲಾಕುಂಚದಿಂದ ಕೋಟೆನಾಡಿನ ಇತಿಹಾಸವನ್ನು ದೇಶಾದ್ಯಂತ ಬರೆದು ಸಾರಿದ್ದ ಕಲಾವಿದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಗ ಮಾತ್ರ ಯಾರೊಬ್ಬರು ಆತನ ಕೈ ಹಿಡಿದಿರಲಿಲ್ಲ. ಕಲಾ ಪ್ರಾವೀಣ್ಯತೆ ಗುರುತಿಸಿದ್ದ ಪಬ್ಲಿಕ್ ಟಿವಿ ಕಲಾವಿದನ ಚಿಕಿತ್ಸೆಗೆ ನೆರವಾಗಿದ್ರಿಂದ ಮತ್ತೆ ಮರುಜನ್ಮ ಪಡೆದು ಈಗ ತನ್ನ ಕಲಾ ಕೌಶಲ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

    ಕೋಟೆನಾಡಿನ ಕಲಾವಿದ ನಾಗರಾಜ್ ಮರುಜೀವ ಪಡೆದ ಚಿತ್ರಗಾರ. ತೆರೆದ ಹೃದಯ ಸರ್ಜರಿಗೆ ಹಣವಿಲ್ಲದೇ ಜೀವ ಉಳಿದರೆ ಸಾಕು, ಚಿಕಿತ್ಸೆಗಾಗಿ ನೆರವು ನೀಡಿ ಎನ್ನುವಷ್ಟು ಕುಗ್ಗಿಹೋಗಿದ್ದ ಕಲಾವಿದ, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಚಿಕಿತ್ಸೆಯನ್ನ ನೀಡಿ ನನ್ನ ಕನಸು ನನಸು ಮಾಡುವಂತೆ ಕೇಳಿ ಕೊಂಡಿದ್ದರು. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ನೆರವಿನಿಂದಾಗಿ ಮತ್ತೆ ಮರುಜನ್ಮ ಪಡೆದು ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ.

    ಕೋಟೆನಾಡಿನ ಜನರಿಗೆ ಕಾಣಲಾಗದ ಅಪರೂಪದ ಸೌಂದರ್ಯದ ಸೊಬಗು ಹಾಗು ಕೋಟೆ ಕೊತ್ತಲಗಳನ್ನ ತಮ್ಮ ಚಿತ್ರಪಟಗಳ ಮೂಲಕ ದರ್ಶನ ಮಾಡಿಸಿ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಇತ್ತೀಚೆಗೆ ನಾಗರಾಜ್ ಅವರ ಚಿತ್ರಪಟಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ಚಿತ್ರಪಟಗಳು, ಕಲಾಕೃತಿಗಳು ಹಾಗು ವಿಭಿನ್ನ ಅವೇಶಷಗಳನ್ನು ಕಂಡು ಪುಳಕಿತರಾದ ಕೋಟೆನಾಡಿನ ಜನರು ಕಲಾವಿದನ ಕೈಚಳಕ ಹಾಗೂ ಅಪರೂಪದ ದೃಶ್ಯಗಳ ಬಗ್ಗೆ ಸಂತಸ ವ್ಯಕ್ತಪಡಸಿದ್ದಾರೆ. ಅಲ್ಲದೇ ಈ ಅಪ್ರತಿಮ ಕಲಾವಿದನ ಜೀವ ಉಳಿಸಲು, ನಶಿಸಿ ಹೋಗುತ್ತಿದ್ದ ಕಲೆಯನ್ನು ಉಳಿಸಿದ ಪಬ್ಲಿಕ್ ಟಿವಿಗೆ ಅಭಿನಂದಿಸಿದ್ದಾರೆ. ಚಿಕಿತ್ಸೆಯಿಂದಾಗಿ ಮರುಜನ್ಮ ಪಡೆದ ನಾಗರಾಜ್ ಮತ್ತೆ ಹವ್ಯಾಸ ಮುಂದುವರೆಸಿರೋದು ಚಿತ್ರ ವೀಕ್ಷರಿಗೆ ಸ್ಥಳೀಯರಿಗೆ ಎಲ್ಲರಲ್ಲೂ ಸಂತಸ ಮೂಡಿಸಿದೆ.

  • ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

    ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

    ಗದಗ: 10 ವರ್ಷಗಳ ಹಿಂದೆ ಜಿಲ್ಲೆಯ ಯುವಕ ಅದ್ಭುತ ಕಲಾವಿದ ಹಾಗೂ ಫೇಮಸ್ ಪೇಂಟರ್ ಆಗಿದ್ದ. ಅವರ ಕೈ ಕುಂಚದ ಬರಹಗಳ ನೆನಪುಗಳನ್ನ ಇಂದಿಗೂ ಮರೆಯುವಂತಿಲ್ಲ. ಆದ್ರೆ ಬಡತನ ಕುಟುಂಬದ ಏಳು ಬೀಳಿನ ತೊಳಲಾಟ ದಿಂದ ಬರಹದ ಕೈ ಕುಂಚ ಅವನ ಹಣೆಯ ಬರಹವನ್ನೆ ವಿಧಿ ಅಳುಕಿಸಿ ಅರೆ ಹುಚ್ಚನಂತೆ ಮಾಡಿದೆ. ಆ ಫೇಮಸ್ ಪೇಂಟರ್ ಕೈಗೆ ಮತ್ತೆ ಕುಂಚಕೊಡಲು ಸ್ಥಳೀಯರು ಒಟ್ಟಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಮೊರೆಹೊಗಿದ್ದಾರೆ.

    ಹೌದು. 33 ವರ್ಷದ ಈ ವ್ಯಕ್ತಿಯ ಹೆಸರು ಅರುಣ್ ಸೋಮಪ್ಪ ಟಪಾಲಿ. ಇವರು ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿ. ಸುಮಾರು 10 ವರ್ಷಗಳ ಹಿಂದೆ ರೋಣ ಸುತ್ತಮುತ್ತಲಿನ ಭಾಗದಲ್ಲಿ ಈ ಅರುಣ್ ಟಪಾಲಿ ಫೇಮಸ್ ಪೇಂಟರ್ ಎಂದೆ ಪ್ರಖ್ಯಾತಿಯಾಗಿದ್ದರು. ಈ ಪೇಂಟರ್ ಅರುಣ್ ಕಡೆಯಿಂದ ಶಾಲೆ, ಕಚೇರಿಗಳು, ಅಂಗಡಿಗಳು ಸೇರಿದಂತೆ ಅನೇಕ ಬೋರ್ಡ್ ಗಳು, ಮನೆಗಳಿಗೆ ಬಣ್ಣ ಹಚ್ಚುವ ಮೂಲಕ ಝಗಮಗಿಸುತ್ತಿದ್ದವು.

    ಶಾಲೆಗಳಲ್ಲಿ ನಕಾಶೆ ಬಿಡಿಸುವುದು, ವಾಹನಗಳ ನಂಬರ್ ಪ್ಲೇಟ್ ಬರೆಸಲು, ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಕಲಾ ಚತುರನಾಗಿದ್ದರು. 10 ವರ್ಷಗಳ ಹಿಂದೆ ಇವರ ಕೈ ಕುಂಚದಿಂದ ಬಿಡಿಸಿದ ಚಿತ್ರಗಳು, ಬೋರ್ಡ್ ಗಳ ಛಾಯೆ ಇನ್ನೂ ಮಾಸಿಲ್ಲ. ಅಷ್ಟೊಂದು ಫೇಮಸ್ ಪೇಂಟರ್ ಆಗಿದ್ದರು. ಇವರು ಈ ಹಂತಕ್ಕೆ ತರಲು ಕಾರಣ ಕುಟುಂಬದ ಬಡತನದ ಅಸಹಾಯಕತೆ ಜೊತೆಗೆ ಪ್ರೀತಿ ಮಾಯೇ ಇವರನ್ನು ಅರೆ ಹುಚ್ಚನಂತೆ ಆಗಿರುವುದನ್ನ ಕಂಡು ಸ್ಥಳಿಯರು ಮಮ್ಮಲ ಮರಗುವಂತಾಗಿದೆ.

    ಪೇಂಟರ್ ಅರುಣ್ ಸುಮಾರು 10 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರು ಬಾಲ್ಯದಲ್ಲಿರುವಾಗಲೇ ತಾಯಿ ತೀರಿಕೊಂಡರು. ನಂತರ ಹಿರಿಯ ಸಹೋದರ, ನಂತರ ಸ್ವಲ್ಪ ವರ್ಷಗಳಲ್ಲಿ ಹಿರಿಯ ಸಹೋದರಿ ಮೃತರಾದರು. ಇದೇ ಸಂರ್ಭದಲ್ಲಿ ಪ್ರೀತಿಸಿದ ಹುಡುಗಿಯೂ ಇವರಿಂದ ದೂರವಾದ್ರು. ಹೀಗಾಗಿ ಇವರು ಮಾನಸಿಕ ಸಮತೋಲನ ಕಳೆದುಕೊಂಡು ಅರೆ ಹುಚ್ಚನಾಗಿ ಇಂದಿಗೂ ಬೀದಿ ಬೀದಿ ಅಲೆಯುತ್ತಿದ್ದಾರೆ.

    ಸುಮಾರು 80 ವರ್ಷದ ತಂದೆ ಸೋಮಪ್ಪ ಹರಕು ಮುರುಕಲಿನ ಜೋಪಿಡಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಈ ಮುಪ್ಪಿನ ವಯಸ್ಸಿನಲ್ಲೂ ತಂದೆಯನ್ನು ನೋಡಿಕೊಳ್ಳಲಾಗದಷ್ಟು ಮಾನಸಿಕ ಅಸ್ವಸ್ಥನಾಗಿ ತಿರುಗುತ್ತಿದ್ದಾರೆ. ಇವರಿಗೆ ನನ್ನವರು ತನ್ನವರು ಎಂಬ ಯಾರ ಅರಿವಿಲ್ಲದೆ ಹಸಿದಾಗ ಭಿಕ್ಷೆ ಬೇಡಿ ತಿಂದು, ಬಸ್ ನಿಲ್ದಾಣ, ಯಾವುದಾದರೂ ಅಂಗಡಿ ಮುಂಭಾಗ, ಶಾಲಾ ಮೈದಾನ ಹೀಗೆ ಎಲ್ಲಂದರಲ್ಲಿ ಮಲಗುತ್ತಾ ದಿನಕಳೆಯುತ್ತಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದು, ಅವರು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಇವರ ನೇರವಿಗೆ ಸದ್ಯ ಯಾರು ಇಲ್ಲದಂತಾಗಿದೆ. ಇನ್ನು ಇವರ ಸ್ಥಿತಿನೋಡಿ ಸ್ಥಳಿಯರೆಲ್ಲಾ ಸೇರಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ನೆರವು ಬಯಸಿದ್ದಾರೆ.

    ಬೆಳಕು ಕಾರ್ಯಕ್ರಮ ಮೂಲಕ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿದ್ರೆ, ಖಂಡಿತ ಮೊದಲಿನಂತೆಯೇ ಅರುಣ್ ಫೇಮಸ್ ಪೇಂಟರ್ ಆಗುತ್ತಾನೆ ಅಂತಿದ್ದಾರೆ. ಈ ಕಲಾವಿದನ ಬಾಳಲ್ಲಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಬೆಳಕಾಗಿ ಕಲಾ ಸೌಂದರ್ಯ ಮತ್ತೆ ಅರಳುವಂತೆ ಮಾಡಬೇಕು ಎಂಬುದು ಸ್ಥಳಿಯ ಭಿನ್ನವಾಗಿದೆ. ಅರುಣ್ ಟಪಾಲಿ ಅವರ ಮಾನಸಿಕ ಸುಧಾರಣೆ ಆಗುವವರೆಗೆ ಚಿಕಿತ್ಸೆ ಹಾಗೂ ಇರುವಿಕೆ ನೋಡಿಕೊಳ್ಳಲು ಗಜೇಂದ್ರಗಢ ಪಟ್ಟಣದ `ಬಾಪೂಜಿ ವಿದ್ಯಾಸಂಸ್ಥೆ ಮಂಧಮತಿ ಮಕ್ಕಳ ವಸತಿಯೂತ ವಿಶೇಷ ಶಾಲೆ’ ಯ ಕಾರ್ಯದರ್ಶಿ ರಾಜು ಸೂರ್ಯವಂಶಿ ಎಂಬವರು ಮುಂದಾಗಿರುವುದು ಹೆಮ್ಮೆಯ ಸಂಗತಿ.

    https://www.youtube.com/watch?v=gF9wvwOOZts

  • ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿ- 2 ಲಕ್ಷ ನೀಡಿ ಮೃತದೇಹ ಕೊಟ್ಟು ಕಳಿಸಿದ ಆಸ್ಪತ್ರೆಯ ಸಿಬ್ಬಂದಿ

    ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿ- 2 ಲಕ್ಷ ನೀಡಿ ಮೃತದೇಹ ಕೊಟ್ಟು ಕಳಿಸಿದ ಆಸ್ಪತ್ರೆಯ ಸಿಬ್ಬಂದಿ

    ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿಯಾಗಿರುವ ಘಟನೆ ನಗರದ ಕಸ್ತೂರಿನಗರದ ಛಾಯ ಆಸ್ಪತ್ರೆಯಲ್ಲಿ ನಡೆದಿದೆ.

    ಪೂಜಾ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ದುರ್ದೈವಿ. ಕಳೆದ ಭಾನುವಾರ ಜ್ವರ ಎಂದು ಪೋಷಕರು ಪೂಜಾ ರನ್ನು ಛಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಡೆಂಗ್ಯೂ ಜ್ವರ ಎಂದು ಹೇಳಿ ಆಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರವೇ ಪೂಜಾ ಮೃತಪಟ್ಟಿದ್ದಾರೆ. ಆದರೂ ವೈದ್ಯರು ಐಸಿಯುವಿನಲ್ಲಿಟ್ಟು ಯಾರಿಗೂ ಯುವತಿಯನ್ನ ನೋಡಲು ಬಿಟ್ಟಿಲ್ಲ. ಗುರುವಾರ ಮಧ್ಯಾಹ್ನ ವೈದ್ಯರು ಪೂಜಾ ಮೃತಪಟ್ಟಿರುವ ವಿಚಾರವನ್ನು ತಿಳಿಸಿದ್ದಾರೆ. ಓವರ್ ಡೊಸೇಜ್ ಆಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯುವತಿ ಸಾವಿನಿಂದ ಆಕ್ರೋಶಗೊಂಡು ಆಸ್ಪತ್ರೆಯ ಕಿಟಿಕಿ ಗಾಜು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ್ದಾರೆ.

    ಘಟನೆಯ ಬಗ್ಗೆ ತಿಳಿದು ರಾಮಮೂರ್ತಿನಗರ ಮತ್ತು ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನಂತರ ಅವರ ಮಧ್ಯಸ್ತಿಕೆಯಲ್ಲಿ ಸೆಟಲ್‍ಮೆಂಟ್ ನಡೆದಿದ್ದು, ಆಸ್ಪತ್ರೆಯವರು ಸುಮಾರು 2 ಲಕ್ಷ ರೂ. ಹಣ ಕೊಟ್ಟು ಕೊನೆಗೆ ಮೃತದೇಹವನ್ನು ಕೊಟ್ಟು ಕಳಿಸಿದ್ದಾರೆ.

    ಸೆಟಲ್‍ಮೆಂಟ್ ಆಗೋವರೆಗೂ ಸಂಬಂಧಿಕರು ದೇಹವನ್ನು ತೆಗೆದುಕೊಂಡು ಹೋಗದೇ, ಸೆಟಲ್‍ಮೆಂಟ್ ಆದ ನಂತರ ದೇಹವನ್ನ ತೆಗೆದುಕೊಂಡು ಹೋಗಿದ್ದಾರೆ. ನ್ಯಾಯ ಕೊಡಿಸಬೇಕಾದ ಪೊಲೀಸರೇ ಡೀಲ್ ಮಾಡಿಸಿದ್ದು ವಿಪರ್ಯಾಸವಾಗಿದೆ.