Tag: trauma center

  • ಹೈದರಾಬಾದ್ ಕರ್ನಾಟಕದ ಜನರ ಸೇವೆಗೆ ಟ್ರೋಮಾ ಸೆಂಟರ್ ಸಿದ್ಧ: ಸುಧಾಕರ್

    ಹೈದರಾಬಾದ್ ಕರ್ನಾಟಕದ ಜನರ ಸೇವೆಗೆ ಟ್ರೋಮಾ ಸೆಂಟರ್ ಸಿದ್ಧ: ಸುಧಾಕರ್

    – ಕೇಂದ್ರ ಸಚಿವ ಡಾ. ಹರ್ಷವರ್ಧನ್ ಲೋಕಾರ್ಪಣೆ
    – ಟ್ರೋಮಾ ಸೆಂಟರ್ ವಿಶೇಷತೆ ಏನು?

    ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಟ್ರೋಮಾ ಸೆಂಟರ್ ತೆರೆದಿರುವುದು ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ಅವರು ಅಭಿಪ್ರಾಯಪಟ್ಟರು.

    ಪ್ರಧಾನಿ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್) ಬಳ್ಳಾರಿಯಲ್ಲಿ “ಸೂಪರ್ ಸ್ಪೆಷಾಲಿಟಿ ಟ್ರಾಮಾ ಘಟಕ”ವನ್ನು ಸೋಮವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರು ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪಾಲ್ಗೊಂಡಿದ್ದರು.

    ಈ ವೇಳೆ ಮಾತನಾಡಿದ ಸಚಿವ ಡಾ. ಸುಧಾಕರ್, ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯುನ್ನತ ಟ್ರೋಮಾ ಸೆಂಟರ್ ತೆರೆದಿರುವುದು ಅತ್ಯಂತ ಅವಶ್ಯವಾಗಿದೆ. ಪ್ರತಿ ವರ್ಷ ರಾಜ್ಯದಲ್ಲಿ 4.7 ಲಕ್ಷ ಜನರು ರಸ್ತೆ ಅಪಘಾತಕ್ಕೆ ಒಳಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಮೃತಪಡುತ್ತಿದ್ದಾರೆ. ರಸ್ತೆ ಅಪಘಾತ ನಡೆದ 1 ಗಂಟೆ ಗೋಲ್ಡನ್ ಹವರ್ ಎಂದು ಪರಿಗಣಿಸುತ್ತೇವೆ. ಈ ಅವಧಿಯಲ್ಲಿ ಚಿಕಿತ್ಸೆ ನೀಡಿದರೆ ಬದುಕಿಸಬಹುದು. ಇಂತಹ ತುರ್ತು ಚಿಕಿತ್ಸೆಗಾಗಿ ದೂರದ ಬೆಂಗಳೂರಿಗೆ ಬರುವ ಅಗತ್ಯವಿತ್ತು. ಈಗ ಬಳ್ಳಾರಿ ಸುತ್ತಮುತ್ತಲಿನ ಜಿಲ್ಲೆ ಹಾಗೂ ರಾಜ್ಯದಲ್ಲಿ ತುರ್ತು ಚಿಕಿತ್ಸೆ ಟ್ರೋಮಾ ಕೇಂದ್ರದಲ್ಲಿ ಪಡೆಯಬಹುದು ಎಂದರು.

    ನೂತನ ಟ್ರೋಮಾ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಅಪಾರ. ಒಟ್ಟು 200 ಬೆಡ್ ಸಾಮಥ್ರ್ಯದ ಟ್ರೋಮಾ ಸೆಂಟರ್ 72 ಐಸಿಯು ಬೆಡ್, 20 ವೆಂಟಿಲೇಟರ್ ಹಾಗೂ ಜನರಲ್ ವಾರ್ಡ್ ಗಳನ್ನು ಒಳಗೊಂಡಿದೆ. ಹತ್ತಿರದ ನೆರೆ ರಾಜ್ಯದಲ್ಲಿ ಅಪಘಾತವಾದರೂ ಸಹ ಈ ಟ್ರೋಮಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

    ವೈದ್ಯಕೀಯ ಸೇವೆಯಲ್ಲಿ ಇತರೆ ರಾಜ್ಯಗಳಿಂತ ಕರ್ನಾಟಕ ಮುಂಚೂಣಿಯಲ್ಲಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಸೂಕ್ತ ಚಿಕಿತ್ಸೆಗಾಗಿ ಕಡಿಮೆ ಅವಧಿಯಲ್ಲಿ 20 ಸಾವಿರ ಐಸಿಯು ಬೆಡ್‍ಗಳ ನಿರ್ಮಾಣವನ್ನು ಮಾಡುವ ಮೂಲಕ ರಾಜ್ಯದ ಸಾಮಥ್ರ್ಯ ತೋರಿಸಿದ್ದೇವೆ ಎಂದರು.

    2021ರೊಳಗೆ ನೂತನ ವೈದ್ಯಕೀಯ ಕಾಲೇಜು ಪ್ರಾರಂಭ:
    ಕಾರ್ಯಕ್ರಮದ ನಡುವೆ ಕೇಂದ್ರ ಸಚಿವ ಹರ್ಷವರ್ಧನ್ ಅವರು ಕರ್ನಾಟಕದಲ್ಲಿ ಶೀಘ್ರವೇ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ಹೇಳಿದರು. ಅದಕ್ಕೆ ಉತ್ತರಿಸಿದ ಸಚಿವರು, ಚಿಕ್ಕಬಳ್ಳಾಪುರ ಸೇರಿದಂತೆ 4 ನೂತನ ವೈದ್ಯಕೀಯ ಕಾಲೇಜುಗಳು 2021ರೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು. ಇತ್ತೀಚೆಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ವೇಳೆ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾಗಿ ಉಲ್ಲೇಖಿಸಿದರು.

    ಕಾರ್ಯಕ್ರಮದಲ್ಲಿ ವಿಮ್ಸ್ ನ ನೂತನ ಸಿಟಿ ಸ್ಕ್ಯಾನರ್‍ನನ್ನು ಸಚಿವರ ಡಾ. ಸುಧಾಕರ್ ಉದ್ಘಾಟಿಸಿದರು. ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರಾದ ಅಶ್ವಿನ್ ಕುಮಾರ್ ಚೌಬೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಇತರರು ಪಾಲ್ಗೊಂಡಿದ್ದರು.

    ಟ್ರೋಮಾ ಸೆಂಟರ್ ನ ವಿಶೇಷತೆ:
    150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟ್ರೋಮಾ ಕೇಂದ್ರದಲ್ಲಿ ಒಟ್ಟು 200 ಬೆಡ್ ಒಳಗೊಂಡಿದೆ. 72 ಐಸಿಯು ಬೆಡ್, 20 ವೆಂಟಿಲೇಟರ್, ಸಿಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್ ರೇ ಸೌಕರ್ಯ ಇರಲಿದೆ. ಜೊತೆಗೆ ಸೂಪರ್ ಸ್ಪೆಷಾಲಿಟಿ ಎಮರ್ಜೆನ್ಸಿ ಹಾಗೂ ಟ್ರೋಮಾ, ನ್ಯೂರೋ ಸರ್ಜರಿ ಹಾಗೂ ಆರ್ಥೋಪೆಡಿಕ್ ಸೇವೆ ಸಹ ಒಳಗೊಂಡಿದೆ.