Tag: traffic

  • ಉಕ್ಕಿ ಹರಿಯುತ್ತಿರೋ ಮೂಲೆಹೊಳೆ – ಕೇರಳ ಕರ್ನಾಟಕ ಸಂಚಾರ ಬಂದ್

    ಉಕ್ಕಿ ಹರಿಯುತ್ತಿರೋ ಮೂಲೆಹೊಳೆ – ಕೇರಳ ಕರ್ನಾಟಕ ಸಂಚಾರ ಬಂದ್

    ಚಾಮರಾಜನಗರ: ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಬೀಳುತ್ತಿದ್ದು, ಜಿಲ್ಲೆಯ ಮೂಲೆಹೊಳೆ ಹಳ್ಳ ತುಂಬಿ ಹರಿಯುತ್ತಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲೆಹೊಳೆ ಹಳ್ಳ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕರ್ನಾಟಕ-ಕೇರಳ ಸಂಚಾರ ಬಂದ್ ಮಾಡಿದ್ದಾರೆ.

    ಕೇರಳ-ಕರ್ನಾಟಕದ ಗಡಿಯಾದ ಮೂಲೆಹೊಳೆಯಲ್ಲಿ ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿರುವ ಅರಣ್ಯಾಧಿಕಾರಿಗಳು ವಾಹನ ಸಂಚಾರ ಬಂದ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕಕ್ಕೆ ಸಂಚರಿಸುವ ಸರಕು ಸಾಗಣೆ ಮಾಡುವ ವಾಹನಗಳು ಮದ್ದೂರು ಚೆಕ್ ಪೋಸ್ಟ್ ನಲ್ಲಿ ಸಾಲುಗಟ್ಟಿ ನಿಂತಿವೆ.

    ಜಿಲ್ಲೆಯ ಮಳೆಯ ಅರ್ಭಟ ಕಡಿಮೆಯಾಗುವವರೆಗೆ ಯಾವುದೇ ವಾಹನ ಬಿಡದಿರಲೂ ಅರಣ್ಯಾಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

  • ಬೆಂಗಳೂರಿನಲ್ಲಿ ವರುಣನ ಅಬ್ಬರ- ಅರ್ಧ ಗಂಟೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ತತ್ತರ

    ಬೆಂಗಳೂರಿನಲ್ಲಿ ವರುಣನ ಅಬ್ಬರ- ಅರ್ಧ ಗಂಟೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ತತ್ತರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣ ತಂಪೆರೆದೆದಿದ್ದು, ಕೇವಲ ಅರ್ಧ ಗಂಟೆ ಸುರಿದ ಮಳೆಗೆ ಬೆಂಗಳೂರು ತತ್ತರಗೊಂಡಿದೆ.

    ಒಂದೆಡೆ ಟ್ರಾಫಿಕ್ ಸಮಸ್ಯೆಯಾದರೆ, ಇನ್ನೊಂದೆಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಲಗ್ಗೆರೆ, ರಾಜಾಜಿನಗರ, ನಂದಿನಿ ಲೇಔಟ್, ಯಶವಂತಪುರ, ಹೆಬ್ಬಾಳ, ಮಲ್ಲೇಶ್ವರ, ಮೆಜೆಸ್ಟಿಕ್, ಕಾರ್ಪೊರೇಷನ್ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿದ್ದು, ಉದ್ಯಾನ ನಗರಿ ಫುಲ್ ಕೂಲ್ ಆಗಿದೆ. ಆದರೆ ರಸ್ತೆ ಹಾಗೂ ಅಂಡರ್ ಪಾಸ್‍ಗಳಲ್ಲಿ ನೀರು ತುಂಬಿದ್ದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

    ಅರ್ಧಗಂಟೆ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದ್ದು, ಲಗ್ಗೆರೆ ಬ್ರಿಡ್ಜ್ ತುಂಬಾ ನೀರು ನಿಂತಿದೆ. ಲಗ್ಗೆರೆ ಬ್ರಿಡ್ಜ್ ಬಳಿ ವಾಹನ ಸವಾರರ ಪರದಾಡುವಂತಾಗಿದ್ದು, ಫುಲ್ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಇದೇ ಟ್ರಾಫಿಕ್ ಜಾಮ್‍ನಲ್ಲಿ ಅಂಬುಲೆನ್ಸ್ ಸಿಲುಕಿದ ಚಿತ್ರಣ ಸಹ ಕಂಡು ಬಂತು. ಒಟ್ಟಿನಲ್ಲಿ ಕೇವಲ ಅರ್ಧ ಗಂಟೆ ಸುರಿದ ಮಳೆಗೆ ಬೆಂಗಳೂರಿಗರು ಕಂಗಾಲಾಗಿದ್ದಾರೆ.

  • ಜೋರಾಗಿ ಬಂದು ಡಿಕ್ಕಿ ಹೊಡೆದ ಲಾರಿ – ಕರ್ತವ್ಯ ನಿರತ ಎಸಿಪಿ ಸಾವು

    ಜೋರಾಗಿ ಬಂದು ಡಿಕ್ಕಿ ಹೊಡೆದ ಲಾರಿ – ಕರ್ತವ್ಯ ನಿರತ ಎಸಿಪಿ ಸಾವು

    ನವದೆಹಲಿ: ಜೋರಾಗಿ ಚಲಿಸುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತ ಎಸಿಪಿ ಸಾವನ್ನಪ್ಪಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

    ದೆಹಲಿ ಸಂಚಾರಿ ಪೊಲೀಸ್ ಘಟಕದ 58 ವರ್ಷದ ಸಂಕೇತ್ ಕೌಶಿಕ್ ಮೃತಪಟ್ಟ ಪೊಲೀಸ್ ಅಧಿಕಾರಿ ಎಂದು ಗುರುತಿಸಲಾಗಿದೆ. ಸಂಕೇತ್ ಅವರು ಶನಿವಾರ ರಾತ್ರಿ ದೆಹಲಿಯ ರಾಜೋಕ್ರಿ ಫ್ಲೈಓವರ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವೇಗವಾಗಿ ಬಂದ ವಾಹನ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತದ ನಂತರ ಟಾಟಾ 407ರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಜೋಕ್ರಿ ಫ್ಲೈಓವರ್ ಬಳಿ ಸಂಕೇತ್ ಕೌಶಿಕ್ ಅವರು ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆಯಿತು. ಆಗ ನಾವು ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ವೈದ್ಯರು ಸಂಕೇತ್ ಅವರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು ಎಂದು ಜೊತೆಗಿದ್ದ ಪೊಲೀಸರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ದೆಹಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಎಸಿಪಿ ಸಂಕೇತ್ ಕೌಶಿಕ್ ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿಸಿಕೊಂಡು ಚಾಲಕನಿಗಾಗಿ ಬಲೆ ಬೀಸಿದ್ದೇವೆ ಎಂದು ತಿಳಿಸಿದ್ದಾರೆ.

  • ಸಂಡೆ ಲಾಕ್‍ಡೌನ್ ಹಿನ್ನೆಲೆ ಗ್ರಾಮಗಳತ್ತ ಹೊರಟ ಬೆಂಗ್ಳೂರಿಗರು

    ಸಂಡೆ ಲಾಕ್‍ಡೌನ್ ಹಿನ್ನೆಲೆ ಗ್ರಾಮಗಳತ್ತ ಹೊರಟ ಬೆಂಗ್ಳೂರಿಗರು

    ಬೆಂಗಳೂರು: ಸಂಡೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದಿನಿಂದಲೇ ಜನರು ತಮ್ಮ ತಮ್ಮ ಸ್ವ ಗ್ರಾಮಗಳತ್ತ ಹೋಗುತ್ತಿದ್ದಾರೆ.

    ಇಂದು ರಾತ್ರಿ 9 ಗಂಟೆಯಿಂದ ಸಂಡೆ ಲಾಕ್‍ಡೌನ್ ಜಾರಿಯಾಗಲಿದೆ. ಹೀಗಾಗಿ ಬೆಂಗಳೂರಿಗರು ತುಮಕೂರು ರಸ್ತೆ ನವಯುಗ ಟೋಲ್ ಮುಖಾಂತರ ಜನರು ತಮ್ಮ ತಮ್ಮ ಗ್ರಾಮಗಳತ್ತ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ.

    ಕಳೆದ ಲಾಕ್‍ಡೌನ್ ವೇಳೆಯಲ್ಲೂ ಬೆಂಗಳೂರು ಬಿಟ್ಟು ಸಾವಿರಾರು ಜನರು ಹೋಗುತ್ತಿದ್ದರು. ಇಂದು ಕೂಡ ಕಾರು, ಬೈಕ್‍ಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ. ಕೆಲವರು  ಮನೆಯಲ್ಲಿರುವ ಪೀಠೋಪಕರಣಗಳ ಜೊತೆಗೆ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಟೋಲ್ ಬಳಿ ಟ್ರಾಫಿಕ್ ಉಂಟಾಗುತ್ತಿದೆ.

    ಒಂದು ವಾರದ ಲಾಕ್‍ಡೌನ್ ಬಳಿಕ ಪ್ರತಿ ಭಾನುವಾರ ಲಾಕ್‍ಡೌನ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ಸರ್ಕಾರದ ಮಾರ್ಗಸೂಚಿಯಂತೆ ಸಂಡೆ ಲಾಕ್‍ಡೌನ್‍ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದ್ದರಿಂದ ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ ಮುಂಜಾನೆ 5 ಗಂಟೆಯ ತನಕ ನಗರದ ಎಲ್ಲಾ ಪ್ರಮುಖ ರಸ್ತೆಗಳು ಬಂದ್ ಆಗಲಿವೆ.

  • ಅನ್‍ಲಾಕ್ ಎಫೆಕ್ಟ್- ನಗರದ ಬಹುತೇಕ ಕಡೆ ಟ್ರಾಫಿಕ್, ಟ್ರಾಫಿಕ್

    ಅನ್‍ಲಾಕ್ ಎಫೆಕ್ಟ್- ನಗರದ ಬಹುತೇಕ ಕಡೆ ಟ್ರಾಫಿಕ್, ಟ್ರಾಫಿಕ್

    ಬೆಂಗಳೂರು: ಲಾಕ್‍ಡೌನ್ ಅಂತ್ಯ ಆದ ಮೇಲೆ ಬೆಂಗಳೂರಿನಲ್ಲಿ ವಾಹನಗಳ ಓಡಾಟ ಜೋರಾಗಿದ್ದು, ನಗರದ ಬಹುತೇಕ ಕಡೆ ಟ್ರಾಫಿಕ್ ಉಂಟಾಗಿದೆ.

    ಮೈಸೂರು ರಸ್ತೆ, ಮೆಜೆಸ್ಟಿಕ್, ತುಮಕೂರು ರಸ್ತೆ, ಟೌನ್ ಹಾಲ್, ನವಯುಗ ಟ್ರೋಲ್ ಸೇರಿದಂತೆ ಅನೇಕ ಕಡೆ ವಾಹನಗಳು ಸಾಲಾಗಿ ನಿಂತಿದೆ. ಇದರಿಂದ ಅಧಿಕ ವಾಹನಗಳ ಓಡಾಟದಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಟೌನ್ ಹಾಲ್ ಮುಂಭಾಗ ಫುಲ್ ಟ್ರಾಫಿಕ್ ಆಗಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಾಗುತ್ತಾ ಇದ್ದಾವೆ. ಕೆಲಸ, ಕಾರ್ಯ ಹೋಗುವವರು, ಸರ್ಕಾರಿ ಕಚೇರಿಗೆ ಹೋಗುವವರು ಸ್ವಂತ ವಾಹಗಳನ್ನು ಬಳಸುತ್ತಿರುವ ಹಿನ್ನೆಲೆ ವಾಹನಗಳ ಓಡಾಟ ಜಾಸ್ತಿ ಆಗಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

    ಮೇಕ್ರಿ ಸರ್ಕಲ್ ಬಳಿಯೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿವೆ. ಅನ್‍ಲಾಕ್ ಆದ ಕೂಡಲೇ ಸಾಲು ಸಾಲು ವಾಹನಗಳು ರಸ್ತೆಗಿಳಿದಿವೆ. ಇದರಿಂದ ಎಂದಿನಂತೆ ಟ್ರಾಫಿಕ್ ಉಂಟಾಗುತ್ತಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ಸಿಗ್ನಲ್ ಪ್ರಾರಂಭ ಮಾಡಿದ್ದಾರೆ. ಮೈಸೂರು ರಸ್ತೆಯಲ್ಲೂ ಕೂಡ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಳವಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿದೆ.

    ಇತ್ತ ಬೆಂಗಳೂರು ಆನ್‍ಲಾಕ್ ಹಿನ್ನೆಲೆಯಲ್ಲಿ ಮತ್ತೆ ಜನರು ತಮ್ಮ ತಮ್ಮ ಊರುಗಳು ಕಡೆ ವಾಪಸ್ ಹೋಗುತ್ತಿದ್ದಾರೆ. ಆದರೆ ಯಾರು ಕೂಡ ಬೆಂಗಳೂರಿನಿಂದ ವಾಪಸ್ ಬರುವುದು ಕಾಣಿಸುತ್ತಿಲ್ಲ. ಹೀಗಾಗಿ ಇಂದು ಕೂಡ ಬೆಂಗಳೂರಿಂದ ಜನರ ವಲಸೆ ಆರಂಭವಾಗಿದೆ. ಕೆಲವರು ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲವರು ಅಂಗಡಿ ಸಾಮಾನು ಖಾಲಿ ಮಾಡಿಕೊಂಡು ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ನವಯುಗ ಟೋಲ್ ಬಳಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.

  • ಹೆದ್ದಾರಿಯಲ್ಲಿಯೇ ಎದ್ದು ನಿಂತ ಭಾರೀ ಗಾತ್ರದ ಟ್ರಕ್

    ಹೆದ್ದಾರಿಯಲ್ಲಿಯೇ ಎದ್ದು ನಿಂತ ಭಾರೀ ಗಾತ್ರದ ಟ್ರಕ್

    ಶಿಮ್ಲಾ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿಯೇ ಭಾರೀ ಗಾತ್ರದ ಟ್ರಕ್‍ವೊಂದು ಎದ್ದು ನಿಂತಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

    ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಟ್ರಕ್ ಗರ್ಸಾ ಕಣಿವೆಯ ಗರ್ಸಾ-ಭುಂತರ್ ಹೆದ್ದಾರಿಯಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಎದ್ದು ನಿಂತಿದೆ. ಅಂದರೆ ರಸ್ತೆಯ ಪಕ್ಕದ ಕಲ್ಲು ಗುಡ್ಡಕ್ಕೆ ಹತ್ತಿಕೊಂಡು ಟ್ರಕ್ ನಿಂತಿದೆ.

    ಟ್ರಕ್ ರಸ್ತೆಯ ಮಧ್ಯೆದಲ್ಲಿಯೇ ನಿಂತಿರುವ ಪರಿಣಾಮ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಟ್ರಕ್ ಅನ್ನು ಹೆದ್ದಾರಿಯಿಂದ ಮೇಲೆತ್ತುವ ಕಾರ್ಯ ಮಾಡುತ್ತಿದ್ದಾರೆ.

    ಈ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಟ್ರಕ್ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬೇರೊಬ್ಬಳೊಂದಿಗೆ ಕಾರಿನಲ್ಲಿದ್ದ ಪತಿಯನ್ನು ಚೇಸ್ ಮಾಡಿ ಹಿಡಿದ ಪತ್ನಿ- ವೈರಲ್ ವಿಡಿಯೋ

    ಬೇರೊಬ್ಬಳೊಂದಿಗೆ ಕಾರಿನಲ್ಲಿದ್ದ ಪತಿಯನ್ನು ಚೇಸ್ ಮಾಡಿ ಹಿಡಿದ ಪತ್ನಿ- ವೈರಲ್ ವಿಡಿಯೋ

    ಮುಂಬೈ: ಗೆಳತಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಪತಿಯನ್ನು ಪತ್ನಿ ಚೇಸ್ ಮಾಡಿ ಹಿಡಿದಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಮಹಿಳೆಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮುಂಬೈ ನಗರದಲ್ಲಿ ಪ್ರಮುಖ ರಸ್ತೆಯೊಂದರಲ್ಲಿ ಜುಲೈ 11ರ ಸಂಜೆ ಘಟನೆ ನಡೆದಿದೆ. ಮುಂಬೈ ನಿವಾಸಿಯಾಗಿದ್ದ 30 ವರ್ಷದ ವ್ಯಕ್ತಿ ಕಪ್ಪು ಬಣ್ಣದ ಕಾರಿನಲ್ಲಿ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ. ಈ ಕಾರನ್ನು ಮತ್ತೊಂದು ಕಾರಿನಲ್ಲಿ ಬೆನ್ನತ್ತಿದ್ದ ಆತನ ಪತ್ನಿ ನಡುರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ಗಂಡನನ್ನು ಪ್ರಶ್ನಿಸಿ ರಂಪಾಟ ಮಾಡಿದ್ದಳು.

    ಪತಿಯ ಕಾರಿನ ಬಾನೆಟ್ ಹತ್ತಿದ್ದ ಮಹಿಳೆ ತಪ್ಪಲಿ ಸೇವೆ ಕೂಡ ಮಾಡಿ ಆಕ್ರೋಶ ಹೊರ ಹಾಕಿದ್ದಳು. ಪತಿ ಹಾಗೂ ಆತನ ಗೆಳತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡ ಪತ್ನಿ ನಡುರಸ್ತೆಯಲ್ಲೇ ರಂಪಾಟ ನಡೆಸಿದ ಕಾರಣ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದರು.

    ಪತಿ ಕಾರಿನಿಂದ ಕೆಳಗಿಳಿಯುವವರೆಗೂ ಪಟ್ಟುಬಿಡದ ಮಹಿಳೆ ಪತಿ ಮೇಲೆ ಆಕ್ರೋಶದಿಂದ ಹಲ್ಲೆ ಕೂಡ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಸಂದರ್ಭದಲ್ಲಿ ಪತ್ನಿಯನ್ನು ಶಾಂತಗೊಳಿಸಲು ಯತ್ನಿಸಿದ ಪತಿ ಆಕೆಯನ್ನು ಕಾರಿನಲ್ಲಿ ಕುರಿಸಿ ಕೆಲ ಸಮಯ ಮಾತನಾಡುತ್ತಿದ್ದ. ಆ ವೇಳೆ ಪತಿಯ ಕಾರಿನಲ್ಲಿದ್ದ ಮಹಿಳೆಯೂ ವಾಗ್ವಾದಕ್ಕೆ ಇಳಿದಿದ್ದಳು. ಇಷ್ಟೆಲ್ಲಾ ರದ್ದಾದಂತೆ ಸಾಕ್ಷಿಯಂತೆ ನಿಂತಿದ್ದ ಟ್ರಾಫಿಕ್ ಪೊಲೀಸರು ಮಹಿಳೆಗೆ ದಂಡ ವಿಧಿಸಿ ಸ್ಥಳದಿಂದ ಕಳುಹಿಸಿದ್ದಾರೆ.

  • ಬೆಂಗಳೂರಿನಿಂದ ಮುಂದುವರಿದ ವಲಸೆ- ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಶುರು

    ಬೆಂಗಳೂರಿನಿಂದ ಮುಂದುವರಿದ ವಲಸೆ- ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಶುರು

    ಬೆಂಗಳೂರು: ಇಂದು ರಾತ್ರಿ 8 ಗಂಟೆಯ ಬಳಿಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ಕೂಡ ಜನ ಬೆಂಗಳೂರು ತೊರೆಯುತ್ತಿದ್ದಾರೆ.

    ಕುಟುಂಬ ಸಮೇತ ಗಂಟು ಮೂಟೆ ಕಟ್ಟಿಕೊಂಡು ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಇವತ್ತು ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಮೆಜೆಸ್ಟಿಕ್‍ನಿಂದ ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಒಂದು ವಾರ ಲಾಕ್‍ಡೌನ್ ಇದೆ. ಹೀಗಾಗಿ ಊರಲ್ಲಿ ಇದ್ದು ಬರೋಣ ಎಂದು ಅನೇಕರು ಬೆಂಗಳೂರಿನಿಂದ ಹೋಗುತ್ತಿದ್ದಾರೆ.

    ಬಸ್ ನಿಲ್ದಾಣದಲ್ಲಿ ಲಗೇಜ್ ಸಮೇತ ಊರಿಗೆ ತೆರಳಲು ನಿಂತಿದ್ದಾರೆ. ನಿನ್ನೆ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ್ದರು. ಹೀಗಾಗಿ ಪ್ರತಿ ಬಸ್ ಸ್ಟಾಂಡ್‍ಗಳಲ್ಲಿ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ. ಗೊರಗೊಂಟೆಪಾಳ್ಯ, ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣಗಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಂದು ಕೂಡ ಊರಿಗಳಿಗೆ ತೆರಳಲು ಜನರು ನಿಂತಿದ್ದಾರೆ.

    ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣದಲ್ಲಿ ಪ್ರತಿ ಪ್ರಯಾಣಿಕರಿಗೂ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕಳುಹಿಸುತ್ತಿದ್ದಾರೆ. ಹೆಚ್ಚುವರಿ ಬಸ್‍ಗಳ ನಿಯೋಜನೆ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಿದೆ.

    ಮುಂಜಾನೆಯಿಂದಲೇ ನೆಲಮಂಗಲ ರಸ್ತೆಯ ನವಯುಗ ಟೋಲ್‍ನಲ್ಲಿ ವಾಹನ ದಟ್ಟಣೆ ಶುರುವಾಗಿದೆ. ರಾತ್ರಿಯಿಂದ ನವಯುಗ ಟೋಲ್ ಹಣ ಸಂಗ್ರಹ ಮಾಡುತ್ತಿಲ್ಲ. ಲಾಕ್‍ಡೌನ್ ಹಿನ್ನೆಲೆ ವಾಹನ ಸವಾರರಿಂದ ಯಾವುದೇ ಸುಂಕ ಕಲೆಕ್ಟ್ ಮಾಡುತ್ತಿಲ್ಲ. ಇಂದು ರಾತ್ರಿ 8 ಗಂಟೆಯವರೆಗೆ ಹಣ ಸಂಗ್ರಹ ಮಾಡದಿರಲು ಆದೇಶ ಬಂದಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ ನಿರಂತರವಾಗಿ ವಾಹನಗಳ ಓಡಾಡುತ್ತಿವೆ. ಇಂದು ಸಹ ಸ್ವಂತ ವಾಹನಗಳಲ್ಲಿ ಜನರು ಊರು ಬಿಟ್ಟು ಹೋಗುತ್ತಿದ್ದಾರೆ. ಲಗೇಜ್ ಆಟೋ, ಬೈಕ್, ಕಾರ್‌ಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ.

  • ನೆಲಮಂಗಲ ಟೋಲ್ ಬಳಿ ಬಿರು ಬಿಸಿಲಲ್ಲಿ ಬಸ್‍ಗಾಗಿ ಕಾದು ಸುಸ್ತಾದ ಪ್ರಯಾಣಿಕರು

    ನೆಲಮಂಗಲ ಟೋಲ್ ಬಳಿ ಬಿರು ಬಿಸಿಲಲ್ಲಿ ಬಸ್‍ಗಾಗಿ ಕಾದು ಸುಸ್ತಾದ ಪ್ರಯಾಣಿಕರು

    ಬೆಂಗಳೂರು: ಮಂಗಳವಾರ ಸಂಜೆಯಿಂದ ಲಾಕ್‍ಡೌನ್ ಜಾರಿಯಾಗುವ ಹಿನ್ನೆಲೆ ಜನ ತಮ್ಮ ಊರುಗಳತ್ತ ತೆರಳುವುದರಲ್ಲಿ ನಿರತರಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನೊಂದೆಡೆ ವಾಹನಗಳು ಇಲ್ಲದವರು ತಮ್ಮ ಊರಿಗೆ ತೆರಳಲು ದಾರಿ ಮಧ್ಯೆ ನಿಲ್ದಾಣಗಳ ಬಳಿ ಬಸ್‍ಗಾಗಿ ಕಾಯುತ್ತಿದ್ದಾರೆ. ಆದರೆ ಬಸ್‍ಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದಾಗಿ ಸುಡು ಬಿಸಿಲಿನಲ್ಲೇ ಜನ ಕಾಯುತ್ತಿದ್ದಾರೆ.

    ಇಂತಹ ದೃಶ್ಯ ನೆಲಮಂಗಲದ ಜಾಸ್ ಟೋಲ್ ಬಳಿ ಕಂಡು ಬಂದಿದ್ದು, ಬಸ್ ಗಳಿಲ್ಲದೆ ಜನರ ಪರದಾಡುತ್ತಿದ್ದಾರೆ. ಬಸ್ ಬಂದರೂ ಸಹ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿಲ್ಲ. ಹೀಗಾಗಿ ಬಿರು ಬಿಸಿಲಿನಲ್ಲಿ ಬಸ್‍ಗಳಿಗಾಗಿ ಜನ ಕಾದು ಕಾದು ಸುಸ್ತಾಗಿದ್ದಾರೆ. ಬಸ್‍ಗಳಿಗಾಗಿ ಕಾದು ಕಾದು ಮಹಿಳೆಯರು, ವೃದ್ಧರು ರಸ್ತೆಯ ಡಿವೈಡರ್ ಮೇಲೆಯೇ ಕುಳಿತರು. ಈಗಾಗಲೇ ನೆಲಮಂಗಲದ ಜಾಸ್ ಟೋಲ್ ಫ್ರೀ ಮಾಡಲಾಗಿದೆ. ಆದರೂ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.

    ಸಂಜೆಯಾದರೂ ಬೆಂಗಳೂರು ಬಿಡುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮನೆ ಖಾಲಿ ಮಾಡಿಕೊಂಡು ಹೋಗುತ್ತಿರಿವವರೆ ಹೆಚ್ಚಿದ್ದಾರೆ. ನೆಲಮಂಗಲದ ಟೋಲ್‍ಗಳಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟಲು ಪೊಲೀಸರು ಟೋಲ್ ಫ್ರೀ ಮಾಡಿದ್ದಾರೆ. ಇಷ್ಟಾದರೂ ಸಹ ವಾಹನ ದಟ್ಟಣೆ ಹೆಚ್ಚಿದೆ. ಕಾರು, ಬೈಕ್, ಖಾಸಗಿ ವಾಹನದಲ್ಲಿ ತೆರಳುವವರ ಸಂಖ್ಯೆಯೇ ಹೆಚ್ಚಿದ್ದು, ಎಲ್ಲಿ ನೋಡಿದರೂ ಗೂಡ್ಸ್ ವಾಹನಗಳೇ ಕಾಣುತ್ತವೆ.

  • ಸಂಡೇ ಲಾಕ್‍ಡೌನ್ ಮುಗಿಯುತ್ತಿದ್ದಂತೆ ಊರುಗಳತ್ತ ಜನ- ಬೆಳ್ಳಂಬೆಳಗ್ಗೆ ಟ್ರಾಫಿಕ್

    ಸಂಡೇ ಲಾಕ್‍ಡೌನ್ ಮುಗಿಯುತ್ತಿದ್ದಂತೆ ಊರುಗಳತ್ತ ಜನ- ಬೆಳ್ಳಂಬೆಳಗ್ಗೆ ಟ್ರಾಫಿಕ್

    ಬೆಂಗಳೂರು: ಬೆಂಗಳೂರು ಲಾಕ್‍ಡೌನ್‍ಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ.  ಮಂಗಳವಾರ ರಾತ್ರಿ 8 ಗಂಟೆಯಿಂದ 7 ದಿನ ಕಾಲ ಲಾಕ್‍ಡೌನ್ ಜಾರಿಯಾಗಲಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಬ್ಧವಾಗಲಿದೆ. ಹೀಗಾಗಿ ಜನರು ಸಂಡೇ ಲಾಕ್‍ಡೌನ್ ಮುಗಿಯುತ್ತಿದ್ದಂತೆ ತಮ್ಮ ತಮ್ಮ ಗ್ರಾಮಗಳತ್ತ ಹೋಗುತ್ತಿದ್ದಾರೆ.

    ಸಂಡೇ ಲಾಕ್‍ಡೌನ್ ಸಮಯ ಮುಗಿದ ತಕ್ಷಣ ಬೈಕ್ ಮತ್ತು ಕಾರುಗಳು ರಸ್ತೆಗೆ ಇಳಿದಿದೆ. ಮಂಗಳವಾರದಿಂದ ಮತ್ತೆ ಒಂದು ವಾರದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನರು ಬೆಂಗಳೂರು ಬಿಟ್ಟು ಹಳ್ಳಿಗಳಿಗೆ ಹೊರಡುತ್ತಿದ್ದಾರೆ. ಇದರಿಂದ ತುಮಕೂರು ರಸ್ತೆಯ ನವಯುಗ ಟೋಲ್‍ನಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಮಾಮೂಲಿ ದಿನಕ್ಕೆ ಹೋಲಿಸಿದರೆ ಇಂದು ಡಬಲ್ ವಾಹನಗಳು ಟೋಲ್‍ನಲ್ಲಿ ಸಂಚಾರ ಮಾಡುತ್ತಿವೆ.

    ಈ ಹಿಂದೆಯೂ ಜನರು ಕೊರೊನಾಗೆ ಭಯಭೀತರಾಗಿ ಬೆಂಗಳೂರು ಬಿಟ್ಟು ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ ಅವರು, ಯಾರೂ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಮನವಿ ಮಾಡಿದರೂ ಬೆಂಗಳೂರು ಬಿಡುವವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ನೆಲಮಂಗಲದ ಜಾಸ್ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ. ಕಾರು ಬೈಕ್ ಇನ್ನಿತರ ವಾಹನಗಳಲ್ಲಿ ಜನರು ತಮ್ಮ ಊರುಗಳತ್ತ ಪಯಣ ಮಾಡುತ್ತಿದ್ದಾರೆ.

    ಕೆಲವರು ಮನೆಯ ವಸ್ತುಗಳ ಸಮೇತ ಊರಿಗೆ ಹೊರಟ್ಟಿದ್ದಾರೆ. ಬೆಂಗಳೂರು ಒಂದು ವಾರ ಲಾಕ್‍ಡೌನ್ ಆಗಿದೆ. ನಮ್ಮ ಕುಟುಂಬದವರು ಊರಲ್ಲಿ ಇದ್ದಾರೆ. ಹೀಗಾಗಿ ನಾನು ಹೋಗುತ್ತಿದ್ದೀನಿ ಎಂದು ಕಂಡಕ್ಟರ್ ಹೇಳಿದ್ದಾರೆ.

    ನಾನು ಗಾರೆ ಕೆಲಸ ಮಾಡುತ್ತಿದ್ದೆ. ಆದರೆ ಲಾಕ್‍ಡೌನ್‍ನಿಂದಾಗಿ ಮಾಡಲು ಕೆಲಸವಿಲ್ಲ, ಹಣವೂ ಇಲ್ಲ. ಜೀವನ ಕಷ್ಟವಾಗಿದೆ, ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಅದಕ್ಕೆ ಬೆಂಗಳೂರು ಬಿಟ್ಟು ಊರಿಗೆ ಹೋಗುತ್ತಿದ್ದೇವೆ. ಊರಲ್ಲೇ ಕೆಲಸ ಮಾಡಿಕೊಂಡು ಜೀವನ ಮಾಡುತ್ತೇವೆ ಎಂದು ಬೆಂಗಳೂರು ಬಿಟ್ಟು ಹೊರಟ ಜನರು ಹೇಳುತ್ತಿದ್ದಾರೆ.