Tag: Transparency

  • ನೋಟ್ ಬ್ಯಾನ್ ನಿರ್ಧಾರವನ್ನು ಮೊದಲೇ ತಿಳಿಸಿಲ್ಲ ಯಾಕೆ: ಅರುಣ್ ಜೇಟ್ಲಿ ವಿವರಿಸಿದ್ರು

    ನೋಟ್ ಬ್ಯಾನ್ ನಿರ್ಧಾರವನ್ನು ಮೊದಲೇ ತಿಳಿಸಿಲ್ಲ ಯಾಕೆ: ಅರುಣ್ ಜೇಟ್ಲಿ ವಿವರಿಸಿದ್ರು

    ವಾಷಿಂಗ್ಟನ್: ನೋಟ್ ಬ್ಯಾನ್ ನಿಷೇಧ ವಿಚಾರವನ್ನು ಮೊದಲೇ ಯಾಕೆ ತಿಳಿಸಿಲ್ಲ ಎನ್ನುವ ಪ್ರಶ್ನೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರಿಸಿದ್ದಾರೆ.

    ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಸಭೆಯ ಹಿನ್ನೆಲೆಯಲ್ಲಿ ಅಮೆರಿಕಗೆ ಭೇಟಿ ನೀಡಿರುವ ಅರುಣ್ ಜೇಟ್ಲಿ ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ನೋಟ್ ನಿಷೇಧ ಕ್ರಮ ಮತ್ತು ಜಿಎಸ್‍ಟಿಯನ್ನು ಹೊಗಳಿ ಮಾತನಾಡಿದ್ದಾರೆ.

    ಒಂದು ವೇಳೆ 500, 1 ಸಾವಿರ ರೂ. ನೋಟುಗಳು ನಿಷೇಧವಾಗುತ್ತದೆ ಎಂದು ಗೊತ್ತಾಗಿದ್ದರೆ ಜನರು ತಮ್ಮ ಬಳಿ ಇದ್ದ ನಗದಿನ ಮೂಲಕ ಚಿನ್ನ, ವಜ್ರ ಇತ್ಯಾದಿಯನ್ನು ಖರೀದಿಸುತ್ತಿದ್ದರು. ಹೀಗಾಗಿ ನೋಟ್ ನಿಷೇಧ ನಿರ್ಧಾರವನ್ನು ಗೌಪ್ಯವಾಗಿ ಇಡಲಾಗಿತ್ತು ಎಂದು ತಿಳಿಸಿದರು.

    ನೋಟ್ ನಿಷೇಧ ನಿರ್ಧಾರ ತೆಗೆದುಕೊಂಡ ಬಳಿಕ ಜನರಿಗೆ ಸಮಸ್ಯೆಯಾಗದೇ ಇರಲು ಹೊಸ ನೋಟುಗಳ ಮುದ್ರಣ ಕಾರ್ಯ ಆರಂಭಿಸಿದೆವು. ಹೀಗಾಗಿ ಮೊದಲೇ ಪ್ರಿಂಟ್ ಮಾಡಿದ ಕಾರಣ ಚೆಸ್ಟ್ ಮೂಲಕ ಹಣವನ್ನು ಬ್ಯಾಂಕ್ ಗಳಿಗೆ ಕಳುಹಿಸಿದೆವು. ಹೀಗಾಗಿ ಆಗಬಹುದಾಗಿದ್ದ ಸಂಭಾವ್ಯ ಸಮಸ್ಯೆಯನ್ನು ನಿವಾರಿಸಿದೆವು ಎಂದು ಹೇಳುವ ಮೂಲಕ ನೋಟ್ ಬ್ಯಾನ್ ರಹಸ್ಯವನ್ನು ವಿವರಿಸಿದರು.

    ಪಾರದರ್ಶಕತೆ ಪದ ಕೇಳಲು ಚೆನ್ನಾಗಿರುತ್ತದೆ. ಇದನ್ನು ಉಳಿಸಿಕೊಳ್ಳುವುದು ಕಷ್ಟ. ಆದರೆ ನೋಟ್ ನಿಷೇಧ ವಿಚಾರದಲ್ಲಿ ಪಾರದರ್ಶಕತೆಯನ್ನು ಉಳಿಸಿ ರಹಸ್ಯವಾಗಿ ಕೈಗೊಂಡ ನಿರ್ಧಾರ ಯಶಸ್ವಿಯಾಗಿದೆ ಎಂದು ಹೇಳಿದರು.

    ಇಡೀ ವಿಶ್ವದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ಬದಲಾವಣೆ ಆಗಿಲ್ಲ. ಟಿವಿಗಳು ಬ್ಯಾಂಕ್ ಮುಂಭಾಗ ನಿಂತಿದ್ದ ಜನರನ್ನು ಪ್ರಚೋಧಿಸಿ ಮಾತನಾಡಿಸುವ ಪ್ರಯತ್ನ ನಡೆಸುತಿತ್ತು. ಆದರೆ ಜನರು ಈ ನಿರ್ಧಾರವನ್ನು ಸ್ವಾಗತಿಸಿ ಬೆಂಬಲ ನೀಡಿದರು ಎಂದರು.

    ನೋಟ್ ನಿಷೇಧ ಬಳಿಕ ಡಿಜಿಟಲ್ ವ್ಯವಹಾರ ದುಪ್ಪಟ್ಟು ಆಗಿದೆ. ಅಷ್ಟೇ ಅಲ್ಲದೇ ಭಾರೀ ಸಂಖ್ಯೆಯಲ್ಲಿ ಜನರು ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.