Tag: treatment

  • ಆಸ್ಪತ್ರೆಯಲ್ಲಿ ಅಟೆಂಡರ್ ಗಳೇ ಡಾಕ್ಟರ್- ಬೆಂಗ್ಳೂರಿನಲ್ಲಿವೆ ಕಿಲ್ಲಿಂಗ್ ಹಾಸ್ಪಿಟಲ್

    ಆಸ್ಪತ್ರೆಯಲ್ಲಿ ಅಟೆಂಡರ್ ಗಳೇ ಡಾಕ್ಟರ್- ಬೆಂಗ್ಳೂರಿನಲ್ಲಿವೆ ಕಿಲ್ಲಿಂಗ್ ಹಾಸ್ಪಿಟಲ್

    ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾದರೆ ಎಲ್ಲರೂ ಆಸ್ಪತ್ರೆಗೆ ಹೋಗುತ್ತಾರೆ. ಅಪ್ಪಿ ತಪ್ಪಿ ನೀವು ಸಿಲಿಕಾನ್ ಸಿಟಿಯಲ್ಲಿರುವ ಈ ಆಸ್ಪತ್ರೆಗೆ ಹೋದರೆ ನಿಮ್ಮ ಪ್ರಾಣ ಪಕ್ಷಿಯೇ ಹಾರಿ ಹೋಗಲಿದೆ. ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಚರಣೆಯಲ್ಲಿ ಬಿಬಿಎಂಪಿಯ ಆಸ್ಪತ್ರೆಯಲ್ಲಿರುವ ಮುನ್ನಾಬಾಯಿ ಎಂಬಿಬಿಎಸ್ ಡಾಕ್ಟರ್ ಗಳ ಅಸಲಿಯತ್ತು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬಡ ಜನರಿಗೆ ಉತ್ತಮ ಮತ್ತು ಗುಣಮಟ್ಟದ ಚಿಕಿತ್ಸೆ ಸಿಗಲಿ ಎಂದು ಬಿಬಿಎಂಪಿ ಆಸ್ಪತ್ರೆಗಳನ್ನು ಆರಂಭಿಸಿದೆ. ಈ ಪಾಲಿಕೆಯ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಾಧಿಕಾರಿಗಳ ಬದಲಿಗೆ ಅಟೆಂಡರ್ ಗಳೇ ಯದ್ವಾತದ್ವಾ ಮಾತ್ರೆಗಳನ್ನು ಬರೆದುಕೊಡುತ್ತಾರೆ. ಬಿಬಿಎಂಪಿ ಪಾಲಿಕೆಯ ಆಸ್ಪತ್ರೆಗಳ ನರಕ ಸದೃಶಗಳನ್ನ ನಿಮ್ಮ ಪಬ್ಲಿಕ್ ಟಿವಿ ಸ್ಟಿಂಗ್ ಅಪರೇಷನ್ ಮೂಲಕ ಬಟಾಬಯಲು ಮಾಡಿದೆ.

    ಸ್ಥಳ: ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ಯಾಲೇಸ್ ಗುಟ್ಟಹಳ್ಳಿ
    ಈ ಆಸ್ಪತ್ರೆಗೆ ತೆರಳಿದ್ರೆ ಇಲ್ಲಿಯ ಅಟೆಂಡರ್ ತಾನೇ ಡಾಕ್ಟರ್ ಎಂದು ರೋಗಿಗಳನ್ನು ಕರೆದು ಚಿಕಿತ್ಸೆ ನೀಡಲು ಮುಂದಾಗುತ್ತಾನೆ. ಸರಿಯಾಗಿ ಬಿಪಿ ಚೆಕ್ ಮಾಡೋಕೆ ಬರದಿದ್ದರೂ, ಪರಿಶೀಲಿಸಿದ ರೀತಿ ನಾಟಕ ಆಡುತ್ತಾನೆ. ಇದೇ ಅಟೆಂಡರ್ ಆಸ್ಪತ್ರೆಗೆ ಬರುವ ಗರ್ಭಿಣಿ, ಮಕ್ಕಳಿಗೂ ಚಿಕಿತ್ಸೆ ನೀಡುತ್ತಾನೆ. ವೈದ್ಯರೇ ಇಲ್ಲದ ಈ ಆಸ್ಪತ್ರೆಯಲ್ಲಿ ಓರ್ವ ಮಹಿಳಾ ನರ್ಸ್ ಮತ್ತು ಅಟೆಂಡರ್ ಚಿಕಿತ್ಸೆ ನೀಡುತ್ತಾರೆ. ಓವರ್ ಡೋಸ್ ಹೊಂದಿರುವ ಟ್ಯಾಬ್ಲೆಟ್ ನೀಡಿ ರೋಗಿಗಳನ್ನು ಸಾಗಿ ಹಾಕುವ ಕೆಲಸ ಮಾಡುತ್ತಾರೆ. ಏನ್ ಸರ್, ಡಾಕ್ಟರ್ ಇಲ್ವಾ ಅಂದ್ರೆ, ಇದು ಸರ್ಕಾರಿ ಆಸ್ಪತ್ರೆ, ನಾವು ಚಿಕಿತ್ಸೆ ನೀಡ್ತೀವಿ ಅಲ್ವ ಎಂದು ನರ್ಸ್ ಹೇಳುತ್ತಾಳೆ.

    ಸ್ಥಳ: ಮಂಜುನಾಥನಗರ ಆರೋಗ್ಯ ಕೇಂದ್ರ, 1ನೇ ಮುಖ್ಯರಸ್ತೆ, ರಾಜಾಜಿನಗರ. ವಾರ್ಡ್ 99
    ಈ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯಾಧಿಕಾರಿಗಳಿದ್ದರೂ ಚಿಕಿತ್ಸೆ ನೀಡಲ್ಲ. ಯಾಕೆ ಮೇಡಂ ಚಿಕಿತ್ಸೆ ನೀಡಲ್ವಾ ಅಂದ್ರೆ ನಾವು ರೆಸ್ಟ್ ಮಾಡೋದು ಬೇಡ್ವಾ ಎಂದು ಕಾಫಿ ಹೀರುತ್ತಾ ಬಾಗಿಲು ಹಾಕಿಕೊಳ್ಳುತ್ತಾರೆ.

    ತಜ್ಞ ವೈದ್ಯರ ಪ್ರಕಾರ 250 ಎಂಜಿ ಮಾತ್ರೆಗಳನ್ನು ದಿನಕ್ಕೆ ಮೂರು ಬಾರಿ ನೀಡಬಹುದು. ಆದ್ರೆ ಪಾಲಿಕೆಯ ಆಸ್ಪತ್ರೆಗಳಲ್ಲಿ 500 ಎಂಜಿಯ ಮಾತ್ರೆಗಳನ್ನು ಮಕ್ಕಳಿಗೆ ನೀಡುತ್ತಾರೆ. ಕೆಲವು ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ರೋಗಿಗಳಿಗೂ ಒಬ್ಬರೇ ಚಿಕಿತ್ಸೆ ನೀಡುತ್ತಾರೆ. ಬಡವರಿಗೆ ಸಹಾಯವಾಗಬೇಕಿದ್ದ ಪಾಲಿಕೆಯ ಆಸ್ಪತ್ರೆಗಳು ಜೀವಕ್ಕೆ ಮಾರಕವಾಗುತ್ತಿವೆ. ಆಸ್ಪತ್ರೆಗಳ ಮೇಲ್ವಿಚಾರಣೆ ನಡೆಸಬೇಕಿದ್ದ ಬಿಬಿಎಂಪಿ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ನವದೆಹಲಿ: ಗೊಂಬೆಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು 11 ತಿಂಗಳ ಮಗುವಿನ ಕಾಲು ನೋವನ್ನು ಗುಣಪಡಿಸಿದ ಅಪರೂಪದ ಸಂಗತಿಯೊಂದು ರಾಷ್ಟ್ರರಾಜಧಾನಿ ನವದೆಹಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.

    11 ತಿಂಗಳ ಮಗು ಝಿಕ್ರಾಳ ಕಾಲು ಮೂಳೆ ಮುರಿದು ಹೋಗಿತ್ತು. ಈ ವೇಳೆ ಮಗುವಿನ ಜೊತೆಗೆ ಆಕೆಯ ಗೊಂಬೆಗೂ ಕೂಡ ಚಿಕಿತ್ಸೆ ನೀಡಲಾಯಿತು. ಮಗು 13 ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗೊಂಬೆ ಆ ಮಗುವಿಗೆ ಸಾಥ್ ನೀಡಿದೆ. ಝಿಕ್ರಾ, ಮಹಮ್ಮದ್ ಶಹಜಾದ್ ಮಲಿಕ್ ಮಗಳಾಗಿದ್ದು ಇವರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. 13 ದಿನಗಳ ಹಿಂದೆ ಝಿಕ್ರಾ ಮಲಗಿದ್ದಾಗ ಹಾಸಿಗೆ ಮೇಲಿಂದ ಕೆಳಗೆ ಬಿದಿದ್ದಳು. ಆಗ ಅವರ ತಂದೆ ಮಲಿಕ್ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

    ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಾಗ ವೈದ್ಯರು ಎಕ್ಸ್ ರೇ ಮಾಡಿದ್ದಾರೆ. ಈ ವೇಳೆ ಕಾಲು ಫ್ರ್ಯಾಕ್ಚರ್ ಆಗಿರುವ ವಿಷಯ ತಿಳಿದು ಬಂದಿದೆ. ಆಗ ವೈದ್ಯರು ಟ್ರ್ಯಾಕ್ಷನ್ ರಾಡ್ ಮೂಲಕ ಚಿಕಿತ್ಸೆ ನೀಡಬೇಕಾಯಿತು. ಚಿಕ್ಕ ಮಕ್ಕಳಿಗೆ ಟ್ರ್ಯಾಕ್ಷನ್ ರಾಡ್ ಹಾಕಿದರೆ ಕಾಲುಗಳನ್ನು ಮೇಲೆ ಕಟ್ಟಬೇಕಾಗುತ್ತದೆ. ಹೀಗೆ ಮಾಡಿದರೆ ಕಾಲಿನ ಮೂಳೆ ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಹೀಗಾಗಿ ಚಿಕಿತ್ಸೆಗೆಂದು ಝಿಕ್ರಾಳನ್ನು ವೈದ್ಯರು ಹಾಸಿಗೆ ಮೇಲೆ ಮಲಗಿಸಿದಾಗ ಆಕೆ ಒಂದೇ ಕಡೆ ಮಲಗುತ್ತಿರಲಿಲ್ಲ. ಹಾಗಾಗಿ ವೈದ್ಯರಿಗೆ ಝಿಕ್ರಾಳಿಗೆ ಚಿಕಿತ್ಸೆ ಕೊಡಲು ಕಷ್ಟವಾಗುತ್ತಿತ್ತು. ಅಲ್ಲದೆ ಆಕೆಯ ಕಾಲಿಗೆ ಬ್ಯಾಂಡೇಜ್ ಹಾಕಲು ಆಗುತ್ತಿರಲಿಲ್ಲ. ಝಿಕ್ರಾ ನೋವಿನಿಂದ ನರಳುತ್ತಿದ್ದಳು. ಈ ವೇಳೆ ಝಿಕ್ರಾ ತಾಯಿ ಫರೀನ್‍ಗೆ ಆಕೆಯ ಅಜ್ಜಿ ನೀಡಿದ ಗೊಂಬೆ ನೆನಪಾಗಿದೆ. ಝಿಕ್ರಾ ಈ ಗೊಂಬೆಯನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಬಳಿಕ ಫರೀನ್ ಆ ಗೊಂಬೆಯನ್ನು ಆಸ್ಪತ್ರೆಗೆ ತಂದಾಗ ಝಿಕ್ರಾ ಖುಷಿಪಟ್ಟಿದ್ದಾಳೆ.

    ಝಿಕ್ರಾಗೆ ಬ್ಯಾಂಡೇಜ್ ಹಾಕುವ ಮೊದಲು ವೈದ್ಯರು ಗೊಂಬೆಗೆ ಬ್ಯಾಂಡೇಜ್ ಹಾಕಿದ್ದಾರೆ. ಇದನ್ನು ನೋಡಿದ ಝಿಕ್ರಾ ಸುಮ್ಮನೆ ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದಾಳೆ. ಈಗ ಝಿಕ್ರಾ ಹಾಗೂ ಆಕೆಯ ಗೊಂಬೆ ‘ಪರಿ’ ಒಂದೇ ಹಾಸಿಗೆಯಲ್ಲಿ ದಾಖಲಾಗಿದ್ದಾರೆ. ಗೊಂಬೆ ಇಲ್ಲದಿದ್ದರೆ ಮಗುವಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿತ್ತು. ಗೊಂಬೆಯ ಕಾರಣ ಝಿಕ್ರಾ ಖುಷಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳು ಆದಷ್ಟು ಬೇಗ ಸರಿಹೋಗಲಿ. ಬೇರೆ ವಿಭಾಗದ ವೈದ್ಯರು ಕೂಡ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಝಿಕ್ರಾ ತಂದೆ ಹೇಳಿದ್ದಾರೆ.

  • ಗೋಡೆ ಕುಸಿದು 1 ವರ್ಷದ ಮಗು ಸೇರಿ ತಾಯಿ ಸಾವು

    ಗೋಡೆ ಕುಸಿದು 1 ವರ್ಷದ ಮಗು ಸೇರಿ ತಾಯಿ ಸಾವು

    ದಾವಣಗೆರೆ: ಮನೆಯ ಗೋಡೆ ಕುಸಿದ ಪರಿಣಾಮ ಒಂದು ವರ್ಷದ ಮಗು ಸೇರಿ ತಾಯಿ ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ನಡೆದಿದೆ.

    ರಾತ್ರಿ ವೇಳೆ ನಿದ್ರಿಸುತ್ತಿದ್ದಾಗ ಮಳೆಯಿಂದ ಶಿಥಿಲಗೊಂಡಿದ್ದ ಗೋಡೆ ಕುಸಿದ ಪರಿಣಾಮ 30 ವರ್ಷದ ತಾಯಿ ಉಮಾ ಮತ್ತು ಅವರ ಮಗ ಧನುಷ್ ಸಾವನ್ನಪ್ಪಿದ್ದಾರೆ.

    ಇಂದು ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು, ತಾಯಿ ಮಗುವಿನ ಮೇಲೆ ಗೋಡೆ ಕುಸಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಚಳ್ಳಿ ಕಾಯಿ ತಿಂದು 18 ಮಂದಿ ಅಸ್ವಸ್ಥ

    ಕಾಚಳ್ಳಿ ಕಾಯಿ ತಿಂದು 18 ಮಂದಿ ಅಸ್ವಸ್ಥ

    ಮಂಡ್ಯ: ಬೇಲಿಯಲ್ಲಿ ಬೆಳೆಯುವ ಒಂದು ಬಗೆಯ ಕಾಯಿಯನ್ನು ತಿಂದು ಮಕ್ಕಳು ಸೇರಿದಂತೆ 18 ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    18 ಜನರಲ್ಲಿ 14 ಮಂದಿ ಮಕ್ಕಳಾಗಿದ್ದು, ನಾಲ್ವರು ದೊಡ್ಡವರಾಗಿದ್ದಾರೆ. ಚಿರಂತ್ (14), ದಿಗಂತ್ (9), ಶ್ರೇಯಾ (6), ತರುಣ್ (10), ವರ್ಷಮ್ (11), ಅಜಿತ್ (10), ರೋಜಾ (11), ಶರಣ್ (5), ಜನಿತ್ (9), ದರ್ಶನ್ (16), ಚೇತನ್ (19), ಯಶ್ವಂತ್ (12), ಶಿವ (36), ಮರಿಯಯ್ಯ (70), ವೆಂಕಟೇಶ್ (65), ಗೌರಮ್ಮ (38), ಸಿಂಚನ (16) ಮತ್ತು ಮರಿನಿಂಗಯ್ಯ (35) ಅಸ್ವಸ್ಥಗೊಂಡಿದ್ದಾರೆ.

    ಈ ಭಾಗದಲ್ಲಿ ಕಾಚಳ್ಳಿ ಕಾಯಿ ಎಂದು ಕರೆಯುತ್ತಾರೆ. ಕಾಚಳ್ಳಿ ಕಾಯಿಯನ್ನು ಬೇಲಿಯಲ್ಲಿ ಬೆಳೆಯುತ್ತಾರೆ. ಮೊದಲಿಗೆ ಇದನ್ನು ದೊಡ್ಡವರು ತಿಂದಿದ್ದಾರೆ. ಇದನ್ನು ನೋಡಿದ ಮಕ್ಕಳು ಅದೇ ಕಾಯಿಯನ್ನ ತಿಂದಿದ್ದಾರೆ. ಕಾಯಿ ತಿಂದು ಅರ್ಧಗಂಟೆಯಲ್ಲೇ ಎಲ್ಲರಿಗೂ ವಾಂತಿ ಭೇದಿ ಪ್ರಾರಂಭವಾಗಿದೆ. ತಕ್ಷಣ ಅಸ್ವಸ್ಥ ಮಕ್ಕಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಬಂದ್ ಆಗದ ಕೋಲಾರದ ಆಸ್ಪತ್ರೆಗಳು – ಎಂದಿನಂತೆ ರೋಗಿಗಳಿಗೆ ಚಿಕಿತ್ಸೆ

    ಬಂದ್ ಆಗದ ಕೋಲಾರದ ಆಸ್ಪತ್ರೆಗಳು – ಎಂದಿನಂತೆ ರೋಗಿಗಳಿಗೆ ಚಿಕಿತ್ಸೆ

    ಕೋಲಾರ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ಮಸೂದೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ನೀಡಿರುವ ದೇಶ ವ್ಯಾಪಿ ಬಂದ್‍ಗೆ ಕೋಲಾರದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

    ಎಂದಿನಂತೆ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳು ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಬೆಂಬಲ ಕೋಲಾರದಿಂದ ವ್ಯಕ್ತವಾಗಿಲ್ಲ. ಆದರೆ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಬೆಳಗ್ಗೆ 10 ಗಂಟೆಗೆ ಖಾಸಗಿ ಆಸ್ಪತ್ರೆ ವೈದ್ಯರು ಎನ್‍ಎಂಸಿ ಮಸೂದೆಯನ್ನ ಖಂಡಿಸಿ ಪ್ರತಿಭಟನೆ ಮಾಡಿದರು.

    ಮೊದಲಿನಿಂದಲೂ ಮಸೂದೆ ವಿರೋಧಿಸುತ್ತ ಬಂದಿದ್ದ ಭಾರತೀಯ ವೈದ್ಯಕೀಯ ಸಂಘ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‍ಗಳನ್ನು ಬಂದ್ ಮಾಡಿವೆ. ಆದರೆ ಕೋಲಾರದಲ್ಲಿ ಯಾವುದೇ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಬಂದ್ ಆಗದೆ ವೈದ್ಯರು ಎಂದಿನಂತೆ ರೋಗಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

  • ಡೆಂಗ್ಯೂ ಜ್ವರಕ್ಕೆ ಮನೆ ಮದ್ದು

    ಡೆಂಗ್ಯೂ ಜ್ವರಕ್ಕೆ ಮನೆ ಮದ್ದು

    ಡೆಂಗ್ಯೂ ಜ್ವರ ಈ ಹೆಸರು ಕೇಳಿದ ತಕ್ಷಣವೇ ಎಲ್ಲರೂ ಬೆಚ್ಚಿಬೀಳುತ್ತಿದ್ದಾರೆ. ಈ ಜ್ವರವನ್ನು ಚಿಕಿತ್ಸೆಗಿಂತ ಆರೈಕೆಯಲ್ಲೇ ಓಡಿಸಬೇಕು. ಈ ಜ್ವರ ಹೆಚ್ಚಾಗಿ ಚಿಕ್ಕ ಮಕ್ಕಳು, ವಯೋವೃದ್ಧರನ್ನು ಬಾಧಿಸುತ್ತದೆ. ಯಾಕೆಂದರೆ ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪಕ್ವಾವಾಗಿರುವುದಿಲ್ಲ. ವಯೋವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತಿರುತ್ತದೆ.

    ಈ ಜ್ವರಕ್ಕೆ ಕಾರಣ ಈಡಿಸ್ ಈಜಿಪ್ತಿ (Aedes aegypti) ಎಂಬ ಹೆಸರಿನ ಭಯಾನಕ ಹೆಣ್ಣು ಸೊಳ್ಳೆ. ಇದು ಯಾವುದೇ ವಾತಾವರಣದಲ್ಲಿ ಬದುಕಬಲ್ಲದು. ಈ ಸೊಳ್ಳೆಗಳಿಗೆ ಸಂತಾನೋತ್ಪತ್ತಿ ವೇಳೆ ಅಗತ್ಯವಿರುವ ರಕ್ತಕ್ಕಾಗಿ ಮನುಷ್ಯರನ್ನು ಕಚ್ಚಿ ರಕ್ತವನ್ನು ಹೀರುತ್ತವೆ. ಈ ಸೊಳ್ಳೆಗಳು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಮೊಣ ಕೈ, ಮೊಣಕಾಲಿನ ಭಾಗದಲ್ಲಿ ಕಚ್ಚುತ್ತವೆ. ನೀವು ಇವನ್ನು ನೋಡಿ ಹೊಡೆಯುವಷ್ಟರಲ್ಲಿ ರಕ್ತ ಹೀರಿ ಓಡುತ್ತವೆ. ಆದ್ದರಿಂದ ಈ ಜ್ವರಕ್ಕೆ ಇಂತದ್ದೇ ಎಂಬ ಔಷಧಿ ಎಲ್ಲೂ ಇಲ್ಲ.

    ರಕ್ತದಲ್ಲಿನ ಪ್ಲೇಟ್‍ ಲೆಟ್ಸ್ ಗಳನ್ನು ಹೆಚ್ಚಿಸಿಕೊಳ್ಳುವ ಹೊರತು ಯಾವುದೇ ಚಿಕಿತ್ಸೆ ಇಲ್ಲ. ವೈರಸ್ ನಿಮ್ಮ ದೇಹ ಹೊಕ್ಕ ತಕ್ಷಣವೇ ನಿಮಗೆ ತಿಳಿಯದಂತೆ ರಕ್ತಕಣಗಳು ಕುಗ್ಗುತ್ತಾ ಹೋಗುತ್ತದೆ. ಆದರೆ ಸೂಕ್ತ ಎಚ್ಚರಿಕೆ ವಹಿಸುವುದರ ಜೊತೆ ತಕ್ಷಣಕ್ಕೆ ಚಿಕಿತ್ಸೆ ಪಡೆದರೆ ಭಯ ಪಡುವ ಅಗತ್ಯವಿಲ್ಲ. ಮುಖ್ಯವಾಗಿ ಇದು ಅಂಟುಜ್ವರ ಅಲ್ಲ ಅಂದರೆ ಜ್ವರ ಪೀಡಿತರಿಂದ ಇನ್ನೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಜ್ವರಪೀಡಿತರನ್ನು ಕಚ್ಚಿದ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗ ಮಾತ್ರ ಹರಡುತ್ತದೆ.

    ಡೆಂಗ್ಯೂ ಜ್ವರದ ಲಕ್ಷಣಗಳು:
    * ಅಧಿಕ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಳ್ಳುತ್ತವೆ.
    * ಮಾಂಸಖಂಡಗಳಲ್ಲಿ, ಕೈ, ಕಾಲುಗಳ ಕೀಲುಗಳಲ್ಲಿ ನೋವು ಉಂಟಾಗುತ್ತದೆ.
    * ಕಣ್ಣಿನಲ್ಲಿ ಹೇಳಲಾಗದ ನೋವು, ಉರಿಯಾಗುತ್ತದೆ.
    * ಕೆಮ್ಮು, ಗಂಟಲು ಕೆರೆತ ಬರುತ್ತದೆ.
    * ಕೆಲವರಿಗೆ ವಾಂತಿ, ತಲೆ ಸುತ್ತು ಕಾಣಿಸಿಕೊಳ್ಳುತ್ತವೆ.

    ಡೆಂಗ್ಯೂ ಜ್ವರಕ್ಕೆ ಮನೆ ಮದ್ದು: ಈ ಜ್ವರ ಇರುವ ಬಗ್ಗೆ ಗೊತ್ತಾದ ಮೇಲೆ ಸಾಮಾನ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಿ ಪಡೆದು ವಿಶ್ರಾಂತಿಗೆ ಸೂಚಿಸಲಾಗುತ್ತದೆ. ಜೊತೆಗೆ ಸಾಕಷ್ಟು ನೀರು ಮತ್ತು ದ್ರವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ವಿಟಮಿನ್ ಸಿ, ಸಿಟ್ರಸ್ ಅಂಶ ಇರುವ, ನೀರಿನಾಂಶ ಜಾಸ್ತಿ ಇರುವ ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಆದರೆ ಎಣ್ಣೆ, ಮಸಾಲೆಯುಕ್ತ ಆಹಾರವನ್ನು ವರ್ಜಿಸಿದರೆ ಉತ್ತಮ.

    ಯಾವ ಆಹಾರಗಳನ್ನು ಸೇವಿಸಬೇಕು: 
    * ಕಿತ್ತಳೆ ಹಣ್ಣು ಸೇವನೆಯಿಂದ ಡೆಂಗ್ಯೂ ಬೇಗ ಗುಣವಾಗುತ್ತದೆ. ವಿವಿಧ ವಿಟಮಿನ್ ಮತ್ತು ಖನಿಜಾಂಶ ಭರಿತ ಪೌಷ್ಟಿಕ ಹಣ್ಣು, ಅಧಿಕ ನಾರಿನಂಶ, ವಿಟಮಿನ್ ಸಿ ಇರುವ ಮೂಸಂಬಿ, ನಿಂಬೆ ರಸ, ಅನಾನಸ್, ಕಿವಿ ಫ್ರೂಟ್, ದ್ರಾಕ್ಷಿ, ಚಕ್ಕೋತ ಹಣ್ಣುಗಳ ರಸ, ಹಣ್ಣು ಸೇವನೆಯಿಂದ ಅವಶ್ಯ ಪೋಷಕಾಂಶ ದೊರೆಯುತ್ತದೆ.
    * ಎಳನೀರು ಸೇವನೆಯಿಂದ ದೇಹದಲ್ಲಿ ಡೆಂಗ್ಯೂನಿಂದ ಕಡಿಮೆ ಆಗಿದ್ದ ನೀರಿನಾಂಶ ಹೆಚ್ಚಳವಾಗುತ್ತದೆ. ದಿನಕ್ಕೆ 2-3 ಎಳನೀರು ಕುಡಿಯಿರಿ.
    * ದಾಳಿಂಬೆ ಹಣ್ಣಿನ ಬೀಜಗಳು ಕಬ್ಬಿಣಾಂಶದ ಪ್ರಮುಖ ಮೂಲವಾಗಿವೆ. ದಾಳಿಂಬೆ ರಸ, ಹಣ್ಣು ಸೇವನೆಯಿಂದ ರಕ್ತಕಣಗಳನ್ನು ನಿಯಂತ್ರಣದಲ್ಲಿಡಬಹುದು. ಆಯಾಸವನ್ನೂ ಕಡಿಮೆಗೊಳಿಸುತ್ತದೆ.
    * ಡೆಂಗ್ಯೂದಿಂದ ಬಳಲುತ್ತಿರುವವರಿಗೆ ಪಪ್ಪಾಯ ಎಲೆ ಮತ್ತು ಬೀಜಗಳ ರಸವೂ ಅತ್ಯುತ್ತಮ ಔಷಧಿ. ಪಪ್ಪಾಯ ಎಲೆಯ ರಸ, ಪಪ್ಪಾಯ ಹಣ್ಣಿನ ಜ್ಯೂಸ್ ಸೇವನೆ ಉತ್ತಮ.
    * ಮೊಳಕೆ ಕಾಳುಗಳ ಸೇವನೆ ಉತ್ತಮ.
    * ಗಂಟೆಗೊಂದು ಲೋಟ ನೀರು ಕುಡಿಯುವುದು.
    * ಡೆಂಗ್ಯೂ ಜ್ವರ ಕಡಿಮೆ ಮಾಡಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.
    * ತರಕಾರಿ ಜ್ಯೂಸ್, ಸೂಪ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

    ಮುಂಜಾಗ್ರತಾ ಕ್ರಮಗಳೇನು?:
    * ಡೆಂಗ್ಯೂ ಹರಡುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ನೀವು ಎಚ್ಚರಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಬೇಕು.
    * ಸೊಳ್ಳೆಗಳಿಗೆ ಸೂಕ್ತವಾದ ತಾಣಗಳನ್ನು ನಾಶಪಡಿಸುವುದು.
    * ಮನೆಯ ಸುತ್ತಮುತ್ತ ನಿಂತಿರುವ ನೀರಿನ ನೆಲೆಗಳನ್ನು ನಾಶ ಪಡಿಸಬೇಕು.
    * ತೆಂಗಿನ ಚಿಪ್ಪು, ಟಯರ್‍ಗಳು, ಚಿಕ್ಕ ಗುಂಡಿಗಳು, ಬೇಡ ಎಂದು ಬಿಸಾಡಿದ ಪ್ಲಾಸ್ಟಿಕ್ ಬಕೆಟ್, ಜಗ್ ಇತ್ಯಾದಿಗಳ ಸಂಗ್ರಹ ಬೇಡ.
    * ನೀರು ನಿಂತಿರುವ ಕಡೆ ಸೂಕ್ತ ಕೀಟನಾಶಕ ಸಿಂಪಡಿಸಿ.
    * ಮಕ್ಕಳಿಗೆ ಉದ್ದ ತೋಳಿನ ಬಟ್ಟೆ, ಸಾಕ್ಸ್ ಹಾಕಿರಿ.
    * ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಮತ್ತಿತರ ವಸ್ತುಗಳನ್ನು ಸ್ವಚ್ಛ ಮಾಡಿರಿ.

    ಒಟ್ಟಿನಲ್ಲಿ ಡೆಂಗ್ಯೂ ಜ್ವರ ಬಂತೆಂದರೆ ಭಯ ಪಡುವುದು ಬೇಡ. ದಿನ ನಿತ್ಯದ ಆಹಾರ ಕ್ರಮ, ನಾಲಿಗೆ ರುಚಿಯನ್ನು ನಿಯಂತ್ರಣದಲ್ಲಿಡುವುದರಿಂದ ಡೆಂಗ್ಯೂವನ್ನು ಹೊಡೆದೋಡಿಸಬಹುದು. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಭೇಟಿ ಮಾಡಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ. ಸಾಕಷ್ಟು ಮನೆ ಮದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಸಲಹೆಗಳನ್ನೂ ಪಾಲಿಸಿದರೆ ನೀವು ಡೆಂಗ್ಯೂ ಜ್ವರದಿಂದ ಪಾರಾಗಬಹುದು.

  • ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ

    ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ

    ಮಂಗಳೂರು: ತೀವ್ರ ಜ್ವರ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೇರಳ ಮೂಲದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಸಿಧ್ರಾತುಲ್ ಮುನ್ತಾಹ (8) ಮತ್ತು ಸೋದರಿ 6 ತಿಂಗಳ ಮಗು ಶಿನಾಜ್ ಮೃತ ಕಂದಮ್ಮಗಳು. ಇವರು ಸಿದ್ದಿಕ್ ಮತ್ತು ನಿಶಾ ದಂಪತಿಯ ಮಕ್ಕಳಾಗಿದ್ದು, ಕಾಸರಗೋಡು ಜಿಲ್ಲೆಯ ಬದಿಯಡ್ಕ ಕನ್ಯಾಪಡಿಯ ನಿವಾಸಿಗಳಾಗಿದ್ದಾರೆ.

    ಇಬ್ಬರು ಮಕ್ಕಳು ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ ಮುನ್ತಾಹ ಮಂಗಳವಾರ ಮೃತಪಟ್ಟಿದ್ದಾನೆ. ಶಿನಾಜ್ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ.

    ಮಕ್ಕಳ ತಾಯಿ ನಿಶಾ ಕೂಡ ಈಗ ಅದೇ ಆಸ್ಪತ್ರೆಯಲ್ಲಿ ಜ್ವರದಿಂದ ದಾಖಲಾಗಿದ್ದಾರೆ ಎಂದು ಕುಟುಂಬ ತಿಳಿಸಿದೆ. ಈ ಪ್ರಕರಣಗಳ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ರಸ್ತೆಯಲ್ಲಿರುವ ತಮ್ಮ ತಾಯಿಯ ಮನೆಯಲ್ಲಿದ್ದಾಗ ಮಕ್ಕಳು ಸೋಂಕಿಗೆ ಒಳಗಾಗಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಜ್ವರಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಜಿಲ್ಲಾ ವೈದ್ಯಕೀಯ ಅಧಿಕಾರಿ ನೇತೃತ್ವದ ವೈದ್ಯರ ತಂಡ ಈ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಹೇಳಿದರು.

  • ಮಹಿಳೆಯ ಹೊಟ್ಟೆಯಲ್ಲಿ 1.5 ಕೆ.ಜಿ.ಆಭರಣ, 90 ನಾಣ್ಯಗಳು ಪತ್ತೆ

    ಮಹಿಳೆಯ ಹೊಟ್ಟೆಯಲ್ಲಿ 1.5 ಕೆ.ಜಿ.ಆಭರಣ, 90 ನಾಣ್ಯಗಳು ಪತ್ತೆ

    ಕೊಲ್ಕತ್ತಾ: ಮಹಿಳೆಯ ಹೊಟ್ಟೆಯಿಂದ ಸುಮಾರು 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಹೊರ ತೆಗೆದಿರುವ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ನಡೆದಿದೆ.

    ಮಾನಸಿಕ ಅಸ್ವಸ್ಥ ಮಹಿಳೆಯ ಹೊಟ್ಟೆಯಿಂದ 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಸರ್ಕಾರಿ ಆಸ್ಪತ್ರೆ ವೈದ್ಯರು ಹೊರ ತೆಗೆದಿದ್ದಾರೆ. 5 ಹಾಗೂ 10 ರೂ.ಗಳ ನಾಣ್ಯಗಳು, ಸರ, ಕಿವಿಯ ಓಲೆಗಳು, ಬಳೆ, ಕಡಗ, ಬ್ರಾಸ್ಲೆಟ್ಸ್ ಹಾಗೂ ವಾಚ್ ಸೇರಿದಂತೆ ವಿವಿಧ ಆಭರಣಗಳನ್ನು 26 ವರ್ಷದ ಮಹಿಳೆಯ ಹೊಟ್ಟೆಯಿಂದ ಹೊರ ತೆಗೆಯಲಾಗಿದೆ ಎಂದು ರಾಂಪುರಾತ್‍ನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಬಿಸ್ವಾಸ್ ತಿಳಿಸಿದ್ದಾರೆ.

    ಕೆಲವು ಬಂಗಾರದ ಆಭರಣಗಳೂ ಸೇರಿದಂತೆ ತಾಮ್ರ ಹಾಗೂ ಹಿತ್ತಾಳೆಯ ಆಭರಣಗಳು ಮಹಿಳೆಯ ಹೊಟ್ಟೆಯಲ್ಲಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.

    ಮನೆಯಲ್ಲಿನ ಆಭರಣಗಳು ಕಾಣೆಯಾಗುತ್ತಿದ್ದನ್ನು ಗಮನಿಸಿದ್ದೆ. ಇವಳೇ ತೆಗೆದುಕೊಂಡು ಹೋಗಿರಬಹುದು ಎಂದು ಪ್ರಶ್ನಿಸಿದಾಗ ಅಳಲು ಪ್ರಾರಂಭಿಸುತ್ತಿದ್ದಳು. ಹೀಗಾಗಿ ನಾವು ಹೆಚ್ಚು ಪ್ರಶ್ನೆ ಮಾಡುತ್ತಿರಲಿಲ್ಲ. ಮಗಳು ಮಾನಸಿಕವಾಗಿ ಅಸ್ವಸ್ಥೆಯಾಗಿದ್ದು, ಕೆಲವು ದಿನಗಳಿಂದ ಊಟವಾದ ನಂತರ ತಟ್ಟೆಯನ್ನು ಜೋರಾಗಿ ಎಸೆಯುತ್ತಿದ್ದಾಳೆ ಎಂದು ಮಾನಸಿಕ ಅಸ್ವಸ್ಥ ಯುವತಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.

    ನಾಣ್ಯಗಳನ್ನು ತನ್ನ ಸಹೋದರ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದಳು. ನಾವು ಅವಳ ಮೇಲೆ ನಿಗಾ ವಹಿಸುತ್ತಿದ್ದರೂ, ಕಣ್ಣು ತಪ್ಪಿಸಿ ಇಷ್ಟೊಂದು ನಾಣ್ಯ ಹಾಗೂ ಆಭರಣಗಳನ್ನು ನುಂಗಿದ್ದಾಳೆ. ಖಾಯಿಲೆ ಕುರಿತು ವಿವಿಧ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದೇವೆ. ವೈದ್ಯರು ನೀಡಿದ ಔಷಧಗಳನ್ನು ಕೊಡುತ್ತಿದ್ದೇವೆ. ಆದರೂ ಸಹ ಈ ವೆರೆಗೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಲಾರಿಗೆ ಡಿಕ್ಕಿ ಹೊಡೆದ ಕಾರು -ಬೆಂಗ್ಳೂರು ಮೂಲದ ಇಬ್ಬರ ದುರ್ಮರಣ

    ಲಾರಿಗೆ ಡಿಕ್ಕಿ ಹೊಡೆದ ಕಾರು -ಬೆಂಗ್ಳೂರು ಮೂಲದ ಇಬ್ಬರ ದುರ್ಮರಣ

    ಕೊಡಗು: ಕಾರು, ಲಾರಿ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಬಾಳೆಕಾಡು ಬಳಿ ನಡೆದಿದೆ.

    ಮೃತರನ್ನು ಬೆಂಗಳೂರು ಮೂಲದ 23 ವರ್ಷದ ಕಿರಣ್ ಮತ್ತು 25 ವರ್ಷದ ಶ್ರವಣ್ ಎಂದು ಗುರುತಿಸಲಾಗಿದೆ. ರಾಜು ಮತ್ತು ಪುಟ್ಟೇಗೌಡ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ.

    4 ಪ್ರವಾಸಿಗರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಗ್ಯಾಸ್ ಲಾರಿಗೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮಗುವಿಗೆ ಚಿಕಿತ್ಸೆ- ಡಿಸಿ ಪತ್ನಿಯ ನಡೆಗೆ ಮೆಚ್ಚುಗೆ

    ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮಗುವಿಗೆ ಚಿಕಿತ್ಸೆ- ಡಿಸಿ ಪತ್ನಿಯ ನಡೆಗೆ ಮೆಚ್ಚುಗೆ

    ಡೆಹ್ರಾಡೂನ್: ನೈನಿತಾಲ್‍ನ ಜಿಲ್ಲಾಧಿಕಾರಿ ಪತ್ನಿ ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮಗುವಿಗೆ ಚಿಕಿತ್ಸೆ ಕೊಡಿಸಿದ್ದು, ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಜಿಲ್ಲಾಧಿಕಾರಿಯ ಸವೀನ್ ಬಂಸಾಲ್ ಅವರ ಪತ್ನಿ ಸುರಭಿ ಬಂಸಾಲ್ ಅವರು ತಮ್ಮ ಪರಿಚಯವನ್ನು ಮಾಡಿಸದೇ ಸಾಮಾನ್ಯರಂತೆ ಲೈನಿನಲ್ಲಿ ನಿಂತು ಸ್ಲಿಪ್ ಪಡೆದುಕೊಂಡಿದ್ದಾರೆ. ಅರ್ಧ ಗಂಟೆ ಲೈನಿನಲ್ಲಿ ನಿಂತ ಬಳಿಕ ಅವರ ಸರದಿ ಬಂತು.

    ಮಗುವಿಗೆ ಚಿಕಿತ್ಸೆ ಕೊಡಿಸಲು ಸುರಭಿ ಬಂಸಾಲ್ ಅವರು ಬಿಡಿ ಪಾಂಡೆ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅವರು ತಮ್ಮ ಪತಿ ಸವೀನ್ ಬಂಸಾಲ್ ಹೆಸರು ಹೇಳಿ ವಿಐಪಿ ಸೌಲಭ್ಯ ಬಳಸಿಕೊಳ್ಳುವ ಬದಲು ಸಾಮಾನ್ಯರಂತೆ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.

    ಮಕ್ಕಳ ವೈದ್ಯ ಡಾ. ಎಂ.ಎಸ್ ರಾವತ್ ಅವರು ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಅಷ್ಟರಲ್ಲಿ ಜಿಲ್ಲಾಧಿಕಾರಿ ಪತ್ನಿ ಸಾಮಾನ್ಯರಂತೆ ಯಾವುದೇ ವಿಐಪಿ ಸೌಲಭ್ಯ ಬಳಸದೇ ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ ಎಂಬ ವಿಷಯ ಆಸ್ಪತ್ರೆ ತುಂಬಾ ಹರಡಿತ್ತು. ಬಳಿಕ ಸುರಭಿ ಬಂಸಾಲ್ ಸರಳತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.