Tag: Transport Agency

  • ‘ರಸ್ತೆ ಸುರಕ್ಷತಾ ನಿಯಮದ ಅರಿವಿಲ್ಲದಿರುವುದು ಒಂದು ಸಾಂಕ್ರಾಮಿಕ ರೋಗ’

    ‘ರಸ್ತೆ ಸುರಕ್ಷತಾ ನಿಯಮದ ಅರಿವಿಲ್ಲದಿರುವುದು ಒಂದು ಸಾಂಕ್ರಾಮಿಕ ರೋಗ’

    ಮಂಡ್ಯ: ಈ ಹಿಂದೆ ಸಾಂಕ್ರಾಮಿಕ ರೋಗಗಳಾದ ಕಾಲರಾ ಮತ್ತು ಪ್ಲೇಗ್‍ಗಳು ಬಂದಾಗ ಸಾವಿರಾರು ಗ್ರಾಮೀಣ ಜನರು ಸೂಕ್ತ ಚಿಕಿತ್ಸೆಯಿಲ್ಲದೇ ಅಕಾಲಿಕವಾದ ಮೃತ್ಯುವಿಗೆ ಶರಣಾಗುತ್ತಿದ್ದರು. ಆದರೆ ಈಗ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ರಸ್ತೆ ಅಪಘಾತಗಳಲ್ಲಿ ಬೇಜವಾಬ್ದಾರಿತನದಿಂದ ಅಕಾಲಿಕವಾಗಿ ಸಾಯುವ ಜನರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಕೆ.ಆರ್.ಪೇಟೆ ಪಟ್ಟಣ್ಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಅಭಿಪ್ರಾಯ ಪಟ್ಟಿದ್ದಾರೆ.

    ಕೆ.ಆರ್.ಪೇಟೆ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋದಲ್ಲಿ ನಾಗಮಂಗಲದ ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ರಸ್ತೆ ಸುರಕ್ಷತಾ ನಿಯಮದ ಬಗ್ಗೆ ಅರಿವು ಮೂಡಿಸುವ ಪೋಸ್ಟರ್ ಮತ್ತು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

    ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೇ ಅಪಘಾತವು ಸಂಭವಿಸಿ ನಮ್ಮ ಅಮೂಲ್ಯವಾದ ಪ್ರಾಣವು ಹೋಗುತ್ತದೆ. ನಾವುಗಳು ಶಾಶ್ವತವಾಗಿ ಅಂಗವಿಕಲರಾಗುತ್ತೇವೆ ಎಂದು ತಿಳಿದಿದ್ದರೂ ಅಡ್ಡಾದಿಡ್ಡಿಯಾಗಿ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಬಲಿಯಾಗಿ ನಮ್ಮನ್ನು ನಂಬಿರುವ ಕುಟುಂಬದ ಸದಸ್ಯರು, ತಂದೆ-ತಾಯಿ, ಹೆಂಡತಿ-ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದ್ದೇವೆ ಎಂದರು.

    ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳದೇ ಮೊಬೈಲ್ ಫೋನಿನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡಿದರೆ ಅಪಘಾತ ನಡೆಯುತ್ತದೆ. ಕುಡಿದು ವಾಹನ ಚಾಲನೆ ಮಾಡುವುದು, ಓವರ್ ಲೋಡ್ ಮಾಡಿಕೊಂಡು ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳದೇ ವಾಹನವನ್ನು ಚಾಲನೆ ಮಾಡುವುದರಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ ವಾಹನ ಚಲಾಯಿಸಬೇಕು ಎಂದು ಹೇಳಿದರು.

  • ಸೂರ್ಯಗ್ರಹಣದ ಎಫೆಕ್ಟ್ – KSRTC ಕಲೆಕ್ಷನ್‍ಗೆ ಬಿತ್ತು ಹೊಡೆತ

    ಸೂರ್ಯಗ್ರಹಣದ ಎಫೆಕ್ಟ್ – KSRTC ಕಲೆಕ್ಷನ್‍ಗೆ ಬಿತ್ತು ಹೊಡೆತ

    ಚಿಕ್ಕಬಳ್ಳಾಪುರ: ಶತಮಾನದ ಕೇತುಗ್ರಸ್ಥ ಸೂರ್ಯಗ್ರಹಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಭಾರೀ ಹೊಡೆತ ಬಿದ್ದಿದೆ. ನಿರೀಕ್ಷಿತ ಪ್ರಮಾಣದ ಪ್ರಯಾಣಿಕರಿಲ್ಲದೆ ಈ ದಿನದ ಕಲೆಕ್ಷನ್‍ನಲ್ಲಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.

    ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಬಾರದ ಕಾರಣ ಬಸ್‍ಗಳೆಲ್ಲವೂ ಬೆರಳಣಿಕೆ ಪ್ರಯಾಣಿಕರನ್ನು ಹೊತ್ತು ಸಾಗುವಂತಾಗಿದೆ. ಚಿಕ್ಕಬಳ್ಳಾಪುರ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ಗ್ರಹಣದ ಎಫೆಕ್ಟ್ ನಿಂದ ಬಿಕೋ ಎನ್ನುವಂತಿತ್ತು. ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದ್ದ ಬಸ್ ಗಳು ನಿಂತಲ್ಲೇ ನಿಂತ ದೃಶ್ಯಗಳು ಸಾಮಾನ್ಯವಾಗಿತ್ತು. ಇಷ್ಟು ದಿನ ಬಸ್ ಗಳಿಗಾಗಿ ಪ್ರಯಾಣಿಕರು ಕಾಯುವಂತಹ ಪರಿಸ್ಥಿತಿ ಇರುತ್ತಿತ್ತು. ಆದರೆ ಇಂದು ಬಸ್ ಚಾಲಕ, ನಿರ್ವಾಹಕರು ಪ್ರಯಾಣಿಕರಿಗಾಗಿ ಕಾಯುವಂತಾಗಿತ್ತು.

    ಸಾಮಾನ್ಯ ದಿನಗಳಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ 10 ರಿಂದ 15 ನಿಮಿಷಕ್ಕೆ ಒಂದು ಬಸ್ ಪ್ರಯಾಣಿಕರನ್ನು ಹೊತ್ತ ಬಸ್ ಸಾಗುತ್ತಿತ್ತು. ಆದರೆ ಇಂದು ಅರ್ಧ ಗಂಟೆಯಾದರು ಒಂದು ಬಸ್ ಕೂಡ ತುಂಬಿರಲಿಲ್ಲ. ಪರಿಣಾಮ ಟಿಕೆಟ್ ಕಲೆಕ್ಷನ್‍ನಲ್ಲೂ ಸಹ ಸಾಕಷ್ಟು ಕಡಿಮೆಯಾಗಿದೆ. ಗ್ರಹಣದ ಸಮಯದಲ್ಲಿ 8 ರಿಂದ 11:30ರ ವೇಳೆಗೆ ಸುಮಾರು 45 ಬಸ್ ಗಳು ಬೆಂಗಳೂರು ಕಡೆಗೆ ಸಾಗಬೇಕಿತ್ತು. ಆದರೆ ಎಲ್ಲಾ ಬಸ್ ಗಳು ಅರ್ಧ ಗಂಟೆ ಲೇಟಾಗಿ ಖಾಲಿ ಖಾಲಿಯಾಗಿ ಬೆರಳಣೆಕೆ ಪ್ರಯಾಣಿಕರನ್ನ ಹೊತ್ತು ರಾಜಧಾನಿಯತ್ತ ಸಾಗಿವೆ. ಇದರಿಂದ ಸಹಜವಾಗಿ ಕಲೆಕ್ಷನ್ ಸಾಕಷ್ಟು ಕಡಿಮೆ ಆಗಿದೆ ಎಂದು ಚಿಕ್ಕಬಳ್ಳಾಪುರ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಟಿಸಿ ಬಿ.ಸೊಣ್ಣಪ್ಪ ಪಬ್ಲಿಕ್ ಟಿ ವಿಗೆ ಮಾಹಿತಿ ನೀಡಿದರು.

    ಖಾಸಗಿ ಬಸ್‍ಗಳಿಗೂ ಎಫೆಕ್ಟ್: ಕೆಎಸ್‍ಆರ್ ಟಿಸಿ ಬಸ್ ಗಳ ಒಂದೆಡೆಯಾದರೆ ಖಾಸಗಿ ಬಸ್ ಗಳ ವ್ಯಥೆಯೂ ಸಾಕಷ್ಟಿದೆ. ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರಿಲ್ಲದೆ ಬಸ್ ಗಳೆಲ್ಲವೂ ಖಾಲಿ ಖಾಲಿಯಾಗಿ ನಿಂತಿತ್ತು. ಬೆಂಗಳೂರು ಕಡೆಗೆ ಎರಡು ಟ್ರಿಪ್ ಹೊಡೆದರೂ ಪ್ರಯಾಣಿಕರು ಬರುತ್ತಿಲ್ಲ. ಬೆರಳೆಣಿಕೆ ಪ್ರಯಾಣಿಕರು ಮಾತ್ರ ಬಸ್ ಹತ್ತಲು ಬರುತ್ತಿದ್ದಾರೆ. ಕನಿಷ್ಠ ಡಿಸೇಲ್‍ಗೂ ಸಹ ಕಲೆಕ್ಷಕನ್ ಆಗುತ್ತಿಲ್ಲ ಎಂದು ಖಾಸಗಿ ಬಸ್ ಚಾಲಕ ಪಬ್ಲಿಕ್ ಟಿವಿ ಬಳಿ ಅಳಲು ತೋಡಿಕೊಂಡರು.

    ಒಂದೆಡೆ ವಾಹನಗಳ ಸಂಚಾರ ವಿರಳವಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದರೆ, ಮತ್ತೊಂದೆಡೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ವ್ಯಾಪಾರ ವಹಿವಾಟು ಇಲ್ಲದೆ ವ್ಯಾಪಾರಸ್ಥರು ನಿರಾಸೆ ಅನುಭವಿಸಿದರು.