Tag: treatment

  • ಮಗಳ ಚಿಕಿತ್ಸೆಗಾಗಿ ಒಡವೆ ಅಡವಿಟ್ಟ ತಂದೆ – ಕಣ್ಣೀರಲ್ಲಿ ಟ್ಯಾಕ್ಸಿ ಚಾಲಕನ ಕುಟುಂಬ

    ಮಗಳ ಚಿಕಿತ್ಸೆಗಾಗಿ ಒಡವೆ ಅಡವಿಟ್ಟ ತಂದೆ – ಕಣ್ಣೀರಲ್ಲಿ ಟ್ಯಾಕ್ಸಿ ಚಾಲಕನ ಕುಟುಂಬ

    – ಉಚಿತ ಹಾಲೇ ಮಗುವಿಗೆ ಊಟ

    ಬೆಳಗಾವಿ: ಕೊರೊನಾದ ಲಾಕ್‍ಡೌನ್‍ನಿಂದ ಅನೇಕ ಬಡ ಕುಟುಂಬಗಳು ತಿನ್ನಲು ಊಟವಿಲ್ಲದೇ ಪರದಾಡುತ್ತಿವೆ. ಅದರಂತೆಯೇ ಜಿಲ್ಲೆಯ ರಾಮನಗರದಲ್ಲಿ ಟ್ಯಾಕ್ಸಿ ಚಾಲಕನ ಕುಟುಂಬವೊಂದು ಕಣ್ಣೀರಲ್ಲಿ ಕೈತೊಳೆಯುತ್ತಿದೆ.

    ಚಾಲಕ ನಾಗರಾಜ್ ಕುಟುಂಬ ತಿನ್ನಲು ಅನ್ನ ಇಲ್ಲದೇ ಪರದಾಟ ಮಾಡುತ್ತಿದೆ. ನಾಗರಾಜ್ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಹೆಂಡತಿಯ ಒಡವೆ ಅಡವಿಟ್ಟಿದ್ದಾರೆ. ರೇಷನ್ ಕಾರ್ಡ್ ಇಲ್ಲದವರಿಗೆ ಪಡಿತರವನ್ನು ವಿತರಿಸುತ್ತಿಲ್ಲ. ಹೀಗಾಗಿ ಬೆಳಗ್ಗೆ ಕೊಡುವ ಉಚಿತ ಹಾಲನ್ನೇ ನನ್ನ ಮಗಳಿಗೆ ಕೊಡುತ್ತಿದ್ದೇವೆ ಎಂದು ನಾಗರಾಜ್ ನೋವಿನಿಂದ ಹೇಳಿದ್ದಾರೆ.

    ನಾಗರಾಜ್ ಟ್ಯಾಕ್ಸಿ ಓಡಿಸಿಯೇ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಟಾಕ್ಸಿ ಓಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಗೆ ಬೇಕಾಗುವ ದಿನಸಿ ತೆಗೆದುಕೊಳ್ಳಲು ಹಣವಿಲ್ಲ. ಇತ್ತ ಬೆಳಗಾವಿಯ ರಾಮನಗರದ ಬಾಡಿಗೆ ಮನೆಯಲ್ಲಿ ನಾಗರಾಜ್ ದಂಪತಿ ವಾಸಮಾಡುತ್ತಿದ್ದಾರೆ. ಈ ನಡುವೆ ಮಗುವಿಗೆ ಅನಾರೋಗ್ಯ ಉಂಟಾಗಿತ್ತು. ಆಗ ಚಿಕಿತ್ಸೆಗಾಗಿ 2 ದಿನಗಳ ಹಿಂದೆ ಹೆಂಡತಿ ಒಡವೆಯನ್ನು ಅಡವಿಟ್ಟಿದ್ದರು.

    ಒಟ್ಟಿನಲ್ಲಿ ಮನೆಯಲ್ಲಿ ತನ್ನ ಹೆಂಡತಿ, ಪುಟ್ಟ ಕಂದಮ್ಮನೊಂದಿಗೆ ತುತ್ತು ಅನ್ನಕ್ಕಾಗಿ ಡ್ರೈವರ್ ನಾಗರಾಜ್ ಪರದಾಡುತ್ತಿದ್ದಾರೆ.

  • ಕಾರವಾರದಲ್ಲಿ ಸೋಂಕಿತರು ಗುಣಮುಖ – ನಾಲ್ವರು ಡಿಸ್ಚಾರ್ಜ್

    ಕಾರವಾರದಲ್ಲಿ ಸೋಂಕಿತರು ಗುಣಮುಖ – ನಾಲ್ವರು ಡಿಸ್ಚಾರ್ಜ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪತಂಜಲಿ ನೌಕಾನೆಲೆ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ನಾಲ್ವರು ಗುಣಮುಖರಾಗಿದ್ದು, ಇಂದು ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಮಾಹಿತಿ ನೀಡಿದ್ದಾರೆ.

    ಜಿಲ್ಲೆಯ ಭಟ್ಕಳ ಮೂಲದ ಎಂಟು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ತಕ್ಷಣ ಜಿಲ್ಲಾಡಳಿತ ಅವರಿಗೆ ಭಟ್ಕಳ ತಾಲೂಕು ಆಸ್ಪತ್ರೆಯಿಂದ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.

    ಎಂಟು ಜನ ಸೋಂಕಿತರಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಇಂದು ಮತ್ತೆ ನಾಲ್ವರು ಗುಣಮುಖರಾಗಿ ಡಿಸ್ಚಾರ್ಜ್ ಆಗಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಳಿದ ಇಬ್ಬರು ಸಹ ಒಂದೆರಡು ದಿನದಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

    ಇತ್ತೀಚೆಗೆ ಕೊರೊನಾ ಪತ್ತೆಯಾದ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆ ಕೊಡುತ್ತಿರುವುದರಿಂದ ಜಿಲ್ಲೆಯಲ್ಲಿರುವ ಬಹುತೇಕ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಇದಲ್ಲದೇ ಈ ಮಹಿಳೆಯ ಆರೋಗ್ಯ ಸಹ ಸುಧಾರಿಸಿದೆ ಎಂಬ ಮಾಹಿತಿ ಸಹ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 9 ಜನ ಕೊರೊನಾ ಸೋಂಕಿತರಲ್ಲಿ ಆರು ಜನರು ಚೇತರಿಸಿಕೊಂಡಿದ್ದು, ಜಿಲ್ಲೆಯ ಜನರಲ್ಲಿ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

    ಗುಣಮುಖರಾದವರಿಗೆ ಪ್ರತ್ತೇಕ ಕ್ವಾರಂಟೈನ್:
    ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಜನ ಕೊರೊನಾ ಸೋಂಕಿತರು ದಾಖಲಾಗಿದ್ದರು. ಇವರಲ್ಲಿ ಮೊದಲ ಹಂತದಲ್ಲಿ ಇಬ್ಬರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾಜ್ ಆಗಿ ಭಟ್ಕಳದ ಹೋಟಲ್‍ವೊಂದರಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರತಿ ದಿನ ಇವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇಂದು ಡಿಸ್ಚಾರ್ಜ್ ಆಗುವ ನಾಲ್ಕು ಜನರನ್ನು ಕೂಡ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ.

  • ಗಂಭೀರ ಸ್ವರೂಪ ಪಡೆಯುತ್ತಿರೋ ವಾಂತಿ ಭೇದಿ ಪ್ರಕರಣ – ಚಿಕಿತ್ಸೆ ಸಿಗದೆ ಓರ್ವ ಸಾವು

    ಗಂಭೀರ ಸ್ವರೂಪ ಪಡೆಯುತ್ತಿರೋ ವಾಂತಿ ಭೇದಿ ಪ್ರಕರಣ – ಚಿಕಿತ್ಸೆ ಸಿಗದೆ ಓರ್ವ ಸಾವು

    – ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ದೇವರಭೂಪುರ ಗ್ರಾಮದ ವಾಂತಿ ಭೇದಿ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಸಮರ್ಪಕ ಚಿಕಿತ್ಸೆ ಸಿಗದೆ ಓರ್ವ ಸಾವನ್ನಪ್ಪಿದ್ದಾರೆ.

    ಗ್ರಾಮದ ಮಲ್ಲಪ್ಪ ಗುರಗುಂಟಾ (52) ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗ್ರಾಮದ 50ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಮೃತ ವ್ಯಕ್ತಿಯ ಕುಟುಂಬಸ್ಥರು ವೈದ್ಯರಿಗೆ ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಆದರೆ ಅಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಚಿಕಿತ್ಸಾ ಸೌಲಭ್ಯಗಳೂ ಇಲ್ಲ. ಹೀಗಾಗಿ ಗ್ರಾಮಸ್ಥರು ಲಿಂಗಸುಗೂರಿನ ತಾಲೂಕಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥರಾಗುತ್ತಿದ್ದಾರೆ. ಮೂರು ದಿನಗಳಿಂದ ಜನ ನರಳಾಡುತ್ತಿದ್ದರೂ ಗ್ರಾಮದಲ್ಲಿ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ.

    ಬೇಸಿಗೆ ಆರಂಭದಲ್ಲೇ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಬಾವಿ ಹಾಗೂ ಕಾಲುವೆಯ ಕಲುಷಿತ ನೀರು ಕುಡಿದು ಜನರು ಅಸ್ವಸ್ಥರಾಗಿದ್ದಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಮಲ್ಲಪ್ಪ ಸಾವನ್ನಪ್ಪುತ್ತಿರಲಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಗ್ರಾಮದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು, ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಅಂತ ದೇವರಭೂಪುರ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್: ಮಗುವಿಗೆ ಚಿಕಿತ್ಸೆ ಕೊಡಿಸಲಾಗದೆ ಪೋಷಕರ ಪರದಾಟ

    ಲಾಕ್‍ಡೌನ್ ಎಫೆಕ್ಟ್: ಮಗುವಿಗೆ ಚಿಕಿತ್ಸೆ ಕೊಡಿಸಲಾಗದೆ ಪೋಷಕರ ಪರದಾಟ

    ಚಾಮರಾಜನಗರ: ಲಾಕ್‍ಡೌನ್ ಪರಿಣಾಮ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಹೆತ್ತವರು ಸಂಕಟ ಪಡುತ್ತಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ.

    ಕೂಲಿಗಾಗಿ ಬಂದ ಧಾರವಾಡ ಮೂಲದ 14 ವಲಸೆ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರ ಕಷ್ಟ ಹೇಳತೀರದಾಗಿದೆ. ಈ ಪೈಕಿ ಗುರುನಾಥ್ ಮತ್ತು ತುಳಸಮ್ಮನ ಅವರ ಚಿಕ್ಕ ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಹೆತ್ತವರು ಒದ್ದಾಡುತ್ತಿದ್ದಾರೆ.

    ಗುರುನಾಥ್ ದಂಪತಿ ಧಾರವಾಡ ಜಿಲ್ಲೆ ಕುಂಬಾರಕೊಪ್ಪ ಗ್ರಾಮದವರಾಗಿದ್ದು, ಕೊಳ್ಳೇಗಾಲದ ಚೆಸ್ಕಾಂ ಕಟ್ಟಡ ನಿರ್ಮಾಣಕ್ಕೆ ಬಂದಿದ್ದಾರೆ. ಆದರೆ ಅವರ ಮಗುವಿಗೆ ಚಿಕ್ಕ ವಯಸ್ಸಿನಿಂದಲೂ ನರ ದೌರ್ಬಲ್ಯ ಸಮಸ್ಯೆ ಇದೆ. 3 ತಿಂಗಳಿಗೊಮ್ಮೆ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ಹೋಗಿ ಮಗುವನ್ನು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಲಾಕ್‍ಡೌನ್ ಪರಿಣಾಮ ಬೆಳಗಾವಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

    ಮಗು ನೋವಿನಿಂದ ದಿನವಿಡೀ ಅಳುತ್ತಿದೆ ಎಂದು ತಂದೆ ಗುರುನಾಥ್ ಸುದ್ದಿಗಾರರ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾಡಳಿತ ಮಗುವಿನ ಆರೋಗ್ಯದ ದೃಷ್ಟಿಯಿಂದ ಚಿಕಿತ್ಸೆಗಾಗಿ ಬೆಳಗಾವಿಗೆ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ಕುಟುಂಬ ತೊರೆದು ವಲಸೆ ಬಂದಿದ್ದೇವೆ. ದಯಮಾಡಿ ಸಹಾಯ ಮಾಡಬೇಕು ಎಂದು ವಲಸೆ ಕಾರ್ಮಿಕರು ಮನವಿ ಮಾಡಿದ್ದಾರೆ.

  • ಗುಣಮುಖರಾದ ಸೋಂಕಿತರಿಗೆ ಹೂ ಗಿಡ, ಹಣ್ಣು ಕೊಟ್ಟು ಬೀಳ್ಕೊಡುಗೆ

    ಗುಣಮುಖರಾದ ಸೋಂಕಿತರಿಗೆ ಹೂ ಗಿಡ, ಹಣ್ಣು ಕೊಟ್ಟು ಬೀಳ್ಕೊಡುಗೆ

    – ಇದುವರೆಗೂ 8 ಮಂದಿ ಸೋಂಕಿತರು ಗುಣಮುಖ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನ 5 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ಒಂದೇ ಕುಟುಂಬದ ನಾಲ್ವರು ಏಕಕಾಲದಲ್ಲಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಗುಣಮುಖರಾದ ನಾಲ್ವರನ್ನ ಇಂದು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಒಂದೇ ಕುಟುಂಬದ ನಾಲ್ವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅವರು ಮನೆಗೆ ಹೋಗುವಾಗ ಸರದಿ ಸಾಲಿನಲ್ಲಿ ನಿಂತು ಚಪ್ಪಾಳೆ ತಟ್ಟಿದ್ದಾರೆ. ಗುಣಮುಖರಾದ 4 ಮಂದಿಗೆ ಹೂವಿನ ಗಿಡ ಹಾಗೂ ಹಣ್ಣು ನೀಡಿ ಬೀಳ್ಕೊಡುಗೆ ನೀಡಲಾಗಿದೆ. ಇದರಿಂದ ಗುಣಮುಖರಾದ ನಾಲ್ವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂಬಂತಾಗಿತ್ತು.

    ಈ ವೇಳೆ ತಮ್ಮ ಸಂಸತ ಹಂಚಿಕೊಂಡ ಗುಣಮುಖನಾದ ವ್ಯಕ್ತಿ, ನಾವು ಆಸ್ಪತ್ರೆಗೆ ಬಂದಾಗ ಬರಿ ಕೈಯಲ್ಲಿ ಬಂದಿದ್ದೆವು. ಆದರೆ ಇಲ್ಲಿ ನಮಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ನಮ್ಮನ್ನ ಪ್ರೀತಿ ಅಭಿಮಾನದಿಂದ ಸ್ನೇಹಿತರ ರೀತಿ ನಮ್ಮ ಜೊತೆ ವರ್ತನೆ ಮಾಡಿದರು. ಸದ್ಯ ನಾವು ಗುಣಮುಖರಾಗಿ ಹೋಗುತ್ತಿದ್ದು, ಸರ್ಕಾರ, ಜಿಲ್ಲೆಯ ಜಿಲ್ಲಾಧಿಕಾರಿ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

    ಅಂದಹಾಗೆ ಜಿಲ್ಲೆಯಲ್ಲಿ ಇದುವರೆಗೂ 12 ಮಂದಿಗೆ ಸೋಂಕು ದೃಢಪಟ್ಟಿತ್ತು. ಅದರಲ್ಲಿ 70 ವರ್ಷದ ವೃದ್ಧೆ ಮೃತಪಟ್ಟಿದ್ದರು. ಈ ವೃದ್ಧೆಯಿಂದ ಆಕೆಯ ಮಗ, ಸೊಸೆ, ಸೊಸೆಯ ತಮ್ಮ ಹಾಗೂ ಮೊಮ್ಮಗನಿಗೆ ಸೋಂಕು ತಗುಲಿತ್ತು. ಈಗ ಆ ಒಂದೇ ಕುಂಟುಂಬದ ನಾಲ್ವರು ಸಹ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ನಾಲ್ಕು ಜನರ ಜೊತೆಗೆ ಜಿಲ್ಲೆಯಲ್ಲಿ ಮೊದಲು ಕೊರೊನಾ ಸೋಂಕಿಗೆ ಗುರಿಯಾಗಿದ್ದ 31 ವರ್ಷದ ವ್ಯಕ್ತಿ ಸಹ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೊದಲು ಸಹ 3 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಒಟ್ಟಾರೆ 12 ಮಂದಿಯಲ್ಲಿ ಒಬ್ಬರು ಮೃತಪಟ್ಟಿದ್ದು, 8 ಮಂದಿ ಗುಣಮುಖರಾಗಿದ್ದು, ಉಳಿದ ಮೂವರು ಚಿಕಿತ್ಸೆಯಲ್ಲಿದ್ದಾರೆ.

    ಜಿಲ್ಲೆಯ ಕೊರೊನಾ ಸೋಂಕಿತರ ವಿವರಗಳು:
    1. ರೋಗಿ 19 – ಇಂದು ಡಿಸ್ಚಾರ್ಜ್ (31 ವರ್ಷದ ವ್ಯಕ್ತಿ)
    2. ರೋಗಿ 22 – ಈ ಮೊದಲೇ ಡಿಸ್ಚಾರ್ಜ್
    3. ರೋಗಿ 37 – ಈ ಮೊದಲು ಡಿಸ್ಚಾರ್ಜ್
    4. ರೋಗಿ 53 – ಮೃತ (70 ವರ್ಷದ ವೃದ್ಧೆ)
    5. ರೋಗಿ 69 – ಇಂದು ಡಿಸ್ಚಾರ್ಜ್
    6. ರೋಗಿ 70 – ಈ ಮೊದಲು ಡಿಸ್ಚಾರ್ಜ್ (31 ವರ್ಷದ ಪ್ರಥಮ ಸೋಂಕಿತನ ತಂದೆ)
    7. ರೋಗಿ 71, 72, 73 – ಇಂದು ಡಿಸ್ಚಾರ್ಜ್
    8. ರೋಗಿ 94, 181 ಮತ್ತು 191 ಚಿಕಿತ್ಸೆಯಲ್ಲಿದ್ದಾರೆ.

  • ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬೆಂಗಳೂರು: ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದೀಗ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಬುಲೆಟ್ ಪ್ರಕಾಶ್ ಶನಿವಾರ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಇದುವರೆಗೆ ಮೂರು ಆಸ್ಪತ್ರೆಯನ್ನು ಬದಲಿಸಿರುವ ಬುಲೆಟ್ ಪ್ರಕಾಶ್ ಶನಿವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಇದೀಗ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಲಿವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್, ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿದೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಕೃತಕ ಉಸಿರಾಟ ಸಾಧನದಿಂದ ಉಸಿರಾಡುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತಾ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

  • ಬಳ್ಳಾರಿಯಲ್ಲಿ ಮತ್ತೊಬ್ಬರಿಗೆ ಕೊರೊನಾ – ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

    ಬಳ್ಳಾರಿಯಲ್ಲಿ ಮತ್ತೊಬ್ಬರಿಗೆ ಕೊರೊನಾ – ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

    ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

    ಈ ಮೊದಲು ಹೊಸಪೇಟೆ ಮೂಲದ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಧೃಡವಾಗಿತ್ತು. ಇದೇ ಕುಟುಂಬದ ಸದಸ್ಯರಲ್ಲಿ ಒಬ್ಬರು 7 ಜನರ ಜೊತೆ ನೇರ ಸಂಪರ್ಕ ಹೊಂದಿದ್ದರು. ಹೀಗಾಗಿ ಆ ಏಳು ಜನರನ್ನು ಈಗಾಗಲೇ ಐಸೋಲೇಷನ್ ಮಾಡಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.  ಇದನ್ನೂ ಓದಿ: ನಂಜನಗೂಡಿನಿಂದ ಬಂದ ಬಳ್ಳಾರಿಯ ಬಾಲಕನಿಗೆ ಸೋಂಕು – ರಾಜ್ಯದಲ್ಲಿ 124ಕ್ಕೆ ಏರಿಕೆ

    ಇಂದು ಏಳು ಜನರ ರಕ್ತ ಪರೀಕ್ಷೆ ವರದಿ ಬಂದಿದ್ದು, ಏಳರಲ್ಲಿ ಒಬ್ಬರಿಗೆ ಸೋಂಕು ಧೃಡವಾಗಿದೆ. ಅಲ್ಲದೇ ಏಳು ಜನರು 21 ಜನರ ಜೊತೆಯಲ್ಲಿ ಸಂಪರ್ಕ ಹೊಂದಿದ್ದು, ಆ 21 ಜನರನ್ನು ಸಹ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅವರ ರಕ್ತದ ಮಾದರಿಯನ್ನು ಸಹ ಜಿಲ್ಲಾಡಳಿತ ಪರೀಕ್ಷೆಗೆ ಕಳಿಸಿದ್ದು, ರಕ್ತದ ಪರೀಕ್ಷೆಯ ವರದಿ ಬರಬೇಕಿದೆ.

    ಆಘಾತಕಾರಿ ಅಂಶ ಅಂದರೆ ಸೋಂಕಿತ ವ್ಯಕ್ತಿಯ ಹಿರಿಯ ಮಗ ಬಳ್ಳಾರಿಯ ಹೆಸರಾಂತ ಖಾಸಗಿ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದು ದಿನ ಖಾಸಗಿ ಕಂಪನಿಗೆ ಹೋಗಿ ಕೆಲಸ ಮಾಡಿದ್ದಾನೆ. ಹೀಗಾಗಿ ಖಾಸಗಿ ಕಂಪನಿಯಲ್ಲಿ ಸೊಂಕು ಹರಡಿರುವ ಅನುಮಾನ ಹೆಚ್ಚಾಗಿದೆ.

  • ಫ್ಯಾಕ್ಟ್ ಚೆಕ್: ಬ್ರಿಟನ್ ರಾಜಕುಮಾರನಿಗೆ ಬೆಂಗಳೂರು ವೈದ್ಯ ಚಿಕಿತ್ಸೆ

    ಫ್ಯಾಕ್ಟ್ ಚೆಕ್: ಬ್ರಿಟನ್ ರಾಜಕುಮಾರನಿಗೆ ಬೆಂಗಳೂರು ವೈದ್ಯ ಚಿಕಿತ್ಸೆ

    ನವದೆಹಲಿ: ಬೆಂಗಳೂರಿನ ಆಯುರ್ವೇದಿಕ್ ವೈದ್ಯ ಬ್ರಿಟನ್ ರಾಜಕುಮಾರನಿಗೆ ಆಯುರ್ವೆದಿಕ್ ಔಷಧಿ ಮೂಲಕ ಕೊರೊನಾದಿಂದ ಪಾರು ಮಾಡಿದ್ದಾರೆ ಎಂಬ ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರ ಹೇಳಿಕೆ ಸುಳ್ಳು ಎಂಬುದು ಇದೀಗ ಬಹಿರಂಗವಾಗಿದೆ.

    ಈ ಕುರಿತು ಲಂಡನ್ ನಲ್ಲಿರುವ ಬ್ರಿಟನ್ ರಾಜಕುಮಾರರ ವಕ್ತಾರರು ಸ್ಪಷ್ಟಪಡಿಸಿದ್ದು, ಆಯುರ್ವೇದಿಕ್ ಔಷಧಿ ಮೂಲಕ ಬ್ರಿಟನ್ ರಾಜ ಗುಣಮುಖರಾಗಿದ್ದಾರೆ ಎಂಬುದನ್ನು ಅಲ್ಲಗಳೆದಿದ್ದಾರೆ. ಬ್ರಿಟಿನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್‌ ಅವರಿಗೆ ಕೊರೊನಾ ಇರುವುದು ಕಳೆದ ತಿಂಗಳು ದೃಢಪಟ್ಟಿತ್ತು. ಅಲ್ಲದೆ ಸಾರ್ಸ್-ಕೋವಿ-2 ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ. ನಂತರ ನೆಗಿಟಿವ್ ವರದಿ ಬಂದಿದೆ.

    ಇದೆಲ್ಲದರ ಮಧ್ಯೆಯೇ ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರು ಗುರುವಾರ ಗೋವಾದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ್ದರು. ಆಯುರ್ವೇದಿಕ್ ವೈದ್ಯ ಐಸಾಕ್ ಮಥಾಯ್ ಅವರಿಂದ ನನಗೆ ಕರೆ ಬಂತು. ಇವರು ಬೆಂಗಳೂರಿನಲ್ಲಿ ‘ಸೌಖ್ಯ’ ಆಯುರ್ವೇದ ರೆಸಾರ್ಟ್ ನಡೆಸುತ್ತಿದ್ದಾರೆ. ಪ್ರಿನ್ಸ್ ಚಾರ್ಲ್ಸ್‌ ಅವರಿಗೆ ನೀಡಿದ ಆಯುರ್ವೇದ ಹಾಗೂ ಹೋಮಿಯೋಪಥಿ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ನನಗೆ ತಿಳಿಸಿದರು ಎಂದು ನಾಯ್ಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

    ಬೆಂಗಳೂರಿನ ಆಯುರ್ವೇದಿಕ್ ವೈದ್ಯ ಐಸಾಕ್ ಮಿಥಾಯ್ ಸಹ ಈ ಕುರಿತು ಮಾಹಿತಿ ನೀಡಿದ್ದು, ಬ್ರಿಟನ್ ರಾಜ ಹಾಗೂ ಅವರ ಪತ್ನಿ ನನ್ನ ಪೇಷೆಂಟ್. ನಮ್ಮ ಆಯುರ್ವೇದ ರೆಸಾರ್ಟ್‍ನ ವೆಬ್‍ಸೈಟ್‍ಗೆ ಪ್ರಿನ್ಸ್ ಚಾರ್ಲ್ಸ್‌ ಅವರು ವಿಡಿಯೋ ಸಂದೇಶ ಕಳುಹಿಸಿದ್ದರು. ಇದು ಸಹ ನಮ್ಮ ವೆಬ್‍ಸೈಟ್ ಮುಖಪುಟದಲ್ಲಿದೆ ಎಂದಿದ್ದಾರೆ. ಆದರೆ ರೋಗಿಯ ಗೌಪ್ಯತೆಯನ್ನು ಉಲ್ಲೇಖಿಸಿ, ಚಿಕಿತ್ಸೆ ನೀಡಿರುವುದರ ಕುರಿತು ಅವರು ದೃಢಪಡಿಸಿಲ್ಲ.

    ಪ್ರಿನ್ಸ್ ಚಾರ್ಲ್ಸ್‌ ಅವರು ನನ್ನ ರೋಗಿಯಾಗಿದ್ದರಿಂದ ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಅವರ ಬಗ್ಗೆ ನಾನು ಮಾತನಾಡಲು ಸಾಧ್ಯವಾಗುವುದಿಲ್ಲ. ಕೆಲವು ತಿಂಗಳ ಹಿಂದೆ ಅವರು ಇಲ್ಲಿಯೇ ಇದ್ದರು. ಕಳೆದ ತಿಂಗಳಲ್ಲಿ ನಾನು ಲಂಡನ್‍ನಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರಿಗೆ ಏನು ಔಷಧಿ ಸಲಹೆ ನೀಡಿದೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಐಸಾಕ್ ಮಥಾಯ್ ಅವರು ಜ್ವರದ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವ ಯಾವುದೇ ವೈರಲ್ ವಿರುದ್ಧ ಹೋರಾಡುವ ಔಷಧಿಯ ಕುರಿತು ಸಲಹೆ ನೀಡಿದ್ದಾರೆ. ಆದರೆ ಈ ವರೆಗೆ ಕೋವಿಡ್-19(ಕೊರೊನಾ ವೈರಸ್) ರೋಗಿಗೆ ಚಿಕಿತ್ಸೆ ನೀಡಿಲ್ಲ.

    ಪ್ರಿನ್ಸ್ ಚಾರ್ಲ್ಸ್‌ ಅವರು ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೆಂಗಳೂರಿನ ಆಯುರ್ವೇದ ವೈದ್ಯರು ಸಲಹೆ ನೀಡಿದ್ದಾರೆಯೇ ಎಂದು ಲಂಡನ್‍ನ ಪ್ರಿನ್ಸ್ ಆಫ್ ವೇಲ್ಸ್ ನ ವಕ್ತಾರರನ್ನು ಪ್ರಶ್ನಿಸಲಾಗಿದ್ದು, ಈ ವೇಳೆ ಇದು ಸುಳ್ಳು ಮಾಹಿತಿ ಎಂದು ಬಹಿರಂಗವಾಗಿದೆ. ಈ ಕುರಿತು ವಕ್ತಾರರು ಸ್ಪಷ್ಟಪಡಿಸಿದ್ದು, ಇದು ತಪ್ಪು ಮಾಹಿತಿ, ಲಂಡನ್‍ನ ನ್ಯಾಷನಲ್ ಹೆಲ್ತ್ ಸರ್ವಿಸ್(ಎನ್‍ಎಚ್‍ಎಸ್)ನ ವೈದ್ಯಕೀಯ ಸಲಹೆಯನ್ನು ಪಡೆದಿದ್ದಾರೆಯೇ ಹೊರತು ಇನ್ನಾವುದೇ ಚಿಕಿತ್ಸೆಯನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನ ವೈದ್ಯರು ಆಯುರ್ವೇದಿಕ್ ಚಿಕಿತ್ಸೆ ಮೂಲಕ ಪ್ರಿನ್ಸ್ ಚಾರ್ಲ್ಸ್‌ ಅವರನ್ನು ಗುಣಪಡಿಸಿದ್ದಾರೆ ಎಂಬ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಬೆಳಗ್ಗೆಯಿಂದಲೂ ಚರ್ಚೆ ನಡೆಯುತ್ತಿತ್ತು. ಇದೀಗ ಸ್ವತಃ ಪ್ರಿನ್ಸ್ ಚಾಲ್ಸ್ ಅವರ ಲಂಡನ್ ವಕ್ತಾರರು ಈ ಕುರಿತು ಸ್ಪಷ್ಟಪಡಿಸಿದ್ದಾರೆ.

  • ಬ್ರಿಟನ್ ರಾಜಕುಮಾರನಿಗೆ ಬೆಂಗ್ಳೂರು ವೈದ್ಯನಿಂದ ಚಿಕಿತ್ಸೆ

    ಬ್ರಿಟನ್ ರಾಜಕುಮಾರನಿಗೆ ಬೆಂಗ್ಳೂರು ವೈದ್ಯನಿಂದ ಚಿಕಿತ್ಸೆ

    – ಆಯುರ್ವೇದ ವೈದ್ಯ ಪದ್ಧತಿಯಿಂದ ಗುಣಮುಖ

    ಬೆಂಗಳೂರು: ಬ್ರಿಟನ್‍ ಪ್ರಿನ್ಸ್ ಚಾರ್ಲ್ಸ್‌ಗೆ ಕೊರೊನಾ ವೈರಸ್ ಬಂದಿದ್ದು, ಸೋಂಕು ಗುಣಮುಖವಾಗುವುದಕ್ಕೆ ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿ ಕೊರೊನಾ ಗೆದ್ದು ಬಂದಿದ್ದಾರೆ.

    ಬೆಂಗಳೂರು ಮೂಲದ ವೈದ್ಯ ಐಸಾಕ್ ಮಥಾಯ್ ಬ್ರಿಟನ್‍ನ ರಾಜಕುಮಾರನಿಗೆ ಚಿಕಿತ್ಸೆ ನೀಡಿದ್ದಾರೆ. ಕೊರೊನಾ ಸೋಂಕಿತರಾಗಿದ್ದ ಪ್ರಿನ್ಸ್ ಚಾರ್ಲ್ಸ್‌ಗೆ ಐಸಾಕ್ ಮಥಾಯ್ ಇಲ್ಲಿಂದಲೇ ಆಯುರ್ವೇದದ ಚಿಕಿತ್ಸೆ ನೀಡಿದ್ದಾರೆ. ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ತಮ್ಮ ವೈದ್ಯ ಪದ್ಧತಿಯಿಂದ ಬ್ರಿಟನ್ ಪ್ರಿನ್ಸ್ ಚಾರ್ಲ್ಸ್‌ಗೆ ಔಷಧ ಸೂಚಿಸಿ ಅವರು ಗುಣಮುಖರಾಗಿದ್ದಾರೆಂದು ಹೇಳಿರುವುದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಕೊರೊನಾ ವೈರಸ್‍ಗೆ ಚಿಕಿತ್ಸೆ ಇದೆ ಎಂದು ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.

    ಬ್ರಿಟನ್‍ನ ಪ್ರಿನ್ಸ್ ಚಾರ್ಲ್ಸ್‌ಗೆ ಆಯುರ್ವೇದ ಔಷಧ ನೀಡಿರುವ ವೈದ್ಯ ಐಸಾಕ್ ಮಥಾಯ್ ಅವರು ‘ಸೌಖ್ಯ’ ಎಂಬ ಆಯುರ್ವೇದ ರೆಸಾರ್ಟ್ ನಡೆಸುತ್ತಿದ್ದಾರೆ.

  • ಕೊರೊನಾ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ 1 ಕೋಟಿ ಪರಿಹಾರ: ಕೇಜ್ರಿವಾಲ್

    ಕೊರೊನಾ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ 1 ಕೋಟಿ ಪರಿಹಾರ: ಕೇಜ್ರಿವಾಲ್

    – ದೇಶ ರಕ್ಷಿಸೋ ಸೈನಿಕರಿಗಿಂತ ವೈದ್ಯರ ಕೆಲಸ ಕಡಿಮೆಯಿಲ್ಲ

    ನವದೆಹಲಿ: ಕೊರೊನಾ ವೈರಸ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವವರು “ದೇಶವನ್ನು ರಕ್ಷಿಸುವ ಸೈನಿಕರಿಗಿಂತ ಕಡಿಮೆಯಿಲ್ಲ”. ಹೀಗಾಗಿ ಕೊವೀಡ್-19 ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

    “ಯುದ್ಧದ ಸಮಯದಲ್ಲಿ ಸೈನಿಕ ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಾನೆ. ಆದ್ದರಿಂದ ನಮ್ಮ ಇಡೀ ರಾಷ್ಟ್ರವು ಅವರಿಗೆ ಋಣಿಯಾಗಿದೆ. ಇಂದು ಆರೋಗ್ಯ ಕಾರ್ಯಕರ್ತರು ಕೂಡ ದೇಶದ ಜನರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಸಿಬ್ಬಂದಿಯ ಕೆಲಸವು ಸೈನಿಕರ ಕೆಲಸಕ್ಕಿಂತ ಕಡಿಮೆಯಿಲ್ಲ” ಎಂದು ಕೇಜ್ರಿವಾಲ್ ಹೇಳಿದರು.

    “ಈ ಹಿಂದೆ ದೆಹಲಿ ಸರ್ಕಾರ ದೇಶಕ್ಕಾಗಿ ಹೋರಾಡುವಾಗ ಯಾವುದೇ ಸೈನಿಕ ಹುತಾತ್ಮರಾದರೆ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿತ್ತು. ಈಗ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ದುರಾದೃಷ್ಟವಶಾತ್ ಯಾವುದೇ ಆರೋಗ್ಯ ಕಾರ್ಯಕರ್ತ, ವೈದ್ಯ, ನೈರ್ಮಲ್ಯ ಕಾರ್ಮಿಕರು ಅಥವಾ ನರ್ಸ್ ಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

    ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವರನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ಕೇಜ್ರಿವಾಲ್ ಅವರು ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲವು ವೈದ್ಯಕೀಯ ವೃತ್ತಿಪರರೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ಕೊರೊನಾ ವೈರಸ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.

    ನಿಮ್ಮ ಸ್ಥೈರ್ಯ ಮತ್ತು ಕರ್ತವ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ ಎಂದು ವೈದ್ಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಬೆಂಬಲಕ್ಕೆ ಸರ್ಕಾರ ಇರುತ್ತದೆ. ನೀವು ನೀಡಿರುವ ಸಲಹೆಗಳನ್ನು ಶೀಘ್ರದಲ್ಲಿಯೇ ದೆಹಲಿ ಸರ್ಕಾರ ಕಾರ್ಯಗತಗೊಳಿಸುತ್ತದೆ ಎಂದು ಭರವಸೆ ಕೂಡ ನೀಡಿದರು. ದೆಹಲಿಯಲ್ಲಿ ಇದುವರೆಗೂ 120 ಕೊರೊನಾ ಸೋಂಕಿತ ರೋಗಿಗಳಿದ್ದಾರೆ ಎಂದು ವರದಿಯಾಗಿದೆ .