Tag: treatment

  • ರಾತ್ರಿಯೊಳಗೆ ಕೊರೊನಾ ಪ್ರಕರಣಗಳು ಎಷ್ಟಾಗುತ್ತೋ ಗೊತ್ತಿಲ್ಲ: ಸುಧಾಕರ್

    ರಾತ್ರಿಯೊಳಗೆ ಕೊರೊನಾ ಪ್ರಕರಣಗಳು ಎಷ್ಟಾಗುತ್ತೋ ಗೊತ್ತಿಲ್ಲ: ಸುಧಾಕರ್

    – ರಾಜ್ಯದಲ್ಲಿ 51ಕ್ಕೇರಿದ ಕೊರೊನಾ ಪೀಡಿತರ ಸಂಖ್ಯೆ

    ಬೆಂಗಳೂರು: ಇಂದು ಹತ್ತು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇಂದಿಗೆ ಒಟ್ಟು ಕೊರೊನಾ ಪಾಸಿಟಿವ್ ಸಂಖ್ಯೆ 51 ಏರಿಕೆಯಾಗಿದೆ. ಮಂಗಳವಾರ 41 ಇತ್ತು, ರಾತ್ರಿ ಒಳಗೆ ಎಷ್ಟಾಗತ್ತೊ ಗೊತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಚಿಕಿತ್ಸೆ ಮತ್ತು ಪರೀಕ್ಷೆಗೆ ಎಲ್ಲಿ ವ್ಯವಸ್ಥೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿ ಹೇಗೆ ಕೆಲಸ ಮಾಡಬೇಕು? ಅವರಿಗೆ ವಿಶ್ರಾಂತಿ ಕೊಡೋದು ಹೇಗೆ? ರಾಜ್ಯವ್ಯಾಪಿ ಹೇಗೆ ಮುಂಜಾಗ್ರತೆ ಕೈಗೊಳ್ಳಬೇಕು? ಹೊಸ ಹೊಸ ಕಟ್ಟಡ ಹಾಗೂ ಯಾವ ಯಾವ ಹೋಟೆಲ್‍ಗಳನ್ನು ಚಿಕಿತ್ಸೆಗಾಗಿ ಪಡೆಯಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

    ಚಿಕ್ಕಬಳ್ಳಾಪುರದಲ್ಲಿ ಸಾವಾಗಿರುವ ಮಹಿಳೆ ರಿಸಲ್ಟ್ ಬರಬೇಕಿದೆ. ಮೊದಲ ವರದಿಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಎರಡನೇ ವರದಿ ಇನ್ನೂ ಬರಬೇಕಿದೆ. ಒಂದು ವೇಳೆ ಕೊರೊನಾದಿಂದ ಸಾವನ್ನಪ್ಪಿದ್ದರೆ ಅಗತ್ಯ ಕ್ರಮವಹಿಸಿ ಅಂತ್ಯಸಂಸ್ಕಾರ ಮಾಡುತ್ತೇವೆ. ಅವರನ್ನು ಸುಟ್ಟು ಹಾಕಿದರೆ ಉತ್ತಮ, ಆದರೆ ಕೆಲವು ಸಮುದಾಯದಲ್ಲಿ ಸಂಪ್ರದಾಯ ಇರುತ್ತವೆ. ಹೀಗಾಗಿ ಎಂಟು ಅಡಿ ಆಳದಲ್ಲಿ ಹೂಳಬೇಕು ಎಂದು ಮಾಹಿತಿ ನೀಡಿದರು.

    21 ದಿನಗಳು ಅನೇಕರಿಗೆ ತೊಂದರೆಯಾಗುತ್ತೆ. ಈ ತೊಂದರೆಯನ್ನು ನಾವು ನಮ್ಮ ರಕ್ಷಣೆಗೋಸ್ಕರ ತಡೆದುಕೊಳ್ಳಬೇಕು. ಕೆಲವರು ಬೇರೆ ದೇಶದಿಂದ ವೈರಸ್ ತೆಗೆದುಕೊಂಡ ನಮ್ಮಲ್ಲಿಗೆ ಬಂದಿದ್ದಾರೆ. ಇದರಿಂದ ನಮ್ಮ ಜನರನ್ನು ರಕ್ಷಣೆ ಮಾಡಲು ಈ ಬಂದ್ ಅನಿವಾರ್ಯವಾಗಿದೆ. ಆದ್ದರಿಂದ ಜನರು ಇದಕ್ಕೆ ಸಹಕಾರ ಕೊಡಬೇಕು. ಜನರಿಗೆ ಅಗತ್ಯ ದಿನಸಿ ಖರೀದಿಗೆ ಸಮಯ ನಿಗದಿ ಬಗ್ಗೆ ಸಿಎಸ್ ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಸುಧಾಕರ್ ಹೇಳಿದ್ದಾರೆ.

    ಕ್ವಾರಂಟೈನ್‍ಗೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಸಿದ್ಧತೆ ಮಾಡಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಪಾಸಿಟಿವ್ ಪ್ರಕರಣಗಳು ಬಂದರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಹೋಟೆಲ್ ಹಾಗೂ ಹೊಸ ಕಟ್ಟಡಗಳನ್ನು ತೆಗೆದುಕೊಂಡು ಚಿಕಿತ್ಸೆಗೆ ಸಿದ್ಧತೆಗೊಳಿಸಬೇಕಾಗಿದೆ. ಚಿಕಿತ್ಸೆ ಅಥವಾ ಪರೀಕ್ಷೆಗೆ ಬಂದವರನ್ನು ವಿಕ್ಟೋರಿಯಾದಲ್ಲಿ ಇಡುಬೇಕಾ? ಎಲ್ಲಿ ಇಡೋದು ಎಂದು ಸಭೆ ಮಾಡಿದ್ದೇವೆ. ನಾವು ಸಿಬ್ಬಂದಿಯ ಬಗ್ಗೆಯೂ ಕೇರ್ ಮಾಡಬೇಕಿದೆ ಎಂದರು.

    ಕೊರೊನಾ ವಿಚಾರವಾಗಿ ಮನೆಯಲ್ಲೇ ಇರಿ ಎಂದು ಹೇಳಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ. ಆದರೆ ಆ ತೊಂದರೆ ನಮ್ಮ ಒಳ್ಳೆಯದಕ್ಕೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನೆಮಗೆಲ್ಲರಿಗೂ ತೊಂದರೆ ಆಗದ ರೀತಿಯಲ್ಲಿ ನಾವು ಮುಂದೆ ಕೆಲಸ ಮಾಡಬೇಕಿದೆ. ನಿಮಗೆಲ್ಲರಿಗೂ ಬೇಕಾದ ಸಮಯದಲ್ಲಿ ಊಟ, ಔಷಧಿ ಸಿಗುವಂತ ರೀತಿಯಲ್ಲಿ ನಾವು ಕ್ರಮಕೈಗೊಳ್ಳಬೇಕು. ನಮ್ಮಿಂದ ಮತ್ತು ಸರ್ಕಾರದಿಂದ ತೊಂದರೆಯಾಗಿದ್ದರೆ ನಾನು ಕ್ಷೆಮೆ ಕೇಳುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.

    ನಾನು ಇಲ್ಲಿ ಮಂತ್ರಿ ಅಥವಾ ಶಾಸಕ ಎಂದು ಕೆಲಸ ಮಾಡುತ್ತಿಲ್ಲ. ನಾನೊಬ್ಬ ವೈದ್ಯನಾಗಿ ಈ ರಾಜ್ಯದ ಪೌರನಾಗಿ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ನಾನು ಕೊರೊನಾ ವೈರಸ್ ಅನ್ನು ತಡೆಗಟ್ಟಲು ನನ್ನ ಕೈಮೀರಿ ಕೆಲಸ ಮಾಡುತ್ತೇನೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಒಬ್ಬರಿಗೆ ವಹಿಸಬೇಕು ಎಂದು ನಾನು ಸಿಎಂ ಯಡಿಯೂರಪ್ಪ ಅವರಿಗೇ ಹೇಳಿದ್ದೇನೆ. ಇದರ ಜವಾಬ್ದಾರಿ ಯಾರೇ ತೆಗೆದುಕೊಂಡರು ನಾನು ಕೆಲಸ ಮಾಡುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.

  • ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಒಂದೇ ದಿನ 651 ಸಾವು

    ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಒಂದೇ ದಿನ 651 ಸಾವು

    – ಒಂದೇ ದಿನದಲ್ಲಿ 5,560 ಹೊಸ ಪ್ರಕರಣ ಪತ್ತೆ

    ರೋಮ್: ಜಗತ್ತಿನಲ್ಲಿ ಮಹಾಮಾರಿ ಕೊರೊನಾ ತನ್ನ ಪಟ್ಟನ್ನು ಬಿಗಿಗೊಳಿಸುತ್ತಿದೆ. ಒಟ್ಟು 188 ದೇಶಗಳಿಗೆ ವಿಸ್ತರಿಸಿರುವ ಕೊರೊನಾ, 13 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. 3 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ. ಇದೀಗ ಇಟಲಿಯಲ್ಲಿ ಒಂದೇ ದಿನ 651 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಇಟಲಿಯೊಂದರಲ್ಲೇ ನಿನ್ನೆ ಒಂದೇ ದಿನ 800ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿ ಆಗಿದ್ದರು. ಇಂದು 651 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ಅಲ್ಲದೇ ಇಂದು 5560 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.

    ಇದೀಗ ಇಟಲಿಯೊಂದರಲ್ಲೇ ಮೃತರ ಸಂಖ್ಯೆ 5,500ಕ್ಕೆ ಏರಿಕೆ ಆಗಿದೆ. ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 59,138 ಮಂದಿ ತುತ್ತಾಗಿದ್ದು, ಅವರಲ್ಲಿ 6,072 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 42,681 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.

    ಇರಾನ್‍ನಲ್ಲಿ 1556, ಸ್ಪೇನ್‍ನಲ್ಲಿ 1381, ಫ್ರಾನ್ಸ್‌ನಲ್ಲಿ 562, ಬ್ರಿಟನ್‍ನಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ದೇಶಗಳನ್ನು ನಿರ್ಬಂಧದಲ್ಲಿ ಇಟ್ಟಿದೆ. ಜನರನ್ನು ಮನೆಗೆ ಸೀಮಿತ ಮಾಡಿದೆ. ಆಫ್ರಿಕಾ ಖಂಡಕ್ಕೂ ಕೊರೊನಾ ವಿಸ್ತರಿಸುತ್ತಿದೆ. ಆಫ್ರಿಕಾದ 41 ದೇಶಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.

    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಮರಣ ಮೃದಂಗ ಭಾರಿಸುತ್ತಿತ್ತು. ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯ ಸತತ ಪರಿಶ್ರಮ, ಸರ್ಕಾರದ ಕ್ರಮಗಳಿಂದ ಚೀನಾದಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಇಟಲಿಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದ್ದು, ಶನಿವಾರ ಒಂದೇ ದಿನಕ್ಕೆ 793 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

  • ಉಡುಪಿಯಲ್ಲಿ 4 ಹೊಸ ಶಂಕಿತ ಕೊರೊನಾ ಕೇಸ್ – ನಾಳೆ 12 ಜನರ ವೈದ್ಯಕೀಯ ವರದಿ ನಿರೀಕ್ಷೆ

    ಉಡುಪಿಯಲ್ಲಿ 4 ಹೊಸ ಶಂಕಿತ ಕೊರೊನಾ ಕೇಸ್ – ನಾಳೆ 12 ಜನರ ವೈದ್ಯಕೀಯ ವರದಿ ನಿರೀಕ್ಷೆ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತೆ ಇವತ್ತು ನಾಲ್ಕು ಹೊಸ ಶಂಕಿತ ಪ್ರಕರಣಗಳು ದಾಖಲಾಗಿದೆ. ಮಣಿಪಾಲ ಕೆಎಂಸಿಗೆ ಇಬ್ಬರು ಕೊರೊನಾ ಲಕ್ಷಣವಿರುವ ರೋಗಿಗಳು ದಾಖಲಾಗಿದ್ದಾರೆ.

    ಉಡುಪಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಒಬ್ಬೊಬ್ಬ ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ದಾಖಲಾದ ನಾಲ್ವರಲ್ಲಿ ಶೀತ, ಕೆಮ್ಮು, ಕಫದ ಲಕ್ಷಣಗಳು ಕಂಡುಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ಕೊಟ್ಟಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಪ್ರಯೋಗಾಲಯದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ನಾಲ್ವರ ಗಂಟಲ ಸ್ರಾವವನ್ನು ಹಾಸನಕ್ಕೆ ಕಳುಹಿಸಲಾಗಿದೆ. ನಾಲ್ವರು ಬಹರೇನ್ ಸೌದಿ ಮತ್ತು ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಅವರಲ್ಲಿ ಕೊರೊನಾ ಲಕ್ಷಣಗಳಿದ್ದು, ಸ್ವಯಂಪ್ರೇರಿತವಾಗಿ ಅವರೇ ಆಸ್ಪತ್ರೆಗಳನ್ನು ಸಂಪರ್ಕ ಮಾಡಿದ್ದಾರೆ.

    ಉಡುಪಿ ಜಿಲ್ಲೆಗೆ ಫೆಬ್ರವರಿ 29 ರಿಂದ ಈವರೆಗೆ 364 ಜನ ವಿದೇಶದಿಂದ ಬಂದಿದ್ದರು. ಎಲ್ಲರ ಮೇಲೆ ಈ ವಾರದಿಂದ ನಿಗಾ ವಹಿಸಲಾಗಿದೆ. ವಿದೇಶದಿಂದ ವಾಪಸ್ಸಾದವರು ಆರೋಗ್ಯ ನಿರ್ಲಕ್ಷ್ಯ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ದೆಹಲಿಯ ಸಿಎಎ ಪ್ರತಿಭಟನೆ ಆಯೋಜಕರ ಸೋದರಿಗೆ ಕೊರೊನಾ

    ದೆಹಲಿಯ ಸಿಎಎ ಪ್ರತಿಭಟನೆ ಆಯೋಜಕರ ಸೋದರಿಗೆ ಕೊರೊನಾ

    – ತಂಗಿ ಭೇಟಿ ಮಾಡಿ ಪ್ರತಿಭಟನಾ ಸ್ಥಳಕ್ಕೆ 2 ಬಾರಿ ಭೇಟಿ

    ನವದೆಹಲಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಸಿಎಎ ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರು ತಮ್ಮ ಸಹೋದರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ನಂತರ ತಾವೂ ಕೂಡ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ.

    ಆಯೋಜಕರ ಸೋದರಿ ಮಾರ್ಚ್ 11 ರಂದು ಸೌದಿ ಅರೇಬಿಯಾದಿಂದ ವಾಪಸ್ ಬಂದಿದ್ದಾರೆ. ನಂತರ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಆಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಆಕೆ ಉಮ್ರಾ ಯಾತ್ರೆ ಸಂಬಂಧ ಸೌದಿ ಅರೇಬಿಯಾ ದೇಶಕ್ಕೆ ಭೇಟಿ ನೀಡಿದ್ದರು.

    ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ಸೌದಿ ಅರೇಬಿಯಾ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿದೆ. ಆದರೆ ಪ್ರವೇಶ ನಿಷೇಧ ಮಾಡುವ ಮೊದಲೇ ಅವರು ಸೌದಿ ಅರೇಬಿಯಾಕ್ಕೆ ಹೋಗಿದ್ದರು.

    ನನ್ನ ಸಹೋದರಿ ಮರಳಿದ ಎರಡು ದಿನಗಳ ನಂತರ ಅಂದರೆ ಮಾರ್ಚ್ 13 ರಂದು ಭೇಟಿ ಮಾಡಿದ್ದೆ. ಅಲ್ಲಿಂದ ಒಂದೆರಡು ಬಾರಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ಆ ಸಮಯದಲ್ಲಿ ನನಗೆ ರೋಗದ ಯಾವುದೇ ಲಕ್ಷಣಗಳನ್ನು ಕಂಡು ಬಂದಿಲ್ಲ. ಆದ್ದರಿಂದ ನಾನು ಎಂದಿನಂತೆ ಪ್ರತಿಭಟನೆಗೆ ಹೋಗಿದ್ದೆ ಎಂದು 35 ವರ್ಷದ ಆಯೋಜಕ ತಿಳಿಸಿದ್ದಾರೆ.

    ನಾನು ಭೇಟಿಯಾದ ಎರಡು ದಿನಗಳ ನಂತರ ಸಹೋದರಿ ಕೊರೊನಾ ಪರೀಕ್ಷೆ ಮಾಡಿಸಿದ್ದಾಳೆ. ಆಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಸದ್ಯಕ್ಕೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    “ಸಹೋದರಿಗೆ ಕೊರೊನಾ ಪಾಸಿಟಿವ್ ಬಂದ ನಂತರ ನಾನು ಕೊರೊನಾ ವೈರಸ್ ಸೋಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದೇನೆ. ಹೀಗಾಗಿ ಈ ವಿಚಾರವನ್ನು ವೈದ್ಯರಿಗೆ ತಿಳಿಸುವುದು ಜಾಗೃತ ನಾಗರಿಕನಾಗಿ ನನ್ನ ಜವಾಬ್ದಾರಿ ಎಂದು ನಾನು ಭಾವಿಸಿದ್ದೇನೆ” ಎಂದು ಅವರು ಹೇಳಿದರು.

    ನನಗೆ ಕೊರೊನಾ ವೈರಸ್‍ನ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಆದರೆ ಮಾರ್ಚ್ 16 ರಂದು ಕೆಮ್ಮು ಬಂದಿತ್ತು. ಹೀಗಾಗಿ ನಾನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎನಿಸಿತು ಎಂದರು. ಸದ್ಯಕ್ಕೆ ಆಯೋಜಕ ದೆಹಲಿಯ ಲೋಕ ನಾಯಕ್ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ವೈದ್ಯರು ಅವರ ರಿಪೋರ್ಟ್‍ಗಾಗಿ ಕಾಯುತ್ತಿದ್ದಾರೆ.

    ದೆಹಲಿಯಲ್ಲಿ ಈವರೆಗೆ 11 ಜನರು ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಇಬ್ಬರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ 169ಕ್ಕೆ ಏರಿಕೆಯಾಗಿದೆ.

  • ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲ

    ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲ

    ಶಿವಮೊಗ್ಗ: ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಆರೋಪಿಸಿ ಕಾಯಿಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೆಎಫ್‍ಡಿ ಜನಜಾಗೃತಿ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

    ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮುಖಂಡರು, “ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 25 ಮಂದಿಯನ್ನು ಈ ಕಾಯಿಲೆ ಬಲಿ ತೆಗೆದುಕೊಂಡಿದೆ. ಮಂಗನ ಕಾಯಿಲೆ ಈ ಬಾರಿಯೂ ಈಗಾಗಲೇ ಒಂದೇ ತಿಂಗಳಲ್ಲಿ ಇಬ್ಬರ ಜೀವ ತೆಗೆದಿರುವುದು ಸಾಕಷ್ಟು ಆತಂಕವನ್ನುಂಟು ಮಾಡಿದೆ” ಎಂದು ಆಪಾದಿಸಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಕಳೆದ ಬೇಸಿಗೆಯಲ್ಲಿ ಹಾಗೂ ಅದರ ಹಿಂದಿನ ವರ್ಷದ ಡಿಸೆಂಬರ್ ವೇಳೆಗೆ ಆರಂಭವಾಗಿದ್ದ ಸಾವಿನ ಸರಣಿ ಇದೀಗ ಮತ್ತೆ ಆರಂಭವಾಗಿದೆ ಎಂದು ದೂರಿದ್ದಾರೆ. ಅಲ್ಲದೆ ಕಳೆದ 50 ವರ್ಷದ ಹಿಂದೆ ಸಂಶೋಧನೆಗೊಂಡ ಚುಚ್ಚುಮದ್ದನ್ನು ಈಗಲೂ ನೀಡಲಾಗುತ್ತಿದೆ. ಆದರೆ ವೈರಸ್‍ನಲ್ಲಿ ಆದ ಬೆಳವಣಿಗೆಗೆ ತಕ್ಕಂತೆ ರೋಗನಿರೋಧಕ ಚುಚ್ಚುಮದ್ದುಗಳನ್ನು ಸಂಶೋಧನೆ ನಡೆಸದೇ ಹಳೆಯ ಮಾದರಿಯ ಚುಚ್ಚುಮದ್ದುಗಳನ್ನು ನೀಡಲಾಗುತ್ತಿದೆ. ಜನರು ಮುಂಜಾಗ್ರತೆಯಾಗಿ ಚುಚ್ಚುಮದ್ದು ಪಡೆದರೂ ಮಂಗನ ಕಾಯಿಲೆಯಿಂದ ಬಳಲುವಂತಾಗಿದೆ ಎಂದು ಆರೋಪಿಸಿದ್ದಾರೆ.

    ಈ ಬಾರಿಯೂ ಕೂಡ ಜಿಲ್ಲಾಡಳಿತ ಮುಂಜಾಗ್ರತಾವಾಗಿ ಚುಚ್ಚುಮದ್ದು ವಿಷಯದಲ್ಲಾಗಲಿ, ಮಂಗನ ಸಾವಿನ ಪತ್ತೆ ಕೂಂಬಿಂಗ್ ಆಗಲಿ, ಕನಿಷ್ಠ ಜನಜಾಗೃತಿಯ ಕ್ರಮವನ್ನಾಗಲಿ ಮುಂಚಿತವಾಗಿ ಕೈಗೊಂಡಿಲ್ಲ. ಲೋಪಗಳ ಫಲವಾಗಿ ಇದೀಗ ಮತ್ತೆ ನಾಲ್ಕು ಮುಗ್ಧ ಜೀವಗಳು ಬಲಿಯಾಗಿದೆ ಎಂದು ದೂರಿದ್ದಾರೆ. ಕಳೆದ ಬಾರಿ ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ ಸರ್ಕಾರ ಈವರೆಗೆ ಖಾಸಗಿ ಆಸ್ಪತ್ರೆಗೆ ಹಣ ಪಾವತಿ ಮಾಡಿಲ್ಲ ಎಂದು ದೂರಿದ್ದಾರೆ.

    ಈ ಕಾರಣಕ್ಕೆ ಕೆಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಚಿಕಿತ್ಸಾ ವೆಚ್ಚವನ್ನು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ಹಾಗೂ ಸೋಂಕಿತರ ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಆದರೆ ಈ ವಿಷಯ ಜಿಲ್ಲಾಡಳಿತ ಕಡೆಯಿಂದ ಸಾಕಷ್ಟು ಲೋಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಳೆದ ವರ್ಷವೇ ಸಾಗರದಲ್ಲಿ ವೈರಾಣು ರೋಗ ಸಂಶೋಧನೆಗಾಗಿ ವಿಶೇಷ ಪ್ರಯೋಗಾಲಯ ಆರಂಭಿಸಲು ಸರ್ಕಾರ 5 ಕೋಟಿ ರೂ. ಬಿಡುಗಡೆ ಮಾಡಿದರು, ಇವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

  • ರಜೆಗಾಗಿ ಎಸ್‍ಬಿಐ ನೌಕರನಿಂದ ಕೊರೊನಾ ಡ್ರಾಮಾ

    ರಜೆಗಾಗಿ ಎಸ್‍ಬಿಐ ನೌಕರನಿಂದ ಕೊರೊನಾ ಡ್ರಾಮಾ

    ಚಾಮರಾಜನಗರ: ಎಸ್‍ಬಿಐ ನೌಕರನೊಬ್ಬ ರಜೆ ಪಡೆಯಲು ಗಂಟಲು ನೋವು, ಶೀತ, ಕೆಮ್ಮು ಮತ್ತು ಜ್ವರ ಬಂದಿದೆ ಎಂದು ನಾಟಕವಾಡಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಗುಂಡ್ಲುಪೇಟೆ ಎಸ್‍ಬಿಐ ಬ್ಯಾಂಕ್ ನೌಕರ ಅನುರಾಗ್ ರಜೆಗಾಗಿ ಕೊರೊನಾ ಬಂದಿದೆ ಎಂದು ಡ್ರಾಮಾ ಮಾಡಿದ್ದಾರೆ. ಬ್ಯಾಂಕಿನಲ್ಲಿ ರಜೆ ನೀಡದ ಕಾರಣ ಕೊರೊನಾ ಲಕ್ಷಣಗಳು ಇವೆಯೆಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನುರಾಗ್ ಡ್ರಾಮಾ ತಿಳಿಯದೆ ವೈದ್ಯರಿಂದ ತಪಾಸಣೆ ಕೂಡ ನಡೆದಿದೆ.

    ಪರೀಕ್ಷೆಯಲ್ಲಿ ಯಾವುದೇ ರೋಗ ಲಕ್ಷಣವಿಲ್ಲದ ಅನುರಾಗ್‍ರನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ವಹಿಸಿದ್ದು, ಆತನಿಗೆ ಯಾವುದೇ ಸೋಂಕು ಇಲ್ಲ. ರಜೆ ಪಡೆಯುವ ಸಲುವಾಗಿ ಅನುರಾಗ್ ನಾಟಕವಾಡಿದ್ದಾನೆ ಎಂದು ಗುಂಡ್ಲುಪೇಟೆ ತಾಲೂಕು ವೈಧ್ಯಾದಿಕಾರಿ ಡಾ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

  • ಕಿಲ್ಲರ್ ಕೊರೊನಾಗೆ ಮೂರನೇ ಬಲಿ – ಮಹಾರಾಷ್ಟ್ರದಲ್ಲಿ ಸೋಂಕಿತ ವೃದ್ಧ ಸಾವು

    ಕಿಲ್ಲರ್ ಕೊರೊನಾಗೆ ಮೂರನೇ ಬಲಿ – ಮಹಾರಾಷ್ಟ್ರದಲ್ಲಿ ಸೋಂಕಿತ ವೃದ್ಧ ಸಾವು

    ಮುಂಬೈ: ಭಾರತದಲ್ಲಿ ಕಿಲ್ಲರ್ ಕೊರೊನಾಗೆ ಮೂರನೇ ಬಲಿಯಾಗಿದ್ದು, ಮಹಾರಾಷ್ಟ್ರದಲ್ಲಿ 64 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

    ವೃದ್ಧ ಮುಂಬೈನ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಜೊತೆಗೆ ವೃದ್ಧನಿಗೆ ಬಿಪಿ, ಶುಗರ್ ಸೇರಿದಂತೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆದಾದ ಬಳಿಕ ಅವರಿಗೆ ಕೊರೊನಾ ಸೋಂಕು ತಗಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಮೃತಪಟ್ಟಿದ್ದಾರೆ.

    ಎಲ್ಲಾ ರೀತಿಯ ಕ್ರಮಕೈಗೊಂಡರೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 39 ಮಂದಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಮೃತಪಟ್ಟ ವೃದ್ಧ ಕೊರೊನಾ ಜೊತೆಗೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸದ್ಯ ಕರ್ನಾಟಕ, ದೆಹಲಿ ನಂತರ ಮಹಾರಾಷ್ಟ್ರದಲ್ಲಿ ಕೊರೊನಾಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.

    ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 129 ಮಂದಿ ತುತ್ತಾಗಿದ್ದು, 13 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 114 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಕರ್ನಾಟದಲ್ಲಿ ಒಟ್ಟು 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

    ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 162 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗ ವಿಶ್ವದೆಲ್ಲೆಡೆ ಹರುಡುತ್ತಿದ್ದು ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿದೆ. ಈವರೆಗೆ ಸೋಂಕಿಗೆ 7,171 ಮಂದಿ ಬಲಿಯಾಗಿದ್ದಾರೆ.

  • ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    – ಬೆಂಗಳೂರಿಗರೇ ಕೇರ್ ಫುಲ್

    ಬೆಂಗಳೂರು: ಕೊರೊನಾ ಭಯದ ನಡುವೆ ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಕಾಯಿಲೆ ಕಾಣಿಸಿದೆ. ಹೀಗಾಗಿ ಬೀದಿಬದಿ ಚಾಟ್ಸ್ ಮತ್ತು ಫುಡ್ ತಿನ್ನುವ ಮುನ್ನ ಎಚ್ಚರವಾಗಿದೆ.

    ಹೌದು. ಬೆಂಗಳೂರಿನಲ್ಲಿ ಕಲುಶಿತ ನೀರು, ಸ್ವಚ್ಛತೆಯಿಲ್ಲದ ಆಹಾರ ತಿಂದು ಕಾಲರಾ ಲಕ್ಷಣಗಳಿರುವ ಆದರೆ ಕಾಲರಾ ಅಲ್ಲದ ಕಾಯಿಲೆ ಕಾಣಿಸಿಕೊಂಡಿದೆ. ನಗರದ ಅನೇಕ ಆಸ್ಪತ್ರೆಗಳಲ್ಲಿ ಕಾಲರಾ ತರಹದ ರೋಗಲಕ್ಷಣಗಳನ್ನು ಹೊಂದಿರುವ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಾಲರಾ ಲಕ್ಷಣ ಆದರೆ ರಕ್ತದ ಮಾದರಿಯಲ್ಲಿ ಕಾಲರಾ ತರುವ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿಲ್ಲ. ಕಾಲರಾ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವ ಅಂದರೆ ರೋಗಿಗಳು ಅತಿಸಾರ, ನಿರ್ಜಲೀಕರಣ, ವಾಂತಿ ಮತ್ತು ಬಳಲಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೂಡ ಇದು ಏನು ಕಾಯಿಲೆ ಅಂತ ಟೆನ್ಶನ್ ಮಾಡಿಕೊಂಡಿದ್ದಾರೆ.

    ಈ ವಿಚಿತ್ರ ಕಾಯಿಲೆ ಈಗ ಆತಂಕಕ್ಕೆ ಕಾರಣವಾಗಿದೆ. ದೇಹ ತೀರಾ ನಿರ್ಜಲೀಕರಣಗೊಳ್ಳುತ್ತೆ, ಅತಿಸಾರ, ವಾಂತಿ ಭೇದಿ ಮತ್ತು ಜಠರಕರುಳಿನ ಸಮಸ್ಯೆಯಿಂದ ಜನ ಆಸ್ಪತ್ರೆಗೆ ದಾಖಲಾಗುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

    ಶುದ್ಧ ನೀರು, ಬಿಸಿ ಮಾಡಿ ಆರಿಸಿದ ನೀರು ಕುಡಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೇ ಬೀದಿ ಬದಿಯಲ್ಲಿ ಚಾಟ್ಸ್, ಸ್ವಚ್ಛತೆಯಿಲ್ಲದ ಆಹಾರ ತಿನ್ನಬೇಡಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಬೇಸಿಗೆಯ ಸಮಯದಲ್ಲಿ ಕೆಲವೊಂದು ಬ್ಯಾಕ್ಟೀರಿಯಾಗಳು ಈ ಸಮಸ್ಯೆಯನ್ನು ತರುತ್ತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

  • ಸರ್ಕಾರಿ ಅಧಿಕಾರಿಯಿಂದ ಪತ್ನಿ ಕೊಲೆ ಯತ್ನ ಆರೋಪ – ಚಿಕಿತ್ಸೆ ಫಲಿಸದೆ ಸಾವು

    ಸರ್ಕಾರಿ ಅಧಿಕಾರಿಯಿಂದ ಪತ್ನಿ ಕೊಲೆ ಯತ್ನ ಆರೋಪ – ಚಿಕಿತ್ಸೆ ಫಲಿಸದೆ ಸಾವು

    ಮೈಸೂರು: ಸರ್ಕಾರಿ ಅಧಿಕಾರಿಯೊಬ್ಬ ತನ್ನ ಪತ್ನಿಯನ್ನು ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿತ್ತು. ಇದೀಗ ಆತನ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

    ಚಿಕಿತ್ಸೆ ಫಲಕಾರಿಯಾಗದೆ ನಾಗವೇಣಿ ಅಲಿಯಾಸ್ ಮಣಿ (41) ಸಾವು. ಪತಿ ವೆಂಕಟಪ್ಪ ಕಿರುಕುಳದಿಂದ ನಾಗವೇಣಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ವೆಂಕಟಪ್ಪ ಟಿ.ನರಸೀಪುರ ತಾಲೂಕಿನಲ್ಲಿ ಸಹಾಯಕ ಶಿಶುಯೋಜನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು. ಈತನೇ ನಮ್ಮ ಮಗಳನ್ನು ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದ ಎಂದು ನಾಗವೇಣಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಪತ್ನಿ ಕೊಲ್ಲಲು ಯತ್ನಿಸಿದ ಸರ್ಕಾರಿ ಅಧಿಕಾರಿ- ಪೋಷಕರ ಆರೋಪ

    ವೆಂಕಟಪ್ಪಗೆ 1997ರಲ್ಲಿ ನಾಗವೇಣಿಯನ್ನು ಮದುವೆ ಮಾಡಿಕೊಡಲಾಗಿತ್ತು. ಮೈಸೂರು ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಈ ದಂಪತಿ ವಾಸವಿದ್ದರು. ಇತ್ತೀಚಿಗೆ ವೆಂಕಟಪ್ಪ ಮಾನಸಿಕ ಹಾಗೂ ದೈಹಿಕವಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದನು. ಆದರೆ ಮಾರ್ಚ್ 3ರಂದು ಮನೆಯಲ್ಲಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದ ಎಂದು ಪೋಷಕರು ಆರೋಪ ಮಾಡಿದ್ದರು. ತಕ್ಷಣ ನಾಗವೇಣಿಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

    ಅಂದಿನಿಂದ ನಾಗವೇಣಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಮನೆಯ ಔಷಧ ಬಳಸಿ ಕೊರೊನಾ ತಡೆಗಟ್ಟಿ- ಆಯುಷ್‍ನಿಂದ ಟಿಪ್ಸ್

    ಮನೆಯ ಔಷಧ ಬಳಸಿ ಕೊರೊನಾ ತಡೆಗಟ್ಟಿ- ಆಯುಷ್‍ನಿಂದ ಟಿಪ್ಸ್

    ಬೆಂಗಳೂರು: ವಿಶ್ವಾದ್ಯಂತ ಕೊರೊನಾ ವೈರಸ್ ಜನರನ್ನು ಭಯಭೀತರನ್ನಾಗಿ ಮಾಡಿದೆ. ಇದುವರೆಗೂ ಕೊರೊನಾ ವೈರಸ್ ತಗುಲಿದವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಅವರಲ್ಲಿ ಸೋಂಕಿನಿಂದಾಗಿ ಇದುವರೆಗೆ 3,412 ಮಂದಿ ಸಾವನ್ನಪ್ಪಿದ್ದು, 41,365 ಮಂದಿಗೆ ಈಗಲೂ ಚಿಕಿತ್ಸೆ ಮುಂದುವರಿದಿದೆ. ಇದೀಗ ಕೊರೊನಾ ವೈರಸ್ ತಡೆಗಟ್ಟಲು ಆಯುಷ್ ಮಂತ್ರಾಲಯ ಮತ್ತು ಭಾರತ ಸರ್ಕಾರ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ತಿಳಿಸಿದೆ.

    ಮೊದಲಿಗೆ ತಡೆಗಟ್ಟುವ ಸಾಮಾನ್ಯ ವಿಧಾನ:
    1. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.
    2. ಆಗಾಗ ಸಾಬೂನಿನಿಂದ ಕೈತೊಳೆಯುವುದು.
    3. ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು.
    4. ಕೆಮ್ಮು ಮತ್ತು ಶೀತ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರವಿರುವುದು ಹಾಗೂ ಸರಿಯಾಗಿ ಬೇಯಿಸದ ಮಾಂಸ ಸೇವಿಸಬಾರದು.
    5. ಜೀವಂತ ಪ್ರಾಣಿಗಳ ಸಂಪರ್ಕ ಮಾಡದಿರುವುದು.
    6. ಕಸಾಯಿಖಾನೆ ಹಾಗೂ ಪ್ರಾಣಿಗಳ ಮಾರಾಟ ಸ್ಥಳಗಳಿಂದ ದೂರವಿರುವುದು.
    7. ಕೆಮ್ಮು ಮತ್ತು ಸೀನು ಲಕ್ಷಣಗಳಿದ್ದಲ್ಲಿ ಮಾಸ್ಕ್ ಧರಿಸುವುದು.

    ಆಯುಷ್ ಪದ್ಧತಿಯಿಂದ ತಡೆಗಟ್ಟುವ ವಿಧಾನ:
    1. ತಾಜಾ, ಬಿಸಿಯಾದ, ಜೀರ್ಣಕ್ಕೆ ಸುಲಭವಾದ ಆಯಾ ಕಾಲದಲ್ಲಿ ಲಭ್ಯವಿರುವ ತರಕಾರಿಗಳನ್ನು ಸೇವಿಸುವುದು.
    2. ತುಳಸಿ, ಶುಂಠಿ ಹಾಗೂ ಅರಿಶಿಣಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಸ್ವಲ್ಪ ಆಗಾಗ ಕುಡಿಯುವುದು.
    3. ಕೆಮ್ಮು ಇದ್ದಾಗ ಜೇನುತುಪ್ಪದೊಂದಿಗೆ 1 ಚಿಟಿಕೆ ಕಾಳು ಮೆಣಸಿನ ಪುಡಿಯೊಂದಿಗೆ ಸೇವಿಸುವುದು.
    4. ಶೀತಲೀಕರಿಸಿದ ಪರಾರ್ಥಗಳನ್ನು ಸೇವಿಸಬಾದರು.
    5. ತಂಪಾದ ಗಾಳಿ ಬೀಸುವ ಸ್ಥಳದಿಂದ ದೂರವಿರುವುದು.
    6. ಯೋಗಾಸನ ಮತ್ತು ಪ್ರಾಣಾಯಾಮವನ್ನು ಮಾಡುವುದು.

    ಉಪಯೋಗಿಸಬಹುದಾದ ಔಷಧ ಸಸ್ಯಗಳು:
    1. ತುಳಸಿ
    2. ಅಮೃತಬಳ್ಳಿ
    3. ಅರಿಶಿಣ

    ಸೋಂಕು ಲಕ್ಷಣ ಕಾಣಿಸಿಕೊಂಡರೆ ಮಾಹಿತಿ, ಚಿಕಿತ್ಸೆಗಾಗಿ ಸಂಪರ್ಕಿಸಿ:
    1.  ರಾಜ್ಯದ ಎಲ್ಲಾ ಜಿಲ್ಲಾ ಆಯುಷ್ ಅಧಿಕಾರಿಗಳು.
    2. ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು/ಮೈಸೂರು ಇಲ್ಲವೇ ಶಿವಮೊಗ್ಗ ಮತ್ತು ತಾತನಾಥ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಳ್ಳಾರಿ.
    3. ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು.
    4. ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು.
    5. ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
    6. ಸಮೀಪದ ಆಯುರ್ವೇದ/ಯುನಾನಿ/ಹೋಮಿಯೋಪತಿ/ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆ ಮತ್ತು ಚಿಕಿತ್ಸಾಯಗಳು.
    7. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮೈಸೂರು.

    ಹೀಗೆ ಕೊರೊನಾ ವೈರಸ್ ಸೋಂಕು ಬರುವ ಮೊದಲು ಜಾಗೃತರಾಗಿರಬೇಕು. ಒಂದು ವೇಳೆ ಸೋಂಕು ಕಂಡು ಬಂದರೆ ತಕ್ಷಣ ಮೇಲೆ ಸೂಚಿಸಿರುವ ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ.