Tag: treatment

  • ಮಂಗನ ಕಾಯಿಲೆಗೆ 7 ಬಲಿ – ಏನಿದು ಮಂಗನ ಕಾಯಿಲೆ-ಹೇಗೆ ಬರುತ್ತೆ..?

    ಮಂಗನ ಕಾಯಿಲೆಗೆ 7 ಬಲಿ – ಏನಿದು ಮಂಗನ ಕಾಯಿಲೆ-ಹೇಗೆ ಬರುತ್ತೆ..?

    ಶಿವಮೊಗ್ಗ: ಮಲೆನಾಡಿನ ಜಿಲ್ಲೆಗಳನ್ನು ಬೇಸಿಗೆಯಲ್ಲಿ ಕಾಡುವ ಕ್ಯಾಸನೂರು ಫಾರೆಸ್ಟ್ ಡೀಸಿಸ್ ಈ ವರ್ಷ ಮುಂಚಿತವಾಗಿ ಕಾಣಿಸಿಕೊಂಡು ಏಳು ಜನರನ್ನು ಬಲಿ ತೆಗೆದುಕೊಂಡಿದೆ. ಮಂಗನ ಜ್ವರ ಎಂದು ಕರೆಯಲಾಗುವ ಈ ಮಹಾಮಾರಿಗೆ ಮಲೆನಾಡಿನ ಜನ ತತ್ತರಿಸಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕುಗಳಲ್ಲಿ ಪ್ರತೀ ವರ್ಷ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನ ಜ್ವರ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡು ಏಳು ಜನರನ್ನು ಬಲಿ ತೆಗೆದುಕೊಂಡಿದೆ. ತೀರ್ಥಹಳ್ಳಿಯಲ್ಲಿ ಒಬ್ಬರು ಮತ್ತು ಸಾಗರದಲ್ಲಿ ಇಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ.

    ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್, ವಾಟೆಮಕ್ಕಿಯ ಕೃಷ್ಣಪ್ಪ, ಕಂಚಿಕಾಯಿ ಮಂಜುನಾಥ್ ಮತ್ತು ತೀರ್ಥಹಳ್ಳಿಯ ಗಂಟೆ ಜಾನಗಲು ಗ್ರಾಮದ ಸುಂದರಿ, ಕಂಚಿಕಾಯಿ ರಾಮಕ್ಕ, ಅರಕಲಗೋಡು ಗ್ರಾಮದ ಶ್ವೇತ ಎಂಬವರು ಮಂಗನ ಜ್ವರಕ್ಕೆ ತುತ್ತಾದ ದುರ್ದೈವಿಗಳು. ಈ ಜ್ವರದಿಂದ ಪೀಡಿತರಾಗಿರುವ ಐವತ್ತಕ್ಕೂ ಹೆಚ್ಚು ಜನ ಸಾಗರ, ಮಣಿಪಾಲ ಹಾಗೂ ಶಿವಮೊಗ್ಗದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವರನ್ನು ನಾವು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದೇವೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಏನಿದು ಮಂಗನ ಕಾಯಿಲೆ?
    ಕಾಡಿನಲ್ಲಿ ಮಂಗಗಳು ಸತ್ತು ಬಿದ್ದಿರುತ್ತವೆ. ಹೀಗೆ ಸತ್ತ ಮಂಗಗಳಿಂದ ಹರಡುವ ಉಣ್ಣೆಗಳು ಜಾನುವಾರು, ಕಾಡು-ತೋಟಕ್ಕೆ ಹೋದ ಮನುಷ್ಯರನ್ನು ಸೇರಿಕೊಳ್ಳುತ್ತವೆ. ಈ ಉಣ್ಣೆಯಿಂದ ಕಂಡು ಬರುವ ಜ್ವರವೇ ಮಂಗನಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡೀಸಿಸ್ ಎಂದು ಕರೆಯಲಾಗುತ್ತಿದೆ. ನಾಲ್ಕು ದಶಕಗಳ ಹಿಂದೆ ಮೊದಲಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಬಳಿಕ ತೀರ್ಥಹಳ್ಳಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾಗರ ತಾಲೂಕಿಗೂ ವ್ಯಾಪಿಸಿದೆ ಎಂದು ಸ್ಥಳೀಯ ಬಸವರಾಜ್ ತಿಳಿಸಿದ್ದಾರೆ.

    ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗುತ್ತಿತ್ತು. ಈ ಜ್ವರ ನಿಯಂತ್ರಣಕ್ಕೆ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ರೆವಿನ್ಯೂ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ಈ ಸಮನ್ವಯತೆಯ ಕೊರತೆಯಿಂದಾಗಿ ಈ ಬಾರಿ ಏಳು ಜನ ಬಲಿಯಾಗಿದ್ದಾರೆ. ಸಮರೋಪಾದಿಯಲ್ಲಿ ಕೆಲಸ ಮಾಡಿದರೆ ಮಾತ್ರ ಮಲೆನಾಡಿನ ಜನರ ಜೀವ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಕೊಠಡಿಯಲ್ಲಿ ವೈದ್ಯಾಧಿಕಾರಿಗಳಿಬ್ಬರ ಪೈಪೋಟಿ – ಸಿಬ್ಬಂದಿಗೆ ಗೊಂದಲ, ರೋಗಿಗಳು ಪರದಾಟ

    ಒಂದೇ ಕೊಠಡಿಯಲ್ಲಿ ವೈದ್ಯಾಧಿಕಾರಿಗಳಿಬ್ಬರ ಪೈಪೋಟಿ – ಸಿಬ್ಬಂದಿಗೆ ಗೊಂದಲ, ರೋಗಿಗಳು ಪರದಾಟ

    ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹುದ್ದೆಗೆ ಇಬ್ಬರು ವೈದ್ಯರುಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಒಂದೇ ಕೊಠಡಿಯಲ್ಲಿ ಇಬ್ಬರು ತಾವೇ ವೈದ್ಯಾಧಿಕಾರಿ ಎಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಸಿಬ್ಬಂದಿಗೆ ಗೊಂದಲವನ್ನುಂಟು ಮಾಡಿದೆ.

    ಡಾ.ಶಶಿಕಲಾ ಮತ್ತು ಡಾ.ಮುರುಳಿ ಇಬ್ಬರು ವೈದ್ಯರು ತಾವೇ ವೈದ್ಯಾಧಿಕಾರಿ ಎಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ.ಶಶಿಕಲಾ ಅವರ ಸ್ಥಾನಕ್ಕೆ ವೈದ್ಯಾಧಿಕಾರಿಯಾಗಿ ಡಾ. ಮುರುಳಿ ಕೃಷ್ಣ ಪಿ.ವಿ ಅವರನ್ನು ಆರೋಗ್ಯ ಇಲಾಖೆ ನೇಮಿಸಿದ್ದು, ಇದೀಗ ಇಬ್ಬರ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.

    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಡಾ. ಶಶಿಕಲಾ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ವೈದ್ಯಾಧಿಕಾರಿಗಳ ಪ್ರಭಾರ ಹುದ್ದೆಯನ್ನು ಮುರುಳಿ ಕೃಷ್ಣರಿಗೆ ವಹಿಸಿಕೊಡಲಾಗಿತ್ತು. ಅದರಂತೆ ಅವರು ಪ್ರಭಾರ ವೈದ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಏಕಾಏಕಿ ನಿರ್ಧಾರದ ವಿರುದ್ಧ ಡಾ. ಶಶಿಕಲಾ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೊರೆ ಹೋಗಿದ್ದಾರೆ.

    ನಾನು ಸೀನಿಯರ್ ಆಗಿದ್ದು, ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದೇನೆ ಅಲ್ಲಿನ ತೀರ್ಪು ಹೊರ ಬರುವವರೆಗೂ ನಾನೇ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಯಾರಿಗೂ ಅಧಿಕಾರ ಹಸ್ತಾಂತರಿಸುವುದಿಲ್ಲ ಎಂದು ಡಾ.ಶಶಿಕಲಾ ಪಟ್ಟು ಹಿಡಿದಿದ್ದಾರೆ. ಇತ್ತ ಹಿರಿಯ ಅಧಿಕಾರಿಗಳ ಆದೇಶದಂತೆ ಮುಖ್ಯ ವೈದ್ಯಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡಿದ್ದೇನೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಡಾ. ಶಶಿಕಲಾ, ಓಪಿಡಿ ಕೊಠಡಿ ಸಂಖ್ಯೆ ನಾಲ್ಕರಲ್ಲಿ ರೋಗಿಗಳನ್ನು ಪರೀಕ್ಷಿಸುವಂತೆ ಆದೇಶಿಸಲಾಗಿದ್ದು, ಅವರು ಅದನ್ನು ಪಾಲನೆ ಮಾಡಬೇಕು ಎಂದು ಡಾ. ಮುರುಳಿ ಕೃಷ್ಣ ಹೇಳುತ್ತಿದ್ದಾರೆ.

    ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹುದ್ದೆಗೆ ಇಬ್ಬರು ಪೈಪೋಟಿಗೆ ಬಿದ್ದಿದ್ದು, ಆಸ್ಪತ್ರೆಯ ಸಿಬ್ಬಂದಿ ಗೊಂದಲಕ್ಕೊಳಗಾಗಿ ಯಾವ ಅಧಿಕಾರಿಯ ಸೂಚನೆ ಪಾಲಿಸಬೇಕು ಎಂಬ ವಿಚಾರವಾಗಿ ದಿಕ್ಕು ತೋಚದಂತಾಗಿದ್ದಾರೆ. ಇತ್ತ ರೋಗಿಗಳು ಕೂಡ ಇಬ್ಬರ ಜಗಳದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಿನ ಬಾಲ ಮಂದಿರದ ಊಟದಲ್ಲಿ ಹಲ್ಲಿ – 103 ವಿದ್ಯಾರ್ಥಿಗಳು ಅಸ್ವಸ್ಥ

    ಬೆಂಗ್ಳೂರಿನ ಬಾಲ ಮಂದಿರದ ಊಟದಲ್ಲಿ ಹಲ್ಲಿ – 103 ವಿದ್ಯಾರ್ಥಿಗಳು ಅಸ್ವಸ್ಥ

    ಬೆಂಗಳೂರು: ನಗರದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿದ್ವಾಯಿ ಆಸ್ಪತ್ರೆ ಬಳಿ ಇರುವ ಬಾಲಮಂದಿರದಲ್ಲಿ ಭಾನುವಾರ ರಾತ್ರಿ ಊಟ ಮಾಡಿದ್ದ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಾಸ್ಟೆಲ್ ವಿದ್ಯಾರ್ಥಿಗಳು ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಊಟ ಮಾಡಿದ್ದಾರೆ. ಬಳಿಕ 12 ಗಂಟೆಯ ವೇಳೆಗೆ ಒಬ್ಬೊಬ್ಬರಾಗಿ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. 103 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

    ಊಟಕ್ಕೆ ಬಳಸಿದ್ದ ಪದಾರ್ಥಗಳು ಹಳಸಿರಬಹುದಾ ಅಥವಾ ಹಲ್ಲಿ ಬಿದ್ದಿದ್ದರಿಂದ ಈ ರೀತಿ ಆಗಿದೆಯಾ ಎಂಬ ಮಾಹಿತಿಯನ್ನು ಕಲೆ ಹಾಕ್ತಿದ್ದೇವೆ. ಮಕ್ಕಳ ಪರಿಸ್ಥಿತಿ ನೋಡಿ ಇಂದೇ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಎಂದು ಇಂದಿರಾ ಗಾಂಧಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಇಂದಿರಾಗಾಂಧಿ ಆಸ್ಪತ್ರೆಗೆ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಭೇಟಿ ನೀಡಿದ್ದು, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

    ಮಕ್ಕಳ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ವಿಜಯ್ ಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇಂಟರ್ ಗ್ರೇಟೆಂಡ್ ಚೈಲ್ಡ್ ಪ್ರೊಟೆಕ್ಟ್ ಸ್ಕೀಂ ನಲ್ಲಿ ಬಾಲಮಂದಿರ ನಡೆಯುತ್ತಿದೆ. ಭಾನುವಾರ ಸಂಜೆ ಅಡುಗೆ ಮಾಡಿ ಮಕ್ಕಳು ರಾತ್ರಿ ಊಟ ಮಾಡಿದ್ದಾರೆ. ನಂತರ ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ 103 ಜನ ಮಕ್ಕಳನ್ನೂ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಅಸ್ವಸ್ಥರಾಗಿದ್ದ ಮೂರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸದ್ಯಕ್ಕೆ 40 ಮಕ್ಕಳು ಚಿಕಿತ್ಸೆಯಲ್ಲಿ ಇದ್ದಾರೆ. ಮಕ್ಕಳನ್ನು ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಅಡುಗೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಈಗಾಗಲೇ ಆಹಾರದ ಮಾದರಿಯನ್ನು ಲ್ಯಾಬ್ ಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್ ಶಂಕರ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರ ಶ್ವಾಸಕೋಶದಲ್ಲಿ ಸೋಂಕು ಪತ್ತೆ – ಶ್ರೀಗಳ ಆಪ್ತ ವೈದ್ಯರು ಸ್ಪಷ್ಟನೆ

    ನಡೆದಾಡುವ ದೇವರ ಶ್ವಾಸಕೋಶದಲ್ಲಿ ಸೋಂಕು ಪತ್ತೆ – ಶ್ರೀಗಳ ಆಪ್ತ ವೈದ್ಯರು ಸ್ಪಷ್ಟನೆ

    ತುಮಕೂರು: ಸಿದ್ದಗಂಗಾ ಶ್ರೀಗಳ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ಐದಾರು ದಿನದಿಂದ ಶ್ವಾಸಕೋಶದಲ್ಲಿ ಕಫ ಕಾಣಿಸಿಕೊಂಡಿದ್ದರ ಪರಿಣಾಮ ಇಂದು ಸೋಂಕು ಪತ್ತೆಯಾಗಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ವೈದ್ಯರು, ಶನಿವಾರ ಸಂಜೆ ಸೋಂಕು ತಗಲಿರುವುದು ರಕ್ತಪರೀಕ್ಷೆ ಮೂಲಕ ದೃಢಪಟ್ಟಿದೆ. ಸದ್ಯಕ್ಕೆ ಇಂದು ಬೆಳಗ್ಗೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾಸಕೋಶ ಸೋಂಕಿಗೆ 5-10 ದಿನ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ. ಅಲ್ಲದೆ ಈ ಹಿಂದೆ ಪಿತ್ತಕೋಶದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಸ್ಟಂಟ್ ತೆರವುಗೊಳಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹಾಗಾಗಿ ಇದೀಗ ಪಿತ್ತಕೋಶಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇಲ್ಲ. ಬದಲಾಗಿ ಶ್ವಾಸಕೋಶಕ್ಕೆ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಶ್ರೀಗಳನ್ನು ರೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಬಳಿಕ ಯಾವುದೇ ರೀತಿಯ ಸೋಂಕು ತಗುಲದಂತೆ ಎಷ್ಟೇ ನಿಗಾವಹಿಸಿದ್ರೂ ಕಳೆದ ಮೂರು ದಿನಗಳಿಂದ ಕಫ ಹೆಚ್ಚಾಗಿ ಇಂದು ಮತ್ತೆ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ನಿಶ್ಯಕ್ತಿಯೂ ಕಾಣಿಸಿಕೊಂಡಿದೆ. ಎಲ್ಲದಕ್ಕೂ ಶ್ರೀಮಠದಲ್ಲೇ ಚಿಕಿತ್ಸೆ ನಡೆಸಲು ಎಲ್ಲ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಬೇರೆ ಯಾವುದೇ ಆಸ್ಪತ್ರೆಗೆ ಶಿಫ್ಟ್ ಮಾಡುವ ಮಾತೇ ಇಲ್ಲ ಎಂದು ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜಿಎಸ್ ವಿದ್ಯಾರ್ಥಿನಿಲಯದಲ್ಲಿ ಫುಡ್ ಪಾಯಿಸನ್ ಶಂಕೆ – 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಬಿಜಿಎಸ್ ವಿದ್ಯಾರ್ಥಿನಿಲಯದಲ್ಲಿ ಫುಡ್ ಪಾಯಿಸನ್ ಶಂಕೆ – 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಿಜಿಎಸ್ ವಿದ್ಯಾರ್ಥಿನಿಲಯದಲ್ಲಿ ವಾಂತಿ-ಭೇದಿ ಜ್ವರದಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅಗಲಗುರ್ಕಿ ಗ್ರಾಮದ ಬಳಿ ಇರುವ ಆದಿಚುಂಚನಗಿರಿ ಮಠದ ಬಿಜಿಎಸ್ ಶಿಕ್ಷಣ ಟ್ರಸ್ಟ್ ಗೆ ಸೇರಿದ ಬಿಜಿಎಸ್ ವಿದ್ಯಾರ್ಥಿನಿಲಯದಲ್ಲಿದ್ದ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಅಂದ ಹಾಗೆ ಕಳೆದ ರಾತ್ರಿ ಊಟ ಮಾಡಿದ ನಂತರ 40ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಕೂಡಲೇ ಎಚ್ಚೆತ್ತ ವಿದ್ಯಾರ್ಥಿನಿಲಯದ ಸಿಬ್ಬಂದಿ ಚಿಕ್ಕಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಂಗಳವಾರ ತಡರಾತ್ರಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, 20 ಮಂದಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ. ಉಳಿದ ಮಂದಿ ಆಸ್ಪತ್ರೆಯಲ್ಲೇ ಡೇ ಕೇರ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಇನ್ನೂ ಬೆಳಿಗ್ಗೆಯೂ ಸಹ ಕೆಲ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

    ಈ ವಿಷಯ ತಿಳಿದು ಚಿತ್ರೀಕರಣಕ್ಕೆ ಮುಂದಾದ ಪಬ್ಲಿಕ್ ಟವಿ ಕ್ಯಾಮೆರಾಗೆ ವಾರ್ಡನ್ ಕೈ ಅಡ್ಡ ಹಾಕಿ ಚಿತ್ರೀಕರಣ ಮಾಡದಂತೆ ತಡೆ ಒಡ್ಡಿದ್ದಾರೆ. ತದನಂತರ ಪಬ್ಲಿಕ್ ಟಿವಿಗೆ ಮೌಖಿಕವಾಗಿ ಮಾಹಿತಿ ನೀಡಿದ ಪ್ರಿನ್ಸಿಪಾಲ್ ಮೋಹನ್, ಕಳೆದ ರಾತ್ರಿಯಿಂದ ವಿದ್ಯಾರ್ಥಿಗಳಲ್ಲಿ ವೈರಲ್ ಫೀವರ್ ಕಾಣಿಸಿಕೊಂಡಿದೆ. ಹೀಗಾಗಿ ಒಬ್ಬರಿಂದ ಒಬ್ಬರಿಗೆ ವೈರಲ್ ಫೀವರ್ ಹರಡಿದೆ ಅಂತ ಮಾಹಿತಿ ನೀಡಿದ್ದಾರೆ. ಆದರೆ ಇಷ್ಟೊಂದು ಮಂದಿಗೆ ಅದೇಗೆ ಒಮ್ಮೆಲೆ ವೈರಲ್ ಫೀವರ್ ಹರಡಿದೆ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಫುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ ಕಾನ್ಪರೆನ್ಸ್ ಮೂಲಕ ಸಿದ್ದಗಂಗಾ ಶ್ರೀಗಳು ಮಾತು

    ವಿಡಿಯೋ ಕಾನ್ಪರೆನ್ಸ್ ಮೂಲಕ ಸಿದ್ದಗಂಗಾ ಶ್ರೀಗಳು ಮಾತು

    ತುಮಕೂರು: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಡೆದಾಡುವ ದೇವರು ಮಠ ತಲುಪಿದ್ದು, ಇದುವರೆಗೂ ಯಾರಿಗೂ ದರ್ಶನ ಭಾಗ್ಯ ಕೊಟ್ಟಿಲ್ಲ. ಆದರೆ ಈಗ ವಿಡಿಯೋ ಕಾನ್ಪರೆನ್ಸ್ ಮೂಲಕ ಶ್ರೀಗಳು ಮಾತನಾಡಿದ್ದಾರೆ.

    ಸದ್ಯಕ್ಕೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡಿದೆ. ಹಳೆಯ ವಿದ್ಯಾರ್ಥಿ ಸಂಘದಿಂದ ನಡೆದ ಸಭೆಯಲ್ಲಿ ತುಮಕೂರಿನ ಸಿದ್ದಗಂಗಾ ಶ್ರೀಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ್ದಾರೆ. ಸುಮಾರು 4 ನಿಮಿಷಗಳ ಕಾಲ ಮಾತನಾಡಿದ ಶ್ರೀಗಳು, ನನ್ನ ಆರೋಗ್ಯ ಚೆನ್ನಾಗಿದೆ. ಯಾರು ಆತಂಕಪಡುವುದು ಬೇಡ. ನನಗೇನು ಆಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಿಂದ ಸಿದ್ದಗಂಗಾ ಶ್ರೀಗಳ ಡಿಸ್ಚಾರ್ಜ್ – ಮಠ ತಲುಪಿದ ಸ್ವಾಮೀಜಿ

    ಸಿದ್ದಗಂಗಾ ಶ್ರೀಗಳು ಡಿ.19 ರಂದು ರೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಠ ತಲುಪಿದ್ದರು. ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಸತತ 2 ಗಂಟೆಗಳ ಕಾಲ ವೈದ್ಯರು ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದರು.

    ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಮೊದಲಿನಂತೆಯೇ ಊಟ, ಪೂಜೆ ಮಾಡುತ್ತಾರೆ. ಆದ್ದರಿಂದ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದೇವೆ. ಅವರು ರಿಕವರಿ ಆಗಿರುವುದು ಪವಾಡ. ಇದು ಯಾವುದೇ ರೆಕಾರ್ಡ್ ಅಲ್ಲ. ನಮ್ಮ ಕೆಲಸ ನಾವು ಮಾಡಿದ್ದೇವೆ. ಅವರಿಗೆ ಚಿಕಿತ್ಸೆ ನೀಡಿರುವುದು ಖುಷಿ ಇದೆ. ಸದ್ಯಕ್ಕೆ ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಡಾ. ಮೊಹಮ್ಮದ್ ರೇಲಾ ಅವರು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷ ದುರಂತ – ಡಿಸ್ಚಾರ್ಜ್ ಆಗಿದ್ದವರು ತಡರಾತ್ರಿ ಮತ್ತೆ ಆಸ್ಪತ್ರೆಗೆ ದಾಖಲು

    ಸುಳ್ವಾಡಿ ವಿಷ ದುರಂತ – ಡಿಸ್ಚಾರ್ಜ್ ಆಗಿದ್ದವರು ತಡರಾತ್ರಿ ಮತ್ತೆ ಆಸ್ಪತ್ರೆಗೆ ದಾಖಲು

    ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸ್ಚಾರ್ಜ್ ಆದ ಅಸ್ವಸ್ಥರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ವಿಷಪ್ರಸಾದ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಅಸ್ವಸ್ಥರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಅವರಿಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಡರಾತ್ರಿ ಮೂವರು ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಎಂ.ಜಿ.ದೊಡ್ಡಿ ನಿವಾಸಿಗಳಾದ ಪಳನಿಯಮ್ಮ, ಮಾದಮ್ಮ ಮತ್ತು ಮಾದ ಆಸ್ಪತ್ರೆಗೆ ದಾಖಲಾಗಿರುವ ಅಸ್ವಸ್ಥರು.

    ಈ ಮೂವರು ಡಿಸೆಂಬರ್ 20 ರಂದು ಮೈಸೂರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಆದರೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ವೈದ್ಯರು ಪರೀಕ್ಷೆ ಮಾಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಒಂದು ವೇಳೆ ಆರೋಗ್ಯದಲ್ಲಿ ಮತ್ತೆ ಏರುಪೇರಾದರೆ ಮೈಸೂರಿಗೆ ಕರೆತರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

    ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ತಿಂದು 17 ಮಂದಿ ಮೃತಪಟ್ಟಿದ್ದು, ಇನ್ನೂ ಅನೇಕರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ನಾಲ್ವರು ಆರೋಪಿಗಳಾದ ಇಮ್ಮಡಿ ಮಹದೇವ ಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಇವರನ್ನು ಮೈಸೂರು ಜೈಲಿಗೆ ಕಳುಹಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗರ್ಭಪಾತದ ವೇಳೆ ಹೊರ ಬಂತು ಭ್ರೂಣ – ಆಶಾ ಕಾರ್ಯಕರ್ತೆಯ ಸ್ಥಿತಿ ಗಂಭೀರ

    ಗರ್ಭಪಾತದ ವೇಳೆ ಹೊರ ಬಂತು ಭ್ರೂಣ – ಆಶಾ ಕಾರ್ಯಕರ್ತೆಯ ಸ್ಥಿತಿ ಗಂಭೀರ

    ಮಂಡ್ಯ: ಗರ್ಭಪಾತದ ವೇಳೆ ತುರುವೇಕೆರೆಯ ಸರ್ಕಾರಿ ವೈದ್ಯರ ಎಡವಟ್ಟಿನಿಂದಾಗಿ 5 ತಿಂಗಳ ಗರ್ಭಿಣಿಯೊಬ್ಬರು ಈಗ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದೊಡ್ಡಬೀರನಕೆರೆ ಗ್ರಾಮದ 5 ತಿಂಗಳ ಗರ್ಭಿಣಿ ರಾಧಾ, ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಬುಧವಾರ ತುರುವೇಕೆರೆ ತಾಲೂಕಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ರಾಧಾ ಅವರಿಗೆ ವೈದ್ಯ ದಂಪತಿ ಪುರುಷೋತ್ತಮ್ ಮತ್ತು ಅವರ ಪತ್ನಿ ಸುಜಾತ ಗರ್ಭಪಾತ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ವೈದ್ಯರು ಗರ್ಭಪಾತ ಮಾಡುವಾಗ ಬೆಳವಣಿಗೆಯಾಗದ ಭ್ರೂಣ ಹೊರ ಬಂದಿದೆ. ರಾಧಾ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ವೈದ್ಯರು ರಾಧಾರನ್ನು ನಾಗಮಂಗಲ ತಾಲೂಕಿನ, ಬೆಳ್ಳೂರು ಕ್ರಾಸ್‍ನಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಸೇರಿಸಿ ಹೊರಟು ಹೋಗಿದ್ದಾರೆ.

    ಇತ್ತ ನನ್ನ ಅನುಮತಿಯಿಲ್ಲದೇ ವೈದ್ಯರು ನನ್ನ ಮಗುವನ್ನು ಗರ್ಭಪಾತ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ದೂರು ನೀಡಿದರೂ ತುರುವೇಕೆರೆ ಪೊಲೀಸರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ರಾಧಾ ಪತಿ ಬಸವರಾಜು ಆರೋಪ ಮಾಡಿದ್ದಾರೆ.

    12 ವರ್ಷಗಳ ಹಿಂದೆ ಸೋದರಮಾವ ಬಸವರಾಜು ಜೊತೆ ರಾಧಾ ಮದುವೆಯಾಗಿದ್ದರು. ಈಗಾಗಲೇ ರಾಧಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಶಾ ಕಾರ್ಯಕರ್ತೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ವೈದ್ಯರ ಎಡವಟ್ಟಿನ ಹಿಂದೆ ಹೆಣ್ಣು ಭ್ರೂಣ ಹತ್ಯೆಯ ಅನುಮಾನ ಕೂಡ ವ್ಯಕ್ತವಾಗುತ್ತಿದ್ದು, ವ್ಯಾಪಕ ತನಿಖೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಆಹಾರ ಸೇವನೆ – ಒಂದೇ ಕುಟುಂಬದ ನಾಲ್ವರ ದುರ್ಮರಣ

    ವಿಷ ಆಹಾರ ಸೇವನೆ – ಒಂದೇ ಕುಟುಂಬದ ನಾಲ್ವರ ದುರ್ಮರಣ

    ಚಿತ್ರದುರ್ಗ: ವಿಷಪೂರಿತ ಆಹಾರ ಸೇವನೆ ಮಾಡಿದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ನಡೆದಿದೆ.

    ಚಿತ್ತಪ್ಪ(80), ಶಶಿಧರ್ (40), ಹೇಮಾಲತಾ(30) ಮತ್ತು ಭಾಗ್ಯಮ್ಮ (35) ಮೃತ ದುರ್ದೈವಿಗಳು. ಮೃತರು ಒಂದೇ ಕುಟುಂಬದ ಅಪ್ಪ ಹಾಗೂ ಮೂವರು ಮಕ್ಕಳು. ಇನ್ನುಳಿದ ಮೂವರು ಸ್ಥಿತಿ ಗಂಭೀರವಾಗಿದ್ದು, ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗುರುವಾರ ರಾತ್ರಿ ಒಂದೇ ಕುಟುಂಬದ ಏಳು ಮಂದಿ ಮುದ್ದೆ ಮತ್ತು ಅವರೆಕಾಳು ಸಾರು ಊಟ ಮಾಡಿದ್ದಾರೆ. ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಿತ್ತಪ್ಪ, ಶಶಿಧರ್, ಹೇಮಾಲತಾ ಮತ್ತು ಭಾಗ್ಯಮ್ಮ ನಾಲ್ವರು ಮೃತಪಟ್ಟಿದ್ದಾರೆ.

    ತೀವ್ರ ಅಸ್ವಸ್ಥಗೊಂಡ ಸದಾನಂದ (13) ಮುದ್ದುರಾಜ್ (14) ಮತ್ತು ಅಜಯ್ (14)ಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

    ಈ ಘಟನೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಐಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂದು ತಂದೆ, ಇಂದು ತಾಯಿ – ದೇವಿ ಪ್ರಸಾದದಿಂದ ಮಕ್ಕಳು ಅನಾಥರಾದ್ರು!

    ಅಂದು ತಂದೆ, ಇಂದು ತಾಯಿ – ದೇವಿ ಪ್ರಸಾದದಿಂದ ಮಕ್ಕಳು ಅನಾಥರಾದ್ರು!

    ಮೈಸೂರು: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಸೋಮವಾರ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಿಧನರಾಗಿದ್ದಾರೆ.

    ಬೆಳಗ್ಗೆ 8:45ಕ್ಕೆ ಮೋನಿ ಬಾಯಿ ಮೃತಪಟ್ಟಿದ್ದಾರೆ. ಮೈಲಿ ಬಾಯಿ ಪತಿ ಕೃಷ್ಣ ನಾಯಕ್ ಸಹ ಮೊನ್ನೆ ನಿಧನವಾಗಿದ್ದರು. ಮೃತರು ಕೋಟೆಪುದೆ ಗ್ರಾಮದವರು ಎಂದು ತಿಳಿದು ಬಂದಿದೆ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೈಲಿಬಾಯಿ ಕೂಡ ಮೃತಪಟ್ಟಿದ್ದಾರೆ. ಇತ್ತ ಅಪ್ಪ ಅಮ್ಮನನ್ನ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.

    ಏನಾಗಿತ್ತು?
    ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಮಾರ್ಟಳ್ಳಿಯ ಕೃಷ್ಣ ನಾಯ್ಕ ಪತ್ನಿ ಮೈಲಿ ಬಾಯಿ ಜೊತೆ ಹೋಗಿದ್ದರು. ನಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ನಮ್ಮ ಕುಟುಂಬಕ್ಕೆ ದಯೆ ತೋರು ಎಂದು ಮಾರಮ್ಮನಿಗೆ ಪೂಜೆಯನ್ನೂ ಸಲ್ಲಿಸಿದ್ದರು. ಪೂಜೆ ಬಳಿಕ ದೇಗುಲದಲ್ಲಿ ಪ್ರಸಾದ ವಿತರಣೆ ಮಾಡಿದ್ದು, ಅದನ್ನು ದೇವಸ್ಥಾನದಲ್ಲೇ ಕೃಷ್ಣ ನಾಯ್ಕ ದಂಪತಿ ತಿಂದಿದ್ದರು. ಮನೆಗೆ ಬಂದು ಮಗಳಿಗೆ ಪ್ರಸಾದ ಕೊಟ್ಟಿದ್ದರು. ಆದರೆ ಮಗಳು ಪ್ರಿಯಾ ತಕ್ಷಣ ಪ್ರಸಾದ ತಿನ್ನಲಿಲ್ಲ. ಇದಾದ ಸ್ವಲ್ಪ ಸಮಯದಲ್ಲೇ ಕೃಷ್ಣ ನಾಯ್ಕರ ಪತ್ನಿ ಮೈಲಿ ಬಾಯಿಗೆ ವಾಂತಿ, ತಲೆ ಸುತ್ತು ಶುರುವಾಗಿದೆ. ಆದರೆ ತಾವು ತಿಂದಿದ್ದು ವಿಷಪೂರಿತ ಆಹಾರ ಎಂದು ಗೊತ್ತಾಗದ ಕೃಷ್ಣ ನಾಯ್ಕ ಪತ್ನಿಯ ಬಳಿ, ಬಿಸಿಲಿನಿಂದಾಗಿ ಹೀಗಾಗಿದೆ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದರು.

    ಸಮಯ ಕಳೆದಂತೆ ಪತ್ನಿಯ ವಾಂತಿ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಅವರು ಸಮೀಪದ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಇವರಂತೆಯೇ ಆಗಮಿಸಿದ್ದವರನ್ನು ನೋಡಿದ್ದಾರೆ. ಅಲ್ಲಿ ವಿಚಾರಿಸಿದಾಗ ಪ್ರಸಾದಲ್ಲಿ ವಿಷ ಸೇರ್ಪಡೆಯಾಗಿರುವ ವಿಚಾರ ಗೊತ್ತಾಗಿದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಅವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಅಷ್ಟರಲ್ಲೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಹೀಗಾಗಿ ಅವರನ್ನು ಅಂಬುಲೆನ್ಸ್ ನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿತ್ತು. ಮೈಸೂರು ತಲುಪೋ ಮುನ್ನವೇ ಕೃಷ್ಣ ನಾಯ್ಕ ಅವರಿಗೂ ವಾಂತಿ ಶುರುವಾಗಿದೆ. ಅವರನ್ನು ನೇರವಾಗಿ ಕೆ.ಆರ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಲ್ಲಿ ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬಂದ 5 ನಿಮಿಷಕ್ಕೇ ಅಪ್ಪ ನನ್ನ ಬಿಟ್ಟು ಬಿಟ್ಟು ಹೊರಟು ಹೋದ್ರು ಎಂದು ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ಮೃತ ಕೃಷ್ಣ ನಾಯ್ಕರ ಪುತ್ರಿ ಪ್ರಿಯಾ ವಿವರಿಸಿದ್ದರು.

    ನನ್ನ ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಅಪ್ಪ ಅಮ್ಮ ಊರು ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅಪ್ಪನನ್ನು ಕಳೆದುಕೊಂಡಿದ್ದೇವೆ. ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಏನೂ ಹೇಳೋಕಾಗಲ್ಲ ಅಂತಿದ್ದಾರೆ. ಅವರನ್ನು ಉಳಿಸಿಕೊಡಿ. ಅವರೂ ಹೋದರೆ ನಮ್ಮ ವಿದ್ಯಾಭ್ಯಾಸವೇ ನಿಂತು ಹೋಗುತ್ತದೆ. ನಮ್ಮ ಕುಟುಂಬದಲ್ಲಿ ನಾನು ಚಿಕ್ಕವಳು. ಅಕ್ಕ ಹಾಗೂ ನನಗೊಬ್ಬ ತಮ್ಮ ಇದ್ದಾರೆ. ಎಲ್ರೂ ಹೋದ್ರೆ ನಮ್ಮನ್ನು ಓದಿಸುವವರು ಯಾರಿದ್ದಾರೆ..? ನಮ್ಮ ಅಮ್ಮನ ಚಿಕಿತ್ಸೆಗೆ ನೆರವಾಗಿ. ಯಾರು ಏನೋ ಮಾಡ್ಕೊಂಡು ನಮ್ಮ ಅಪ್ಪನನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ನಮ್ಮ ಅಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಸಾರ್ ಎಂದು ಪ್ರಿಯಾ ಗೋಗರೆದಿದ್ದಳು.

    ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ಏನೂ ಅರಿಯದ ಈ ಮುಗ್ಧ ಮಕ್ಕಳ ಅಪ್ಪ ಯಾರದೋ ಸಿಟ್ಟು, ದ್ವೇಷಕ್ಕೆ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಇಂದು ಅಮ್ಮ ಕೂಡ ಮಕ್ಕಳನ್ನು ತಬ್ಬಲಿ ಮಾಡಿ ಅಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv