Tag: transport

  • ರಜೆ ಮಂಜೂರಿಗೆ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಾರಿಗೆ ಅಧಿಕಾರಿ

    ರಜೆ ಮಂಜೂರಿಗೆ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಾರಿಗೆ ಅಧಿಕಾರಿ

    ಗದಗ: ಕೆಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆ ಚಾಲಕ/ನಿರ್ವಾಹಕರಿಗೆ ರಜೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಡಿಪೋ ಮ್ಯಾನೇಜರ್‌ನನ್ನು ಎಸಿಬಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಜಿಲ್ಲೆಯ ರೋಣದಲ್ಲಿ ನಡೆದಿದೆ.

    ರೋಣ ಬಸ್ ಡಿಪೋ ಮ್ಯಾನೇಜರ್ ಬಿ.ಎಂ. ಗೆನ್ನೂರ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಯಾಗಿದ್ದಾರೆ. ಸಂಸ್ಥೆಯ ನಿರ್ವಾಹಕರೊಬ್ಬರು, ತಾಯಿಗೆ ಹುಷಾರಿಲ್ಲದ ಕಾರಣ ರಜೆ ಕೇಳಿದ್ದರು. 20 ದಿನ ರಜೆ ಮಂಜೂರು ಮಾಡಲು 2 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇಂದು ಹಣ ಕೊಡುವಾಗ ದಾಳಿ ನಡೆಸಿದ ಅಧಿಕಾರಿಗಳು, ಡಿಪೋ ಮ್ಯಾನೇಜರನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಶಾಸಕರ ಹುಟ್ಟುಹಬ್ಬ – ಹೂಮಳೆಗೆರೆದು ಸಂಭ್ರಮಿಸಿದ ಪೊಲೀಸರು

    ಯಾವುದೇ ಸಿಬ್ಬಂದಿ ರಜೆ ಕೇಳಿದ್ರೆ ಈ ಡಿಪೋ ಮ್ಯಾನೇಜರ್ ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೆಳಿಬಂದಿದೆ. ಎಸಿಬಿ ಡಿವೈಎಸ್‌ಪಿ ಎಂ.ವಿ. ಮಲ್ಲಾಪುರ ಮಾರ್ಗದರ್ಶನದಲ್ಲಿ ಗದಗ ಇನ್‍ಸ್ಪೆಕ್ಟರ್ ಆರ್. ದೇಸಾಯಿ, ಈರಣ್ಣ ಹಳ್ಳಿ, ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ವೀರೇಶ್ ಜೋಳದ, ಎನ್.ಎಸ್. ತಾಯಣ್ಣವರ, ವೀರೇಶ್ ಬಿಸನಳ್ಳಿ, ಐ.ಸಿ. ಜಾಲಿಹಾಳ, ಮಂಜು ಮುಳಗುಂದ ನೇತೃತ್ವದಲ್ಲಿ ದಾಳಿ ಮಾಡಲಾಯಿತು. ಅರೋಪಿ ಅಧಿಕಾರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಗದಗ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾರಿಗೆ ಸಿಬ್ಬಂದಿ ಮಾಹಿತಿ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿಯ ಸಂಕೇತ: ಎಎಪಿ

    ಸಾರಿಗೆ ಸಿಬ್ಬಂದಿ ಮಾಹಿತಿ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿಯ ಸಂಕೇತ: ಎಎಪಿ

    ಬೆಂಗಳೂರು: ರಾಜ್ಯದ ಸಾರಿಗೆ ನೌಕರರಿಗೆ ಕೋವಿಡ್ ಸೋಂಕು ತಗುಲಿರುವುದು ಹಾಗೂ ಅವರು ಮೃತಪಟ್ಟಿರುವುದರ ಬಗ್ಗೆ ಸಾರಿಗೆ ಇಲಾಖೆಯ ಬಳಿ ಮಾಹಿತಿಯೇ ಇಲ್ಲದಿರುವುದು ಸರ್ಕಾರದ ಬೇಜಾವಾಬ್ದಾರಿತನವನ್ನು ತೋರಿಸುತ್ತದೆ ಎಂದು ಎಎಪಿಯ ರಾಜ್ಯ ಯುವಘಟಕದ ಅಧ್ಯಕ್ಷರಾದ ಮುಕುಂದ್ ಗೌಡರವರು ಕಿಡಿಕಾರಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಕುಂದ್ ಗೌಡರವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಸರ್ಕಾರವು ಪ್ರಮುಖ ಬೇಡಿಕೆಯನ್ನೇ ಈಡೇರಿಸದಿದ್ದರೂ, ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಮರಳಿದ್ದರು. ಮೊದಲಿನಿಂದಲೂ ನೌಕರರನ್ನು ತಾತ್ಸಾರದಿಂದ ನೋಡುತ್ತಿದ ಸಾರಿಗೆ ಇಲಾಖೆಯು ಮುಷ್ಕರದ ನಂತರ ಅವರನ್ನು ಶತ್ರುಗಳಂತೆ ಕಾಣುತ್ತಿದೆ. ಕೋವಿಡ್‍ಗೆ ಬಲಿಯಾದ ನೌಕರರಿಗೆ ಪರಿಹಾರ ನೀಡುವುದು ಹಾಗಿರಲಿ, ಎಷ್ಟು ನೌಕರರಿಗೆ ಸೋಂಕು ತಗುಲಿದೆ ಎಂಬ ಅಂಕಿಅಂಶ ಕೂಡ ಸರ್ಕಾರದ ಬಳಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ 

    ಸಾರಿಕೆ ನೌಕರರು ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿರುವುದು, ಮೃತಪಟ್ಟಿರುವುದು ಹಾಗೂ ಪರಿಹಾರ ವಿತರಣೆ ಮಾಹಿತಿ ತಿಳಿಯಲು ನಾವು ಆರ್‍ಟಿಐ ಅರ್ಜಿ ಸಲ್ಲಿಸಿದ್ದೆವು. ನಾವು ಕೇಳಿದ ಮೂರು ಪ್ರಶ್ನೆಗಳಿಗೂ ಇಲಾಖೆಯು ತಮ್ಮ ಬಳಿ ಮಾಹಿತಿ ಇಲ್ಲವೆಂದು ಉತ್ತರ ನೀಡಿದೆ. ಅಧಿಕಾರಿಗಳ ಮಾಹಿತಿ ಹೊಂದಿರುವ ಸರ್ಕಾರವು ನೌಕರರನ್ನು ಮಾತ್ರ ಇಷ್ಟು ಕೇವಲವಾಗಿ ನೋಡುತ್ತಿರುವುದು ದುರಂತ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಇದು ಎತ್ತಿ ತೋರಿಸುತ್ತದೆ. ಕಷ್ಟಪಟ್ಟು ದುಡಿಯುವ ಕಾರ್ಮಿಕರನ್ನು ಹೀನಾಯವಾಗಿ ಕಾಣುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಕಾರ್ಮಿಕರು ಚೆನ್ನಾಗಿದ್ದರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ ಎಂಬುದನ್ನು ಸಾರಿಗೆ ಸಚಿವರಾದ ಲಕ್ಷಣ್ ಸವದಿ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ಸಿಬ್ಬಂದಿ ನನ್ನ ಕುಟುಂಬದ ಸದಸ್ಯರಿದ್ದಂತೆ ಎಂದು ಭಾಷಣ ಬಿಗಿಯುವ ಸಾರಿಗೆ ಸಚಿವರು ನೌಕರರ ಹಿತಕಾಪಾಡಲು ಏನು ಮಾಡಿದ್ದಾರೆ? ನೌಕರರಿಗೆ ಉಚಿತ ಸ್ಯಾನಿಟೈಸರ್ ನೀಡಲೂ ಅವರಿಗೆ ಸಾಧ್ಯವಾಗಿಲ್ಲ. ಮಹಾಮಾರಿ ಕೋವಿಡ್‍ನಿಂದ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸಲು ಯಾವ ಕ್ರಮವನ್ನೂ ಅವರು ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಮೃತಪಟ್ಟ ಪ್ರತಿಯೊಬ್ಬ ನೌಕರರ ಕುಟುಂಬಕ್ಕೆ ಪರಿಹಾರ ವಿತರಿಸಬೇಕು. ಎಷ್ಟು ಸಿಬ್ಬಂದಿಗೆ ಸೋಂಕು ತಗುಲಿತ್ತು, ಎಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ, ಎಷ್ಟು ಮಂದಿಗೆ ಪರಿಹಾರ ದೊರೆತಿದೆ ಎಂಬ ಅಂಶವನ್ನು ಶೀಘ್ರವೇ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

  • ಸಾರಿಗೆ ಸಮಸ್ಯೆಯಾದಾಗ ಜನರೇ ಸಹಿಸಿಕೊಳ್ಳಬೇಕು: ಸವದಿ ಉಡಾಫೆ ಹೇಳಿಕೆ

    ಸಾರಿಗೆ ಸಮಸ್ಯೆಯಾದಾಗ ಜನರೇ ಸಹಿಸಿಕೊಳ್ಳಬೇಕು: ಸವದಿ ಉಡಾಫೆ ಹೇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಅನ್‍ಲಾಕ್ ನಲ್ಲಿ ಸಾರಿಗೆ ಸಂಚಾರಕ್ಕೆ ಅವಕಾಶ ಇದ್ದರೂ ಪರಿಪೂರ್ಣ ಬಸ್ ವ್ಯವಸ್ಥೆಯಿಲ್ಲದೆ ಜನ ಪರದಾಡುತ್ತಿದ್ದಾರೆ. ಆದರೆ ಇತ್ತ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಸಮಸ್ಯೆ ಬಗೆಹರಿಸುವ ಬಗ್ಗೆ ಯೋಚನೆ ಮಾಡದೇ, ಸಾರಿಗೆ ಸಮಸ್ಯೆಯಾದಾಗ ಜನರೇ ಸಹಿಸಿಕೊಳ್ಳಬೇಕು ಎಂದು ಉಡಾಫೆ ಉತ್ತರ ನೀಡಿದ್ದಾರೆ.

    ಸಾರಿಗೆ ಸಮಸ್ಯೆಯ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಲಾಕ್‍ಡೌನ್ ಬಳಿಕ ರಾಜ್ಯದಲ್ಲಿ ಅನ್‍ಲಾಕ್ ಘೋಷಣೆಯಾಗಿದೆ. ಪ್ರಾರಂಭದಲ್ಲಿ ಈ ರೀತಿಯ ಸಮಸ್ಯೆ ಆಗೋದು ಸಹಜ. ಸಮಸ್ಯೆ ಬಗೆಹರಿಸುವ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸದರು. ಇದನ್ನೂ ಓದಿ: ಇದೇ ಬುಧವಾರದಿಂದ ಬಿಗ್‍ಬಾಸ್ ಪ್ರಾರಂಭ

    ಪ್ರಾರಂಭದ ದಿನವಾಗಿರುವುದರಿಂದ ಈ ರೀತಿಯ ವ್ಯತ್ಯಾಸ ಆಗಿದೆ. ನಾಳೆ ಯಾವುದೇ ರೀತಿಯ ತೊಂದರೆ ಇಲ್ಲದೆ ಸಮಸ್ಯೆ ಬಗೆಹರಿಯಲಿದೆ. ಈ ರೀತಿ ಸಮಸ್ಯೆಗಳಾದಾಗ ಜನ ಸ್ವಲ್ಪ ಸಹಿಸಿಕೊಳ್ಳಬೇಕು. ಉತ್ತರ ಕರ್ನಾಟಕದ ಸಿಬ್ಬಂದಿ ಇನ್ನೂ ಸಹ ಕೆಲಸಕ್ಕೆ ಹಾಜರಾಗಿಲ್ಲ. ನಾಳೆ ಬಳಿಕ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಬರಲಿದ್ದಾರೆ. ಸಮಸ್ಯೆ ಹಂತಹಂತವಾಗಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕೈಗಾರಿಕೆ ತೆರೆಯಲು ಅನುಮತಿ, ಸರ್ಕಾರಿ ಸಾರಿಗೆ ಇಲ್ಲ- ಸರ್ಕಾರದ ಅನ್‍ಲಾಕ್‍ಗೆ ಕೈಗಾರಿಕೆಗಳ ಅಸಮಾಧಾನ

    ಕೈಗಾರಿಕೆ ತೆರೆಯಲು ಅನುಮತಿ, ಸರ್ಕಾರಿ ಸಾರಿಗೆ ಇಲ್ಲ- ಸರ್ಕಾರದ ಅನ್‍ಲಾಕ್‍ಗೆ ಕೈಗಾರಿಕೆಗಳ ಅಸಮಾಧಾನ

    ಬೆಂಗಳೂರು: ಸೋಮವಾರದಿಂದ 19 ಜಿಲ್ಲೆಗಳಲ್ಲಿ ಅನ್‍ಲಾಕ್ ಆರಂಭವಾಗಲಿದೆ. ಮೊದಲ ಹಂತದ ಅನ್‍ಲಾಕ್ ನಲ್ಲಿ ಕೈಗಾರಿಕೆಗೆ ವಿನಾಯಿತಿ ಕೊಟ್ರು, ಕೈಗಾರಿಕಾ ವಲಯದ ಸಿಬ್ಬಂದಿ ಖುಷಿಯಾಗಿಲ್ಲ. ಕೈಗಾರಿಕೆಗಳಲ್ಲಿ ಮರುಜೀವ ಬಂದಂತಾದರೂ ಕೆಲವು ನಿರ್ಬಂಧಗಳಿಂದ ಮತ್ತೆ ಸಂಕಷ್ಟಕ್ಕೀಡಾಗಲಿವೆ ಅನ್ನೋದು ಕೈಗಾರಿಕೆಗಳ ವಾದ.

    ಸಾಮಾನ್ಯ ಸ್ಥಿತಿಗೆ ಮರಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅನ್‍ಲಾಕ್ ಘೋಷಣೆ ಮಾಡಿ ಕೈಗಾರಿಕೆಗಳಿಗೆ ಶೇ.50ರಷ್ಟು ಕಾರ್ಮಿಕರ ನ್ನೊಳಗೊಂಡು ಕಾರ್ಯನಿರ್ವಹಿಸುವ ಅನುಮತಿ ನೀಡಿದೆ. ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಸಾರಿಗೆಯೆ ಮೇಲೆ ಅವಲಂಬಿತವಾಗಿದ್ದಾರೆ. ಆದರೆ ಸರ್ಕಾರದ ಮಾರ್ಗಸೂಚಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಿಸಲಾಗಿದೆ. ಈ ನಿರ್ಧಾರದಿಂದ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ನೀಡಿರುವ ಅನುಮತಿಯೂ ಉಪಯೋಗವಿಲ್ಲದಂತಾಗಿದೆ. ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾದರೆ ಮಾತ್ರ ಉದ್ದೇಶ ಅರ್ಥಪೂರ್ಣವಾಗುತ್ತದೆ.

    ಈ ನಿಟ್ಟಿನಲ್ಲಿ ಸರ್ಕಾರವು ಕೈಗಾರಿಕಾ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕಾರ್ಮಿಕರು ಸುಲಲಿತವಾಗಿ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸುವಂತೆ ಕಾಸಿಯಾ ಮನವಿ ಮಾಡಿಕೊಂಡಿದೆ.

  • ಮುಷ್ಕರ ನಿರತ 20 ಸಾರಿಗೆ ನೌಕರರು ಪೊಲೀಸರ ವಶಕ್ಕೆ

    ಮುಷ್ಕರ ನಿರತ 20 ಸಾರಿಗೆ ನೌಕರರು ಪೊಲೀಸರ ವಶಕ್ಕೆ

    ಧಾರವಾಡ: ಕೊರೊನಾ ಮಧ್ಯೆ ಸಾರಿಗೆ ನೌಕರರ ಮುಷ್ಕರ ತೀವ್ರಗೊಂಡಿದ್ದು, ಪ್ರತಿಭಟನಾ ನಿರತ ನೌಕರರನ್ನು ನಗರದಲ್ಲಿ ವಶಪಡಿಸಿಕೊಳ್ಳಲಾಗಿದೆ.

    ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದರು. ಈ ವೇಳೆ ಸಾರಿಗೆ ನೌಕರರ ಮುಖಂಡ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಸಾರಿಗೆ ನೌಕರರು ಜೈಲ್ ಭರೋ ನಡೆಸಲು ಮುಂದಾದರು. ಬಳಿಕ ಪೊಲೀಸರು 20ಕ್ಕೂ ಹೆಚ್ಚು ಸಾರಿಗೆ ನೌಕರರನ್ನು ವಶಕ್ಕೆ ಪಡೆಯಬೇಕಾಯಿತು.

    ಬಂಧನಕ್ಕೂ ಮುನ್ನ ಮಾತನಾಡಿದ ನೌಕರರ ಮುಖಂಡ ನೀರಲಕೇರಿ, ಸರ್ಕಾರ ನಮ್ಮ ಹೋರಾಟ ದಮನ ಮಾಡಲು ಮುಂದಾಗುತ್ತಿದೆ. ಸಿಎಂ ಮಾತುಕತೆಗೆ ಕರೆಸಿ ಸಂಧಾನ ಮಾಡಲಿ. ಸರ್ಕಾರ ಐಸಿಯುನಲ್ಲಿದೆ, ಜನರ ಜವಾಬ್ದಾರಿ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನೀರಲಕೇರಿ ಹೇಳಿದರು.

  • 2 ಬಾರಿ ಪದವಿ, ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ

    2 ಬಾರಿ ಪದವಿ, ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ

    ಧಾರವಾಡ: ಕಳೆದ ಒಂದು ವಾರದಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವ ಹಿನ್ನೆಲೆ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನ ಮುಂದೂಡಿದೆ.

    ನಾಳೆಯಿಂದ ಏಪ್ರಿಲ್ 17ರವರೆಗೆ ನಡೆಯಬೇಕಿದ್ದ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಈ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಕೆ ಬಿ ಗುಡಸಿ ಮಾಹಿತಿ ನೀಡಿದ್ದಾರೆ.

    ಸಾರಿಗೆ ಮುಷ್ಕರ ಹಿನ್ನೆಲೆ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ಪರೀಕ್ಷೆ ಮುಂದೂಡಿದ್ದೇವೆ. ಮುಂದೂಡಲಾದ ಪರೀಕ್ಷೆಯ ದಿನಾಂಕವನ್ನ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಗುಡಸಿ ಹೇಳಿದರು.

    ಕಳೆದ ನಾಲ್ಕು ದಿನಗಳ ಹಿಂದೆ ಕೂಡಾ ಇದೇ ರೀತಿ ಬಸ್ ಇಲ್ಲದ ಹಿನ್ನೆಲೆ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಪರೀಕ್ಷೆಗಳನ್ನ ಮುಂದೂಡಿತ್ತು. ಇದು ಎರಡನೇ ಬಾರಿ ಪರೀಕ್ಷೆ ಮುಂದೂಡಿ ಆದೇಶ ಮಾಡಲಾಗಿದೆ ಎಂದಿದ್ದಾರೆ.

  • ಸಾರಿಗೆ ನೌಕರರನ್ನು ಸರ್ಕಾರ ಕರೆದು ಮಾತನಾಡಬೇಕು, ಪ್ರತಿಷ್ಠೆ ತೋರಿಸಬಾರದು: ಸಿದ್ದರಾಮಯ್ಯ

    ಸಾರಿಗೆ ನೌಕರರನ್ನು ಸರ್ಕಾರ ಕರೆದು ಮಾತನಾಡಬೇಕು, ಪ್ರತಿಷ್ಠೆ ತೋರಿಸಬಾರದು: ಸಿದ್ದರಾಮಯ್ಯ

    – ಕೊರೊನಾ ನಿಯಮ ಅವರು ಫಾಲೋ ಮಾಡಿದ್ರೆ, ನಾವು ಫಾಲೋ ಮಾಡುತ್ತಿದ್ದೇವು

    ಬೆಂಗಳೂರು: ಪ್ರಚಾರದ ವೇಳೆ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಮೂರು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿ ಪರವಾಗಿ ಜನಾಭಿಪ್ರಾಯ ಇಲ್ಲ, ಜನ ವಿರೋಧಿüಗಳಾಗಿದ್ದಾರೆ. ದುಡ್ಡು ಕೊಟ್ಟು ಮತ ಕೊಂಡುಕೊಳ್ಳಲು ಮುಂದಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಸರ್ಕಾರ ಕರೆದು ಮಾತನಾಡಬೇಕು, ಪ್ರತಿಷ್ಠೆ ತೋರಿಸಬಾರದು. ಸರ್ಕಾರ ನಡೆಸೋರು ಕಾರ್ಮಿಕರು, ನೌಕರರು ಚಳವಳಿ ಮಾಡಿದಾಗ ಕಾರಣ ಕೇಳಿ ಪರಿಹಾರ ಮಾಡ್ಬೇಕು ಹಠಕ್ಕೆ ಬೀಳಬಾರದು. ಅವರ ಜೊತೆ ಕೂತು ಚರ್ಚಿಸಿಬೇಕು. ಕೆಲವು ಸಾಧಕಬಾಧಕಗಳನ್ನ ಚರ್ಚಿಸಿ ಮನವೊಲಿಸಬೇಕು. ಅದರ ಬದಲು ಹೆದರಿಸಿ, ಬೆದರಿಸಿ ಚಳವಳಿ ಹತ್ತಿಕ್ಕಬಾರದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಕೊರೊನಾ ಸರ್ವಪಕ್ಷ ಸಭೆ ವಿಚಾರ ನಂಗೆ ಇನ್ನೂ ನೋಟಿಸ್ ಬಂದಿಲ್ಲ. ನೋಟಿಸ್ ಬಂದ್ಮೇಲೆ ಯೋಚನೆ ಮಾಡುತ್ತೇನೆ. ಇದು ಸರ್ಕಾರದ ಫೆಲ್ಯೂರ್ ಆಗಿದೆ. ಹೊರಗಡೆಯಿದ ಬಂದವರನ್ನ ಸರಿಯಾಗಿ ಟೆಸ್ಟ್ ಮಾಡೋದನ್ನ ನಿಲ್ಲಿಸಬಿಟ್ಟರು. ಜಾತ್ರೆ, ಸಮಾರಂಭಗಳು ಸರಿಯಾಗಿ ನಿಯಂತ್ರಣ ಮಾಡಿಲ್ಲ. ಚುನಾವಣಾ ಪ್ರಚಾರ ಮಾಡಿದ್ರು, ಅದಕ್ಕೆ ನಿಯಂತ್ರಣ ಹಾಕ್ಬೇಕಿತ್ತು. ಅವರು ಫಾಲೋ ಮಾಡಿದ್ರೆ, ನಾವು ಫಾಲೋ ಮಾಡುತ್ತಿದ್ದೇವು ಎಂದು ಹೇಳಿದ್ದಾರೆ.

    ಕೊರೊನಾ ಹೆಚ್ಚಳಕ್ಕೆ ಸರ್ಕಾರವೇ ಹೊಣೆಯಾಗಿದೆ. ಬೆಡ್‍ಗಳು, ಐಸಿಯು ಕೊರತೆ ಆಗಬಾರದು. ಲಾಕ್‍ಡೌನ್ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಏನ್ ಹೇಳ್ಬೇಕೋ ಅದನ್ನ ಹೇಳುತ್ತೇನೆ ಎಂದಿದ್ದಾರೆ.

  • ಮುಷ್ಕರದ ನಡುವೆಯೂ ಸಂಚರಿಸುತ್ತಿದ್ದ ಸರ್ಕಾರಿ ಬಸ್‍ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

    ಮುಷ್ಕರದ ನಡುವೆಯೂ ಸಂಚರಿಸುತ್ತಿದ್ದ ಸರ್ಕಾರಿ ಬಸ್‍ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

    ಚಿಕ್ಕೋಡಿ: ಸಾರಿಗೆ ನೌಕರರ ಮುಷ್ಕರದ ನಡುವೆಯು ಸಂಚಾರ ಮಾಡುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‍ಗೆ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದ ಬಳಿ ನಡೆದಿದೆ.

    ಬಸ್‍ಗೆ ಕಲ್ಲು ತೂರಿದ್ದರಿಂದ ಬಸ್‍ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಸಾರಿಗೆ ನೌಕರರ ಮುಷ್ಕರ ಮುಂದುವರೆದಿರುವ ಪರಿಣಾಮ ಮುಷ್ಕರದ ನಡುವೆಯೂ ಜಿಲ್ಲೆಯಲ್ಲಿ ಕೆಲವು ಬಸ್‍ಗಳು ಸಂಚಾರ ಮಾಡುತ್ತಿವೆ. ಈ ನಡುವೆ ಸಂಚಾರ ಮಾಡುತ್ತಿದ್ದ ಬಸ್‍ನ ಮೇಲೆ ಕಲ್ಲು ತೂರಾಟ ನಡೆದಿದೆ.

    ಕೆ.ಎಸ್‍.ಆರ್‍.ಟಿಸಿ ಬಸ್ ಸಂಚರಿಸುತ್ತಿದ್ದಂತೆ ಯಾದಗೂಡು ಗ್ರಾಮ ಬಳಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಬಸ್ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಚಿಕ್ಕೋಡಿ- ಹುಕ್ಕೇರಿ ಪಟ್ಟಣಗಳ ನಡುವೆ ಈ ಬಸ್ ಸಂಚಾರ ಮಾಡುತ್ತಿತ್ತು. ಕಲ್ಲು ಹೊಡೆದ ಪರಿಣಾಮ ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

    ಕಲ್ಲು ತೂರಿದ ನಂತರ ಹುಕ್ಕೇರಿ ಬಸ್ ನಿಲ್ದಾಣಕ್ಕೆ ಚಾಲಕ ಬಸ್ ತೆಗೆದುಕೊಂಡು ಬಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹುಕ್ಕೇರಿ ಠಾಣೆಯ ಪಿ.ಎಸ್.ಐ ಸಿದ್ದರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಿಡಿಗೇಡಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

  • ವರ್ಗಾವಣೆ ಆದೇಶ ಬರುತ್ತಿದ್ದಂತೆ ಕೆಲಸಕ್ಕೆ ಹಾಜರಾದ ಸಾರಿಗೆ ನೌಕರರು

    ವರ್ಗಾವಣೆ ಆದೇಶ ಬರುತ್ತಿದ್ದಂತೆ ಕೆಲಸಕ್ಕೆ ಹಾಜರಾದ ಸಾರಿಗೆ ನೌಕರರು

    ಕಾರವಾರ: ರಾಜ್ಯಾದ್ಯಂತ ಕಳೆದ ಐದು ದಿನದಿಂದ ಬಸ್ ಸಂಚಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದು, ವರ್ಗಾವಣೆ ಆದೇಶ ಬರುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ವಾಯುವ್ಯ ಸಾರಿಗೆ ನೌಕರರು ಕೆಲಸಕ್ಕೆ ಹಾಜುರಾಗಿದ್ದಾರೆ.

    ನೌಕರರು ಕೆಲಸಕ್ಕೆ ಹಾಜುರಾಗುತಿದ್ದಂತೆ ಜಿಲ್ಲೆಯ ವಿವಿಧೆಡೆ ಹಾಗೂ ಗೋವಾ ಭಾಗಕ್ಕೆ ಸಂಚಾರ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ 60 ಬಸ್ ಗಳು ರಸ್ತೆಗಿಳಿದಿವೆ. ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರಲ್ಲಿ ಹಲವರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾತ್ರ ವಾಯುವ್ಯ ಸಾರಿಗೆ ಬಸ್‍ಗಳು ಇರುವ ನೌಕರರನ್ನು ಬಳಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

    ನಿನ್ನೆ ದಿನ ಮುಷ್ಕರ ಹಿನ್ನಲೆಯಲ್ಲಿ 40 ಜನ ಸಾರಿಗೆ ಸಿಬ್ಬಂದಿಯನ್ನ ಹುಬ್ಬಳ್ಳಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಇಂದು ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹ ನೀಡಲಾಗಿತ್ತು. ವೀಕೆಂಡ್ ಮತ್ತು ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಬಸ್‍ಗಳು ಸಂಚಾರ ಪ್ರಾರಂಭಿಸಿರುವುದು ಖುಷಿ ಕೊಟ್ಟಿದ್ದು, ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ.

  • ಸಂಬಳ ಪರಿಷ್ಕರಣೆ ಮಾಡಿದ್ರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ: ಸವದಿ

    ಸಂಬಳ ಪರಿಷ್ಕರಣೆ ಮಾಡಿದ್ರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ: ಸವದಿ

    ಬೀದರ್: ಸಾರಿಗೆ ನೌಕರರ ಒಂದು ಬೇಡಿಕೆ ಮಾತ್ರ ಬಾಕಿ ಇದೆ. ಅದು ಸಂಬಳ ಪರಿಷ್ಕರಣೆ. ಇದನ್ನ ಈಡೇರಿಸಿದರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.

    ಬೀದರ್‍ನ ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಬಂದ ಮೇಲೆ ನಮ್ಮ ಸಾರಿಗೆ ಇಲಾಖೆಗೆ 3 ಸಾವಿರದ ಇನ್ನೂರು ಕೋಟಿ ನಷ್ಟವಾಗಿದೆ. ಈಗ ಬರುವ ಆದಾಯದಲ್ಲಿ ಸಂಬಳಕ್ಕೆ ಮತ್ತು ಇಂಧನಕ್ಕೂ ಕೊರತೆಯಾಗುತ್ತಿದೆ. ಈ ಹಣದ ಕೊರತೆ ನೀಗಿಸಲು ಸರ್ಕಾರದಿಂದ 1962 ಕೋಟಿ ಹಣ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ ಎಂದರು.

    ಬೇರೆ ಬೇರೆ ರಾಜ್ಯದಲ್ಲಿ ಇಲಾಖೆಯ ನೌಕರರಿಗೆ ಕೊರೊನಾ ನೆಪವೊಡ್ಡಿ ಶೇ.20 ರಿಂದ 30 ರಷ್ಟು ಸಂಬಳ ಕಟ್ ಮಾಡಿದ್ದಾರೆ. ಆದರೆ ನಾವು ಮಾಡಿಲ್ಲ. ಸಾರಿಗೆ ನೌಕರರು 9 ಬೇಡಿಕೆ ಇಟ್ಟಿದ್ದರು. ಅದರಲ್ಲೀಗ 8 ಬೇಡಿಕೆ ಈಡೇರಿಸಿದ್ದೇವೆ. ಒಂದು ಬೇಡಿಕೆ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.

    ಬಸ್ ಮುಷ್ಕರ ಮಾಡೋದ್ರಿಂದ ಎಲ್ಲರಿಗೂ ತೊಂದರೆಯಾಗುತ್ತೆ. ಹಾಗಾಗಿ ಹಠಮಾರಿತನದಿಂದ ಹೊರಗೆ ಬರಬೇಕು. ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳೋಣ. ಪ್ರತಿಭಟನೆಯನ್ನು ನಿಲ್ಲಿಸಬೇಕು. ಮೇ 4 ರ ನಂತರದ ಸಂಬಳದ ಬಗ್ಗೆ ಚೆರ್ಚೆ ಮಾಡಿ ಸಂಬಳ ಹೆಚ್ಚು ಮಾಡೋಣ. ನನಗೆ ವಿಶ್ವಾಸವಿದೆ ನಾಳೆ ಸಾರಿಗೆ ಮುಷ್ಕರಕ್ಕೆ ಇಳಿಯಲ್ಲ, ಒಂದು ವೇಳೆ ಪರ್ಯಾಯ ವ್ಯವಸ್ಥೆ ಮಾಡಿದ್ರೆ ಸಾರ್ವಜನಿಕರು ಸಹಕಾರ ಮಾಡಬೇಕು ಎಂದು ಹೇಳಿದರು.