Tag: traveling

  • ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿರುವ 73 ವರ್ಷದ ವೃದ್ಧೆ

    ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿರುವ 73 ವರ್ಷದ ವೃದ್ಧೆ

    – ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ಸಂಗ್ರಹ

    ಇಸ್ತಾಂಬುಲ್: ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡಲು ಬ್ರಿಟನ್‍ನ 73 ವರ್ಷದ ರೋಸಿ ಸ್ವೆಲ್ ಪೋಪ್ ಅವರು ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿದ್ದಾರೆ.

    ‘ರನ್ ರೋಸಿ ರನ್’ ಅಭಿಯಾನದ ಅಡಿ 2018ರಲ್ಲಿ ವಿಶ್ವದಾದ್ಯಂತ ಓಡಲು ಪ್ರಾರಂಭಿಸಿದೆ. ರಾತ್ರಿ ವೇಳೆ ನಾನು ಎಲ್ಲಿ ಮಲಗುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ಕೆಲವೊಮ್ಮೆ ಹೊಲದಲ್ಲಿ, ಬೀದಿಗಳಲ್ಲಿ ಮಲಗುತ್ತೇನೆ. ಮತ್ತೆ ಬೆಳಿಗ್ಗೆ ಎದ್ದು ಓಡಲು ಪ್ರಾರಂಭಿಸಿ, ಮಾರ್ಗ ಮಧ್ಯೆ ಭೇಟಿಯಾಗುವ ಜನರನ್ನು ಮಾತನಾಡಿ ಮುಂದೆ ಸಾಗುತ್ತೇನೆ ಎಂದು ರೋಸಿ ಹೇಳಿದ್ದಾರೆ.

    ರೋಸಿ ತಮಗೆ ಬೇಕಾದ ವಸ್ತುಗಳನ್ನು ಟ್ರಾಲಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ಓಡುತ್ತಾರೆ. ಈವರೆಗೆ ರೋಸಿ 12 ದೇಶಗಳನ್ನು ದಾಟಿದ್ದು, ಭಾನುವಾರ ಇಸ್ತಾಂಬುಲ್ ತಲುಪಿದ್ದಾರೆ. ಪ್ರತಿದಿನ ಸುಮಾರು 20 ಕಿ.ಮೀ ಓಡುವ ಅವರು, ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡುವಂತೆ ಮಾರ್ಗ ಮಧ್ಯೆ ಸಿಗುವ ಜನರಿಗೆ ಕೇಳಿಕೊಳ್ಳುತ್ತಾರೆ.

    ರೋಸಿ ತಮ್ಮ ಪ್ರಯಾಣದ ಉದ್ದಕ್ಕೂ ಸಿಗುವ ಜನರೊಂದಿಗೆ ಪರಿಚಯ ಮಾಡಿಕೊಳ್ಳುತ್ತಾರೆ. ಹೀಗಾಗಿ ಪ್ರಪಂಚದಾದ್ಯಂತ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ರೋಸಿ ತಮ್ಮ ಪ್ರಯಾಣ ಹಾಗೂ ಮಾರ್ಗ ಮಧ್ಯೆ ಸಿಗುವ ವ್ಯಕ್ತಿಗಳ ಜೊತೆಗಿರುವ ವಿಡಿಯೋ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ರೋಸಿ ಅವರನ್ನು ವಿಶ್ವದ ಅತಿ ದೂರದ ಏಕವ್ಯಕ್ತಿ ಓಟಗಾರರಲ್ಲಿ ಒಬ್ಬರೆಂದು ಗುರುತಿಸಲಾಗಿದೆ. ಅವರು ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು 2004ರಲ್ಲಿ ಪ್ರಪಂಚದಾದ್ಯಂತ ಓಡಲು ಆರಂಭಿಸಿದರು. ರೋಸಿ 2015ರಲ್ಲಿ ಅಮೆರಿಕಾದಾದ್ಯಂತ ಓಡಿದ್ದಾರೆ. ರೋಸಿ ಅವರ ಪತಿ ಕ್ಲೈವ್ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ನಿಧನರಾದರು. ಹೀಗಾಗಿ ಪತಿಯ ಗೌರವಾರ್ಥವಾಗಿ ರೋಸಿ ನ್ಯೂಯಾರ್ಕ್ ನಿಂದ ಸ್ಯಾನ್ ಫ್ರಾನ್ಸಿಸ್ಕೋ ವರೆಗೂ ಓಡಿದ್ದರು.

  • ಗ್ರೇಟ್ ಎಸ್ಕೇಪ್: ಜಸ್ಟ್ 2 ಅಡಿ ಮುಂದಕ್ಕೆ ಹೋಗಿದ್ರೆ 100 ಅಡಿ ಬಾವಿಗೆ ಬೀಳ್ತಿತ್ತು ಬಸ್

    ಗ್ರೇಟ್ ಎಸ್ಕೇಪ್: ಜಸ್ಟ್ 2 ಅಡಿ ಮುಂದಕ್ಕೆ ಹೋಗಿದ್ರೆ 100 ಅಡಿ ಬಾವಿಗೆ ಬೀಳ್ತಿತ್ತು ಬಸ್

    ಹೈದರಾಬಾದ್: ಆಂಧ್ರ ಪ್ರದೇಶ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 30 ಪ್ರಯಾಣಿಕರು ಸಾವಿನ ಬಾಗಿಲನ್ನು ತಟ್ಟಿ ಬಂದಿದ್ದಾರೆ. ಹೌದು, ರಸ್ತೆ ಪಕ್ಕದ ಸುಮಾರು 100 ಅಡಿ ಆಳದ ತೆರೆದ ಬಾವಿಯ ಅಂಚಿನಲ್ಲಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬಂದು ನಿಂತಿದೆ.

    ಮಂಗಳವಾರ ಅನಂತಪುರ ಜಿಲ್ಲೆಯ ಮಮಿಲ್ಲಪಲ್ಲಿ ಕುಂಟಾದ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಈ ಬಸ್ ಗೊರಂಟ್ಲಾ ದಿಂದ ಪುಟ್ಟಪರ್ತಿ ಗೆ ತನ್ನ ಪ್ರಯಾಣವನ್ನು ಬೆಳೆಸಿತ್ತು. ಬೈಕಿಗೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋಗಿ ಬಸ್ ರಸ್ತೆ ಪಕ್ಕದ ಬಾವಿಯ ಅಂಚಿಗೆ ಬಂದು ನಿಂತಿದೆ. ಬಸ್ ಮುಂದೆ 2 ಅಡಿ ಚಲಿಸಿದ್ರೂ 100 ಅಡಿ ಆಳದ ಬಾವಿಗೆ ಬೀಳುತ್ತಿತ್ತು. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲ 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆಯೇ ಹೊರತು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಮುಖ್ಯ ರಸ್ತೆಯಿಂದ ಪಾದಚಾರಿ ಮಾರ್ಗದತ್ತ ತನ್ನ ಪಥ ಬದಲಿಸಿದ ಕೂಡಲೇ ಪಾದಚಾರಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಬಳಿಕ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಪಘಾತದ ಬಳಿಕ ಪ್ರತಿಕ್ರಿಯಿಸಿದ ಬಸ್ ಚಾಲಕ, ಬಾವಿ ಅಂಚಿನಲ್ಲಿ ಬಂದು ನಿಂತಾಗ ಒಂದು ಕ್ಷಣ ಗಾಳಿಯಲ್ಲಿ ತೇಲಾಡಿದಂತಾಯಿತು ಎಂದು ತಂಪು ಪಾನೀಯ ಒಂದರ ಜಾಹೀರಾತಿನ ಡೈಲಾಗ್ ಹೇಳಿದ್ದಾರೆ.