Tag: transport

  • ಸದ್ಯಕ್ಕೆ ಮಕ್ಕಳಿಗೆ ಉಚಿತ ಬಸ್ ಪಾಸ್ ಇಲ್ಲ

    ಸದ್ಯಕ್ಕೆ ಮಕ್ಕಳಿಗೆ ಉಚಿತ ಬಸ್ ಪಾಸ್ ಇಲ್ಲ

    ಬೆಂಗಳೂರು: ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡದೇ ಇರಲು ಸರ್ಕಾರ ಮುಂದಾಗಿದೆ.

    ಪ್ರಥಮ ದರ್ಜೆ ಕಾಲೇಜು, ವೈದ್ಯಕೀಯ ಕಾಲೇಜು, ತಾಂತ್ರಿಕ ಶಿಕ್ಷಣ ಕಾಲೇಜು, ಪ್ರಾಥಮಿಕ ಶಾಲೆಗಳ ಮೂಲಭೂತ ಸೌಕರ್ಯ ಕುರಿತು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದ ಸಮಿತಿಯ ಕೊಠಡಿಯಲ್ಲಿ ಸಭೆ ನಡೆಯಿತು.

    ಸಭೆಯ ಬಳಿಕ ಮಾತನಾಡಿದ ಎಚ್‍ಡಿಕೆ, ಉಚಿತ ಬಸ್ ಪಾಸ್ ನೀಡುವ ಸಂಬಂಧ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಪಾಸ್ ನೀಡಿದ್ರೆ ಎಷ್ಟು ಹಣ ಬೇಕಾಗುತ್ತೆ ಸೇರಿದಂತೆ ಇನ್ನಿತರ ಅಂಶ ಕುರಿತು ವರದಿ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಉಚಿತ ಪಾಸ್ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

    ಇವತ್ತು ದೊಡ್ಡ ಸವಾಲುಗಳನ್ನ ಸ್ವೀಕಾರ ಮಾಡಿದ್ದೇನೆ. ಎಲ್ಲದ್ದಕ್ಕು ಹಣ ಹೊಂದಿಸುವ ಜವಾಬ್ದಾರಿ ಇದೆ. ಹೀಗಾಗಿ ಶಿಕ್ಷಣ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ವರ್ಕೌಟ್ ಮಾಡಿ ಮಾಹಿತಿ ನೀಡಲು ಹೇಳಿದ್ದೇನೆ. ಅವರು ವರದಿ ನೀಡಿದ ಬಳಿಕ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.

    ಇಂದು ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ, ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಭಾಗಿಯಾಗಿದ್ದರು.

    ಚನ್ನಪಟ್ಟಣದಲ್ಲಿ ಸೋಮವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಸಿಎಂ, ಉಚಿತ ಬಸ್ ಪಾಸ್ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕು ಎಂದುಕೊಂಡಿದ್ದೇನೆ. ನಾಳೆ ನಮ್ಮ ಅಧಿಕಾರಿಗಳು ಸಭೆ ಕರೆದಿದ್ದಾರೆ. ಯಾವ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಅಂತಹ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ಕೊಡುತ್ತೇವೆ ಎಂದು ಹೇಳಿದ್ದರು.

    ನೀವು ರಾಜಕೀಯ ಮಾಡಿದರೆ, ನನಗೆ ರಾಜಕೀಯ ಮಾಡಲು ಗೊತ್ತಿಲ್ಲವೇ? 50 ಸಾವಿರ, 1 ಲಕ್ಷ ಡೊನೇಷನ್ ಕೊಟ್ಟು ಓದುವವರಿಗೆ ನಿಮಗೆ ಯಾಕೆ ಉಚಿತವಾದ ಪಾಸ್ ಎಂದು ಪ್ರಶ್ನಿಸಿದ್ದರು. ಆದ್ದರಿಂದ ಯಾರು ಈ ರಾಜ್ಯದ ಸರ್ಕಾರಿ ಶಾಲೆಯಲ್ಲಿ ಓದುತ್ತಾರೋ ಅಂತಹ ಮಕ್ಕಳಿಗೆ ಅಂದರೆ ಎಲ್ಲಾ ಸರ್ಕಾರಿ ಮಕ್ಕಳಿಗೂ ಉಚಿತ ಬಸ್ ಪಾಸ್ ಕೊಡುತ್ತೇವೆ. ಈ ಬಗ್ಗೆ ನಾಳೆ ಸಭೆ ಕರೆದು ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದರು.

  • ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 58 ಕೆಜಿ ಚಿನ್ನಾಭರಣ ವಶ!

    ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 58 ಕೆಜಿ ಚಿನ್ನಾಭರಣ ವಶ!

    ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ 58 ಕೆಜಿ ತೂಕದ ಚಿನ್ನಾಭರಣ ವಶಕ್ಕೆ ಪಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬಾಲೇಪುರ ಗ್ರಾಮದ ಚೆಕ್‍ಪೋಸ್ಟ್ ಬಳಿ ನಡೆದಿದೆ.

    ದೇವನಹಳ್ಳಿ ಮಾರ್ಗದಿಂದ ಹೊಸಕೋಟೆ ಕಡೆಗೆ ತೆರಳುತ್ತಿದ್ದ ಬೊಲೇರೋ ವಾಹನ ತಪಾಸಣೆ ವೇಳೆ ಚಿನ್ನ ಪತ್ತೆಯಾಗಿದೆ. ಬಾಲೇಪುರ ಚೆಕ್‍ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ.

    ಹೆಚ್ಚಿನ ಪ್ರಮಾಣದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಬೇರೆಡೆಗೆ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಇವುಗಳಿಗೆ ಸೂಕ್ತ ದಾಖಲೆಗಳನ್ನು ನೀಡದ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವಶಕ್ಕೆ ಪಡೆಯಲಾಗಿರುವ ಚಿನ್ನ ಮೌಲ್ಯ ಸುಮಾರು 15 ಕೋಟಿ ರೂ. ಆಗಿದೆ.

    ಘಟನೆಗೆ ಸಂಬಂಧಿಸಿದಂತೆ ಆಕ್ರಮ ಚಿನ್ನ ಸಾಗಾಟ ನಡೆಸುತ್ತಿದ್ದ ಓರ್ವ ವ್ಯಕ್ತಿಯನ್ನ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಕಸ್ಟಮ್ಸ್ ಹಾಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚೆನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕರ್ನಾಟಕ ಬಂದ್‍ಗೆ ಯಾರ ಬೆಂಬಲ ಇದೆ, ಯಾರ ಬೆಂಬಲ ಇಲ್ಲ- ಇಲ್ಲಿದೆ ಸಂಪೂರ್ಣ ಮಾಹಿತಿ

    ಕರ್ನಾಟಕ ಬಂದ್‍ಗೆ ಯಾರ ಬೆಂಬಲ ಇದೆ, ಯಾರ ಬೆಂಬಲ ಇಲ್ಲ- ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ, ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿರುವ ಬಂದ್ ರಾಜಕೀಯ ತಿರುವು ಪಡೆದುಕೊಂಡಿದೆ. ಬಂದ್‍ಗೆ ಕೆಲವು ಸಂಘಟನೆಗಳು ಬೆಂಬಲ ನೀಡಿದ್ರೆ, ಮತ್ತೆ ಕೆಲವರು ಬಂದ್‍ಗೆ ಬೆಂಬಲ ಘೋಷಿಸಿಲ್ಲ.

    ಕಾಂಗ್ರೆಸ್ ಪ್ರಾಯೋಜಿತ ಬಂದ್ ಅಂತ ಬಿಜೆಪಿ ಆರೋಪ ಮಾಡುತ್ತಿದೆ. ಆದ್ರೆ ಇದಕ್ಕೆ ಸೊಪ್ಪು ಹಾಕದ ವಾಟಾಳ್ ನಾಗರಾಜ್, ಬಿಜೆಪಿ ಹೇಳಿದಕ್ಕೆಲ್ಲ ತಲೆಕೆಡಿಸಿಕೊಡಲ್ಲ ಬಂದ್ ನಡೆಸೇ ನಡೆಸುತ್ತೇನೆ ಅಂತಾ ಹೇಳಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು ಬಂದ್‍ಗೆ ಬೆಂಬಲ ಸೂಚಿಸಿಲ್ಲ. ಕರವೇ ಮತ್ತೊಂದು ಬಣದ ಪ್ರವೀಣ್ ಶೆಟ್ಟಿ ಫೆಬ್ರವರಿ ನಾಲ್ಕರಂದು ಬೆಂಗಳೂರು ಬಂದ್‍ಗೆ ಬೆಂಬಲ ನೀಡಲ್ಲ ಮತ್ತು ಬಂದ್ ಪದೇ ಪದೇ ನಡೆಸೋದು ಸರಿಯಲ್ಲ. ನಾವು ವಾಟಾಳ್ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಅಷ್ಟೇ ಅಂತ ಹೇಳಿದ್ದಾರೆ.

    ಬಂದ್‍ಗೆ ಯಾರ ಬೆಂಬಲ ಇದೆ?
    ಸದ್ಯದ ಮಟ್ಟಿಗೆ ಕನ್ನಡ ಚಿತ್ರೋದ್ಯಮ ಬೆಂಬಲ ಕೊಟ್ಟಿದ್ದು, ಚಿತ್ರೀಕರಣ ಹಾಗೂ ಚಿತ್ರಪ್ರದರ್ಶನ ರದ್ದಾಗಲಿದೆ. ಕೆಲ ಆಟೋ ಸಂಘಟನೆ, ಎಪಿಎಂಸಿ ನೌಕರರ ಸಂಘ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಬೆಂಬಲ ಕೊಟ್ಟಿದೆ. ಸರ್ಕಾರ ಬಂದ್‍ಗೆ ಬೆಂಬಲ ನೀಡೋದ್ರಿಂದ ಸಾರಿಗೆ ಸಂಸ್ಥೆಯೂ ಬೆಂಬಲ ನೀಡುವ ಸಾಧ್ಯತೆಗಳಿವೆ. ಮಕ್ಕಳ ಹಿತದೃಷ್ಟಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ನಾಳೆ ನಡೆಯಲಿರುವ ಬಂದ್ ಗೆ ಕನ್ನಡ ಚಿತ್ರೋದ್ಯಮದ ಸಂಪೂರ್ಣ ಸಹಕಾರ ಇರುತ್ತೆ. ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಗೆ ವರೆಗೆ ಬಂದ್ ಮಾಡಲಿದ್ದೇವೆ. ಆದರೆ ಈ ಬಂದ್ ನಲ್ಲಿ ಚಲನಚಿತ್ರ ಕಲಾವಿದರು ಪಾಲ್ಗೊಳ್ಳುವುದಿಲ್ಲ. ಆದರೆ ಸಹಕರಿಸಿ ಬೆಂಬಲ ನೀಡುತ್ತಿದ್ದೇವೆ. ಸಂಜೆ ವೇಳೆಗೆ ಕರ್ನಾಟಕ ಬಂದ್ ಯಶಸ್ವಿಯಾಗೋದರ ಬಗ್ಗೆ ಸ್ಪಷ್ಟ ಚಿತ್ರಣ ಸಾಧ್ಯತೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ತಿಳಿಸಿದ್ದಾರೆ.

    ಯಾರು ಬೆಂಬಲ ಘೋಷಿಸಿಲ್ಲ?
    ಟ್ಯಾಕ್ಸಿ ಮಾಲೀಕರ ಸಂಘ, ಹೊಟೇಲ್ ಮಾಲೀಕರ ಸಂಘ, ಕೆಲ ಆಟೋ ಸಂಘಟನೆ, ವರ್ತಕರು ಇನ್ನೂ ಕೂಡ ಬೆಂಬಲ ಘೋಷಿಸಿಲ್ಲ. ಮೆಟ್ರೋ ಸಂಚಾರದಲ್ಲೂ ಯಾವುದೇ ವ್ಯತ್ಯಯ ಇಲ್ಲ. ಮೆಟ್ರೋ ರೈಲು ಎಂದಿನಂತೆ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಓಡಲಿದೆ ಎಂದು ಮೆಟ್ರೋ ಅಧಿಕಾರಿಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಓಲಾ ಮತ್ತು ಊಬರ್ ಎಂದಿನಂತೆ ಸಂಚಾರ ನಡೆಸಲಿವೆ.

    ನಾಳೆ ನಡೆಯೋ ಬಂದ್ ಗೆ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕ ಸಂಘಟನೆಗಳಿಂದ ಬೆಂಬಲ ನೀಡುತ್ತಿಲ್ಲ. ಎಂದಿನಂತೆ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಲಿವೆ. ಕೆಎಸ್‍ಆರ್‍ಟಿಸಿ ಆನ್‍ಲೈನ್ ಬುಕಿಂಗ್ ಗೆ ಯಾವುದೇ ಸಮಸ್ಯೆಯಿಲ್ಲ. ಎಲ್ಲಾ ಬಸ್ ಗಳು ಸಂಚಾರ ನಡೆಸಲಿವೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ದೊರೆಕಿದೆ.

  • ಕರ್ನಾಟಕದ ಜನರೇ ಮತ್ತೊಂದು ಬಂದ್‍ಗೆ ರೆಡಿಯಾಗಿ

    ಕರ್ನಾಟಕದ ಜನರೇ ಮತ್ತೊಂದು ಬಂದ್‍ಗೆ ರೆಡಿಯಾಗಿ

    ಬೆಂಗಳೂರು: ಮಹದಾಯಿ ವಿವಾದ ಬಗೆ ಹರಿಸಲು ಜನವರಿ 25ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸಲು ಕರೆ ನೀಡಿದರೆ ಜ.30 ರಂದು ಸಾರಿಗೆ ಬಂದ್ ಆಗುವ ಸಾಧ್ಯತೆಯಿದೆ.

    ಈ ಹಿಂದೆ ನಡೆಸಿದ ಸಾರಿಗೆ ಮುಷ್ಕರದ ವೇಳೆ ನೀಡಿದ್ದ ನಮ್ಮ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಇದೇ 30ನೇ ತಾರೀಖಿನಂದು ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದೇವೆ ಎಂದು ಎಐಟಿಯುಸಿ  ಕಾರ್ಯದರ್ಶಿ ನಾಗರಾಜ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    30 ರಂದು ಉಪವಾಸ ಸತ್ಯಗ್ರಹ ಆರಂಭಿಸಲು ಸಾರಿಗೆ ಇಲಾಖೆಯ ಸಿಬ್ಬಂದಿ ನಿರ್ಧರಿಸಿದ್ದಾರೆ. ಅಂದು ಬಸ್ ಸೇವೆ ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆ ಆದರೆ ಅದಕ್ಕೆ ನಾವು ಹೊಣೆಯಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

  • ಕಿತ್ತೋದ ಸೀಟ್, ಒಡೆದಿರೋ ಗ್ಲಾಸ್- ಡಕೋಟಾ ಎಕ್ಸ್ ಪ್ರೆಸ್ ಆದ ಸರ್ಕಾರಿ ಬಸ್‍ಗಳು

    ಕಿತ್ತೋದ ಸೀಟ್, ಒಡೆದಿರೋ ಗ್ಲಾಸ್- ಡಕೋಟಾ ಎಕ್ಸ್ ಪ್ರೆಸ್ ಆದ ಸರ್ಕಾರಿ ಬಸ್‍ಗಳು

    ಕಲಬುರಗಿ: ಕಿತ್ತೋಗಿರೋ ಹರಕು ಮುರುಕು ಸೀಟು, ಒಡೆದು ಹೋಗಿರೋ ಫ್ರಂಟ್ ಗ್ಲಾಸ್. ಆಗಲೋ ಈಗಲೋ ಕಿತ್ತು ಬರುವಂತಿರುವ ಸ್ಟೇರಿಂಗ್. ಗಾಡಿ ಸ್ಟಾರ್ಟ್ ಮಾಡಿದ್ರೆ ಹೊರಬೀಳೋ ದಟ್ಟ ಕಪ್ಪು ಹೊಗೆ. ಅಯ್ಯೋ ಈ ಡಕೋಟ ಬಸ್ ಫಿಲ್ಮ್‍ನಲ್ಲಿರೋ ಬಸ್ ಅಲ್ಲ. ಕಲಬುರಗಿ ಸೇರಿದಂತೆ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಿತ್ಯ ಸಂಚರಿಸುವ ಬಸ್‍ಗಳಿವು.

    ಈ ಡಕೋಟಾ ಬಸ್‍ಗಳನ್ನ ನೋಡಿದ್ರೆ ಪ್ರಯಾಣ ಮಾಡ್ಲಿಕ್ಕೆ ಮನಸ್ಸೇ ಬರಲ್ಲ. ಈ ಬಸ್ ಹತ್ತಿದ್ರೆ ಆರಾಮಾಗಿ ಇಳೀತೀವಾ ಅನ್ನೋ ಡೌಟ್ ಶುರುವಾಗುತ್ತೆ. ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡ್ಬೇಕಾಗುತ್ತೆ. ಕಲಬುರಗಿ ವ್ಯಾಪ್ತಿಯ ಈಶಾನ್ಯ ಸಾರಿಗೆಯ ಶೇ.14 ರಷ್ಟು ಬಸ್‍ಗಳು ಅಧ್ವಾನಗೊಂಡಿವೆ.

    ಇಂತಹ ಡಕೋಟಾ ಬಸ್‍ಗಳನ್ನ ಕೂಡಲೇ ಸ್ಕ್ರ್ಯಾಪ್ ಮಾಡಿ ನೂತನ ಬಸ್ ಸೌಲಭ್ಯ ಪ್ರಯಾಣಿಕರಿಗೆ ನೀಡಬೇಕಿತ್ತು. ಆದ್ರೆ ಇಲಾಖೆ ಅದೇ ಬಸ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಬಿಟ್ಟಿದೆ. ಈ ಬಗ್ಗೆ ಈಶಾನ್ಯ ಸಾರಿಗೆ ಇಲಾಖೆಯ ಅಧ್ಯಕ್ಷರನ್ನು ಕೇಳಿದ್ರೆ 2 ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳ್ತಿದ್ದಾರೆ.

    ಈ ಹಿಂದೆ ಕೂಡ ಡಕೋಟಾ ಬಸ್‍ಗಳಿಂದ ಹಲವು ಅಪಘಾತ ಪ್ರಕರಣ ನಡೆದಿದೆ. ಆದ್ರೂ ಈಶಾನ್ಯ ಸಾರಿಗೆ ಇಲಾಖೆ ಎಚ್ಚೆತ್ತುಕೊಳ್ಳದಿರೋದು ದುರಂತ.

  • ಧಾರವಾಡದ ಈ ಗ್ರಾಮದ ಮಕ್ಕಳು ಶಾಲೆಗೆ 7ಕಿ.ಮೀ. ನಡಿಬೇಕು..!

    ಧಾರವಾಡ: ಜಲ್ಲೆಯ ಗಡಿಭಾಗದ ಹಾಗೂ ಧಾರವಾಡ ತಾಲೂಕಿನ ಹುಣಶಿಕುಮರಿ ಗ್ರಾಮದ ಮಕ್ಕಳು ಪ್ರೌಢ ಶಾಲೆಗೆ ಹೋಗಬೇಕಾದರೆ ಪ್ರತಿನಿತ್ಯ 7 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.

    ಹುಣಶಿಕುಮರಿ ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲ. ಬೆಳಗ್ಗೆ 9 ಗಂಟೆ ಹಾಗೂ ಸಂಜೆ 6 ಗಂಟೆ ಬಸ್ಸು ಬಿಟ್ರೆ ಬೇರೆ ಯಾವುದೇ ವಾಹನ ವ್ಯವಸ್ಥೆ ಇಲ್ಲ. ಸೈಕಲ್ ಇದ್ದವರು ಸೈಕಲ್ಲಿನ ಮೇಲೆ ಹೋದ್ರೆ, ಉಳಿದವರಿಗೆ ಕಾಲೇ ಗತಿ. ಈ ಗ್ರಾಮದಿಂದ ಪ್ರತಿ ದಿನ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಕೇರಿ ಗ್ರಾಮದ ಶಾಲೆಗೆ ಹೋಗ್ತಾರೆ. 80 ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದ ಮಕ್ಕಳು ಇವಾಗ ವಿದ್ಯಾಭ್ಯಾಸದ ಕಡೆ ತಮ್ಮ ಗಮನ ಹರಿಸುತ್ತಿದ್ದಾರೆ.

    ಈ ಗ್ರಾಮ ದಟ್ಟ ಅರಣ್ಯ ಪ್ರದೇಶದಲ್ಲಿದೆ. ದಟ್ಟವಾದ ಅರಣ್ಯದಲ್ಲೇ ಇಲ್ಲಿನ ಮಕ್ಕಳು ಸೈಕಲ್ ಮೂಲಕ ಅಥವಾ ನಡೆದುಕೊಂಡು ಹೋಗಬೇಕು. ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಕಾರ್ಮಿಕ ಸಚಿವ ಹಾಗು ಕ್ಷೇತ್ರದ ಶಾಸಕ ಸಚಿವ ಸಂತೋಷ ಲಾಡ್ ಅವರಿಗೆ ಕೇಳಿದ್ರೆ, ಅರಣ್ಯ ಪ್ರದೇಶ ಇರುವುದರಿಂದ ರಸ್ತೆ ಡಾಂಬರಿಕರಣ ಮಾಡಿಲ್ಲ ಎಂದು ಹೇಳುತ್ತಾರೆ.

    ಸದ್ಯ ಗ್ರಾಮದ ರಸ್ತೆ ಆಗದೇ ಇದ್ರೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇನ್ನು ಎಷ್ಟು ದಿನ ಹೀಗೆಯೇ ಎದ್ದು ಬಿದ್ದು ಓಡಾಡಬೇಕೊ ಗೊತ್ತಿಲ್ಲ. ಈ ಜಿಲ್ಲೆಯಲ್ಲಿ ಇಬ್ಬರು ಕ್ಯಾಬಿನೆಟ್ ಸಚಿವರಿದ್ರು ಇಲ್ಲಿ ಕಳಪೆ ರಸ್ತೆಗಳಿರುವುದು ವಿಪರ್ಯಾಸ.