Tag: Travelers

  • ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ ನಂದಿಗಿರಿಧಾಮ

    ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ ನಂದಿಗಿರಿಧಾಮ

    – ನಂದಿಗಿರಿಧಾಮದ ಪ್ರವಾಸಿಗರಿಗೆ ಬೀಳಿಲಿದೆ ಜಿಎಸ್‍ಟಿ ಬರೆ-ಹೊರೆ

    ಚಿಕ್ಕಬಳ್ಳಾಪುರ: ಪ್ರೇಮಿಗಳ ಪಾಲಿನ ಸ್ವರ್ಗತಾಣ, ಪ್ರೇಮಧಾಮ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಇನ್ನು ಮುಂದೆ ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ.

    ಹೌದು.. ಈಗಾಗಲೇ ಸದ್ದಿಲ್ಲದೇ ಸರ್ಕಾರ ನಂದಿಗಿರಿಧಾಮದ ಪ್ರವೇಶ ಶುಲ್ಕ ಏರಿಕೆಗೆ ಮುಂದಾಗಿದ್ದು, ಇನ್ನೂ ಕೆಲವೇ ತಿಂಗಳಲ್ಲಿ ಪ್ರವಾಸಿಗರಿಗೆ ಬರೆ ಬೀಳಲಿದೆ. ತೋಟಗಾರಿಕಾ ಇಲಾಖಾ ಅಧೀನದ ನಂದಿಗಿರಿಧಾಮದಲ್ಲಿ ಇರುವ ಪ್ರವೇಶ ದರ ದುಬಾರಿ ಅಂತ ಪ್ರವಾಸಿಗರು ಹೇಳುತ್ತಿದ್ದರು. ಈಗ ಜಿಎಸ್‍ಟಿ ನೆಪವೊಡ್ಡಿರುವ ತೋಟಗಾರಿಕಾ ಇಲಾಖೆ ಪ್ರವೇಶ ದರ ಹೆಚ್ಚಳ ಮಾಡಲು ಮುಂದಾಗಿದೆ.

    ಹಿಂದಿನ ಹಾಗೂ ಮುಂದಿನ ಪ್ರವೇಶ ದರ:
    ಸದ್ಯಕ್ಕೆ ನಂದಿಗಿರಿಧಾಮಕ್ಕೆ ತಲಾ ಒಬ್ಬರ ಪ್ರವೇಶಕ್ಕೆ 10 ರೂ. ಶುಲ್ಕವಿದೆ. ಆದರೆ ಈ ಶುಲ್ಕ 10 ರಿಂದ 20 ರೂ. ಗೆ ಏರಿಕೆಯಾಗಲಿದೆ. ಒಂದು ದ್ವಿಚಕ್ರವಾಹನಕ್ಕೆ 20 ರೂ. ಇದ್ದು, ಈಗ 30 ರೂ. ಆಗಲಿದೆ. ಹೀಗಾಗಿ ಒಂದು ಬೈಕ್ ಹಾಗೂ ಓರ್ವ ವ್ಯಕ್ತಿಗೆ ನೂತನ ದರ 50 ರೂಪಾಯಿಯಾಗಿದೆ. ಒಂದು ಬೈಕ್ ಹಾಗೂ ಇಬ್ಬರಿಗೆ 70 ರೂಪಾಯಿ ಆಗಲಿದೆ. ಇನ್ನೂ ದ್ವಿಚಕ್ರ ವಾಹನದ ದರ ಪಟ್ಟಿ ಇದಾದರೇ ಕಾರುಗಳ ದರಪಟ್ಟಿಯೂ ಸಖತ್ ಏರಿಕೆ ಆಗಿದೆ.

    ಅಂದಹಾಗೆ 4 ಪ್ಲಸ್ 1 ಸೀಟ್ ಕೆಪಾಸಿಟಿ ನಾಲ್ಕು ಚಕ್ರ ವಾಹನಗಳಿಗೆ ಈ ಮೊದಲು 100 ರೂ. ಶುಲ್ಕವಿತ್ತು. ಈಗ ನೂತನ ದರ ಬಸ್ ನಿಲ್ದಾಣದ ಪಾರ್ಕಿಂಗ್ ಬಳಿಗೆ 125 ರೂ. ನಿಗದಿಯಾದ್ರೇ ಗಿರಿಧಾಮದ ಒಳಭಾಗದ ಮೇಲ್ಭಾಗಕ್ಕೆ 175 ರೂ. ನಿಗದಿಪಡಿಸಲಾಗಿದೆ. ಇನ್ನೂ 4 ಪ್ಲಸ್ 1 ಸೀಟ್ ಗಿಂತ ಹೆಚ್ಚು ಕೆಪಾಸಿಟಿಯ ವಾಹನಗಳಿಗೆ ಈ ಮೊದಲು 150 ರೂ. ಇದ್ದು, ಈಗಲೂ ಅದೇ ದರ ಮುಂದುವರೆಯಲಿದೆ. ಆದ್ರೆ ನಂದಿಗಿರಿಧಾಮದ ಒಳಭಾಗದ ಮೇಲ್ಬಾಗದ ಪ್ರವೇಶಕ್ಕೆ 175 ರೂ. ನಿಗದಿ ಮಾಡಲಾಗಿದೆ. ಇದಲ್ಲದೆ ತ್ರಿಚಕ್ರ ವಾಹನ ಆಟೋಗಳಿಗೆ ಈ ಮೊದಲು ಇದ್ದ 60 ರೂ. ಯಿಂದ 70 ರೂ.ಗೆ ಏರಿಕೆಯಾಗಿದ್ದು, ನಂದಿಗಿರಿಧಾಮದ ಮೇಲ್ಭಾಗಕ್ಕೆ 80 ರೂ. ನಿಗದಿ ಪಡಿಸಲಾಗಿದೆ.

    ಯಾಕೆ ಪ್ರವೇಶ ದರ ಏರಿಕೆ?
    ಜಿಎಸ್‍ಟಿ ಜಾರಿಯಾದ ನಂತರ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿರುವ ಕಾರಣ ಸರ್ಕಾರ ಈ ನಿರ್ಧಾರಕ್ಕೆ ಬರಲಾಗಿದೆ ಅಂತ ಸ್ವತಃ ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಂದಿಗಿರಿಧಾಮಕ್ಕೆ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಎಕೋ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ್ದ ಸಚಿವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರು.

    ಎಂದಿನಿಂದ ನೂತನ ದರ ಜಾರಿ?
    ನಂದಿಗಿರಿಧಾಮದ ಪ್ರವೇಶ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೆಂಡರ್ ಮೂಲಕ ಪ್ರಕ್ರಿಯೆಗಳನ್ನ ನಡೆಸಿ ಎರಡು ವರ್ಷಗಳಿಗೊಮ್ಮೆ ಟೆಂಡರ್ ಕೆರೆದು ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತದೆ. ಈ ಹಿಂದೆ ಎರಡು ವರ್ಷಗಳ ಅವಧಿಗೆ ಶ್ರೀ ವೈಷ್ಣವಿ ಎಂಟರ್ ಪ್ರೈಸಸ್ ರವರು 3.24 ಕೋಟಿಗೆ ಟೆಂಡರ್ ಪಡೆದುಕೊಂಡಿದ್ದರು. ಆದರೆ ಟೆಂಡರ್ ಪಡೆದವರು ಸರ್ಕಾರ ನಿಗದಿ ಮಾಡಿದ ದರದಂತೆಯೇ ಪ್ರವೇಶ ಶುಲ್ಕ ವಸೂಲಿ ಮಾಡಬೇಕು. 2 ತಿಂಗಳಲ್ಲಿ ಹಳೆಯ ಟೆಂಟರ್ ಅವಧಿ ಮುಗಿಯಲಿದ್ದು, ಈಗಾಗಲೇ ನೂತನ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಹೀಗಾಗಿ ನೂತನವಾಗಿ ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಹೊಸ ದರ ಚಾಲ್ತಿಗೆ ಬರಲಿದೆ. ಅಂದಾಜು ಎರಡೂವರೆ ತಿಂಗಳ ನಂತರ ಈ ನೂತನ ದರ ಜಾರಿಗೆ ಬರಲಿದೆ ಅಂತ ನಂದಿಗಿರಿಧಾಮದ ವಿಶೇಷ ಅಧಿಕಾರಿ ರಮೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್-ಡೀಸೆಲ್ ಟ್ಯಾಂಕ್‍ಗಳ ಮುಚ್ಚಳ ಇಲ್ಲದಿರುವ ಬಸ್ ಓಡಿಸಿದವರನ್ನು ಮನೆಗೆ ಕಳಸ್ತೀನಿ: ಡಿ.ಸಿ.ತಮ್ಮಣ್ಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್-ಡೀಸೆಲ್ ಟ್ಯಾಂಕ್‍ಗಳ ಮುಚ್ಚಳ ಇಲ್ಲದಿರುವ ಬಸ್ ಓಡಿಸಿದವರನ್ನು ಮನೆಗೆ ಕಳಸ್ತೀನಿ: ಡಿ.ಸಿ.ತಮ್ಮಣ್ಣ

    -ಬಸ್ ಡಿಸೇಲ್ ಟ್ಯಾಂಕ್ ಪರಿಶೀಲನೆಗಿಳಿದ ಅಧಿಕಾರಿಗಳು

    ಕಲಬುರಗಿ: ಈಶಾನ್ಯ ಸಾರಿಗೆಯ ಬಹುತೇಕ ಬಸ್‍ಗಳಲ್ಲಿ ಡೀಸೆಲ್ ಟ್ಯಾಂಕ್‍ಗಳನ್ನು ಮುಚ್ಚಲು 1 ಲೀ. ಮತ್ತು 2 ಲೀ. ಪ್ಲಾಸ್ಟಿಕ್ ಬಾಟಲ್‍ಗಳನ್ನು ಬಳಕೆ ಮಾಡಲಾಗುತ್ತಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ಇಂದು ಬೆಳಗ್ಗೆ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನೆಲ್ಲೆ ಎಚ್ಚೆತ್ತ ಈಶಾನ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ಗಳ ತಪಾಸಣೆ ನಡೆಸಿ, ಬಾಟಲ್ ತೆರವು ಮಾಡಿ ಟ್ಯಾಂಕ್‍ಗಳಿಗೆ ಕ್ಯಾಪ್ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    ಟ್ಯಾಂಕ್‍ಗಳಿಗೆ ಬಾಟಲ್‍ಗಳನ್ನು ಮುಚ್ಚಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಆದೇಶಿಸುತ್ತೇನೆ. ಡೀಸೆಲ್ ಟ್ಯಾಂಕ್‍ಗಳ ಮುಚ್ಚಳ ಇಲ್ಲದಿರುವ ಬಸ್‍ಗಳನ್ನು ಓಡಿಸಿರುವಂತಹ ಡಿಪೋ ಮ್ಯಾನೇಜರ್ ಸೇರಿದಂತೆ ಇತರೆ ಸಿಬ್ಬಂದಿಯನ್ನು ನಾಳೆಯೇ ಮನೆಗೆ ಕಳುಹಿಸುತ್ತೇನೆ.  ಕೆಲವು ದಿನಗಳ ಹಿಂದೆಯೇ ಬೆಂಗಳೂರಿನಿಂದ ಕೆಲವು ಅಧಿಕಾರಿಗಳು ಈಶಾನ್ಯ ಸಾರಿಗೆಯ ವ್ಯವಸ್ಥೆಯ ಬಗೆಗೆ ವರದಿ ನೀಡುವಂತೆ ಕಳುಹಿಸಿದ್ದೇನೆ. ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ನನ್ನ ಗಮನಕ್ಕೂ ಬಂದಿದ್ದೂ, ನಾಳೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡುತ್ತೇನೆ. ಪಬ್ಲಿಕ್ ಟಿವಿ ಈ ವರದಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಡೀಸೆಲ್ ಟ್ಯಾಂಕ್‍ಗಳನ್ನು ಬಂದ್ ಮಾಡಲು 1 ಮತ್ತು 2 ಲೀಟರ್ ನೀರಿನ ಬಾಟಲ್ ಗಳನ್ನೇ ಮುಚ್ಚಳ ಮಾಡಿ ಚಾಲಕರು ಬಸ್ ಚಲಾಯಿಸುತ್ತಿದ್ದಾರೆ. ಹಾಗಾಗಿ ತೈಲ ಸೋರಿಕೆಯಾಗಿ ಬಸ್‍ಗೆ ಬೆಂಕಿ ತಗಲುವ ಸಾಧ್ಯತೆಗಳು ಹೆಚ್ಚಾಗಿವೆ. ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಸಿಲು ಹೆಚ್ಚಾಗಿರುವ ಕಾರಣ ಈ ಬಾಟಲಿ ಕ್ಯಾಪ್ ಅಂತು ಇನ್ನು ಡೇಂಜರಸ್ ಆಗಿದೆ ಅಂತ ನಿವಾಸಿ ಸಿದ್ದರಾಮಯ್ಯ ಹಿರೇಮಠ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದರು.

    ಪಬ್ಲಿಕ್ ಟಿವಿಗೆ ಸಿಕ್ಕ ದಾಖಲೆಗಳ ಪ್ರಕಾರ ಕಲಬುರಗಿ ಡಿಪೋ ನಂಬರ್-4ರಲ್ಲಿಯೇ 23 ಬಸ್‍ಗಳಿಗೆ ಡೀಸೆಲ್ ಕ್ಯಾಪ್‍ಗಳಿಲ್ಲ. ಇನ್ನು ಈಶಾನ್ಯ ಸಾರಿಗೆಯ ಹೈದರಾಬಾದ್ ಕರ್ನಾಟಕದ 6 ಜಿಲ್ಲೆ ಅಂದ್ರೆ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಒಟ್ಟು 52 ಡಿಪೋಗಳಿದ್ದು, ಅದೆಷ್ಟು ಬಸ್‍ಗಳ ಡೀಸೆಲ್ ಟ್ಯಾಂಕ್‍ಗಳಿಗೆ ಕ್ಯಾಪ್ ಇಲ್ಲದೇ ಪ್ರಯಾಣಿಕರ ಸಾವಿಗೆ ಕಾಯ್ತಿದೆಯೋ ಗೊತ್ತಿಲ್ಲ. ಈ ಬಗ್ಗೆ ಈಶಾನ್ಯ ಸಾರಿಗೆ ಅಧಿಕಾರಿಗಳನ್ನು ಕೇಳಿದ್ರೆ, ಈ ಬಗ್ಗೆ ವರದಿ ಮಾಡಿದ್ದೇವೆ. ಆದ್ರೆ ಪ್ರಯೋಜನವಾಗಿಲ್ಲ ಅಂತಾ ಇಂಧನ ನಿರ್ವಾಹಕ ನಾಗರಾಜ್ ರೆಡ್ಡಿ ಹೇಳಿದ್ದರು.

    ಈಶಾನ್ಯ ಸಾರಿಗೆ ಸಂಸ್ಥೆಗೆ ಇತ್ತೀಚೆಗೆ ಮಲೇಶ್ಯಾದಲ್ಲಿ ರಾಷ್ಟ್ರಮಟ್ಟದ ಇಂಡಿಯಾ ಬಸ್ ಸೇಫ್ಟಿ ಅವಾರ್ಡ್ ಸಿಕ್ಕಿತ್ತು. ಆದರೆ ಅದ್ಯಾಕೆ ಈ ಸಂಸ್ಥೆಗೆ ಅವಾರ್ಡ್ ಕೊಟ್ರೆನೋ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=1AvXi-0xSVo

  • ಮಂಗಳೂರು ರಸ್ತೆ ಸಂಚಾರ ಬಂದ್- ವಿಮಾನ ಕಂಪನಿಗಳಿಂದ ಹಗಲು ದರೋಡೆ

    ಮಂಗಳೂರು ರಸ್ತೆ ಸಂಚಾರ ಬಂದ್- ವಿಮಾನ ಕಂಪನಿಗಳಿಂದ ಹಗಲು ದರೋಡೆ

    ಮಂಗಳೂರು: ಭಾರೀ ವರ್ಷಧಾರೆಗೆ ಜಿಲ್ಲೆಗೆ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ, ಸಂಪಾಜೆ ಘಾಟಿ ರಸ್ತೆಗಳು ಬಂದ್ ಆಗಿವೆ. ಇದರ ಜೊತೆ ಚಾರ್ಮಾಡಿ ರಸ್ತೆಯಲ್ಲೂ ಭಾರೀ ಟ್ರಾಫಿಕ್ ಜಾಮ್ ಆಗುತ್ತಿರುವ ಕಾರಣ ವಿಮಾನಯಾನ ಕಂಪೆನಿಗಳು ಮಂಗಳೂರು- ಬೆಂಗಳೂರು ಮಧ್ಯೆ ಸಂಚರಿಸುವ ಟಿಕೆಟ್ ದರವನ್ನು ಭಾರೀ ಏರಿಕೆ ಮಾಡಿವೆ.

    ಈ ಹಿಂದೆ ಸಾಮಾನ್ಯ ದಿನಗಳಲ್ಲಿ ಮೂರು, ನಾಲ್ಕು ಸಾವಿರ ರೂ. ಟಿಕೆಟ್ ಲಭ್ಯವಿದ್ದರೆ ಸಂದರ್ಭದ ಲಾಭ ಪಡೆದ ಕಂಪೆನಿಗಳು 10 ಸಾವಿರ ರೂ. ಏರಿಕೆ ಮಾಡಿತ್ತು. ಆದರೆ ಪ್ರವಾಹ ಪರಿಸ್ಥಿತಿಯಲ್ಲಿ ಮಾನವೀಯತೆ ತೋರಬೇಕಿದ್ದ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿದ್ದಾರೆ.

    ಈಗ ಎಷ್ಟಿವೆ?
    ಮೊದಲು ಸಾಮಾನ್ಯವಾಗಿ ಮಂಗಳೂರಿನಿಂದ-ಬೆಂಗಳೂರಿಗೆ 1,500 ರಿಂದ 5,000 ಪ್ರಯಾಣ ದರ ಇತ್ತು. ಆದರೆ ಇದೀಗ ಪ್ರೀಮಿಯರ್ ಕ್ಲಾಸ್ ಪ್ರಯಾಣಕ್ಕೆ ಪ್ರತಿಯೊಬ್ಬ ಪ್ರಯಾಣಿಕನಿಂದ 68 ಸಾವಿರ ಹಾಗೂ ಸಾಮಾನ್ಯ ದರ್ಜೆಯ ಪ್ರಯಾಣಕ್ಕೆ 32 ಸಾವಿರ ರೂಪಾಯಿಗಳನ್ನು ನಿಗದಿಪಡಿಸಿವೆ.

    ಪ್ರವಾಹ ಪರಿಸ್ಥಿತಿಯಿಂದಾಗಿ ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ದರ ನೀಡಿ ಪ್ರಯಾಣಿಸುತ್ತಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿಯೂ ವಿಮಾನಯಾನ ಕಂಪೆನಿಗಳು ಹಗಲು ದರೋಡೆ ನಡೆಸುತ್ತಿದ್ದು, ಈ ಕೂಡಲೇ ಕೇಂದ್ರ ವಿಮಾನಯಾನ ಇಲಾಖೆಯು ಇತ್ತ ಗಮನ ನೀಡಿ ವಿಮಾನಯಾನ ಕಂಪೆನಿಗಳ ಮೇಲೆ ನಿಗಾವಹಿಸಬೇಕೆಂದು ಪ್ರಯಾಣಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭುರವರು, ಪ್ರವಾಹ ಪೀಡಿತ ಪ್ರದೇಶಗಳಾದ ಕೇರಳ ಹಾಗೂ ಮಂಗಳೂರು ಮತ್ತು ಸಮೀಪದ ವಿಮಾನ ನಿಲ್ದಾಣಗಳ ಮಾರ್ಗದಲ್ಲಿ ಹಾರಾಟ ಮಾಡುವ ವಿಮಾನಯಾನ ಪ್ರಯಾಣ ದರಗಳು ಯಾವುದೇ ಕಾರಣಕ್ಕೂ ಹೆಚ್ಚಿಸಬಾರದು ಎಂದು ಆದೇಶ ನೀಡಿದ್ದಾರೆ.

    ಅಲ್ಲದೇ ಇನ್ನು ಮುಂದೆ ತಿರುವನಂತಪುರಂ, ಕ್ಯಾಲಿಕಟ್, ಕೊಯಮತ್ತೂರು ಮತ್ತು ಮಂಗಳೂರಿನಿಂದ ಹೋಗುವ ಮತ್ತು ಬರುವ ವಿಮಾನಗಳ 32 ಮಾರ್ಗಗಳ ವಿಮಾನ ಹಾರಾಟದ ಪ್ರಯಾಣ ದರವನ್ನು ಖುದ್ದು ಡಿಜಿಸಿಎ ನಿರಂತರವಾಗಿ ಪರಿಶೀಲಿಸುತ್ತದೆ. ಪ್ರವಾಹ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಕಂಪೆನಿಗಳು ಆದೇಶಕ್ಕೆ ಬೆಲೆ ನೀಡದೇ ಇಷ್ಟಬಂದ ದರವನ್ನು ವಿಧಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರಿನಲ್ಲಿ ದಿಢೀರ್ ಸ್ಥಗಿತಗೊಂಡ ನಮ್ಮ ಮೆಟ್ರೋ

    ಬೆಂಗಳೂರಿನಲ್ಲಿ ದಿಢೀರ್ ಸ್ಥಗಿತಗೊಂಡ ನಮ್ಮ ಮೆಟ್ರೋ

    ಬೆಂಗಳೂರು: ತರಬೇತಿ ನೌಕರರು ಮೆಟ್ರೋ ಚಾಲನೆ ನೀಡಿದ್ದ ಪರಿಣಾಮ ರೈಲು 30 ನಿಮಿಷ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡಿದರು.

    ಭಾನುವಾರ ಮಧ್ಯಾಹ್ನ ಉತ್ತರ ದಕ್ಷಿಣ ಮಾರ್ಗದಲ್ಲಿ ಹೊರಟಿದ್ದ ರೈಲು ರಾಜಾಜಿನಗರ ಮೆಟ್ರೋ ಸ್ಟೇಶನ್‍ನಲ್ಲಿ ದಿಢೀರ್ ನಿಂತಿತ್ತು. ಹೀಗಾಗಿ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ನುರಿತ ಚಾಲಕನಿಂದ ಸಂಚಾರ ಪ್ರಾರಂಭಿಸಲಾಯಿತು.

    ನಡೆದದ್ದು ಏನು?
    ರೈಲ್ವೆ ಬೋರ್ಡ್ ಅನುಮತಿ ನೀಡದಿದ್ದರೂ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಟ್ (ಬಿಎಂಆರ್‌ಸಿಎಲ್‌) ಅಧಿಕಾರಿಗಳು ಇಂದು ತರಬೇತಿ ನೌಕರರಿಗೆ ಮೆಟ್ರೋ ರೈಲು ಚಾಲನೆಗೆ ಕೊಟ್ಟಿದ್ದರು. ತರಬೇತಿ ನೌಕರ ಕಮಲೇಶ್ ರಾಯ್ ಸೇರಿದಂತೆ ಹಲವರು ರೈಲು ಸಂಚಾರ ನಡೆಸಿದ್ದರು. ರಾಜಾಜಿನಗರ ಮೆಟ್ರೋ ಸ್ಟೇಶನ್‍ನಲ್ಲಿ ರೈಲು ಬಂದು ನಿಲ್ಲುತ್ತಿದ್ದಂತೆ, ಕಮಲೇಶ್ ರಾಯ್‍ಗೆ ಆಪರೇಟ್ ಮಾಡಲು ತಿಳಿಯದೆ ದಿಢೀರ್ ಸ್ಥಗಿತವಾಗಿತ್ತು.

    30 ನಿಮಿಷ ರೈಲು ನಿಂತಿದ್ದರಿಂದ ಪ್ರಯಾಣಿಕರು ಸ್ಟೇಶನ್‍ನಲ್ಲಿ ಕಾಯುತ್ತ ನಿಲ್ಲುವಂತಾಯಿತು. ಬೇಜವಾಬ್ದಾರಿ ತೋರಿದ ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಭಾರೀ ಆಕ್ರೋಶ ಹೊರಹಾಕಿದರು. ಬಳಿಕ ನುರಿತ ಚಾಲಕನನ್ನು ಕರೆಸಿಕೊಂಡ ಅಧಿಕಾರಿಗಳು, ರೈಲು ಸಂಚಾರವನ್ನು ಯಥಾಸ್ಥಿತಿಗೆ ತಂದರು. ಇತ್ತ ಅಧಿಕಾರಿಗಳು ತರಬೇತಿ ನೌಕರರಿಗೆ ಮೆಟ್ರೋ ರೈಲು ಚಾಲನೆಗೆ ನೀಡಿದ್ದರಿಂದ ಬಿಎಂಆರ್‌ಸಿಎಲ್‌ ನೌಕರರ ಸಂಘವು ಕಿಡಿಕಾರಿದೆ.

  • ರೈಲ್ವೇ ಇಲಾಖೆ ವಿರುದ್ಧ ಘೋಷಣೆ ಕೂಗಿ, ಪ್ರಯಾಣಿಕರಿಂದ ಪ್ರತಿಭಟನೆ!

    ರೈಲ್ವೇ ಇಲಾಖೆ ವಿರುದ್ಧ ಘೋಷಣೆ ಕೂಗಿ, ಪ್ರಯಾಣಿಕರಿಂದ ಪ್ರತಿಭಟನೆ!

    ತುಮಕೂರು: ರೈಲೊಂದು ಕ್ರಾಸಿಂಗ್ ಮಾಡಲು ಸುಮಾರು ಒಂದೂವರೆ ಗಂಟೆ ಕಾದಿದ್ದರಿಂದ ರೊಚ್ಚಿಗೆದ್ದ ಪ್ರಯಾಣಿಕರು ರೇಲ್ವೇ ಹಳಿ ಮೇಲೆ ಪ್ರತಿಭಟನೆ ನಡೆಸಿ, ರೈಲು ಇಂಜಿನ್ ಗೆ ಕಲ್ಲು ತೂರಾಟ ನಡೆಸಿದ್ದಾರೆ.

    ತುಮಕೂರಿನ ಮಲ್ಲಸಂದ್ರದಲ್ಲಿ ಬೆಂಗಳೂರು-ಅರಸೀಕೆರೆ ಪ್ಯಾಸೆಂಜರ್ ಪ್ರಯಾಣಿಕರು ಈ ರೀತಿ ರೊಚ್ಚಿಗೆದ್ದಿದ್ದಾರೆ. ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲು ರಾತ್ರಿ 8-30ಕ್ಕೆ ಕ್ರಾಸ್ ಮಾಡಬೇಕಿತ್ತು. ಆದರೆ ರಾತ್ರಿ 10 ಗಂಟೆಯಾದರೂ ಕ್ರಾಸ್ ಮಾಡಿರಲಿಲ್ಲ. ಒಂದೂವರೆ ಗಂಟೆಗಳ ಕಾಲ ವಿಳಂಬವಾದ್ದರಿಂದ ರೊಚ್ಚಿಗೆದ್ದ ಅರಸಿಕೆರೆ ಪ್ರಯಾಣಿಕರು ರೇಲ್ವೇ ಇಲಾಖೆ ವಿರುದ್ಧ ಘೋಷಣೆ ಕೂಗಿ, ಕಲ್ಲು ತೂರಾಟ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

    ಬಳಿಕ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 10 ಗಂಟೆಗೆ ಹುಬ್ಬಳ್ಳಿ-ಬೆಂಗಳೂರು ಮಾರ್ಗದ ರೈಲು ಕ್ರಾಸ್ ಆದ ಬಳಿಕ ಅರಸಿಕೆರೆ ರೈಲು ಹೊರಟಿತು.

  • ಮೆಟ್ರೋ ಪ್ರಯಾಣಿಕರಿಗೆ ಕಾಯಿನ್ ಬದಲು ಕಾಗದದ ಟಿಕೆಟ್ ಸಿಕ್ತು!

    ಮೆಟ್ರೋ ಪ್ರಯಾಣಿಕರಿಗೆ ಕಾಯಿನ್ ಬದಲು ಕಾಗದದ ಟಿಕೆಟ್ ಸಿಕ್ತು!

    ಬೆಂಗಳೂರು: ಬುಧವಾರ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದ್ದರಿಂದ ಕಾಯಿನ್ ಬದಲು ಕಾಗದದ ಟಿಕೆಟ್ ವಿತರಿಸಲಾಗಿದೆ.

    ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ವಿಧಾನಸೌಧ ಮುಂದಿನ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಜನ ಮೆಟ್ರೋ ರೈಲು ಪ್ರಯಾಣಕ್ಕೆ ಮುಗಿಬಿದ್ದಿದ್ದರು.

    ದಿಢೀರ್ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದರಿಂದ ಕಾಯಿನ್ ಕೊರತೆ ಎದುರಿಸುತ್ತಿದ್ದ ಸಿಬ್ಬಂದಿ ಕಾಗದದ ಟಿಕೆಟ್‍ಗೆ ಮೊರೆ ಹೋಗಿದ್ದರು.

    ಸಾಮಾನ್ಯವಾಗಿ ಸಂಜೆ 4ರಿಂದ 6 ರವರೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇದೇ ಸಮಯದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧಾನ ಸೌಧಕ್ಕೆ ಬರಲು ರಸ್ತೆ ಸಂಚಾರ ಮಾರ್ಗ ಬದಲಾಗಿದ್ದು, ಅನಿವಾರ್ಯವಾಗಿ ಮೆಟ್ರೋ ಪ್ರಯಾಣಕ್ಕೆ ಜನರು ಮುಂದಾಗಿದ್ದರು. ಹೀಗಾಗಿ ಎಂ.ಜಿ.ರಸ್ತೆ, ವಿಧಾನಸೌಧ, ಕಬ್ಬನ್ ಪಾರ್ಕ್ ಸೇರಿದಂತೆ ಕೆಲವು ಮೆಟ್ರೊ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು.

  • ಮತದಾನದ ಬಿಸಿ- ಮೆಜೆಸ್ಟಿಕ್ ನಲ್ಲಿ ಬಸ್‍ ಗಾಗಿ ಪ್ರಯಾಣಿಕರು ಗರಂ

    ಮತದಾನದ ಬಿಸಿ- ಮೆಜೆಸ್ಟಿಕ್ ನಲ್ಲಿ ಬಸ್‍ ಗಾಗಿ ಪ್ರಯಾಣಿಕರು ಗರಂ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ಆದರೆ ಪ್ರಯಾಣಿಕರು ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಮತದಾನ ಮಾಡುವುದಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ ಸ್ಥಿತಿ ನಗರದ ಮೆಜೆಸ್ಟಿಕ್ ನಲ್ಲಿ ಕಂಡು ಬಂದಿದೆ. ರಾತ್ರಿಯಿಂದಲೇ ಊರಿಗೆ ತೆರಳಲು ಸಜ್ಜಾಗಿದ್ದ ಪ್ರಯಾಣಿಕರು ಸಂಜೆಯಿಂದ ಕಾದು ಕುಳಿತ್ರೂ, ಬಸ್ ವ್ಯವಸ್ಥೆ ಇಲ್ಲ ಪರಿಣಾಮವಾಗಿ ಪ್ರಯಾಣಿಕರು ಮೆಜೆಸ್ಟಿಕ್‍ ನ ಡಿಪೋದ ಮುಂದೆ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ.

    ಅಷ್ಟೇ ಅಲ್ಲದೇ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಚರಿಸುತ್ತಿದ್ದ ಬಸ್‍ ಗಳನ್ನ ತಡೆಯಲು ಮುಂದಾಗಿದ್ದಾರೆ. ಒಂದು ತಿಂಗಳು ಮುಂಚಿತವಾಗಿ ಬಸ್‍ಗಾಗಿ ಟಿಕೆಟ್ ಬುಕ್ ಮಾಡಿದರೂ ಬಸ್ ವ್ಯವಸ್ಥೆ ಇರಲಿಲ್ಲ.

    ಸರ್ಕಾರ ರಚನೆ ಮಾಡುವುದಕ್ಕೆ ನಮ್ಮ ವೋಟ್ ಬೇಕು. ಜನರ ಸಮಸ್ಯೆ ಪರಿಹರಿಸುವುದಕ್ಕೆ ಯಾವ ಅಧಿಕಾರಿಯೂ ಬರಲ್ಲ. ಇಂತಹವರಿಗೆ ನಾವು ಮತದಾನ ಮಾಡಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮತ್ತೆ ಬಂತು 19 ಬೋಗಿಗಳ ಸ್ವರ್ಣ ಪ್ಯಾಸೆಂಜರ್ ರೈಲು- ಸಿಹಿ ಹಂಚಿ ಸಂಭ್ರಮಿಸಿದ ಪ್ರಯಾಣಿಕರು

    ಮತ್ತೆ ಬಂತು 19 ಬೋಗಿಗಳ ಸ್ವರ್ಣ ಪ್ಯಾಸೆಂಜರ್ ರೈಲು- ಸಿಹಿ ಹಂಚಿ ಸಂಭ್ರಮಿಸಿದ ಪ್ರಯಾಣಿಕರು

    ಕೋಲಾರ: ಚಿನ್ನದ ನಾಡಿನ ಜನರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರೈಲ್ವೇ ಇಲಾಖೆ ತನ್ನ ನಿರ್ಧಾರ ಬದಲಿಸಿಕೊಂಡು ಮತ್ತೆ ಸ್ವರ್ಣ ಪ್ಯಾಸೆಂಜರ್ ರೈಲಿನ ಸಂಚಾರವನ್ನ ಆರಂಭಿಸಿದೆ.

    ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆಗೆ ವಿರೋಧ ವ್ಯಕ್ತವಾಗಿತ್ತು. ಬುಧವಾರದಂದು ಎರಡು ಗಂಟೆಗಳ ಕಾಲ ರೈಲು ತಡೆದು ಪ್ರತಿಭಟನೆ ನಡೆಸಿದ ಫಲವಾಗಿ ಮತ್ತೆ 19 ಬೋಗಿಗಳಿರುವ ಸ್ವರ್ಣ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿದೆ. ಇದರಿಂದ ಖುಷಿಯಾಗಿರುವ ಕೆಜಿಎಫ್ ಜನರು ಸಿಹಿ ಹಂಚಿ ಕುಣಿದು ಕುಪ್ಪಳಿಸಿದ್ದಾರೆ.

    ಮಾರಿಕುಪ್ಪಂ-ಬೆಂಗಳೂರು ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆ ಖಂಡಿಸಿ ಕೆಜಿಎಫ್ ನ ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ಬುಧವಾರದಂದು ಕಾಂಗ್ರೆಸ್, ಪ್ರಯಾಣಿಕರು ಹಾಗೂ ವಿವಿಧ ಸಂಘಟನೆಯವರು 2 ಗಂಟೆಗಳ ಕಾಲ ರೈಲು ತಡೆದು ಪ್ರತಿಭಟನೆ ನಡೆಸಿದ್ದರು. ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಹೋರಾಟ ನೆಡೆಸಿದ್ದರು.

    ಮುಂಜಾನೆಯ 6.30 ರ ಸ್ವರ್ಣ ಪ್ಯಾಸೆಂಜರ್ ರೈಲಿನ ಬದಲಾಗಿ ಪುಷ್ ಪುಲ್ ರೈಲು ಹಾಕಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಬದಲಾದ ರೈಲಿನ ಬೋಗಿಗಳು ಕಡಿಮೆ ಇರುವ ಕಾರಣ ಪ್ರತಿನಿತ್ಯ ಹೊಟ್ಟೆಪಾಡಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವವರಿಗೆ ಬಹಳಷ್ಟು ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೆ.ಹೆಚ್ ಮುನಿಯಪ್ಪ ಪುತ್ರಿ ರೂಪಾ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಲಘು ಲಾಠಿ ಪ್ರಹಾರ ಕೂಡ ನಡೆದಿತ್ತು.

    ಸ್ವರ್ಣ ಪ್ಯಾಸೆಂಜರ್ ರೈಲು ಕಳೆದ 20 ವರ್ಷಗಳಿಂದ ಮಾರಿಕುಪ್ಪ ಹಾಗೂ ಬೆಂಗಳೂರು ನಡುವೆ ಸಂಚಾರ ಮಾಡುತ್ತಿದ್ದು, ರೈಲನ್ನ ಬದಲಾವಣೆ ಮಾಡಲು ರೈಲ್ವೇ ಇಲಾಖೆ ಮುಂದಾಗಿತ್ತು.

  • ಸೀಟ್ ಬೆಲ್ಟ್ ಹಾಕಿದ್ದರಿಂದ ಬಸ್ ಪಲ್ಟಿ ಹೊಡೆದ್ರೂ ಉಳಿಯಿತು ಪ್ರಾಣ-ವಿಡಿಯೋ ನೋಡಿ

    ಸೀಟ್ ಬೆಲ್ಟ್ ಹಾಕಿದ್ದರಿಂದ ಬಸ್ ಪಲ್ಟಿ ಹೊಡೆದ್ರೂ ಉಳಿಯಿತು ಪ್ರಾಣ-ವಿಡಿಯೋ ನೋಡಿ

    ಬೀಜಿಂಗ್: ಹೆದ್ದಾರಿಯಲ್ಲಿ ಬಸ್ಸೊಂದು ಕಾರ್ ಗೆ ಡಿಕ್ಕಿಯಾದರೂ ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರಿಂದ ಯಾವುದೇ ಸಾವುಗಳು ಸಂಭವಿಸಿಲ್ಲ. ಅಪಘಾತದ ದೃಶ್ಯಗಳೂ ಬಸ್ ನ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಅಪಘಾತ ಅಕ್ಟೋಬರ್ 1ರಂದು ಸುಮಾರು ಮಧ್ಯಾಹ್ನ 1.55ಕ್ಕೆ ಚೀನಾದ ಝುಝೌ ಸಿಟಿ ಬಳಿಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿದ್ದರಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

    ಹೆದ್ದಾರಿಯಲ್ಲಿ ಬಸ್ ಅತಿ ವೇಗದಿಂದ ಹೋಗುತ್ತಿತ್ತು. ಈ ವೇಳೆ ಬಸ್ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಿಡಿಯೋದಲ್ಲಿ ಬಿಳಿ ಶರ್ಟ್ ತೊಟ್ಟಿರುವ ಮಹಿಳೆಯನ್ನು ಹೊರತುಪಡಿಸಿ, ಎಲ್ಲರೂ ಸೀಟ್ ಬೆಲ್ಟ್ ಧರಿಸಿದ್ದಾರೆ. ಸೀಟ್ ಬೆಲ್ಟ್ ಹಾಕದೇ ಇದ್ದ ಮಹಿಳೆ ಮಾತ್ರ ಬಸ್ ನ ಒಂದು ಬದಿಯಿಂದ ಇನ್ನೊಂದು ಬದಿಗೆ ಬಂದು ಗಾಯಗೊಂಡಿದ್ದಾರೆ. ಇನ್ನುಳಿದ ಪ್ರಯಾಣಿಕರೆಲ್ಲಾ ಸೀಟ್ ಬಿಟ್ಟು ಸಹ ಬಂದಿಲ್ಲ.

    ಬಸ್ ಅಥವಾ ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವಿದ್ದರೂ, ಹಲವರು ಧರಿಸಲ್ಲ. ಭಾರತದಲ್ಲಿ ಸೀಟ್ ಬೆಲ್ಟ್ ಹಾಕದೇ ಇರುವದರಿಂದ ಒಂದು ಗಂಟೆಗೆ ಸುಮಾರು 17 ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

    https://www.youtube.com/watch?v=RD34i25wmlE