ಮಂಗಳೂರು: ಗ್ಲುಕೋಸ್ ಗಲಾಟೆಯಲ್ಲಿ ಬಡ ರೋಗಿಯೊಬ್ಬರನ್ನು ಮಂಗಳೂರಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ನರ್ಸ್‍ಗಳೇ ಆಸ್ಪತ್ರೆಯಿಂದಲೇ ಹೊರಹಾಕಿದ್ದಾರೆ.
ಶ್ವಾಸಕೋಶ ತೊಂದರೆಯಿಂದ ಬಳಲ್ತಿದ್ದ ಪುತ್ತೂರಿನ ರಾಜಕುಮಾರ್ ಜೂನ್ 28ರಂದು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ನಿತ್ರಾಣ ಹಿನ್ನೆಲೆಯಲ್ಲಿ ದಿನಕ್ಕೆ ಎಂಟು ಬಾಟಲ್ ಗ್ಲೂಕೋಸ್ ನೀಡುವಂತೆ ವೈದ್ಯರು ನರ್ಸ್ ಗಳಿಗೆ ಸೂಚಿಸಿದ್ದರು.
ವೈದ್ಯರು ಹೋದ ಬಳಿಕ ಫ್ರೀ ಸಿಗುತ್ತೆ ಅಂತಾ ಇಷ್ಟೊಂದು ಗ್ಲುಕೋಸ್ ಕೊಡುವುದಾ? ದಿನಕ್ಕೆ ಎರಡು ಗ್ಲೂಕೋಸ್ ಸಾಕು ಅಲ್ಲಿದ್ದ ನರ್ಸ್ ಗಳು ಎಂದಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಚಿಕಿತ್ಸೆ ನಿಲ್ಲಿಸಿದ್ದಲ್ಲದೆ, ಬೆಡ್ಡಿನಲ್ಲಿದ್ದ ರೋಗಿಯನ್ನು ನೇರವಾಗಿ ಸಿರಿಂಜ್ ತೆಗೆಯದೇ ಹೊರಕ್ಕೆ ಕಳುಹಿಸಿದ್ದಾರೆ.
ಇಬ್ಬರು ಸಣ್ಣ ಮಕ್ಕಳು ಮತ್ತು ಪತ್ನಿಯ ಜೊತೆ ಹೊರಬಂದಿರುವ ರೋಗಿ ರಾಜಕುಮಾರ್ ಕುಟುಂಬ ಕಂಗಾಲಾಗಿದ್ದು, ವೈದ್ಯಾಧಿಕಾರಿ ಮತ್ತು ನರ್ಸ್ ಗಳ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ಸರ್ಕಾರಿ ಆಸ್ಪತ್ರೆ ಆಗಿದ್ರೂ ಸ್ಕ್ಯಾನಿಂಗ್, ಎಕ್ಸ್ ರೇ ಸಹಿತ ಔಷಧಿಗಳಿಗೂ ಹಣ ಪಡೆಯುತ್ತಿದ್ದಾರೆ. ಮೆಡಿಕಲ್ ಗೆ ಚೀಟಿ ಬರೆದುಕೊಟ್ಟು ಬಡ ರೋಗಿಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಬೆಂಗಳೂರು: ಪಿತ್ತಕೋಶಕ್ಕೆ ಸ್ಟಂಟ್ ಅಳವಡಿಸಿ ಆರು ತಿಂಗಳು ಕಳೆದ ಹಿನ್ನೆಲೆಯಲ್ಲಿ ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಜನರಲ್ ಚೆಕ್ ಅಪ್ ಗಾಗಿ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಮುಂಜಾನೆ ಆಗಮಿಸಿದ ಶ್ರೀಗಳು, ಕಾರಿನಿಂದ ಇಳಿದು ವ್ಹೀಲ್ ಚೇರ್ ನಂತಹ ಸೌಲಭ್ಯ ನಿರಾಕರಿಸಿ ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋದರು. ಜನವರಿ 27 ರಂದು ಬಿಜಿಎಸ್‍ಗೆ ದಾಖಲಾಗಿದ್ದ ಶ್ರೀಗಳಿಗೆ ಮೂರು ಸ್ಟಂಟ್ ಅಳವಡಿಸಲಾಗಿತ್ತು. ಅದಕ್ಕೂ ಮುನ್ನ 5 ಸ್ಟಂಟ್ ಸೇರಿ ಒಟ್ಟು 8 ಸ್ಟಂಟ್ ಅಳವಡಿಸಲಾಗಿದೆ.
ಇದೀಗ ಸ್ಟಂಟ್ ಅಳವಡಿಸಿದ ಆರು ತಿಂಗಳಾದ ಕಾರಣ ಜನರಲ್ ಚೆಕ್ ಅಪ್ ಗಾಗಿ ಶ್ರೀಗಳು ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದು, ಡಾ. ರವೀಂದ್ರ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸುತ್ತಿದ್ದಾರೆ. ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ಜೊತೆ ಕಿರಿಯ ಶ್ರೀಗಳು ಕೂಡ ಆಸ್ಪತ್ರೆಗೆ ಆಗಮಿಸಿದ್ದು, ಮಠದಿಂದಲ್ಲೇ ಶ್ರೀಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ತಪಾಸಣೆ ಪ್ರಾರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕರೆದುಕೊಂಡು ಬಂದಿದ್ದೇವೆ ಅಂತ ಸಿದ್ದಗಂಗಾ ಮಠದ ಕಿರಿಯ ಶ್ರೀ ಗಳು ಹೇಳಿದ್ದಾರೆ. ಸ್ವಲ್ಪ ಆರೋಗ್ಯದಲ್ಲಿ ಏರುಪೇರು ಇತ್ತು. ಅದಕ್ಕಾಗಿ ಅವರನ್ನು ಕರೆದುಕೊಂಡು ಬಂದಿದ್ದೇವೆ. ಅವರು ಟೆಸ್ಟ್ ಗೂ ಒಪ್ಪಿಲ್ಲ. ಈಗ ಟೆಸ್ಟ್ ಗಳು ನಡೀತಾ ಇದೆ. ಒಟ್ಟು ಐದರಿಂದ ಆರು ವೈದ್ಯರುಗಳ ಟೀಮ್ ಅವರನ್ನು ನೋಡಿಕೊಳ್ಳುತ್ತಿದ್ದೇವೆ. ಸ್ಟಂಟ್ ಶಾಶ್ವತ ಅಲ್ಲ ಆರೇಳು ತಿಂಗಳು ಅಷ್ಟೆ ಬರೋದು. ಸ್ಟಂಟ್ ವ್ಯತ್ಯಾಸ ಕಂಡು ಬಂದಿರೋದ್ರಿಂದ ಅಲ್ಟ್ರಾಸೌಂಡ್ ಕೂಡ ಮಾಡಲಾಗುತ್ತೆ. ಈಗಾಗಲೇ ರಕ್ತ ಪರೀಕ್ಷೆ ಇಸಿಜಿಗಳನ್ನು ಮಾಡಲಾಗುತ್ತಿದೆ. ರಿಪೋರ್ಟ್ ಬಂದ ಮೇಲೆ ಆಸ್ಪತ್ರೆಗೆ ದಾಖಲಾಗುವ ಬಗ್ಗೆ ಹಾಗೂ ಮುಂದಿನ ಟ್ರೀಟ್ ಮೆಂಟ್ ಬಗ್ಗೆ ಚಿಂತನೆ ನಡೆಸಲಿದ್ದೇವೆ ಅಂರ ವೈದ್ಯ ಡಾ. ರವೀಂದ್ರ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು: ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪಥ್ಯಾಹಾರದಲ್ಲಿ ತೊಡಗಿದ್ದಾರೆ.
10 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿರುವ ಸಿದ್ದರಾಮಯ್ಯ ಅಲ್ಲಿ ಎರಡು ದಿನಗಳನ್ನು ಕಳೆದಿದ್ದಾರೆ. ಸದಾ ತಿರುಗಾಟದಿಂದ ಶುಗರ್, ಬಿಪಿ ಹೆಚ್ಚಿಸಿಕೊಂಡಿದ್ದ 69ರ ಹರೆಯದ ಸಿದ್ದುಗೆ ಈಗ ಮಾಂಸಾಹಾರ ಸಂಪೂರ್ಣ ವರ್ಜ್ಯ.
ಬೆಳಗ್ಗೆ 6 ಗಂಟೆಗೆ ಎದ್ದು ಯೋಗ, ಪ್ರಾಣಾಯಾಮ, 9 ಗಂಟೆಗೆ ರಾಗಿ ಗಂಜಿ. 11 ಗಂಟೆಗೆ ಹಸಿ ತರಕಾರಿಯೇ ಮಧ್ಯಾಹ್ನದ ಊಟ. ಹಸಿ ತರಕಾರಿ, ಮೊಳಕೆ ಕಾಳು, ಸಲಾಡ್ ಮತ್ತು ಮಜ್ಜಿಗೆ ಮಾತ್ರ. ಉಪ್ಪು, ಹುಳಿ, ಖಾರ ಇಲ್ಲ. ಅನ್ನವೂ ಇಲ್ಲದ ಊಟ. ಸಂಜೆ 6.30ಕ್ಕೆ ರಾತ್ರಿ ಊಟ. ಬೇಯಿಸಿದ ತರಕಾರಿ, ಎರಡು ಚಪಾತಿ, ಮಜ್ಜಿಗೆ, ಪಪ್ಪಾಯಿ ಅಷ್ಟೇ.
ಇದರ ನಡುವೆ, ವಿಶ್ರಾಂತಿ, ಜಲ ಚಿಕಿತ್ಸೆ, ಹೈಡ್ರೋಥೆರಪಿ, ಮಸಾಜ್ ಇರುತ್ತದೆ. ಯಾರನ್ನೂ ಭೇಟಿಯಾಗಲಿಕ್ಕಿಲ್ಲ. ರಾತ್ರಿ ಹತ್ತು ಗಂಟೆಗೆ ನಿದ್ದೆ. ಸದಾ ಗಿಜಿಗುಡುತ್ತಿದ್ದ ಬೆಂಬಲಿಗರ ನಡುವಿದ್ದ ಸಿದ್ದರಾಮಯ್ಯ, ಸಂಪೂರ್ಣ ಬದಲಾಗಿದ್ದಾರೆ. ಕಳೆದ ವರ್ಷ ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋದರೆಂಬ ಅಪವಾದ ಹೊತ್ತುಕೊಂಡಿದ್ದ ಸಿದ್ದು ಈಗ ಅದೇ ಧರ್ಮಸ್ಥಳ ಬಳಿಯ ಚಿಕಿತ್ಸಾಲಯದಲ್ಲಿ ದೇಹ ದಂಡನೆ ಮಾಡಿಕೊಳ್ತಿರೋದು ಕಾಕತಾಳೀಯ.
ಬೀದರ್: 20 ಅಡಿ ಆಳದ ತೆರೆದ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ರಾಷ್ಟ್ರ ಪಕ್ಷಿ ನವಿಲನ್ನು ಬೀದರ್ ತಾಲೂಕಿನ ಚಿಟ್ಟಾವಾಡಿಯ ರೈತರೊಬ್ಬರು ರಕ್ಷಣೆ ಮಾಡಿ ಮಾನವೀಯತೆ ತೋರಿಸಿದ್ದಾರೆ.
ನವಿಲು ಕಣ್ಣು ಕಾಣದೆ ತೆರೆದ ಬಾವಿಗೆ ಬಿದ್ದಿದೆ. ಆಹಾರವಿಲ್ಲದೆ ಇಂದು ಮುಂಜಾನೆಯಿಂದ ಬಾವಿಯಲ್ಲಿ ಒದ್ದಾಡುತ್ತಿತ್ತು. ಬಾವಿಗೆ ಬಿದ್ದಿದ್ದ ರಾಷ್ಟ್ರ ಪಕ್ಷಿಯನ್ನು ರೈತ ಮಹಮ್ಮದ್ ಜಾಫರ್ ನೋಡಿದ್ದಾರೆ.
ನಂತರ ಸ್ಥಳಿಯರಿಗೆ ಕರೆ ಮಾಡಿ, ಹಗ್ಗದ ಸಹಾಯದಿಂದ ಬಾವಿಯ ಕೆಳಗೆ ಇಳಿದಿದ್ದಾರೆ. ಬಳಿಕ ಬಾವಿಯಲ್ಲಿದ್ದ ನವಿಲನ್ನು ಹಗ್ಗದ ಸಹಾಯದಿಂದ ತನ್ನ ಸೊಂಟಕ್ಕೆ ಕಟ್ಟಿಕೊಂಡು ಮೇಲೆ ಎತ್ತಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ನವಿಲನ್ನು ರಕ್ಷಣೆ ಮಾಡಿ ರೈತ ಜಾಫರ್ ಪಶು ಇಲಾಖೆಯ ಅಧಿಕಾರಿಗಳ ಬಳಿಗೆ ತಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು 10 ದಿನಗಳವರೆಗೆ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ.
ಧರ್ಮಸ್ಥಳ ಶಾಂತಿವನದ ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದರಾಮಯ್ಯ ಇಂದಿನಿಂದ 10 ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ಹೀಗಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿದ್ದರಾಮಯ್ಯ, ನನಗೇನು ಆರೋಗ್ಯ ತೊಂದರೆ ಇಲ್ಲ. ಸಾಮಾನ್ಯ ಚಿಕಿತ್ಸೆಗಾಗಿ ಆಗಮಿಸಿದ್ದೇನೆ. 10 ದಿನ ಸಾಮಾನ್ಯ ಚಿಕಿತ್ಸೆ ನಡೆಯಲಿದೆ ಅಂತಾ ಹೇಳಿದ್ದಾರೆ.
ಇದೇ ವೇಳೆ ಇನ್ನು ಒಂದು ವರ್ಷ ನಮ್ಮ ಸರ್ಕಾರ ಇರುತ್ತದೆ. ನನ್ನನ್ನು ಯಾರು ಟಚ್ ಮಾಡಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಕುಮಾರಸ್ವಾಮಿ ಅವರ ಬಳಿಯೇ ಪ್ರಶ್ನೆ ಕೇಳಿ ಎಂದು ಹೇಳಿದ್ದಾರೆ.
ಇನ್ನು ಸುಳ್ಯದ ಮಡಪ್ಪಾಡಿಯಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಕ್ಸಲ್ ಕೂಬಿಂಬ್ ಬಗ್ಗೆ ದಕ್ಷಿಣ ಕನ್ನಡ ಎಸ್.ಪಿ ರವಿಕಾಂತೇಗೌಡರಿಂದ ಮಾಹಿತಿ ಪಡೆದಿದ್ದಾರೆ.
ಬೆಂಗಳೂರು: ಜನಪ್ರತಿನಿಧಿಗಳು ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಹೈಟೆಕ್ ಆಸ್ಪತ್ರೆಗೆ ಹೋಗಿ ಕೋಟಿ ಕೋಟಿ ಆರೋಗ್ಯ ವಿಮೆಯನ್ನು ಸರ್ಕಾರದ ಕಡೆಯಿಂದ ಪಾವತಿ ಮಾಡಿಸಿಕೊಳ್ಳುವಂತಿಲ್ಲ. ಯಾಕೆಂದರೆ ಕರ್ನಾಟಕದಲ್ಲಿ ಮಾದರಿ ಹೆಲ್ತ್ ಸ್ಕೀಂ ಬರಲಿದೆ.
ಜುಲೈ 1ರಿಂದ ಯೂನಿವರ್ಸಲ್ ಹೆಲ್ತ್ ಸ್ಕೀಂ ಜಾರಿಗೆ ಬರಲಿದೆ. ತುರ್ತು ಸೇವೆ ಹೊರತುಪಡಿಸಿ, ಉಳಿದೆಲ್ಲ ಆರೋಗ್ಯ ಸಮಸ್ಯೆಗೆ ಸರ್ಕಾರಿ ಆಸ್ಪತ್ರೆ ಕಡೆ ಜನಸಾಮಾನ್ಯರು ಹಾಗೂ ಜನಪ್ರತಿನಿಧಿಗಳು ತೆರಳಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಅಲಭ್ಯವಿದ್ದಲ್ಲಿ, ವೈದ್ಯರು ಶಿಫಾರಸ್ಸು ಪತ್ರ ನೀಡಿದರೆ ಮಾತ್ರ ಖಾಸಗಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಈ ಸ್ಕೀಂಗೆ ಆರೋಗ್ಯ ಸಚಿವರಾಗಿರುವ ಶಿವಾನಂದ ಪಾಟೀಲರಿಂದಲೂ ಅನುಮೋದನೆ ಸಿಕ್ಕಿದೆ.
ವೈದ್ಯರು ಸುಖಾಸುಮ್ಮನೆ ಶಿಫಾರಸ್ಸು ಮಾಡಿದರೆ ಅವರ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಆಗಸ್ಟ್ ವರೆಗೆ ಯಶಸ್ವಿನಿ, ಆರೋಗ್ಯ ಸಂಜೀವಿನಿ ಸೇರಿದಂತೆ ಆರೋಗ್ಯ ವಿಮೆ ಕಾರ್ಡ್ ಗಳಲ್ಲಿ ಸೇವೆ ಪಡೆದುಕೊಳ್ಳಬಹುದು. ತದನಂತರ ಈ ಹೆಲ್ತ್ ಕಾರ್ಡ್ ಸ್ಥಗಿತಗೊಳ್ಳಲಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಯೂನಿವರ್ಸಲ್ ಹೆಲ್ತ್ ಕಾರ್ಡ್ ವಿತರಣೆ ಮಾಡಲಿದ್ದು, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡು ದಾರರಿಗೆ ಶೇ.30 ರಷ್ಟು ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಈಗಾಗಲೇ 14 ಜಿಲ್ಲೆಗಳಲ್ಲಿ ಕಾರ್ಡ್ ವಿತರಣೆ ಕೆಲಸ ಶುರುವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಅನುಮೋದನೆಗೊಂಡಿರುವ ಈ ಹೊಸ ಕಾಯ್ದೆಯನ್ನು ಕುಮಾರಸ್ವಾಮಿ ಸರ್ಕಾರವೂ ಮುಂದುವರೆಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಹದಗೆಟ್ಟಿರುವ ಸಮಯದಲ್ಲಿ ಇದನ್ನು ನಿರ್ವಹಿಸಲು ಸಾಧ್ಯನಾ ಅನ್ನುವ ಪ್ರಶ್ನೆ ಇದೀಗ ಮೂಡಿದೆ.
ಹಾವೇರಿ: ಜಮೀನಿನಲ್ಲಿಯೇ ಅನಾಥವಾಗಿ ನರಳಾಡುತ್ತಿದ್ದ ವೃದ್ಧೆಯನ್ನ ಕಂಡು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿರುವ ಘಟನೆ ಹಾವೇರಿ ನಗರದ ಹೊರವಲಯದಲ್ಲಿರುವ ಹಗ್ಗೇರಿ ಕೆರೆಯ ಬಳಿ ನಡೆದಿದೆ.
ದ್ಯಾಮವ್ವ ಗೌಳಿ(98) ನರಳಾಡುತ್ತಿದ್ದ ವೃದ್ಧೆ. ಇವರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದ ನಿವಾಸಿ ಎನ್ನಲಾಗಿದೆ. ನಗರದ ಜಮೀನಿನಲ್ಲಿ ದ್ಯಾಮವ್ವ ನರಳಾಡುತ್ತಾ ಬಿದ್ದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಆಂಬುಲೆನ್ಸ್ ಸಿಬ್ಬಂದಿ ಜಮೀನಿನಲ್ಲಿ ವೃದ್ಧೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅಸ್ವಸ್ಥ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ವೃದ್ಧೆಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಅಂತ ವೈದ್ಯರು ತಿಳಿಸಿದ್ದಾರೆ.
ವೃದ್ಧೆಯನ್ನ ಸಂಬಂಧಿಕರೇ ಬಿಟ್ಟು ಹೋಗಿರುವ ಶಂಕೆಯನ್ನ ಸ್ಥಳೀಯರು ವ್ಯಕ್ತಪಡಿಸಿದ್ದು, ಮಕ್ಕಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಾವೇರಿ: ಇತ್ತೀಚಿನ ದಿನಗಳಲ್ಲಿ ಆಗತಾನೇ ಜನಿಸಿದ ಕಂದಮ್ಮಗಳನ್ನ ಚರಂಡಿಗಳಲ್ಲಿ ಎಸೆದು ಹೋಗುವ ಘಟನೆಗಳನ್ನ ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಮೂಕಪ್ರಾಣಿ ಹಸುವೊಂದು ಚಿಕಿತ್ಸೆಗಾಗಿ ಸ್ಥಳೀಯರು ತನ್ನ ಕರುವನ್ನು ಕರೆದೊಯ್ಯುತ್ತಿದ್ದಾಗ ಅವರನ್ನೇ ಹಿಂಬಾಲಿಸಿದ ಮನಕಲಕುವ ಮತ್ತೊಂದು ಘಟನೆ ಹಾವೇರಿಯಲ್ಲಿ ನಡೆದಿದೆ.
ಬುಧವಾರ ರಾತ್ರಿ ಹಾವೇರಿ ನಗರದ ವಿದ್ಯಾನಗರದ ಪ್ರಜ್ವಲ್ ಬೇಕರಿ ಬಳಿ ಈ ಘಟನೆ ನಡೆದಿದೆ. ಬಿಡಾಡಿ ಆಕಳಿನ ತಾಯಿ ಹೃದಯ ಪ್ರೀತಿ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕರು ಕಾಲು ನೋವಿನಿಂದ ನಿತ್ರಾಣಗೊಂಡು ಬಿದ್ದು ಹೊರಳಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕರುವಿಗೆ ಹಾಲು ಕುಡಿಸಿ ಚಿಕಿತ್ಸೆಗಾಗಿ ಸಾಗಿಸಿದ್ದಾರೆ. ಈ ವೇಳೆ ಅದರ ತಾಯಿ ಜನರನ್ನೇ ಹಿಂಬಾಲಿಸಿಕೊಂಡು ಓಡಿದೆ. ಇದನ್ನು ಓದಿ: ಚಿಕಿತ್ಸೆಗಾಗಿ ಕರುವನ್ನು ವಾಹನದಲ್ಲಿ ಕರೆದೊಯ್ದರೆ, ಆಸ್ಪತ್ರೆವರೆಗೂ ಓಡೋಡಿ ಬಂತು ತಾಯಿ ಹಸು
ಏಳೆಂಟು ದಿನಗಳ ಹಿಂದೆ ಆಕಳು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಇದೀಗ ಕರುವಿನ ಕಾಲಿಗೆ ಗಾಯವಾಗಿ ನಿತ್ರಾಣಗೊಂಡು ಬಿದ್ದಿದೆ. ಸದ್ಯ ಸ್ಥಳೀಯರು ಕರುವಿಗೆ ಹಾಲು ಕುಡಿಸಿ, ಚಿಕಿತ್ಸೆ ನೀಡಿ ವಾರ್ತಾ ಇಲಾಖೆ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ. ಬಿಡಾಡಿ ಆಕಳಿನ ತಾಯಿ ಹೃದಯದ ಪ್ರೀತಿ ಕಂಡು ಸ್ಥಳೀಯ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಇದೇ ಜಿಲ್ಲೆಯ ಜೆ.ಪಿ ವೃತ್ತದ ಬಳಿ ಇಂಥದ್ದೇ ಒಂದು ಘಟನೆ ನಡೆದಿದ್ದು, ತಾಯಿ ಆಕಳಿನ ವೇದನೆ ಸ್ಥಳೀಯರಲ್ಲಿ ಕಣ್ಣೀರು ತರಿಸಿತ್ತು.
ಮುಂಬೈ: ಟಿಬಿ ಯಿಂದ ಬಳಲುತ್ತಿರುವ ‘ವೀರ್ ಗತಿ’ ಚಿತ್ರದ ನಟಿ ಪೂಜಾ ದದ್ವಾಲ್ ವಿಡಿಯೋಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಪೂಜಾ ದದ್ವಾಲ್ ವಿಡಿಯೋ ಮೂಲಕ ಸಲ್ಮಾನ್ ಹತ್ತಿರ ಸಹಾಯ ಕೇಳಿದ್ದು, ಈಗ ಸಲ್ಮಾನ್ ಇದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ವರದಿಗಳ ಪ್ರಕಾರ ಸಲ್ಮಾನ್ ಪುಣೆಯಲ್ಲಿ ನಡೆದ ‘ದಿ ಬ್ಯಾಂಗ್ ಟೂರ್’ ಕನ್ಫರೆನ್ಸ್ ನಲ್ಲಿದ್ದಾಗ ಪೂಜಾ ಅವರ ಆರೋಗ್ಯದ ಸ್ಥಿತಿ ತಿಳಿದು ದುಃಖ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಪೂಜಾ ಸಹಾಯಕ್ಕಾಗಿ ತಂಡವೊಂದನ್ನು ಆಕೆ ಇರುವ ಸ್ಥಳಕ್ಕೆ ಕಳುಹಿಸಿದ್ದೇನೆ. ಅಷ್ಟೇ ಅಲ್ಲದೇ ಪೂಜಾ ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ. ಸದ್ಯ ಪೂಜಾ ಅವರ ಚಿಕಿತ್ಸೆಗೆ 50 ಸಾವಿರ ರೂ. ಯನ್ನು ಕಳುಹಿಸಿಕೊಟ್ಟಿದ್ದೇನೆ. ಅವಶ್ಯಕತೆ ಇದ್ದರೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿಸುತ್ತೇನೆ ಎಂದು ನಟ ಸಲ್ಮಾನ್ ಖಾನ್ ತಿಳಿಸಿದ್ದಾರೆ.
ಪೂಜಾ 90ರ ದಶಕದ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆ ‘ವೀರ್ ಗತಿ’ ಚಿತ್ರದಲ್ಲಿ ನಟಿಸಿದ್ದರು. ಪೂಜಾ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದರು.
ಭೋಜ್‍ಪುರಿ ನಟ ರವಿ ಕಿಶನ್ ಈ ಹಿಂದೆ ಪೂಜಾ ಜೊತೆ ನಟಿಸಿದ್ದರು. ಅವರು ಹೈದರಾಬಾದ್‍ನಲ್ಲಿ ಎಂಎಲ್‍ಎ ಚಿತ್ರದಲ್ಲಿ ಬ್ಯುಸಿಯಾಗಿದ್ದು, ತನ್ನ ಪರಿಚಯಸ್ಥರಿಂದ ಹಣ್ಣು ಹಾಗೂ ಹಣವನ್ನು ಪೂಜಾ ಗೆ ಕಳುಹಿಸಿಕೊಟ್ಟಿದ್ದರು. ವಿನಯ್ ಲಾಡ್ ನಿರ್ದೇಶನದಲ್ಲಿ ರವಿ ಕಿಶನ್ ಹಾಗೂ ಪೂಜಾ ದದ್ವಾಲ್ ನಟಿಸಿದ್ದು, ಈ ಹಿಂದೆ ರವಿ ಕಿಶನ್ ಹಲವರಿಗೆ ಈ ರೀತಿ ಸಹಾಯ ಮಾಡಿದ್ದರು ಎಂದು ರವಿಯ ಪರಿಚಯಸ್ಥರು ತಿಳಿಸಿದ್ದರು.
ಕೆಲವು ದಿನಗಳ ಹಿಂದೆ ಪೂಜಾ, ನಾನು ಸುಮಾರು ಬಾರಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಮುಂಬೈನ ಶಿವಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು.
ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದು 6 ತಿಂಗಳ ಹಿಂದೆ ನನಗೆ ತಿಳಿಯಿತು. ನಾನು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಸಹಾಯ ಕೇಳಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರು ನನ್ನ ಈ ವಿಡಿಯೋ ನೋಡಿದರೆ ಸಹಾಯ ಮಾಡಬಹುದೆಂಬ ಆಶಯವಿದೆ. ಕಳೆದ 15 ದಿನಗಳಿಂದ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಪೂಜಾ ಹೇಳಿದ್ದರು. ಇದನ್ನೂ ಓದಿ: ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!
ನಾನು ಟಿಬಿ ಕಾಯಿಲೆಗೆ ತುತ್ತಾಗುವ ಮೊದಲು ಗೋವಾದ ಕೆಸಿನೋದಲ್ಲಿ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಹತ್ತಿರ ಹಣವಿಲ್ಲ ಹಾಗೂ ಒಂದು ಕಪ್ ಟೀ ಕುಡಿಯಲು ನಾನು ಇನ್ನೊಬ್ಬರ ಹತ್ತಿರ ಹಣ ಕೇಳುತ್ತಿದ್ದೇನೆ ಎಂದು ನಟಿ ಪೂಜಾ ವಿಡಿಯೋದಲ್ಲಿ ತಿಳಿಸಿದ್ದರು.
ಪೂಜಾ ಆರೋಗ್ಯದ ಸಮಸ್ಯಯಿಂದ ಬಳಲುತ್ತಿರುವುದನ್ನು ನೋಡಿ ಆಕೆಯ ಪತಿ ಹಾಗೂ ಮಕ್ಕಳು ಆಕೆಯನ್ನು ಬಿಟ್ಟು ದೂರ ಹೋಗಿದ್ದಾರೆ ಎಂದು ನಟಿಯ ಹತ್ತಿರದವರು ತಿಳಿಸಿದ್ದರು. ಪೂಜಾ ವೀರ್ ಗತಿ ಚಿತ್ರ ಸೇರಿದಂತೆ ಹಿಂದೂಸ್ತಾನ್ ಹಾಗೂ ಸಿಂಧೂರ್ ಸೌಗಂಧ್ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!
ಬೆಳಗಾವಿ: ನಿಷ್ಠೆ ಅಂದರೆ ನಾಯಿ ಎಂದು ಥಟ್ಟನೆ ಹೇಳುತ್ತಾರೆ. ಆದರೆ ಇಲ್ಲೊಂದು ಕಡೆ ವರ್ಷಗಟ್ಟಲೆ ಸ್ವಾಮಿನಿಷ್ಠೆ ಮೆರೆದ ನಾಯಿಗೆ ಕ್ರೂರ ಶಿಕ್ಷೆ ಕೊಡಲಾಗಿದೆ.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಹೃದಯವಿದ್ರಾವಕ ಘಟನೆ ನಡೆದಿದ್ದು, ಅನಾರೋಗ್ಯಕ್ಕೆ ತುತ್ತಾದ ಶ್ವಾನವನ್ನು ಅದರ ಮಾಲೀಕ ಬೈಕ್ ಗೆ ಕಟ್ಟಿ ಒಂದು ಕಿಲೋಮೀಟರ್ ಗಿಂತ ಹೆಚ್ಚು ದೂರ ಎಳೆದೊಯ್ಯುವ ಮೂಲಕ ಅಮಾನವೀಯತೆ ಮೆರೆದಿದ್ದಾನೆ.
ಜೀವಂತ ನಾಯಿಯನ್ನು ಎಳೆದೊಯ್ಯುತ್ತಿದ್ದ ಘಟನೆ ನೋಡಿ ಶ್ವಾನ ಪ್ರಿಯರು ಅದರ ರಕ್ಷಣೆ ಮಾಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ನಾಯಿಗೆ ಚಿಕಿತ್ಸೆ ಕೊಡಿಸಿ ಗುಣಮುಖವಾಗಿಸುವ ಬದಲು ಹೀಗೆ ಎಳೆದೊಯ್ದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಪ್ರಿಯರಿಂದ ಆಕ್ರೋಶವ್ಯಕ್ತವಾಗಿದ್ದು, ನಾಯಿ ಮಾಲೀಕ ಯಾರೇ ಆಗಿದ್ದರೂ ಅವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.