Tag: Transfers

  • ವರ್ಗಾವಣೆ ಆದೇಶ ರದ್ದುಗೊಳಿಸುವಂತೆ 24 ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ ಶಿಕ್ಷಕರು

    ವರ್ಗಾವಣೆ ಆದೇಶ ರದ್ದುಗೊಳಿಸುವಂತೆ 24 ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ ಶಿಕ್ಷಕರು

    ಲಕ್ನೋ: ಲಖೀಂಪುರ ಖೇರಿ ಜಿಲ್ಲೆಯ ಬೆಹ್ಜಾಮ್‍ನಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಶಿಕ್ಷಕರಿಬ್ಬರು ಶಾಲೆಯ ಮೇಲ್ಛವಣಿಯಲಿದ್ದ 24 ಮಂದಿ ವಿದ್ಯಾರ್ಥಿನಿಯರನ್ನು ಬೀಗ ಹಾಕಿ ಕೂಡಿ ಹಾಕಿ ತಮ್ಮ ವರ್ಗಾವಣೆ ಆದೇಶವನ್ನು ರದ್ದುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ.

    ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಹಲವಾರು ಗಂಟೆಗಳ ಬಳಿಕ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ವಿದ್ಯಾರ್ಥಿನಿಯರನ್ನು ರಕ್ಷಿಸಿ ಹಾಸ್ಟೆಲ್‍ಗೆ ಕಳುಹಿಸಿದ್ದಾರೆ. ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯವು ನೀಡಿದ್ದ ವರ್ಗಾವಣೆ ಆದೇಶವನ್ನು ರದ್ದುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಶಿಕ್ಷಕರು ಇಂತಹ ಕೆಲಸವನ್ನು ಮಾಡಿದ್ದಾರೆ ಎಂದು ಲಖೀಂಪುರ ಖೇರಿಯ ಮೂಲ ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಪಾಂಡೆ ತಿಳಿಸಿದ್ದಾರೆ. ಇದನ್ನೂ ಓದಿ: 15% ಜನರಿಗಾಗಿ 85% ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆ – ಹಲಾಲ್ ಉತ್ಪನ್ನ ನಿಷೇಧಿಸುವಂತೆ ಸುಪ್ರೀಂನಲ್ಲಿ ಅರ್ಜಿ

    ಘಟನೆಯ ಬಗ್ಗೆ ಹಾಸ್ಟೆಲ್ ವಾರ್ಡನ್ ಲಲಿತ್ ಕುಮಾರಿ ಮತ್ತು ಲಕ್ಷ್ಮೀಕಾಂತ್ ಪಾಂಡೆ, ಬಾಲಕಿಯರ ಶಿಕ್ಷಣದ ಜಿಲ್ಲಾ ಸಂಯೋಜಕಿ ರೇಣು ಶ್ರೀವಾಸ್ತವ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅವರು, ಹಲವಾರು ಗಂಟೆಗಳ ಸಮಯ ಅಲ್ಲಿಯೇ ಕಾಲ ಕಳೆದರು. ನಂತರ ಸ್ಥಳೀಯ ಪೊಲೀಸರು ಮಹಿಳಾ ಸಿಬ್ಬಂದಿಯನ್ನು ಕರೆಸಿ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿಯೇ ಮಾಡಬಹುದು ಸರಳವಾದ ಸಬ್ಬಕ್ಕಿ ಪಾಯಸ

    ಇದೀಗ ಮನೋರಮಾ ಮಿಶ್ರಾ ಮತ್ತು ಗೋಲ್ಡಿ ಕಟಿಯಾರ್ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರು ಐಪಿಸಿಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಶಿಕ್ಷಕರು ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • 28 ಸಾರಿಗೆ ನೌಕರರಿಗೆ ಅಂತರಜಿಲ್ಲಾ ವರ್ಗಾವಣೆ ಶಾಕ್

    28 ಸಾರಿಗೆ ನೌಕರರಿಗೆ ಅಂತರಜಿಲ್ಲಾ ವರ್ಗಾವಣೆ ಶಾಕ್

    ಹಾವೇರಿ: ಸಾರಿಗೆ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಹಾವೇರಿ ಜಿಲ್ಲೆಯ 28 ಜನ ಚಾಲಕ ಹಾಗೂ ನಿರ್ವಾಹಕರಿಗೆ ಸಾರಿಗೆ ಇಲಾಖೆ ಅಂತರ ಜಿಲ್ಲಾ ವರ್ಗಾವಣೆ ಮಾಡಿ ಶಾಕ್ ನೀಡಿದೆ.

    ಹಾವೇರಿ ಜಿಲ್ಲೆಯಿಂದ ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇಪ್ಪತ್ತೆಂಟು ಜನ ಚಾಲಕ ಹಾಗೂ ನಿರ್ವಾಹಕರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಆಡಳಿತಾತ್ಮಕ ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

    ಏಪ್ರಿಲ್ 10ರಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ವರ್ಗಾವಣೆ ಆದೇಶ ನೀಡಿದ್ದಾರೆ. ಮುಷ್ಕರಕ್ಕೆ ಬೆಂಬಲ ನೀಡಿದ ನೌಕರರಿಗೆ ಸಾರಿಗೆ ಇಲಾಖೆ ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಆದರೂ ನೌಕರರು ಮುಷ್ಕರ ಬಿಟ್ಟು ಸೇವೆಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಪ್ರಯಾಣಿಕರ ಪರದಾಟ ಮುಂದುವರಿದಿದೆ.

  • ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ವಾರ್

    ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ವಾರ್

    ಮಂಡ್ಯ: ಸಹಕಾರ ಸಂಘಗಳ ಉಪ ನಿಬಂಧಕ ಹುದ್ದೆಗಾಗಿ ಇದೀಗ ಜಟಾಪಟಿ ಏರ್ಪಟ್ಟಿದೆ. ಕೃಷ್ಣಮೂರ್ತಿ ಹಾಗೂ ವಿಕ್ರಮರಾಜೇ ಅರಸ್ ಎಂಬ ಇಬ್ಬರು ಅಧಿಕಾರಿಗಳ ನಡುವೆ ಕುರ್ಜಿಗಾಗಿ ವಾರ್ ನಡೆಯುತ್ತಿದೆ. ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರಾಗಿ ಕೃಷ್ಣಮೂರ್ತಿ ಅವರು ಕಳೆದ ಐದು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸರ್ಕಾರ ಜನವರಿ 18 ರಂದು ಕೃಷ್ಣಮೂರ್ತಿ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಲಾಗಿತ್ತು.

    ಈ ಹುದ್ದೆಗೆ ಮೈಸೂರಿನ ಕಾಫಿ ಸಂಸ್ಕರಣ ಸಹಕಾರ ಸಂಘದ ಉಪ ನಿಬಂಧಕರಾಗಿದ್ದ ವಿಕ್ರಮರಾಜೇ ಅರಸ್ ಅವರನ್ನು ಮುಂಬಡ್ತಿ ನೀಡಿ ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರಾಗಿ ನೇಮಕ ಮಾಡಿತ್ತು. ನಂತರ ಜನವರಿ 20ರಂದು ಕೃಷ್ಣಮೂರ್ತಿ ಅವರ ಅನುಪಸ್ಥಿತಿಯಲ್ಲಿ ವಿಕ್ರಮರಾಜೇ ಅರಸ್ ಅವರು ಅಧಿಕಾರ ವಹಿಸಿಕೊಂಡಿದ್ದರು.

    ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೃಷ್ಣಮೂರ್ತಿ ನಾನು ಇಲ್ಲಿ ಕೆಲಸಕ್ಕೆ ಬಂದು ಐದು ತಿಂಗಳಾಗಿದೆ. ಹೀಗಿರುವಾಗ ಸರ್ಕಾರ ನನ್ನ ಇಷ್ಟು ಬೇಗ ವರ್ಗಾವಣೆ ಮಾಡುವಂತಿಲ್ಲ. ಒಬ್ಬರಿಗೆ ಮುಂಬಡ್ತಿ ನೀಡಬೇಕು ಎಂದರೆ ಖಾಲಿ ಇರುವ ಜಾಗಕ್ಕೆ ಹಾಕಬೇಕು ಎಂದು ಕೃಷ್ಣಮೂರ್ತಿ ಅವರು ಜನವರಿ 21 ರಂದು ಕೆಎಟಿ ಮೊರೆ ಹೋಗಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದರು. ಇದಕ್ಕೆ ಕೆಎಟಿ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಯ್ದುಕೊಂಡು, ಕೃಷ್ಣಮೂರ್ತಿ ಅವರು ಕಾರ್ಯನಿರ್ಹಿಸಬೇಕೇಂದು ಆದೇಶ ನೀಡಿತ್ತು.

    ವಿಕ್ರಮರಾಜೇ ಅರಸ್ ನನ್ನನ್ನು ಸರ್ಕಾರ ನೇಮಕ ಮಾಡಿದ್ದು, ಹೀಗಾಗಿ ನಾನು ಇಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಒಪ್ಪದ ಕೃಷ್ಣಮೂರ್ತಿ ನಾನು ಕೆಲಸ ಮಾಡುತ್ತೇನೆ, ನೀವು ಹೊರಗೆ ಹೋಗಿ ಎಂದು ಹೇಳ್ತಾ ಇದ್ದಾರೆ. ಸದ್ಯ ಇಬ್ಬರು ಕಚೇರಿಗೆ ಬಂದು ಕುಳಿತುಕೊಂಡು ಕುರ್ಚಿಗಾಗಿ ವಾರ್ ಮಾಡುತ್ತಿದ್ದಾರೆ.

  • ಶೆಟ್ಟರ್ ಹೇಳಿಕೆಯನ್ನು ಒಪ್ಪುತ್ತೇನೆ ಎಂದ ರಾಘವೇಂದ್ರ

    ಶೆಟ್ಟರ್ ಹೇಳಿಕೆಯನ್ನು ಒಪ್ಪುತ್ತೇನೆ ಎಂದ ರಾಘವೇಂದ್ರ

    ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಹುದ್ದೆಯಲ್ಲ ಎನ್ನುವುದು ನಿಜ. ಒಂದು ಗೌರವಯುತ ಹುದ್ದೆ ಎಂಬ ಜಗದೀಶ್ ಶಟ್ಟರ್ ಅವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ ಎಂದು ಬಿ.ವೈ.ರಾಘವೇಂದ್ರ ಅವರು ಶೆಟ್ಟರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಎಲ್ಲೂ ಉಪಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಬದ್ಧ ಸ್ಥಾನವಲ್ಲ. ಮೂರು ಡಿಸಿಎಂ ಮಾಡಿರುವುದು ಇದೇ ಮೊದಲಲ್ಲ. ಹಿಂದೆ ಉತ್ತರ ಪ್ರದೇಶ ಹಾಗೂ ಇತರೇ ರಾಜ್ಯಗಳಲ್ಲೂ ಮೂರು ಡಿಸಿಎಂ ಮಾಡಿದ್ದಾರೆ. ಹೀಗಾಗಿ ಇದರಲ್ಲಿ ವಿಶೇಷವೇನೂ ಇಲ್ಲ. ಮುಂದಿನ ಉತ್ತರಾಧಿಕಾರಿಗಳು ಎಂಬ ದೃಷ್ಟಿಯಿಂದ ಈ ರೀತಿ ಮಾಡಿದ್ದಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಹೈ ಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಸಂಘಟನೆಯ ದೂರದೃಷ್ಟಿಯಿಂದ ಈ ರೀತಿ ತೀರ್ಮಾನ ಕೈಗೊಂಡಿದ್ದಾರೆ. ಲಕ್ಷ್ಮಣ ಸವದಿಯವರನ್ನು ಡಿಸಿಎಂ ಮಾಡಿರುವ ಕುರಿತು ಪಕ್ಷದಲ್ಲಿ ಯಾರಿಗೂ ಅಸಮಾಧಾನವಿಲ್ಲ. ಮಾಧ್ಯಮಗಳಲ್ಲಿ ಈ ಕುರಿತು ಬಂದಿರುವುದು ಬಿಟ್ಟರೆ, ಪಕ್ಷದ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಇದೀಗ ಸಿಎಂ ಜೊತೆಯಲ್ಲೇ ಸಿ.ಟಿ.ರವಿ ಅವರು ಚಿಕ್ಕಮಗಳೂರು ಪ್ರವಾಸಕ್ಕೆ ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ನಿಮ್ಮ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಳ್ಳಿ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಅಂತಹ ಸಂಕಷ್ಟ ಎದುರಾದರೆ ಅವರ ಮಗನಿಂದಲೇ ಬರಬಹುದು. ಈ ಕುರಿತು ಅವರಿಗೆ ಕನಸು ಬಿದ್ದಿರಬೇಕು ಇಲ್ಲವೇ ಅವರ ಅನುಭವ ಆ ರೀತಿ ಇರಬಹುದು ಹೀಗಾಗಿ ನಮ್ಮ ಮೇಲೆ ಆರೋಪ ಮಾಡಿದ್ದಾರೆ. ನಾನು ಸಂಸದನಾಗಿ ಶಿವಮೊಗ್ಗ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅನಾವಶ್ಯಕವಾಗಿ ಮೂಗು ತೂರಿಸುವ ಕೆಲಸವನ್ನು ಮಾಡಿಲ್ಲ, ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ. ಇತರೆ ವಿಷಯಗಳ ಕುರಿತು ತಲೆ ಕೆಡಿಸಿಕೊಂಡಿಲ್ಲ. ಮುಖ್ಯಮಂತ್ರಿಗಳು ಅಧಿಕಾರಿಗಳೊಣಂದಿಗೆ ಚರ್ಚಿಸಿ ವರ್ಗಾವಣೆ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಗೂಳಿಹಟ್ಟಿ ಶೇಖರ್ ಅವರೂ ಯಾಕೆ ಈ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಅವರಿಗೂ ಸಹ ಈ ಕುರಿತು ತಪ್ಪು ಕಲ್ಪನೆ ಮೂಡಿರಬಹುದು. ನಾನೇ ಖುದ್ದು ಕರೆ ಮಾಡಿ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

    ನಮ್ಮ ಸಂಘಟನೆಯಲ್ಲಿ ವಯಸ್ಸು ಮೀರಿ ಜವಾಬ್ದಾರಿಗೆ ಗೌರವ ಕೊಟ್ಟುಕೊಂಡು ಬಂದಿದ್ದೇವೆ. ಸಂತೋಷ್ ಅವರು ಸಂಘಟನಾ ಕಾರ್ಯದರ್ಶಿಯಾಗಿದ್ದು ಪಕ್ಷದ ಸಂಘಟನೆ ದೃಷ್ಟಿಯಿಂದ ಇಡೀ ದೇಶ ಹಾಗೂ ಪಕ್ಷ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಯಡಿಯೂರಪ್ಪನವರು ವಯಸ್ಸಿನಲ್ಲಿ ಹಿರಿಯರಿರಬಹುದು. ಆದರೆ, ಸಂಘಟನೆ ದೃಷ್ಟಿಯಿಂದ ಉನ್ನತ ಸ್ಥಾನದಲ್ಲಿರುವವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದು ನಮ್ಮ ಕರ್ತವ್ಯ. ಒಟ್ಟಾಗಿ ನಾವು ತೆಗೆದುಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ದೈಹಿಕ ಶಿಕ್ಷಕರು ಬೇಕು – ಕಣ್ಣೀರು ಹಾಕಿ, ಸಂಘಟನಾಕಾರರ ಕಾಲಿಗೆ ಬಿದ್ದ ವಿದ್ಯಾರ್ಥಿಗಳು

    ದೈಹಿಕ ಶಿಕ್ಷಕರು ಬೇಕು – ಕಣ್ಣೀರು ಹಾಕಿ, ಸಂಘಟನಾಕಾರರ ಕಾಲಿಗೆ ಬಿದ್ದ ವಿದ್ಯಾರ್ಥಿಗಳು

    ಯಾದಗಿರಿ: ದೈಹಿಕ ಶಿಕ್ಷಕರನ್ನು ವರ್ಗಾಯಿಸಿದ್ದರಿಂದ ವಿದ್ಯಾರ್ಥಿಗಳು ತೀವ್ರ ಬೇಸರಗೊಂಡಿದ್ದು, ಕಣ್ಣೀರು ಹಾಕಿ, ಗೋಗರೆದು, ಸಂಘಟನಾಕಾರರ ಕಾಲಿಗೆ ಬಿದ್ದಿದ್ದಾರೆ. ಹೇಗಾದರೂ ಮಾಡಿ ದೈಹಿಕ ಶಿಕ್ಷಕರು ಮರಳಿ ಬರುವಂತೆ ಮಾಡಿ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

    ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಶಿರವಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ತಮಗೆ ದೈಹಿಕ ಶಿಕ್ಷಕರು ಬೇಕು ಎಂದು ವಿವಿಧ ಸಂಘಟನಕಾರರ ಕಾಲಿಗೆ ಬಿದ್ದು ವಿದ್ಯಾರ್ಥಿಗಳು ಬೇಡಿಕೊಳ್ಳುತ್ತಿದ್ದಾರೆ. ದೈಹಿಕ ಶಿಕ್ಷಕರನ್ನು ವರ್ಗಾಯಿಸಿರುವುದನ್ನು ತಡೆಯುವಂತೆ ವಿವಿಧ ಸಂಘಟನೆಕಾರರ ಬಳಿ ಬಿಕ್ಕಿ, ಬಿಕ್ಕಿ ಅತ್ತು ಕೇಳಿಕೊಳ್ಳುತ್ತಿದ್ದಾರೆ. ತರಗತಿ ಬಹಿಷ್ಕರಿಸಿ ಶಾಲೆಯ ಬಳಿಯೂ ಪ್ರತಿಭಟನೆ ನಡೆಸುತ್ತಿದ್ದಾರೆ.  ಇದನ್ನು ಓದಿ: ಸರ್.. ಪ್ಲೀಸ್ ಹೋಗ್ಬೇಡಿ, ನಮ್ಮನ್ನ ಬಿಟ್ಟು ಹೋಗ್ಬೇಡಿ – ಶಿಕ್ಷಕನನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

    ತಾವಷ್ಟೇ ಪ್ರತಿಭಟನೆ ಮಾಡಿದರೆ ಸಾಕಾಗುವುದಿಲ್ಲ ಎಂಬುದನ್ನು ಅರಿತ ವಿದ್ಯಾರ್ಥಿಗಳು, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರನ್ನು ಭೇಟಿ ಮಾಡಿ, ಅವರ ಬಳಿ ತಮ್ಮ ಕಷ್ಟ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾತ್ರವಲ್ಲದೆ, ತರಗತಿಗೆ ತೆರಳದೆ, ಬೋರ್ಡ್ ಹಿಡಿದು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ನಮಗೆ ದೈಹಿಕ ಶಿಕ್ಷಕರು ಬೇಕು, ಹೇಗಾದರೂ ಮಾಡಿ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಮರಳಿ ಕರೆಸಿ ಎಂದು ಗೋಳಿಡುತ್ತಿದ್ದಾರೆ.

    ವಿದ್ಯಾರ್ಥಿಗಳ ಮೊರೆಗೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಹೇಗಾದರೂ ಮಾಡಿ ವರ್ಗಾವಣೆಯನ್ನು ತಡೆಯುತ್ತೇವೆ. ನಿಮ್ಮ ದೈಹಿಕ ಶಿಕ್ಷಕರನ್ನು ಕರೆ ತರುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೂ ಸುಮ್ಮನಾಗದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಶಾಲೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.