Tag: treatment

  • ಮಾತು ಬಾರದ, ಕಿವಿ ಕೇಳದ ಮಕ್ಕಳಿಗೆ ಬೇಕಿದೆ ಸಹಾಯ

    ಮಾತು ಬಾರದ, ಕಿವಿ ಕೇಳದ ಮಕ್ಕಳಿಗೆ ಬೇಕಿದೆ ಸಹಾಯ

    ಯಾದಗಿರಿ: ಗಾರೆ ಕೆಲಸ ಮಾಡುವ ಯಾದಗಿರಿ ತಾಲೂಕಿನ ಬಿಳಿಗ್ರಾಮದ ನಿವಾಸಿಗಳಾದ ಆಂಜನೇಯ ಮತ್ತು ಆಂಜನಮ್ಮ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಭರತನಿಗೆ 6 ವರ್ಷ, ಕಿರಿಯ ಮಲ್ಲಿಕಾರ್ಜುನನಿಗೆ 4 ವರ್ಷ. ಆದ್ರೆ ಇಬ್ಬರಿಗೂ ಮಾತು ಬರಲ್ಲ, ಕಿವಿಯೂ ಕೇಳುವುದಿಲ್ಲ.

    ತಂದೆ ಆಂಜನೇಯ ಗಾರೆ ಕೆಲಸ ಮಾಡಿ ಬಂದ ಕೂಲಿ ಹಣದಿಂದ ಜೀವನ ನಡೆಸುತ್ತಿದ್ದಾರೆ. ಮನೆಯಲ್ಲಿ ಪೋಷಕರ ಮಾತುಗಳು ಕೇಳದೇ ಮಂಕಾಗಿ ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಸುಮ್ಮನೆ ಕುಳಿತಿರೋದನ್ನು ಕಂಡು ಮಮನೊಂದ ಆಂಜನೇಯ ಅವರು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಕ್ಕಳು ಹುಟ್ಟುತ್ತಲೇ ಕಿವುಡು-ಮೂಕರಾಗಿದ್ದರೆಂದು ವೈದ್ಯರು ತಿಳಿಸಿದ್ದಾರೆ. ಈ ಮಾತನ್ನು ಕೇಳಿ ಪೋಷಕರಿಗೆ ಸಿಡಿಲು ಬಡಿದಂತಾಗಿದೆ.

    ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಲವು ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಆಗುತ್ತಿಲ್ಲ. ಕಿವುಡ-ಮೂಕ ಮಕ್ಕಳ ಪೋಷಣೆ ಹೆತ್ತವರಿಗೆ ತಿಳಿಯದಾಗಿದ್ದು, ಮಕ್ಕಳ ವರ್ತನೆಗೆ ತಂದೆ-ತಾಯಿ ಹೊಂದಿಕೊಂಡು ಹೋಗುತ್ತಿದ್ದಾರೆ. ವೈದ್ಯರು ಕಿವಿ ಕೇಳುವ ಯಂತ್ರ ಹಾಕಿದ್ರೆ ಮಕ್ಕಳಿಗೆ ಕಿವಿ ಕೇಳುತ್ತೆ ಎಂದಿದ್ದಾರೆ. ಒಂದು ಕಿವಿ ಕೇಳುವ ಯಂತ್ರಕ್ಕೆ ಸುಮಾರು 50 ರಿಂದ 60 ಸಾವಿರ ರೂಪಾಯಿ ಖರ್ಚಾಗುತ್ತದೆ.

    ಕೂಲಿ ಕೆಲಸ ಮಾಡಿ ಇಡೀ ಸಂಸಾರದ ಜವಬ್ದಾರಿಯನ್ನು ಹೊತ್ತಿರುವ ತಂದೆಗೆ ಇದು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ನಮ್ಮ ಮಾತು ಕೇಳುವಂತೆ ಮಾಡಿ, ಕಿವಿ ಕೇಳುವ ಯಂತ್ರ ಕೊಡಿಸಿ. ಅವರ ಶಿಕ್ಷಣಕ್ಕೆ ನೆರವಾಗಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=F-cDEcS86Mg

  • ಬಿಸಿಯೂಟ ತಯಾರಿಸುವ ವೇಳೆ ಕುಕ್ಕರ್ ಸ್ಫೋಟ!

    ಬಿಸಿಯೂಟ ತಯಾರಿಸುವ ವೇಳೆ ಕುಕ್ಕರ್ ಸ್ಫೋಟ!

    ಚಾಮರಾಜನಗರ: ಬಿಸಿಯೂಟ ತಯಾರಿಸುವ ವೇಳೆ ಕುಕ್ಕರ್ ಸ್ಫೋಟಗೊಂಡ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಹಾಗೂ ಅಡುಗೆ ಸಹಾಯಕಿ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕೆ.ಗುಂಡಾಪುರದಲ್ಲಿ ಸಂಭವಿಸಿದೆ.

    ಗುಂಡಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮಾಡುವ ವೇಳೆ ಆಕಸ್ಮಿಕವಾಗಿ ಕುಕ್ಕರ್ ಸ್ಫೋಟಗೊಂಡಿದೆ. ಇದರಿಂದ 7 ನೇ ತರಗತಿ ವಿದ್ಯಾರ್ಥಿನಿ ರಾಜೇಶ್ವರಿ ಹಾಗೂ ಅಡುಗೆ ಸಹಾಯಕಿ ಮಹದೇವಮ್ಮಗೆ ಗಂಭೀರವಾಗಿ ಗಾಯಗಳಾಗಿವೆ. ಅಡುಗೆ ಮಾಡುವ ವೇಳೆ ರಾಜೇಶ್ವರಿ ಬೆಳಗಿನ ಹಾಲು ಪಡೆಯಲು ಅಡುಗೆ ಮನೆಗೆ ಹೋಗಿದ್ದಾಳೆ. ಈ ವೇಳೆ ಕುಕ್ಕರ್ ಸ್ಫೋಟಗೊಂಡಿದೆ.

    ಈ ಘಟನೆಯಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಯಭೀತರಾಗಿದ್ದಾರೆ. ಸ್ಥಳಕೆ ಬಿಇಓ ಸ್ವಾಮಿ ಭೇಟಿ ನೀಡಿದ್ದು, ವಿದ್ಯಾರ್ಥಿನಿಯ ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ವಿದ್ಯಾರ್ಥಿನಿ ಹಾಗೂ ಅಡುಗೆ ಸಹಾಯಕಿ ಇಬ್ಬರನ್ನು ಕಾಮಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಕಾಯಿಲೆಗೆ ತುತ್ತಾದ ಮಕ್ಕಳಿಗೆ ಸಹಾಯ ಮಾಡುವಂತೆ ಮನವಿ – 5 ಲಕ್ಷ ರೂ. ನೀಡಲು ಸಿಎಂ ಸೂಚನೆ

    ಕಾಯಿಲೆಗೆ ತುತ್ತಾದ ಮಕ್ಕಳಿಗೆ ಸಹಾಯ ಮಾಡುವಂತೆ ಮನವಿ – 5 ಲಕ್ಷ ರೂ. ನೀಡಲು ಸಿಎಂ ಸೂಚನೆ

    ಬೆಂಗಳೂರು: ಕುಟುಂಬವೊಂದು ಕಾಯಿಲೆಗೆ ತುತ್ತಾದ ಮಕ್ಕಳ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ಸಹಾಯ ಕೇಳಿದ್ದು, ತಕ್ಷಣ ಅವರಿಗೆ 5 ಲಕ್ಷ ರೂ. ಪರಿಹಾರ ಧನವನ್ನು ನೀಡುವಂತೆ ಸೂಚಿಸಿದ್ದಾರೆ.

    ಸವದತ್ತಿಯ ದೀಪಾ ಹಾಗೂ ಯಂಕಪ್ಪ ಪೂಜಾರಿಯ ಇಬ್ಬರು ಮಕ್ಕಳು ಅತಿ ಅಪರೂಪವಾದ ಜನಟಿಕ್ ಕಾಯಿಲೆ (ಎಪಿಡರ್ ಮುಲ್ಲಾಯಿಸಿಸ್ ಬುಲ್ಲೂಸಾ) ಎಂಬ ಕಾಯಿಲೆಗೆ ತುತ್ತಾಗಿದ್ದರು. ಆದ್ದರಿಂದ ಇಂದು ವಿಧಾನಸೌಧದ ಬಳಿ ಬಂದು ಪೋಷಕರು ಸಿಎಂ ಕುಮಾರಸ್ವಾಮಿ ಬಳಿ ತಮ್ಮ ಮಕ್ಕಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕುಟುಂಬದ ಕಷ್ಟ ಆಲಿಸಿದ ಕುಮಾರಸ್ವಾಮಿ ತಕ್ಷಣ ಅವರಿಗೆ ಸ್ಪಂಧಿಸಿ ಮಕ್ಕಳ ಚಿಕಿತ್ಸೆಗಾಗಿ 5 ಲಕ್ಷ ರೂ. ಪರಿಹಾರ ಧನವನ್ನು ನೀಡುವಂತೆ ಸೂಚನೆ ನೀಡಿದ್ದಾರೆ.

    ಅಷ್ಟೇ ಅಲ್ಲದೇ ಮಕ್ಕಳ ತಂದೆಗೆ ಸವದತ್ತಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಕೆಲಸ ಕೊಡಿಸುವುದಾಗಿ ಹಾಗೂ ಮಕ್ಕಳ ಚಿಕಿತ್ಸಾ ವೆಚ್ಚ ಸಂಪೂರ್ಣ ಭರಿಸುವ ಭರವಸೆಯನ್ನು ಕೂಡ ನೀಡಿದ್ದಾರೆ. ಜೊತೆಗೆ ಕುಟುಂಬದವರಿಗೆ ವಿಧಾನಸೌಧದಲ್ಲೇ ಊಟ ಕೊಡಿಸಿ ಸಮಾಧಾನಪಡಿಸಿ ಕಳುಹಿಸಿದ್ದಾರೆ.

  • ರಾತ್ರೋರಾತ್ರಿ ಕುರಣಾನಿಧಿ ರಕ್ತದೊತ್ತಡ ಕುಸಿತ – ಮನೆಯಿಂದ ಆಸ್ಪತ್ರೆಗೆ ಶಿಫ್ಟ್!

    ರಾತ್ರೋರಾತ್ರಿ ಕುರಣಾನಿಧಿ ರಕ್ತದೊತ್ತಡ ಕುಸಿತ – ಮನೆಯಿಂದ ಆಸ್ಪತ್ರೆಗೆ ಶಿಫ್ಟ್!

    ಚೆನ್ನೈ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಆರೋಗ್ಯ ಮತ್ತೆ ಗಂಭೀರವಾಗಿದೆ. ಇಷ್ಟು ದಿನ ಚೆನ್ನೈನ ಗೋಪಾಲಪುರಂನ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಶುಕ್ರವಾರ ರಾತ್ರೋರಾತ್ರಿ ವಿಶೇಷ ಅಂಬ್ಯುಲೆನ್ಸ್ ಮೂಲಕ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕರುಣಾನಿಧಿಯವರ ಆರೋಗ್ಯ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಅಂತ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಆದರೆ ಮಾಜಿ ಸಚಿವ ಎ. ರಾಜ ಪ್ರತಿಕ್ರಿಯಿಸಿ, ಕರುಣಾನಿಧಿ ಆರೋಗ್ಯ ಸ್ಥಿರವಾಗಿದೆ. ರಕ್ತದೊತ್ತಡ ಕಡಿಮೆಯಾಗಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಿದ್ದೇವೆ ಅಂತ ಹೇಳಿದ್ದಾರೆ. ಇಂದು ಗುಲಾಂ ನಬಿ ಆಜಾದ್ ಸೇರಿದಂತೆ ಹಲವರು ಕರುಣಾನಿಧಿ ಆರೋಗ್ಯ ವಿಚಾರಿಸಲಿದ್ದಾರೆ.

    ಹಿರಿಯ ಪುತ್ರ ಅಳಗಿರಿ, ಪುತ್ರಿ ಕನ್ನಿಮೋಳಿ, ಕಿರಿಯ ಪುತ್ರ ಸ್ಟಾಲಿನ್ ಸೇರಿದಂತೆ ಕುಟುಂಬಸ್ಥರು ಮತ್ತು ಡಿಎಂಕೆ ನಾಯಕರು ಆಸ್ಪತ್ರೆಯತ್ತ ದೌಡಾಯಿಸಿದ್ರು. ಕಾವೇರಿ ಆಸ್ಪತ್ರೆ ಬಳಿ ಬೆಂಬಲಿಗರು ಜಮಾಯಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಡಿಎಂಕೆ ಮುಖಸ್ಥ ಎಂ. ಕರುಣಾನಿಧಿ ಆರೋಗ್ಯ ಬಿಗಡಾಯಿಸಿದ್ದು, ಶುಕ್ರವಾರ ಚೆನ್ನೈನ ಅವರ ಮನೆಯನ್ನೇ ಆಸ್ಪತ್ರೆ ಮಾಡಿಕೊಂಡು ಕಾವೇರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡ್ತಿದ್ದರು. 94 ವರ್ಷದ ವಯೋವೃದ್ಧ ರಾಜಕಾರಣಿ ಕರುಣಾನಿಧಿ ಅವರಿಗೆ ವಯೋಸಹಜ ಕಾರಣಗಳಿಂದಾಗಿ ಆರೋಗ್ಯ ಕ್ಷೀಣಿಸಿದ್ದು, ಮೂತ್ರನಾಳ ಸೋಕಿನ ಕಾರಣ ಜ್ವರ ಬಂದಿದೆ. ವಿಷಯ ತಿಳಿದ ಡಿಎಂಕೆ ಕಾರ್ಯಕರ್ತರು, ನಾಯಕರು ಭಾರೀ ಸಂಖ್ಯೆಯಲ್ಲಿ ಗೋಪಾಲಪುರದಲ್ಲಿರುವ ಕರುಣಾನಿಧಿ ನಿವಾಸದ ಮುಂದೆ ಸೇರಿದ್ದರು. ಕಮಲ್‍ಹಸನ್, ಎಐಎಡಿಎಂಕೆ ನಾಯಕರು ಎಂಕೆ ಸ್ಟಾಲಿನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

  • ಇಮ್ಮ್ಯೂನೋಥೆರಪಿಯಿಂದ ಲಾಭ ಏನು? ಕ್ಯಾನ್ಸರ್ ರೋಗಿಗಳಿಗೆ ಹೇಗೆ ನೆರವಾಗುತ್ತೆ?

    ಇಮ್ಮ್ಯೂನೋಥೆರಪಿಯಿಂದ ಲಾಭ ಏನು? ಕ್ಯಾನ್ಸರ್ ರೋಗಿಗಳಿಗೆ ಹೇಗೆ ನೆರವಾಗುತ್ತೆ?

    ಕ್ಯಾನ್ಸರ್ ರೋಗ ಪರೀಕ್ಷೆ ಎಂದರೇನೇ ರೋಗಿಯ ಎದೆ ಬಡಿತ ಏರುಪೇರಾಗುತ್ತದೆ. ಶಸ್ತ್ರ ಚಿಕಿತ್ಸೆ, ಕಿಮೋಥೆರಪಿ ಅಥವಾ ರೇಡಿಯೇಷನ್ ಯಾವುದೇ ಇರಲಿ, ಮುಂದೇನು ಕಾದಿದೆಯೋ ಎಂಬ ಭಯವೇ ರೋಗಿ ಮತ್ತು ಅವರ ಪರಿವಾರದವರು ಇನ್ನಷ್ಟು ಹೈರಾಣಾಗುವಂತೆ ಮಾಡುತ್ತದೆ. ಹಾಗಾಗಿ ರೋಗಿಯ ಚಿಕಿತ್ಸೆಗಾಗಿ ರೂಪಿಸಲ್ಪಟ್ಟ ಯೋಜನೆಯನ್ನು ಅನುಭವಿ ತಜ್ಞರೆ ನಿಖರವಾಗಿ ನಿರ್ಧರಿಸಲ್ಪಟ್ಟ ಹಂತಗಳನ್ನು ಅನುಸರಿಸುವ ಮೂಲಕ ಕಾರ್ಯರೂಪಕ್ಕೆ ತರಬೇಕಾಗುತ್ತದೆ.

    ಈಗ ಲಭ್ಯವಿರುವ ಎಲ್ಲಾ ಚಿಕಿತ್ಸಾ ವಿಧಾನಗಳಲ್ಲಿ ಕಿಮೋಥೆರಪಿಯ ಕುರಿತು ಇರುವ ಕಟ್ಟುಕತೆ, ಅನಿಸಿಕೆ ಸಂಶಯ ಏನೆಂದರೆ, ಪ್ರಸ್ತುತ ಇರುವ ಕಿಮೋಥೆರಪಿಯು ರೋಗಿಯಲ್ಲಿ ಕ್ಯಾನ್ಸರ್‍ನ ಹರಡುವಿಕೆಯನ್ನು ತಡೆಗಟ್ಟಲು ಇಂದು ಅತ್ಯಂತ ಸುರಕ್ಷಿತ ಮತ್ತು ಅತಿ ಹೆಚ್ಚು ಪರಿಣಾಮಕಾರಿ ವಿಧಾನ; ಇದನ್ನು ಅನುಷ್ಠಾನಗೊಳಿಸುವ ವಿಶೇಷ ವೈದ್ಯಕೀಯ ಪರಿಣತಿ ಮತ್ತು ಕ್ಷೇತ್ರದಲ್ಲಿ ಅನುಭವ ಅತ್ಯಗತ್ಯ.

    ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಭಯಾನಕ ಜಟಿಲತೆ ಎಂದರೆ ರೋಗನಿರೋಧಕ ಶಕ್ತಿಯ ಕುಗ್ಗುವಿಕೆ. ಮಾನವನ ರೋಗನಿರೋಧಕ ಶಕ್ತಿಯನ್ನು ಕ್ಯಾನ್ಸರ್ ನಿಯಂತ್ರಣಕ್ಕೆ ಬಳಸಿಕೊಳ್ಳಲು ಕ್ಯಾನ್ಸರ್ ವಿಜ್ಞಾನಿಗಳು ಹಲವು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಈ ದಿಶೆಯಲ್ಲಿ ಅನೇಕ ಮೈಲಿಗಲ್ಲುಗಳನ್ನು ಕಂಡು ಹಿಡಿದಿದ್ದಾರೆ. ಆದರೆ ಪ್ರಸ್ತುತ ದಶಕದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ರೋಗನಿರೋಧಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ವಿಜ್ಞಾನಿಗಳು ಮಹತ್ತರ ಯಶಸ್ಸನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಸೈಟ್ ಕೇರ್ ನ ಹಿರಿಯ ಕನ್ಸಲ್ಟೆಂಟ್ ವೈದ್ಯರಾಗಿರುವ ಡಾ. ಪ್ರಸಾದ್ ನಾರಯಣನ್‍ರವರ ಮಾತಿನಲ್ಲಿ, “ಪ್ರಮುಖ ಕ್ಯಾನ್ಸರ್ ಚಿಕಿತ್ಸೆಯಾಗಿ ಇಮ್ಮ್ಯೂನೋಥೆರಪಿಯ ಬೆಳವಣಿಗೆ ಬಹಳಷ್ಟು ಕ್ಯಾನ್ಸರ್ ರೋಗಿಗಳ ಜೀವನದಲ್ಲಿ ಬಹಳ ಒಳ್ಳೆಯ ಪರಿಣಾಮ ಉಂಟುಮಾಡಿದೆ. ಕ್ಯಾನ್ಸರ್ ಚಿಕಿತ್ಸೆ ಬಹಳ ಕಠಿಣ ಎನ್ನುವ ಕಾಲವೊಂದಿತ್ತು. ಆದರೆ ಈಗ ಮೆಲನೋಮಾದಂತೆ ಇಮ್ಮ್ಯೂನೋಥೆರಪಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ವಿಧಾನವು ಭಾರತದಲ್ಲಿ ಶ್ವಾಸಕೋಶ, ತಲೆ, ಕುತ್ತಿಗೆ, ಉದರ/ಹೊಟ್ಟೆ, ಸರ್ವಿಕ್ಸ್ (ಗರ್ಭಕಂಠ) ಮತ್ತು ಜೆನಿಟೋ ಯೂರಿನರಿ ಕ್ಯಾನ್ಸರುಗಳಂತಹ ಅನೇಕ ಸಾಮಾನ್ಯ ಕ್ಯಾನ್ಸರುಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅನೇಕ ಇಮ್ಮ್ಯೂನೋ ಮಾಡ್ಯುಲೇಟರಿ ಔಷಧಗಳು ಕ್ಯಾನ್ಸರನ್ನು ಎದುರಿಸುವ ವಿಧಾನದಲ್ಲಿ ಬಹಳಷ್ಟು ಪ್ರಭಾವ ಬೀರಿವೆ. ಉದಾಹರಣೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಕಳೆದ ದಶಕದಲ್ಲಿ ಸಂಪೂರ್ಣ ಬದಲಾವಣೆಯನ್ನು ಕಂಡಿದೆ.

    ಶ್ವಾಸಕೋಶದ ಕ್ಯಾನ್ಸರಿಗೆ ಕಾರಣವಾಗುವ ಜೆನೆಟಿಕ್ ಫ್ರೇಮ್ ವರ್ಕ್‍ಗಳಲ್ಲಿ ನಿರ್ದಿಷ್ಟ ಸಮಸ್ಯೆಗಳ ಕುರಿತು ಹೆಚ್ಚಿದ ತಿಳುವಳಿಕೆಯ ಪರಿಣಾಮವಾಗಿ ಬಹಳಷ್ಟು ಕ್ಯಾನ್ಸರ್ ರೋಗಿಗಳು ಯೋಜಿತ ಚಿಕಿತ್ಸೆ ಮತ್ತು ಇಮ್ಮ್ಯೂನೋಥೆರಪಿಯ ಲಾಭ ಪಡೆದು ಉತ್ತಮ ಪರಿಣಾಮ ಕಂಡಿದ್ದಾರೆ. ಸರಿಯಾದ ಇಮ್ಮ್ಯೂನೋಥೆರಪಿಯನ್ನು ನಿರ್ಣಯಿಸಲು ರೋಗಿಗಳನ್ನು ತರಬೇತಿ ಹೊಂದಿರುವ ಆಂಕಾಲಜಿಸ್ಟರು ನೋಡಬೇಕು. ಬಹುಮುಖ ವಿಶೇಷಜ್ಞರ ತಂಡದಿಂದ ಚಿಕಿತ್ಸಾಪೂರ್ವ ಪರೀಕ್ಷೆ ನಡೆಸಿದ ನಂತರ ಒಂದು ಪೂರ್ಣರೂಪದ ಚಿಕಿತ್ಸಾ ಯೋಜನೆಯನ್ನು ರೋಗಿಗೆ ನೀಡಲಾಗುತ್ತದೆ. ರೋಗಿಗೆ ನಿಯಮಿತ ಮೇಲ್ವಿಚಾರಣೆ ವತ್ತು ಯೋಜಿತ ಅನುಕರಣೆಯ ಮೂಲಕ ಹೊರರೋಗಿಯಂತೆ ಚಿಕಿತ್ಸೆ ನೀಡಲಾಗುತ್ತದೆ. ಇಮ್ಮ್ಯೂನೋ ಚಿಕಿತ್ಸೆಯನ್ನು ಪಡೆಯುವ ಕ್ಯಾನ್ಸರ್ ರೋಗಿಗಳಿಗೆ ಒಂದು ಸಮಗ್ರ ಆರೈಕೆಯ ವ್ಯವಸ್ಥೆ ರೋಗಿಗಷ್ಟೇ ಸಹಾಯಕವಾಗುದಲ್ಲದೆ ಅವರ ಕುಟುಂಬಕ್ಕೂ ಸಾಂತ್ವನಕಾರಿಯಾಗಿರುತ್ತದೆ”.

    ಆದರೆ ಇಮ್ಮ್ಯೂನೋಥೆರಪಿಯಲ್ಲಿ ಅಪಾಯವೇ ಇಲ್ಲವೇ? ‘ಅಪಾಯವೇ ಇಲ್ಲದ ಕ್ಯಾನ್ಸರ್ ಚಿಕಿತ್ಸೆ ಬಹಳ ಕಡಿಮೆ.’ ಎನ್ನುತ್ತಾರೆ ಡಾ ಪ್ರಸಾದ್ ನಾರಾಯಣನ್‍ರವರು. ಆದರೆ ಇಮ್ಮ್ಯೂನೊಥೆರಪಿಯನ್ನು ಆರಂಭಿಸುವ ಮುನ್ನ ಅದರಲ್ಲಿನ ಅಪಾಯ ಮತ್ತು ಲಾಭದ ಕುರಿತು ತೂಗಿನೊಡಬೇಕಾದ್ದೂ ಅನಿವಾರ್ಯ ಎಂದು ಹೇಳುತ್ತಾರೆ. ಇಮ್ಮ್ಯೂನೋಥೆರಪಿ ಒದಗಿಸುವ ಕ್ಯಾನ್ಸರ್ ಕೇಂದ್ರಗಳ ಸಾಮಥ್ರ್ಯ ಗಮನಿಸಬೇಕಾದ್ದೂ ಬಹಳ ಮುಖ್ಯ ಎನ್ನುತ್ತಾರೆ.

    ಇಮ್ಮ್ಯೂನೋಥೆರಪಿಯಲ್ಲಿ ಅಡ್ಡಪರಿಣಾಮಗಳು ಇಲ್ಲದಿಲ್ಲ. ನಾವು ರೋಗಿಯ ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸುತ್ತೇವೆ. ಆಗ ಅದು ಅಗತ್ಯಕ್ಕಿಂತ ಹೆಚ್ಚು ಉದ್ದೀಪನಗೊಳ್ಳುವ ಸಾಧ್ಯತೆ ಇದೆ. ಆದರೆ ಎಲ್ಲಾ ಸಮಯದಲ್ಲೂ ಚಿಕಿತ್ಸೆಯು ನಮಗೆ ಬೇಕಾದ ಹಾಗೆಯೇ ನಡೆಯುತ್ತದೆ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಈ ರೀತಿಯ ಜಟಿಲ ಚಿಕಿತ್ಸೆಗಳಿಗಾಗಿ ಈ ಚಿಕಿತ್ಸೆಗಳಲ್ಲಿ ಉತ್ತಮ ಸಾಮಥ್ರ್ಯ ಹೊಂದಿದ ವಿಶೇಷ ಆಸ್ಪತ್ರೆಗಳನ್ನು ಅವಲಂಬಿಸುವುದು ಅಗತ್ಯ. ಎನ್ನುತ್ತಾರೆ ಸೈಟ್ ಕೇರ್ ನ ವಿಶೇಷಜ್ಞರಾದ ಡಾ. ಪ್ರಸಾದ್.

    “ಪ್ರಸ್ತುತ ಪರಿಸ್ಥಿತಿಯಲ್ಲಿ ಇಮ್ಮ್ಯೂನೋಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಬತ್ತಳಿಕೆಗೆ ಇಂದು ಮುಖ್ಯ ಸೇರ್ಪಡೆ. ರೋಗಿಗಳ ರೋಗನಿರೋಧಕ ಶಕ್ತಿಯನ್ನು ಹೀರುವ ಮೂಲಕ ಈ ಚಿಕಿತ್ಸೆ ಕೆಲಸ ಮಾಡುತ್ತದೆ. ಇದು ರೋಗನಿರೋಧಕವನ್ನು ಮಾರ್ಪಡಿಸುವ ಮೂಲಕ ವಿಪರೀತ ವಿಭಜನೆಗೊಳ್ಳುವ ಕ್ಯಾನ್ಸರ್ ಕಣಗಳನ್ನು ಸಂಭಾಳಿಸಲು ದೇಹವನ್ನೇ ಸಶಕ್ತಗೊಳಿಸುತ್ತದೆ. ಕ್ಯಾನ್ಸರ್ ಎದುರಿಸಲು ದೇಹವು ತನ್ನದೇ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವಂತೆ ಮಾಡುವುದು ಇಲ್ಲಿನ ಉದ್ದೇಶ.”
    ಡಾ.ಪ್ರಸಾದ್ ನಾರಾಯಣನ್, ಸೀನಿಯರ್ ಕನ್ಸಲ್ಟೆಂಟ್, ಮೆಡಿಕಲ್ ಆಂಕಾಲಜಿ

    ಕ್ಯಾನ್ಸರ್ ಕುರಿತ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: www.cytecare.com 

  • ಚಿಕ್ಕಮಗಳೂರಲ್ಲಿ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ

    ಚಿಕ್ಕಮಗಳೂರಲ್ಲಿ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ

    ಚಿಕ್ಕಮಗಳೂರು: ಮೈಮೇಲೆ ಗಾಯವಾಗಿದ್ದ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗಲ್ಲು ಗ್ರಾಮದ ರಿಚರ್ಡ್ ಲೋಬೋ ಅವರ ತೋಟದಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಂಡು ಬಂದಿದೆ. ಆದರೆ ಅದರ ಮೈಮೇಲೆ ಗಾಯವಾಗಿದ್ದರಿಂದ ತೆವಳಲಾಗದೆ ನಾಲ್ಕು ದಿನದಿಂದ ಒಂದೇ ಜಾಗದಲ್ಲಿ ನಿತ್ರಾಣಗೊಂಡು ಬಿದ್ದಿದೆ.

    ಸರ್ಪವನ್ನ ನೋಡಿದ ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಗಾಬರಿಯಾಗಿದ್ದರು. ಬಳಿಕ ಉರಗ ತಜ್ಞ ನರೇಶ್ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ನೇಕ್ ನರೇಶ್, ಕಾಳಿಂಗನನ್ನ ಸೆರೆ ಹಿಡಿದು ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

    ಕಾಳಿಂಗ ಸ್ವಲ್ಪ ಸುಧಾರಿಸಿದ ನಂತರ ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಬೃಹತ್ ಕಾಳಿಂಗನನ್ನ ಸೆರೆ ಹಿಡಿದ ಮೇಲೆ ತೋಟದ ಮಾಲೀಕ ಹಾಗೂ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ಚಿಕಿತ್ಸೆ ಬಳಿಕ ಮೊದಲ ಫೋಟೋ ಶೇರ್ ಮಾಡಿಕೊಂಡ ಇರ್ಫಾನ್ ಖಾನ್

    ಚಿಕಿತ್ಸೆ ಬಳಿಕ ಮೊದಲ ಫೋಟೋ ಶೇರ್ ಮಾಡಿಕೊಂಡ ಇರ್ಫಾನ್ ಖಾನ್

    ನವದೆಹಲಿ: ಲಂಡನ್‍ನಲ್ಲಿ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಖಾನ್ ಭಾನುವಾರ ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    ಚಿಕಿತ್ಸೆಯಿಂದ ಇರ್ಫಾನ್ ಖಾನ್ ತುಂಬಾ ನಿಶಕ್ತರಂತೆ ಕಾಣುತ್ತಿದ್ದು, ನಗುತ್ತಲೇ ಕಾಯಿಲೆಯನ್ನು ಎದುರಿಸಿ ಮುನ್ನುಗ್ಗುತ್ತಿದ್ದಾರೆ ಎಂಬುದನ್ನು ಅಭಿಮಾನಿಗಳು ಫೋಟೋದಲ್ಲಿ ನೋಡಬಹುದು.

    ಮಾರ್ಚ್ ತಿಂಗಳಲ್ಲಿ ಇರ್ಫಾನ್ ಡಯಾಗ್ನೋಸಿಸ್‍ಗೆ ಒಳಪಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಈ ವಿಚಾರದ ಬೆನ್ನಲ್ಲೇ ಇರ್ಫಾನ್ ಪ್ರತಿಕ್ರಿಯಿಸಿ, ಮಾರ್ಗರೆಟ್ ಮಿಚೆಲ್ ಹೇಳುವ ಪ್ರಕಾರ ಜೀವನದಲ್ಲಿ ನಾವು ಏನನ್ನು ನಿರೀಕ್ಷಿಸುತ್ತೇವೋ ಅದಕ್ಕೆ ಕಟ್ಟುಪಾಡುಗಳಿಲ್ಲ. ನಿರೀಕ್ಷೆಯಿಲ್ಲದಿದ್ದರೆ ನಾವು ಬೆಳೆಯುತ್ತೇವೆ ಎಂಬುದು ನನಗೆ ಕೆಳೆದ ಕೆಲವು ದಿನಗಳಿಂದ ಅರ್ಥವಾಗಿದೆ. ನ್ಯೂರೋಎಂಡೋಕ್ರೈನ್ ಟ್ಯೂಮರ್ ಚಿಕಿತ್ಸೆಗೆ ಒಳಗಾಗಿರುವುದರಿಂದ ಚಿಕಿತ್ಸೆಗೆ ಹೊಂದಿಕೊಳ್ಳುವುದು ನನಗೆ ಕಷ್ಟವಾಗುತ್ತಿದೆ. ಆದರೆ ನನ್ನ ಸುತ್ತಮುತ್ತಲಿನ ಜನರ ಪ್ರೀತಿ ಹಾಗೂ ಪ್ರೋತ್ಸಾಹದಿಂದ ನನಗೆ ಈ ಕಾಯಿಲೆ ಜೊತೆಗೆ ಹೋರಾಡುವ ಶಕ್ತಿ, ವಿಶ್ವಾಸ ಹೆಚ್ಚುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಈ ಪ್ರೀತಿ, ವಿಶ್ವಾಸದಿಂದ ನನ್ನ ಪಯಣ ವಿದೇಶದ ಕಡೆಗೆ ಸಾಗಿಸಿದೆ. ನಿಮ್ಮ ಆಶೀರ್ವಾದ ಹಾಗೂ ಪ್ರೀತಿಯನ್ನು ನನಗೆ ಕಳುಹಿಸುವುದನ್ನು ಮುಂದುವರೆಸಿ ಎಂದು ಮನವಿ ಮಾಡುತ್ತಿದ್ದೇನೆ. ಕೆಲವು ವದಂತಿಗಳ ಪ್ರಕಾರ ನ್ಯೂರೋ ಎನ್ನುವುದು ಮೆದುಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದರ ಬಗ್ಗೆ ಸಂಶೋಧನೆ ನಡೆಸಲು ಹಾಗೂ ತಿಳಿಯಲು ಗೂಗಲ್‍ನಲ್ಲಿ ನೋಡಬಹುದು. ನನ್ನ ಮಾತಿಗಾಗಿ ಯಾರೆಲ್ಲಾ ಕಾಯುತ್ತಿದ್ದಿರೋ, ಅವರಿಗಾಗಿ ಇನ್ನಷ್ಟು ವಿಷಯಗಳನ್ನು ಹೊತ್ತು ಮತ್ತೇ ಬರುತ್ತೇನೆ ಎಂದು ಹೇಳಿದ್ದರು.

    ಆಗಸ್ಟ್ ತಿಂಗಳಲ್ಲಿ ಕರ್ವಾನ್ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅವರ ಕರ್ವಾನ್ ಚಿತ್ರದ ಸಹ ಕಲಾವಿದರಾದ ದುಲ್ಕರ್ ಸಲ್ಮಾನ್ ಹಾಗೂ ಮಿಥಿಲಾ ಪಾಕರ್ ಅವರಿಗೆ ಶುಭ ಹಾರೈಸಲು ಸಾಮಾಜಿಕ ಜಾಲತಾಣಗಳಲ್ಲಿ ಇರ್ಫಾನ್ ಬಹಳ ದಿನಗಳ ನಂತರ ಕಾಣಿಸಿಕೊಂಡಿದ್ದಾರೆ.

  • 7 ಅಡಿ 2 ಇಂಚು ಎತ್ತರವಿರುವ ವ್ಯಕ್ತಿಯ ಜೀವನದಲ್ಲಿ ಮೂಡಬೇಕಿದೆ ‘ಬೆಳಕು’

    7 ಅಡಿ 2 ಇಂಚು ಎತ್ತರವಿರುವ ವ್ಯಕ್ತಿಯ ಜೀವನದಲ್ಲಿ ಮೂಡಬೇಕಿದೆ ‘ಬೆಳಕು’

    ಬೆಂಗಳೂರು: 7 ಅಡಿ 2 ಇಂಚು ಎತ್ತರವಿರುವ 35 ವರ್ಷದ ಕುಮಾರ್ ರಾಜ್ಯದ ಅತೀ ಉದ್ದದ ಮನುಷ್ಯರ ಸಾಲಿನ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಕುಮಾರ್ ವಾಕಿಂಗ್ ಸ್ಟಿಕ್ ಹಿಡಿದು ಮನೆಯಿಂದ ಹೊರ ಬರಲು ಪರದಾಡುವ ಸ್ಥಿತಿಯಲ್ಲಿದ್ದಾರೆ.

    ಈ ಅಪರೂಪದ ವ್ಯಕ್ತಿಯ ಬಾಳಲ್ಲಿ ಇದೀಗ ಬಿರುಗಾಳಿ ಬೀಸಿದೆ. ಇತ್ತೀಚೆಗೆ ಪಿಟ್ಯೂಟರಿ ಮೈಕ್ರೋ ಡೆನೋಮಾ ರೋಗ ಇವರನ್ನು ಜೀವಂತ ಶವವಾಗಿಸಿದೆ. ಅನಾರೋಗ್ಯ ಪೀಡಿತ ತಂದೆ, ತಾಯಿ ಹಾಗೂ ಪತ್ನಿಯನ್ನು ನೋಡಿಕೊಳ್ಳಲಾಗದ ಪರಿಸ್ಥಿತಿಗೆ ತಂದು ಬಿಟ್ಟಿದೆ.

    ಬಡ ರೈತಾಪಿ ಕುಟುಂಬದವನಾಗಿದ್ದ ಕುಮಾರ್ ತನ್ನ ದೈಹಿಕ ಬೆಳವಣಿಗೆಯಿಂದ ವ್ಯವಸಾಯ ಮಾಡಲಾಗದೇ ಸೆಕ್ಯೂರಿಟಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಆದರೆ ಅಪಘಾತದಿಂದಾಗಿ ಈಗ ನಡೆಯಲು ಆಗದ ಸ್ಥಿತಿ ತಲುಪಿದ್ದಾರೆ.

    ಮತ್ತೊಂದು ಕಡೆ ಪಿಟ್ಯೂಟರಿ ಮೈಕ್ರೋ ಡೆನೋಮಾ ರೋಗದಿಂದ ದಿನೇ ದಿನೇ ದೇಹದಲ್ಲಿ ವಿಚಿತ್ರ ಬದಲಾವಣೆಯಾಗಿ ಅತೀ ಉದ್ದವಾಗಿ ಬೆಳೆದು ನಿಂತಿದ್ದಾರೆ. ಇತ್ತ ಕುಮಾರ್ ಸ್ಥಿತಿ ನೋಡಿ ಪತ್ನಿ ಮನೆ ಬಿಟ್ಟು ಹೋಗಿದ್ದು ದಿಕ್ಕು ದೋಚದೇ ಪ್ರತಿನಿತ್ಯ ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದಾರೆ.

    ಒಟ್ಟಾರೆ ಅತೀ ಎತ್ತರದ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಕುಮಾರ್ ನ ಆರೋಗ್ಯ ಸುಧಾರಣೆಗೆ ಯಾರಾದರೂ ದಾನಿಗಳು ಸಹಾಯ ಮಾಡಿ ಎಂದು ಈ ಬಡ ಕುಟುಂಬ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಕೇಳುತ್ತಿದ್ದಾರೆ.

    https://www.youtube.com/watch?v=Ah6oL6XmM3s

  • ಕ್ಯಾನ್ಸರ್ ನಿಂದಾಗಿ ನೀಳ ಕೂದಲಿಗೆ ಕತ್ತರಿ ಹಾಕಿದ ಸೋನಾಲಿ

    ಕ್ಯಾನ್ಸರ್ ನಿಂದಾಗಿ ನೀಳ ಕೂದಲಿಗೆ ಕತ್ತರಿ ಹಾಕಿದ ಸೋನಾಲಿ

    ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ಬ್ಯೂಟಿ ಕ್ವೀನ್ ಸೋನಾಲಿ ಬೇಂದ್ರೆ ತಮ್ಮ ನೀಳ ಕೂದಲಿಗೆ ಕತ್ತರಿ ಹಾಕಿದ್ದಾರೆ.

    ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ವೈದ್ಯರ ಸಲಹೆ ಮೇರೆಗೆ ಬಾಬ್ ಕಟ್ ಮಾಡಿಸಿಕೊಂಡಿದ್ದಾರೆ.

    ತನ್ನ ಕೂದಲು ಕತ್ತರಿಸಿಕೊಂಡ ಬಳಿಕ ಸೋನಾಲಿ ಇನ್ ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಪಡೆದು ಮತ್ತೆ ನಾನು ಸ್ವದೇಶಕ್ಕೆ ಹಿಂದಿರುಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಕ್ಯಾನ್ಸರ್ ಬಂದಿದ್ದು ಹೇಗೆ?: ನಟಿಯರು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಅತ್ಯಂತ ಕಾಳಜಿಯನ್ನು ಹೊಂದಿರುತ್ತಾರೆ. ಕ್ಯಾನ್ಸರ್ ದೊಡ್ಡದಾಗಿ ಕಾಣಿಸಿಕೊಳ್ಳಲು ಸೋನಾಲಿಯವರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಹಲವು ವರ್ಷಗಳಿಂದ ಸೋನಾಲಿಯವರಿಗೆ ದೇಹದಲ್ಲಿ ಒಂದು ರೀತಿಯ ನೋವು ಕಾಣಿಸುತ್ತಿತ್ತು. ಕೆಲಸದ ಒತ್ತಡದಿಂದ ನೋವುಗಳು ಸಾಮಾನ್ಯ ಗಮನ ಹರಿಸಿರಲಿಲ್ಲ. ಒಂದು ವೇಳೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರೆ, ಕ್ಯಾನ್ಸರ್ ಕೊನೆಯ ಹಂತಕ್ಕೆ ಬರುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಈ ಮೊದಲು ಸೋನಾಲಿ ತಮ್ಮದೊಂದು ಫೋಟೋವನ್ನು ಹಾಕಿ, “ನಾವು ಜೀವನದಲ್ಲಿ ಹೆಚ್ಚು ವಿಶ್ವಾಸವನ್ನಿಟ್ಟಾಗ ಆಗ ಜೀವನ ದೊಡ್ಡದೊಂದು ಆಘಾತ ನೀಡುತ್ತದೆ. ನನಗೆ ಹೈ ಗ್ರೇಡ್ ಕ್ಯಾನ್ಸರ್ ಇದೆ ಎಂಬುದು ನನಗೆ ಇತ್ತೀಚಿಗೆ ತಿಳಿಯಿತು. ಈ ವಿಷಯ ತಿಳಿದು ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನ ಜೊತೆಯಲ್ಲೇ ಇದ್ದಾರೆ. ನಾನು ಇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    https://www.instagram.com/p/BlErxmFl7vL/?hl=en&taken-by=bollywood

    https://www.instagram.com/p/BlCuNJflovR/?hl=en&taken-by=iamsonalibendre

  • ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ!

    ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ!

    ಹಾವೇರಿ: ನಗರದ ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದ ಆಸಾಮಿಯನ್ನು ಪೊಲೀಸರು ವಶಕ್ಕೆ ಪಡೆದಿರೋ ಘಟನೆ ಹಾವೇರಿ ನಗರದ ಅಶ್ವಿನಿನಗರದಲ್ಲಿ ನಡೆದಿದೆ.

    ವೈದ್ಯ ಡಾ. ಎಸ್.ಡಿ.ಸೀಗಿಹಳ್ಳಿ ಎಂಬವರ ಲೆಟರ್ ಪ್ಯಾಡ್ ನಕಲು ಮಾಡಿಕೊಂಡು ಎಸ್.ಆರ್.ಹುಲ್ಲಾಳ ಎಂಬಾತ ಮನೆಯಲ್ಲಿ ಚಿಕಿತ್ಸೆ ಕೊಡ್ತಿದ್ದ. ಇದನ್ನರಿತ ಅಸಲಿ ವೈದ್ಯ ಕೇಳೋಕೆ ಹೋದ್ರೆ ಆಸಾಮಿ ಹುಲ್ಲಾಳ ಅಸಲಿ ಡಾಕ್ಟರ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸೋಕೆ ಮುಂದಾದ.

    ಕೂಡಲೇ ವಿಷಯ ತಿಳಿದ ಡಿವೈಎಸ್ಪಿ ಕುಮಾರಪ್ಪ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ರು. ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಲೆಟರ್ ಪ್ಯಾಡ್ ನಕಲು ಮಾಡಿದ್ದ ಆಸಾಮಿ ಹುಲ್ಲಾಳ ಪತ್ನಿ ಸಹ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ಕೆಲವು ತಿಂಗಳ ಹಿಂದೆ ನಿವೃತ್ತರಾಗಿದ್ದಾರೆ ಅನ್ನೋದು ಗೊತ್ತಾಗಿದೆ.

    ಪೊಲೀಸರು ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಹುಲ್ಲಾಳರ ಮನೆಯಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಸರಕಾರಿ ಔಷಧಿಗಳು ಲಭ್ಯವಾಗಿವೆ. ಈ ಸಂಬಂಧ ತಾಲೂಕು ಆರೋಗ್ಯಾಧಿಕಾರಿ ಡಾ.ದಯಾನಂದ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಎಸ್.ಆರ್.ಹುಲ್ಲಾಳ ವಿರುದ್ಧ ದೂರು ದಾಖಲಿಸಿದ್ದಾರೆ.

    ಅಲ್ಲದೇ ಅಸಲಿ ಡಾಕ್ಟರ್ ಸಹ ತಮ್ಮ ಮೇಲೆ ಮಚ್ಚಿನಿಂದ ಹಲ್ಲೆ ಮಾಡೋಕೆ ಬಂದಿದ್ದ ಎಸ್.ಆರ್.ಹುಲ್ಲಾಳ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.