Tag: Trap

  • ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಹಳ್ಳಿಗರು

    ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಹಳ್ಳಿಗರು

    ಚಿಕ್ಕಮಗಳೂರು: ಒಂದೇ ವಾರದಲ್ಲಿ ಮೂರು ಕಡೆ ಇಟ್ಟಿದ್ದ ಬೋನಿಗೆ ಬೀಳದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಟಕ್ಕರ್ ಕೊಟ್ಟುಕೊಂಡು ಓಡಾಡುತ್ತಿತ್ತು. ಆದರೆ ನಾಲ್ಕನೇ ಜಾಗದಲ್ಲಿ ಇಟ್ಟ ಬೋನಿನಲ್ಲಿ ಚಿರತೆ ಸೆರೆಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ನಡೆದಿದೆ.

    ಬೀರೂರಿನ ಸುತ್ತಮುತ್ತಲಿನ ಬ್ಯಾಗಡೇಹಳ್ಳಿ, ಹುಲ್ಲೇಹಳ್ಳಿ, ಜೋಗಿಹಟ್ಟಿ, ಸೀಗೆಹಡ್ಲು, ದಾಸರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಜನರಿಗೆ ಈ ಚಿರತೆ ತಲೆನೋವು ತರಿಸಿತ್ತು. ಕಳೆದೊಂದು ತಿಂಗಳಿಂದ ಊರಿನ ಜನರ ಕಣ್ಣಿಗೆ ಬಿದ್ದು ಮಾಯವಾಗುತ್ತಿತ್ತು. ಇದರಿಂದ ಹಳ್ಳಿಯ ಜನ ಹೊಲಗದ್ದೆಗಳಿಗೆ ತೋಟಕ್ಕೆ ಹೋಗಲು ಭಯ ಪಡುತ್ತಿದ್ದರು. ಹಳ್ಳಿಯಲ್ಲಿ ನಾಯಿ-ಕುರಿಗಳನ್ನ ಹೊತ್ತೊಯ್ದು ಒಂದೆರಡು ದಿನ ಕಾಣಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಅಲ್ಲಲ್ಲೇ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಕೆಲ ಹಳ್ಳಿಗಳಲ್ಲಿ ಜಾನುವಾರುಗಳನ್ನೂ ಬೇಟೆಯಾಡಿತ್ತು. ಇದರಿಂದ ಭಯಗೊಂಡು ಹಳ್ಳಿಗರು ಅರಣ್ಯ ಇಲಾಖೆಗೆ ಚಿರತೆಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.

    ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ವಾರದಲ್ಲಿ ಮೂರು ಕಡೆ ಬೋನಿಟ್ಟರು ಕೂಡ ಚಿರತೆ ಸೆರೆಯಾಗಿರಲಿಲ್ಲ. ಕಡೆಯದಾಗಿ ಬೀರೂರಿನ ಕಾವಲು ಚೌಡೇಶ್ವರಿ ದೇವಾಲಯದ ಬಳಿ ಅರಣ್ಯ ಇಲಾಖೆ ನಾಲ್ಕನೇ ಬಾರಿ ಇಟ್ಟ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು 12-14 ವರ್ಷದ ಚಿರತೆ ಪ್ರಾಯದ ಚಿರತೆಯಾಗಿದೆ. ಸೆರೆ ಹಿಡಿದ ಚಿರತೆಯನ್ನ ಬನ್ನೇರುಘಟ್ಟಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ಸಂತೋಷ್ ಕುಮಾರ್ ಹಾಗೂ ಹರೀಶ್ ಪಾಲ್ಗೊಂಡಿದ್ದರು. ಕಳೆದೊಂದು ತಿಂಗಳಿಂದ ಹತ್ತಾರು ಹಳ್ಳಿಗರಿಗೆ ಭಯ ಹುಟ್ಟಿಸಿದ ಚಿರತೆ ಸೆರೆಯಾಗಿದ್ದರಿಂದ ಹಳ್ಳಿಗರು ನಿಟ್ಟುಸಿರು ಬಿಟ್ಟಿದ್ದಾರೆ.

  • ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವು

    ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವು

    ಯಾದಗಿರಿ: ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡ್ಲೂರು ಸಮೀಪದಲ್ಲಿ ನಡೆದಿದೆ.

    ವಡಗೇರಾ ತಾಲೂಕಿನ ಅಗ್ನಿಹಾಳ ಗ್ರಾಮದ ಮನು(20) ಈ ಅವಘಡದಲ್ಲಿ ಮೃತ ಮೀನುಗಾರ. ಇಂದು ಬೆಳಗ್ಗೆ ತನ್ನ ತಂದೆ ಜೊತೆಗೆ ಕೃಷ್ಣಾನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮನು, ಥರಮಾಕೋಲ್ ದೋಣಿಯ ಮೂಲಕ ಬಲೆ ಹಾಕಲು ಮುಂದಾಗಿದ್ದ, ಈ ವೇಳೆ ಮನು ಕಾಲಿಗೆ ಬಲೆ ಸಿಕ್ಕು ಹಾಕಿಕೊಂಡಿದೆ. ಇದರಿಂದಾಗಿ ನೀರಿನಲ್ಲಿ ಕಾಲು ಅಲುಗಾಡಿಸಲಾಗದೇ ದೋಣಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

    ಸದ್ಯ ಸಹ ಮೀನುಗಾರರು ಮೃತದೇಹ ಹೊರ ತೆಗೆದಿದ್ದು, ನದಿ ತೀರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಭಾಗಮಂಡಲ ಜಲಾವೃತ – ಘಟಪ್ರಭಾ, ಕೃಷ್ಣ ನದಿ ತೀರದ ಜನರಿಗೆ ಪ್ರವಾಹ ಭೀತಿ

  • ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಉಡುಪಿ: ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿರುವುದು ಜಾಸ್ತಿಯಾಗುತ್ತಿದೆ.

    ಜಿಲ್ಲೆಯ ಕಾಪು ತಾಲೂಕಿನಲ್ಲಿ ಹಲವಾರು ದಿನಗಳಿಂದ ಆತಂಕ ಹುಟ್ಟಿಸಿದ ಚಿರತೆಯೊಂದು ಬೋನಿಗೆ ಬಿದ್ದಿದೆ. ಕಾಪು ತಾಲೂಕಿನಲ್ಲಿ ಜನವಸತಿ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸುತ್ತಿದ್ದ ಚಿರತೆಯೊಂದು ಭಾನುವಾರ ತಡರಾತ್ರಿ ಬೋನಿಗೆ ಬಿದ್ದಿದೆ.

    ಕಾಪು ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಕುರಾಲು ಬಳಿ ಚಿರತೆ ಜನರಿಗೆ ಕಾಟ ನೀಡುತ್ತಿತ್ತು. ಕುರಾಲ್ ರೆನ್ನಿ ಕುಂದರ್ ಎಂಬವರ ಮನೆ ಬಳಿ ಚಿರತೆಯ ಓಡಾಟದ ಬಗ್ಗೆ ಮಾಹಿತಿ ಪಡೆದು ಅರಣ್ಯ ಇಲಾಖೆ ಬೋನನ್ನು ಇರಿಸಿತ್ತು.

    ಕಳೆದ ರಾತ್ರಿ ನಾಲ್ಕು ವರ್ಷದ ಗಂಡು ಚಿರತೆ ಬೋನಿಗೆ ಬೀಳುವ ಮೂಲಕ ಜನರು ನಿಟ್ಟುಸಿರುವ ಬಿಡುವಂತಾಗಿದೆ. ಕಾರ್ಯಾಚರಣೆಯಲ್ಲಿ ಆರ್.ಎಫ್.ಒ ಜೀವನ್ ದಾಸ್ ಶೆಟ್ಟಿ, ಆರ್.ಎಫ್.ಒ ಗುರುಪ್ರಸಾದ್, ಫಾರೆಸ್ಟ್ ಗಾರ್ಡ್ ಎಚ್ ಜಯರಾಮ್ ಶೆಟ್ಟಿ ಮತ್ತಿತರು ಭಾಗಿಯಾಗಿದ್ದರು. ಹಲವಾರು ಭಾಗಗಳಲ್ಲಿ ಬೋನ್ ಗಳನ್ನು ಇಡಲಾಗಿತ್ತು.

  • ಒಂದೂವರೆ ವರ್ಷದಿಂದ ಬಲೆ ಹಾಕಿ ಕಾಯ್ತಿದ್ದ – ಕೊನೆಗೂ ಪ್ರತೀಕಾರಕ್ಕಾಗಿ ಚಿರತೆ ಕೊಂದ

    ಒಂದೂವರೆ ವರ್ಷದಿಂದ ಬಲೆ ಹಾಕಿ ಕಾಯ್ತಿದ್ದ – ಕೊನೆಗೂ ಪ್ರತೀಕಾರಕ್ಕಾಗಿ ಚಿರತೆ ಕೊಂದ

    – ಹಸು ಕಳೆದುಕೊಂಡವನ ಸೇಡಿನ ಕಥೆ

    ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ಹಸುವನ್ನು ಕೊಂದಿದ್ದಕ್ಕೆ ಒಂದೂವರೆ ವರ್ಷದಿಂದ ಕಾದು ಕೊನೆಗೂ ಚಿರತೆಯನ್ನು ಕೊಂದಿರುವ ಘಟನೆ ಕೇರಳದ ಮುನ್ನಾರ್‌ನಲ್ಲಿ ನಡೆದಿದೆ.

    ಚಿರತೆಯನ್ನು ಕೊಂದ 34 ವರ್ಷದ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದೆ. ಚಿರತೆ ಆರೋಪಿಯ ಹಸುವನ್ನು ಒಂದು ವರ್ಷದ ಹಿಂದೆ ಕೊಂದ ನಂತರ ಚಿರತೆಗಾಗಿ ಬಲೆ ಹಾಕಿದ್ದನು ಎಂದು ತಿಳಿದು ಬಂದಿದೆ.

    ಸೆಪ್ಟೆಂಬರ್ 8 ರಂದು ಕನ್ನಿಮಲಾ ಎಸ್ಟೇಟ್ ಕೆಳ ವಿಭಾಗದಲ್ಲಿ ನಾಲ್ಕು ವರ್ಷದ ಚಿರತೆ ಬಲೆಗೆ ಬಿದ್ದು ಶವವಾಗಿ ಪತ್ತೆಯಾಗಿತ್ತು. ನಂತರ ಅರಣ್ಯ ಇಲಾಖೆ ಚಿರತೆಯ ಸಾವಿನ ಬಗ್ಗೆ ತನಿಖೆ ಆರಂಭಿಸಿತ್ತು. ತನಿಖೆ ವೇಳೆ ಕುಮಾರ್ ಚಿರತೆಯನ್ನು ಕೊಂದಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಈ ವೇಳೆ ಇದು ಪ್ರತೀಕಾರಕ್ಕಾಗಿ ನಡೆದ ಕಥೆ ಎಂದು ಬಹಿರಂಗವಾಗಿದೆ.

    ಕುಮಾರ್ ಹಸು ಹೊಲದಲ್ಲಿ ಮೇಯುತ್ತಿದ್ದಾಗ ಇದೇ ಚಿರತೆ ಹಾಡಹಗಲೇ ಹಸುವಿನ ದಾಳಿ ಮಾಡಿ ಕೊಂದು ಹಾಕಿತ್ತು. ಆ ಹಸು ಕುಮಾರ್ ಜೀವನದ ಆಧಾರವಾಗಿತ್ತು. ಹೀಗಾಗಿ ತನ್ನ ಹಸುವನ್ನು ಕೊಂದು ಚಿರತೆಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಎಂದು ನೆರೆಹೊರೆಯವರು ಹೇಳಿದ್ದಾರೆ.

    ಕುಮಾರ್‌ನ ಸೇಡಿನ ಕಥೆಯನ್ನು ನೆರೆಹೊರೆಯವರು ಅರಣ್ಯ ಸಿಬ್ಬಂದಿಗೆ ತಿಳಿಸಿದ ನಂತರ ಚಿರತೆಯ ಸಾವಿನ ರಹಸ್ಯ ಬಹಿರಂಗವಾಗಿದೆ. ನಾನು ಚಿರತೆಗಾಗಿ ಬಲೆಯನ್ನು ಹಾಕಿದ್ದೆ. ಸುಮಾರು ಕಳೆದ 1.5 ವರ್ಷಗಳಿಂದ ಚಿರತೆಗಾಗಿ ಕಾಯುತ್ತಿದ್ದೆ. ಆಗಾಗ ನಾನು ಹಾಕಿದ್ದ ಬಲೆಯನ್ನು ಪರಿಶೀಲಿಸುತ್ತಿದ್ದೆ. ಕೊನೆಗೆ ಚಿರತೆ ನಾನು ಹಾಕಿದ್ದ ಬಲೆಗೆ ಬಿದ್ದಿದೆ. ಆಗ ಚಿರತೆಯನ್ನು ಚಾಕುವಿನಿಂದ ಇರಿದು ಕೊಂದಿದ್ದೇನೆ ಎಂದು ಆರೋಪಿ ಕುಮಾರ್ ಅರಣ್ಯ ಸಿಬ್ಬಂದಿಗೆ ತಿಳಿಸಿದ್ದಾನೆ.

    ಮುನ್ನಾರ್ ಎಸಿಎಫ್ ಸಜೀಶ್ ಕುಮಾರ್ ಮತ್ತು ಶ್ರೇಣಿ ಅಧಿಕಾರಿ ಎಸ್.ಹರೀಂದ್ರನಾಥ್ ತಂಡ ಆರೋಪಿಯನ್ನು ಬಂಧಿಸಿದೆ. ಸದ್ಯಕ್ಕೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • 50 ಕೆ.ಜಿ ತೂಕದ ಅಪರೂಪದ ಆಕಳ ಮೂಗಿನ ತೊರ್ಕೆ ಮೀನು ಪತ್ತೆ

    50 ಕೆ.ಜಿ ತೂಕದ ಅಪರೂಪದ ಆಕಳ ಮೂಗಿನ ತೊರ್ಕೆ ಮೀನು ಪತ್ತೆ

    ಉತ್ತರ ಕನ್ನಡ: ಜಿಲ್ಲೆಯ ಕಾರವಾರ ನಗರದ ಬೈತಖೋಲ್ ಸಮೀಪದ ಲೇಡಿ ಬೀಚ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರ ಬಲೆಗೆ ಬರೋಬ್ಬರಿ ಅರ್ಧ ಕ್ವಿಂಟಾಲ್ ತೂಕದ ಆಕಳ ಮೂಗಿನ ತೊರ್ಕೆ ಮೀನು ಬಿದ್ದಿದೆ.

    ಸಣ್ಣಪುಟ್ಟ ಮೀನು ಹಿಡಿಯಲು ಹಾಕಿದ್ದ ಬಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಬಿದ್ದಿರುವುದು ಮೀನುಗಾರರ ಅಚ್ಚರಿಗೂ ಕಾರಣವಾಗಿದೆ. ಇದನ್ನು ಉದ್ದ ತಲೆಯ ಹಕ್ಕಿ ತೊರ್ಕೆ ಅಥವಾ ಆಕಳ ಮೂಗಿನ ತೊರ್ಕೆ ಎಂದು ಕರೆಯುವ ಈ ಮೀನು ಶಾರ್ಕ್ ಜಾತಿಗೆ ಸೇರಿದೆ.

    ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗಿ ಕಂಡುಬರುವ ಈ ಮೀನು ಎರಡು ಮೀಟರ್ ವರೆಗೂ ಬೆಳೆಯುತ್ತದೆ. ಇದರ ಬಾಲ ಉದ್ದವಾಗಿ ಎರಡು ಮುಳ್ಳುಗಳನ್ನು ಹೊಂದಿರುತ್ತದೆ. ಗರಿಷ್ಠ 16 ವರ್ಷಗಳ ಕಾಲ ಬದುಕುವ ಈ ಮೀನು ಅಳವಿನಂಚಿನಲ್ಲಿರುವ ಪ್ರಬೇಧಗಳಲ್ಲಿ ಒಂದಾಗಿದೆ.

  • ಮೀನು ಹಿಡಿಯಲು ಹೋಗಿ ನೀರಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು

    ಮೀನು ಹಿಡಿಯಲು ಹೋಗಿ ನೀರಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು

    ಉಡುಪಿ: ಜಿಲ್ಲೆಯಲ್ಲಿ ಮಾನ್ಸೂನ್ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಬ್ರಹ್ಮಾವರ ತಾಲೂಕು ಬಾರ್ಕೂರಿನಲ್ಲಿ ಈ ಘಟನೆ ನಡೆದಿದೆ.

    ಬ್ರಹ್ಮಾವರ ತಾಲೂಕಿನ ಬಾರ್ಕೂರು ಹಾಲೆಕೊಡಿ ಹೊಳೆಗೆ ಹರ್ಷ ಮತ್ತು ಕಾರ್ತಿಕ್ ತೆರಳಿ ಕಳೆದ ರಾತ್ರಿ ಮೀನಿಗೆ ಬಲೆ ಹಾಕಿಟ್ಟಿದ್ದರು. ಇಂದು ಬೆಳಗ್ಗಿನ ಜಾವ ಕಟ್ಟಿದ್ದ ಬಲೆಯನ್ನು ಎಳೆಯುವಾಗ ಯುವಕರು ನೀರಿಗೆ ಬಿದ್ದಿದ್ದಾರೆ. ಈಜಲಾಗದೆ ಮುಳುಗಿ ಸತ್ತಿದ್ದಾರೆ ಎನ್ನಲಾಗಿದೆ.

    ನದಿ ಬದಿಗೆ ಹೋದವರು ವಾಪಸ್ ಆಗದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೃತ ವ್ಯಕ್ತಿಗಳಲ್ಲಿ ಓರ್ವರಾದ ಹರ್ಷ, ಖಾಸಗಿ ಫೆನಾನ್ಸ್ ಕಂಪನಿಯಲ್ಲಿ ರಿಕವರಿ ಕೆಲಸ ಮಾಡಿಕೊಂಡಿದ್ದರು. ಕಾರ್ತಿಕ್ ಕೊನೆಯ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದ ಎಂದು ಸಂಬಂಧಿಕರು ಮಾಹಿತಿ ನೀಡಿದರು.

    ಕಳೆದ ರಾತ್ರಿ ಬಿಡಿಸಿಟ್ಟ ಬಲೆಯಲ್ಲಿ ಕಸ ಕಡ್ಡಿ ತುಂಬಿ ಹೆಚ್ಚು ಭಾರವಾಗಿರಬಹುದು. ಬಲೆ ಎಳೆಯುವ ಸಂದರ್ಭ ಆಯತಪ್ಪಿ ಹೊಳೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಇಬ್ಬರು ಯುವಕರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಬಲೆಗೆ ಸಿಕ್ಕ ಮರಿ ತಿಮಿಂಗಿಲನ್ನು ಉಳಿಸಲು ಸಮುದ್ರಕ್ಕೆ ಹಾರಿದ- ವಿಡಿಯೋ ನೋಡಿ

    ಬಲೆಗೆ ಸಿಕ್ಕ ಮರಿ ತಿಮಿಂಗಿಲನ್ನು ಉಳಿಸಲು ಸಮುದ್ರಕ್ಕೆ ಹಾರಿದ- ವಿಡಿಯೋ ನೋಡಿ

    – ಸಾರ್ವಜನಿಕರಿಂದ ಮೆಚ್ಚುಗೆ, ಅಧಿಕಾರಿಗಳಿಂದ 3 ಲಕ್ಷ ದಂಡ

    ಕ್ವೀನ್ಸ್‌ಲ್ಯಾಂಡ್: ಬಲೆಗೆ ಸಿಕ್ಕ ಮರಿ ತಿಮಿಂಗಿಲವನ್ನು ಬದುಕಿಸಲು ವ್ಯಕ್ತಿಯೋರ್ವ ಆಳದ ಸಮುದ್ರಕ್ಕೆ ಧುಮುಕಿ ದಿಟ್ಟತನ ಮೆರೆದಿರುವ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಸಮುದ್ರದಲ್ಲಿ ನಡೆದಿದೆ.

    ಈ ಸಹಾಯ ಮಾಡಿದ ವ್ಯಕ್ತಿಯನ್ನು ಜಾಂಗೊ ಎಂದು ಗುರುತಿಸಲಾಗಿದೆ. ಒಬ್ಬನೇ ಬೋಟಿನಲ್ಲಿ ಹೋಗಿ ತನ್ನ ಜೀವವನ್ನು ಲೆಕ್ಕಿಸದೆ ತಿಮಿಂಗಿಲಕ್ಕಾಗಿ ಸಮುದ್ರಕ್ಕೆ ಹಾರಿದ ಜಾಂಗೊ ಕಾರ್ಯಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆ ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಜಾಂಗೊಗೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ದಂಡವನ್ನು ವಿಧಿಸಿದ್ದಾರೆ.

    ಜಾಂಗೊ ಮಾಡಿದ ಈ ಸಹಾಸವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದರಲ್ಲಿ ಹಂಪ್‍ಬ್ಯಾಕ್ ಜಾತಿಗೆ ಸೇರಿದ ಮರಿ ತಿಮಿಂಗಲವೊಂದು ಸಮುದ್ಯದಲ್ಲಿ ಬಿಟ್ಟಿದ್ದ ಬಲೆಯೊಂದಕ್ಕೆ ಸಿಲುಕಿ ಹೊರಗೆ ಬರಲಾರದೆ ಒದ್ದಾಡುತ್ತಿತ್ತು. ಇದನ್ನು ಕಂಡ ಜಾಂಗೊ ಒಂದು ಚಿಕ್ಕ ಬೋಟಿನಲ್ಲಿ ಹೋಗಿ ಏಕಾಏಕಿ ಸಮುದ್ರಕ್ಕೆ ಧುಮುಕಿ ಸುಮಾರು 5 ನಿಮಿಷಗಳ ಕಾಲ ಈಜಿ ತಿಮಿಂಗಿಲವನ್ನು ಬಲೆಯಿಂದ ಬಿಡಿಸಿ ವಾಪಸ್ ಬಂದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಾಂಗೊ, ನಮ್ಮ ಪರಿಸರದಲ್ಲಿ ಇರುವ ಪ್ರತಿಯೊಂದು ಜೀವರಾಶಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನನ್ನ ಜಾಗದಲ್ಲಿ ಯಾರೇ ಇದ್ದರೂ ತಿಮಿಂಗಿಲವನ್ನು ಆ ಪರಿಸ್ಥಿತಿಯಲ್ಲಿ ನೋಡಿದರೆ ನಾನು ಮಾಡಿದ ಕೆಲಸವನ್ನೇ ಮಾಡುತ್ತಿದ್ದರು. ಜೊತೆಗೆ ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಳ್ಳೆ ಕೆಲಸ ಮಾಡಿದರೂ ನಾವು ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಸಚಿವ ಮಾತನಾಡಿ, ಈ ರೀತಿಯ ಘಟನೆ ನಡೆದಾಗ ಅದನ್ನು ಮೀನುಗಾರಿಕೆ ಇಲಾಖೆಗೆ ತಿಳಿಸಬೇಕು. ಅದರಲ್ಲಿ ಪರಿಣಿತಿ ಪಡೆದವರು ಹೋಗಿ ರಕ್ಷಿಸುತ್ತಾರೆ. ಅದನ್ನು ಬಿಟ್ಟು ಈ ರೀತಿ ಜನರು ಸಹಾಸಕ್ಕೆ ಕೈ ಹಾಕಬಾರದು. ಇದರಿಂದ ಅವರ ಜೀವಕ್ಕೆ ಅಪಾಯವಿರುತ್ತದೆ. ಆದ್ದರಿಂದ ನಿಯಮವನ್ನು ಉಲ್ಲಂಘನೆ ಮಾಡಿದ ಜಾಂಗೊಗೆ 3 ಲಕ್ಷ ದಂಡವನ್ನು ವಿಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆದರೆ ಜಾಂಗೊ ಮಾಡಿದ ಕೆಲಸಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದ್ದು, ಜನರು ಅವರ ಬೆನ್ನಿಗೆ ನಿಂತಿದ್ದಾರೆ. ಜೊತೆಗೆ ಜಾಂಗೊಗೆ ವಿಧಿಸಿರುವ ದಂಡವನ್ನು ಜನರು ಭರಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಗೋ ಫಂಡ್‍ಮಿ ಎಂಬ ಸಂಸ್ಥೆ ಜಾಂಗೊಗೆ 3 ಲಕ್ಷ ರೂ. ಅನ್ನು ಬಹುಮಾನವಾಗಿ ನೀಡಿದೆ.

  • ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ನೆಲಮಂಗಲ: ಒಂದು ವಾರದಲ್ಲಿ ಇಬ್ಬರು ಮಾನವರನ್ನು ತಿಂದು ಮುಗಿಸಿದ ನರಭಕ್ಷಕ ಚಿರತೆಗಳ ಹಾವಳಿ ನೆಲಮಂಗಲದ ಹೊರವಲಯದಲ್ಲಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 11 ಬೋನ್ ಇಟ್ಟಿದ್ದರು. ಇಂದು ಬೆಳ್ಳಂಬೆಳಗ್ಗೆ ಎರಡು ಚಿರತೆ ಮತ್ತು ಮರಿಗಳು ಬೋನಿಗೆ ಬಿದ್ದಿವೆ.

    ತಡರಾತ್ರಿ ಎರಡು ಮರಿ ಹಾಗೂ ಇಂದು ಬೆಳಗ್ಗೆ ಎರಡು ಚಿರತೆ ಬೋನಿಗೆ ಬಿದ್ದಿರುವ ಮಾಹಿತಿಯನ್ನು ಮಾಗಡಿ ಅರಣ್ಯಾಧಿಕಾರಿಗಳು ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಲೂರು ಮತ್ತು ಮಾಗಡಿ ತಾಲೂಕಿನ ಗಡಿ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿವೆ.

    ಒಂದು ಚಿರತೆ ಬೋಡಗನಪಾಳ್ಯ ಹಾಗೂ ಮತ್ತೊಂದು ಚಿರತೆ ಶಿರಗನಹಳ್ಳಿಯಲ್ಲಿ ಬೋನಿಗೆ ಬಿದ್ದಿದೆ. ಚಿರತೆ ಮರಿ ದಾಸೇಗೌಡನ ಪಾಳ್ಯದಲ್ಲಿ ಪ್ರತ್ಯೇಕವಾಗಿ ಕಂಡಿದೆ. ಒಂದೇ ವಾರದಲ್ಲಿ ಮೂರು ವರ್ಷದ ಮಗು, 68 ವರ್ಷದ ವೃದ್ಧೆಯನ್ನು ಬಲಿಪಡೆದ ಚಿರತೆಗಳ ಚಲನ ವಲನದ ಮೇಲೆ ಅರಣ್ಯಧಿಕಾರಿಗಳು ಕಣ್ಣಿಟ್ಟಿದ್ದರು. ದೊಡ್ಡ ಚಿರತೆ ಹಿಡಿಯಲು ಮರಿ ಚಿರತೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

    ಇದೀಗ ಮಾಗಡಿ ವಲಯ ಅರಣ್ಯಾಧಿಕಾರಿಗಳ ಕಾರ್ಯಚರಣೆಗೆ ಅಲ್ಪ ಯಶಸ್ಸು ಸಿಕ್ಕಿದೆ. ಸೆರೆಯಾಗಿರುವ ಚಿರತೆ ನಿನ್ನೆ ವೃದ್ಧೆಯನ್ನು ಬಲಿ ಪಡೆದ ಚಿರತೆಯೋ ಅಥವಾ ಬೇರೆ ಚಿರತೆಯೋ ಎಂಬ ಗೊಂದಲದಲ್ಲಿ ಗ್ರಾಮಸ್ಥರು ಇದ್ದಾರೆ. ಚಿರತೆಯನ್ನು ನೋಡಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಆತಂಕ ವ್ಯಕ್ತವಾಗಿದೆ.

  • ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ದೈತ್ಯ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ

    ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ದೈತ್ಯ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ

    ನೆಲಮಂಗಲ: ಕಳೆದ ಇಪ್ಪತ್ತು ದಿನಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ದೈತ್ಯ ಚಿರತೆಯೊಂದು ಬೋನಿಗೆ ಬಿದ್ದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಬರಗೂರು ಗ್ರಾಮದ ಬಳಿಯಲ್ಲಿ ಚಿರತೆ ಸೆರೆ ಸಿಕ್ಕಿದೆ.

    ಗ್ರಾಮಸ್ಥರ ಒತ್ತಾಯದಿಂದ ಕಳೆದ ಒಂದು ವಾರದ ಹಿಂದೆ ನೆಲಮಂಗಲ ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಬೋನ್‍ನ್ನು ಇರಿಸಿದ್ದರು. ಈ ದೈತ್ಯ ಚಿರತೆ ಪ್ರತಿದಿನ ಗ್ರಾಮದಲ್ಲಿ ಭಾರಿ ಆರ್ಭಟ ಮಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.

    ಈ ಕಾರಣದಿಂದ ನೆಲಮಂಗಲ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹಲವಾರು ದಿನಗಳಿಂದ ನಾಗರಿಕರಿಗೆ ನಿದ್ದೆಗೆಡಿಸಿದ್ದ ಚಿರತೆ ಹಿಡಿಯಲು ಬೋನ್ ಹಾಕಿದ್ದರು. ಇಂದು ಗ್ರಾಮದ ದಿಣ್ಣೆ ಹೊಲ ಎಂಬಲ್ಲಿ ಆಹಾರ ಅರಸಿ ಬಂದು ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟದ್ದಾರೆ.

  • ಬೋನಿನಲ್ಲಿದ್ದ ಚಿರತೆ ಜೊತೆ ಚೇಷ್ಟೆ ಮಾಡಲು ಹೋಗಿ ಆಸ್ಪತ್ರೆ ಸೇರಿದ!

    ಬೋನಿನಲ್ಲಿದ್ದ ಚಿರತೆ ಜೊತೆ ಚೇಷ್ಟೆ ಮಾಡಲು ಹೋಗಿ ಆಸ್ಪತ್ರೆ ಸೇರಿದ!

    ತುಮಕೂರು: ಬೋನಿಗೆ ಬಿದ್ದ ಚಿರತೆ ಜೊತೆ ಚೇಷ್ಟೆ ಮಾಡಲು ಹೋಗಿ ವ್ಯಕ್ತಿಯೋರ್ವ ಮುಖ ಕೈ ಪರಚಿಸಿಕೊಂಡ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ.

    ಚಿರತೆ ಸಹವಾಸಕ್ಕೆ ಹೋಗಿ ಆಸ್ಪತ್ರೆ ಸೇರಿದ ವ್ಯಕ್ತಿಯನ್ನು ದಾಸನಕಟ್ಟೆ ಗ್ರಾಮದ ನಿವಾಸಿ ರಮೇಶ್ (45) ಎಂದು ಗುರುತಿಸಲಾಗಿದೆ. ಆಹಾರವನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಹಾಕಿದ್ದು, ಈ ಬೋನಿಗೆ ಬಿದ್ದಿದ್ದ ಚಿರತೆಯ ಜೊತೆ ಚೇಷ್ಟೆ ಮಾಡಲು ಹೋಗಿ ಮುಖ ಕೈಗಳನ್ನು ಗಾಯ ಮಾಡಿಕೊಂಡು ರಮೇಶ್ ಆಸ್ಪತ್ರೆ ಸೇರಿದ್ದಾನೆ.

    ಬೋನಿನ ಒಳಗೆ ಇದ್ದ ಚಿರತೆಯ ಮೇಲೆ ಹೊರಗಡೆಯಿಂದ ಕಡ್ಡಿಯಿಂದ ತಿವಿದು ರಮೇಶ್ ಚೇಷ್ಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಚಿರತೆ ಕಡ್ಡಿ ಸಮೇತ ರಮೇಶ್‍ನನ್ನು ಬೋನಿನ ಬಳಿ ಎಳೆದುಕೊಂಡು ಕೈ ಮುಖವನ್ನು ಪರಚಿ ಹಾಕಿದೆ. ಆಗ ಅಲ್ಲೇ ಇದ್ದ ಸ್ಥಳೀಯರು ರಮೇಶ್‍ನನ್ನು ಚಿರತೆಯಿಂದ ರಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ರಮೇಶ್ ಗೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.