Tag: treatment

  • 7 ತಿಂಗಳ ಮಗುವನ್ನ ಕೊಂದು ಮಧ್ಯಾಹ್ನದಿಂದ ಸಂಜೆವರೆಗೂ ತೊಡೆ ಮೇಲೆ ಮಲಗಿಸಿಕೊಂಡ ತಾಯಿ

    7 ತಿಂಗಳ ಮಗುವನ್ನ ಕೊಂದು ಮಧ್ಯಾಹ್ನದಿಂದ ಸಂಜೆವರೆಗೂ ತೊಡೆ ಮೇಲೆ ಮಲಗಿಸಿಕೊಂಡ ತಾಯಿ

    ಭೋಪಾಲ್: ತಾಯಿಯೊಬ್ಬಳು ಏಳು ತಿಂಗಳ ಹಸುಕೂಸನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.

    ಮಗವನ್ನು ಕೊಲೆ ಮಾಡಿದ ತಾಯಿ ಕಾರಣವನ್ನು ಹೇಳಿದ ಬಳಿಕ ಕಣ್ಣಲ್ಲಿ ನೀರು ತರಿಸುತ್ತದೆ. ಮೃತ ಮಗು ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಆದರೆ ಮಗುವಿಗೆ ಚಿಕಿತ್ಸೆ ಕೊಡಿಸಲು ತಾಯಿ ಬಳಿ ಹಣವಿರಲಿಲ್ಲ. ಇದರಿಂದ ನೊಂದ ತಾಯಿ ಮಗುವನ್ನು ಹತ್ಯೆಗೈದಿದ್ದಾಳೆ.

    ಆರೋಪಿಯನ್ನು ಮಾಯಾ ಡಾಂಗೊರೆ ಎಂದು ಗುರುತಿಸಲಾಗಿದೆ. ಈಕೆ ಅಹ್ಮದ್ಪರ್ ಖೈಗಾನ್ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಆಕೆ ಸಂಪಾದನೆ ಮಾಡಿದ ಹಣ ಪ್ರತಿದಿನ ಮನೆಯ ಖರ್ಚಿಗೆ ಮಾತ್ರ ಸಾಕಾಗುತ್ತಿತ್ತು. ಈಕೆ 6 ವರ್ಷದ ಹಿಂದೆ ಒಂದು ಹೆಣ್ಣು ಮಗುವಾಗಿತ್ತು. ಈಗ 7 ತಿಂಗಳ ಹಿಂದೆಯೂ ಮತ್ತೊಂದು ಹೆಣ್ಣು ಮಗುವಾಗಿದೆ.

    ಆರೋಪಿ ಮಾಯಾ ತನ್ನ ಮಗುವನ್ನು ಮಧ್ಯಾಹ್ನದಿಂದ ಸಂಜೆಯವರೆಗೂ ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದಳು. ಆದರೆ ಅವರ ಮನೆಯಲ್ಲಿ ಏನೋ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.

    ಆರೋಪಿ ಮಾಯಾಗೆ ಎರಡನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ಪತಿ ಆಕೆಯ ಜೊತೆ ದಿನಾವೂ ಜಗಳವಾಡುತ್ತಿದ್ದನು. ಅಷ್ಟೇ ಅಲ್ಲದೇ 5 ದಿನಗಳ ಹಿಂದೆ ಮಾಯಾ ಮತ್ತು ಹಿರಿಯ ಮಗಳಿಗೆ ಹೊಡೆದು ಮನೆಬಿಟ್ಟು ಹೋಗಿದ್ದನು. ಕೊನೆಗೆ ತನ್ನ ಎರಡು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಾಯಾ ಮೇಲಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ 7 ತಿಂಗಳ ಮಗುವಿಗೆ ಕಾಯಿಲೆ ಬಂದಿದೆ.

    ತನ್ನ ಮಗವನ್ನು ಉಳಿಸಿಕೊಳ್ಳಬೇಕು ಎಂದು ಮಾಯಾ ಆಸ್ಪತ್ರೆಗೆ ತೋರಿಸಲು ಹಣದ ವ್ಯವಸ್ಥೆ ಮಾಡಲು ಕಷ್ಟಪಟ್ಟಿದ್ದಾಳೆ. ಆದರೆ ಯಾರೊಬ್ಬರು ಆಕೆಗೆ ಸಹಾಯ ಮಾಡಲಿಲ್ಲ. ಕೊನೆಗೆ ಮಗುವನ್ನು ಹತ್ಯೆ ಮಾಡಿದ್ದಾಳೆ.

  • ಚಾಮರಾಜನಗರದ ಕಾಡಂಚಿನಲ್ಲಿ ವಿಚಿತ್ರ ಕಾಯಿಲೆ

    ಚಾಮರಾಜನಗರದ ಕಾಡಂಚಿನಲ್ಲಿ ವಿಚಿತ್ರ ಕಾಯಿಲೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದ್ದು, ಇದರಿಂದ ಇಲ್ಲಿನ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಹನೂರು ತಾಲೂಕಿನ ಕಾಡಂಚಿನ ಗ್ರಾಮಗಳಾದ ಟಿ.ಜಿ.ದೊಡ್ಡಿ, ಆರ್ ಬಿ ತಾಂಡದ ಗ್ರಾಮದ ಜಾಗೇರಿ ತಾಂಡ ಜನಾಂಗದ 450ಕ್ಕೂ ಹೆಚ್ಚು ಜನರಿಗೆ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಮೊದಲಿಗೆ ತಲೆ ನೋವು, ಜ್ವರ, ಕೀಲು ನೋವು, ತಲೆ ಸುತ್ತು ಕಾಣಿಸಿಕೊಂಡು ಸುಸ್ತಿನಿಂದ ಇಲ್ಲಿನ ಜನ ಬಳಲುತ್ತಿದ್ದಾರೆ.

    ಜನರು ಆಸ್ಪತ್ರೆಗೆ ಹೋದರೆ ಇದು ಯಾವ ಕಾಯಿಲೆ ಎಂದು ವೈದ್ಯರು ಹೇಳುತ್ತಿಲ್ಲ. ವೈದ್ಯರು ಕೊಡುವ ಔಷಧಿಯನ್ನು ತೆಗೆದುಕೊಂಡರೂ ಕಾಯಿಲೆ ಮಾತ್ರ ಗುಣ ಮುಖವಾಗುತ್ತಿಲ್ಲ. ಹೀಗಾಗಿ ಸದ್ಯ ಇಲ್ಲಿನ ಜನ ಆಸ್ಪತ್ರೆಗೂ ಹೋಗದ ಸ್ಥಿತಿ ನಿರ್ಮಾಣವಾಗಿದೆ.

    ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಆರ್.ನರೇಂದ್ರಗೆ ತಿಳಿಸಿದರೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತು ಕತೆ ನಡೆಸಿಲ್ಲ. ಹೀಗಾಗಿ ಇಲ್ಲಿನ ಜನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

  • ಗಾಯಗೊಂಡ ನಾಗರಹಾವಿನ ಮರಿಗೆ ಚಿಕಿತ್ಸೆ ನೀಡಿದ ಅಗ್ನಿಶಾಮಕ ಸಿಬ್ಬಂದಿ

    ಗಾಯಗೊಂಡ ನಾಗರಹಾವಿನ ಮರಿಗೆ ಚಿಕಿತ್ಸೆ ನೀಡಿದ ಅಗ್ನಿಶಾಮಕ ಸಿಬ್ಬಂದಿ

    ಮೈಸೂರು: ಗಾಯಗೊಂಡಿದ್ದ ನಾಗರ ಹಾವಿನ ಮರಿಗೆ ಮೈಸೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಸ್ನೇಕ್ ಕೆಂಪರಾಜು ಅವರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಬನ್ನಿಮಂಟಪ ಬಳಿ ವಾಹನ ಹರಿದು ನಾಗರ ಹಾವಿನ ಮರಿ ಗಾಯಗೊಂಡಿತ್ತು. ಇದನ್ನು ಗಮನಿಸಿದ ಸ್ನೇಕ್ ಕೆಂಪರಾಜು ಅವರು ನಾಗರ ಮರಿಯನ್ನು ರಕ್ಷಿಸಿದ್ದರು. ವಾಹನ ಹರಿದ ಪರಿಣಾಮ ಹಾವಿನ ಬೆನ್ನು ಮೂಳೆಗೆ ಗಾಯವಾಗಿತ್ತು. ಹೀಗಾಗಿ ಹಾವು ಮುಂದೆ ಹೋಗಲು ಸಾಧ್ಯವಾಗದೇ ಪರದಾಡುತ್ತಿತ್ತು.

    ಆಗ ಪಶು ವೈದ್ಯರ ಮಾರ್ಗದರ್ಶನದೊಂದಿಗೆ ಸ್ನೇಕ್ ಕೆಂಪರಾಜು ಅವರು ಹಾವಿಗೆ ಔಷಧಿ ಹಾಕಿ, ಬ್ಯಾಂಡೇಜ್ ಕಟ್ಟಿ ಚಿಕಿತ್ಸೆ ನೀಡುವ ಮೂಲಕ ಒಂದು ಪುಟ್ಟ ಜೀವವನ್ನು ಉಳಿಸಿದ್ದಾರೆ.

    ಕೆಂಪರಾಜು ಅವರು ಹಾವಿಗೆ ಚಿಕಿತ್ಸೆ ನೀಡಿ ಬಳಿಕ ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈಗಿನ ಕಾಲದಲ್ಲಿ ಮನುಷ್ಯ ಸಾಯುತ್ತಿದ್ದರೆ ಸಹಾಯಕ್ಕೆ ಮುಂದೆ ಬಾರದ ಜನರ ಮಧ್ಯೆ ಪುಟ್ಟ ಹಾವಿನ ಮರಿಯನ್ನು ರಕ್ಷಿಸಿ ಉರಗ ಪ್ರೇಮ ಮೆರೆದಿರುವ ಕೆಂಪರಾಜು ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    https://www.youtube.com/watch?v=6zmwUI78LMk

  • ಗಾಯಾಳುಗಳನ್ನು  ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಇಂಜೆಕ್ಷನ್ ಕೊಟ್ಟ ಸಂಸದ ಜಾಧವ್

    ಗಾಯಾಳುಗಳನ್ನು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಇಂಜೆಕ್ಷನ್ ಕೊಟ್ಟ ಸಂಸದ ಜಾಧವ್

    ಯಾದಗಿರಿ: ಅಪಘಾತಕ್ಕೀಡಾಗಿದ್ದ ಗಾಯಾಳುಗಳನ್ನು ಸ್ವಂತ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಸ್ವತಃ ತಾವೇ ಚಿಕಿತ್ಸೆ ನೀಡಿ ಸಂಸದ ಉಮೇಶ್ ಜಾಧವ್ ಮಾನವೀಯತೆ ಮೆರೆದಿದ್ದಾರೆ.

    ಯಾದಗಿರಿ ನಗರದ ಕೆಎಸ್ಆರ್‌ಟಿಸಿ ಕಾರ್ಯಾಗಾರ ಬಳಿ ಬೈಕ್ ಮತ್ತು ಟಾಟಾ ಏಸ್ ವಾಹನದ ನಡುವೆ ಅಪಘಾತ ನಡೆದಿತ್ತು. ಈ ಘಟನೆಯಲ್ಲಿ ಗುರಮಿಠಕಲ್ ತಾಲೂಕಿನ ಕೆ.ಅರಕೇರಿ ಗ್ರಾಮದ ರಾಠೋಡ ಹಾಗೂ ನರೇಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು.

    ಆದೇ ದಾರಿಯಲ್ಲಿ ರೈಲು ಕಾರ್ಯಾಗಾರ ವೀಕ್ಷಿಸಲು ತೆರಳುತಿದ್ದ ಉಮೇಶ್ ಜಾಧವ್ ಅವರು ವಾಪಸ್ ಬರುತ್ತಿರುವಾಗ ಘಟನೆ ತಿಳಿದು ತಕ್ಷಣ ಸಹಾಯಕ್ಕೆ ಬಂದಿದ್ದಾರೆ. ಅಂಬುಲೆನ್ಸ್ ಬರುವುದು ತಡವಾಗುತ್ತದೆ ಎಂದು ಬೈಕಿನಲ್ಲಿ ಅಪಘಾತಕ್ಕೀಡಾಗಿದ್ದ ಇಬ್ಬರು ಯುವಕರನ್ನು ತಮ್ಮ ಕಾರಿನಲ್ಲೇ ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಮತ್ತು ಇಷ್ಟೇ ಅಲ್ಲದೇ ಜಾಧವ್ ಅವರು ಸ್ವತಃ ವೈದ್ಯರಾಗಿರುವುದರಿಂದ ತಾವೇ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

     

    ಇದಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಾಧವ್ ಅವರು, ರಸ್ತೆಯಲ್ಲಿ ಅಪಘಾತವಾದ ಸಂದರ್ಭದಲ್ಲಿ ಮೊದಲು ಕರೆದುಕೊಂಡು ಹೋಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕು. ಪ್ರಚಾರಕ್ಕಾಗಿ ಫೋಟೋ ತೆಗದುಕೊಳ್ಳುವುದನ್ನು ಮಾಡಬಾರದು ಎಂದು ಮನವಿ ಮಾಡಿದರು.

    ನಂತರ ಆಸ್ಪತ್ರೆಗೆ ಬಂದ ಯಾದಗಿರಿ ನಗರ ಟ್ರಾಫಿಕ್ ಪೋಲೀಸರು ಗಾಯಾಳುಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

  • ನೀರಾ ಸೇವಿಸಿ ಬಾಲಕ ಸೇರಿ 12 ಮಂದಿ ಆಸ್ಪತ್ರೆಗೆ ದಾಖಲು

    ನೀರಾ ಸೇವಿಸಿ ಬಾಲಕ ಸೇರಿ 12 ಮಂದಿ ಆಸ್ಪತ್ರೆಗೆ ದಾಖಲು

    ಚಿಕ್ಕಬಳ್ಳಾಪುರ: ನೀರಾ ಸೇವಿಸಿದ್ದ 12 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ.

    ತಾಲೂಕಿನ ಗುಟ್ಟಪಾಳ್ಯ ಗ್ರಾಮದ ಓರ್ವ ಬಾಲಕ ಸೇರಿ ಮೂವರು ಮಹಿಳೆಯರು, 8 ಮಂದಿ ಪುರುಷರು ಬಾಗೇಪಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂದಹಾಗೆ ಕೂಲಿ ಕಾಯಕಕ್ಕೆ ಎಂದು ಗಡಿಭಾಗದ ಆಂಧ್ರದ ಕಮ್ಮವಾರಪಲ್ಲಿಗೆ ತೆರಳಿದ್ದ ಈ 12 ಮಂದಿ ನೀರಾ ಸೇವಿಸಿದ್ದರು.

    ನೀರಾ ಸೇವನೆ ಮಾಡಿದ್ದ 12 ಮಂದಿಗೆ ಮಾರನೇ ದಿನ ತೀವ್ರ ಹೊಟ್ಟೆನೋವು ಹಾಗೂ ಭೇದಿ ಕಾಣಿಸಿಕೊಂಡಿದೆ. ಹೀಗಾಗಿ 12 ಮಂದಿ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಗೇಪಲ್ಲಿ ಗಡಿಭಾಗದ ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಈಚಲು ಮರಗಳಿಂದ ನೀರಾ ಇಳಿಸೋದು ಸೇವಿಸೋದು ಸಾಮಾನ್ಯವಾಗಿದೆ.

    ರೈತ ಚಂದ್ರ ಎಂಬವರ ತೋಟಕ್ಕೆ ಟೊಮೆಟೋ ಗಿಡಗಳಿಗೆ ತಂತಿ ಕಟ್ಟೋಕೆ ಹೋಗಿದ್ದಾಗ 12 ಮಂದಿ, ರೈತ ಚಂದ್ರಪ್ಪ ತಂದಿದ್ದ ನೀರಾ ಸೇವನೆ ಮಾಡಿದ್ದರು. ಸದ್ಯ ಎಲ್ಲರೂ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

  • ಬಾದಾಮಿ ಕೂಲ್ ಡ್ರಿಂಕ್ಸ್ ಕುಡಿದ ನಾಲ್ವರು ಅಸ್ವಸ್ಥ

    ಬಾದಾಮಿ ಕೂಲ್ ಡ್ರಿಂಕ್ಸ್ ಕುಡಿದ ನಾಲ್ವರು ಅಸ್ವಸ್ಥ

    ತುಮಕೂರು: ಅವಧಿ ಮೀರಿದ ಬಾದಾಮಿ ಕೂಲ್ ಡ್ರಿಂಕ್ಸ್ ಕುಡಿದು ನಾಲ್ವರು ಅಸ್ವಸ್ಥರಾಗಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದಿದೆ.

    ಯೋಗೇಶ್, ಆನಂದ್, ಕಿಶೋರ್ ಅಸ್ವಸ್ಥಗೊಂಡ ಯುವಕರು. ಯೋಗೇಶ್, ಆನಂದ್ ಹಾಗೂ ಕಿಶೋರ್ ಚೇಳೂರಿನ ವೆಂಕಟೇಶ್ವರ ಬೇಕರಿಯಲ್ಲಿ ಬಾದಾಮಿ ಕೂಲ್ ಡ್ರಿಂಕ್ಸ್ ಖರೀದಿಸಿದ್ದಾರೆ. ಆದರೆ ಈ ಕೂಲ್ ಡ್ರಿಂಕ್ಸ್‍ನ ಅವಧಿ ಮೀರಿದ್ದು ಅವರು ಗಮನಿಸಲಿಲ್ಲ.

    ಬಾದಾಮಿ ಡ್ರಿಂಕ್ಸ್ ಗಮನಿಸದೇ ಕುಡಿದ ಪರಿಣಾಮ ಅಸ್ವಸ್ಥಗೊಂಡಿದ್ದಾರೆ. ಬಾದಾಮಿ ಮಿಲ್ಕ್ ಕುಡಿಯುತ್ತಿದ್ದಂತೆ ಯುವಕರಿಗೆ ತಲೆ ಸುತ್ತು ಬಂದಿದೆ. ಅಲ್ಲದೆ ವಾಂತಿ ಕೂಡ ಮಾಡಿಕೊಂಡಿದ್ದಾರೆ. ಸದ್ಯ ಅಸ್ವಸ್ಥರು ಚೇಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಬೆಂಗಳೂರಿನಲ್ಲಿ ಹೈಟೆನ್ಷನ್ ತಂತಿಗೆ ವ್ಯಕ್ತಿ ಬಲಿ

    ಬೆಂಗಳೂರಿನಲ್ಲಿ ಹೈಟೆನ್ಷನ್ ತಂತಿಗೆ ವ್ಯಕ್ತಿ ಬಲಿ

    ಬೆಂಗಳೂರು: ನಗರದಲ್ಲಿ ಹೈಟೆನ್ಷನ್ ತಂತಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ನಗರದ ಮತ್ತಿಕೆರೆಯ ಮಂಜುನಾಥ ನಗರದಲ್ಲಿ ನಡೆದಿದೆ.

    ಸತೀಶ್ (23) ಸಾವನ್ನಪ್ಪಿದ ಕಾರ್ಮಿಕ. ಸತೀಶ್ ಮಂಜುನಾಥ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಮೇ 27ರಂದು ಸತೀಶ್ ಮೊದಲನೇ ಮಹಡಿಯಲ್ಲಿ ಕಾಂಕ್ರೀಟ್ ಹಾಕುತ್ತಿದ್ದರು.

    ಈ ವೇಳೆ ಕಟ್ಟಡದಲ್ಲಿ ಹಾದುಹೋಗಿದ್ದ ಹೈಟೆನ್ಷನ್ ವೈರ್ ಗೆ ಕಬ್ಬಿಣದ ಸರಳುಗಳು ತಗುಲಿದೆ. ಪರಿಣಾಮ ಸತೀಶ್‍ಗೆ ವಿದ್ಯುತ್ ಸ್ಪರ್ಶಿಸಿ ಶೇ.80 ಸುಟ್ಟು ಗಾಯಗೊಂಡಿದ್ದರು. ಕೂಡಲೇ ಗಾಯಾಳು ಸತೀಶ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ನಿರ್ಲಕ್ಷ್ಯದ ಅಡಿಯಲ್ಲಿ ಕಟ್ಟಡ ಮಾಲೀಕನ ವಿರುದ್ಧ ದೂರು ದಾಖಲಾಗಿದೆ. ಕಟ್ಟಡ ಮಾಲೀಕ ಜಯಕುಮಾರ್ ಹಾಗೂ ಮೇಸ್ತ್ರಿ ರಾಮಚಂದ್ರ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಸವೇಶ್ವರನಗರ ಪೊಲೀಸರು ಮಾಲೀಕ ಹಾಗೂ ಮೇಸ್ತ್ರಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

    ಈ ಮೂಲಕ ನಾಲ್ಕು ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ ಸಾವನ್ನಪ್ಪಿದ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

  • ಉಗ್ರರ ದಾಳಿಗೆ ಗಾಯಗೊಂಡಿದ್ದ ಹಾವೇರಿಯ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮ

    ಉಗ್ರರ ದಾಳಿಗೆ ಗಾಯಗೊಂಡಿದ್ದ ಹಾವೇರಿಯ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮ

    ಹಾವೇರಿ: ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ವಿರುದ್ಧ ಸರ್ಚ್ ಆಪರೇಷನ್ ನಡೆಸಲಾಗಿತ್ತು. ಈ ಕಾರ್ಯಾಚರಣೆ ವೇಳೆ ಉಗ್ರರ ದಾಳಿಗೆ ಯೋಧ ಶಿವಲಿಂಗೇಶ್ವರ ಪಾಟೀಲ(26) ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಯೋಧ ದೆಹಲಿಯ ಆರ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ತಮ್ಮ ಕೊನೆಯುಸಿರು ಎಳೆದಿದ್ದಾರೆ.

    2012ರಲ್ಲಿ ಭಾರತೀಯ ಸೇನೆಗೆ ಶಿವಲಿಂಗೇಶ್ವರ ಪಾಟೀಲ ಅವರು ಸೇರಿದ್ದರು. 6 ವರ್ಷದಿಂದ ಭಾರತೀಯ ಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸಿ ಇಂದು ದೇಶಕ್ಕಾಗಿ ಜೀವವನ್ನು ಬಿಟ್ಟು ವೀರ ಯೋಧ ಎನಿಸಿಕೊಂಡಿದ್ದಾರೆ. ಯೋಧ ಹುತಾತ್ಮರಾದ ವಿಷಯ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಸೋಮವಾರದಂದು ಹುತಾತ್ಮ ಯೋಧರ ಪಾರ್ಥೀವ ಶರೀರ ಅವರ ಸ್ವಗ್ರಾಮ ಗುಂಡೇನಹಳ್ಳಿ ಆಗಮಿಸಲಿದ್ದು, ಸಕಲ ಸರಕಾರಿ ಗೌರವ ಹಾಗೂ ಸೇನಾ ಗೌರವಗಳೊಂದಿಗೆ ಶಿವಲಿಂಗೇಶ್ವರ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ಕಾಲಿಗೆ ಗಾಯವಾಗಿ ಕಾಡಾನೆ ನರಳಾಟ – ಅರಣ್ಯ ಇಲಾಖೆ ವಿರುದ್ಧ ವನ್ಯಜೀವಿ ಪ್ರಿಯರ ಆಕ್ರೋಶ

    ಕಾಲಿಗೆ ಗಾಯವಾಗಿ ಕಾಡಾನೆ ನರಳಾಟ – ಅರಣ್ಯ ಇಲಾಖೆ ವಿರುದ್ಧ ವನ್ಯಜೀವಿ ಪ್ರಿಯರ ಆಕ್ರೋಶ

    ಹಾಸನ: ಕಾಲಿಗೆ ಗಾಯವಾಗಿರುವ ಕಾಡಾನೆ ನರಳಾಟ ನೋಡಿ ಸೂಕ್ತ ಚಿಕಿತ್ಸೆ ನೀಡದ ಅರಣ್ಯ ಇಲಾಖೆ ವಿರುದ್ಧ ವನ್ಯಜೀವಿ ಪ್ರಿಯರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಒಂಟಿ ಸಲಗದ ಹಿಂಬದಿಯ ಎಡಗಾಲಿಗೆ ಗಾಯವಾಗಿ ನರಳುತ್ತಿದೆ. ಆಲೂರು-ಸಕಲೇಶಪುರ ಭಾಗದ ಜನರು ಈ ಕಾಡಾನೆಗೆ ‘ಭೀಮ’ ಎಂದು ನಾಮಕರಣ ಮಾಡಿದ್ದರು. ಈ ಆನೆ ಗ್ರಾಮದೊಳಗೆ ಬಂದರೂ ಯಾರಿಗೂ ಯಾವುದೇ ತೊಂದರೆ ಮಾಡದೇ ಓಡಾಡಿಕೊಂಡಿತ್ತು.

    ಗ್ರಾಮದಲ್ಲಿ ಓಡಾಡಿಕೊಂಡಿದ್ದ ಭೀಮನಿಗೆ ಶೀಘ್ರ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸುತ್ತಿದ್ದಾರೆ. ಸದ್ಯ ಭೀಮ ಸಕಲೇಶಪುರ ತಾಲೂಕಿನಲ್ಲಿ ಕುಂಟುತ್ತಲೇ ಓಡಾಡುತ್ತಿದೆ. ಕೆಲ ತಿಂಗಳ ಹಿಂದೆ ಕಾಲಿಗೆ ಗಾಯವಾಗಿ ಗುಣವಾಗದೇ ಕಾಡಾನೆಯೊಂದು ಮೃತಪಟ್ಟಿತ್ತು.

    ಮರಿಯನ್ನು ಬಿಟ್ಟು ಮೃತಪಟ್ಟ ಆನೆಗೆ ಅಧಿಕಾರಿಗಳು ಚಿಕಿತ್ಸೆ ನೀಡುವ ಯತ್ನ ಮಾಡಿ ವಿಫಲರಾಗಿದ್ದರು. ಈ ಆನೆಗೂ ಅದೇ ಸ್ಥಿತಿ ಬರುವ ಮುನ್ನ ಚಿಕಿತ್ಸೆ ನೀಡಲು ಒತ್ತಾಯಿಸುತ್ತಿದ್ದಾರೆ. ಸಲಗನ ಮೂಕ ರೋಧನೆಗೆ ಜನರು ಮರುಗುತ್ತಿದ್ದಾರೆ.

  • ಕಾಳಗದಲ್ಲಿ ಗಾಯಗೊಂಡಿದ್ದ ಚಿರತೆಯ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ

    ಕಾಳಗದಲ್ಲಿ ಗಾಯಗೊಂಡಿದ್ದ ಚಿರತೆಯ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ

    ಚಾಮರಾಜನಗರ: ಅರಣ್ಯದಲ್ಲಿ ಮತ್ತೊಂದು ಚಿರತೆಯೊಂದಿಗಿನ ಕಾಳಗದಲ್ಲಿ ಗಾಯಗೊಂಡಿದ್ದ ಚಿರತೆಯೊಂದು ಚಾಮರಾಜನಗರ ಸಮೀಪದ ಹೊನ್ನಳ್ಳಿ ಬಳಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತ್ತು.

    ಕಳೆದ ನಾಲ್ಕೈದು ದಿನಗಳಿಂದ ಹೊನ್ನಳ್ಳಿ ಹೊರಭಾಗದ ಜಮೀನುಗಳಲ್ಲಿ ಅಡ್ಡಾಡುತ್ತಿದ್ದ ಈ ಚಿರತೆ ಸೋಮವಾರ ತೋಟವೊಂದರ ಮನೆಯ ಬಾಗಿಲಿನ ಬಳಿ ಮಲಗಿತ್ತು. ಬೆಳಗ್ಗೆ ಬಾಗಿಲು ತೆರೆದ ಮನೆಯವರು ಚಿರತೆ ನೋಡಿ ಗಾಬರಿಗೊಂಡು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಚಾಮರಾಜನಗರದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಸ್ವಸ್ಥಗೊಂಡಿದ್ದ ಚಿರತೆಯನ್ನು ಹಗ್ಗದಿಂದ ಕಟ್ಟಿಹಾಕಿದರು. ಚಿರತೆಯ ತಲೆ ಭಾಗದಲ್ಲಿ ತೀವ್ರ ಗಾಯಗಳಾಗಿದ್ದು, ಸ್ಥಳೀಯವಾಗಿ ಅರಣ್ಯ ಇಲಾಖೆಯಲ್ಲಿ ಪಶುವೈದ್ಯರು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಮೃಗಾಲಯಕ್ಕೆ ಕೊಂಡೊಯ್ಯಲಾಯಿತು.