Tag: treasure

  • ನಿಧಿಗಾಗಿ ದೇವಸ್ಥಾನದ ಬಳಿಯೇ ವಾಮಾಚಾರ ಮಾಡಿ 8 ಅಡಿ ಸುರಂಗ ತೆಗೆದ ಕಳ್ಳರು

    ನಿಧಿಗಾಗಿ ದೇವಸ್ಥಾನದ ಬಳಿಯೇ ವಾಮಾಚಾರ ಮಾಡಿ 8 ಅಡಿ ಸುರಂಗ ತೆಗೆದ ಕಳ್ಳರು

    ಮಂಡ್ಯ: ಕಳ್ಳರ ತಂಡವೊಂದು ನಿಧಿಗಾಗಿ ಪುರಾತನ ದೇವಸ್ಥಾನದ ಬಳಿ ವಾಮಾಚಾರ ಮಾಡಿಸಿದ್ದು, ದೇವರ ವಿಗ್ರಹವಿದ್ದ ಜಾಗದಲ್ಲಿ ಎಂಟು ಅಡಿ ಸುರಂಗ ತೆಗೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಕಳ್ಳರು ನಿಧಿಗಾಗಿ ಸುರಂಗ ತೆಗೆದಿದ್ದಾರೆ. ಮೊದಲು ಶಿವನ ವಿಗ್ರಹದ ಸುತ್ತ ವಾಮಾಚಾರ ಮಾಡಿ ನಂತರ ವಿಗ್ರಹವನ್ನ ಪಕ್ಕಕ್ಕೆ ಸರಿಸಿದ್ದಾರೆ. ಬಳಿಕ ವಿಗ್ರಹವಿದ್ದ ಜಾಗದಲ್ಲಿ ಸುಮಾರು ಎಂಟು ಅಡಿಯಷ್ಟು ಸುರಂಗ ತೆಗೆದಿದ್ದಾರೆ.

    ಕಳ್ಳರು ಸುರಂಗ ತೆಗೆದರೂ ಏನು ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ಜಾಗದಲ್ಲಿ ನಿಧಿ ಇರುವುದಾಗಿ ಗ್ರಾಮದಲ್ಲಿ ಮಾತುಗಳು ಕೇಳಿಬರುತ್ತಿದ್ದವು. ಈ ಹಿಂದೆಯೂ ನಿಧಿಗಾಗಿ ಶೋಧ ಕಾರ್ಯ ಮಾಡಲಾಗಿತ್ತು.

    ಈ ಹಿನ್ನೆಲೆಯಲ್ಲಿ ಯಾರೋ ಮಾಹಿತಿ ತಿಳಿದಿರುವ ವ್ಯಕ್ತಿಗಳೇ ಈ ಕೃತ್ಯ ಮಾಡಿರಬಹುದು ಅಂತಾ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದು, ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

    ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

    ತುಮಕೂರು: ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದ ವಂಚಕರ ತಂಡವೊಂದನ್ನು ತುಮಕೂರು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಇನ್ಸ್ ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ರಮೇಶ್ ಮತ್ತು ಹರೀಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಚಂದನ್ ಪರಾರಿಯಾಗಿದ್ದಾನೆ. ತುಮಕೂರು ಹೊರವಲಯದ ಯಲ್ಲಾಪುರದ ನಿವಾಸಿಗಳಾದ ಈ ವಂಚಕರ ತಂಡ ಕಳೆದ ಒಂದು ತಿಂಗಳಿನಿಂದ ನಗರದ ಹಲವರಿಗೆ ಫೋನ್ ಮಾಡಿ ನಿಧಿ ಸಿಕ್ಕಿದೆ, ಬೇಕಾದರೆ 2 ಲಕ್ಷ ರೂ. ತಗೊಂಡು ಬನ್ನಿ ಎಂದು ಹೇಳಿ ವಂಚಿಸುತ್ತಿದ್ದರು.

    ಸಾರ್ವಜನಿಕರ ದೂರಿನ ಮೇರೆಗೆ ಗ್ರಾಹಕರ ಸೋಗಿನಲ್ಲಿ ಹೋದ ಡಿಸಿಬಿ ಪೊಲೀಸರು ಯಲ್ಲಾಪುರದ ನಿರ್ಜನ ಪ್ರದೇಶದಲ್ಲಿ ನಿಧಿ ಮಾರಲು ಕಾಯುತಿದ್ದ ತಂಡದ ಮೇಲೆ ದಾಳಿ ನಡೆಸಿದೆ. ಅಲ್ಲದೆ ಈ ವಂಚಕರು ಚಿನ್ನದ ನಾಣ್ಯದ ಬದಲು ಪಾತ್ರೆಯ ಇದ್ದಿಲು ತುಂಬಿಕೊಂಡು ಬಂದಿದ್ದು ಪತ್ತೆಯಾಗಿದೆ. ಇದ್ದಿಲು ತುಂಬಿದ ಪಾತ್ರೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ನಿಧಿ ಆಸೆಗಾಗಿ ಕರಗುತ್ತಿದೆ ಐತಿಹಾಸಿಕ ಗುಳೇದಗುಡ್ಡ ಬೆಟ್ಟ

    ನಿಧಿ ಆಸೆಗಾಗಿ ಕರಗುತ್ತಿದೆ ಐತಿಹಾಸಿಕ ಗುಳೇದಗುಡ್ಡ ಬೆಟ್ಟ

    ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡ ಬೆಟ್ಟದಲ್ಲಿ ಇಂದು ನಿಧಿಯಿದೆ ಅಂತಾ ಹೇಳಿ ಬೆಟ್ಟವನ್ನು ಅಗಿಯಲಾಗುತ್ತಿದೆ. ಅಚ್ಚರಿ ಅಂದ್ರೆ ಯಾರೂ ಅಡ್ಡಿ ಮಾಡಬಾರದು ಅಂತಾ ವಾಮಾಚಾರ ಮಾಡಿ ಬೆಟ್ಟ ಅಗೆದು ನಿಧಿ ಹುಡುಕಾಡುತ್ತಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಐತಿಹಾಸಿಕ ಪರಂಪರೆಯ ಗುಳೇದಗುಡ್ಡಕ್ಕೆ ವಾಮಾಚಾರದ ಕಾಟ ಶುರುವಾಗಿದೆ. ಗುಳೇದಗುಡ್ಡ ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಟ್ಟ 500 ಅಡಿ ಎತ್ತರವನ್ನು ಹೊಂದಿದೆ. ಚಾಲುಕ್ಯರ ಕುರುಹುಗಳಿರುವ ಈ ಬೆಟ್ಟದಲ್ಲಿ ಅಪಾರ ಐಶ್ವರ್ಯ ಸಂಪತ್ತಿದೆ ಎಂದು ಬೆಟ್ಟವನ್ನು ದುಷ್ಕರ್ಮಿಗಳು ಅಗೆಯಲಾರಂಭಿಸಿದ್ದಾರೆ. ಹೀಗಾಗಿ ಇತಿಹಾಸದ ಕುರುಹುಗಳು ನಾಶವಾಗ್ತಿರೋದ್ರ ಜೊತೆ ಸನಾತನ ಧರ್ಮದ ದೇವರ ಮೂರ್ತಿಗಳೂ ಹಾಳಾಗುತ್ತಿವೆ.

    ಕಳ್ಳರು ನಿಧಿ ಆಸೆಗೆ ಬೆಟ್ಟ ಅಗೆಯುತ್ತಿದ್ರೂ ಸಂಬಂಧ ಪಟ್ಟ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮಾತ್ರ ಕ್ರಮವನ್ನು ಕೈಗೊಂಡಿಲ್ಲ. ಒಟ್ಟಿನಲ್ಲಿ ನಿಧಿಗಳ್ಳರ ದುರಾಸೆಗೆ ಐತಿಹಾಸಿಕ ಬೆಟ್ಟ ಕರಗುತ್ತಿದೆ.

  • ಸಿಎಂಗೆ ಆಸೆ ಹುಟ್ಟಿಸಿದ ಯುವಕನ ಕನಸು- ನಿಧಿ ಹುಡುಕುವಂತೆ ಸರ್ಕಾರದ ಆದೇಶ

    ಸಿಎಂಗೆ ಆಸೆ ಹುಟ್ಟಿಸಿದ ಯುವಕನ ಕನಸು- ನಿಧಿ ಹುಡುಕುವಂತೆ ಸರ್ಕಾರದ ಆದೇಶ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ನಿಗೂಢ ನಿಧಿ ಹಿಂದೆ ಬಿದ್ದಿದೆ. ಬಂಗಾರದ ನಾಣ್ಯ, ಬಂಗಾರ ಸೇರಿದಂತೆ ಅಪಾರ ಸಂಪತ್ತು ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ. 29 ವರ್ಷದ ಯುವಕ ಹೇಳಿದ ಕನಸು ನಂಬಿ ಭೂಮಿ ಅಗೆಯಲು ಚಿಂತನೆ ನಡೆಸಿದೆ.

    ನನಗೆ ಕನಸು ಬಿದ್ದಿದೆ, ನನ್ನ ಕನಸಲ್ಲಿ ಅಪಾರ ಸಂಪತ್ತಿರುವ ಮಾಹಿತಿ ಸಿಕ್ಕಿದೆ. ಆ ರಹಸ್ಯ ಬಂಗಲೆಯಲ್ಲಿ ಶೋಧ ಕೈಗೊಂಡರೆ ಅಪಾರ ಪ್ರಮಾಣದ ನಿಧಿ ಸಿಗಲಿದೆ. ಆ ನಿಧಿಯನ್ನು ಈ ರಾಜ್ಯದ ಉದ್ಧಾರಕ್ಕೆ ಬಳಸಿಕೊಳ್ಳಬಹುದು ಎಂದು ತುಮಕೂರಿನ 29 ವರ್ಷದ ಪ್ರದ್ಯುಮ್ನ ಯಾದವ್ ಎಂಬ ವ್ಯಕ್ತಿ ಸಿಎಂಗೆ ಪತ್ರ ಬರೆದಿದ್ದಾರೆ.

    ಪ್ರದ್ಯುಮ್ನ ಅವರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಪ್ರಾಚೀನ ಬಂಗಲೆಯಲ್ಲಿ ಅಪಾರ ನಿಧಿಯಿರುವ ಕನಸು ಬಿದ್ದಿದೆಯಂತೆ. 2 ಬಂಗಲೆ, 6 ರೂಂಗಳಲ್ಲಿ ಅಪಾರ ಚಿನ್ನಭಾರಣ, ಸಂಪತ್ತಿದೆಯಂತೆ. 300 ವರ್ಷಗಳ ಹಿಂದೆ ಈ ಪ್ರದೇಶವನ್ನು ಆಳುತ್ತಿದ್ದ ಯದುನಂದನ ಚಿತ್ರಭೂಪಾಲ ಸಾಮ್ರಾಟ, ಸಾಮ್ರಾಜ್ಯದ ಮೇಲೆ ದಾಳಿಯಾಗುವ ಭಯದಲ್ಲಿ ಸಂಪತ್ತನ್ನು 6 ಕೋಣೆಗಳಲ್ಲಿ ಬಚ್ಚಿಟ್ಟಿದ್ದನಂತೆ.

    ಪದ್ಯುಮ್ನ ಪತ್ರದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ಮಾಡುವಂತೆ ಪ್ರಾಚ್ಯವಸ್ತು ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಕಾರ್ಯದರ್ಶಿ ಎಲ್‍ಕೆ ಅತೀಕ್ ಪತ್ರ ಬರೆದಿದ್ದಾರೆ. ಅಲ್ಲದೆ ಈ ಬಗ್ಗೆ ಪರಿಶೀಲಿಸುವಂತೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಆಂಜನೇಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿದ್ದಾರೆ.

     

     

  • ಊರಿಗೆ ಇರೋದು ಒಂದೇ ದೇವಸ್ಥಾನ: ನಿಧಿಗಾಗಿ ದೇವರ ಮೂರ್ತಿಯನ್ನ ಕದ್ದ ಕಳ್ಳರು

    ಊರಿಗೆ ಇರೋದು ಒಂದೇ ದೇವಸ್ಥಾನ: ನಿಧಿಗಾಗಿ ದೇವರ ಮೂರ್ತಿಯನ್ನ ಕದ್ದ ಕಳ್ಳರು

    ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ಕರಡಿಹಳ್ಳಿ ಗ್ರಾಮದಲ್ಲಿ ಇರೋದು ಒಂದೇ ದೇವಸ್ಥಾನ. ನಿಧಿ ಆಸೆಗಾಗಿ ಕಳ್ಳರು ದೇವಸ್ಥಾನದಲ್ಲಿರುವ ಮೂರ್ತಿಯನ್ನೇ ಕದ್ದುಕೊಂಡು ಹೋಗಿದ್ದಾರೆ.

    ಗ್ರಾಮದಲ್ಲಿ ಕೇವಲ ನಾಯಕ್ ಮತ್ತು ಭೋವಿ ಜನಾಂಗದ ಜನರೇ ವಾಸವಿದ್ದಾರೆ. ಈ ಗ್ರಾಮಸ್ಥರು ನಿತ್ಯ ಪೂಜಿಸುತ್ತಿದ್ದ ಪುರಾತನ ಕಾಲದ ವಿಜಯನಗರದ ಅರಸರ ಕಾಲದ ಈಶ್ವರ ದೇವಾಲಯದಲ್ಲಿನ ಬಸವಣ್ಣನ ಮೂರ್ತಿಯನ್ನೇ ಮಾರ್ಚ್ 17 ರಂದು ಕಳ್ಳರು ಕಳ್ಳತನ ಮಾಡಿದ್ದಾರೆ. ಹೀಗಾಗಿ ಗ್ರಾಮಸ್ಥರಿಗೆ ಪೂಜೆ ಮಾಡಲು ದೇವರ ವಿಗ್ರಹವೇ ಇಲ್ಲದಂತಾಗಿದೆ.

    ಗ್ರಾಮಸ್ಥರು ದೇವರ ಮೂರ್ತಿಯನ್ನು ಹುಡುಕಿ ಕೊಡದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಗುಡೆಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ನಿಧಿ ಆಸೆ ತೋರಿಸಿ ಚಿನ್ನದ ಒಡವೆ ಕದ್ದಿದ್ದ ಕಳ್ಳರ ಬಂಧನ

    ನಿಧಿ ಆಸೆ ತೋರಿಸಿ ಚಿನ್ನದ ಒಡವೆ ಕದ್ದಿದ್ದ ಕಳ್ಳರ ಬಂಧನ

    ಬಳ್ಳಾರಿ: ಮನೆಯಲ್ಲಿ ನಿಧಿ ತೆಗೆಯುವ ಆಸೆ ತೋರಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಹೊಸಪೇಟೆ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಜಮಖಂಡಿಯ ನಿವಾಸಿ ಕೃಷ್ಣಜೀ (45), ತೆಲಂಗಾಣದ ಆಧಿಲಾಬಾದ್ ಶೇಖ್ ರಹೀಂ(35), ರಾಯಚೂರನ ಹಾಜಿ ಬಾಬಾ(33) ಹಾಗೂ ಹೊಸಪೇಟೆ ನಗರದ ವೆಂಕಟೇಶ(43)ಬಂಧಿತ ಆರೋಪಿಗಳು. ಬಂಧಿತರಿಂದ 23 ಲಕ್ಷ ರೂಪಾಯಿ ಮೌಲ್ಯದ 800 ಗ್ರಾಂ. ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮಾರ್ಚ್ 3 ರಂದು ಹೊಸಪೇಟೆ ನಗರದ ರಾಣಿಪೇಟೆ ನಿವಾಸಿ ಎಲ್.ನಾಯಕ್ ಎಂಬವರ ಮನೆಯಲ್ಲಿ ನಿಧಿ ಎಂದು ನಂಬಿಸಿ, ಮನೆಯಲ್ಲಿದ್ದ ಚಿನ್ನದ ಒಡೆವೆಗಳನ್ನು ಪೂಜೆಗೆ ಇರಿಸಿ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೆÇಲೀಸರು, ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದರು.

    ಪೊಲೀಸ್ ಇನ್ಸ್ ಪೆಕ್ಟರ್ ಲಿಂಗನಗೌಡ ನೆಗಳೂರು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಎಸ್‍ಪಿ ಆರ್.ಚೇತನ್ ಹಾಗೂ ಹೆಚ್ಚುವರಿ ಎಸ್‍ಪಿ ಝಂಡೇಕರರ್ ಅವರು ತಂಡದ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸಿದ್ದಾರೆ.