Tag: treatment

  • ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಯಾಗಿದೆ- ಸಿಎಂ ಬಿಎಸ್‍ವೈ

    ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಯಾಗಿದೆ- ಸಿಎಂ ಬಿಎಸ್‍ವೈ

    -ಆಸ್ಪತ್ರೆಗೆ ಭಕ್ತರು ಬರೋದು ಬೇಡ

    ಉಡುಪಿ: ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಶ್ರೀಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಈಗ ಶ್ರೀಗಳು ಕಣ್ಣು ಬಿಡುತ್ತಿದ್ದು, ಸಹಜ ಉಸಿರಾಟಕ್ಕೆ ಪ್ರಯತ್ನ ಮಾಡುತ್ತಿದ್ದಾರೆಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

    ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಪೇಜಾವರ ಶ್ರೀಪಾದರು ಶೀಘ್ರ ಗುಣಮುಖರಾಗಿ, ಮತ್ತೆ ಅವರು ಕೃಷ್ಣ ಮಠಕ್ಕೆ ಬಂದು ಕೃಷ್ಣನ ಸೇವೆ ಮಾಡುವಂತಾಗಬೇಕು. ಅದನ್ನು ನೋಡುವ ಸೌಭಾಗ್ಯ ನಮಗೆ ಸಿಗಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಮಣಿಪಾಲ ಕೆಎಂಸಿಯ ತಜ್ಞ ವೈದ್ಯರ ತಂಡ ಶ್ರೀಗಳ ಆರೋಗ್ಯ ಸುಧಾರಣೆಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದರು.

    ಶ್ರೀಗಳ ಆರೋಗ್ಯದಲ್ಲಿ ನಿನ್ನೆಗಿಂತ ಇಂದು ಸುಧಾರಣೆ ಆಗಿದೆ. ಕಣ್ಣು ಬಿಡುತ್ತಿದ್ದಾರೆ. ಮಾಧ್ಯಮದವರು ತಪ್ಪು ತಿಳಿಯುವ ಅಗತ್ಯವಿಲ್ಲ. ಶ್ರೀಗಳ ಆರೋಗ್ಯದ ದೃಷ್ಟಿಯಿಂದ ಭದ್ರತೆಯನ್ನು ಬಿಗಿ ಮಾಡಲಾಗಿದೆ ಎಂದು ಹೇಳಿದರು. ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ. ಇದಕ್ಕೆ ಮಾಧ್ಯಮದವರು ಸಹಕರಿಸಬೇಕು. ಶ್ರೀಗಳ ಅಭಿಮಾನಿಗಳು, ಭಕ್ತರಲ್ಲಿ ವಿನಂತಿ ಮಾಡುತ್ತೇನೆ. ಆಸ್ಪತ್ರೆಗೆ ಭೇಟಿ ನೀಡುವುದು ಬೇಡ, ಅವರು ಗುಣಮುಖರಾಗಿ ಕೃಷ್ಣಮಠಕ್ಕೆ ಬಂದ ನಂತರ ಅವರ ದರ್ಶನ ಪಡೆಯಬಹುದು ಎಂದು ತಿಳಿಸಿದರು.

    ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ ಅವರು ಕೂಡ ದೂರವಾಣಿ ಮೂಲಕ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಪೇಜಾವರ ಶ್ರೀಗಳ ಆಪೇಕ್ಷೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಅದಕ್ಕೆ ಶ್ರೀಗಳ ಆಶೀರ್ವಾದ ಸಿಗಬೇಕೆಂಬುವುದೇ ಎಲ್ಲರ ಆಶಯವಾಗಿದೆ. ಇತ್ತೀಚೆಗೆ ಶ್ರೀಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ ಎಂದು ಹೇಳಿದರು.

  • ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ವಿದ್ಯಾರ್ಥಿಗಳಿಂದ ರಸ್ತೆಬದಿಯಲ್ಲಿ ಉಪಹಾರ ಮಾರಾಟ

    ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ವಿದ್ಯಾರ್ಥಿಗಳಿಂದ ರಸ್ತೆಬದಿಯಲ್ಲಿ ಉಪಹಾರ ಮಾರಾಟ

    ತಿರುವನಂತಪುರಂ: ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ವಿದ್ಯಾರ್ಥಿಗಳು ರಸ್ತೆಬದಿಯಲ್ಲಿ ಉಪಹಾರವನ್ನು ಮಾರಾಟ ಮಾಡುತ್ತಿರುವ ಅಪರೂಪದ ದೃಶ್ಯ ಕೇರಳದ ತುರಾವೂರ್ ನಲ್ಲಿ ಕಂಡು ಬಂದಿದೆ.

    ತುರಾವೂರ್ ನ ಶ್ರೀ ಗೋಕುಲಂ ಎಸ್‍ಎನ್‍ಜಿಎಂ ಕ್ಯಾಟರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ರಸ್ತೆಬದಿಯಲ್ಲಿ ಉಪಹಾರ ಮಾರಾಟ ಮಾಡುತ್ತಿದ್ದಾರೆ. ಸಹೋದರಿಯ ಕುಟುಂಬಸ್ಥರ ಬಳಿ ಚಿಕಿತ್ಸೆಗಾಗಿ ಕಡಿಮೆ ಹಣವಿದೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲರೂ ರಸ್ತೆಬದಿಯಲ್ಲಿ ಉಪಹಾರ ಮಾರಾಟ ಮಾಡುವ ಮೂಲಕ ಸ್ನೇಹಿತನಿಗೆ ಸಹಾಯ ಮಾಡುತ್ತಿದ್ದಾರೆ.

    ಕೆ.ಎಸ್ ಅರೋಮಲ್ ಅವರ ಸಹೋದರಿ ಐಶ್ವರ್ಯಾ ಕಿಡ್ನಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಐಶ್ವರ್ಯಾ ಅವರ ಚಿಕಿತ್ಸೆಗಾಗಿ ಕುಟುಂಬಸ್ಥರು ಜಮೀನು ಮಾರಾಟ ಮಾಡಿದ್ದರು. ವೈದ್ಯರ ಪ್ರಕಾರ, ಐಶ್ವರ್ಯಾಳಿಗೆ ಕಿಡ್ನಿ ಕಸಿ ಮಾಡಬೇಕಾಗುತ್ತದೆ. ಇದರಿಂದ ಅವರ ಪ್ರಾಣ ಉಳಿಯುತ್ತೆ ಎಂದು ಹೇಳಿದ್ದಾರೆ.

    ಐಶ್ವರ್ಯಾಳ ಆರೋಗ್ಯದ ಸ್ಥಿತಿ ಬಗ್ಗೆ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತಿಳಿಯಿತು. ಆಗ ಅವರು ಚಿಕಿತ್ಸೆಗಾಗಿ ಅರೋಮಲ್‍ಗೆ ಸಹಾಯ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಅಶ್ವಿನ್ ಎಂಬವರು ಮಾತನಾಡಿ, ಸ್ನೇಹಿತರ ಜೊತೆ ಸೇರಿ ರಸ್ತೆಬದಿಯಲ್ಲಿ ಆಹಾರ ಮಾರಾಟ ಮಾಡುತ್ತಿದ್ದೇವೆ. ಇದರಿಂದ ಪ್ರತಿದಿನ 4 ಸಾವಿರದಿಂದ 5 ಸಾವಿರ ರೂ.ವರೆಗೂ ಸಂಪಾದಿಸುತ್ತಿದ್ದೇವೆ. ಗ್ರಾಮದ ಜನರು ಕೂಡ ಸಹಾಯ ಮಾಡಲು ಮುಂದಾಗಿದ್ದಾರೆ ಎಂದರು.

    ಐಶ್ವರ್ಯಾ ತಂದೆ ಕೂಡ ಪ್ರತಿಕ್ರಿಯಿಸಿ, ಚಿಕಿತ್ಸೆಗಾಗಿ 20 ಲಕ್ಷಕ್ಕಿಂತ ಹೆಚ್ಚು ಖರ್ಚು ಆಗಲಿದೆ. ಮೊದಲು ಐಶ್ವರ್ಯಾಳಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

  • ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    – ಅಡ್ಡ ಬಂದ ನಾಯಿಮರಿ ಕತ್ತು ಹಿಸುಕಿದ
    – ಪೊಲೀಸರಿಂದ ದಂತ ವೈದ್ಯ ಅರೆಸ್ಟ್

    ಲಕ್ನೋ: ಮಗಳಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲವೆಂದು ತಾಯಿಯೊಬ್ಬರು ದೂರಿದ್ದಕ್ಕೆ ಸಿಟ್ಟಿಗೆದ್ದ ದಂತ ವೈದ್ಯನೋರ್ವ ಇಬ್ಬರನ್ನೂ ಕೊಲೆ ಮಾಡಲು ಯತ್ನಿಸಿ, ಅಡ್ಡ ಬಂದ ನಾಯಿ ಮರಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಘಾಜಿಯಾಬಾದ್‍ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಆರೋಪಿಯನ್ನು ದಂತ ವೈದ್ಯ ಯಾಮಿನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಈತ ವಿಜಯನಗರದಲ್ಲಿ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದಾನೆ. ಕಳೆದ 6 ತಿಂಗಳಿನಿಂದ ವೈದ್ಯನ ಮನೆ ಬಳಿ ಇದ್ದ ಮಹಿಳೆಯೊಬ್ಬರು ತನ್ನ ಮಗಳ ಹಲ್ಲು ನೋವಿಗೆ ಈತನ ಬಳಿಯೇ ಚಿಕಿತ್ಸೆ ಕೊಡಿಸುತ್ತಿದ್ದರು. 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಬಾಲಕಿಯ ಹಲ್ಲು ನೋವು ಮಾತ್ರ ಕಡಿಮೆಯಾಗಿರಲಿಲ್ಲ.

    ಆದ್ದರಿಂದ ತಾಯಿ ಸಿದ್ದಿಕಿ ಬಳಿ ಹೋಗಿ ಜಗಳವಾಡಿದ್ದರು. ನೀವು ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ ಎಂದು ದೂರಿದ್ದರು. ಇದರಿಂದ ಸಿಟ್ಟಿಗೆದ್ದ ವೈದ್ಯ ಶನಿವಾರ ಮಹಿಳೆ ಮನೆಗೆ ನುಗ್ಗಿ ಚಾಕುವಿನಿಂದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದನು. ಈ ವೇಳೆ ಅವರನ್ನು ರಕ್ಷಿಸಲು ಮನೆಯಲ್ಲಿ ಸಾಕಿದ್ದ ನಾಯಿ ಮರಿ ಮುಂದೆ ಬಂದು, ವೈದ್ಯನ ಕಾಲಿಗೆ ಕಚ್ಚಿತು. ಇದರಿಂದ ಮತ್ತಷ್ಟು ಕೋಪಗೊಂಡ ವೈದ್ಯ ನಾಯಿ ಮರಿಯ ಕತ್ತು ಹಿಸುಕಿ ಕೊಂದು ಹಾಕಿದನು.

    ಅಷ್ಟೇ ಅಲ್ಲದೆ ಮಹಿಳೆ ಹಾಗೂ ಆಕೆಯ ಮಗಳ ಜೊತೆ ವೈದ್ಯ ಅಸಭ್ಯವಾಗಿ ವರ್ತಿಸಿದ್ದನು, ಈ ವೇಳೆ ಮಹಿಳೆ ಕಿರುಚಾಡಿ ಅಲಾರಾಂ ಹೊಡೆದಾಗ ಅಕ್ಕಪಕ್ಕದ ಮನೆಯವರು ಬಂದು ಆರೋಪಿಯನ್ನು ಹಿಡಿದರು ಎಂದು ಪೊಲೀಸರು ತಿಳಿಸಿದರು.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 354, 307 ಕಾಯ್ದೆ ಅಡಿ ಹಾಗೂ ಪ್ರಾಣಿ ಮೇಲೆ ವಿಕೃತಿ ಮೆರೆದಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶಿಸಿದ್ದಾರೆ.

  • ಆರೋಗ್ಯ ಇಲಾಖೆ ನಿರ್ಲಕ್ಷ್ಯ – ಗ್ರಾಮದ ಎಲ್ಲರಿಗೂ ಸಾಮೂಹಿಕ ಜ್ವರ

    ಆರೋಗ್ಯ ಇಲಾಖೆ ನಿರ್ಲಕ್ಷ್ಯ – ಗ್ರಾಮದ ಎಲ್ಲರಿಗೂ ಸಾಮೂಹಿಕ ಜ್ವರ

    ಚಾಮರಾಜನಗರ: ಸಮರ್ಪಕ ಚಿಕಿತ್ಸೆ ದೊರೆಯದೆ ಚಾಮರಾಜನಗರ ಜಿಲ್ಲೆಯ ಕಾಡಂಚಿನ ಉಯಿಲನತ್ತ ಗ್ರಾಮಸ್ಥರು ಸಾಮೂಹಿಕವಾಗಿ ಜ್ವರ, ಮೈ-ಕೈನೋವು, ಮೂಳೆನೋವು ಮತ್ತು ಸಂದುನೋವಿನಿಂದ ಬಳಲುತ್ತಿದ್ದಾರೆ.

    ಹನೂರು ತಾಲೂಕು ಉಯಿಲನತ್ತ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳಿದ್ದು ಪ್ರತಿ ಕುಟುಂಬದಲ್ಲೂ ಒಬ್ಬರಲ್ಲ ಒಬ್ಬರು ಜ್ವರ, ಮೈ-ಕೈನೋವು, ಮೂಳೆ ನೋವು, ಸಂದುನೋವಿನಿಂದ ಬಳಲುತ್ತಿದ್ದಾರೆ. ಇವರಿಗೆ ಕೇವಲ ಮಾತ್ರೆ ನೀಡಿ ಮತ್ತೆ ಯಾವುದೇ ಚಿಕಿತ್ಸೆ ನೀಡದೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

    ತೀವ್ರ ಜ್ವರ ಹಾಗು ಸಂದುನೋವಿನಿಂದ ಬಳಲುತ್ತಿರುವುದರಿಂದ ಪಕ್ಕದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುಲು ಸಾಧ್ಯವಾಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲೇ ಒಂದು ಕ್ಯಾಂಪ್ ಮಾಡಿ ಸಮಪರ್ಕ ಚಿಕಿತ್ಸೆ ನೀಡಬೇಕು ಇಲ್ಲವೆ ತಾಲೂಕು ಆಸ್ಪತ್ರೆ ಹಾಗು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಹಣ ಕಟ್ಟಿದ್ರೆ ಚಿಕಿತ್ಸೆ ಎಂದ ವೈದ್ಯರು- ದುಡ್ಡಿಲ್ಲದೆ ಕಣ್ಣೀರಿಡುತ್ತಿರುವ ತಾಯಿ

    ಹಣ ಕಟ್ಟಿದ್ರೆ ಚಿಕಿತ್ಸೆ ಎಂದ ವೈದ್ಯರು- ದುಡ್ಡಿಲ್ಲದೆ ಕಣ್ಣೀರಿಡುತ್ತಿರುವ ತಾಯಿ

    ಬೆಳಗಾವಿ: ನೆರೆಯಲ್ಲಿ ಮನೆ ಕಳೆದುಕೊಂಡ ತಾಯಿಯೊಬ್ಬರಿಗೆ ಈಗ ಮಗನನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆಸ್ಪತ್ರೆಗೆ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ವೈದ್ಯರು ಚಿಕಿತ್ಸೆ ಸ್ಥಗಿತಗೊಳಿಸಿದ್ದು, ದುಡ್ಡಿಲ್ಲದೆ ತಾಯಿ ಕಣ್ಣೀರಿಡುತ್ತಿದ್ದಾರೆ.

    ಜಿಲ್ಲೆಯ ಗೋಕಾಕ್ ನಗರದ ಗುರುವಾರ ಪೇಟೆ ನಿವಾಸಿ ಸುಜಾತಾ ಅವರು ತಮ್ಮ ಹದಿನೇಳು ತಿಂಗಳ ಮಗ ಸುಪ್ರಜ್‍ಗೆ ಚಿಕಿತ್ಸೆ ಕೊಡಿಸಲಾಗದೇ ಪರದಾಡುತ್ತಿದ್ದಾರೆ. ಕಳೆದ 1 ವಾರದಿಂದ ಮಗು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, 2 ದಿನಗಳ ಹಿಂದೆ ಮಗನನ್ನ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಅಲ್ಲಿ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಹಣ ಕಟ್ಟದ ಕಾರಣಕ್ಕೆ ಮಗುವಿಗೆ ಚಿಕಿತ್ಸೆ ಕೊಡುವುದನ್ನು ವೈದ್ಯರು ನಿಲ್ಲಿಸಿದ್ದಾರೆ. ಹಣ ಕಟ್ಟದಿದ್ದರೆ ಚಿಕಿತ್ಸೆ ನೀಡುವುದಿಲ್ಲ, ಸದ್ಯ ಆಗಿರುವ ಬಿಲ್ ಕಟ್ಟಿ ಮಗನನ್ನ ಕರೆದುಕೊಂಡು ಹೋಗುವಂತೆ ವೈದ್ಯರು ತಾಕೀತು ಮಾಡಿದ್ದಾರೆ. ಆದರೆ ನನ್ನ ಬಳಿ ಹಣವಿಲ್ಲ ಎಂದು ತಾಯಿ ಅಳಲನ್ನು ತೋಡಿಕೊಂಡಿದ್ದಾರೆ.

    ಕಳೆದ ಎಂಟು ತಿಂಗಳ ಹಿಂದೆ ಪತಿಯನ್ನು ಕಳೆದುಕೊಂಡ ಸುಜಾತಾ ಅವರು, ಮೂರು ತಿಂಗಳ ಹಿಂದೆ ಘಟಪ್ರಭಾ ನದಿ ಪ್ರವಾಹಕ್ಕೆ ಇದ್ದ ಒಂದು ಮನೆಯನ್ನೂ ಕೂಡ ಕಳೆದುಕೊಂಡಿದ್ದಾರೆ. ಸದ್ಯ ತಗಡಿನ ಶೆಡ್‍ನಲ್ಲಿ ಸುಜಾತಾ ಹಾಗೂ ಅವರ ಮಗ ಜೀವನ ಸಾಗಿಸುತ್ತಿದ್ದಾರೆ. ಭೀಕರ ನೆರೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಇತರೆ ದಾಖಲೆಗಳು ಕೊಚ್ಚಿಹೋಗಿದೆ. ಹೀಗಾಗಿ ದಾಖಲೆ ನೀಡದೆ ಸರ್ಕಾರಿ ಸ್ಕಿಮ್ ಅನ್ವಯಿಸದ ಕಾರಣಕ್ಕೆ ಆಸ್ಪತ್ರೆ ಆಡಳಿತ ಮಂಡಳಿ, ಮೊದಲು ಹಣ ಕಟ್ಟಿ ಆಮೇಲೆ ಚಿಕಿತ್ಸೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇತ್ತ ಹಣವಿಲ್ಲದೆ, ಅತ್ತ ಮಗುವನ್ನು ಕಳೆದುಕೊಳ್ಳುವ ಭೀತಿಯಲ್ಲಿ ತಾಯಿ ಜೀವಿ ಪರದಾಡುತ್ತಿದೆ.

    ಭೀಕರ ಪ್ರವಾಹ ಉಂಟು ಮಾಡಿದ ಅವಾಂತರ ಇನ್ನು ಸರಿಹೋಗಿಲ್ಲ. ಒಂದೆಡೆ ಮನೆಮಠ ಕಳೆದುಕೊಂಡು ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಬಂದ ನೆರೆಯಲ್ಲಿ ಅವರು ತಮ್ಮ ಜೀವವನ್ನ ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಹೀಗಿರುವಾಗ ಪ್ರವಾಹದಲ್ಲಿ ಕೊಚ್ಚಿಹೋದ ದಾಖಲೆಗಳನ್ನು ಎಲ್ಲಿಂದ ತರುತ್ತಾರೆ ಎನ್ನುವ ಬಗ್ಗೆ ಆಸ್ಪತ್ರೆ ಆಡಳಿತ ಯೋಚಿಸಬೇಕು. ಮೊದಲೇ ನೊಂದು ಸುಣ್ಣವಾಗಿರುವ ಸಂತ್ರಸ್ತರ ಬಳಿ ಹಣ ಕೇಳಿದರೆ ಎಲ್ಲಿಂದ ತರುತ್ತಾರೆ ಎನ್ನುವುದನ್ನು ಯೋಚಿಸಬೇಕು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಸಂತ್ರಸ್ತ ಕುಟುಂಬಕ್ಕೆ ನೆರವಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

  • ಗಂಭೀರವಾಗಿ ಗಾಯಗೊಂಡು ನರಳಾಡ್ತಿದ್ದ ಕೋತಿಗೆ ಯುವಕರಿಂದ ಚಿಕಿತ್ಸೆ

    ಗಂಭೀರವಾಗಿ ಗಾಯಗೊಂಡು ನರಳಾಡ್ತಿದ್ದ ಕೋತಿಗೆ ಯುವಕರಿಂದ ಚಿಕಿತ್ಸೆ

    ದಾವಣಗೆರೆ: ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ಕೋತಿಗೆ ಯುವಕರ ತಂಡ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ನಡೆದಿದೆ.

    ಹನಗವಾಡಿ ಗ್ರಾಮದ ಆಟೋ ಕೆಂಚಪ್ಪ ಎಂಬವರ ಮನೆಯ ಮೇಲೆ ಕೋತಿ ಬಂದು ಕುಳಿತಿತ್ತು. ಈ ವೇಳೆ ಅದರ ಬೆನ್ನಿನ ಮೇಲೆ ಗಂಭೀರ ಗಾಯಗಳಾಗಿದ್ದು, ಗಾಯಕ್ಕೆ ಹುಳಗಳು ಸಹ ಬಿದ್ದಿದ್ದವು. ಮೂಕವೇದನೆ ಅನುಭವಿಸುತ್ತಿದ್ದ ಕೋತಿಯನ್ನು ನೋಡಿದ ಗ್ರಾಮದ ಯುವಕರು ಅದನ್ನು ಹಿಡಿದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

    ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಪಶು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಯುವಕರು ತಮ್ಮ ಸ್ವಂತ ಹಣದಲ್ಲಿ ಕೋತಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಎರಡು ದಿನಗಳಲ್ಲಿ ಕೋತಿ ಚೇತರಿಕೆ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಕೋತಿಯನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸುತ್ತಿರುವ ಯುವಕರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಬಿಗ್ ಮನೆಯಿಂದ ಹೊರಬಂದ ಸ್ಪರ್ಧಿ ಕಿಶನ್

    ಬಿಗ್ ಮನೆಯಿಂದ ಹೊರಬಂದ ಸ್ಪರ್ಧಿ ಕಿಶನ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್ ಸೀಸನ್-7’ ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಆದರೆ ಇಷ್ಟು ಬೇಗ ಡ್ಯಾನ್ಸರ್ ಕಿಶನ್ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

    ಕಿಶನ್ ಬಿಗ್ ಬಾಸ್ ಮನೆಯಿಂದ ಶುಕ್ರವಾರ ಹೊರ ಹೋಗಿದ್ದಾರೆ. ಆದರೆ ಅವರು ಔಟಾಗಿ ಹೊರ ಹೋಗಿಲ್ಲ ಬದಲಾಗಿ ಚಿಕಿತ್ಸೆ ಪಡೆಯಲು ಹೊರ ಹೋಗಿದ್ದಾರೆ. ಕಿಶನ್ ಜಾಂಡೀಸ್‍ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.

    ಶುಕ್ರವಾರ ರಾತ್ರಿ ಬಿಗ್‍ ಬಾಸ್ ಕೊಟ್ಟಿದ್ದ ಟಾಸ್ಕ್ ಅನ್ನು ಮುಗಿಸಿದ ಕಿಶನ್ ಕನ್ಫೇಶನ್ ರೂಮಿಗೆ ಹೋಗಿದ್ದಾರೆ. ಈ ವೇಳೆ ಬಿಗ್‍ಬಾಸ್ ಅವರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವಂತೆ ಹೇಳಿ ಜಾಂಡೀಸ್ ಕುರಿತ ಹೆಚ್ಚಿನ ತಪಾಸಣೆಗಾಗಿ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ.

    ಕಿಶನ್‍ಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ನಾಲ್ಕನೇ ದಿನದ ರಾತ್ರಿ ಡ್ಯಾನ್ಸರ್ ಕಿಶನ್ ರನ್ನ `ಬಿಗ್ ಬಾಸ್’ ಆಸ್ಪತ್ರೆಗೆ ಕಳುಹಿಸಿದ್ದಾರೆ. ಒಂದು ವೇಳೆ ಕಿಶನ್‍ಗೆ ಜಾಂಡೀಸ್ ಹೆಚ್ಚಾಗಿದ್ದರೆ, ಶೋನಲ್ಲಿ ಮುಂದುವರಿಯುವುದು ಕಷ್ಟವಾಗಬಹುದು. ಕಿಶನ್ ಮೊದಲ ವಾರವೇ ಸೇಫ್ ಆಗಿದ್ದಾರೆ.

  • ಚಿಕಿತ್ಸೆ ನೀಡಲು 5 ಸಾವಿರ ಲಂಚ ಕೇಳಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ

    ಚಿಕಿತ್ಸೆ ನೀಡಲು 5 ಸಾವಿರ ಲಂಚ ಕೇಳಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ

    ಹಾಸನ: ಚಿಕಿತ್ಸೆ ನೀಡಲು ಐದು ಸಾವಿರ ಲಂಚಕ್ಕೆ ಆಮಿಷವೊಡ್ಡಿದ್ದ ವೈದ್ಯನೊಬ್ಬ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಹಾಸನದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯ ಡಾ.ರಾಜಶೇಖರ್ ಸಿಕ್ಕಿ ಬಿದ್ದ ವೈದ್ಯಾಧಿಕಾರಿ. ಮಹಿಳೆಗೆ ಅಳವಡಿಸಿದ್ದ ಗರ್ಭ ನಿರೋಧಕ ಸಾಧನ ತೆಗೆಯಲು ಐದು ಸಾವಿರ ಲಂಚ ಕೇಳಿದ್ದ ವೈದ್ಯ, ಆಸ್ಪತ್ರೆ ಆವರಣದಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾನೆ.

    ಮೂಡಿಗೆರೆ ತಾಲೂಕಿನ ಮಹಿಳೆಯೊಬ್ಬರ ಗರ್ಭ ಸುರಕ್ಷತಾ ಕವಚ ತೆಗೆಯಲು ಲಂಚ ಕೇಳಿದ್ದರು. ಎಸಿಬಿ ಡಿವೈಎಸ್ಪಿ ಪೂರ್ಣಚಂದ್ರ ನೇತೃತ್ವದಲ್ಲಿ ದಾಳಿ ಮಾಡಿದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದ ವೈದ್ಯನನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

  • ಟ್ರೀಟ್‍ಮೆಂಟಿಗೆ 5 ರೂ., ಪಾರ್ಕಿಂಗ್‍ಗೆ 30 ರೂ. – ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ದಂಧೆ

    ಟ್ರೀಟ್‍ಮೆಂಟಿಗೆ 5 ರೂ., ಪಾರ್ಕಿಂಗ್‍ಗೆ 30 ರೂ. – ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ದಂಧೆ

    ಬೆಂಗಳೂರು: ನಗರದಲ್ಲಿರುವ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಒಳಗಡೆ ನಡೆಯುತ್ತಿರುವ ದಂಧೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಟೆಂಡರ್ ಆಗಿರುವುದು ಒಂದು, ವಸೂಲಿ ಮಾಡುತ್ತಿರುವುದು ಮತ್ತೊಂದು. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಪಾರ್ಕಿಂಗ್ ದಂಧೆ ಇದೀಗ ಹೊರಬಿದ್ದಿದೆ.

    ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೋರಿಂಗ್, ಕೆ.ಸಿ ಜನರಲ್ ಮತ್ತು ನಿಮ್ಹಾನ್ಸ್ ಗಳಲ್ಲಿ ಚಿಕಿತ್ಸೆಗೆ ಚಾರ್ಜ್ ಕೇವಲ 5 ರೂ. ಆದರೆ ಪಾರ್ಕಿಂಗ್ ಚಾರ್ಜ್ ಮಾತ್ರ ಅದರ 10 ಪಟ್ಟು ಇದೆ. ಟೆಂಡರ್ ನಲ್ಲಿ 5 ರೂ., 10 ರೂ. ಪಾರ್ಕಿಂಗ್ ಚಾರ್ಜ್ ಇದ್ದರೆ ಕಾಂಟ್ರ್ಯಾಕ್ಟ್ ದಾರರು ಟಿಕೆಟ್ ಪ್ರಿಂಟ್ ಮಾಡಿಕೊಂಡು ದ್ವಿಚಕ್ರ ವಾಹನಗಳಿಗೆ 20 ರೂ., ಕಾರಿಗೆ 30 ರೂಪಾಯಿ ಕಲೆಕ್ಟ್ ಮಾಡಿ ದೊಡ್ಡ ದಂಧೆಯನ್ನೇ ನಡೆಸುತ್ತಿದ್ದಾರೆ. ಪಬ್ಲಿಕ್ ಟಿವಿ ರಹಸ್ಯ ತಂಡ ಪಾರ್ಕಿಂಗ್ ದಂಧೆಯನ್ನ ಬೆನ್ನತ್ತಿದಾಗ ಕರಾಳದರ್ಶನ ಬಯಲಾಗಿದೆ.

    ಕೆಸಿ ಜನರಲ್ ಆಸ್ಪತ್ರೆ:
    ಕೆಸಿ ಜನರಲ್ ಆಸ್ಪತ್ರೆಗೆ ದಿನಕ್ಕೆ ಸಾವಿರಾರು ಜನ ಬರುತ್ತಿರುತ್ತಾರೆ. ಇಲ್ಲಿಗೆ ಬರುವ ದ್ವಿಚಕ್ರ ವಾಹನ ಪಾರ್ಕ್ ಮಾಡಲು 5 ರೂ. ಮತ್ತು ಕಾರಿಗೆ 10 ರೂ. ಟೆಂಡರ್ ನಲ್ಲಿ ನಿಗದಿ ಮಾಡಿದ್ದಾರೆ. ಇದನ್ನು ಕೆಸಿ ಜನರಲ್ ಆದ ವೈದ್ಯ ಅಧೀಕ್ಷರಾದ ಭಾನುಮೂರ್ತಿ ಅವರೇ ಹೇಳುತ್ತಾರೆ. ಆದರೆ ಹೊರಗಡೆ ಬೈಕಿಗೆ 10 ರೂ., ಕಾರಿಗೆ 20 ರೂ. ಮಾಡಿ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ವೈದಕೀಯ ಅಧೀಕ್ಷಕರಾದ ಭಾನು ಮೂರ್ತಿಯವರನ್ನು ಪ್ರಶ್ನಿಸಿದಾಗ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

    ಕೆಸಿ ಜರನಲ್ ಆಸ್ಪತ್ರೆ ಒಳಗಡೆ ಪಾರ್ಕಿಂಗ್ ದಂಧೆ:
    ಪಬ್ಲಿಕ್ ಟಿವಿ ಪ್ರತಿನಿಧಿ: ಸರ್ ಎಷ್ಟು ಸರ್ ಪಾರ್ಕಿಂಗ್ ಜಾರ್ಜ್
    ಪಾರ್ಕಿಂಗ್ ಕಾಂಟ್ರ್ಯಾಕ್ಟರ್: ಬೈಕ್‍ಗೆ 10, ಕಾರಿಗೆ 20
    ಪ್ರತಿನಿಧಿ: ಯಾಕೆ ಇಷ್ಟೊಂದು ?
    ಕಾಂಟ್ರಾಕ್ಟರ್: ಟೆಂಡರ್ ಆಗಿರೋದೆ ಅಷ್ಟು
    ಪ್ರತಿನಿಧಿ: ಟ್ರೀಟ್‍ಮೆಂಟ್ ಚಾರ್ಜ್ 5 ರೂ. ಆಯಿತಲ್ಲ ಬ್ರದರ್
    ಕಾಂಟ್ರಾಕ್ಟರ್: ಇದೆಯಪ್ಪ ಸೂಪರ್‌ಡೆಂಟ್‌ ನಾ ಕೇಳಿ
    ಪ್ರತಿನಿಧಿ: ಟೆಂಡರ್ ಕಾಪಿ ಕೊಡಿ ನೋಡೋಣ
    ಕಾಂಟ್ರಾಕ್ಟರ್: ಟೆಂಡರ್ ಕಾಪಿ ಇಲ್ಲ. ಸೂಪರ್‌ಡೆಂಟ್‌ ಹತ್ತಿರ ಇದೆ
    ಪ್ರತಿನಿಧಿ:ನೀವು ಇಟ್ಟಿಕೊಂಡಿಲ್ವ
    ಕಾಂಟ್ರಾಕ್ಟರ್: ನಮ್ಮ ಹತ್ತಿರ ಇಲ್ಲ
    ಪ್ರತಿನಿಧಿ ಟೆಂಡರ್ ಇಲ್ಲದೇ ಡಬ್ಬಲ್ ಡಬ್ಬಲ್ ಕಲೆಕ್ಟ್ ಮಾಡ್ತಿರಾ
    ಕಾಂಟ್ರಾಕ್ಟರ್: ನಾವೇನು ಮಾಡೋಣ ಕೂಲಿ ಕೆಲಸಗಾರು
    ಪ್ರತಿನಿಧಿ: ಇದೆಲ್ಲಾ ತಪ್ಪು ತಾನೇ

    ವಿಕ್ಟೋರಿಯಾ ಆಸ್ಪತ್ರೆ;
    ರಾಜ್ಯದ ಮೂಲೆ ಮೂಲೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಅವರ ಜೊತೆ ಸಂಬಂಧಿಕರು ಕೂಡ ಬರುತ್ತಾರೆ. ಆಸ್ಪತ್ರೆ ಚಿಕಿತ್ಸೆ ಶುಲ್ಕಕ್ಕಿಂತ ಪಾರ್ಕಿಂಗ್ ಶುಲ್ಕವೇ ದುಪ್ಪಟ್ಟಿದೆ. ಬೈಕಿಗೆ 5 ರೂ., ಕಾರಿಗೆ 10 ರೂ. ಇದೆ. ಆದರೆ ವಿಕ್ಟೋರಿಯಾದಲ್ಲಿ ಬೈಕ್ 10 ರೂ., ಕಾರಿಗೆ 30 ರೂ., ಆಟೋಗೆ 20 ರೂ. ಚಾರ್ಜ್ ಮಾಡುತ್ತಿದ್ದಾರೆ.

    ಅನ್ಯಾಯದ ಬಗ್ಗೆ ಪ್ರಶ್ನಿಸಿದ್ದರೆ ಕಾಂಟ್ರಾಕ್ಟ್ ದಾರರು ಹೇಳುವುದು ಹೀಗೆ:
    ಪಬ್ಲಿಕ್ ಪ್ರತಿನಿಧಿ: ಎಷ್ಟು ಅಣ್ಣ ಪಾರ್ಕಿಂಗ್ ಜಾರ್ಜ್
    ಪಾರ್ಕಿಂಗ್ ಕಾಂಟ್ರ್ಯಾಕ್ಟರ್: ಬೈಕಿಗೆ 10, ಆಟೋಗೆ 20, ಕಾರಿಗೆ 30
    ಪ್ರತಿನಿಧಿ: ಯಾಕೆ ಇಷ್ಟೊಂದು ?
    ಕಾಂಟ್ರಾಕ್ಟರ್: ಅಷ್ಟೇ ಅಣ್ಣ ಇರೋದು
    ಪ್ರತಿನಿಧಿ: ಚಿಕಿತ್ಸೆಗೆ ಚಾರ್ಜ್ 5 ರೂ. ಅಲ್ವಾ ಬ್ರದರ್
    ಕಾಂಟ್ರಾಕ್ಟರ್: ಇಷ್ಟೇ ಹಾಕಿರೋದು
    ಪ್ರತಿನಿಧಿ: 30 ರೂ. ಜಾಸ್ತಿ ಆಯಿತಲ್ರಿ
    ಕಾಂಟ್ರಾಕ್ಟರ್: ವಿಕ್ಟೋರಿಯಾ ಜನ ಬರುತ್ತಾರೆ ನೋಡಿಕೊಳ್ಳಬೇಕಲ್ಲ
    ಪ್ರತಿನಿಧಿ: ಇದು ತಪ್ಪು ಅಲ್ವ ಗುರು
    ಕಾಂಟ್ರಾಕ್ಟರ್: ಇರೋದೆ ಇಷ್ಟು ಟೆಂಡರ್
    ಪ್ರತಿನಿಧಿ: ಟೆಂಡರ್ ಇಲ್ಲದೇ ಡಬ್ಬಲ್ ಡಬ್ಬಲ್ ಕಲೆಕ್ಟ್ ಮಾಡ್ತಿರ
    ಕಾಂಟ್ರಾಕ್ಟರ್: ಇರೋದೆ ಇಷ್ಟು
    ಪ್ರತಿನಿಧಿ: ಎಷ್ಟು ಇದೆ ತೋರಿಸಿ ಟೆಂಡರ್ ಕಾಫಿ
    ಕಾಂಟ್ರಾಕ್ಟರ್: ಇಲ್ಲ ಇಲ್ಲಿ

    ಬೋರಿಂಗ್ ಆಸ್ಪತ್ರೆ;
    ಇತ್ತ ಬೋರಿಂಗ್ ಆಸ್ಪತ್ರೆಯಲ್ಲೂ ಇದೆ ರೀತಿಯ ಪಾರ್ಕಿಂಗ್ ದಂಧೆ ಮುಂದುವರಿದಿದೆ. ವೈದ್ಯಾಧಿಕಾರಿಗಳಾದ ಮಂಜುನಾಥ್ ಅವರು ಕೇವಲ 5 ರೂ., 10 ರೂ. ನಿಗದಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಹೊರಗಡೆ ಮಾತ್ರ 10 ರೂ. 20 ಕಲೆಕ್ಟ್ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಅನ್ಯಾಯ ಇದು ತಪ್ಪು. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ವೈದ್ಯಕೀಯ ಅಧೀಕರಾದ ಮಂಜುನಾಥ್ ಅವರು ತಿಳಿಸಿದ್ದಾರೆ.

  • ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    -ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಅಕ್ರಮ ದಂಧೆ

    ಚಿತ್ರದುರ್ಗ: ವೈದ್ಯೋ ನಾರಾಯಣೋ ಹರಿ ಅಂತಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ದೊಡ್ಡ ಅಕ್ರಮ ದಂಧೆ ನಡೆಯುತ್ತಿದೆ.

    ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯ ಆಯುಷ್ ಡಾಕ್ಟರ್ ಎ.ಎನ್ ಸುರೇಶ್ ಎಂಬ ಆಸಾಮಿ, ಹಣಕ್ಕಾಗಿ ತಾನೊಬ್ಬ ವೈದ್ಯ ಅನ್ನೋದನ್ನೇ ಮರೆತು ಕ್ಯಾನ್ಸರ್ ರೋಗಿಗಳಿಗೆ ಪಾರಂಪರಿಕಚಿಕಿತ್ಸೆ ಕೊಡುತ್ತೇವೆ ಎಂದು ಅವರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ. ಕುಣಿಗಲ್‍ನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೆಸರಲ್ಲಿ ಖಾಸಗಿ ವಾಹಿನಿಗಳಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ತಾ, ಕ್ಯಾನ್ಸರ್ ರೋಗಿಗಳನ್ನು ಚಿತ್ರದುರ್ಗದ ಯೋಗಾವನ ಬೆಟ್ಟಕ್ಕೆ ಸೆಳೆಯುತ್ತಾನೆ. ಅಲ್ಲದೇ ಇವರ ಅಕ್ರಮ ಬಯಲಾಗದಿರಲಿ ಎಂದು ನಕಲಿ ಖಾವಿಧಾರಿಗಳ ಬೆಂಗಾವಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇಲ್ಲಸಲ್ಲದ ಚಿಕಿತ್ಸೆ ನೀಡುತ್ತಿದ್ದಾನೆ ಆರೋಪಗಳು ಕೇಳಿ ಬಂದಿವೆ.

    ಯೋಗದಿಂದ ಕ್ಯಾನ್ಸರ್ ಗುಣಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳೋ ಈ ದಂಧೆಕೋರರ ಮಾತಿಗೆ ಮರುಳಾದ ಹುಬ್ಬಳ್ಳಿ ಮೂಲದ ಬಾಲರಾಜ್ ಕುಮಾರ್ ಎಂಬ ರೋಗಿಯಿಂದ 30 ಸಾವಿರ ರೂಪಾಯಿ ಹಣ ಪಡೆದು, ಆರು ತಿಂಗಳಿಂದ ಅಲ್ಲೇ ಉಳಿದರೂ ರೋಗ ಗುಣವಾಗದೇ ಆತ ಸಾವಿನಂಚಿಗೆ ತಲುಪಿದ್ದಾನೆ. ಈ ಬಗ್ಗೆ ಕೇಳಲು ಬಂದಿದ್ದ ಬಾಲರಾಜ್ ಕುಟುಂಬದ ಮೇಲೆ ಡಾಕ್ಟರ್ ಸುರೇಶನ ಚೇಲಗಳು ದೌರ್ಜನ್ಯವೆಸಗಲು ಮುಂದಾಗಿದ್ದರು. ಆಗ ಆಕ್ರೋಶಗೊಂಡ ಕ್ಯಾನ್ಸರ್ ರೋಗಿ ಅಲ್ಲಿನ ನಕಲಿ ಖಾವಿಧಾರಿಗಳಿಗೆ ಭರ್ಜರಿ ಗೂಸಕೊಟ್ಟು ತನ್ನ ಕೋಪವನ್ನು ಈಡೇರಿಸಿಕೊಂಡಿದ್ದಾನೆ.

    ಈ ಅಕ್ರಮ ಸುಮಾರು ನಾಲ್ಕು ವರ್ಷಗಳಿಂದ ನಡೆಯುತಿದ್ದರೂ ಸಹ ಆರೋಗ್ಯ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇನ್ನಾದರೂ ಆರೋಗ್ಯ ಸಚಿವರು ಈ ಅಕ್ರಮಕ್ಕೆ ಹಾಕುತ್ತಾರ ಬ್ರೇಕ್ ಕಾದು ನೋಡಬೇಕಿದೆ.