Tag: Travelers

  • ಚಾಮರಾಜನಗರದಲ್ಲಿ ಮೊದಲ ಬಾರಿಗೆ ಜಿಪ್ ಲೈನ್- ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ಪ್ಲಾನ್

    ಚಾಮರಾಜನಗರದಲ್ಲಿ ಮೊದಲ ಬಾರಿಗೆ ಜಿಪ್ ಲೈನ್- ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ಪ್ಲಾನ್

    ಚಾಮರಾಜನಗರ: ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಿಪ್ ಲೈನ್ ಸಾಹಸ ಕ್ರೀಡೆ ವ್ಯವಸ್ಥೆ ಮಾಡಲಾಗಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮರಡಿಗುಡ್ಡದ ವೃಕ್ಷವನದಲ್ಲಿ ಜಿಪ್ ಲೈನ್ ಅಳವಡಿಸಲಾಗಿದೆ. ಸುಮಾರು 200 ಮೀ ದೂರದ ಜಿಪ್ ಲೈನ್ ಸವಾರಿ ಪ್ರವಾಸಿಗರಿಗೆ ಖುಷಿ ಕೊಡುತ್ತದೆ. ಜಿಪ್ ಲೈನ್ ಸೆರೆಹಿಡಿಯಲು ಗೋ ಪ್ರೋ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ:  ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ ಉಗ್ರರು- ಬಲಿಯಾಗಿದ್ದು 3 ವರ್ಷದ ಕಂದಮ್ಮ

    ವಯಸ್ಕರಿಗೆ 60 ರೂ ಹಾಗೂ ಮಕ್ಕಳಿಗೆ 30ರೂ ದರ ನಿಗದಿ ಮಾಡಿದೆ. ಸುರಕ್ಷತಾ ಕ್ರಮಗಳ ಮೂಲಕ ಜಿಪ್ ಲೈನ್ ಕ್ರೀಡೆ ಆರಂಭವಾಗಿದ್ದು, ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಕೂಡ ವ್ಯಕ್ತವಾಗಿದೆ. ಈ ಬಗ್ಗೆ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಏಡುಕುಂಡಲ ಸಂತಸ ವ್ಯಕ್ತಪಡಿಸಿದ್ದಾರೆ.

    ಏನಿದು ಜಿಪ್ ಲೈನ್..?
    ತಂತಿಯ ಮೂಲಕ ಒಂದು ತುದಿಯಿಂದ ಇನ್ನೊಂದು ತುದಿಗೆ ಗುರುತ್ವಾಕರ್ಷಣೆಯ ಬಲದಿಂದ ತಲುಪುವುದಕ್ಕೆ ಜಿಪ್ ಲೈನ್ ಎನ್ನುತ್ತಾರೆ. ಇದನ್ನು ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶಗಳು, ಗಣಿಗಾರಿಕೆಗಳಲ್ಲಿ ಸರಕು ಸಾಗಿಸಲು ಬಳಸುತ್ತಿದ್ದರು. ಈಗ ಇದು ಯುವ ಜನರನ್ನು ಸೆಳೆಯುವ ಮನರಂಜನಾ ಕ್ರೀಡೆಯಾಗಿ ಮಾರ್ಪಟ್ಟಿದೆ.

  • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಭರಚುಕ್ಕಿ ಜಲಪಾತ

    ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಭರಚುಕ್ಕಿ ಜಲಪಾತ

    – ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ ಜಲಪಾತ

    ಚಾಮರಾಜನಗರ: ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಂದ 35 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಜಿಲ್ಲೆಯ ಭರಚುಕ್ಕಿ ಧುಮ್ಮಿಕ್ಕುತ್ತಿದ್ದು, ಕಾವೇರಿಯ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.

    ಕೇರಳದ ವೈಯನಾಡು ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕ ಮಳೆಯಾಗಿದ್ದು, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ನದಿಗೆ 30 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಕೆಆರ್‍ಎಸ್ ಜಲಾಶಯದಿಂದಲು 6 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

    ಮೈಸೂರು ಜಿಲ್ಲೆಯ ಮೂಲಕ ಹರಿದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿಗೆ ಪ್ರವೇಶಿಸುವ ಕಾವೇರಿ, ಶಿವನಸಮುದ್ರದ ಬಳಿ ಎರಡು ಕವಲಾಗಿ ಹರಿದು ಒಂದೆಡೆ ಗಗನಚುಕ್ಕಿಯಾಗಿ ಇನ್ನೊಂದೆಡೆ ಭರಚುಕ್ಕಿಯಾಗಿ ಭೋರ್ಗೆರೆದು ಧುಮ್ಮಿಕುತ್ತಿದೆ. ಕರ್ನಾಟಕದ ನಯಾಗಾರ ಎಂದೇ ಹೆಸರಾದ ಭರಚುಕ್ಕಿಯಲ್ಲಿ ಬೆಟ್ಟಗುಡ್ಡಗಳ ನಡುವೆ ಕವಲು ಕವಲಾಗಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಕಣ್ಣುಗಳೆರಡು ಸಾಲದಂತೆ ಭಾಸವಾಗುತ್ತಿದೆ.

    ಕಳೆದ ಕೆಲವು ತಿಂಗಳಿಂದ ನೀರಿಲ್ಲದೆ ಬಣಗುಡುತ್ತಿದ್ದ ಭರಚುಕ್ಕಿಗೆ ಮತ್ತೆ ಜೀವ ಕಳೆ ಬಂದಿದೆ. ಕಾವೇರಿಯ ಜಲವೈಭವ ಅನಾವರಣಗೊಂಡಿದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡಗಳು. ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ಭರಚುಕ್ಕಿಯಲ್ಲಿ ಅತ್ಯಂತ ವಿಶಾಲವಾಗಿ ಕವಲು ಕವಲಾಗಿ ರಭಸದಿಂದ ಧುಮ್ಮಿಕ್ಕುವ ದೃಶ್ಯಕಾವ್ಯ ವರ್ಣನಾತೀತವಾಗಿದೆ.

  • ಚಾರ್ಮಾಡಿ ಘಾಟಿಯಲ್ಲಿ ಮೂರು ಗಂಟೆ ಟ್ರಾಫಿಕ್ ಜಾಮ್- ಸಂಜೆ 7ರ ಬಳಿಕ ಯಾರೂ ಬರಬೇಡಿ

    ಚಾರ್ಮಾಡಿ ಘಾಟಿಯಲ್ಲಿ ಮೂರು ಗಂಟೆ ಟ್ರಾಫಿಕ್ ಜಾಮ್- ಸಂಜೆ 7ರ ಬಳಿಕ ಯಾರೂ ಬರಬೇಡಿ

    ಚಿಕ್ಕಮಗಳೂರು: ಸಂಜೆ ಏಳು ಗಂಟೆಯ ನಂತರ ಚಾರ್ಮಾಡಿ ಘಾಟ್ ಮೂಲಕ ಮಂಗಳೂರು-ಧರ್ಮಸ್ಥಳಕ್ಕೆ ತೆರಳಲು ಯಾರೂ ಬರಬೇಡಿ. ಬಂದರೆ ಇಡೀ ರಾತ್ರಿ ಚಾರ್ಮಾಡಿ ಘಾಟಿಯ ಚಳಿಯಲ್ಲಿ ನಡುಗಬೇಕು. ಜೊತೆಗೆ, ಬೆಳಗ್ಗೆ ಗಾಡಿಗಳು ಹೊರಟಾಗಲೂ ಮೂರ್ನಾಲ್ಕು ಗಂಟೆ ಚಾರ್ಮಾಡಿ ಘಾಟಿಯಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೊಂದು ಟ್ರಾಫಿಕ್ ಜಾಮ್ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಮಳೆ ಅಬ್ಬರ ಜೋರಿದೆ. ಇಂದು-ನಿನ್ನೆ ಮಳೆ ಪ್ರಮಾಣ ತಗ್ಗಿದ್ದರೂ ಚಾರ್ಮಾಡಿಯ ದಟ್ಟ ಕಾನನದಲ್ಲಿ ವರುಣನ ಅಬ್ಬರ ನಿಂತಿಲ್ಲ. ಹೀಗಾಗಿ ಕಳೆದ ಎರಡ್ಮೂರು ವರ್ಷದಿಂದ ಪ್ರತಿ ವರ್ಷ ಚಾರ್ಮಾಡಿಯಲ್ಲಿ ಭೂ ಕುಸಿತ ಸಾಮಾನ್ಯವಾಗಿತ್ತು. ದುರಸ್ಥಿಗೆ ತಿಂಗಳುಗಳೇ ಬೇಕಾಗಿತ್ತು. ಹಾಗಾಗಿ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದೆಂದು ಚಾರ್ಮಾಡಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಜರ್ನಿಗೆ ಸಂಪೂರ್ಣ ಬ್ರೇಕ್ ಹಾಕಿತ್ತು. ಆದರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬರುವ ಪ್ರವಾಸಿಗರು-ಪ್ರಯಾಣಿಕರಿಗೆ ಬಣಕಲ್ ಪೊಲೀಸರು ಯಾರನ್ನೂ ಬಿಡದೆ ಚಳಿಯಲ್ಲಿ ನಡುಗಿಸಿದ್ದರು. ನಿನ್ನೆ ರಾತ್ರಿ ಸಹ ಸುಮಾರು 200 ವಾಹನಗಳು ಚಾರ್ಮಾಡಿ ಘಾಟಿ ಆರಂಭದ ಕೊಟ್ಟಿಗೆಹಾರದಲ್ಲಿ ಪರೇಡ್ ನಡೆಸಿದ್ದವು. ದಮ್ಮಯ್ಯ ಅಂದರೂ ಪೊಲೀಸರು ಬಿಟ್ಟಿರಲಿಲ್ಲ.

    ಇಂದು ಬೆಳಗ್ಗೆ 6 ಗಂಟೆಗೆ ವಾಹನಗಳನ್ನ ಬಿಡುತ್ತಿದ್ದಂತೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವ ಹಾಗೂ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವ ನೂರಾರು ವಾಹನಗಳಿಂದ ಚಾರ್ಮಾಡಿಯಲ್ಲಿ ಸುಮಾರು ಮೂರು ಗಂಟೆ ಟ್ರಾಫಿಕ್ ಜಾಮ್ ಆಗಿತ್ತು. ಪ್ರವಾಸಿಗರು-ಪ್ರಯಾಣಿಕರು ಇಡೀ ರಾತ್ರಿ ಚಾರ್ಮಾಡಿಯ ರಣಚಳಿಯಲ್ಲಿ ನಡುಗಿದ್ದಲ್ಲದೆ. ಬೆಳಗ್ಗೆ ಕೂಡ ಚಳಿಯಲ್ಲಿ ನಡುಗುತ್ತಾ ಮೂರ್ನಾಲ್ಕು ಗಂಟೆ ನಿಂತಲ್ಲೇ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

    ಪ್ರಯಾಣಿಕರು-ಪ್ರವಾಸಿಗರು ಬರೋದಾದರೆ ಸಂಜೆ ಏಳು ಗಂಟೆ ಒಳಗೆ ಬಂದು ಮಂಗಳೂರು ಸೇರಿಬೇಡಿ. ಏಳು ಗಂಟೆಯ ನಂತರ ಬಂದು ಕೊಟ್ಟಿಗೆಹಾರದಲ್ಲಿ ಪರಿತಪ್ಪಿಸಬೇಡಿ. ಕೊಟ್ಟಿಗೆಹಾರದಲ್ಲಿ ತಂಗಲು ಸಮರ್ಪಕ ಲಾಡ್ಜ್ ಸೌಲಭ್ಯವೂ ಇಲ್ಲ. ಅತ್ತ ಪೊಲೀಸರು ಬಿಡೋದು ಇಲ್ಲ. ಹೀಗಾಗಿ ಸಂಜೆ ಏಳು ಗಂಟೆಯ ನಂತರ ಬರಬೇಡಿ. ಬಂದು ಉಳಿಯಲು ಜಾಗವಿಲ್ಲದೆ ಮಲೆನಾಡ ಚಳಿಯಲ್ಲಿ ನಡುಗಬೇಡಿ ಎಂದು ಮಳೆಯಲ್ಲಿ ನೆನೆದು, ಚಳಿಯಲ್ಲಿ ನಡುಗುತ್ತಾ ರಸ್ತೆಯಲ್ಲಿ ಕಾಲ ಕಳೆದಿರುವ ಪ್ರಯಾಣಿಕರು-ಪ್ರವಾಸಿಗರು ಹೇಳಿದ್ದಾರೆ.

  • ಮೂರನೇ ಅಲೆ ಭೀತಿ – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು

    ಮೂರನೇ ಅಲೆ ಭೀತಿ – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು

    ಬೆಂಗಳೂರು: ಮೂರನೇ ಅಲೆಯ ಭೀತಿ ಹೆಚ್ಚುತ್ತಿದ್ದಂತೆ, ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಅಂತರ್ ಜಿಲ್ಲೆ, ಅಂತರ್ ರಾಜ್ಯಗಳಿಂದ ಬರುವ ಪ್ರತಿ ಪ್ರಯಾಣಿಕರ ಮೇಲೂ ನಿಗಾ ವಹಿಸಲಾಗಿದ್ದು, ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.

    ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಆವರಣದಲ್ಲಿ ಬೆಳಗಿನ ಜಾವ 4 ಗಂಟೆಯಿಂದ 15ಕ್ಕೂ ಹೆಚ್ಚು ತಂಡಗಳಿಂದ ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ಎಂಟ್ರಿ, ಎಕ್ಸಿಟ್ ಭಾಗಗಳಲ್ಲಿ ಪ್ರತಿ ಪ್ರಯಾಣಿಕರ ಮೇಲೂ ಆರೋಗ್ಯ ಸಿಬ್ಬಂದಿ ನಿಗಾ ವಹಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಟ್ಟು 30 ತಂಡಗಳಿಂದ ತಲಾ 300 ಜನರಿಗೆ ನಿತ್ಯ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಮಾರ್ಷಲ್ಸ್ ಗಳು ಕೂಡ ಪ್ರಯಾಣಿಕರ ಮೇಲೆ ನಿಗಾ ವಹಿಸಿತ್ತಿದ್ದೂ ಮಾಸ್ಕ್ ಹಾಕದವರಿಗೆ ದಂಡವನ್ನು ವಿಧಿಸಲಾಗುತ್ತಿದೆ.

    ಆಟೋ ಚಾಲಕರ ಹಾವಳಿ:
    ಅಂತರ್ ರಾಜ್ಯ, ಅಂತರ್ ಜಿಲ್ಲೆಯ ಪ್ರಯಾಣಿಕರಿಗೆ ಆರೋಗ್ಯ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ. ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಆತುರದಲ್ಲಿ ಆರೋಗ್ಯ ಸಿಬ್ಬಂದಿಗೆ ಆಟೋ ಚಾಲಕರು ಕಿರಿಕಿರಿ ಮಾಡುತ್ತಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಆವರಣದಲ್ಲಿ ಓಡಾಡುತ್ತಿದ್ದಾರೆ. ಮಾಸ್ಕ್ ಹಾಕಿ ಎಂದು ಮಾರ್ಷಲ್ಸ್ ಗಳು ಪ್ರಶ್ನೆ ಮಾಡಿದರೆ, ಮಾರ್ಷಲ್ಸ್ ಗಳ ಮೇಲೆಯೇ ಆಟೋ ಚಾಲಕರು ಗಲಾಟೆ ಮಾಡುತ್ತಿದ್ದಾರೆ ಎಂದು ಮಾರ್ಷಲ್ಸ್ ಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ:ಮುಂದಿನ ಚುನಾವಣೆ ಜವಾಬ್ದಾರಿ ನನ್ನ ಮೇಲಿದೆ: ಸಿಎಂ ಬಿಎಸ್‍ವೈ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಂದಿಬೆಟ್ಟದಲ್ಲಿ ಮತ್ತೆ ಲಾಕ್ ಡೌನ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಂದಿಬೆಟ್ಟದಲ್ಲಿ ಮತ್ತೆ ಲಾಕ್ ಡೌನ್

    ಚಿಕ್ಕಬಳ್ಳಾಪುರ: ಕೊರೊನಾ ಆತಂಕ ಹಾಗೂ ಕೊರೊನಾ ಸೋಂಕು ನಿಯಂತ್ರಣ ಮಾಡುವ ಸಲುವಾಗಿ ಜಿಲ್ಲೆಯ ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮವನ್ನ ಮತ್ತೆ ಲಾಕ್ ಡೌನ್ ಮಾಡಿರುವುದಾಗಿ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್ ಆದೇಶ ಹೊರಡಿಸಿದ್ದಾರೆ.

     ಅನ್ ಲಾಕ್ ಆಗಿದ್ದ ಕಳೆದ ವೀಕೆಂಡ್ ನಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಆಗಮಿಸಿದ್ದರು. ಸಾವಿರಾರು ವಾಹನಗಳ ಆಗಮನದ ಹಿನ್ನೆಲೆ ಸಂಚಾರ ದಟ್ಟಣೆ ಹಾಗೂ ಪ್ರಮುಖವಾಗಿ ಕೊರೊನಾ ನಿಯಮಗಳ ಪಾಲನೆ ಮಾಡದೇ ಬಹುತೇಕ ಪ್ರವಾಸಿಗರು ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಜಿಲ್ಲಾಡಳಿತಕ್ಕೆ ನಂದಿಬೆಟ್ಟದಲ್ಲಿ ಪ್ರವಾಸಿಗರ ಆಗಮನ ಹೆಚ್ಚಾಗಿದ್ದು, ಸಿಬ್ಬಂದಿ ನಿಯೋಜನೆ ಮಾಡಿದ್ದರೂ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಕೋವಿಡ್ ನಿಯಮಗಳ ಪಾಲನೆ ಮಾಡಲಾಗುತ್ತಿಲ್ಲ. ಹೀಗಾಗಿ ಪ್ರವಾಸಿಗರಿಗೆ ನಿಬಂಧನೆಗಳನ್ನು ವಿಧಿಸಿದರೆ ಸೋಂಕು ನಿಯಂತ್ರಣಕ್ಕೆ ಅನೂಕುಲಕರವಾಗಿರುತ್ತದೆ ಎಂಬುದಾಗಿ ಕೋರಿಕೊಂಡಿದ್ದರು.

    ಈ ಕೋರಿಕೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚಿಸಿ, ನಂದಿಗಿರಿಧಾಮದಲ್ಲಿ ಜನಸಂದಣಿ ತಡೆಯುವುದು ಅತ್ಯವಶ್ಯಕವಾಗಿದೆ ಎಂದು ಮನಗಂಡು, ವೀಕೆಂಡ್ ಶನಿವಾರ-ಭಾನುವಾರ ಕಂಪ್ಲೀಟ್ ಆಗಿ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಬರ್ಂಧಿಸಿ ಅಪರ ಜಿಲ್ಲಾಧಿಕಾರಿ ಎಚ್ ಅಮರೇಶ್ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಶುಕ್ರವಾರ ಸಂಜೆ 6 ಗಂಟೆಗೆ ನಂದಿಬೆಟ್ಟದ ಬಾಗಿಲು ಬಂದ್ ಆಗಲಿದ್ದು, ಮರಳಿ ಸೋಮವಾರ ಎಂದಿನಂತೆ 6 ಗಂಟೆಗೆ ತೆರೆಯಲಿದೆ. ಇದನ್ನೂ ಓದಿ:1023 ಕಾರು, 425 ಬೈಕ್, 46 ಮಿನಿ ಬಸ್- ಮುಳ್ಳಯ್ಯನಗಿರಿಯಲ್ಲಿ ಫುಲ್ ಟ್ರಾಫಿಕ್ ಜಾಮ್

  • ಇಂದಿನಿಂದ ಅಬ್ಬಿ ಜಲಪಾತ ಪ್ರವಾಸಿಗರಿಗೆ ಮುಕ್ತ

    ಇಂದಿನಿಂದ ಅಬ್ಬಿ ಜಲಪಾತ ಪ್ರವಾಸಿಗರಿಗೆ ಮುಕ್ತ

    ಮಡಿಕೇರಿ: ಕೋವಿಡ್ ಆತಂಕದ ಹಿನ್ನೆಲೆ ಕಳೆದ 80 ದಿನಗಳಿಂದ ಬಂದ್ ಆಗಿದ್ದ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣದಲ್ಲೊಂದಾದ ಅಬ್ಬಿ ಜಲಪಾತ ವೀಕ್ಷಣೆಗೆ ಇಂದಿನಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

    ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಅಬ್ಬಿ ಜಲಪಾತವನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲು ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯಪ್ಪ, ಮಾಜಿ ಅಧ್ಯಕ್ಷರಾದ ರೀಟಾ ಮುತ್ತಣ್ಣ ಎಂ.ಡಿ.ಬೋಪಣ್ಣ, ಸದಸ್ಯರಾದ ಜಾನ್ಸನ್ ಪಿಂಟೋ,ಸೇರಿದಂತೆ ಮತ್ತಿತರರು ಸಭೆ ನಡೆಸಿ, ಚರ್ಚಿಸಿ ಪ್ರವಾಸಿಗರಿಗೆ ಮುಕ್ತ ಮಾಡಲು ನಿರ್ಣಯ ಕೈಗೊಂಡಿದ್ದಾರೆ.

    ಬಳಿಕ ಅಬ್ಬಿ ಜಲಪಾತಕ್ಕೆ ತೆರಳಿ ಜಲಪಾತದ ಮುಂಭಾಗದಲ್ಲಿರುವ ಗೇಟ್ ತೆರೆದರು. ಅನ್‍ಲಾಕ್ ಅಗಿರುವ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ನೂರಾರು ಪ್ರವಾಸಿಗರು ಅಬ್ಬಿ ಜಲಪಾತದ ಸೊಬಗು ನೋಡಲು ಬಂದು ನಿರಾಶೆಯಿಂದ ಹೋರಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತಿ ಅಧ್ಯಕ್ಷರು ಸಭೆ ನಡೆಸಿ ಪ್ರವಾಸಿಗರಿಗೆ ಜಲಪಾತ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದಾರೆ.

    ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಎಚ್ಚರ ವಹಿಸುವಂತೆ ಗ್ರಾ.ಪಂ ಪ್ರತಿನಿಧಿಗಳು ಪ್ರವಾಸಿಗರಿಗೆ ಎಚ್ಚರಿಸಿದ್ದಾರೆ.

  • ಮಹಾರಾಷ್ಟ್ರದಿಂದ ರಾಯಚೂರಿಗೆ ಡೆಲ್ಟಾ ಆತಂಕ – ರೈಲು ನಿಲ್ದಾಣದಲ್ಲಿ ತೀವ್ರ ತಪಾಸಣೆ

    ಮಹಾರಾಷ್ಟ್ರದಿಂದ ರಾಯಚೂರಿಗೆ ಡೆಲ್ಟಾ ಆತಂಕ – ರೈಲು ನಿಲ್ದಾಣದಲ್ಲಿ ತೀವ್ರ ತಪಾಸಣೆ

    ರಾಯಚೂರು: ಡೆಲ್ಟಾ ಆತಂಕ ಹಿನ್ನೆಲೆಯಲ್ಲಿ ನಗರದ ರೈಲ್ವೇ ನಿಲ್ದಾಣದಲ್ಲಿ ಅಧಿಕಾರಿಗಳು ಕೊರೊನಾ ತಪಾಸಣೆಗೆ ಮುಂದಾಗಿದ್ದಾರೆ.

    ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಪ್ರಯಾಣಿಕರ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶಕ್ಕೆ ಕೊನೆಗೂ ಎಚ್ಚೆತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ.

    72 ಗಂಟೆಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ತಪಾಸಣೆಯಿಂದ ವಿನಾಯಿತಿಯಿದೆ. ನೆಗೆಟಿವ್ ವರದಿ ಇರದ ಎಲ್ಲಾ ಪ್ರಯಾಣಿಕರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಮುಗಿಬಿದ್ದು ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟದಿಂದ ಬರುವ ರೈಲ್ವೆ ಪ್ರಯಾಣಿಕರನ್ನ ಮಾತ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರ್‌ಟಿಪಿಸಿಆರ್ ನೆಗೆಟಿವ್ ವರದಿ, 1 ಲಸಿಕೆ ಪಡೆದ ದಾಖಲೆ ಪರಿಶೀಲನೆ ಮಾಡಿ ಪ್ರಯಾಣಿಕರನ್ನ ಜಿಲ್ಲೆಯ ಒಳಗೆ ಬಿಡಲಾಗುತ್ತಿದೆ. ಇದನ್ನೂ ಓದಿ: ಫಿಲಿಪೈನ್ಸ್ ಮಿಲಿಟರಿ ವಿಮಾನ ದುರಂತ – 29 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

  • ಲಾಕ್‍ಡೌನ್ ಎಫೆಕ್ಟ್- ಕೊಡಗು ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ನಷ್ಟ

    ಲಾಕ್‍ಡೌನ್ ಎಫೆಕ್ಟ್- ಕೊಡಗು ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ನಷ್ಟ

    ಮಡಿಕೇರಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಪ್ರವಾಸಿಗರ ತಾಣವಾಗಿರುವ ಕೊಡಗು ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡದೇ ಹಿನ್ನೆಲೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

    ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಹತ್ತಾರು ಪ್ರವಾಸಿ ತಾಣಗಳಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ರಾಜ್ಯದ ಪ್ರವಾಸಿಗರೇ ಅಷ್ಟೇ ಅಲ್ಲ ದೇಶ, ವಿದೇಶದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರವಾಸಿಗರ ಹಾಟ್ ಸ್ಪಾಟ್ ಎನಿಸಿರುವ ಮಂಜಿನನಗರಿ ಮಡಿಕೇರಿಯಲ್ಲಿರುವ ರಾಜಾಸೀಟನ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಮೋಡವೇ ಧರೆಗಿಳಿವ ಮುಗಿಲು ಪೇಟೆ ಎಂದು ಹೆಸರಾದ ಮಾಂದಲಪಟ್ಟಿ, ಧುಮ್ಮುಕ್ಕಿ ಹರಿವ ಅಬ್ಬಿಜಲಪಾತ ಹೀಗೆ ಸಾಲು ಸಾಲು ಪ್ರವಾಸಿ ತಾಣಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಈ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರು ಬರದೇ ಇರುವ ಕಾರಣ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ನೂರಾರು ಕೋಟಿ ನಷ್ಟ ಆಗಿದೆ. ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

    ಕೊಡಗು ಜಿಲ್ಲೆಯಲ್ಲಿರುವ 300ಕ್ಕೂ ಹೆಚ್ಚು ರೆಸಾರ್ಟ್, 500ಕ್ಕೂ ಹೆಚ್ಚು ಹೋಟೆಲ್ ಮತ್ತು 3000 ಕ್ಕೂ ಹೆಚ್ಚು ಹೋಂಸ್ಟೇಗಳು ಸಾವಿರಾರು ಪ್ರವಾಸಿಗರಿಗೆ ಊಟ ವಸತಿಯೊಂದಿಗೆ ವಿಶೇಷ ಆತಿಥ್ಯ ನೀಡುವ ಮೂಲಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದವು. ಅಲ್ಲದೇ ಪ್ರವಾಸಿ ತಾಣಗಳ ಎಂಟ್ರಿ ಫೀಜ್ ಗಾಗಿ ಪ್ರವಾಸೋದ್ಯಮ ಇಲಾಖೆ ಸಂಗ್ರಹಿಸುತ್ತಿದ್ದ ಶುಲ್ಕವೇ ಸರ್ಕಾರಕ್ಕೆ ಹತ್ತಾರು ಲಕ್ಷ ರೂಪಾಯಿ ಆದಾಯ ತಂದುಕೊಡುತಿತ್ತು. ಆದರೆ ಜಿಲ್ಲೆಯಲ್ಲಿ ಲಾಕ್‍ಡೌನ್ ಆದ ಪರಿಣಾಮ ಎಲ್ಲಾ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಬಣಗುಡುತ್ತಿವೆ. ಹೋಂ ಸ್ಟೆ, ರೆಸಾರ್ಟ್, ಹೊಟೇಲ್ ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಎಲ್ಲವೂ ಬಂದ್ ಆಗಿದ್ದರಿಂದ ಕೊಡಗಿನ ಆರ್ಥಿಕತೆಗೆ ಮೂರು ತಿಂಗಳಲ್ಲಿ ಕನಿಷ್ಠ 250 ಕೋಟಿ ನಷ್ಟವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಈಶ್ವರ್ ಕುಮಾರ್ ಖಂಡು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೊರಗಿನವರಿಗಿಲ್ಲ ಬ್ರೇಕ್ – ಕೊಡಗಿನಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ

    ಮತ್ತೊಂದೆಡೆ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ಇಂದು ದಿಕ್ಕು ತೋಚದಂತೆ ಕಂಗಾಲಾಗಿವೆ. ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಾ ಜೀವನ ಕಂಡುಕೊಂಡಿದ್ದವರು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇನ್ನು ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳ ಮಾಲೀಕರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಮೂರೂವರೆ ತಿಂಗಳಿಂದ ಬೆಡ್ಡು, ಬೆಡ್ ಕವರ್ ಸೇರಿದಂತೆ ಯಾವುದನ್ನು ಬಳಸದೇ ಎಲ್ಲವೂ ಕೊಡಗಿನ ಪರಿಸರದಲ್ಲಿ ಬೂಸ್ಟ್ ಹಿಡಿದು ಹಾಳಾಗಿವೆ. ಇವುಗಳನ್ನು ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸದಾಗಿ ಎಲ್ಲವನ್ನೂ ಕೊಂಡುಕೊಳ್ಳಬೇಕಾದ ಸ್ಥಿತಿ ಇದೆ ಎಂದು ಹೋಂಸ್ಟೇ ಮಾಲೀಕರ ಅಳಲು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಜುಲೈ 5ರ ಬಳಿಕವೂ ಅನ್‍ಲಾಕ್ ಡೌಟ್- ಬೋಪಯ್ಯ ಸುಳಿವು

    ಜಿಲ್ಲೆಗೆ ಬರುತ್ತಿದ್ದ ಸಾವಿರಾರು ಪ್ರವಾಸಿಗರ ನಂಬಿ ನೂರಾರು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಬದುಕು ಕಟ್ಟಿಕೊಂಡಿದ್ದರು. ಈಗ ಅವರ ಬದುಕು ಕೂಡ ಬೀದಿಗೆ ಬಂದಿದೆ. ಒಟ್ಟಿನಲ್ಲಿ ಪ್ರವಾಸೋದ್ಯಮ ಬಂದ್ ಆಗಿದ್ದರಿಂದ ಜಿಲ್ಲೆಯಲ್ಲಿ 250 ಕೋಟಿಯಷ್ಟು ವಹಿವಾಟು ನಷ್ಟವಾಗಿದ್ದು, ಸಾವಿರಾರು ಕುಟುಂಬಗಳು ಬದುಕಿನ ಅತಂತ್ರ ಸ್ಥಿತಿ ಅನುಭವಿಸುತ್ತಿವೆ. ಇದನ್ನೂ ಓದಿ:ಕೊಡಗಿನಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಕೆ ಸುಳಿವು ನೀಡಿದ ಡಿಸಿ

  • ಪ್ರವಾಸಿಗರ ಭೇಟಿಗೆ ತಾಜ್ ಮಹಲ್ ಮುಕ್ತ – ಒಂದೇ ಬಾರಿಗೆ 650 ಮಂದಿಗೆ ಅವಕಾಶ

    ಪ್ರವಾಸಿಗರ ಭೇಟಿಗೆ ತಾಜ್ ಮಹಲ್ ಮುಕ್ತ – ಒಂದೇ ಬಾರಿಗೆ 650 ಮಂದಿಗೆ ಅವಕಾಶ

    ಲಕ್ನೋ: ಕೊರೊನಾ ಲಾಕ್‍ಡೌನ್ ಬಳಿಕ ಮೊದಲ ಬಾರಿಗೆ ವಿಶ್ವ ವಿಖ್ಯಾತ ತಾಜ್ ಮಹಲ್ ಪ್ರವೇಶಕ್ಕೆ ಷರತ್ತು ವಿಧಿಸಿ ಪ್ರವಾಸಿಗರ ಭೇಟಿಗೆ ಅನುಮತಿ ನೀಡಲಾಗಿದೆ.

    ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಬಹುತೇಕ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿದ್ದವು. ಸೋಂಕು ಪ್ರಸರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ತೆರೆಯಲು ನಿರ್ಧರಿಸಲಾಗಿದೆ. ತಾಜ್‍ಮಹಲ್ ಸೇರಿದಂತೆ, ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಡುವ ಎಲ್ಲಾ ಸ್ಮಾರಕಗಳನ್ನು ಇಂದಿನಿಂದ (ಜೂ.16) ಮತ್ತೆ ತೆರೆಯಲಾಗುತ್ತಿದ್ದು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಸುಮಾರು 2 ತಿಂಗಳ ಬಳಿಕ ಪ್ರವಾಸಿಗರಿಗೆ ತಾಜ್‍ಮಹಲ್ ಪ್ರವೇಶಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆ. ಇದನ್ನೂ ಓದಿ: ಕಾನೂನು ರಕ್ಷಣೆ ರದ್ದು – ಟ್ವಿಟ್ಟರ್ ವಿರುದ್ಧ ಬಿತ್ತು ಮೊದಲ ಕೇಸ್

    ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಪ್ರೇಕ್ಷಣೀಯ ಸ್ಥಳಗಳಾದ ಕೆಂಪುಕೋಟೆ, ತಾಜ್‍ಮಹಲ್, ಅಜಂತಾ ಗುಹೆ ಸೇರಿದಂತೆ ಎಲ್ಲಾ ಕೇಂದ್ರೀಕೃತ ಸ್ಮಾರಕಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಏಪ್ರಿಲ್ 15ರಿಂದ ಮುಚ್ಚಲು ಸರ್ಕಾರ ಆದೇಶಿಸಿತ್ತು. ಇದೀಗ ತಾಜ್ ಮಹಲ್‍ಗೆ ಭೇಟಿ ನೀಡುವ ಪ್ರವಸಿಗರಿಗೆ ಅವಕಾಶ ಕಲ್ಪಸಿಕೊಡಲಾಗಿದೆ.

    ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ತಾಜ್‍ಮಹಲ್‍ನ್ನು ಕೊರೊನಾ ಕಾರಣದಿಂದಾಗಿ ಎರಡನೇ ಬಾರಿಗೆ ಏಪ್ರಿಲ್ 4ರಿಂದ ಮುಚ್ಚಲಾಗಿತ್ತು. ಕಳೆದ ವರ್ಷ ಕೂಡ ಕೋವಿಡ್ ಹೆಚ್ಚಾಗಿದ್ದರಿಂದ ತಾಜ್‍ಮಹಲ್‍ಗೆ ಪ್ರವಾಸಿಗರ ಪ್ರವೇಶವನ್ನು ನಿಬರ್ಂಧಿಸಲಾಗಿತ್ತು.

    ಒಮ್ಮೆಗೆ ಕೇವಲ 650 ಮಂದಿ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ ಸ್ಮಾರಕದ ಯಾವುದೇ ಭಾಗವನ್ನು ಮುಟ್ಟಲು ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ. ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಾಜ್‍ಮಹಲ್‍ಗೆ ಭೇಟಿ ನೀಡುವ ಪ್ರವಾಸಿಗರು ಸ್ಪಂಜಿನಂತಹ ಕಾರ್ಪೆಟ್ ಮೇಲೆ ಮಾತ್ರ ನಡೆಯಬೇಕು. ಅಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗಿದ್ದು, ತಾಜ್‍ಮಹಲ್ ಪ್ರವೇಶಿಸುವ ಪ್ರವಾಸಿಗರ ಶೂ, ಚಪ್ಪಲಿಗಳು ಸ್ಯಾನಿಟೈಸ್ ಆಗಲಿದೆ.

    ಕಳೆದ 2 ತಿಂಗಳುಗಳಿಂದ ಅಂಗಡಿ ತೆರೆಯಲಾಗದೇ ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸಿದ್ದೆವು. ಈಗ ತಾಜ್ ಮಹಲ್ ಅನ್ನು ಪ್ರವಾಸಿಗರಿಗೆ ತೆರೆಯಲಾಗಿದ್ದು, ನಾವೂ ಕೂಡ ಅಂಗಡಿಗಳನ್ನು ತೆರೆಯುತ್ತಿದ್ದೇವೆ. ಇದರಿಂದ ನಮ್ಮ ಸಂಕಷ್ಟ ಕೊಂಚ ಸಹಾಯವಾಗುತ್ತದೆ ಎಂದು ಭಾವಿಸಿದ್ದೇವೆ ಎಂದು ಅಲ್ಲಿನ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

  • ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮಗೇ ಅಸಡ್ಡೆ ಯಾಕೆ- ಉಡುಪಿ ಡಿಸಿ ಪ್ರಶ್ನೆ

    ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮಗೇ ಅಸಡ್ಡೆ ಯಾಕೆ- ಉಡುಪಿ ಡಿಸಿ ಪ್ರಶ್ನೆ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಪ್ರತಿ ದಿನ ನೂರರ ಮೇಲೆ ಕೇಸ್ ದಾಖಲಾಗುತ್ತಿವೆ. ಜನ ಕೋವಿಡ್ ಮಾರ್ಗಸೂಚಿ ಪಾಲಿಸದೆ ಓಡಾಡುತ್ತಿರುವುದರಿಂದ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಗರದ ಹೊರಭಾಗದಲ್ಲಿ ರೈಡ್ ಗೆ ಇಳಿದ ಡಿಸಿ, ಉಡುಪಿ ತಾಲೂಕಿನ ಸಂತೆಕಟ್ಟೆ ಬ್ರಹ್ಮಾವರದಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದಾರೆ. ಖಾಸಗಿ ಬಸ್ ಗಳಿಂದ ನಿಯಮ ಉಲ್ಲಂಘನೆಯಾಗುತ್ತಿದ್ದು, ಪೀಕ್ ಹವರ್ ನಲ್ಲಿ ಬಸ್ ಗಳು ತುಂಬಿ ತುಳುಕುತ್ತಿರುತ್ತವೆ. ಬಸ್ ಗಳನ್ನು ತಡೆದು ದಂಡ ಹಾಕಿದ ಅಧಿಕಾರಿಗಳು, ಚಾಲಕ ಹಾಗೂ ನಿರ್ವಾಹಕರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ.

    ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಡಿಸಿ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂಗಡಿ ಮಾಲೀಕರು, ಮೆಡಿಕಲ್, ಬ್ಯಾಂಕ್ ಗಳ ಮೇಲೆ ಡಿಸಿ 5 ಸಾವಿರ ದಂಡ ಹಾಕಿದ್ದಾರೆ. ಮಾಸ್ಕ್ ಹಾಕದ ಸಾರ್ವಜನಿಕರ ಮೇಲೆ 100 ರೂಪಾಯಿ ದಂಡ ವಿಧಿಸಿದ್ದಾರೆ. ಬಸ್ ನಿಂದ ಕೆಳಗಿಳಿಸಿ ತೆರಳಿದ ಜಿಲ್ಲಾಧಿಕಾರಿ ವಿರುದ್ಧ ವಿದ್ಯಾರ್ಥಿನಿಯರು ಅಸಮಧಾನ ವ್ಯಕ್ತಪಡಿಸಿದರು. ಹೆಚ್ಚುವರಿ ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಯಾಣಿಕರು ಯಾವುದೇ ಕಾರಣಕ್ಕೂ ನಿಂತು ಪ್ರಯಾಣ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

    ಜಿಲ್ಲಾಧಿಕಾರಿ ಮಾಧ್ಯಮಗಳ ಜೊತೆ ಮಾತನಾಡಿ, ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಜನ ಮಾರ್ಗಸೂಚಿ ಪಾಲಿಸುತ್ತಿಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದ್ದರೂ ಅಸಡ್ಡೆ ಯಾಕೆ? ಸಾಂಕ್ರಾಮಿಕ ರೋಗ ಹತೋಟಿಗೆ ಬರುವ ತನಕ ಜಾಗರೂಕರಾಗಿರಿ ಎಂದರು.

    ಗ್ರಾಮೀಣ ಭಾಗಕ್ಕೆ ಕಡಿಮೆ ಸಂಖ್ಯೆಯಲ್ಲಿ ಬಸ್ ಇದೆ. ಕಾಲೇಜು ಬಿಡುವ ಸಂದರ್ಭದಲ್ಲಿ ಸಿದ್ಧಾಪುರ ರಸ್ತೆಯಲ್ಲಿ ಒಂದೇ ಬಸ್ ಇದೆ. ಹೀಗಾಗಿ ತುಂಬಿದ ಬಸ್ ನಲ್ಲೇ ಓಡಾಡಬೇಕಾಗುತ್ತದೆ. ಬಸ್ ನಿಂದ ಇಳಿಸಿದರೆ ಎಲ್ಲಿಗೆ ಹೋಗಬೇಕು ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.