Tag: treatment

  • 42 ನಿಮಿಷದಲ್ಲಿ 80 ಕಿಮೀ ಚಾಲನೆ – ಅವಳಿ ಮಕ್ಕಳ ಜೀವ ಉಳಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ

    42 ನಿಮಿಷದಲ್ಲಿ 80 ಕಿಮೀ ಚಾಲನೆ – ಅವಳಿ ಮಕ್ಕಳ ಜೀವ ಉಳಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ

    ಹಾವೇರಿ: ಸಂಚಾರಿ ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನ ಅಂಬ್ಯುಲೆನ್ಸ್ ಸಿಬ್ಬಂದಿ ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ.

    ಹಾವೇರಿ ನಗರದ ನಿವಾಸಿ ಲಕ್ಷ್ಮಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮಕ್ಕಳಲ್ಲಿ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆಯಂತೆ ಆದಷ್ಟು ಬೇಗ ನವಜಾತ ಶಿಶುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರ್ಥಮಾಡಿಕೊಂಡ ಅಂಬ್ಯುಲೆನ್ಸ್ ಸಿಬ್ಬಂದಿ ಕೇವಲ 42 ನಿಮಿಷಗಳಲ್ಲಿ 80 ಕಿಮೀ ಕ್ರಮಿಸಿ ಮಕ್ಕಳನ್ನು ಕಿಮ್ಸ್ ಗೆ ದಾಖಲಿಸಿದ್ದಾರೆ.

    ಹುಬ್ಬಳ್ಳಿಯ ಹೊರವಲಯಕ್ಕೆ ಅಂಬ್ಯುಲೆನ್ಸ್ ಬರುತ್ತಿದ್ದಂತೆ ಹುಬ್ಬಳ್ಳಿ ಸಂಚಾರಿ ಪೊಲೀಸರು ಅಂಬ್ಯುಲೆನ್ಸಗೆ ಯಾವುದೇ ಟ್ರಾಫಿಕ್ ಸಮಸ್ಯೆ ಬರದಂತೆ ಕಿಮ್ಸ್ ವರೆಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಟ್ರಾಫಿಕ್ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಅಂಬ್ಯುಲೆನ್ಸ್ ಸಿಬ್ಬಂದಿ ತೌಫಿಕ್ ಪಠಾಣ್ ಮತ್ತು ಕುಮಾರ್ ಹಾಗೂ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

  • ಸಚಿವ ಸಿ.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರು – ಖಾಸಗಿ ಆಸ್ಪತ್ರೆಗೆ ದಾಖಲು

    ಸಚಿವ ಸಿ.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರು – ಖಾಸಗಿ ಆಸ್ಪತ್ರೆಗೆ ದಾಖಲು

    ಗದಗ: ಸಚಿವ ಸಿ.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಗದಗ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ, ಪರಿಸರ, ಜೀವಶಾಸ್ತ್ರ ಇಲಾಖೆ ಸಚಿವ ಸಿ.ಸಿ ಪಾಟೀಲ್ ಆಸಿಡಿಟಿ ಹಾಗೂ ಹೈಬಿಪಿ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿರಾಯು ಖಾಸಗಿ ಆಸ್ಪತ್ರೆ ವೈದ್ಯರಾದ ಡಾ. ಶ್ವೇತಾ ಸಂಕನೂರ, ಗದಗ ಜಿಮ್ಸ್ ಆಸ್ಪತ್ರೆಯ ಫಿಜಿಸಿಯನ್ ಡಾ.ಸಂಗಮೇಶ್ ಅಸೂಟಿ, ಸರ್ಜನ್ ಡಾ. ಬಸನಗೌಡ ಕರಿಗೌಡ ಚಿಕಿತ್ಸೆ ನೀಡಿದ್ದಾರೆ.

    ಸಚಿವ ಸಿ.ಸಿ ಪಾಟೀಲ್ ಅವರಿಗೆ 180/100 ವರೆಗೆ ಹೈಬಿಪಿ ಏರಿಕೆಯಾಗಿತ್ತು. ಆಸಿಡಿಟಿಗೆ ಪ್ಯಾನ್-ಡಿ ಮಾತ್ರೆ, ಬಿಪಿಗೆ ಎನ್ವಾಸ್ ಮಾತ್ರೆ, ಅಮ್ಲೋಡಿಪಿನ್ 5 ಎಂಜಿ ಮಾತ್ರೆಯನ್ನು ವೈದ್ಯರು ನೀಡಿದ್ದಾರೆ. ಯಾವುದೇ ಅಪಾಯವಿಲ್ಲ, ಸದ್ಯ ಗುಣಮುಖರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳಿಂದ ದೃಢಪಟ್ಟಿದೆ. ಚಿಕಿತ್ಸೆ ಪಡೆದು ವೈದ್ಯರುಗಳ ಸಲಹೆ ಮೇರೆಗೆ ಸ್ವಗ್ರಾಮ ನರಗುಂದಕ್ಕೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ.

  • ಹಾವು ಕಚ್ಚಿ ಎಂಟು ತಿಂಗಳ ತುಂಬು ಗರ್ಭಿಣಿ ಸಾವು

    ಹಾವು ಕಚ್ಚಿ ಎಂಟು ತಿಂಗಳ ತುಂಬು ಗರ್ಭಿಣಿ ಸಾವು

    ಮಡಿಕೇರಿ: ಕೊಳಕುಮಂಡಲ ಹಾವೊಂದು ಕಚ್ಚಿದ ಪರಿಣಾಮ ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುಚಿತ (36) ಮೃತ ದುರ್ದೈವಿ. ಸುಚಿತಗೆ ಶುಕ್ರವಾರ ರಾತ್ರಿ ತಮ್ಮ ಮನೆಯನ ಶೌಚ ಗೃಹದಲ್ಲಿ ಇರುವಾಗ ಕೊಳಕು ಮಂಡಲ ಹಾವು ಕಚ್ಚಿತ್ತು. ಹಾವು ಕಡಿತಕ್ಕೆ ಒಳಗಾದ ಮಹಿಳೆಯನ್ನು ಕುಶಾಲನಗರ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

    ಕುಶಾಲನಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿ ಸುಚಿತಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಸಂಜೆ 7:30 ರ ಸರಿಸುಮಾರಿಗೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

  • ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

    ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

    ಬೆಂಗಳೂರು: ವಿಶ್ವಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದು, ಈ ಮಾರಕ ಸೋಂಕಿಗೆ ಈವರೆಗೆ 25 ಮಂದಿ ಬಲಿಯಾಗಿದ್ದಾರೆ. ಚೀನಾದಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. ಕರ್ನಾಟಕಕ್ಕೂ ಕೊರೊನಾ ವೈರಸ್ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಿಗಳ ಆಸ್ಪತ್ರೆಯಲ್ಲಿ ವೈರಸ್ ಹರಡಿರುವ ಶಂಕೆಯ ಮೇಲೆ ರೋಗಿಯೊಬ್ಬರು ದಾಖಲಾಗಿದ್ದಾರೆ.

    ಇದು ರಾಜ್ಯದಲ್ಲಿಯೇ ಮೊದಲ ಪ್ರಕರಣವಾಗಿದ್ದು, ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದ ರೋಗಿಯ ರಕ್ತದ ಸ್ಯಾಂಪಲ್ ಅನ್ನು ಪುಣೆ ನ್ಯಾಷನಲ್ ವೈರಾಲಜಿ ಇನ್‍ಸ್ಟಿಟ್ಯೂಟ್‍ಗೆ ಕಳುಹಿಸಲಾಗಿದೆ. ಇಂದು ಸಂಜೆಯೊಳಗೆ ರೋಗಿಯ ವೈದ್ಯಕೀಯ ವರದಿ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರ ಕೈಗೆ ಸಿಗಲಿದೆ. ಬಳಿಕ ಕೊರೊನಾ ವೈರಸ್‍ನ ಸೋಂಕು ತಗುಲಿದೆಯಾ? ಇಲ್ಲವಾ ಎಂಬುದರ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಲಿದ್ದಾರೆ. ಅಲ್ಲದೆ ಚೀನಾಗೆ ಹೋಗಿ ಬಂದ ಮೂವರು ಬೆಂಗಳೂರಿಗರು ಹಾಗೂ ಚೀನಾದಿಂದ ಬೆಂಗಳೂರಿಗೆ ಬಿಸಿನೆಸ್ ಉದ್ದೇಶದಿಂದ ಬಂದ ನಾಲ್ಕು ಜನರನ್ನು ಮೆಡಿಕಲ್ ಅಬ್ಸರ್ವೆಷನ್‍ನಲ್ಲಿ ಇಡಲಾಗಿದೆ. ಏಳು ಮಂದಿಯಲ್ಲಿ ಒಬ್ಬರಲ್ಲಿ ಕೊರೊನಾ ವೈರಸ್‍ನ ಗುಣ ಲಕ್ಷಣಗಳು ಹೆಚ್ಚಾಗಿರೋದರಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ವೈದ್ಯಕೀಯ ವರದಿ ಕೂಡ ನೆಗಟಿವ್ ಇದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ – ಬಾವಲಿ ಸೂಪ್ ಕುಡಿದ ಯುವತಿಯೇ ಕಾರಣವೆಂದ ಚೀನಿಯರು

    ಚೀನಾ ಪ್ರವಾಸಕ್ಕೆ ತೆರೆಳಿದ್ದ ಮುಂಬೈನ ಇಬ್ಬರು ನಿವಾಸಿಗಳಿಗೆ ಈ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಇಬ್ಬರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ವೈರಸ್ ಚೀನಾದ ಲ್ಯಾಬ್‍ನಿಂದಲೇ ಸೋರಿಕೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿರುವ ಬಯೋಸೇಫ್ಟಿ ಲ್ಯಾಬ್‍ನಿಂದ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ 13 ನಗರಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇತ್ತ ಸೌದಿಯಲ್ಲಿರುವ ಕೇರಳ ಮೂಲದ ನರ್ಸ್ ಒಬ್ಬರಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ಹೀಗಾಗಿ ಕರ್ನಾಟಕದಲ್ಲಿ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

    ಚೀನಾದಲ್ಲಿ ಮೊದಲು ಪತ್ತೆಯಾದ ನಿಗೂಢ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ವೈರಸ್ ತಗುಲಿ ಈವರೆಗೆ ಸುಮಾರು 25 ಮಂದಿ ಸಾವನ್ನಪ್ಪಿದ್ದಾರೆ. 830ಕ್ಕೂ ಅಧಿಕ ಜನರಿಗೆ ಈ ವೈರಸ್ ತಗಲಿರುವ ಬಗ್ಗೆ ವರದಿಯಾಗಿದೆ. ಈ ಕೊರೊನಾ ವೈರಸ್ ಎಂದರೇನು? ಮಾರಕ ಸೋಂಕು ಹೇಗೆ ಬರುತ್ತೆ? ರೋಗ ಲಕ್ಷಣಗಳೇಣು? ಹೇಗೆ ನಿಯಂತ್ರಿಸಬಹುದು? ಚಿಕಿತ್ಸೆ ಲಭ್ಯವಿದೆಯಾ? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ – ಬೆಂಗ್ಳೂರಲ್ಲಿ ಸೋಂಕು ಶಂಕಿತ ಮೊದಲ ಪ್ರಕರಣ ದಾಖಲು

    ಕೊರೊನಾ ವೈರಸ್ ಎಂದರೇನು?
    ಕೊರೊನಾ ವೈರಸ್ (ತೀವ್ರ ಉಸಿರಾಟದ ಸಿಂಡ್ರೋಮ್- ಎಸ್‍ಎಆರ್‍ಎಸ್) ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‍ಗೆ 2019-ಎನ್‍ಸಿಓವಿ ಎಂದು ನಾಮಕರಣ ಮಾಡಿದೆ. ಈ ವೈರಸ್ ದೇಹಕ್ಕೆ ಸೇರಿದರೆ ನ್ಯೂಮೊನಿಯಾ ಮತ್ತಿತರ ಉಸಿರಾಟದ ತೊಂದರೆಗಳು ಉಂಟಾಗುತ್ತವೆ.

    ಕೊರೊನಾ ವೈರಸ್ ಹೇಗೆ ಬರುತ್ತದೆ?
    ಕೊರೊನಾ ವೈರಸ್ ಸಾಮಾನ್ಯವಾಗಿ ನಾಯಿ, ಬೆಕ್ಕುಗಳು, ಹಾವು, ಬಾವಲಿ ರೀತಿಯ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಸಮುದ್ರದ ಆಹಾರವನ್ನು ಮಾರಾಟ ಮಾಡಲಾಗುವ ಹ್ಯೂನಾನ್ ಸಮುದ್ರ ಆಹಾರ ಮಾರುಕಟ್ಟೆಯಿಂದ ಪ್ರಸ್ತುತ ಈ ಸೋಂಕು ಹರಡುತ್ತಿದೆ ಎಂದು ಚೀನಾದ ಜನರು ನಂಬಿದ್ದಾರೆ. ಹೀಗಾಗಿ ಹೊಸ ವರ್ಷದಿಂದಲೇ ಹ್ಯೂನಾನ್ ಮಾರುಕಟ್ಟೆಯನ್ನು ರದ್ದುಗೊಳಿಸಲಾಗಿದೆ.

    ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವುದೇ?
    ಹೌದು. ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ ಎಂದು ತಜ್ಞ, ವೈದ್ಯರಿಂದ ದೃಢಪಟ್ಟಿದೆ. ಕೆಮ್ಮು, ಸೀನು ಹಾಗೂ ಶೇಕ್ ಹ್ಯಾಂಡ್ ಮಾಡುವುದರಿಂದಲೂ ಈ ಸೋಂಕು ಹರಡುತ್ತದೆ ಎಂದು ವರದಿಯಾಗಿದೆ.

    ದುರಾದೃಷ್ಟಕರ ಸಂಗತಿ ಎಂದರೆ ಕೇವಲ ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಈ ಸೋಂಕು ಹರಡುತ್ತಿದೆ. ಥೈಲ್ಯಾಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲೂ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇತ್ತೀಚಿಗೆ ವುಹಾನ್‍ನಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಈ ಸೋಂಕು ತಗುಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ತುರ್ತು ನಿಗಾ ಘಟಕದಲ್ಲಿ ದಾಖಲಾಗಿರುವುದಾಗಿ ಅಮೆರಿಕ ಖಚಿತಪಡಿಸಿದೆ.

    ಈ ಸೋಂಕನ್ನು ನಿಯಂತ್ರಿಸಬಹುದೇ?
    ಚೀನಾದ ಆಡಳಿತ ಸಂಸ್ಥೆಗಳ ಪ್ರಕಾರ ಜನವರಿ 21ರಂದು 217 ಪ್ರಕರಣಗಳು ವರದಿಯಾಗಿದೆ. ಆದರೆ ಈ ಹಿಂದೆ ಈ ಸೋಂಕು ತಗುಲಿದ ರೋಗಿಗಳ ಸಂಖ್ಯೆ ದುಪ್ಪಟ್ಟಿತ್ತು ಎನ್ನಲಾಗಿದೆ. ಒಟ್ಟಾರೆ 1,394 ಜನರು ವೈದ್ಯಕೀಯ ನಿಗಾದಲ್ಲಿದ್ದು, 765 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಅದರ ನಿಯಂತ್ರಣ ಹಾಗೂ ತಡೆಗಟ್ಟುವಲ್ಲಿ ಚೀನಾ ಗಂಭೀರ ಸ್ಥಿತಿಯಲ್ಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಅನೇಕ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಯಾಣಿಕರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.

    ಕೊರೊನಾ ವೈರಸ್ ಲಕ್ಷಣಗಳೇನು?
    ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ಸೋಂಕು ತಗುಲಿದವರಲ್ಲಿ ಜ್ವರ, ಕೆಮ್ಮು, ಗಂಟಲು ಕೆರತ, ಉಸಿರಾಟದ ತೊಂದರೆ ಮತ್ತಿತರ ಸಮಸ್ಯೆಗಳು ಉಂಟಾಗಲಿವೆ. ಕೊರೊನಾ ಸೋಂಕಿನಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಶೇ. 35ರಷ್ಟು ಜನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

    ಚಿಕಿತ್ಸೆ ಲಭ್ಯವಿದೆಯೇ?
    ಇಲ್ಲ. ಕೊರೊನಾ ತಡೆಗಾಗಿ ಈವರೆಗೂ ಎಲ್ಲಿಯೂ ಚಿಕಿತ್ಸೆ ದೊರೆತ್ತಿಲ್ಲ. ಆದರೆ ಎಂಇಆರ್‌ಎಸ್(ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್) ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಒಂದಷ್ಟು ಸಮಯ ಈ ಸೋಂಕು ಹರಡದಂತೆ ತಡೆಯುವ ನಿರೀಕ್ಷೆಯಿದೆ. ಈ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಉತ್ತಮ ಮುಂಜಾಗ್ರತಾ ಕ್ರಮವೆಂದರೆ ಮೂಗು ಮತ್ತು ಬಾಯನ್ನು ಮಾಸ್ಕ್ ನಿಂದ ಮುಚ್ಚಿಕೊಳ್ಳಬೇಕಾಗುತ್ತದೆ. ಜನ ಹೆಚ್ಚಾಗಿ ಸೇರುವ ಪ್ರದೇಶಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ.

  • ಮೃತಪಟ್ಟ ನಂತ್ರ ಐದು ಜನರಿಗೆ ಜೀವನ ನೀಡಿದ ಯುವಕ

    ಮೃತಪಟ್ಟ ನಂತ್ರ ಐದು ಜನರಿಗೆ ಜೀವನ ನೀಡಿದ ಯುವಕ

    ಬೆಂಗಳೂರು: 21 ವರ್ಷದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಐದು ಜನರಿಗೆ ಜೀವನವನ್ನು ನೀಡಿದ್ದಾನೆ. ಯುವಕನ ಪೋಷಕರು ಆತನ ಮೂತ್ರಪಿಂಡ, ಯಕೃತ್ ಮತ್ತು ಕಾರ್ನಿಯಾವನ್ನು ದಾನ ಮಾಡಿದ್ದಾರೆ.

    ಶ್ರೀ ಸುಜನ್ ಅಂಗಾಂಗ ದಾನ ಮಾಡಿದ ವಿದ್ಯಾರ್ಥಿ. 21 ವರ್ಷದ ಶ್ರೀ ಸುಜನ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಜನವರಿ 17ರಂದು ದೊಡ್ಡಬಳ್ಳಾಪುರದ ಬಳಿ ಅಪಘಾತಕ್ಕೆ ಒಳಗಾಗಿದ್ದ. ತಕ್ಷಣ ಆತನನ್ನು ಕೊಲಂಬಿಯಾ ಏಷ್ಯಾ ದೊಡ್ಡಬಳ್ಳಾಪುರದಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಆತನನ್ನು ಅಲ್ಲಿಂದ ನರಚಿಕಿತ್ಸೆಯ ಆರೈಕೆಗಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹೆಬ್ಬಾಳಕ್ಕೆ ಕರೆತರಲಾಗಿತ್ತು.

    ಅಪಘಾತದಿಂದ ಶ್ರೀ ಸುಜನ್ ಮೆದುಳಿಗೆ ತೀವ್ರ ಆಘಾತಕಾರಿ ಗಾಯವಾಗಿದೆ ಎಂದು ಸಿಟಿ ಸ್ಕ್ಯಾನ್‍ನ ಮೂಲಕ ತಿಳಿದು ಬಂದಿದೆ. ಈ ವಿಷಯ ತಿಳಿದ ನಂತರ ಗಾಯಾಳುವಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮತ್ತು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ ಗಾಯದ ಸ್ವರೂಪ ತೀವ್ರವಾಗಿದ್ದರಿಂದ ಯಾವುದೇ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗಲಿಲ್ಲ, ಮೆದುಳಿನ ಚಟುವಟಿಕೆ ಮತ್ತು ರೋಗಿಯ ಜೀವವನ್ನು ಕಾಪಾಡಲು ವೈದ್ಯರ ಗರಿಷ್ಠ ಪ್ರಯತ್ನ ಮುಂದುವರಿಸಿದರು. ಆತನನ್ನು ಸೂಕ್ಷ್ಮ ಘಟಕದಲ್ಲಿ ಇರಿಸಿ ಔಷಧಿ ನೀಡುವಂತೆ ಮಾಡಲಾಯಿತು. ಇದೆಲ್ಲದರ ಹೊರತಾಗಿಯೂ ಆತನ ಮೆದುಳಿನ ಗಾಯದ ಸ್ಥಿತಿ ಹದಗೆಟ್ಟಿತ್ತು ಮತ್ತು ಜನವರಿ 21ರಂದು ಆಳವಾದ ಕೋಮಾಗೆ ಜಾರಿದ್ದ.

    ವಿವರವಾದ ಕ್ಲಿನಿಕಲ್ ಮತ್ತು ವಿಕಿರಣ ಪರೀಕ್ಷೆಯಿಂದ ಮೆದುಳಿಗಾದ ಗಾಯದ ಬಗ್ಗೆ ಯಾವುದೇ ಚೇತರಿಕೆಯ ಅಂಶವನ್ನು ತೋರಿಸಿರಲಿಲ್ಲ. ಇದರ ತರುವಾಯ ಅವರ ಮೆದುಳು 22ರಂದು ನಿಷ್ಕ್ರಿಯಗೊಂಡಿದೆ ಎಂದು ಘೋಷೊಸಲಾಯಿತು. ರೋಗಿಯ ತಂದೆ, ತಾಯಿ, ಸಹೋದರ ಮತ್ತು ಚಿಕ್ಕಪ್ಪ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಂಗಗಳ ದಾನವನ್ನು ಮಾಡಲು ಮುಂದಾದರು. ಅಂಗಾಂಗ ದಾನ ಮತ್ತು ಇತರರಿಗೆ ಒಳ್ಳೆಯದನ್ನು ಮಾಡುವ ಬಗ್ಗೆ ಇದ್ದ ಅವರ ಮನವಿ ಮತ್ತು ತಿಳುವಳಿಕೆಯನ್ನು ಆಸ್ಪತ್ರೆ ಗೌರವಿಸಿತು.

    ಅಂಗಾಗಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯೂ 22ರಂದು ಬೆಳಗ್ಗೆ ಕರ್ನಾಟಕದ ಕಸಿ ಪ್ರಧಿಕಾರ ಜೀವನ ಸಾರ್ಥಕತೆಯ ಮೂಲಕ ಪ್ರಾರಂಭವಾಯಿತು. ಮರುಪಡೆಯಲಾದ ಅಂಗಂಗಾಗಳಲ್ಲಿ ಒಂದು ಮೂತ್ರಪಿಂಡವನ್ನು ಕೊಲಂಬಿಯಾ ಏಷ್ಯಾ ಹೆಬ್ಬಾಳ ಆಸ್ಪತ್ರೆಯಲ್ಲಿದ್ದ ರೋಗಿಗೆ ನೀಡಲಾಯಿತು. ಇತರ ಮೂತ್ರಪಿಂಡ ಮತ್ತು ಯಕೃತ್ತನ್ನು ಸಕ್ರಾ ವಲ್ರ್ಡ್ ಆಸ್ಪತ್ರೆಯಲ್ಲಿ ಸೂಕ್ತರಿಗೆ ನೀಡಲು ಸ್ಥಳಾಂತರಿಸಲಾಯಿತು. ಎರಡು ಕಾರ್ನಿಯಾಗಳನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

  • ಬ್ರೈನ್ ಟ್ಯೂಮರ್‌ನಿಂದ ಕುಸಿದು ಬಿದ್ದ ಯುವತಿ – ದರ್ಶನ್ ಹುಟ್ಟುಹಬ್ಬಕ್ಕೆ ಇಟ್ಟಿದ್ದ ಹಣದಲ್ಲಿ ಅಭಿಮಾನಿಗಳಿಂದ ನೆರವು

    ಬ್ರೈನ್ ಟ್ಯೂಮರ್‌ನಿಂದ ಕುಸಿದು ಬಿದ್ದ ಯುವತಿ – ದರ್ಶನ್ ಹುಟ್ಟುಹಬ್ಬಕ್ಕೆ ಇಟ್ಟಿದ್ದ ಹಣದಲ್ಲಿ ಅಭಿಮಾನಿಗಳಿಂದ ನೆರವು

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಬ್ರೈನ್ ಟ್ಯೂಮರ್‌ನಿಂದ ಕುಸಿದು ಬಿದ್ದ ಯುವತಿಯ ಚಿಕಿತ್ಸೆಗೆ ಮುಂದಾಗಿದ್ದಾರೆ.

    ದೇವನಹಳ್ಳಿಯ ವಿಜಯಪುರ ನಿವಾಸಿ ಎಸ್. ಚೈತನ್ಯಳ ಜೀವ ಉಳಿಸಲು ದರ್ಶನ್ ಅಭಿಮಾನಿಗಳು ನೆರವಾಗಿದ್ದಾರೆ. ಬಡಕುಟುಂಬದಲ್ಲಿ ಹುಟ್ಟಿರುವ ಚೈತನ್ಯ ಮೊದಲನೇ ವರ್ಷದ ಬಿ.ಕಾಂ ಓದುತ್ತಿದ್ದಾಳೆ. ಚೈತನ್ಯ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದು, ಜನವರಿ 3ರಂದು ಕುಸಿದು ಬಿದ್ದಿದ್ದಳು. ಇದನ್ನೂ ಓದಿ: ಅನಾಥಾಶ್ರಮಗಳಿಗೆ ಅಡುಗೆ ಸಾಮಗ್ರಿ ನೀಡಿ ದರ್ಶನ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

    ಚೈತನ್ಯ ತಂದೆ ಸತ್ಯ ನಾರಾಯಣ ವಾಟರ್ ಟ್ಯಾಂಕರ್ ಬಿಝಿನೆಸ್ ಮಾಡುತ್ತಿದ್ದು, ತಮ್ಮ ಮಗಳಿಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸತ್ಯ ನಾರಾಯಣ ಮೊದಲಿಗೆ 6 ಲಕ್ಷ ರೂ. ಕಟ್ಟಿ ಮಗಳಿಗೆ ಆಪರೇಷನ್ ಮಾಡಿಸಿದ್ದಾರೆ. ಆದರೆ ಚೈತನ್ಯ ಕೋಮದಲ್ಲಿದ್ದಾಳೆ. ಇದನ್ನೂ ಓದಿ: ಸಾವು-ಬದುಕಿನ ನಡುವೆ ಹೋರಾಡ್ತಿರುವ ಅಭಿಮಾನಿಯ ಆಸೆ ಈಡೇರಿಸಿದ ಡಿ-ಬಾಸ್

    ಹೆಚ್ಚಿನ ಚಿಕಿತ್ಸೆಗೆ 25 ಲಕ್ಷ ಹಣ ಬೇಕಾಗುತ್ತೆ ಎಂದು ವೈದ್ಯರು ಸತ್ಯನಾರಾಯಣ ಅವರಿಗೆ ತಿಳಿಸಿದರು. ಚಿಕಿತ್ಸೆಗೆ ಹಣವಿಲ್ಲದೆ ಕೈ ಚೆಲ್ಲಿ ಕುಳಿತಾಗ ದರ್ಶನ್ ಅಭಿಮಾನಿಗಳು ನೆರವಾಗಲು ಮುಂದಾಗಿದ್ದಾರೆ.

    ತಮ್ಮ ನೆಚ್ಚಿನ ನಟ ದರ್ಶನ್ ಅವರ ಹುಟ್ಟುಹಬ್ಬಕ್ಕಾಗಿ ಇಟ್ಟಿರುವ ಹಣದಲ್ಲಿ ಅರ್ಧ ಭಾಗ ಚೈತನ್ಯ ಚಿಕಿತ್ಸೆಗೆ ನೀಡಲು ದೇವನಹಳ್ಳಿ ಅಭಿಮಾನಿಗಳು ಮುಂದಾಗಿದ್ದಾರೆ. ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚೈತನ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

  • ಮೈಸೂರಿಗೆ ಆಗಮಿಸಿ ನೇರವಾಗಿ ಜೈಲಿಗೆ ತೆರಳಿದ ತನ್ವೀರ್ ಸೇಠ್!

    ಮೈಸೂರಿಗೆ ಆಗಮಿಸಿ ನೇರವಾಗಿ ಜೈಲಿಗೆ ತೆರಳಿದ ತನ್ವೀರ್ ಸೇಠ್!

    ಮೈಸೂರು: ದುಷ್ಕರ್ಮಿ ನಡೆಸಿದ ಕೊಲೆ ಯತ್ನದಿಂದ ಜೀವನ್ಮರಣ ಹೋರಾಟದಲ್ಲಿದ್ದ ಶಾಸಕ ತನ್ವೀರ್ ಸೇಠ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇಂದು ಮೈಸೂರಿಗೆ ಹಿಂದುರಿಗಿದ್ದಾರೆ.

    ಮೈಸೂರಿಗೆ ಆಗಮಿಸಿದ ತನ್ವೀರ್ ಸೇಠ್, ನೇರವಾಗಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಆಗಮಿಸಿದರು. ತಮ್ಮ ಮೇಲೆ ಕೊಲೆ ಯತ್ನ ನಡೆಸಿದ ಆರೋಪಿ ಗುರುತು ಪತ್ತೆಗೆ ಶಾಸಕರು ಕಾರಾಗೃಹಕ್ಕೆ ಬಂದರು. ಈ ವೇಳೆ ತಮ್ಮ ಶಾಸಕರನ್ನು ಮಾತನಾಡಿಸಲು ಬೆಂಬಲಿಗರು ಮುಗಿಬಿದ್ದರು. ಶಾಸಕರ ಕಂಡ ಕೆಲ ಬೆಂಬಲಿಗರು ಕಣ್ಣಿರಿಟ್ಟರು.

    ಪೊಲೀಸ್ ಬಿಗಿ ಭದ್ರತೆಯಲ್ಲಿ ತನ್ವೀರ್ ಸೇಠ್ ಜೈಲಿಗೆ ಬಂದರು. ಕಳೆದ ವರ್ಷದ ನವೆಂಬರ್ 18 ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ನೂರಾರು ಜನರ ಮುಂದೆಯೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು. ಈ ವೇಳೆ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದರು.

    ಆಗ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್‍ರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಲಾಗಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿ ನಂತರ ದುಬೈನಲ್ಲೇ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಈಗ ವಿಶ್ರಾಂತಿ ನಂತರ ಮೈಸೂರಿಗೆ ಮರಳಿದ್ದಾರೆ.

  • ನಿತ್ಯೋತ್ಸವ ಕವಿ ಪುತ್ರನ ಚಿಕಿತ್ಸೆಗೆ 10 ಲಕ್ಷ ರೂ. ನೀಡಿದ ಬಿಬಿಎಂಪಿ

    ನಿತ್ಯೋತ್ಸವ ಕವಿ ಪುತ್ರನ ಚಿಕಿತ್ಸೆಗೆ 10 ಲಕ್ಷ ರೂ. ನೀಡಿದ ಬಿಬಿಎಂಪಿ

    ಬೆಂಗಳೂರು: ನಿತ್ಯೋತ್ಸವ ಕವಿ ಪ್ರೊ. ನಿಸ್ಸಾರ್ ಅಹಮದ್ ಅವರ ಪುತ್ರನ ಚಿಕಿತ್ಸೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ 10 ಲಕ್ಷ ರೂ. ಚೆಕ್ ನೀಡಲಾಗಿದೆ.

    ಪ್ರೊ. ನಿಸ್ಸಾರ್ ಅಹಮದ್ ಅವರ ಪುತ್ರ ನವೀದ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ 15 ದಿನಗಳಿಂದ ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೀದ್ ಅವರ ಅನಾರೋಗ್ಯದ ಬಗ್ಗೆ ತಿಳಿದು ಬಿಬಿಎಂಪಿ ಅವರ ಚಿಕಿತ್ಸೆಗಾಗಿ 10 ಲಕ್ಷ ರೂ. ಚೆಕ್ ನೀಡಿದೆ. ಜೊತೆಗೆ ಶೀಘ್ರವೇ ಇನ್ನೂ 10 ಲಕ್ಷ ರೂ. ಬಿಬಿಎಂಪಿ ವತಿಯಿಂದ ನವೀದ್ ಚಿಕಿತ್ಸೆಗೆ ನೀಡಲಾಗುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

    ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಪಾಲಿಕೆ ವತಿಯಿಂದ 10 ಲಕ್ಷ ರೂ. ಚೆಕ್ ಅನ್ನು ಅಪೋಲೋ ಆಸ್ಪತ್ರೆಯಲ್ಲಿಯೇ ನವೀದ್ ಅವರಿಗೆ ವಿತರಣೆ ಮಾಡಿದರು. ಈ ವೇಳೆ ಉಪಮೇಯರ್ ರಾಮ ಮೋಹನ ರಾಜು, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಉಪಸ್ಥಿತರಿದ್ದರು.

  • ಚಾಲಕ ಹೇಳಿದ್ರೂ ಕೇಳದ ಪ್ರಯಾಣಿಕರು – ಬಸ್ ನಿಲ್ಲುತ್ತಿದ್ದಂತೆ ಲಾರಿ ಡಿಕ್ಕಿ

    ಚಾಲಕ ಹೇಳಿದ್ರೂ ಕೇಳದ ಪ್ರಯಾಣಿಕರು – ಬಸ್ ನಿಲ್ಲುತ್ತಿದ್ದಂತೆ ಲಾರಿ ಡಿಕ್ಕಿ

    -ಓರ್ವ ಸಾವು, 10 ಮಂದಿ ಗಂಭೀರ

    ತುಮಕೂರು: ರಸ್ತೆ ಬದಿ ನಿಂತಿದ್ದ ಖಾಸಗಿ ಬಸ್ಸಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಹತ್ತು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆ ಶಿರಾ ತಾಲೂಕಿನ ಮಾರಂಗೆರೆ ಸೇತುವೆ ಬಳಿ ನಡೆದಿದೆ.

    ಮಲ್ಲಪ್ಪ ಸಜ್ಜನ (40) ಮೃತ ದುರ್ದೈವಿ. ಶುಕ್ರವಾರ ಮಧ್ಯರಾತ್ರಿ 1.30ರಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಬಿಜಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಇದಾಗಿದ್ದು, ಪ್ರಯಾಣಿಕರು ದಾರಿ ಮಧ್ಯೆ ಮೂತ್ರ ವಿಸರ್ಜನೆ ಮಾಡಲು ಬಸ್ಸನ್ನು ನಿಲ್ಲಿಸುವಂತೆ ಚಾಲಕನಿಗೆ ದುಂಬಾಲು ಬಿದ್ದಿದ್ದರು.

    ಆಗ ಚಾಲಕ, ಇದು ಅಪಘಾತ ವಲಯ, ಮುಂದೆ ಬಸ್ ನಿಲ್ಲಿಸುವುದಾಗಿ ಹೇಳಿದ್ದಾನೆ. ಆದರೆ ಪ್ರಯಾಣಿಕರು ಹಠ ಮಾಡಿದ್ದರಿಂದ ಮಾರಂಗೆರೆ ಸೇತುವೆ ಬಳಿ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ.

    ಪರಿಣಾಮ ಮಲ್ಲಪ್ಪ ಸಜ್ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಖ್ಯೋಪಾಧ್ಯಾಯರ ಎಡವಟ್ಟಿನಿಂದ ಹಾಸಿಗೆ ಹಿಡಿದ ಪ್ರತಿಭಾವಂತ ವಿದ್ಯಾರ್ಥಿನಿಯರು

    ಮುಖ್ಯೋಪಾಧ್ಯಾಯರ ಎಡವಟ್ಟಿನಿಂದ ಹಾಸಿಗೆ ಹಿಡಿದ ಪ್ರತಿಭಾವಂತ ವಿದ್ಯಾರ್ಥಿನಿಯರು

    – ಅಪಘಾತವಾಗಿ ನಾಲ್ಕು ತಿಂಗಳಾದರೂ ಗುಣಮುಖರಾಗುತ್ತಿಲ್ಲ
    – ಆಸ್ಪತ್ರೆ ಖರ್ಚಿಗೂ ಹಣವಿಲ್ಲದೆ ಬಡ ವಿದ್ಯಾರ್ಥಿನಿಯರ ನರಳಾಟ

    ರಾಯಚೂರು: ಸಿರವಾರದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲಾ ಮುಖ್ಯೋಪಾಧ್ಯಾಯರ ಎಡವಟ್ಟಿನಿಂದ ಅಪಘಾತಕ್ಕೊಳಗಾದ ವಿದ್ಯಾರ್ಥಿನಿಯರ ಬದುಕು ನಾಲ್ಕು ತಿಂಗಳು ಕಳೆದರೂ ಸರಿಹೋಗಿಲ್ಲ.

    ಆಗಸ್ಟ್ 29ರಂದು ವಸತಿ ಶಾಲೆ ವಿದ್ಯಾರ್ಥಿನಿಯರು ವಲಯ ಮಟ್ಟದ ಶಾಲಾ ಕ್ರೀಡಾಕೂಟಕ್ಕೆ ಕುರುಕುಂದಾ ಗ್ರಾಮಕ್ಕೆ ತೆರಳಿದ್ದರು. ಮರಳಿ ಬರುವಾಗ 35 ವಿದ್ಯಾರ್ಥಿನಿಯರಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿತ್ತು. 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯಗಳಾಗಿ, ಮೂವರ ಸ್ಥಿತಿ ಗಂಭೀರವಾಗಿತ್ತು. ಚಾಮುಂಡಿ, ದೀಪಾ ಹಾಗೂ ಸುನಿತಾ ವಿದ್ಯಾರ್ಥಿನಿಯರು ಇನ್ನೂ ಚೇತರಿಸಿಕೊಂಡಿಲ್ಲ. ಚಾಮುಂಡಿ ತನ್ನ ಒಂದು ಕೈಯನ್ನೇ ಅಪಘಾತದಲ್ಲಿ ಕಳೆದುಕೊಂಡಿದ್ದಾಳೆ.

    ಬಡ ಕುಟುಂಬದ ಈ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ಇತ್ತ ಶಾಲೆಗೂ ಹೋಗದೇ ಗುಣಮುಖರೂ ಆಗದೆ ವಿದ್ಯಾರ್ಥಿನಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಮೊದಲಿಗೆ ಚಿಕಿತ್ಸೆ ವೆಚ್ಚ ಭರಿಸಿದೆಯಾದರೂ ಈಗ ಈ ವಿದ್ಯಾರ್ಥಿನಿಯರನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಹಾಗೂ ಅವರ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇವರ ನೋವಿಗೆ ಸ್ಪಂದಿಸಬೇಕಿರುವ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಈಗ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿವೆ.

    ಕ್ರೀಡಾಕೂಟದಲ್ಲಿ ಬಹುಮಾನಗಳನ್ನ ಗೆದ್ದು ಖಷಿಯಾಗಿ ಬರುತ್ತಿದ್ದ ವಿದ್ಯಾರ್ಥಿಗಳನ್ನು ಕುರಿಗಳ ಹಾಗೇ ಟಾಟಾ ಏಸ್ ವಾಹನದಲ್ಲಿ ತುಂಬಿಕೊಂಡು ಬರುವಾಗ ಅಪಘಾತ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಹೊಡೆದಿತ್ತು. ಈ ಅಪಘಾತಕ್ಕೆ ಶಾಲೆಯ ಮುಖ್ಯೋಪಾಧ್ಯಾಯರೇ ಕಾರಣ, ಅವರು ಸರಿಯಾಗಿ ಮಕ್ಕಳಿಗೆ ಕ್ರೀಡಾಕೂಟದಿಂದ ಬರಲು ವಾಹನ ವ್ಯವಸ್ಥೆ ಮಾಡಬೇಕಿತ್ತು. ಅದನ್ನು ಬಿಟ್ಟು ಚಿಕ್ಕ ಟಾಟಾ ಏಸ್ ವಾಹನದಲ್ಲಿ ಅವರನ್ನು ಕರೆಕೊಂಡು ಬರಬಾರದಿತ್ತು. ಈಗ ಮುಖ್ಯೋಪಾಧ್ಯಾಯರ ಎಡವಟ್ಟಿಗೆ ವಿದ್ಯಾರ್ಥಿನಿಯರ ಜೀವನ ಕಷ್ಟದಲ್ಲಿದೆ ಎಂದು ವಿದ್ಯಾರ್ಥಿನಿಯರ ಪೋಷಕರು ಅಳಲು ತೋಡಿಕೊಂಡಿದ್ದಾರೆ.

    ಈ ಹಿಂದೆ ವಾಲಿಬಾಲ್ ಆಟದಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರತಿಭೆ ತೋರಿದ್ದ ಚಾಮುಂಡಿ ತನ್ನ ಕೈಯನ್ನೇ ಕಳೆದುಕೊಂಡಿದ್ದಾಳೆ. ಇನ್ನಿಬ್ಬರು ವಿದ್ಯಾರ್ಥಿನಿಯರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರಕದೆ ಗಾಯವಾಗಿದ್ದ ಜಾಗದಲ್ಲಿ ಕೀವು ತುಂಬಿಕೊಂಡಿತ್ತು. ಹೀಗಾಗಿ ಘಟನೆ ನಡೆದು ನಾಲ್ಕು ತಿಂಗಳಾದರೂ ವಿದ್ಯಾರ್ಥಿನಿಯರು ಚೇತರಿಸಿಕೊಂಡಿಲ್ಲ.

    ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ. ಆದರೆ ನಿತ್ಯ ನರಕಯಾತನೆ ಅನುಭವಿಸುತ್ತಿರುವ ವಿದ್ಯಾರ್ಥಿನಿಯರ ಮುಂದಿನ ಚಿಕಿತ್ಸೆ ಹಾಗೂ ಅವರ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕಿದೆ.