Tag: treatment

  • ಲಾಡ್ಜ್‌ನಲ್ಲಿ ಪ್ರೇಮಿಗಳು ಆತ್ಮಹತ್ಯೆ ಪ್ರಕರಣ- ಚಿಕಿತ್ಸೆ ಫಲಿಸದೆ ಯುವಕನೂ ಸಾವು

    ಲಾಡ್ಜ್‌ನಲ್ಲಿ ಪ್ರೇಮಿಗಳು ಆತ್ಮಹತ್ಯೆ ಪ್ರಕರಣ- ಚಿಕಿತ್ಸೆ ಫಲಿಸದೆ ಯುವಕನೂ ಸಾವು

    – ಮನೆಯವರನ್ನ ಒಪ್ಪಿಸಲು ಆಗಿಲ್ಲವೆಂದು ಸೂಸೈಡ್
    – ಎರಡು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ

    ಹೈದರಾಬಾದ್: ಲಾಡ್ಜ್‌ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಇದೀಗ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಕೂಡ ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಡ್ಚಲ್-ಮಲ್ಕಾಜ್ಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಶ್ರಾವಣಿ ಮತ್ತು ಅಜಯ್ ಮೃತ ಪ್ರೇಮಿಗಳು. ಮಂಗಳವಾರ ಜಿಲ್ಲೆಯ ಮೆಡಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲಾಡ್ಜ್‌ನಲ್ಲಿ ಕೀಟನಾಶಕವನ್ನು ಕುಡಿದು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಘಟನೆಯಲ್ಲಿ ಯುವತಿ ಶ್ರಾವಣಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಗೆಳೆಯ ಅಜಯ್ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅಜಯ್ ಮೃತಪಟ್ಟಿದ್ದಾನೆ.

    ಏನಿದು ಪ್ರಕರಣ?
    ಮೃತ ಶ್ರಾವಣಿ ಮತ್ತು ಅಜಯ್ ಇಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಅವರ ಪ್ರೀತಿಯ ವಿಚಾರ ಮನೆಯರಿಗೆ ಗೊತ್ತಾಗಿದೆ. ಆಗ ಶ್ರಾವಣಿ ಕುಟುಂಬದವರು ಈ ಮದುವೆ ಒಪ್ಪಿಗೆ ಸೂಚಿಸಿದ್ದರು. ಆದರೆ ಅಜಯ್ ಕುಟುಂಬದವರು ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪ್ರೇಮಿಗಳಿಬ್ಬರು ಅವರನ್ನು ಒಪ್ಪಿಸಲು ತುಂಬಾ ಪ್ರಯತ್ನ ಮಾಡಿದ್ದಾರೆ. ಆದರೆ ಕೊನೆಗೂ ಅಜಯ್ ಪೋಷಕರು ಮದುವೆಗೆ ಒಪ್ಪಲಿಲ್ಲ. ಇದರಿಂದ ನೋಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು.

    ಅದರಂತೆಯೇ ಜುಲೈ 14 ಮಂಗಳವಾರ ಇಬ್ಬರು ಮಡಿಪಲ್ಲಿಯಲ್ಲಿರುವ ಲಾಡ್ಜ್‌ಗೆ ಬಂದು ರೂಮ್ ಬುಕ್ ಮಾಡಿದ್ದರು. ಆದರೆ ಮಂಗಳವಾರ ರಾತ್ರಿ ರೂಮಿಗೆ ಹೋಗಿ ಲಾಕ್ ಮಾಡಿಕೊಂಡವರು ಬುಧವಾರ ಬೆಳಗ್ಗೆ ತುಂಬಾ ಸಮಯವಾದರೂ ರೂಮಿನಿಂದ ಹೊರಗೆ ಬರಲಿಲ್ಲ. ಇದರಿಂದ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ರೂಮಿನ ಬಾಗಿಲು ತೆಗೆದು ನೋಡಿದ್ದಾರೆ. ಆಗ ಪ್ರೇಮಿಗಳಿಬ್ಬರು ಕೀಟನಾಶಕವನ್ನು ಕುಡಿದು ಹಾಸಿಗೆಯ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿದ್ದರು.

    ತಕ್ಷಣ ಲಾಡ್ಜ್ ಸಿಬ್ಬಂದಿ ಮಡಿಪಲ್ಲಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದರು. ಆಗ ಶ್ರಾವಣಿ ಮೃತಪಟ್ಟಿದ್ದಳು. ಆದರೆ ಅಜಯ್ ಇನ್ನೂ ಉಸಿರಾಡುತ್ತಿದ್ದನು. ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಈಗ ಅಜಯ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕರ್ತವ್ಯದ ಅವಧಿ ಮುಗಿದಿದ್ರೂ ಮತ್ತೆ ಸೇನೆಯಲ್ಲಿ ಕೆಲಸ- ಗುಡ್ಡ ಕುಸಿದು ಯೋಧ ನಿಧನ

    ಕರ್ತವ್ಯದ ಅವಧಿ ಮುಗಿದಿದ್ರೂ ಮತ್ತೆ ಸೇನೆಯಲ್ಲಿ ಕೆಲಸ- ಗುಡ್ಡ ಕುಸಿದು ಯೋಧ ನಿಧನ

    ಹಾಸನ: ಅರುಣಾಚಲ ಪ್ರದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಅರಕಲಗೂಡು ತಾಲೂಕಿನ ಯೋಧರೊಬ್ಬರು ಗುಡ್ಡ ಕುಸಿದು ಶನಿವಾರ ಮೃತಪಟ್ಟಿದ್ದಾರೆ.

    ಅತ್ನಿ ಗ್ರಾಮದ 38 ವರ್ಷದ ಮಲ್ಲೇಶ್ ಮೃತ ಯೋಧ. ಮಲ್ಲೇಶ್ ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಲ್ಲೇಶ್ ಅವರ ಕರ್ತವ್ಯದ ಅವಧಿ ಕೊನೆಗೊಂಡಿದ್ದರೂ ದೇಶ ಸೇವೆ ಮಾಡುವ ಹಂಬಲದಿಂದ ಮತ್ತೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಗಡಿ ಭಾಗಕ್ಕೆ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಪೆಟ್ರೋಲ್ ಬಂಕರ್ ವಾಹನದಲ್ಲಿ ತೆರಳುತ್ತಿದ್ದ ವೇಳೆ ಗುಡ್ಡ ಕುಸಿದು ಯೋಧ ಮಲ್ಲೇಶ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಗಾಯಾಳು ಯೋಧರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯೋಧ ಮಲ್ಲೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ವೀರಯೋಧ ಮಲ್ಲೇಶ್ ಅತ್ನಿ ಗ್ರಾಮದ ನಿವಾಸಿ ದಿ. ಮಲ್ಲೇಗೌಡ ಮತ್ತು ಪುಟ್ಟಮ್ಮ ದಂಪತಿಯ ಕೊನೆಯ ಪುತ್ರರಾಗಿದ್ದಾರೆ. ಯೋಧ ಪತ್ನಿ ಪೂರ್ಣಿಮಾ, ಮಕ್ಕಳಾದ ಋತ್ವಿಕ್, ಸಹನ್‍ರನ್ನು ಅಗಲಿದ್ದಾರೆ. ದೇಶಕ್ಕಾಗಿ ಮಡಿದ ಯೋಧನ ಸ್ವಗ್ರಾಮದಲ್ಲಿ ದುಃಖ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ಸಂಜೆ ಅಥವಾ ಮಂಗಳವಾರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವುದಾಗಿ ಮೂಲಗಳು ತಿಳಿಸಿವೆ.

  • ಕೆ.ಜಿ ಗಟ್ಟಲೇ ಚಿನ್ನ ಧರಿಸ್ತಿದ್ದ ಗೋಲ್ಡನ್ ಬಾಬಾ ಸಾವು

    ಕೆ.ಜಿ ಗಟ್ಟಲೇ ಚಿನ್ನ ಧರಿಸ್ತಿದ್ದ ಗೋಲ್ಡನ್ ಬಾಬಾ ಸಾವು

    – 27 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್
    – ಬಿಎಂಡಬ್ಲ್ಯು, ಫಾರ್ಚೂನರ್, ಆಡಿ ಕಾರ್‌ಗಳ ಮಾಲೀಕ

    ನವದೆಹಲಿ: ಪೂರ್ವ ದೆಹಲಿಯ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದ ಸುಧೀರ್ ಕುಮಾರ್ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ನಿಧನರಾಗಿದ್ದಾರೆ.

    ಬಾಬಾ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೋಲ್ಡನ್ ಬಾಬಾ ಮೃತಪಟ್ಟಿದ್ದಾರೆ.

    ಕೊನೆಯ ಬಾರಿಗೆ ಬಾಬಾ 20 ಕೆಜಿ ಚಿನ್ನದ ಆಭರಣಗಳನ್ನು ಧರಿಸಿ ಕನ್ವರ್ ಯಾತ್ರೆಗೆ ಹೋಗಿದ್ದರು. ಐಷಾರಾಮಿ ವಸ್ತುಗಳನ್ನು ಇಷ್ಟಪಡುವ ಗೋಲ್ಡನ್ ಬಾಬಾ 27 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಮತ್ತು ಬಿಎಂಡಬ್ಲ್ಯು, ಫಾರ್ಚೂನರ್ ಮತ್ತು ಆಡಿ ಕಾರುಗಳನ್ನು ಇಟ್ಟುಕೊಂಡಿದ್ದರು. ಬಾಬಾಗೆ ಐಷಾರಾಮಿ ಜೀವನದ ಮೇಲೆ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಉಂಗುರು, ಕುತ್ತಿಗೆಗೆ ಅನೇಕ ಸರ, ವಾಚ್, ಬಾಬಾ ಚಿನ್ನದ ಜಾಕೆಟ್ ಕೂಡ ಧರಿಸಿದ್ದರು.

    ಗೋಲ್ಡನ್ ಬಾಬಾ ಮೂಲತಃ ಘಾಜಿಯಾಬಾದ್‍ನವರಾಗಿದ್ದು, ಸನ್ಯಾಸತ್ವ ಸ್ವೀಕರಿಸುವ ಮೊದಲು ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಸನ್ಯಾಸಿಯಾದ ಮೇಲೆ ಗಾಂಧಿ ನಗರದದಲ್ಲಿ ಬಾಬಾ ಆಶ್ರಮ ನಿರ್ಮಿಸಿದ್ದರು. ಬಾಬಾ ಕನ್ವರ್ ಯಾತ್ರೆಗೆ ಪ್ರಯಾಣಿಸುವಾಗಲೆಲ್ಲಾ ಅಪಾರ ಚಿನ್ನ ಧರಿಸಿಕೊಂಡು ಹೊರಗೆ ಹೋಗುತ್ತಿದ್ದರು. ಈ ವೇಳೆ ಸುಮಾರು 30 ಮಂದಿ ಅಂಗರಕ್ಷಕರು ಅವರ ರಕ್ಷಣೆಗೆಂದು ಹೋಗುತ್ತಿದ್ದರು.

    ಬಾಬಾ ಮೇಲೆ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧ ಅಪಹರಣ, ಬೆದರಿಕೆ, ಸುಲಿಗೆ, ಕೊಲೆ ಮುಂತಾದ ಹಲವಾರು ಪ್ರಕರಣಗಳು ದಾಖಲಾಗಿವೆ. ಬಾಬಾ ದೇಹದ ಮೇಲೆ ಯಾವಾಗಲೂ ಅಪಾರ ಚಿನ್ನದ ಆಭರಣಗಳು ಇರುತ್ತಿದ್ದವು.

    ಬಾಬಾ ಕನ್ವಾರ ಯಾತ್ರೆಗಾಗಿ ಪ್ರತಿವರ್ಷ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಅಷ್ಟು ಹಣ ಎಲ್ಲಿಂದ ಬರುತ್ತದೆ ಎಂದು ಯಾರಾದರೂ ಬಾಬಾರನ್ನು ಕೇಳಿದಾಗ, ಅವರಿಗೆ ಭೋಲೆನಾಥ್ ಅವರ ಅನುಗ್ರಹ ಎಂದು ಉತ್ತರ ಕೊಡುತ್ತಿದ್ದರಂತೆ. ಘಾಜಿಯಾಬಾದ್‍ನ ಇಂದಿರಾಪುರಂನಲ್ಲಿ ಬಾಬಾಗೆ ಮನೆ ಇದೆ.

  • ಕೊರೊನಾಗೆ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಬಲಿ

    ಕೊರೊನಾಗೆ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಬಲಿ

    ಬಾಲಗಕೋಟೆ: ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿದಿದ್ದು, ಕೋವಿಡ್‍ಗೆ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಬಲಿಯಾಗಿದ್ದಾರೆ.

    59 ವರ್ಷದ ಸಮುದಾಯ ಆರೋಗ್ಯ ಕೇಂದ್ರದ (ಸರ್ಕಾರಿ ಆಸ್ಪತ್ರೆ) ಡಿ ದರ್ಜೆ ನೌಕರ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯ ಗುಳೇದಗುಡ್ಡ ನೌಕರ ಕಳೆದ ನಾಲ್ಕು ದಿನದ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.

    ಜೂನ್ 27 ರಂದು ಕೊರೊನಾ ದೃಢಪಟ್ಟಿತ್ತು. ಒಂದು ದಿನದಿಂದ ವೆಂಟಿಲೇಟರ್ ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಪಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಹೀಗಾಗಿ ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಬಾಗಲಕೋಟೆ ಡಿಹೆಚ್‍ಒ ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ.

    ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಗೆ ಐವರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13,190ಕ್ಕೇರಿಕೆಯಾಗಿದ್ದು, ಭಾನುವಾರ ಒಂದೇ ದಿನ 16 ಮಂದಿ ಸಾವನ್ನಪ್ಪಿದ್ದಾರೆ. 220 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 5,472 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಐಸಿಯುವಲ್ಲಿ 243 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ಕೋಲಾರದಲ್ಲಿ ಕೊರೊನಾಗೆ ಮೊದಲ ಬಲಿ

    ಕೋಲಾರದಲ್ಲಿ ಕೊರೊನಾಗೆ ಮೊದಲ ಬಲಿ

    ಕೋಲಾರ: ಹೆಮ್ಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಮುಂದುರಿಸಿದ್ದು, ಕೋಲಾರದಲ್ಲಿ ಚಿಕಿತ್ಸೆ ಫಕಲಾರಿಯಾಗದೆ ಕೊರೊನಾಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

    ಜಿಲ್ಲೆಯ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ ರೋಗಿ 8495, 43 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಕಳೆದ ಒಂದು ವಾರದಿಂದ ಜಾಲಪ್ಪಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಕೆಜಿಎಫ್ ತಹಶೀಲ್ದಾರ್ ರಮೇಶ್ ಮಾಹಿತಿ ನೀಡಿದ್ದಾರೆ.

    ಕಳೆದ 10 ದಿನಗಳ ಹಿಂದೆ ದೆಹಲಿಯಿಂದ ತೂಕಲ್ಲು ಗ್ರಾಮಕ್ಕೆ ಮದುವೆಗೆಂದು ಮಹಿಳೆ ಆಗಮಿಸಿದ್ದರು. ಈ ವೇಳೆ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರು ಜಾಲಪ್ಪಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ. ಈ ಮೂಲಕ ಕೋಲಾರ ಜಿಲ್ಲೆಯಲ್ಲಿ ಆತಂಕ ಮೂಡಿದೆ.

    ಕೋಲಾರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೊಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 81 ಜನ ಸೋಂಕಿತರ ಪೈಕಿ, ಜಾಲಪ್ಪ ಆಸ್ಪತ್ರೆಯಲ್ಲಿಯೇ 14 ಜನ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ.

  • ಕರ್ತವ್ಯದಲ್ಲಿದ್ದಾಗಲೇ ತಲೆ ಸುತ್ತಿ ಬಿದ್ದ ವೈದ್ಯ- ಚಿಕಿತ್ಸೆ ಫಲಕಾರಿಯಾಗದೆ ಸಾವು

    ಕರ್ತವ್ಯದಲ್ಲಿದ್ದಾಗಲೇ ತಲೆ ಸುತ್ತಿ ಬಿದ್ದ ವೈದ್ಯ- ಚಿಕಿತ್ಸೆ ಫಲಕಾರಿಯಾಗದೆ ಸಾವು

    – ಕೊರೊನಾ ವಿರುದ್ಧ ದಣಿವರಿಯದೆ ಕೆಲಸ ಮಾಡಿದ್ದ ಶಿವಕಿರಣ್

    ಹಾಸನ: ಕೊರೊನಾ ವಿರುದ್ಧ ಧಣಿವರಿಯದೆ ಕೆಲಸ ಮಾಡಿದ್ದ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಅನಾರೋಗ್ಯದಿಂದ ಕುಸಿದು ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಜಿಲ್ಲೆಯ ಆಲೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಕಿರಣ್ ಮೃತ ದುರ್ದೈವಿ ಡಾಕ್ಟರ್. ಕೊರೊನಾ ವಿರುದ್ಧ ವೈದ್ಯ ಶಿವಕಿರಣ್ ರಜೆಯಿಲ್ಲದೇ ನಿರಂತರವಾಗಿ ಕೆಲಸ ಮಾಡಿದ್ದರು. ಕೆಲಸದ ಸಮಯದಲ್ಲಿ ತಲೆನೋವಿನಿಂದ ಬಳಲಿದ್ದ ವೈದ್ಯ ಶಿವಕಿರಣ್ ಸಹೋದ್ಯೋಗಿಗಳ ಬಳಿ ಈ ಬಗ್ಗೆ ಹೇಳಿಕೊಂಡಿದ್ದರು. ಆದರೆ ಕಳೆದು ಐದು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಶಿವಕಿರಣ್ ತಲೆ ಸುತ್ತಿ ಬಿದ್ದಿದ್ದರು.

    ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 5 ದಿನ ವೆಂಟಿಲೇಶನ್‍ನಲ್ಲಿ ಇದ್ದ ವೈದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕೊರೊನಾ ಸಮಯದಲ್ಲಿ ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಮೃತ ವೈದ್ಯರ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ.

  • ಆಸ್ಪತ್ರೆಯಲ್ಲಿಯೇ ರೋಗಿ ನೇಣಿಗೆ ಶರಣು- ವೈದ್ಯರ ವಿರುದ್ಧ ನಿಷ್ಕಾಳಜಿ ಆರೋಪ

    ಆಸ್ಪತ್ರೆಯಲ್ಲಿಯೇ ರೋಗಿ ನೇಣಿಗೆ ಶರಣು- ವೈದ್ಯರ ವಿರುದ್ಧ ನಿಷ್ಕಾಳಜಿ ಆರೋಪ

    ಗದಗ: ಲಿವರ್ ಸಮಸ್ಯೆ ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ನಗರದ ಕಣ್ಯಾಳ ಅಗಸಿ ನಿವಾಸಿ ರಾಘವೇಂದ್ರ ಗೋಕಾಕ್ (34) ಆತ್ಮಹತ್ಯೆಗೆ ಶರಣಾದ ರೋಗಿ. ರಾಘವೇಂದ್ರ ಅನೇಕ ವರ್ಷಗಳಿಂದ ಲಿವರ್ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಹತ್ತಾರು ದಿನಗಳಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಮಾನಸಿಕ ಅಸ್ವಸ್ಥ ಎಂದುಕೊಂಡು ರಾಘವೇಂದ್ರ ಅವರಿಗೆ ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಕೊರೊನಾ ಬಂದಾಗಿನಿಂದ ಜಿಮ್ಸ್ ಸಿಬ್ಬಂದಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇದರಿಂದ ಸಾಕಷ್ಟು ರೋಗಿಗಳು ಪರದಾಡುವ ಪರಸ್ಥಿತಿ ಎದುರಾಗಿ ಎಂಬ ರಾಘವೇಂದ್ರ ಸಂಬಂಧಿಕರು ಆರೋಪಿದ್ದಾರೆ.

    ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಗದಗ ಗ್ರಾಮೀಣ ಠಾಣೆ ಪಿಎಸ್‍ಐ ಮಲ್ಲಿಕಾರ್ಜುನ ಕುಲಕರ್ಣಿ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಟಾಫ್ ನರ್ಸ್ ಹಾಗೂ ಡ್ಯೂಟಿ ಡಾಕ್ಟರ್ ಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

  • ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಬಳಸಿಕೊಳ್ಳಲು ಸರ್ಕಾರದ ಪ್ಲಾನ್- ದುಬಾರಿ ದರದ ಟೆನ್ಶನ್

    ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಬಳಸಿಕೊಳ್ಳಲು ಸರ್ಕಾರದ ಪ್ಲಾನ್- ದುಬಾರಿ ದರದ ಟೆನ್ಶನ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾ ಸ್ಫೋಟ ಆಗುತ್ತಿದೆ. ಇನ್ನೂ ಅರ್ಧಲಕ್ಷ ಸ್ಯಾಂಪಲ್ ಟೆಸ್ಟ್‌ಗಳ ವರದಿ ಬರಬೇಕಿದೆ. ಮುಂಬೈನಿಂದ ಒಂದೂವರೆ ಲಕ್ಷ ಮಂದಿ ಕನ್ನಡಿಗರು ರಾಜ್ಯಕ್ಕೆ ಬರಲು ಸಜ್ಜಾಗಿದ್ದಾರೆ. ಕೊರೊನಾ ಸ್ಫೋಟದ ಸದ್ಯದ ತೀವ್ರತೆ ಗಮನಿಸಿದರೆ ಮುಂದಿನ 10 ದಿನದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟಬಹುದು ಎಂದು ಅಂದಾಜಿಸಲಾಗಿದೆ.

    ಕೊರೊನಾ ಸೋಂಕಿತರಿಗೆ ಎಲ್ಲಿ ಹೇಗೆ ಚಿಕಿತ್ಸೆ ಕೊಡಬೇಕು ಎಂದು ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿದೆ. 7 ಸಾವಿರ ಬೆಡ್‍ಗಳನ್ನು ರೆಡಿ ಮಾಡಿದೆ. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು ದೇಶದಲ್ಲಿ ಎಲ್ಲೂ ಇರದ ದುಬಾರಿ ದರಗಳನ್ನು ಕೊರೊನಾ ಚಿಕಿತ್ಸೆಗೆ ನಿಗದಿ ಮಾಡಲು ಮುಂದಾಗಿದೆ. ಈ ಬಗ್ಗೆ ‘ಪಬ್ಲಿಕ್ ಟಿವಿ’ ಸರ್ಕಾರವನ್ನು ಪ್ರಶ್ನೆ ಮಾಡಿದೆ.

    ಕೊರೊನಾ ತಾಂಡವ ಆಡುತ್ತಿರುವ ಮಹಾರಾಷ್ಟ್ರದಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಇಷ್ಟೊಂದು ದರ ಇಲ್ಲ. ನಮ್ಮ ರಾಜ್ಯದಲ್ಲೇಕೆ ದುಪ್ಪಟ್ಟು ದರ ವಿಧಿಸಲು ಖಾಸಗಿ ಆಸ್ಪತ್ರೆಗಳು ಮುಂದಾಗುತ್ತಿದೆ ಎನ್ನುವ ಪ್ರಶ್ನೆಯನ್ನ ಪಬ್ಲಿಕ್ ಟಿವಿ ಸರ್ಕಾರದ ಮುಂದಿಟ್ಟಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಖಾಸಗಿ ಆಸ್ಪತ್ರೆಗಳ ಪ್ರಸ್ತಾಪಿತ ದರವನ್ನು ಸರ್ಕಾರ ಒಪ್ಪಲು ಆಗಲ್ಲ. ಯಾವುದೇ ಕಾರಣಕ್ಕೂ ಅವರು ಹೇಳಿದ ದರ ಫಿಕ್ಸ್ ಮಾಡಲ್ಲ. ಶೀಘ್ರವೇ ಸರ್ಕಾರವೇ ಕೊರೊನಾ ಚಿಕಿತ್ಸೆಗೆ ಒಂದು ದರ ನಿಗದಿ ಮಾಡಲಿದೆ. ಒಂದು ಸಣ್ಣ ಕಂಪ್ಲೆಂಟ್ ಬಂದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಖಾಸಗಿ ಆಸ್ಪತ್ರೆಗಳ ಪ್ರಸ್ತಾಪಿತ ದರ:
    > ಜನೆರಲ್ ವಾರ್ಡ್ – 10,000 ರೂ.
    > ಸ್ಪೆಷಲ್ ವಾರ್ಡ್ – 20,000 ರೂ.
    > ಐಸಿಯು ವಾರ್ಡ್ – 25,000 ರೂ.
    > ವೆಂಟಿಲೇಟರ್ – 35,000 ರೂ.

    ಆದರೆ ಕೊರೋನಾ ಪೀಡಿತ ಮಹಾರಾಷ್ಟ್ರದಲ್ಲಿ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದರ ಭಾರೀ ಕಡಿಮೆ ಇದೆ.

    ‘ಮಹಾ’ ಖಾಸಗಿ ಆಸ್ಪತ್ರೆಗಳ ದರ:
    > ಜನೆರಲ್ ವಾರ್ಡ್ – 4,000 ರೂ.
    > ಸ್ಪೆಷಲ್ ವಾರ್ಡ್ – 6,000 ರೂ.
    > ಐಸಿಯು ವಾರ್ಡ್ – 7,500 ರೂ.
    > ವೆಂಟಿಲೇಟರ್ – 9,000 ರೂ.

  • ಕಂಟೈನ್ಮೆಂಟ್ ಝೋನ್‍ದಿಂದ ಬಂದ ಗರ್ಭಿಣಿಯನ್ನು ಅಡ್ಮಿಟ್ ಮಾಡ್ಕೊಳ್ಳಲು ಆಸ್ಪತ್ರೆಗಳು ನಕಾರ

    ಕಂಟೈನ್ಮೆಂಟ್ ಝೋನ್‍ದಿಂದ ಬಂದ ಗರ್ಭಿಣಿಯನ್ನು ಅಡ್ಮಿಟ್ ಮಾಡ್ಕೊಳ್ಳಲು ಆಸ್ಪತ್ರೆಗಳು ನಕಾರ

    – ನರಳಿ ನರಳಿ ಸಾವನ್ನಪ್ಪಿದ 6 ತಿಂಗಳ ಗರ್ಭಿಣಿ
    – ಖಾಸಗಿ ಆಸ್ಪತ್ರೆ ಮುಂದೆಯೇ ಪ್ರಾಣ ಬಿಟ್ಟ ಮಹಿಳೆ

    ಲಕ್ನೋ: ಕಂಟೈನ್ಮೆಂಟ್ ಝೋನ್‍ನಿಂದ ಬಂದ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ 6 ತಿಂಗಳ ಗರ್ಭಿಣಿ ನರಳಿ ನರಳಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಸಾವನ್ನಪ್ಪಿದ ಗರ್ಭಿಣಿಯನ್ನು 28 ವರ್ಷದ ಅರ್ಷಿ ಎಂದು ಗುರುತಿಸಲಾಗಿದೆ. ಅರ್ಷಿ ಉತ್ತರ ಪ್ರದೇಶದ ಪಿಲಿಭಿತ್‍ನ ಫೀಲ್‍ಖಾನಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆಕೆಯ ಪತಿಯನ್ನು ಶಿರಾಜುದ್ದೀನ್ ಎಂದು ಗುರುತಿಸಲಾಗಿದೆ. ಈ ವಲಸೆ ಕಾರ್ಮಿಕ ದಂಪತಿ ಈ ಪ್ರದೇಶಕ್ಕೆ ಬಂದ ನಂತರ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿತ್ತು.

    ಆರು ತಿಂಗಳ ಗರ್ಭಿಣಿಯಾಗಿದ್ದ ಅರ್ಷಿ ರಂಜಾನ್ ತಿಂಗಳಲ್ಲಿ ಉಪವಾಸ ಮಾಡಿ ತುಂಬಾ ವೀಕ್ ಆಗಿದ್ದರು. ಈ ಕಾರಣದಿಂದ ಮನೆಯಲ್ಲಿ ಕುಸಿದು ಬಿದ್ದ ಅರ್ಷಿಯನ್ನು ಆಕೆಯ ಗಂಡ ಶಿರಾಜುದ್ದೀನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅವರು ಕಂಟೈನ್ಮೆಂಟ್ ಝೋನ್‍ನಿಂದ ಬಂದ ಕಾರಣ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಾವು ಅಡ್ಮಿಟ್ ಮಾಡಿಕೊಳ್ಳಲ್ಲ, ಚಿಕಿತ್ಸೆ ನೀಡಲ್ಲ ಎಂದು ನಿರಾಕರಿಸಿದ್ದಾರೆ.

    ಶಿರಾಜುದ್ದೀನ್ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಆಸ್ಪತ್ರೆಯವರು ಈ ಸಮಯದಲ್ಲಿ ಕಂಟೈನ್ಮೆಂಟ್ ಏರಿಯಾದಿಂದ ಬಂದ ಯಾರಿಗೂ ನಾವು ಚಿಕಿತ್ಸೆ ನೀಡಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಿಮ್ಮ ಪತ್ನಿಗೆ ಚಿಕಿತ್ಸೆ ಬೇಕು ಎಂದರೆ ಜಿಲ್ಲಾಧಿಕಾರಿಗಳ ಬಳಿ ಪತ್ರವನ್ನು ಬರೆಸಿಕೊಂಡು ಬನ್ನಿ ನಂತರ ನಾವು ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮೃತಳ ಪತಿ ಶಿರಾಜುದ್ದೀನ್, ನನ್ನ ಹೆಂಡತಿ ಪ್ರಾಣವನ್ನು ಉಳಿಸಿ ಎಂದು ನಾನು ವೈದ್ಯರನ್ನು ಬೇಡಿಕೊಂಡಿದ್ದೆ. ನಾನು ಎಷ್ಟೇ ಬೇಡಿಕೊಂಡರೂ ವೈದ್ಯರ ಮನಸ್ಸು ಕರಗಲಿಲ್ಲ. ಅವರು ನನ್ನ ಪತ್ನಿಯನ್ನು ಮುಟ್ಟಿಕೂಡ ನೋಡಲಿಲ್ಲ. ಆದ್ದರಿಂದ ನನ್ನ ಪತ್ನಿ ಖಾಸಗಿ ಆಸ್ಪತ್ರೆ ಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಳು ಎಂದು ಕಣ್ಣೀರು ಹಾಕಿದ್ದಾರೆ.

    ಈ ವಿಚಾರದ ಬಗ್ಗೆ ಖಾಸಗಿ ಆಸ್ಪತ್ರೆ ಮಾಲೀಕರು ಮಾತನಾಡಿ, ಖಾಸಗಿ ಆಸ್ಪತ್ರೆಗಳು ತುಂಬ ಒತ್ತಡದಿಂದ ಕಾರ್ಯನಿರ್ವಹಿಸುತ್ತಿವೆ. ಒಂದು ವೇಳೆ ಕೊರೊನಾ ಸೋಂಕಿತರನ್ನು ನಾವು ಚಿಕಿತ್ಸೆ ಮಾಡಿದರೆ ಜಿಲ್ಲಾಡಳಿತ ನಮ್ಮ ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಸೀಮಾ ಅಗ್ರವಾಲ್ ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ ಕೊರೊನಾ ಸೋಂಕಿತೆಗೆ ಹೆರಿಗೆ – ಜನ್ಮ ಕೊಟ್ಟ ತಕ್ಷಣ ತಾಯಿ, ಮಗು ಪ್ರತ್ಯೇಕಿಸಿ ಚಿಕಿತ್ಸೆ

    ಬೆಂಗ್ಳೂರಲ್ಲಿ ಕೊರೊನಾ ಸೋಂಕಿತೆಗೆ ಹೆರಿಗೆ – ಜನ್ಮ ಕೊಟ್ಟ ತಕ್ಷಣ ತಾಯಿ, ಮಗು ಪ್ರತ್ಯೇಕಿಸಿ ಚಿಕಿತ್ಸೆ

    ಬೆಂಗಳೂರು: ಪಾದರಾಯನಪುರ ನಿವಾಸಿ 34 ವರ್ಷದ ಕೊರೊನಾ ಸೋಂಕಿತ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಹುಟ್ಟಿದ ಮಗುವನ್ನು ವೈದ್ಯರು ತಾಯಿಯಿಂದ ಬೇರೆ ಮಾಡಿದ್ದಾರೆ. ಇದೀಗ ಒಂದು ದಿನದ ಮಗುವಿಗೂ ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಮಗುವಿನ ಗಂಟಲು ದ್ರವ ತೆಗೆದುಕೊಂಡು ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.

    ಮಗುವನ್ನ ಐಸೂಲೇಷನ್ ವಾರ್ಡಿನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡಿನಲ್ಲಿ ಇರಿಸಲಾಗಿದೆ. ಈ ಮೂಲಕ ಕೊರೊನಾ ಮಹಾ ಮಾರಿಯಿಂದ ತಾಯಿ, ಮಗು ದೂರ ದೂರವಾಗಿದ್ದಾರೆ. ತಂದೆ-ತಾಯಿ ಅಪ್ಪುಗೆಯಲ್ಲಿ ಇರಬೇಕಾದ ಮಗು ಈಗ ಐಸೂಲೇಷನ್ ವಾರ್ಡಿನಲ್ಲಿದೆ.

    ಮಗುವಿಗೆ ಚಿಕಿತ್ಸೆ ಹೇಗೆ?
    ಮೊದಲಿಗೆ ಮಗುವಿನ ಗಂಟಲು ದ್ರವವನ್ನು ತೆಗೆದುಕೊಂಡು ವೈದ್ಯರು ಪರೀಕ್ಷೆ ಮಾಡಿದ್ದಾರೆ. ಗಂಟಲು ದ್ರವ ಪರೀಕ್ಷೆ ಬಳಿಕ ಎರಡನೇ ಹಂತವಾಗಿ ಕಂದಮ್ಮನ ರಕ್ತವನ್ನು ತೆಗೆದುಕೊಂಡು ಪರೀಕ್ಷೆಗೆ ಕಳಿಸಲಿದ್ದಾರೆ. ಅಲ್ಲದೇ ಉಸಿರಾಟದ ಸಮಸ್ಯೆ ಇದಿಯಾ ಎಂದು ಪರೀಕ್ಷೆ ಮಾಡುತ್ತಾರೆ. ನಂತರ ನ್ಯೂಮೋನಿಯಾ ಚೆಕ್ ಮಾಡಲಿದ್ದಾರೆ. ಒಂದು ದಿನದ ಕಂದಮ್ಮನಿಗೆ ಯಾವ ಸಮಸ್ಯೆ ಪತ್ತೆಯಾಗುತ್ತೋ ಆ ಸಮಸ್ಯೆಗೆ ವೈದ್ಯರು ಚಿಕಿತ್ಸೆ ನೀಡುತ್ತಾರೆ.

    ಅಮ್ಮನ ಅಪ್ಪುಗೆಯಲ್ಲಿ ಇರಬೇಕಾದ ಒಂದು ದಿನದ ಮಗುವಿಗೆ ಹೈ ಟ್ರೀಟ್‍ಮೆಂಟ್ ನೀಡಲಾಗುತ್ತದೆ. ಈ ಸಮಯದಲ್ಲಿ ತಾಯಿ ಎದೆ ಹಾಲಿನಿಂದ ಕೊರೊನಾ ಹರಡಲ್ಲ. ಬದಲಾಗಿ ತಾಯಿ ಹತ್ತಿರದಿಂದ ಮಗುವಿಗೆ ಹಾಲು ಕೊಡುವುದರಿಂದ ಉಸಿರಾಟದ ಮೂಲಕ ಕೊರೊನಾ ಹರಡುತ್ತೆ. ಹೀಗಾಗಿ ತಾಯಿ ಮಗುವನ್ನ ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಗುವಿಗೆ ಹಾಲಿನ ಪೌಡರ್ ನೀಡಲಾಗುತ್ತಿದ್ದು, ಮಗು ಹುಟ್ಟಿದಾಗಲೇ 3 ಕೆ.ಜಿ ಇದೆ ಎಂದು ವೈದ್ಯರು ತಿಳಿಸಿದ್ದಾರೆ.