Tag: Training

  • ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ತರಬೇತಿ

    ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ತರಬೇತಿ

    ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಇದೇ ಮೊದಲ ಬಾರಿಗೆ ಪಾತ್ರವೊಂದಕ್ಕಾಗಿ ತರಬೇತಿ ಪಡೆಯುತ್ತಿದ್ದಾರಂತೆ. ರಾಮಯಾಣ (Ramayana) ಸಿನಿಮಾದಲ್ಲಿ ಇವರು ರಾಮನ ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರಕ್ಕಾಗಿ ಹಲವು ಬಗೆಯ ತರಬೇತಿಯನ್ನು ರಣಬೀರ್ ಪಡೆದುಕೊಳ್ಳುತ್ತಿದ್ದಾರಂತೆ. ರಾಮನ ಪಾತ್ರವೆಂದರೆ, ಅದು ಸಾಮಾನ್ಯವಾದದ್ದಲ್ಲ. ಹಾಗಾಗಿ ಈ ತರಬೇತಿ ಅಗತ್ಯವಿದೆಯಂತೆ.

    ಈ ರಾಮಾಯಣ ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ನಿರ್ದೇಶಕ ನಿತಿಶ್ ತಿವಾರಿ ದಕ್ಷಿಣದ ಹೀರೋಗಳ ಬಗ್ಗೆ ಒಲವು ತೋರಿ, ಇಲ್ಲಿನ ಕಲಾವಿದರನ್ನು ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ (Vijay Sethupathi) ಕೂಡ ಈ ಸಿನಿಮಾದಲ್ಲಿ ರಾವಣನ ಸಹೋದರನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ರಾವಣನ ಸಹೋದರನಾಗಿ ವಿಜಯ್ ಸೇತುಪತಿ ನಟಿಸಿದರೆ, ಈ ಹಿಂದೆ ರಾವಣನಾಗಿ (Raavan) ಕನ್ನಡದ ನಟ ಯಶ್ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ.

    ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಮಾತನಾಡಿದ್ದರು. ಅದು ಈಗ ನಿಜವಾದಂತೆ ಕಾಣುತ್ತಿದೆ. ಈಗಾಗಲೇ ಯಶ್ ಲುಕ್ ಟೆಸ್ಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಸಿನಿಮಾಗಾಗಿ ಅವರು 15 ದಿನಗಳ ಕಾಲ ಕಾಲ್ ಶೀಟ್ ಕೂಡ ನೀಡಿದ್ದಾರೆ ಎನ್ನುವುದು ತಾಜಾ ಮಾಹಿತಿ.

    ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 2024ರಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂದು ಅಂದಾಜಿಸಲಾಗಿದೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್  (Ranbir Kapoor) ನಿರ್ವಹಿಸಲಿದ್ದಾರೆ. ಸೀತೆ ಪಾತ್ರವು ಸಾಯಿ ಪಲ್ಲವಿ (Sai Pallavi)ಅವರ ಪಾಲಾಗಿದೆ.

     

    ಸದ್ಯ ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ದೇಶ ವಿದೇಶ ಸುತ್ತುತ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ. ರಾಮಾಯಣ ಸಿನಿಮಾ ಶುರುವಾಗುವ ಹೊತ್ತಿಗೆ ಹೊಸ ಸಿನಿಮಾದ ಬಹುತೇಕ ಕೆಲಸ ಮುಗಿಯುವ ಸಾಧ್ಯತೆ ಇದ್ದು, ಅದಕ್ಕಾಗಿ ಈ ಸಿನಿಮಾವನ್ನು ಯಶ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ಪದವಿ ಮುಗಿದವರಿಗೆ ಮಿಲ್ಟ್ರಿ ತರಬೇತಿ ಕೊಡಿ : ನಟಿ ಕಂಗನಾ ರಣಾವತ್ ಸಲಹೆ

    ಪದವಿ ಮುಗಿದವರಿಗೆ ಮಿಲ್ಟ್ರಿ ತರಬೇತಿ ಕೊಡಿ : ನಟಿ ಕಂಗನಾ ರಣಾವತ್ ಸಲಹೆ

    ಭಾರತ ಸರಕಾರಕ್ಕೆ (Central Government) ಮತ್ತು ಶಿಕ್ಷಣ ಇಲಾಖೆಗೆ ಅತ್ಯಂತ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ ಬಾಲಿವುಡ್ ನಟಿ ಕಂಗನಾ ರಣಾವತ್. ಯಾವ ಶತ್ರು, ಯಾವಾಗ ದೇಶದ ಮೇಲೆ ಆಕ್ರಮಣ ಮಾಡುತ್ತಾನೋ ಗೊತ್ತಿಲ್ಲ. ದೇಶವನ್ನು ರಕ್ಷಣೆ ಮಾಡುವ ಹಿತದೃಷ್ಟಿಯಿಂದ ಪದವಿ ಮುಗಿಯುತ್ತಿದ್ದಂತೆಯೇ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಮಿಲ್ಟ್ರಿ  (Military)ತರಬೇತಿ ಕೊಡುವಂತೆ ಕಂಗನಾ ಸಲಹೆ ನೀಡಿದ್ದಾರೆ.

    ಕಂಗನಾ ಅವರ ಸಲಹೆಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಯೊಬ್ಬರ ಹೃದಯದಲ್ಲೂ ಇದು ದೇಶ ಭಕ್ತಿ ತುಂಬಲಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಕಂಗನಾ ಅವರ ದೇಶಭಕ್ತಿಯ ಬಗ್ಗೆ ಕೊಂಡಾಡಿದ್ದಾರೆ. ಈ ಸಲಹೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹಲವರು ರಿಯ್ಯಾಕ್ಟ್ ಮಾಡಿದ್ದಾರೆ.

    ಇದರ ಜೊತೆಗೆ ಕಂಗನಾ ರಣಾವತ್  (Kangana Ranaut)ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಮಹದೇವ್ ಬೆಟ್ಟಿಂಗ್ ಆಪ್ ಮಾಲೀಕರ ಮದುವೆಯಲ್ಲಿ ಪಾಲ್ಗೊಂಡಿರುವ ಮತ್ತು ಆ ಆಪ್ ಗೆ ಪ್ರಮೋಟ್ ಮಾಡಿದವರ ವಿರುದ್ಧ ಇಡಿ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಕರೆಯುತ್ತಿದೆ. ಈ ಕುರಿತು ಕಂಗನಾ ಮಾತನಾಡಿದ್ದಾರೆ. ಈ ಬೆಟ್ಟಿಂಗ್ ಆಪ್ ನವರು ನನ್ನನ್ನೂ ಅದರ ಭಾಗವಾಗುವಂತೆ ಕೇಳಿದ್ದರು. ನಾನು ಹೋಗಲಿಲ್ಲ ಎಂದಿದ್ದಾರೆ ಕಂಗನಾ.

     

    ಖ್ಯಾತ ನಟ ರಣಬೀರ್ ಕಪೂರ್, ಹಾಸ್ಯ ನಿರೂಪಕ ಕಪಿಲ್ ಶರ್ಮಾ (Kapil Sharma) ಸೇರಿದಂತೆ ಬಿಟೌನ್‍ನ ಒಟ್ಟು 34 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಮಹದೇವ್ ಆನ್ ಲೈನ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ (Notice) ಜಾರಿ ಮಾಡಿದ್ದು, ಮೊನ್ನೆಯಿಂದಲೇ ಹಲವರಿಗೆ ವಿಚಾರಣೆಗೆ ಕರೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರೈನಿಂಗ್ ನೆಪದಲ್ಲಿ ಜ್ಯೂನಿಯರ್‌ಗಳಿಗೆ ಥಳಿಸಿದ NCC ಸೀನಿಯರ್ ಕೆಡೆಟ್- ವೀಡಿಯೋ ವೈರಲ್

    ಟ್ರೈನಿಂಗ್ ನೆಪದಲ್ಲಿ ಜ್ಯೂನಿಯರ್‌ಗಳಿಗೆ ಥಳಿಸಿದ NCC ಸೀನಿಯರ್ ಕೆಡೆಟ್- ವೀಡಿಯೋ ವೈರಲ್

    ಮುಂಬೈ: ಹಿರಿಯ ಎನ್‍ಸಿಸಿ ಕೆಡೆಟ್ ಒಬ್ಬ ತರಬೇತಿ ಕೊಡುವ ನೆಪದಲ್ಲಿ 8 ಮಂದಿ ಜ್ಯೂನಿಯರ್ ಗಳಿಗೆ ಮನಬಂದಂತೆ ಥಳಿಸಿದ ಘಟನೆಯೊಂದು ಥಾಣೆಯ ಬಂಡೋಡ್ಕರ್ ಕಾಲೇಜಿನಲ್ಲಿ (Bandodkar College) ನಡೆದಿದೆ.

    ಎನ್‍ಸಿಸಿ ಕೆಡೆಟ್ (NCC Cadet)  ಯುವಕರಿಗೆ ಥಳಿಸುತ್ತಿರುವ ವೀಡಿಯೋವನ್ನು ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ತರಬೇತಿ ವೇಳೆ ತಾನು ಹೇಳಿ ಕೊಟ್ಟಿದ್ದನ್ನು ಜ್ಯೂನಿಯರ್ ಗಳು ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಇಂತಹ ಶಿಕ್ಷೆ ನೀಡಿದ್ದಾನೆ ಎನ್ನಲಾಗುತ್ತಿದೆ.

    ವೀಡಿಯೋದಲ್ಲಿ ಏನಿದೆ..?: ಸೀನಿಯರ್ ಎನ್‍ಸಿಸಿ ಕೆಡೆಟ್ ಒಬ್ಬ ತನ್ನ 8 ಮಂದಿ ಜ್ಯೂನಿಯರ್ ಗಳನ್ನು ಮಳೆ ನೀರಿನ ನಡುವೆ ಪುಷ್ ಅಪ್ ಪೊಸಿಷನ್‍ನಲ್ಲಿ ಇರುವಂತೆ ಹೇಳುತ್ತಾನೆ. ಬಳಿಕ ಅವರ ಮೇಲೆ ದೊಣ್ಣೆಯ ಮುಖಾಂತರ ಮನಬಂದಂತೆ ಹಲ್ಲೆ ನಡೆಸಲು ಶುರು ಮಾಡುತ್ತಾನೆ. ಈ ವೇಳೆ ಅವರು ನೋವಿನಿಂದ ಕಿರುಚಾಡಿದರೂ ಸೀನಿಯರ್ ಬಿಡದೆ ದೈಹಿಕ ಹಿಂಸೆ ನೀಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೆಲವರು ಘಟನೆಯನ್ನು ಖಂಡಿಸಿದ್ದಾರೆ. ತರಬೇತಿ ಹೆಸರಲ್ಲಿ ಈ ರೀತಿ ಮಾಡುವುದು ಶಿಕ್ಷಾರ್ಹ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಈ ಸಂಬಂಧ ಬಂದೋಡ್ಕರ್ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್ ಪ್ರತಿಕ್ರಿಯಿಸಿ, ಇಂತಹ ವರ್ತನೆಯನ್ನು ನಾವು ಹಾಗೂ ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಳೆದ 40 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಎನ್‍ಸಿಸಿ ತರಬೇತಿ ಕೊಡಲಾಗುತ್ತಿದ್ದು, ಶಿಕ್ಷಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ಎನ್‍ಸಿಸಿ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗನ ಒಲಿಂಪಿಕ್ಸ್ ತಯಾರಿಗೆ ದುಬೈಗೆ ಮಾಧವನ್ ಸ್ಥಳಾಂತರ

    ಮುಂಬೈ: ನಟ ಆರ್ ಮಾಧವನ್ ಪುತ್ರ ವೇದಾಂತ್ ಪ್ರಸ್ತುತ ದುಬೈನಲ್ಲಿ 2026ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ತಯಾರಿಯನ್ನು ನಡೆಸುತ್ತಿದ್ದು, ಮಗನಿಗೆ ತರಬೇತಿಯಲ್ಲಿ ಸಹಾಯ ಮಾಡಲು ಮಾಧವನ್ ಪತ್ನಿಯೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

    ವೇದಾಂತ್ ಈಗಾಗಲೇ ರಾಷ್ಟ್ರೀಯ ಈಜು ಚಾಂಪಿಯನ್ ಆಗಿದ್ದು, ಮಾಧವನ್ ಹಾಗೂ ಅವರ ಪತ್ನಿ ವಿಶ್ವ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವೇದಾಂತ್ ಪಾಲ್ಗೊಳ್ಳಲು ಒಳ್ಳೆಯ ತರಬೇತಿ ಕೊಡಿಸುವ ಬಗ್ಗೆ ಯೋಜಿಸಿದ್ದರು. ದುಬೈನಲ್ಲಿ ಮಗನ ತರಬೇತಿಗೆ ಒಳ್ಳೆಯ ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಂಡಿದ್ದು, ಅವನಿಗೆ ಸಾಥ್ ನೀಡಲು ದಂಪತಿ ದುಬೈ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್

    ಕೋವಿಡ್-19 ಪರಿಣಾಮವಾಗಿ ಮುಂಬೈನ ದೊಡ್ಡ ಈಜುಕೊಳಗಳನ್ನು ಮುಚ್ಚಲಾಗಿದೆ. ಹೀಗಾಗಿ ವೇದಾಂತ್‌ಗೆ ದುಬೈನಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ನಾನು ಹಾಗೂ ಸರಿತಾ ಅವನಿಗೆ ತರಬೇತಿಯಲ್ಲಿ ಸಹಾಯ ಮಾಡಲು ದುಬೈ ಪ್ರಯಾಣ ಬೆಳೆಸಿದ್ದೇವೆ ಎಂದು ಮಾಧವನ್ ಹೇಳಿದ್ದಾರೆ.

    ಇದರೊಂದಿಗೆ ಜನಪ್ರಿಯ ನಟ ಮಾಧವನ್ ತನ್ನ ಮಗ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡುವುದಿಲ್ಲ ಎಂಬ ಖಚಿತ ಉತ್ತರ ನೀಡಿದ್ದಾರೆ. ಮಕ್ಕಳು ಏನನ್ನು ಮಾಡಲು ಬಯಸುತ್ತಾರೋ ಪೋಷಕರೂ ಅದನ್ನೇ ಮಾಡಲು ಅವರಿಗೆ ಪ್ರೋತ್ಸಾಹ ನೀಡಬೇಕು. ವೇದಾಂತ್ ಪ್ರಪಂಚದಾದ್ಯಂತ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುತ್ತಿರುವುದು ನಮಗೆ ಬಹಳ ಹೆಮ್ಮೆಯ ವಿಷಯ ಎಂದರು. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ಇದೇ ಸಂದರ್ಭದಲ್ಲಿ ಮಾಧವನ್ ಎಲ್ಲಾ ಸ್ಟಾರ್ ಪೋಷಕರಿಗೂ ಸಲಹೆಯನ್ನು ನೀಡಿದ್ದಾರೆ. ಮಕ್ಕಳನ್ನು ಸ್ವತಂತ್ರವಾಗಿ ಹಾರಾಡಲು ಬಿಡಬೇಕು. ವೇದಾಂತ್ ನಟನೆಯನ್ನು ಆಯ್ಕೆ ಮಾಡದೇ ಇರುವುದರ ಬಗ್ಗೆ ನನಗೆ ಯಾವುದೇ ಬೇಜಾರಿಲ್ಲ. ನನ್ನ ಸ್ವಂತ ವೃತ್ತಿಗಿಂತ ಅವನ ಆಯ್ಕೆಯ ವೃತ್ತಿ ಮುಖ್ಯ ಎಂದು ಹೇಳಿದರು.

  • ಕರ್ನಾಟಕ-ಆಂಧ್ರ ಗಡಿಯಲ್ಲಿ ಪ್ಯಾರಾ ಮಿಲಿಟರಿ ಕಾರ್ಯಾಗಾರ

    ಕರ್ನಾಟಕ-ಆಂಧ್ರ ಗಡಿಯಲ್ಲಿ ಪ್ಯಾರಾ ಮಿಲಿಟರಿ ಕಾರ್ಯಾಗಾರ

    ಬಳ್ಳಾರಿ: ಕರ್ನಾಟಕ- ಆಂಧ್ರ ಪ್ರದೇಶ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ತಾಲೂಕಿನ ಚೆಳ್ಳಗುರ್ಕಿ ಗ್ರಾಮದ ಬಯಲು ಭೂಮಿಯಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ನ ಕಾರ್ಯಾಗಾರ ನಡೆದಿದೆ ಭರ್ಜರಿಯಾಗಿ ನಡೆದಿದೆ.

    ಬೆಂಗಳೂರಿನ ಯಲಹಂಕ ಏರ್ ಪೋರ್ಟ್ ನಿಂದ ಮಂಗಳವಾರ ಎರಡು ವಿಶೇಷ ವಿಮಾನದ ಮೂಲಕ 3,000 ಜನ ಯೋಧರು ಆಗಮಿಸಿದ್ದು, ಇಂದು ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಪ್ಯಾರಾಚೂಟ್‍ನಲ್ಲಿ ಹಾರುವ ಮೂಲಕ ಚೆಳ್ಳಗುರ್ಕಿ ಬಯಲು ಭೂಮಿಯಲ್ಲಿ ಇಳಿದು ನಾನಾ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

    ಸುಮಾರು 3,000ಕ್ಕೂ ಅಧಿಕ ಜನರ ಪ್ಯಾರಾ ಮಿಲಿಟರಿ ಪಡೆ ಪಾಲ್ಗೊಂಡಿದ್ದು, ಸುಮಾರು 1200-1400 ಅಡಿ ಎತ್ತರದಿಂದ ನೆಲಕ್ಕೆ ಹಾರಿದ್ದಾರೆ. ವಿವಿಧ ಬಗೆಯ ವಾತಾವರಣದಲ್ಲಿ ಹಾಗೂ ಭೂ ಪ್ರದೇಶದಲ್ಲಿ ಈ ರೀತಿಯಲ್ಲಿ ತಾಲೀಮು ನಡೆಸುವುದರಿಂದ ಯುದ್ಧಕಾಲದಲ್ಲಿ ಯಾವುದೇ ಸನ್ನಿವೇಶವನ್ನು ಸೈನಿಕರು ಎದುರಿಸಲು ಸದಾ ಸಿದ್ಧರಾಗಿರುವ ರೀತಿ ತರಬೇತಿ ನೀಡಲಾಗುತ್ತದೆ.

    ಯುದ್ಧದ ಸನ್ನಿವೇಶಗಳನ್ನು ಎದುರಿಸಲು ಈ ರೀತಿಯ ತಾಲೀಮು ಅವಶ್ಯವಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸೇನಾ ತರಬೇತಿ ಕಾರ್ಯಾಗಾರವನ್ನು ನೋಡಲು ಸಾಮಾನ್ಯ ಜನರಿಗೆ ಅವಕಾಶ ನೀಡಿರಲಿಲ್ಲ, ಹೀಗಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ಯಾರಾ ಮಿಲಿಟರಿ ಪಡೆ ತರಬೇತಿ ಕಾರ್ಯಾಗಾರಕ್ಕೆ ಸೂಕ್ತ ಭದ್ರತೆಯನ್ನ ಒದಗಿಸಲಾಗಿತ್ತು.

  • ಬ್ರಿಟಿಷ್ ರಾಯಲ್ ಫ್ಯಾಮಿಲಿಯಿಂದ ಮನೆ ಕೆಲಸದವರ ಹುಡುಕಾಟ- 18.5 ಲಕ್ಷ ರೂ. ಸಂಬಳ

    ಬ್ರಿಟಿಷ್ ರಾಯಲ್ ಫ್ಯಾಮಿಲಿಯಿಂದ ಮನೆ ಕೆಲಸದವರ ಹುಡುಕಾಟ- 18.5 ಲಕ್ಷ ರೂ. ಸಂಬಳ

    ಲಂಡನ್: ಬ್ರಿಟಿಷ್ ರಾಯಲ್ ಫ್ಯಾಮಿಲಿ ಮನೆ ಕೆಲಸದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಬರೋಬ್ಬರಿ 18.5 ಲಕ್ಷ ರೂ. ಆರಂಭಿಕ ಸಂಬಳ ನೀಡುವುದಾಗಿ ಘೋಷಿಸಿದೆ.

    ರಾಜ ಮನೆತನದ ಅಧಿಕೃತ ವೆಬ್‍ಸೈಟ್ ರಾಯಲ್ ಹೌಸ್‍ಹೋಲ್ಡ್‍ನಲ್ಲಿ ಈ ಕುರಿತು ಪ್ರಕಟಿಸಿದ್ದು, ಇದು 2ನೇ ಹಂತದ ಅಪ್ರಂಟಿಸ್‍ಶಿಪ್(ತರಬೇತಿ ಅವಧಿ) ಕೆಲಸವಾಗಿದೆ. ಆಯ್ದ ಅಭ್ಯರ್ಥಿಗಳು ಮಾತ್ರ ವಿಂಡ್ಸರ್ ಕ್ಯಾಸ್ಟಲ್‍ನಲ್ಲಿ ವಾಸಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.

    ಈಗಾಗಲೇ ಹೇಳಿದ ಹಾಗೆ ಇದೊಂದು ಎರಡನೇ ಹಂತದ ಅಪ್ರೆಂಟಿಸ್‍ಶಿಪ್ ಕೆಲಸವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಇಂಗ್ಲೆಂಡ್‍ನ ವಿಂಡ್ಸರ್ ಕ್ಯಾಸ್ಟಲ್‍ನಲ್ಲಿ ಇರಬೇಕು. ವಾರದಲ್ಲಿ ಐದು ದಿನ ಕೆಲಸ ಮಾಡಬೇಕು.

    ಸಂಬಳ ಎಷ್ಟು?
    ರಾಯಲ್ ಫ್ಯಾಮಿಲಿಗೆ ತಕ್ಕಂತೆ ಆಕರ್ಷಕ ಸಂಬಳವನ್ನೇ ನೀಡಲಾಗುತ್ತಿದೆ. ಈ ಅಪ್ರೆಂಟಿಸ್‍ಶಿಪ್ ಕೆಲಸದ ವೇಳೆ 19,140 ಬ್ರಿಟಿಷ್ ಪೌಂಡ್ (18.5 ಲಕ್ಷ ರೂ.) ಆರಂಭಿಕ ಸಂಬಳ ನೀಡಲಾಗುತ್ತದೆ. ಇದರ ಜೊತೆಗೆ ಇರಲು ವ್ಯವಸ್ಥೆ ಹಾಗೂ ಅರಮನೆಯಿಂದ ಊಟವನ್ನು ಸಹ ನೀಡಲಾಗುತ್ತದೆ. ಆದರೆ ಸಂಬಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಇದರಲ್ಲೇ ಪ್ರಯಾಣ ವೆಚ್ಚ ಸಹ ಸೇರಿದೆ.

    ಅರ್ಹತೆ ಏನು?
    ಆಯ್ಕೆಯಾದ ಅಭ್ಯರ್ಥಿಯನ್ನು ವರ್ಷ ಪೂರ್ತಿ ರಾಯಲ್ಸ್‍ನ ಇತರ ಅರಮನೆಗಳಿಗೆ ಕೆಲಸಕ್ಕಾಗಿ ಸ್ಥಳಾಂತರಿಸಲಾಗುತ್ತದೆ. ಇದರಲ್ಲಿ ಬಕ್ಕಿಂಗ್ಹ್ಯಾಮ್ ಅರಮನೆ ಸಹ ಸೇರಿದೆ. ಈ ಸಮಗ್ರ ಲಾಭಗಳ ಪ್ಯಾಕೇಜ್‍ನಲ್ಲಿ ಬ್ಯಾಂಕ್ ರಜೆ ಸೇರಿ 33 ದಿನಗಳ ರಜೆ ಸಹ ಇದೆ. ಆದರೆ ಅಭ್ಯರ್ಥಿಗಳು ಕೆಲಸ ಪಡೆಯಲು ಇಂಗ್ಲಿಷ್ ಹಾಗೂ ಗಣಿತದಲ್ಲಿ ಪರಿಣಿತಿ ಹೊಂದಿರಬೇಕು. ನೀವು ಅಗತ್ಯ ಅರ್ಹತೆಗಳನ್ನು ಹೊಂದಿಲ್ಲವಾದಲ್ಲಿ ನಿಮ್ಮ ಕಲಿಕೆ ವೃತ್ತಿಯ ಭಾಗವಾಗಿ ಅರ್ಹತೆಗಳನ್ನು ಪಡೆಯಲು ನಿಮಗೆ ಬೆಂಬಲ ನೀಡುತ್ತೇವೆ ಎಂದು ಪೋಸ್ಟ್‍ನಲ್ಲಿ ಉಲ್ಲೇಖಿಸಲಾಗಿದೆ.

    ಏನು ಕೆಲಸ?

    ಕೆಲಸದ ಅಗತ್ಯತೆಗಳನ್ನು ಸಹ ವಿವರಿಸಲಾಗಿದ್ದು, ನೀವು ನಮ್ಮ ಮನೆ ಕೆಲಸದ ವೃತ್ತಿಪರರ ತಂಡವನ್ನು ಸೇರುತ್ತೀರಿ. ಒಳಾಂಗಣ ಮತ್ತು ವಸ್ತುಗಳನ್ನು ನೋಡಿಕೊಳ್ಳಲು, ಸ್ವಚ್ಛವಾಗಿಟ್ಟುಕೊಳ್ಳಲು ಹಾಗೂ ಕಾಳಜಿ ವಹಿಸಲು ನೀವು ಅವರೊಂದಿಗೆ ಕೆಲಸ ಮಾಡುವಾಗ ಕಲಿಯುತ್ತೀರಿ. ಇದನ್ನು ಅವರು ಚೆನ್ನಾಗಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.

    ಕೆಲಸದ ತರಬೇತಿ ಸಮಯ 13 ತಿಂಗಳಾಗಿದ್ದು, ಅಭ್ಯರ್ಥಿಗಳು ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದಲ್ಲಿ ಆ ವ್ಯಕ್ತಿಯನ್ನು ರಾಯಲ್ ಫ್ಯಾಮಿಲಿಯ ಶಾಶ್ವತ ಕೆಲಸಗಾರನನ್ನಾಗಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದೆ.

  • ಕೊರೊನಾ ಎಫೆಕ್ಟ್- ವೇಶ್ಯಾವಾಟಿಕೆ ಬಿಟ್ಟು ಪೇಟಿಂಗ್, ಕರಕುಶಲ ಕೆಲಸ ಆರಂಭಿಸಿದ ಕಾರ್ಯಕರ್ತೆಯರು

    ಕೊರೊನಾ ಎಫೆಕ್ಟ್- ವೇಶ್ಯಾವಾಟಿಕೆ ಬಿಟ್ಟು ಪೇಟಿಂಗ್, ಕರಕುಶಲ ಕೆಲಸ ಆರಂಭಿಸಿದ ಕಾರ್ಯಕರ್ತೆಯರು

    ನವದೆಹಲಿ: ಕೊರೊನಾ ಹಿನ್ನೆಲೆ ವೇಶ್ಯಾವಾಟಿಕೆ ಸ್ಥಗಿತಗೊಂಡಿರುವುದರಿಂದ ಲೈಂಗಿಕ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದು, ಬದುಕು ಕಟ್ಟಿಕೊಳ್ಳಲು ಇದೀಗ ಪರ್ಯಾಯವಾಗಿ ಜೀವನೋಪಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಪೇಟಿಂಗ್, ಕರಕುಶಲ ಕೆಲಸ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

    ಲೈಂಗಿಕ ಕಾರ್ಯಕರ್ತೆಯರ ಈ ಕಾರ್ಯಕ್ಕೆ ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರ(ಡಿಎಸ್‍ಎಲ್‍ಎ), ದೆಹಲಿ ಪೊಲೀಸ್ ಹಾಗೂ ಎನ್‍ಜಿಒ ನೈನಾ ಆ್ಯಕ್ಟಿವಿಟಿ ಎಜುಕೇಷನಲ್ ಸೊಸೈಟಿ ಜಂಟಿಯಾಗಿ ‘ಹುನಾರ್ ಜ್ಯೋತಿ’ ಮೂಲಕ ಸಹಾಯ ಮಾಡುತ್ತಿವೆ. ಈ ಕಾರ್ಯಕ್ರಮದ ಮೂಲಕ ಪೇಪರ್ ಬ್ಯಾಗ್, ಬಣ್ಣ ಬಣ್ಣದ ಮಣ್ಣಿನ ದೀಪ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ಮಾಡುತ್ತಿದ್ದಾರೆ.

    ಲೈಂಗಿಕ ಕಾರ್ಯಕರ್ತೆಯಾಗಿದ್ದ 35 ವರ್ಷದ ಕುಸುಮಾ(ಹೆಸರು ಬದಲಿಸಲಾಗಿದೆ) ಈ ಕುರಿತು ಮಾಹಿತಿ ನೀಡಿದ್ದು, ನಾನು 12 ವರ್ಷಗಳಿಂದ ಈ ಕೆಲಸವನ್ನು ಬಿಡಬೇಕು ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ವೇಶ್ಯಾವಾಟಿಕೆ ತ್ಯಜಿಸಿ ಈ ಕಾರ್ಯಕ್ರಮದ ಮೂಲಕ ವಿವಿಧ ಚಟುವಟಿಕೆಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಮೊದಲ ಮೂರು ದಿನ ಲೈಂಗಿಕ ಕಾರ್ಯಕರ್ತೆಯರಿಗೆ ಬಣ್ಣ ದೀಪ ಹಾಗೂ ಪೇಪರ್ ಪ್ಯಾಕೆಟ್ ಮಾಡುವುದು ಹೇಗೆ ಎಂಬುದನ್ನು ಕಲಿಸಲಾಗಿದೆ. ಮುಂದಿನ ಕೆಲವು ದಿನಗಳು ಹಾಗೂ ವಾರಗಳಲ್ಲಿ ಊದುಬತ್ತಿ, ಕೀ ರಿಂಗ್ ಹಾಗೂ ಬಟ್ಟೆ ಕೆಲಸ ಮಾಡುವುದರ ಕುರಿತು ಅವರಿಗೆ ಹೇಳಿಕೊಡಲಾಗುವುದು. ಕೊರೊನಾ ಪರಿಸ್ಥಿತಿಯನ್ನು ಅವಕಾಶವಾಗಿ ಬಳಸಿಕೊಂಡು ವೇಶ್ಯಾವಾಟಿಕೆಯಿಂದ ಹೊರ ಬರಲು ಅವರು ಯತ್ನಿಸುತ್ತಿದ್ದಾರೆ ಎಂದು ಡಿಸಿಪಿ ಸಂಜಯ್ ಭಟಿಯಾ ತಿಳಿಸಿದರು.

    ಕೊರೊನಾ ತಗುಲುತ್ತದೆ ಎಂಬ ಭಯದಿಂದ ಗ್ರಾಹಕರು ಬರುತ್ತಿಲ್ಲ. ಮೊದಲು ಕನಿಷ್ಠ 5-6 ಗ್ರಾಹಕರು ಬರುತ್ತಿದ್ದರು. ಈಗ ಕೇವಲ ಇಬ್ಬರು ಮಾತ್ರ ಬರುತ್ತಿದ್ದಾರೆ. ಈ ಇಬ್ಬರು ನೀಡುವ ಹಣದಿಂದ ಜೀವನ ಸಾಗಿವುಸು ಕಷ್ಟವಾಗಿತ್ತು. ಹೀಗಾಗಿ ಈ ಸಾಂಕ್ರಾಮಿಕ ರೋಗದ ನಡುವೆ ವೇಶ್ಯಾವಾಟಿಕೆ ಸಾಧ್ಯವಿಲ್ಲ ಎಂದು ಅರಿವಾಗಿ ಹಣ ಸಂಪಾದಿಸುವ ಕಲೆಯನ್ನು ಕಲಿಯಲು ನಿರ್ಧರಿಸಿದೆ ಎಂದು ಜಿಬಿ ರಸ್ತೆಯ ಲೈಂಗಿಕ ಕಾರ್ಯರ್ತೆ ತಿಳಿಸಿದ್ದಾರೆ.

    ಲೈಂಗಿಕ ಕಾರ್ಯಕರ್ತೆಯರ ಇಚ್ಛಾಶಕ್ತಿಯನ್ನು ಮನಗಂಡ ಪೊಲೀಸರು, ಈ ಮಹಿಳೆಯರಿಗೆ ತರಬೇತಿ ನೀಡುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಎನ್‍ಎಇಎಸ್ ಎಂಬ ಎನ್‍ಜಿಒ ಸಂಸ್ಥೆ ಪೇಪರ್ ಬ್ಯಾಗ್ ಹಾಗೂ ಮಣ್ಣಿನ ದೀಪಗಳನ್ನು ಮಾಡಲು ಮಹಿಳೆಯರಿಗೆ ಕಚ್ಚಾ ವಸ್ತುಗಳನ್ನು ಕೊಡುತ್ತದೆ. ಇದರ ಮಧ್ಯೆ ಡಿಎಸ್‍ಎಲ್‍ಎ ಮಹಿಳೆಯರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡಿದೆ.

    ಕೊರೊನಾ ಸಮಯದಲ್ಲಿ ಲೈಂಗಿಕ ಕಾರ್ಯಕರ್ತೆಯರ ದುಃಸ್ಥಿತಿ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳು ಮಹಿಳೆಯರಿಂದ ಯಾವುದೇ ಗುರುತಿನ ಚೀಟಿ ಪಡೆಯದೆ ಪಡಿತರ ನೀಡುವಂತೆ ನಿರ್ದೇಶಿಸಿತ್ತು. ಇದೀಗ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಸಹಾಯ ಮಾಡುತ್ತಿದ್ದಾರೆ.

  • ಟೆಸ್ಟ್ ಪಂದ್ಯದ ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ಅಭ್ಯಾಸ ಅಗತ್ಯ- ಐಸಿಸಿ

    ಟೆಸ್ಟ್ ಪಂದ್ಯದ ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ಅಭ್ಯಾಸ ಅಗತ್ಯ- ಐಸಿಸಿ

    ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಿಕೆಟ್ ಮರಳಲು ಮಾರ್ಗಸೂಚಿ ಹೊರಡಿಸಿದೆ. ಕೊರೊನಾ ವೈರಸ್‍ನಿಂದಾಗಿ ಮಾರ್ಚ್ ನಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ಇದು ಟೆಸ್ಟ್‌ಗೆ ಪ್ರವೇಶಿಸುವುದು ಬೌಲರ್‌ಗಳಿಗೆ ಅತ್ಯಂತ ಸವಾಲಿನ ಸಂಗತಿಯಾಗಿದೆ.

    ಐಸಿಸಿ ಮಾರ್ಗಸೂಚಿಗಳ ಪ್ರಕಾರ, ಟೆಸ್ಟ್ ಪಂದ್ಯವನ್ನು ಆಡುವ ಮೊದಲು ಬೌಲರ್‌ಗಳಿಗೆ 2-3 ತಿಂಗಳ ತರಬೇತಿ ಅಗತ್ಯವಿದೆ. ಇದು ಬೌಲರ್‌ಗಳ ವಯಸ್ಸು, ಹಳೆಯ ಗಾಯ, ತಂತ್ರ ಮತ್ತು ವೇಗವನ್ನು ಅವಲಂಬಿಸಿರುತ್ತದೆ.

    ಬೌಲರ್‌ಗಳು ಅವಸರದಲ್ಲಿ ಮೈದಾನಕ್ಕಿಳಿದರೆ ಗಾಯದ ಅಪಾಯ ಹೆಚ್ಚಾಗುತ್ತದೆ. 7 ವಾರಗಳ ಕಾಲ ವಿಶ್ರಾಂತಿ ಪಡೆಯುವುದರಿಂದ ಬೆನ್ನುಮೂಳೆಯಲ್ಲಿ ಶೇ.2 ಮೂಳೆ ನೋವು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನ ಸೂಚಿಸಿದೆ. ಹೀಗಾಗಿ 24 ವಾರಗಳ ತರಬೇತಿ, ಅಭ್ಯಾಸ ಅಗತ್ಯವಿದೆ. ಈ ಮೂಲಕ ಕ್ರಮೇಣ ಬೌಲರ್‌ಗಳ ಮೇಲೆ ಹೊರೆ ಹೆಚ್ಚಿಸಲು ಐಸಿಸಿ ಸೂಚಿಸಿದೆ.

    ಒಬ್ಬ ಬೌಲರ್ ಏಕದಿನ ಪಂದ್ಯಗಳಲ್ಲಿ ಗರಿಷ್ಠ 10 ಮತ್ತು ಟಿ20ಯಲ್ಲಿ 4 ಓವರ್‌ಗಳನ್ನು ಬೌಲ್ ಮಾಡಬಹುದು. 5-6 ವಾರಗಳ ತರಬೇತಿಯ ನಂತರ ಬೌಲರ್ ಏಕದಿನ ಅಥವಾ ಟಿ20 ಪಂದ್ಯಗಳನ್ನು ಆಡಬಹುದು. ಟೀಂ ಇಂಡಿಯಾ ಆಟಗಾರರು ಇನ್ನೂ ತರಬೇತಿ ಪ್ರಾರಂಭಿಸಿಲ್ಲ. ಅವರು ಜೂನ್ 1ರಿಂದ ತರಬೇತಿ ಪ್ರಾರಂಭಿಸಿದರೆ, ಜುಲೈ ಅಂತ್ಯದ ವೇಳೆಗೆ ಅವರು ಸೀಮಿತ ಓವರ್‌ಗಳ ಪಂದ್ಯವನ್ನು ಆಡಲು ಸಿದ್ಧರಾಗುತ್ತಾರೆ. ತಂಡವು ಜುಲೈನಲ್ಲಿ ಶ್ರೀಲಂಕಾಕ್ಕೆ ಪ್ರಯಾಣಿಸಬಹುದು.

    ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಂಗ್ಲೆಂಡ್ ಪ್ರವಾಸ ಮಾಡಬೇಕಾಗಿದೆ. ಇಂಗ್ಲೆಂಡ್ ಬೌಲರ್‌ಗಳು ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ಆಟಗಾರರು ತರಬೇತಿಯನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಪರಿಸ್ಥಿತಿ ಕಷ್ಟಕರವಾಗಿದೆ. ಪ್ರವಾಸಕ್ಕೆ ಹೋದ ನಂತರ ಎರಡೂ ದೇಶಗಳ ಆಟಗಾರರು ಸಹ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ.

    ಐಸಿಸಿ ನಿಯಮಗಳು:
    ತರಬೇತಿ ಪ್ರಾರಂಭಿಸಲು ಸರ್ಕಾರದ ಅನುಮತಿ ಅಗತ್ಯವಿದೆ. ಆಟಗಾರರು ಸರ್ಕಾರ ಮತ್ತು ಐಸಿಸಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆಟ ಆರಂಭಿಸುವ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ಧಪಡಿಸಲು ಮುಖ್ಯ ವೈದ್ಯಕೀಯ ಅಧಿಕಾರಿಯ ನೇಮಕ ಅಗತ್ಯವಾಗಿದೆ. ಆಟಗಾರರ ಅಪಾಯವನ್ನು ಕಡಿಮೆ ಮಾಡಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಐಸಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.

    ಚಾರ್ಟರ್ಡ್ ವಿಮಾನಗಳನ್ನು ಪ್ರಯಾಣಕ್ಕಾಗಿ ಬಳಸಬೇಕು. ಈ ಸಮಯದಲ್ಲಿ ಸಾಮಾಜಿಕ ಅಂತರ ಹಾಗೂ ಆರೋಗ್ಯಕರ ಆಹಾರ ಅಗತ್ಯವಾಗಿದೆ. ಸ್ಥಳೀಯ ನಿಯಮಗಳ ಪ್ರಕಾರ ತಂಡವು ಪರೀಕ್ಷೆ ಮತ್ತು ತಪಾಸಣೆಗೆ ಒಳಗಾಗಬೇಕಾಗುತ್ತದೆ. ಲಾಕ್‍ಡೌನ್ ಇದ್ದರೆ ಅದನ್ನು ಪಾಲಿಸಬೇಕು. ಎಲ್ಲಾ ಆಟಗಾರರಿಗೆ ಪ್ರತ್ಯೇಕ ರೂಮ್‍ಗಳನ್ನು ಕಲ್ಪಿಸಬೇಕು ಎಂದು ಐಸಿಸಿ ತಿಳಿಸಿದೆ.

    ಯಾವುದೇ ಆಟಗಾರ ತನ್ನ ವಸ್ತುಗಳನ್ನು ಸಹ ಆಟಗಾರರೊಂದಿಗೆ ಹಂಚಿಕೊಳ್ಳುವಂತಿಲ್ಲ. ಯಾರಾದರೂ ಕಿಟ್‍ಗಳನ್ನು ಹಂಚಿಕೊಂಡರೆ, ನಂತರ ಸ್ಯಾನಿಟೈಜರ್ ಬಳಸಬೇಕು. ವೈಯಕ್ತಿಕ ತರಬೇತಿ ಮೊದಲು ಪ್ರಾರಂಭವಾಗುತ್ತದೆ. ಇದರ ನಂತರ ತಂಡವು ಸಣ್ಣ ಗುಂಪುಗಳಲ್ಲಿ ಒಟ್ಟಿಗೆ ತರಬೇತಿ ಆರಂಭಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.

  • ಲಾಕ್‍ಡೌನ್: ಟೀಂ ಇಂಡಿಯಾ ಕ್ರಿಕೆಟಿಗರಿಗಾಗಿ ‘ವರ್ಕ್ ಫ್ರಮ್ ಹೋಮ್’ ಆರಂಭಿಸಿದ ಬಿಸಿಸಿಐ

    ಲಾಕ್‍ಡೌನ್: ಟೀಂ ಇಂಡಿಯಾ ಕ್ರಿಕೆಟಿಗರಿಗಾಗಿ ‘ವರ್ಕ್ ಫ್ರಮ್ ಹೋಮ್’ ಆರಂಭಿಸಿದ ಬಿಸಿಸಿಐ

    ಮುಂಬೈ: ಲಾಕ್‍ಡೌನ್ ಕಾರಣದಿಂದ ಮನೆಯಲ್ಲೇ ಉಳಿದರುವ ಟೀಂ ಇಂಡಿಯಾ ಕ್ರಿಕೆಟ್ ಆಟಗಾರರಿಗಾಗಿ ಬಿಸಿಸಿಐ ವರ್ಕ್ ಫ್ರಮ್ ಹೋಮ್ ಪ್ರಾರಂಭಿಸಿದೆ. ಈ ಕಾರ್ಯಕ್ಕಾಗಿ ಪ್ರತ್ಯೇಕ ಆ್ಯಪ್ ಒಂದನ್ನು ಸಿದ್ಧಪಡಿಸಲಾಗಿದ್ದು, ಆಟಗಾರರಿಗೆ ಅಪ್ಲಿಕೇಶನ್ ಆಕ್ಸೆಸ್ ನೀಡಿದೆ.

    ಬಿಸಿಸಿಐ ಅಪ್ಲಿಕೇಶನ್ ಗುರಿ ಆಟಗಾರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿರುವಂತೆ ಮಾಡುವುದಾಗಿದೆ. ಇದರಲ್ಲಿ ಆನ್‍ಲೈನ್ ತರಬೇತಿ ಸೆಷನ್ಸ್, ಚಾಟ್ ರೂಮ್ ಹಾಗೂ ನಾಲ್ಕು ಹಂತಗಳ ಯೋಜನೆಯೊಂದಿಗೆ ಪ್ರಶ್ನಾವಳಿಯನ್ನು ಒದಗಿಸಲಾಗಿದೆ. ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ನೆರವು ನೀಡಲು ಅಪ್ಲಿಕೇಶನ್ ಸಹಾಯಕವಾಗಲಿದೆ. ಇಲ್ಲಿ ಆಟಗಾರರ ವೈಯಕ್ತಿಕ ಮತ್ತು ತಂಡದ ಪ್ರದರ್ಶನ, ಕೌಶಲ್ಯ ಹಾಗೂ ಗಾಯದ ಸಮಸ್ಯೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿರುತ್ತದೆ.

    ಅಪ್ಲಿಕೇಶನ್ ಕಾರ್ಯನಿರ್ವಹಣೆ ಕುರಿತು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಮಾಹಿತಿ ನೀಡಿದ್ದಾರೆ. ಇದು ಹಂತ ಹಂತದ ಪ್ರಕ್ರಿಯೆಯಾಗಿದ್ದು, ಇದನ್ನು ಬಿಸಿಸಿಐ ಕಾರ್ಯದರ್ಶಿಗಳು ಪ್ರತಿದಿನ ಪರಿಶೀಲನೆ ನಡೆಸಿ ಪ್ರಗತಿಯನ್ನು ಗಮನಿಸುತ್ತಾರೆ. ಆಟಗಾರರ ದೈಹಿಕ-ಮಾನಸಿಕ ಆರೋಗ್ಯ, ಆನ್‍ಲೈನ್ ವೃತ್ತಿಪರ ನೆರವು, ಆಹಾರ ಪದ್ಧತಿ, ಫಿಟ್ನೆಸ್ ಸೆಷನ್ಸ್ ಗಳನ್ನು ಪ್ರತಿದಿನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಪ್ರತಿ ಆಟಗಾರರ ಬಗ್ಗೆ ಪ್ರತ್ಯೇಕವಾಗಿ ಗಮನ ಹರಿಸುತ್ತಿದ್ದಾರೆ. ಫೀಲ್ಡಿಂಗ್ ಕೋಚ್ ಆರ್ ಶೀಧರ್ ಅವರು ಆಟಗಾರರಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಕೆಲ ಪ್ರಶ್ನಾವಳಿಯನ್ನು ಸಿದ್ಧಪಡಿಸಿದ್ದಾರೆ. ಕೋಚ್‍ಗಳು ನೀಡುವ ಸಲಹೆಗಳೊಂದಿಗೆ ಆಟಗಾರರು ಉತ್ತಮ ಮಾತುಕತೆ ನಡೆಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೇ ಲಾಕ್‍ಡೌನ್ ಮುಗಿದ ಬಳಿಕ ಎಲ್ಲಾ ಆಟಗಾರರಿಗೂ ಹೊರಾಂಗಣ ತರಬೇತಿ ನೀಡಲಾಗುವುದು. ಅಲ್ಲಿ ನಿರಂತರ ಮೌಲ್ಯಮಾಪನ ಹಾಗೂ ಬೇರೆ ಬೇರೆ ವಿಷಯಗಳ ಸುತ್ತ ಗಮನ ಹರಿಸಲಾಗುವುದು ಎಂದಿದ್ದಾರೆ.

  • ಕೊರೊನಾ ನಿಯಂತ್ರಣ – ಎನ್‍ಸಿಸಿ ಕೆಡೆಟ್‍ಗಳಿಗೆ ಆನ್‍ಲೈನ್‍ನಲ್ಲಿ ತರಬೇತಿ

    ಕೊರೊನಾ ನಿಯಂತ್ರಣ – ಎನ್‍ಸಿಸಿ ಕೆಡೆಟ್‍ಗಳಿಗೆ ಆನ್‍ಲೈನ್‍ನಲ್ಲಿ ತರಬೇತಿ

    ಶಿವಮೊಗ್ಗ: ಕೊರೊನಾ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎನ್‍ಸಿಸಿ ಕೆಡೆಟ್‍ಗಳಿಗೆ, ಅಧಿಕಾರಿಗಳಿಗೆ, ಎಐಒ ಮತ್ತು ಪಿಐ ಸಿಬ್ಬಂದಿಗೆ ಆನ್‍ಲೈನ್ ತರಬೇತಿಯನ್ನು ನೀಡಿ ಸೇವಾ ಕಾರ್ಯಗಳಿಗೆ ಸಜ್ಜುಗೊಳಿಸುವ ಪ್ರಕ್ರಿಯೆ ನಡೆಸಲಾಗಿದೆ.

    ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಹೊರ ತಂದಿರುವ ದಿಶಾ ಆ್ಯಪ್ ಕುರಿತು 20 ಎನ್‍ಸಿಸಿ ಬೆಟಾಲಿಯನ್ ಶಿವಮೊಗ್ಗ ಕೆಡೆಟ್‍ಗಳಿಗೆ ಕಮಾಂಡಿಂಗ್ ಆಫೀಸರ್ ಕರ್ನಲ್ ನರೀಂದರ್ ಸಿಂಗ್ ಮಹಾರಾ ಅವರ ನೇತೃತ್ವದಲ್ಲಿ ಆನ್‍ಲೈನ್ ತರಬೇತಿಯನ್ನು ನೀಡಲಾಯಿತು.

    ಜಿಲ್ಲೆಯಲ್ಲಿ ಈಗಾಗಲೇ ತರಬೇತಿಯನ್ನು ಪಡೆದಿರುವ ಕೆಡೆಟ್‍ಗಳು ಇತರ ಕೆಡೆಟ್‍ಗಳಿಗೆ ತರಬೇತಿಯನ್ನು ನೀಡಬೇಕು. ಈಗಾಗಲೇ ಬಹುತೇಕ ಎಲ್ಲಾ ಎನ್‍ಸಿಸಿ ಕೆಡೆಟ್‍ಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಎಲ್ಲರೂ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಕೊರೊನಾ ಎದುರಿಸಲು ಬೆಟಾಲಿಯನ್ ಸನ್ನದ್ಧವಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಜಿಲ್ಲಾಡಳಿತ ಸೂಚಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಕರ್ನಲ್ ನರೀಂದರ್ ಸಿಂಗ್ ತಿಳಿಸಿದ್ದಾರೆ.

    ತರಬೇತಿ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ಶಶಿಧರ ಎಸ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಶೇಖರ್ ನಾಯ್ಕ್ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.