Tag: treatment

  • ಪತಿ ಚಿಕಿತ್ಸೆಗೆ ತಾಳಿ ಮಾರಿದ ಪತ್ನಿ ಪ್ರಕರಣ- ಪಬ್ಲಿಕ್ ಟಿವಿ ವತಿಯಿಂದ ಮಾತ್ರೆ ವ್ಯವಸ್ಥೆ

    ಪತಿ ಚಿಕಿತ್ಸೆಗೆ ತಾಳಿ ಮಾರಿದ ಪತ್ನಿ ಪ್ರಕರಣ- ಪಬ್ಲಿಕ್ ಟಿವಿ ವತಿಯಿಂದ ಮಾತ್ರೆ ವ್ಯವಸ್ಥೆ

    ಚಿಕ್ಕಬಳ್ಳಾಪುರ: ಗಂಡನ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಪತ್ನಿ ತನ್ನ ತಾಳಿಯನ್ನೇ ಮಾರಿದ ಪ್ರಕರಣದ ಪಬ್ಲಿಕ್ ಟಿವಿ ವರದಿಗೆ ಹಲವರು ಸ್ಪಂದಿಸಿ ಸಹಾಯ ಹಸ್ತ ಚಾಚಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ.ಕುರಪ್ಪಲ್ಲಿ ಗ್ರಾಮದ ಲಿಂಗಪ್ಪ ಅವರಿಗೆ ಹೃದಯಾಘಾತವಾಗಿತ್ತು. ಆ ವೇಳೆ ಪತಿಯ ಶಸ್ತ್ರಚಿಕಿತ್ಸೆಗೆ ಪತ್ನಿ ಬೀರಮ್ಮ ತಮ್ಮ ತಾಳಿಯನ್ನು ಮಾರಿ ಹಣ ಹೊಂದಿಸಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೂಲಿ ಕೆಲಸವೂ ಇಲ್ಲದೇ ದಂಪತಿ ಸಮಸ್ಯೆ ಎದುರಿಸಿದ್ದರು.

    ಪತಿಯ ಚಿಕಿತ್ಸೆಗೆ ಮಾತ್ರೆಗಳನ್ನು ಸಹ ಕೊಡಿಸಲು ಬೀರಮ್ಮ ಸಮಸ್ಯೆ ಎದುರಿಸಿದ್ದರು. ಅಲ್ಲದೇ ಅವರ ಜೀವನ ನಿರ್ವಹಣೆ ಕೂಡ ಕಷ್ಟವಾಗಿತ್ತು. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಬಿಜೆಪಿ ಮುಖಂಡರಾದ ಮುನಿರಾಮು, ಕೃಷ್ಣಾರೆಡ್ಡಿ ಅವರು ಚಿಕ್ಕಬಳ್ಳಾಪುರ ನಗರದಿಂದ ಕುರಪ್ಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಮಾತ್ರೆ ನೀಡಿದ್ದಾರೆ. ಅಲ್ಲದೇ ಹಲವರು ದಂಪತಿಯ ಸಂಕಷ್ಟಕ್ಕೆ ಸ್ಪಂದಿಸಿ ಧನಸಹಾಯ ಹಾಗೂ ದಿನಸಿ ಕಿಟ್ ಸೇರಿದಂತೆ ತರಕಾರಿ ವಿತರಣೆ ಮಾಡಿದ್ದಾರೆ.

    ದೂರದ ಪೋಲ್ಯಾಂಡ್ ದೇಶದಲ್ಲಿರೋ ಕನ್ನಡಿಗರೊಬ್ಬರು ಬೀರಮ್ಮ ಅವರ ಬ್ಯಾಂಕ್ ಖಾತೆಗೆ ಧನಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಹಲವರು ಮಹಿಳೆಯ ಬ್ಯಾಂಕ್ ಖಾತೆ ನಂಬರ್ ಪಡೆದುಕೊಳ್ಳುತ್ತಿದ್ದು, ಧನಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

  • ತನ್ನ 15 ತಿಂಗ್ಳ ಮಗುವಿನ ಸಾವಿನ ಸುದ್ದಿ ತಿಳಿದ್ರೂ ಚಿಕಿತ್ಸೆ ಮುಂದುರಿಸಿದ ವೈದ್ಯ

    ತನ್ನ 15 ತಿಂಗ್ಳ ಮಗುವಿನ ಸಾವಿನ ಸುದ್ದಿ ತಿಳಿದ್ರೂ ಚಿಕಿತ್ಸೆ ಮುಂದುರಿಸಿದ ವೈದ್ಯ

    – ಅನಾರೋಗ್ಯದ ಮಗುವನ್ನ ಬಿಟ್ಟು ಕರ್ತವ್ಯಕ್ಕೆ ಡಾಕ್ಟರ್ ಹಾಜರ್

    ಭೋಪಾಲ್: ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಕ್ಕಿಂತ ಕರ್ತವ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯರು ತಮ್ಮ ಮಗಳ ಸಾವಿನ ಸುದ್ದಿ ತಿಳಿದರೂ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯಲ್ಲಿ ಮನಕಲುಕುವಂತ ಘಟನೆ ನಡೆದಿದೆ. ಹೋಶಂಗಾಬಾದ್ ನಿವಾಸಿ ಡಾಕ್ಟರ್ ದೇವೇಂದ್ರ ಮೆಹ್ರಾ ತನ್ನ 15 ತಿಂಗಳ ಅನಾರೋಗ್ಯದ ಮಗಳನ್ನು ಬಿಟ್ಟು ಇಂದೋರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಮೆಹ್ರಾ ಅವರ ಮಗುವಿನ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಈ ಮಧ್ಯೆ ಅವರು ತಮ್ಮ ಅನಾರೋಗ್ಯದ ಮಗಳನ್ನು ಒಬ್ಬ ತಂದೆ ಹಾಗೂ ವೈದ್ಯರಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಡಾಕ್ಟರ್ ಮೆಹ್ರಾ ಅವರನ್ನು ಇಂದೋರ್‌ನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನೇಮಿಸಲಾಗಿತ್ತು. ಹೋಶಂಗಾಬಾದ್‍ದಿಂದ ಇಂದೋರ್‌ಗೆ 200 ಕಿಲೋ ಮೀಟರ್‌ಗಿಂತ ದೂರವಿದೆ. ಮಗಳ ಸ್ಥಿತಿ ನೋಡಿ ಮೆಹ್ರಾ ಅವರಿಗೆ ಹೋಗಲು ಮನಸ್ಸಿರಲಿಲ್ಲ. ಆದರೂ ಅನಿವಾರ್ಯ ಕಾರಣದಿಂದ ಇಂದೋರ್‌ಗೆ ಹೋಗಿದ್ದರು.

    ಕೊನೆಗೆ ಡಾ.ದೇವೇಂದ್ರ ಮೆಹ್ರಾ ಅವರು ಮಗಳನ್ನು ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಸ್ವಲ್ಪ ದಿನದಲ್ಲೇ ಮಗಳ ಸಾವಿನ ಸುದ್ದಿ ಬಂದಿದೆ. ಆದರೂ ಮೆಹ್ರಾ ಅವರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸಿದ್ದರು. ನಂತರ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಅಧಿಕಾರಿಗಳು ಮೆಹ್ರಾ ಅವರಿಗೆ ಇಂದೋರ್‌ನಿಂದ ಹೋಶಂಗಾಬಾದ್‍ಗೆ ತೆರಳಲು ಅನುಮತಿ ನೀಡಿದರು.

    ಬುಧವಾರ ಡಾ.ದೇವೇಂದ್ರ ಮೆಹ್ರಾ ಹೋಶಂಗಾಬಾದ್‍ದ ತಮ್ಮ ಮನೆಗೆ ಹೋಗಿದ್ದಾರೆ. ಈ ವೇಳೆ ಮಾತನಾಡಿದ ಮೆಹ್ರಾ ಅವರು, ನನ್ನ ಮಗಳ ಸ್ಥಿತಿಯನ್ನು ನೋಡಿದ ಮೇಲೆ ನನಗೆ ಹಿಂತಿರುಗಬೇಕೆಂದು ಅನಿಸಿರಲಿಲ್ಲ. ಈ ವೇಳೆ ಕರ್ತವ್ಯವೂ ಮುಖ್ಯವಾಗಿತ್ತು. ರೋಗಿಗಳಿಗೆ ನನ್ನ ಅವಶ್ಯಕತೆ ಇತ್ತು.  ಆದರೆ ನನ್ನ ಮಗಳು ಮೃತಪಟ್ಟ ನಂತರ ಅಧಿಕಾರಿಗಳೇ ಮನೆಗೆ ಕಳುಹಿಸಿದ್ದಾರೆ ಎಂದು ನೋವಿನಿಂದ ಹೇಳಿದರು.

    ಡಾ.ದೇವೇಂದ್ರ ಮೆಹ್ರಾ ಅವರಂತೆ ಅನೇಕ ವೈದ್ಯರು, ಪೊಲೀಸರು ತಮ್ಮ ತಮ್ಮ ಕುಟುಂಬದಿಂದ ದೂರು ಉಳಿದುಕೊಂಡು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ.

  • ಕ್ಯಾನ್ಸ್‌ರ್‌ನಿಂದ ಗುಣವಾದ 4ರ ಬಾಲಕಿಗೆ ತಗುಲಿದ ಕೊರೊನಾ

    ಕ್ಯಾನ್ಸ್‌ರ್‌ನಿಂದ ಗುಣವಾದ 4ರ ಬಾಲಕಿಗೆ ತಗುಲಿದ ಕೊರೊನಾ

    – ಎರಡು ಮಾರಣಾಂತಿಕ ಕಾಯಿಲೆ ಗೆದ್ದು ಬಂದ ಪುಟಾಣಿ

    ದುಬೈ: ದುಬೈನಲ್ಲಿ ನೆಲೆಸಿರುವ ಭಾರತ ಮೂಲದ 4 ವರ್ಷದ ಬಾಲಕಿ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದಳು. ಇತ್ತ ಕ್ಯಾನ್ಸ್‌ರ್ ಗೆ ಚಿಕಿತ್ಸೆ ಪಡೆದು ಕೆಲ ತಿಂಗಳ ಹಿಂದೆಯಷ್ಟೇ ಗುಣಮುಖಳಾಗಿದ್ದಳು. ಇದೇ ವೇಳೆ ಮಹಾಮಾರಿ ಕೊರೊನಾ ಬಾಲಕಿಗೆ ತಗುಲಿದ್ದು, ಈಗ ಈ ಎರಡೂ ಮಾರಣಾಂತಿಕ ಕಾಯಿಲೆಯನ್ನು ಬಾಲಕಿ ಗೆದ್ದು ವೈದ್ಯರನ್ನೇ ಅಚ್ಚರಿಗೊಳಿಸಿದ್ದಾಳೆ.

    ಯುಎಇನಲ್ಲಿ ಕೊರೊನಾ ವೈರಸ್‍ನಿಂದ ಗುಣಮುಖರಾದ ಕಿರಿಯ ರೋಗಿಗಳಲ್ಲಿ ಈ ಪುಟಾಣಿ ಬಾಲಕಿಯೂ ಒಬ್ಬಳಾಗಿದ್ದಾಳೆ. ಭಾರತ ಮೂಲದ ಶಿವಾನಿ ಕ್ಯಾನ್ಸ್‌ರ್‌ ಹಾಗೂ ಕೊರೊನಾ ಎರಡರಿಂದಲೂ ಗುಣವಾಗಿದ್ದಾಳೆ. ಆರೋಗ್ಯ ಕಾರ್ಯಕರ್ತೆಯಾಗಿ ಶಿವಾನಿ ತಾಯಿ ಸೇವೆ ಸಲ್ಲಿಸುತ್ತಿದ್ದರು. ಅವರು ಏಪ್ರಿಲ್ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

    ಈ ಬಗ್ಗೆ ತಿಳಿದ ಬಳಿಕ ಶಿವಾನಿ ಹಾಗೂ ಆಕೆಯ ತಂದೆಯನ್ನು ಕೂಡ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಯಾವುದೇ ರೋಗ ಲಕ್ಷಣಗಳು ಕಂಡುಬಾರದಿದ್ದರೂ ಬಾಲಕಿಯ ವರದಿ ಮಾತ್ರ ಪಾಸಿಟಿವ್ ಬಂದಿತ್ತು. ಆಸ್ಪತ್ರೆಯಲ್ಲಿ ಶಿವಾನಿ ಹಾಗೂ ಆಕೆಯ ತಾಯಿಗೆ ಒಂದೇ ರೀತಿಯ ಸೌಲಭ್ಯ ನೀಡಲಾಗುತಿತ್ತು. ಆದರೆ ಕೊರೊನಾ ಸೋಂಕಿಗೆ ತುತ್ತಾಗುವ ಮೊದಲು ಶಿವಾನಿಗೆ ಕಿಡ್ನಿ ಕ್ಯಾನ್ಸರ್ ಇತ್ತು. ಆದರೆ ಅದರಿಂದ ಆಕೆ ಚೇತರಿಸಿಕೊಂಡಿದ್ದಳು. ಅಷ್ಟರಲ್ಲಿ ಕೊರೊನಾಗೆ ತುತ್ತಾದ ಕಾರಣಕ್ಕೆ ಶಿವಾನಿ ಮೇಲೆ ಹೆಚ್ಚು ನಿಗಾ ವಹಿಸಲಾಗಿತ್ತು. ಶಿವಾನಿ ಗುಣಮುಖಳಾದ ಬಳಿಕ ಏಪ್ರಿಲ್ 20ರಂದು ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

    ಕ್ಯಾನ್ಸ್‌ರ್‌ ಯಿದ್ದ ಹಿನ್ನೆಲೆ ಕಳೆದ ವರ್ಷ ಶಿವಾನಿಗೆ ಕೆಮೊ ಥೆರಪಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಈಗಲೂ ಆಕೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ. ಕೊರೊನಾ ಸೋಂಕಿನಿಂದ ಉಸಿರಾಟದ ತೊಂದರೆಯಿಂದ ಶಿವಾನಿ ಬಳಲುತ್ತಿದ್ದಳು. ಆಕೆ ಮೇಲೆ ಹೆಚ್ಚಿನ ನಿಗಾವಹಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದರು.

    ಶಿವಾನಿಗೆ ಸ್ವಾಬ್ ಪರೀಕ್ಷೆಯಲ್ಲಿ ಸತತ ಎರಡು ಬಾರಿ ನೆಗೆಟಿವ್ ಬಂದ ನಂತರ 20 ದಿನಗಳ ಕಾಲ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಇದೀಗ 14 ದಿನಗಳ ಕಾಲ ಆಕೆಯನ್ನು ಹೋಮ್ ಕ್ವಾರಂಟೈನಲ್ಲಿ ಇರಿಸುವಂತೆ ಸೂಚಿಸಲಾಗಿದ್ದು, ಆಕೆಯ ತಾಯಿ ಕೂಡ ಕೊರೊನಾದಿಂದ ಚೇತರಿಕೊಳ್ಳುತ್ತಿದ್ದು, ಸದ್ಯದಲ್ಲೇ ಅವರನ್ನೂ ಡಿಸ್ಚಾರ್ಜ್ ಮಾಡಲಾಗುತ್ತೆ ಎನ್ನಲಾಗಿದೆ.

  • ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ಗಂಭೀರ

    ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ಗಂಭೀರ

    – ಮಾಹಿತಿಗಾಗಿ ಅಧಿಕಾರಿಗಳ ಹರಸಾಹಸ
    – ಹೊಂಗಸಂದ್ರದ 1,271 ಮನೆಗಳ 3,400 ಜನರ ತಪಾಸಣೆ

    ಬೆಂಗಳೂರು: ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೊರೊನಾ ವಿರುದ್ಧ ಹೋರಾಟ ಮಾಡಲು ಸೆಣಸಾಡುತ್ತಿದ್ದಾರೆ.

    ರೋಗಿ ನಂಬರ್ 419ರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಇವರ ಆರೋಗ್ಯ ತೀವ್ರ ಹದಗೆಡುತ್ತಲೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯ್ಲಲ್ಲಿ ಆತ ಎಲ್ಲೆಲ್ಲಿಗೆ ಭೇಟಿ ನೀಡಿದ್ದ, ಯಾರ ಯಾರ ಸಂಪರ್ಕಕ್ಕೆ ಬಂದಿದ್ದ ಅನ್ನೋದನ್ನ ತಿಳಿಯಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.

    ಸೋಂಕಿತ ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಮಾಹಿತಿ ಕಲೆಹಾಕಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಗೆ ಉಸಿರಾಟವೇ ದೊಡ್ಡ ಸವಾಲಾಗಿದೆ.

    ರೋಗಿ ನಂಬರ್ 419 ಬಿಹಾರಿ ಮೂಲದ ಹೊಂಗಸಂದ್ರ ವ್ಯಕ್ತಿಯಾಗಿದ್ದು, ಇದುವರೆಗೆ ಈತನಿಂದ 37 ಮಂದಿಗೆ ಕೊರೊನಾ ಸೋಂಕು ಬಂದಿದೆ ಎಂದು ಬಿಬಿಎಂಪಿ ವಾರ್ ರೂಂ ರಿಪೋರ್ಟ್ ನೀಡುತ್ತಿದೆ. ರಾಜ್ಯದಲ್ಲೇ ಅತಿಹೆಚ್ಚು ಜನರಿಗೆ ಕೊರೊನಾ ಹಚ್ಚಿದ 3ನೇ ವ್ಯಕ್ತಿಯಾಗಿದ್ದು, ಪರಿಣಾಮ ಹೊಂಗಸಂದ್ರದಲ್ಲಿ ಜನರಲ್ಲಿ ಆತಂಕ ಉಂಟಾಗಿದೆ.

    ಈವರೆಗೆ ಹೊಂಗಸಂದ್ರದ 1,271 ಮನೆಗಳ 3,400 ಜನರ ತಪಾಸಣೆಯಾಗಿದೆ. ಈ 3,400 ಜನರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ. ಆದರೂ ಹೊಂಗಸಂದ್ರದಲ್ಲಿ ಆತಂಕ ಮುಂದುವರಿದಿದೆ. ಸದ್ಯ ಹೊಂಗಸಂದ್ರದ ನಂಬರ್ 419 ಚೇತರಿಕೆಗಾಗಿ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಈ ರೋಗಿಗೆ 54 ವರ್ಷವಾಗಿದ್ದು, ಇದು ವೈದ್ಯರಿಗೆ ಸವಾಲಾಗಿದೆ.

  • 1918ರಲ್ಲಿ ಸ್ಪ್ಯಾನಿಶ್ ಜ್ವರದಿಂದ ಬದುಕುಳಿದು ಇಂದು ಕೊರೊನಾ ಸೋಲಿಸಿದ ವೃದ್ಧೆ

    1918ರಲ್ಲಿ ಸ್ಪ್ಯಾನಿಶ್ ಜ್ವರದಿಂದ ಬದುಕುಳಿದು ಇಂದು ಕೊರೊನಾ ಸೋಲಿಸಿದ ವೃದ್ಧೆ

    ಮ್ಯಾಡ್ರಿಡ್: 1918ರಲ್ಲಿ ಬಂದಿದ್ದ ಸ್ಪ್ಯಾನಿಶ್ ಜ್ವರದ ವಿರುದ್ಧ ಹೋರಾಡಿದ್ದ ವೃದ್ಧೆಯೊಬ್ಬರು ಮತ್ತೆ ನೂರು ವರ್ಷ ಬಿಟ್ಟು ಬಂದ ಕೊರೊನಾ ವೈರಸ್ ವಿರುದ್ಧವೂ ಹೋರಾಡಿ ಬದುಕುಳಿದಿರುವ ಅಪರೂಪದ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

    ಈ ವೃದ್ಧೆಯನ್ನು ಅಲ್ಲಾಲಾ ಡೆಲ್ ವ್ಯಾಲೆ (106) ಎಂದು ಗುರುತಿಸಲಾಗಿದೆ. ಇವರು 1913ರಲ್ಲಿ ಜನಿಸಿದ್ದರು. ಈ ವೇಳೆ ಇವರು ಆರು ವರ್ಷದ ಮಗುವಿದ್ದಾಗ ಅಂದರೆ 1918ರಲ್ಲಿ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಸ್ಪ್ಯಾನಿಶ್ ಜ್ವರಕ್ಕೆ ತುತ್ತಾಗಿದ್ದರು. ಈ ವೇಳೆ ಸೂಕ್ತ ಚಿಕಿತ್ಸೆ ಪಡೆದು ಈ ಸೋಂಕಿನಿಂದ ಗುಣಮುಖವಾಗಿ ಬಂದಿದ್ದರು.

    ಇದಾದ ಬಳಿಕ ಈ ವೃದ್ಧೆಗೆ ಈಗ 106 ವರ್ಷ, ಸುಮಾರು 102 ವರ್ಷಗಳ ಬಳಿಕ 2019ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡು ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಸೋಂಕಿಗೂ ತುತ್ತಾಗಿದ್ದಾರೆ. ಇವರು ಒಂದು ನರ್ಸಿಂಗ್ ಹೋಂನಲ್ಲಿ ವಾಸಿಸುತ್ತಿದ್ದು, ಇಲ್ಲಿ ಅವರು ಸೋಂಕಿಗೆ ತುತ್ತಾಗಿದ್ದರು. ಇವರ ಜೊತೆಗೆ ಇದ್ದ ಉಳಿದ 60 ಜನಕ್ಕೂ ಕೊರೊನಾ ಸೋಂಕು ತಗುಲಿತ್ತು. ಆದರೆ ಈ ವೃದ್ಧೆ ಕೊರೊನಾ ವಿರುದ್ಧವೂ ಹೋರಾಡಿ ಈ ಇಳಿ ವಯಸ್ಸಿನಲ್ಲಿ ಗುಣಮುಖರಾಗಿದ್ದಾರೆ.

    ವೃದ್ಧೆಗೆ ಸೋಂಕು ಇರುವುದು ಪತ್ತೆಯಾದ ನಂತರ ಆಕೆಯನ್ನು ಲಾ ಲಿನಿಯಾ ಎಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ನಂತರ ಅವರನ್ನು ವೆಂಟಿಲೇಟರ್‍ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ನಂತರ ಸಂಪೂರ್ಣ ಗುಣಮುಖವಾಗಿರುವ ಅಲ್ಲಾಲಾ ಡೆಲ್ ವ್ಯಾಲೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಸ್ಪೇನ್‍ನಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿ ಗಳಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ವೃದ್ಧೆಯ ಸೊಸೆ ಪ್ಯಾಕ್ವಿ ಸ್ಯಾಂಚೆ, ವೈದ್ಯರು ನಮ್ಮ ಅತ್ತೆಗೆ ಬಹಳ ಒಳ್ಳೆಯ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ನಮ್ಮ ಕುಟುಂಬ ಕೃತಜ್ಞರಾಗಿರಬೇಕು. ಆದರೆ ನಾವು ಅವರು ಗುಣಮುಖರಾಗಿದ್ದಾರೆ ಎಂದು ಅಸಡ್ಡೆ ತೋರಬಾರದು ಮತ್ತು ಅವರ ಆರೋಗ್ಯದ ಬಗ್ಗೆ ಗಮನಕೊಡಬೇಕು. ನಾವು ಜಾಗರೂಕತೆಯಿಂದ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸ್ಯಾಂಚೆ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

    ಸ್ಪ್ಯಾನಿಶ್ ಜ್ವರ ಸುಮಾರು 1918 ರಿಂದ 1920ರವೆರೆಗೆ ವಿಶ್ವವನ್ನು ಕಾಡಿತ್ತು. ಸುಮಾರು 36 ತಿಂಗಳುಗಳ ಕಾಲ ಈ ಸಾಂಕ್ರಾಮಿಕ ರೋಗವೂ ಮನುಕುಲಕ್ಕೆ ಮಾರಕವಾಗಿತ್ತು. ಇದು ಅಂದು ಸುಮಾರು ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗ ಅಂದರೆ 500 ದಶಲಕ್ಷ ಜನರಿಗೆ ಈ ಸೋಂಕು ತಗುಲಿತ್ತು.

    ಸ್ಪ್ಯಾನಿಶ್ ಫ್ಲೂ:
    “ಇನ್ಫ್ಲೂಎಂಜಾ” ಎನ್ನುವ ವೈರಾಣುವಿನಿಂದ ಕಳೆದ 300 ವರ್ಷಗಳಲ್ಲಿ 9 ವಿವಿಧ ಡೆಡ್ಲಿ ರೋಗಗಳು ಜನಿಸಿದ್ದು ಸಂಪೂರ್ಣ ಮನುಷ್ಯಕುಲವನ್ನು ಕಾಡಿವೆ. ಅವುಗಳಲ್ಲಿ 1918 ರ ಇನ್ಫ್ಲೂಎಂಜ ಪ್ಯಾಂಡೆಮಿಕ್ ಕೂಡ ಒಂದು. ಈ ರೋಗವನ್ನು “ಸ್ಪ್ಯಾನಿಶ್ ಫ್ಲೂ” ಎಂದು ಕೂಡ ಕರೆಯಲಾಗುತ್ತದೆ. ಈ ರೋಗದಿಂದ ಅಂದು ಬರೋಬ್ಬರಿ 10 ಕೋಟಿ ಜನರು ಪ್ರಾಣ ಕಳೆದುಕೊಂಡಿದ್ದರು. ಇನ್ನು ಇದೇ ವೈರಾಣುವಿನಿಂದ 2009 ರಲ್ಲಿ ಪ್ರಪಂಚದೆಲ್ಲೆಡೆ “ಹಂದಿ ಜ್ವರ” ಎನ್ನುವ ರೋಗವು ಜನಿಸಿತ್ತು. ಇದರಿಂದ 4 ಲಕ್ಷ ಜನರು ಪ್ರಪಂಚದೆಲ್ಲೆಡೆ ಸತ್ತಿದ್ದರು.

  • ನಾರಾಯಣಪುರದಲ್ಲಿ ಹಲವರಿಗೆ ಜ್ವರ- ಆತಂಕದಲ್ಲಿ ಗ್ರಾಮಸ್ಥರು

    ನಾರಾಯಣಪುರದಲ್ಲಿ ಹಲವರಿಗೆ ಜ್ವರ- ಆತಂಕದಲ್ಲಿ ಗ್ರಾಮಸ್ಥರು

    ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಹಲವರಿಗೆ ಜ್ವರ, ಮೆ- ಕೈ ನೋವು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ಗ್ರಾಮದಲ್ಲಿ ಪ್ರತಿ ದಿನ ಸುಮಾರು 15ರಿಂದ 20 ಜನರಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮಸ್ಥರು ಗಾಬರಿಯಾಗಿದ್ದು, ಈ ಸಂಬಂಧ ಸರ್ಕಾರಿ ಆಸ್ಪತ್ರೆಗೆ ಹೋದರೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ನಮ್ಮ ಬಳಿ ಆಸ್ಪತ್ರೆಗೆ ತೋರಿಸಲು ಹಣವೂ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆಯೂ ಸಿಗುತ್ತಿಲ್ಲ. ಹೀಗಾಗಿ ವಿಧಿಯಿಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ ಸಾವು

    ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ ಸಾವು

    ಗದಗ: ರಜೆ ಮೇಲೆ ಸ್ವ-ಗ್ರಾಮಕ್ಕೆ ಬಂದಿದ್ದ ಯೋಧ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.

    ವೀರಪ್ಪ ತಹಶೀಲ್ದಾರ (34) ಮೃತ ಯೋಧ. ಇವರು ನಿಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಬುಧವಾರ ರಾತ್ರಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ನಂತರ ಕೊರೊನಾ ವೈರಸ್‍ ಪರೀಕ್ಷೆಗೆ ಕಳುಹಿಸಲಾಗಿತ್ತು. ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಇಂದು ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿತ್ತು.

    ವೀರಪ್ಪ ಬಿಎಸ್‍ಎಫ್ ಪಶ್ಚಿಮ ಬಂಗಾಳದ 158ನೇ ಬಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2006ರಿಂದ ದೇಶ ಸೇವೆಯಲ್ಲಿ ತೊಡಗಿದ್ದರು. ವೀರಪ್ಪ ರಜೆಗಾಗಿ ಶ್ಯಾಗೋಟಿ ಗ್ರಾಮಕ್ಕೆ ಬಂದಿದ್ದು, ಏಪ್ರಿಲ್ 15ಕ್ಕೆ ರಜೆ ಮುಗಿದಿತ್ತು. ಆದರೆ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ವಾಪಸ್ ಹೋಗಲು ಸಾಧ್ಯವಾಗದೆ ಗ್ರಾಮದಲ್ಲೇ ಉಳಿದುಕೊಂಡಿದ್ದರು.

    ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಯೋಧ ಅಗಲಿದ್ದಾರೆ. ಗದಗ ಜಿಲ್ಲಾಡಳಿತದಿಂದ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.

  • ಕೊರೊನಾ ಸೋಂಕಿತ ಗರ್ಭಿಣಿ ಆರೋಗ್ಯದಲ್ಲಿ ಸುಧಾರಣೆ

    ಕೊರೊನಾ ಸೋಂಕಿತ ಗರ್ಭಿಣಿ ಆರೋಗ್ಯದಲ್ಲಿ ಸುಧಾರಣೆ

    – ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಉಡುಪಿ: ಜಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಕೊರೊನಾ ಸೋಂಕಿತ ಗರ್ಭಿಣಿಯ ಆರೋಗ್ಯದಲ್ಲಿ ಸುಧಾರಣೆಯಾಗಿದೆ.

    ಆರು ತಿಂಗಳ ಗರ್ಭಿಣಿಯ ಆರೋಗ್ಯ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಉಡುಪಿ ಜಿಲ್ಲಾಡಳಿತದ ಒಪ್ಪಿಗೆ ನಂತರ ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿರುವ ಉಡುಪಿಯ ಸುಸಜ್ಜಿತ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆಯಲಾಗಿತ್ತು.

    ಆರಂಭಿಕ ಹಂತದಲ್ಲಿ ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ನಿರಂತರ ಚಿಕಿತ್ಸೆಯ ನಂತರ 26 ವರ್ಷದ ಈ ಗರ್ಭಿಣಿಯ ಆರೋಗ್ಯ ಸುಧಾರಣೆ ಕಂಡಿದೆ. ಇದೀಗ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದು, ವರದಿ ನೆಗೆಟಿವ್ ಬಂದಿದೆ. ಎರಡನೇ ವರದಿಯ ನಿರೀಕ್ಷೆಯಿದ್ದು, ಅದೂ ಕೂಡ ನೆಗೆಟಿವ್ ಬಂದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ಡಿ.ಎಚ್.ಒ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆಯ ಮೂವರು ಕೊರೊನಾ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಈ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 22 ದಿನಗಳಿಂದ ಯಾವುದೇ ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ.

  • ಸ್ಯಾನಿಟೈಸರ್ ಸಾವು ಪ್ರಕರಣ- ಗ್ರಾಮದ 15 ಮದ್ಯವ್ಯಸನಿಗಳು ಸ್ಯಾನಿಟೈಸರ್ ಸೇವಿಸಿರುವ ಶಂಕೆ

    ಸ್ಯಾನಿಟೈಸರ್ ಸಾವು ಪ್ರಕರಣ- ಗ್ರಾಮದ 15 ಮದ್ಯವ್ಯಸನಿಗಳು ಸ್ಯಾನಿಟೈಸರ್ ಸೇವಿಸಿರುವ ಶಂಕೆ

    ಧಾರವಾಡ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಸೇವಿಸಿ ಅಕ್ಕ, ತಮ್ಮ ಇಬ್ಬರೂ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಇನ್ನೂ ಭಯಾನಕ ಮಾಹಿತಿಯೊಂದು ಹೊರ ಬಿದ್ದಿದೆ. ಅದೇ ಗ್ರಾಮದ ಇನ್ನೂ 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಭಾನುವಾರವಷ್ಟೇ ಜಿಲ್ಲೆಯ ಗಂಬ್ಯಾಪೂರ ಗ್ರಾಮದಲ್ಲಿ ಸ್ಯಾನಿಟೈಸರ ಕುಡಿದು ಇಬ್ಬರು ಸಾವನ್ನಪ್ಪಿದ್ದರು. ಇದೀಗ ಗ್ರಾಮದ ಅಂದಾಜು 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಪರಿಶೀಲನೆಗಾಗಿ ಭಾನುವಾರ ರಾತ್ರಿ ಕಲಘಟಗಿ ಸಿಪಿಐ ವಿಜಯ ಬಿರಾದಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಹಿತಿ ಬಹಿರಂಗವಾಗಿದೆ. 13 ಜನರಲ್ಲಿ 4 ಜನರಿಗೆ ಗ್ರಾಮದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಘಟಗಿಯಿಂದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಉಳಿದ 9 ಜನರಿಗೆ ಮತ್ತು ಗ್ರಾಮಕ್ಕೆ ಕಲಬೆರಕೆ ಮದ್ಯ ತಂದವರನ್ನು ಹುಡುಕಲು ತಂಡ ರಚನೆ ಮಾಡಲಾಗಿದೆ. ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಸ್ಯಾನಿಟೈಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಸ್ಯಾನಿಟೈಸರ್‍ನಿಂದಾಗಿ ಗ್ರಾಮದಲ್ಲಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ.

    ಭಾನುವಾರ ಇಬ್ಬರ ಸಾವು
    ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ- ತಮ್ಮ ಮೃತಪಟ್ಟಿದ್ದರು. ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರೆ, ಸಂಜೆ ಹೊತ್ತಿಗೆ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದರು. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಅಲ್ಲದೆ ಮೂರು ದಿನಗಳಿಂದ ಸ್ಯಾನಿಟೈಸರ್ ದಾಸರಾಗಿದ್ದರು.

  • ಕರ್ನಾಟಕಕ್ಕೆ Be Careful ಎಂದ ಕೇಂದ್ರ ಆರೋಗ್ಯ ಇಲಾಖೆ

    ಕರ್ನಾಟಕಕ್ಕೆ Be Careful ಎಂದ ಕೇಂದ್ರ ಆರೋಗ್ಯ ಇಲಾಖೆ

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇತ್ತ ಸಾವಿನ ಸಂಖ್ಯೆಯೂ ದಿನಕಳೆದಂತೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಿ ಎಂದು ಕರ್ನಾಟಕಕ್ಕೆ ಎಚ್ಚರಿಕೆ ನೀಡಿದೆ.

    ಕೇರಳದಲ್ಲಿ ಕೊರೊನಾ ವೈರಸ್‍ನಿಂದ ಮೂವರು ಮೃತಪಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಕೇರಳಕ್ಕಿಂತ ಕರ್ನಾಟಕದಲ್ಲಿ ಕೊರೊನಾ ಕಡಿಮೆ ಇದ್ದರೂ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಕರ್ನಾಟಕಕ್ಕೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ತಜ್ಞ ವೈದ್ಯರ ಅಭಿಪ್ರಾಯ ಪಡೆದಿದೆ. ಇದನ್ನೂ ಓದಿ: ಕೊರೊನಾಗೆ ರಾಜ್ಯದ 9 ಮಂದಿ ಬಲಿ: ಸೋಂಕು ಬಂದಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಕೊರೊನಾದಿಂದ ಸಾವು ಹೇಗೆ ಸಂಭವಿಸುತ್ತೆ ಎನ್ನುವುದನ್ನು ಸಮರ್ಪಕವಾಗಿ ಇದುವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಶ್ವಾಸಕೋಶಕ್ಕೆ ಆಟ್ಯಾಕ್ ಆದಾಗ ಯಾವ ಸಂದರ್ಭದಲ್ಲಿ ರೋಗಿಯ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಾನೆ ಎನ್ನುವುದು ಇನ್ನೂ ನಿಗೂಢವಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ವೈದ್ಯರ ಅಭಿಪ್ರಾಯ ಕಲೆಹಾಕಿದೆ.

    ಕರ್ನಾಟಕದಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಇದ್ದರೂ ರೋಗಿಗಳು ಸಾವನ್ನಪ್ಪುತ್ತಿರುವುದು ಆತಂಕವಾಗಿದೆ. ರೋಗ ಪತ್ತೆ ಮಾಡುವುದು ತಡವಾಗುತ್ತಿದೆ. ಸೋಂಕಿತ ವ್ಯಕ್ತಿಯ ಪರಿಸ್ಥಿತಿ ಕೈ ಮೀರಿದಾಗ ಪ್ರಕರಣ ತಿಳಿಯುತ್ತದೆ. ಕೊನೆ ಕ್ಷಣದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕೊರೊನಾ ಜ್ವರ ಪರೀಕ್ಷೆ ಇನ್ನಷ್ಟು ವೇಗದಲ್ಲಿ ಆಗಬೇಕು. ಮೃತ 14 ಮಂದಿಯಲ್ಲಿ ಬಹುತೇಕ ರೋಗಿಗಳು 60 ವರ್ಷ ಮೇಲ್ಪಟ್ಟವರು. ಹೆಚ್ಚಿನವರಲ್ಲಿ ಹೃದ್ರೋಗ, ಕಿಡ್ನಿ, ಸಕ್ಕರೆ ಕಾಯಿಲೆ ಇದೆ. ಅಲ್ಲದೇ ಶ್ವಾಸಕೋಸದ ತೊಂದರೆ ಇರುವ ಕೊರೊನಾ ರೋಗಿಗಳ ಮೇಲೆ ಇನ್ನಷ್ಟು ನಿಗಾ ವಹಿಸಬೇಕು ಎಂದು ತಜ್ಞ ವೈದ್ಯರು ಮುನ್ನೆಚ್ಚರಿಕಾ ವರದಿ ಸಲ್ಲಿಸಿದ್ದಾರೆ.

    ಹಿರಿಯ ರೋಗಿಗಳಲ್ಲಿ ಯಾವಾಗ ಆಕ್ಸಿಜನ್ ಕಡಿಮೆಯಾಗುತ್ತೆ ಎನ್ನುವ ಮಾಹಿತಿ ಮಾನಿಟರ್ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಈ ಬಗ್ಗೆ ನಿಗಾ ವಹಿಸಬೇಕು. ಕೊರೊನಾ ರೋಗ ಪೀಡಿತರ ಚಿಕಿತ್ಸೆ ವೆಂಟಿಲೇಟರ್ ಹೆಚ್ಚಾಗಬೇಕು. ಜೊತೆಗೆ ಕೊರೊನಾದಿಂದ ಗುಣಮುಖರಾದವರ ರೋಗ ನಿರೋಧಕ ಶಕ್ತಿ ಬಗ್ಗೆ ಅಧ್ಯಯನ ಮಾಡಬೇಕು. ಸಂಪೂರ್ಣ ಕೇರಳ ಮಾದರಿಗೆ ಮೊರೆ ಹೋಗಬೇಕು ಅಂತ ತಜ್ಞರು ಶಿಫಾರಸ್ಸು ಮಾಡಿದ್ದಾರೆ.