Tag: traffic

  • ಪ್ರಯಾಣಿಕರೇ ಗಮನಿಸಿ: ಕುರುಬ ಸಮಾವೇಶ – ಮಾರ್ಗ ಬದಲಾವಣೆ

    ಪ್ರಯಾಣಿಕರೇ ಗಮನಿಸಿ: ಕುರುಬ ಸಮಾವೇಶ – ಮಾರ್ಗ ಬದಲಾವಣೆ

    ಬೆಂಗಳೂರು: ಶನಿವಾರ ಹೆದ್ದಾರಿ ಬಂದ್ ಆಯ್ತು. ಇವತ್ತು ಕುರುಬ ಸಮಾವೇಶ. ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿದ್ದಲ್ಲ. ಇವತ್ತೂ ಅಪ್ಪಿತಪ್ಪಿ ಮೈಮರೆತು ರಸ್ತೆಗಿಳಿದ್ರೆ ಅಲ್ಲಲ್ಲಿ ಲಾಕ್ ಆಗ್ತೀರಾ. ಹಾಗಿದ್ರೆ ಬೆಂಗಳೂರಲ್ಲಿಂದು ಎಲ್ಲೆಲ್ಲಿ ಟ್ರಾಫಿಕ್ ಬಿಸಿ ತಟ್ಟಲಿದೆ, ಮಾರ್ಗ ಬದಲಾವಣೆ ಮಾಡಲಾಗಿದೆ.

    ಎಸ್.ಟಿ. ಮೀಸಲಾತಿಗಾಗಿ ಕುರುಬ ಸಮಾವೇಶಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬಿಐಇಸಿ ಮೈದಾನದಲ್ಲಿ ವೇದಿಕೆ ಸಜ್ಜಾಗಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ರಾಜ್ಯದ ಮೂಲೆಮೂಲೆಯಿಂದ ಕುರುಬ ಸಮಾಜದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಈ ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಯಿಂದ ಎರಡು ಸಾವಿರ ಬಸ್, ಒಂದು ಸಾವಿರಕ್ಕೂ ಹೆಚ್ಚು ಟ್ರಕ್ಸ್, ಸಾವಿರಾರು ಕಾರುಗಳು ಬರುವ ನಿರೀಕ್ಷೆ ಇದೆ. ಹೀಗಾಗಿ, ಬೆಂಗಳೂರು-ತುಮಕೂರು, ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಲಿದೆ.

    ಲಘು ವಾಹನಗಳಿಗೆ ಯಾವುದೇ ನಿರ್ಭಂಧ ಇಲ್ಲ, ಭಾರಿ ವಾಹನಗಳಿಗೆ ಮಾತ್ರ ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ವರೆಗೆ ಮಾರ್ಗ ಬದಲಾವಣೆ ಮಾಡಿದ್ದಾರೆ. ತುಮಕೂರು ಬೆಂಗಳೂರು ರಸ್ತೆಯಲ್ಲಿ ಐದು ಕಡೆ ಮಾರ್ಗ ಬದಲಿಸಿ ಆದೇಶ ಹೊರಡಿಸಿದ್ದಾರೆ.

    ಎಲ್ಲೆಲ್ಲಿ ಮಾರ್ಗ ಬದಲು?
    * ದಾಬಸ್‍ಪೇಟೆ – ದೊಡ್ಡಬಳ್ಳಾಪುರ ಮಾರ್ಗ
    * ದಾಬಸ್‍ಪೇಟೆ – ಮಾಗಡಿ ಶಿವಗಂಗೆ ರಸ್ತೆ
    * ನೈಸ್ ರೋಡ್- ಮಾಗಡಿ, ಮಂಗಳೂರು, ಹಾಸನ, ಕುಣಿಗಲ್ ಮಾರ್ಗ
    * ನೈಸ್ ರೋಡ್ – ಮಾಗಡಿ, ಶಿವಗಂಗೆ, ಹೊಸೂರು, ಮೈಸೂರು, ತುಮಕೂರು, ಬೆಂಗಳೂರು
    * ನೆಲಮಂಗಲ – ದೊಡ್ಡಬಳ್ಳಾಪುರ, ರೈಲ್ವೆ ಗೊಲ್ಲಹಳ್ಳಿ, ಬೆಂಗಳೂರು, ಹೈದರಾಬಾದ್, ಹೊಸಕೋಟೆ, ಹೊಸೂರು

    ಭದ್ರತೆಗಾಗಿ ಬೆಂಗಳೂರು ಗ್ರಾಮಾಂತರ ಎಸ್‍ಪಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಲಕ್ಷಾಂತರ ಮಂದಿ ಸೇರುವ ಸಾಧ್ಯತೆ ಹಿನ್ನೆಲೆ, ತುಮಕೂರು ಬೆಂಗಳೂರು ರಸ್ತೆ ಹಾಗೂ ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರ ಸಜ್ಜಾಗಿದ್ದಾರೆ. ಒಟ್ಟಾರೆ ವಿಕೇಂಡ್ ಎಂದು ಹೋಗುವ ಜನರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ.

  • ಕೃಷಿ ಕಾಯಿದೆ ಖಂಡಿಸಿ ರಾಜಭವನ ಚಲೋ – ಬುಧವಾರ ರಸ್ತೆಗೆ ಇಳಿಯುವ ಮುನ್ನ ಬಿ ಅಲರ್ಟ್

    ಕೃಷಿ ಕಾಯಿದೆ ಖಂಡಿಸಿ ರಾಜಭವನ ಚಲೋ – ಬುಧವಾರ ರಸ್ತೆಗೆ ಇಳಿಯುವ ಮುನ್ನ ಬಿ ಅಲರ್ಟ್

    ಬೆಂಗಳೂರು: ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಬುಧವಾರ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು, ರೈತ ಸಂಘಟನೆಗಳು ರಾಜಭವನ ಚಲೋ ನಡೆಸಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ರ‍್ಯಾಲಿ ಶುರುವಾಗಲಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ಮಾರ್ಗವಾಗಿ ಸಾಗಿ ರಾಜಭವನ ತಲುಪಲಿದೆ.

    ಕಾಂಗ್ರೆಸ್ ಪಕ್ಷದ ನಾಯಕರು, ರೈತ ಸಂಘಟನೆಗಳು ಸೇರಿದಂತೆ ಹದಿನೈದು ಸಾವಿರಕ್ಕೂ ಹೆಚ್ಚು ಜನರು ಈ ರ‍್ಯಾಲಿಯಲ್ಲಿ ಭಾಗಿಯೋ ಸಾಧ್ಯತೆ ಇದೆ. ರಾಜಭವನ ಚಲೋಗೆ ಪೊಲೀಸರು ಕೂಡ ಎಲ್ಲ ರೀತಿಯ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಆದ್ರೆ ನಗರದ ಹೃದಯ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರೋದರಿಂದ ಮೆಜೆಸ್ಟಿಕ್ ಸುತ್ತಲಿನ ಕೆ.ಜಿ.ರೋಡ್, ಚಿಕ್ಕಪೇಟೆ ಮುಖ್ಯರಸ್ತೆ, ಫ್ರೀಡಂ ಪಾರ್ಕ್ ರಸ್ತೆ, ಚಾಲುಕ್ಯ ಸರ್ಕಲ್, ಮೌರ್ಯ ಸರ್ಕಲ್, ಕೆಆರ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆ ಗಳು ಫುಲ್ ಜಾಮ್ ಆಗುವ ಸಾಧ್ಯತೆಗಳಿವೆ ಪರಿಸ್ಥಿತಿ ನೋಡಿಕೊಂಡು ಮಾರ್ಗಬದಲಾಣೆ ಬಗ್ಗೆ ಸೂಕ್ತ ತಿರ್ಮಾನ ಕೈಗೊಳ್ಳಲಾಗುವುದು ಅಂತಾ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ರಾಜಭವನ ಚಲೋಗೆ ಯಾವುದೇ ರೀತಿಯ ಅನುಮತಿ ಇಲ್ಲ. ಆದರೆ ರ‍್ಯಾಲಿ ಮಾಡುವ ಬಗ್ಗೆ ಅನುಮತಿ ಕೋರಿ ಪತ್ರ ಬಂದಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿದೆ. ಕೊರೋನಾ ನಿಯಮಗಳು ಇನ್ನೂ ಜಾರಿಯಲ್ಲಿರೋದರಿಂದ ಮಾರ್ಗಸೂಚಿಗಳನ್ನು ಎಲ್ಲರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಬಂದೊಬಸ್ತ್, ಮಾರ್ಗ ಬದಲಾವಣೆ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ಸಾವಿರಾರು ಜನರು ಭಾಗವಹಿಸೋದರಿಂದ ಮೆಜೆಸ್ಟಿಕ್, ವಿಧಾನಸೌಧಸುತ್ತಮುತ್ತಲಿನ ರಸ್ತೆಗಳು ಸ್ತಬ್ಧ ಆಗೋ ಸಾಧ್ಯತೆಗಳು ಹೆಚ್ಚಾಗಿದೆ. 10 ಗಂಟೆಯ ನಂತರ ರಸ್ತೆಗಿಳಿದ್ರೆ ಟ್ರಾಫಿಕ್ ನಲ್ಲಿ ಲಾಕ್ ಅಗೋದು ಪಕ್ಕಾ.

  • ಟ್ರಾಫಿಕ್ ವಿಚಾರದಲ್ಲಿ ಬೆಂಗಳೂರು ವಿಶ್ವದಲ್ಲೇ 6ನೇ ಅತ್ಯಂತ ಕೆಟ್ಟ ನಗರ, ದೇಶದಲ್ಲಿ 2ನೇ ಸ್ಥಾನ

    ಟ್ರಾಫಿಕ್ ವಿಚಾರದಲ್ಲಿ ಬೆಂಗಳೂರು ವಿಶ್ವದಲ್ಲೇ 6ನೇ ಅತ್ಯಂತ ಕೆಟ್ಟ ನಗರ, ದೇಶದಲ್ಲಿ 2ನೇ ಸ್ಥಾನ

    ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಆಗಿದ್ದರೂ, ಬೆಂಗಳೂರು ಟ್ರಾಫಿಕ್ ವಿಚಾರದಲ್ಲಿ ವಿಶ್ವದಲ್ಲೇ 6ನೇ ಅತ್ಯಂತ ಕೆಟ್ಟ ನಗರ ಎಂಬ ಪಟ್ಟ ಪಡೆದಿದೆ.

    ದಿ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್-2020 ಬಿಡುಗಡೆಯಾಗಿದ್ದು, ಟ್ರಾಫಿಕ್ ವಿಚಾರದಲ್ಲಿ 6ನೇ ಅತ್ಯಂತ ಕೆಟ್ಟ ಹಾಗೂ ದೇಶದಲ್ಲಿ 2ನೇ ಅತ್ಯಂತ ಕೆಟ್ಟ ಟ್ರಾಫಿಕ್ ಹೊಂದಿರುವ ನಗರ ಎಂದು ಸರ್ವೇಯಲ್ಲಿ ಬಹಿರಂಗವಾಗಿದೆ. ಮುಂಬೈ ವಿಶ್ವದಲ್ಲೇ 2ನೇ ಸ್ಥಾನ ಪಡೆದಿದ್ದು, ರಷ್ಯಾದ ರಾಜಧಾನಿ ಮಾಸ್ಕೋ ಮೊದಲ ಸ್ಥಾನ ಪಡೆದಿದೆ. ಕೊಲಂಬಿಯಾದ ರಾಜಧಾನಿ ಬೊಗೋಟಾ, ಫಿಲಿಫೈನ್ಸ್ ರಾಜಧಾನಿ ಮನಿಲಾ ಹಾಗೂ ಟರ್ಕಿಯ ಇಸ್ತಾಂಬುಲ್ ಕ್ರಮವಾಗಿ 3,4,5ನೇ ಸ್ಥಾನ ಪಡೆದಿವೆ. ದೆಹಲಿ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎನ್ನುವಂತಾಗಿದ್ದು, 8ನೇ ಸ್ಥಾನ ಪಡೆದಿದೆ. 2019ಕ್ಕಿಂತ ಶೇ.20ರಷ್ಟು ಸುಧಾರಿಸಿದೆ.

    ಬೆಂಗಳೂರು ಶೇ.20ರಷ್ಟು ಸುಧಾರಣೆ
    2019ರಲ್ಲಿ ಬಿಡುಗಡೆಯಾದ ವರದಿಯಲ್ಲಿ ವಿಶ್ವದ 416 ನಗರಗಳ ಪೈಕಿ ಮೊದಲ ಸ್ಥಾನ ಪಡೆಯುವ ಮೂಲಕ ಬೆಂಗಳೂರು ಅತ್ಯಂತ ಕೆಟ್ಟ ಟ್ರಾಫಿಕ್ ಹೊಂದಿದ ನಗರ ಎಂಬ ಕುಖ್ಯಾತಿ ಪಡೆದಿತ್ತು. ಈ ಬಾರಿ ಶೇ.20ರಷ್ಟು ಟ್ರಾಫಿಕ್ ಜಾಮ್ ಕಡಿಮೆಯಾಗಿದೆ. ಹೀಗಾಗಿ 6ನೇ ಸ್ಥಾನ ಪಡೆದಿದೆ. ಒಟ್ಟು 147 ದಿನಗಳು ಕಡಿಮೆ ಟ್ರಾಫಿಕ್ ರೆಕಾರ್ಡ್ ಆಗಿದೆ. ಏಪ್ರಿಲ್‍ನಲ್ಲೇ ಅತೀ ಕಡಿಮೆ ಟ್ರಾಫಿಕ್ ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಜನವರಿ ಹಾಗೂ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಶೇ.70ರಷ್ಟು ಸಂಚಾರ ದಟ್ಟಣೆ ಆಗಿತ್ತು.

    ಈ ಕುರಿತು ಟಾಮ್ ಟಾಮ್ ಸಂಸ್ಥೆಯ ಉಪಾಧ್ಯಕ್ಷ ರಾಲ್ಫ್-ಪೀಟರ್ ಸ್ಕೋಫರ್ ಮಾತನಾಡಿ, 2019ರಲ್ಲಿ ಜಾಗತಿಕ ಸಂಚಾರ ದಟ್ಟಣೆ ಪ್ರಮಾಣ ಸತತ ಒಂಬತ್ತನೇ ಸಂಚಾರ ಸೂಚ್ಯಂಕಕ್ಕೆ ಹೆಚ್ಚಾಗಿತ್ತು. 2020ರಲ್ಲಿ ವಿಭಿನ್ನ ಚಿತ್ರಣ ನೋಡಿದ್ದೇವೆ. ಲಾಕ್‍ಡೌನ್ ನಿಂದ ಗಡಿ ಬಂದ್‍ವರೆಗಿನ ಜನರ ಚಲನೆ ತುಂಬಾ ವೇಗವಾಗಿ ಬದಲಾಗಿದೆ ಎಂದು ತಿಳಿಸಿದ್ದಾರೆ.

  • ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    – ಜಾರಿಯಾಗಲಿದೆ ಜಿಪಿಎಸ್‌ ಆಧಾರಿತ ವ್ಯವಸ್ಥೆ
    – ರಷ್ಯಾ ಸರ್ಕಾರದ ಸಹಾಯದಿಂದ ಜಾರಿ

    ನವದೆಹಲಿ: ಮುಂದಿನ 2 ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ಪ್ಲಾಜಾಗಳು ಇರುವುದಿಲ್ಲ ಎಂದು ಕೇಂದ್ರ ಸಾರಿಗೆ ಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

    ಹೌದು. ಸದ್ಯ ಈಗ ಕೆಲ ಕಿಲೋ ಮೀಟರ್‌ ಅಂತರದಲ್ಲಿ ಟೋಲ್‌ ಪ್ಲಾಜಾಗಳು ಇವೆ. ದುಡ್ಡಿನ ಮೂಲಕ ಪಾವತಿ ತಪ್ಪಿಸಲು ಫಾಸ್ಟ್‌ ಟ್ಯಾಗ್‌ ಬಂದಿದೆ. ಆದರೂ ವಾಹನಗಳು ಸರದಿಯಲ್ಲಿ ನಿಲ್ಲುವುದು ನಿಂತಿಲ್ಲ. ಆದರೆ ಇನ್ನು ಮುಂದೆ ವಾಹನಗಳು ಟೋಲ್‌ಗಳಲ್ಲಿ ನಿಲ್ಲದೇ ಸರಗವಾಗಿ ಸಂಚರಿಸುವ ವ್ಯವಸ್ಥೆ ಜಾರಿಯ ಬಗ್ಗೆ ಗಡ್ಕರಿ ಸುಳಿವು ನೀಡಿದ್ದಾರೆ.

    ಅಸೋಚಾಮ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ವ್ಯವ್ಯಸ್ಥೆ ಜಾರಿ ಮಾಡುವ ಸಂಬಂಧ ಸಿದ್ಧತೆ ನಡೆಸುತ್ತಿದೆ. ಈ ವ್ಯವಸ್ಥೆ ಜಾರಿಯಾದರೆ ಟೋಲ್‌ ಹಣ ನೇರವಾಗಿ ಬ್ಯಾಂಕ್‌ ಖಾತೆಯಿಂದ ಜಮೆಯಾಗುತ್ತದೆ ಎಂದು ವಿವರಿಸಿದರು.

    ಜಿಪಿಎಸ್‌ ವ್ಯವಸ್ಥೆ ಜಾರಿ ಸಂಬಂಧ ನಾವು ಈಗಾಗಲೇ ಜಿಪಿಎಸ್‌ ಆಧಾರಿತ ವ್ಯವಸ್ಥೆ ಜಾರಿ ಸಂಬಂಧ ರೂಪುರೇಷೆಯನ್ನು ಅಂತಿಮಗೊಳಿಸಲಾಗಿದೆ. ರಷ್ಯಾ ಸರ್ಕಾರದ ಸಹಾಯದೊಂದಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

    ಇತ್ತೀಚಿನ ಹೊಸ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಜಿಪಿಎಸ್ ಒಳಗೊಂಡಿರುತ್ತವೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಮುಂದಿನ ಎರಡು ವರ್ಷದಲ್ಲಿ ಭಾರತದಲ್ಲಿ ಟೋಲ್ ಬೂತ್ ರಹಿತ ಹೆದ್ದಾರಿಗಳು ಇರಲಿದೆ. ವಾಹನಗಳನ್ನು ಜಿಪಿಎಸ್‌ ವ್ಯವಸ್ಥೆ ಮೂಲಕ ಟ್ರ್ಯಾಕ್ ಮಾಡಲಾಗುವುದು. ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಬಾಕಿ ಟೋಲ್ ಹಣ ಪಾವತಿಯಾಗಲಿದೆ ಎಂದರು.

    ಈ ವ್ಯವಸ್ಥೆ ಜಾರಿಯಾದರೆ ಐದು ವರ್ಷದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದಾಯ 1.34 ಲಕ್ಷ ಕೋಟಿಗೆ ಏರಿಕೆ ಆಗಲಿದೆ. ಈ ಹಣಕಾಸು ವರ್ಷದಲ್ಲಿ 34 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.

    ಫಾಸ್ಟ್‌ ಟ್ಯಾಗ್‌ ಕಡ್ಡಾಯ ಮಾಡಿರುವ ಕಾರಣ ಟೋಲ್‌ ಸಂಗ್ರಹ ಹೆಚ್ಚಾಗುತ್ತಿದೆ. ಕಳೆದ ವರ್ಷ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗಿದ್ದರೆ ಈ ವರ್ಷ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿದೆ.

    2020ರ ಜನವರಿ 1ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಇದನ್ನೂ ಓದಿ: ಜನವರಿ 1ರಿಂದ 4 ಚಕ್ರದ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌ ಕಡ್ಡಾಯ. ಫಾಸ್ಟ್‌ ಟ್ಯಾಗ್‌ನಲ್ಲಿ ಹಣ ಹೇಗೆ ಪಾವತಿಯಾಗುತ್ತದೆ?

  • ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ – ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಜನಜಾತ್ರೆ

    ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ – ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಜನಜಾತ್ರೆ

    – ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನ ಮಂದಿ ಊರುಗಳತ್ತ ಪ್ರಯಾಣಿಸುತ್ತಿದ್ದು, ಮೆಜೆಸ್ಟಿಕ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಜಾತ್ರೆಯಂತಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರು ನಗರದ ಬಹುತೇಕ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಜನ ಮಳೆ ಮತ್ತು ಕೊರೊನಾ ಸಹ ಲೆಕ್ಕಿಸದೇ ಊರುಗಳತ್ತ ಹೊರಟು ನಿಂತಿದ್ದಾರೆ.

    ಹಬ್ಬದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಸ್ ನಿಲ್ದಾಣದತ್ತ ಆಗಮಿಸಿದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ತುಮಕೂರು, ಬಳ್ಳಾರಿ, ಮೈಸೂರು ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದು, ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ.

    ಇನ್ನು ಖಾಸಗಿ ವಾಹನಗಳು ದೀಪಾವಳಿಯನ್ನೇ ಬಂಡವಾಳ ಮಾಡಿಕೊಂಡಿದ್ದು ಪ್ರಯಾಣ ದರವನ್ನ ದುಪ್ಪಟ್ಟು ವಸೂಲಿ ಮಾಡಿಕೊಳ್ಳುತ್ತಿವೆ. ಬಸ್ ನಿಲ್ದಾಣ, ಪ್ರಮುಖ ರಸ್ತೆಗಳಲ್ಲಿ ಜನರು ಸಾಮಾಜಿಕ ಅಂತರವನ್ನೇ ಮರೆತು ಊರಿಗೆ ಸಡಗರದಲ್ಲಿದ್ದಾರೆ. ಸಣ್ಣ ಮಕ್ಕಳು, ವೃದ್ಧರು ಎನ್ನದೇ ಗುಂಪು ಗುಂಪಾಗಿದೆ ಎಲ್ಲರೂ ಪ್ರಯಾಣ ಬೆಳೆಸುತ್ತಿರೋದು ಕೊರೊನಾ ಆತಂಕಕ್ಕೆ ಕಾರಣವಾಗಿದೆ.

  • ವೀಕೆಂಡ್‍ನಲ್ಲಿ ಚರ್ಚ್ ಸ್ಟ್ರೀಟ್‍ಗೆ ವಾಹನಗಳು ನೋ ಎಂಟ್ರಿ

    ವೀಕೆಂಡ್‍ನಲ್ಲಿ ಚರ್ಚ್ ಸ್ಟ್ರೀಟ್‍ಗೆ ವಾಹನಗಳು ನೋ ಎಂಟ್ರಿ

    – ಮಾಲಿನ್ಯ ತಡೆಯಲು ಕ್ರಮ

    ಬೆಂಗಳೂರು: ವೀಕೆಂಡ್ ನಲ್ಲಿ ಸಿಲಿಕಾನ್ ಸಿಟಿಯ ಹೈಫೈ ಏರಿಯಾಗೆ ಹೋಗುವ ಮುನ್ನ ಯೋಚಿಸಿ, ಚರ್ಚ್ ಸ್ಟ್ರೀಟ್ ನಲ್ಲಿ ಇನ್ನು ವೀಕೆಂಡ್ ವೆಹಿಕಲ್ಸ್ ನಿಷೇಧ ಮಾಡಲಾಗಿದೆ. ಹೀಗಾಗಿ ಇನ್ಮುಂದೆ ವಿಕೇಂಡ್ ಬಂತೆಂದು ಚರ್ಚ್ ಸ್ಟ್ರೀಟ್ ಕಡೆಗೆ ಗಾಡಿ ತಗೋಂಡು ಜಾಲಿ ರೌಂಡ್ ಹೋಗಲು ಆಗಲ್ಲ.

    ಇಂದಿನಿಂದ ಫೆಬ್ರವರಿ 28ರ ವರೆಗೆ ಚರ್ಚ್ ಸ್ಟ್ರೀಟ್ ಕ್ಲೀನ್ ಏರ್ ಸ್ಟ್ರೀಟ್ ಎಂದು ಘೊಷಿಸಲಾಗಿದ್ದು, ಭಾರತದ ಮೊದಲ ಸ್ವಚ್ಛ ವಾಯು ಸ್ಟ್ರೀಟ್ ಚರ್ಚ್ ಸ್ಟ್ರೀಟ್ ಫಸ್ಟ್- ಟೆಸ್ಟ್ ಬೆಡ್ ಗೆ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕಾಲ್ನಡಿಗೆಯಲ್ಲಿ ತೆರಳುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾಯು ಮಾಲಿನ್ಯ ಕಡಿಮೆ ಮಾಡಲು ಹೊಸ ಪ್ರಯೋಗ ಮಾಡಲಾಗುತ್ತಿದ್ದು, ಭೂ ಸಾರಿಗೆ ನಿರ್ದೇಶನಾಲಯ, ಡಲ್ಟ್(ಡೈರೆಕ್ಟರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‍ಪೋರ್ಟ್) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ರೂಪಿಸಲಾಗಿದೆ. ಅಲ್ಲದೆ ಚರ್ಚ್ ಸ್ಟ್ರೀಟ್ ನಲ್ಲಿ ಯುರೋಪ್ ಮಾದರಿಯನ್ನು ಅಳವಡಿಕೆ ಮಾಡಲಾಗುತ್ತದೆಯಂತೆ.

    ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ಚಾಲನೆ ನೀಡಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಾತ್ ನೀಡಿದ್ದಾರೆ. ಚರ್ಚ್ ಸ್ಟ್ರೀಟ್ ನ ರಸ್ತೆಗಳನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದ್ದು, ಭಾರತದ ಮೊದಲ ಸ್ವಚ್ಛ ವಾಯು ಬೀದಿ(ಕ್ಲೀನ್ ಏರ್ ಸ್ಟ್ರೀಟ್) ಎಂದಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿ ವೀಕೆಂಡ್ ನಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವಾರದಲ್ಲಿ ಎರಡು ದಿನ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸ್ವಚ್ಛ ಗಾಳಿ, ನೀರು ಪ್ರತಿಯೊಬ್ಬರ ಹಕ್ಕು. ಸೈಕಲ್ ಹೆಚ್ಚು ಉಪಯೋಗಿಸಿ, ನಡಿಯಿರಿ ಎಂದು ಸಿಎಂ ಸಲಹೆ ನೀಡಿದ್ದಾರೆ.

    ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಶನಿವಾರ ಹಾಗೂ ಭಾನುವಾರ ಎರಡು ದಿನ ಚರ್ಚ್ ಸ್ಟ್ರೀಟ್ ನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಎರಡು ದಿನ ಈ ರಸ್ತೆಯಲ್ಲಿ ವಾಯುಮಾಲಿನ್ಯದ ಪ್ರಮಾಣ ಅಳೆಯಲಾಗುತ್ತೆದೆ. ನಂತರದ ದಿನಗಳಲ್ಲಿ ಹೆಚ್ಚಿನ ದಿನಗಳನ್ನು ವಿಸ್ತರಿಸುವ ಕುರಿತು ಚಿಂತಿಸಲಾಗುತ್ತದೆ. ಇದು ಮೊದಲ ಹಂತ, ನಂತರ ಬೇರೆ ಪ್ರದೇಶಗಳಲ್ಲಿ ವಿಸ್ತರಿಸಲು ಆಲೋಚನೆ ನಡೆಸಲಾಗುತ್ತಿದೆ ಎಂದರು.

  • ರಾತ್ರಿ ಸುರಿದ ಮಳೆಗೆ ಕೋರಮಂಗಲ ರಸ್ತೆ ಜಲಾವೃತ- ಅಂಡರ್ ಪಾಸ್‍ಗಳಲ್ಲಿ ತುಂಬಿದ ನೀರು

    ರಾತ್ರಿ ಸುರಿದ ಮಳೆಗೆ ಕೋರಮಂಗಲ ರಸ್ತೆ ಜಲಾವೃತ- ಅಂಡರ್ ಪಾಸ್‍ಗಳಲ್ಲಿ ತುಂಬಿದ ನೀರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಜನ ಕಂಗಾಲಾಗಿದ್ದು, ಕೋರಮಂಗಲ ಸೇರಿದಂತೆ ಹಲವೆಡೆಗಳಲ್ಲಿ ರಸ್ತೆ ಜಲಾವೃತವಾಗಿದ್ದು, ಅಂಡರ್ ಪಾಸ್‍ಗಳು ತುಂಬಿ ತುಳುಕುತ್ತಿದ್ದವು.

    ರಾತ್ರಿ ಬಿಟ್ಟು ಬಿಡದೆ ಮಳೆ ಸುರಿದಿದ್ದು, ಮೆಜೆಸ್ಟಿಕ್, ಕೋರಮಂಗಲ, ಯಶವಂತಪುರ, ನಂದಿನಿ ಲೇಔಟ್, ಬಸವನಗುಡಿ, ಕೆ.ಆರ್. ಮಾರ್ಕೆಟ್ ಸೇರಿದಂತೆ ವಿವಿಧ ಭಾಗಗಳಲ್ಲಿ ವರುಣ ಅಬ್ಬರಿಸಿದ್ದಾನೆ. ರಾತ್ರಿ ಒಂದೇ ಸಮ ಸುರಿದ ಮಳೆಗೆ ಕೊರಮಂಗಲ ರಸ್ತೆ ಜಲಾವೃತವಾಗಿತ್ತು. ಗುರುವಾರ ಸಂಜೆಯಿಂದಲೇ ಆರಂಭವಾದ ತುಂತುರು ಮಳೆ ಬಿಟ್ಟು ಬಿಡದೆ ಸುರಿದಿದೆ. ಇದರಿಂದಾಗಿ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

    ಮಳೆಗೆ ಕೋರಮಂಗಲದ ಪಾಸ್ ಪೋರ್ಟ್ ರಸ್ತೆ ಜಲಾವೃತವಾಗಿತ್ತು. ಇನ್ನೂ ಹಲವೆಡೆ ಅಂಡರ್ ಪಾಸ್ ಹಾಗೂ ರಸ್ತೆಗಳು ನೀರಿನಿಂದ ತುಂಬಿದ್ದವು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಹಲವರಿಗೆ ಕಿರಿ ಕಿರಿಯುಂಟಾಯಿತು. ಸ್ವಲ್ಪ ಪ್ರಮಾಣದ ಟ್ರಾಫಿಕ್ ಜಾಮ್ ಸಹ ಸಂಭವಿಸಿತು.

  • ಮಳೆ ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ ಟ್ರಾಫಿಕ್ ಪೊಲೀಸ್

    ಮಳೆ ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ ಟ್ರಾಫಿಕ್ ಪೊಲೀಸ್

    ಹುಬ್ಬಳ್ಳಿ: ಮಳೆಯನ್ನ ಲೆಕ್ಕಿಸದೇ ಕೆಲಸ ನಿರ್ವಹಿಸಿದ ಟ್ರಾಫಿಕ್ ಪೊಲೀಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಶಂಬು ರೆಡ್ಡಿ ಮಳೆಯ ನಡುವೆ ಕರ್ತವ್ಯ ಪಾಲನೆ ಮಾಡಿದ ಟ್ರಾಫಿಕ್ ಪೊಲೀಸ್. ಹುಬ್ಬಳ್ಳಿ ನಗರದ ಚಿಟಗುಪ್ಪಿ ಆಸ್ಪತ್ರೆಯ ಸರ್ಕಲ್ ನಲ್ಲಿ ಕಾರ್ ಮತ್ತು ಟಿಪ್ಪರ್ ನಡುವೆ ಅಪಘಾತ ಉಂಟಾಗಿದ್ದರಿಂದ ಸ್ಥಳದಲ್ಲಿ ಟ್ರಾಫಿಕ್ ಆಗಿತ್ತು. ಜೋರು ಮಳೆ ಸುರಿಯುತ್ತಿದ್ದರೂ ಶಂಬು ರೆಡ್ಡಿ ಟ್ರಾಫಿಕ್ ಕ್ಲಿಯರ್ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

    ಶಂಬು ರೆಡ್ಡಿ ಕೇಶ್ವಾಪುರ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಂಬು ಅವರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

  • ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ನಿಷೇಧ ಸಾಧ್ಯತೆ

    ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ನಿಷೇಧ ಸಾಧ್ಯತೆ

    – ತೋಟಗಾರಿಕೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

    ಬೆಂಗಳೂರು: ಸಧ್ಯದಲ್ಲೇ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸುವ ಸಾಧ್ಯತೆ ಇದೆ.

    ಇಂದು ತೋಟಗಾರಿಕೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ವಾಹನ ಸಂಚಾರ ಸ್ಥಗಿತಕ್ಕೆ ತೀರ್ಮಾನ ಕೈಗೊಳ್ಳಲಾಗಿದ್ದು, ಅಧಿಕಾರಿಗಳ ಜೊತೆ ಸಭೆ ನಡೆಸಿದ ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ, ವಾಹನ ಸಂಚಾರ ನಿಷೇಧಿಸುವ ನಿರ್ಣಯವನ್ನು ಕೈಗೊಂಡರು. ಬಳಿಕ ಈ ಕುರಿತ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಳ್ಳಬೇಕು ಎಂದು ಸಚಿವ ನಾರಾಯಣಗೌಡ ತಿಳಿಸಿದರು.

    ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಎಂದು ಪರಿಸರ ಪ್ರೇಮಿಗಳಿಂದ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು ಸಭೆ ಕರೆದು ಚರ್ಚಿಸಲಾಗಿದೆ. ಈ ಹಿಂದೆ ಪ್ರತಿ ಭಾನುವಾರ, ಸರ್ಕಾರಿ ರಜಾದಿನಗಳಂದು ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ಸ್ಥಗಿತ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 8 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸಲು ನಿರ್ಣಯ ಕೈಗೊಳ್ಳಲಾಗಿದೆ.

    ಕಬ್ಬನ್ ಪಾರ್ಕ್‍ಗೆ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕಾಗಿ 4 ರಿಂದ 5 ಸಾವಿರ ಜನ ಬರುತ್ತಾರೆ. 5 ರಿಂದ 6 ಸಾವಿರ ಜನ ಪ್ರತಿ ನಿತ್ಯ ಪಾರ್ಕ್ ವೀಕ್ಷಣೆಗಾಗಿ ಬರುತ್ತಿದ್ದಾರೆ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕಬ್ಬನ್ ಉದ್ಯಾನವನದಲ್ಲಿ ವಾಹನ ಸಂಚಾರ ನಿಷೇಧಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿತ್ತು. ಜೂನ್ 30 ರಂದು ನಡೆದ ಸಭೆಯಲ್ಲಿ ಬಿಬಿಎಂಪಿ ನಿರ್ಧಾರ ತೆಗೆದುಕೊಂಡಿತ್ತು. ಜೂನ್ 3 ರಂದು ನಡೆದ ಭರವಸೆಗಳ ಸಮಿತಿ ಸಭೆಯಲ್ಲೂ ವಾಹನ ಸಂಚಾರ ನಿಷೇಧಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಸಚಿವರು ಸಹ ಇದೇ ನಿಲುವು ವ್ಯಕ್ತಪಡಿಸಿದ್ದಾರೆ.

  • ಕೊಡಗಿನಲ್ಲಿ ಧಾರಾಕಾರ ಮಳೆ – ಆ.31ರವರೆಗೆ ಭಾರೀ ವಾಹನ ಸಂಚಾರ ನಿಷೇಧ

    ಕೊಡಗಿನಲ್ಲಿ ಧಾರಾಕಾರ ಮಳೆ – ಆ.31ರವರೆಗೆ ಭಾರೀ ವಾಹನ ಸಂಚಾರ ನಿಷೇಧ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಧಿಕ ಮಳೆ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಓಡಾಟದ ಮೇಲಿನ ನಿಷೇಧವನ್ನು ಮುಂದುವರಿಸಲಾಗಿದೆ.

    ಆಗಸ್ಟ್ 31 ರವರೆಗೆ ಭಾರೀ ವಾಹನಗಳ ಓಡಾಟವನ್ನು ಮುಂದುವರಿಸಲಾಗಿದೆ. ಮಲ್ಟಿ ಆಕ್ಸಲ್ ಟ್ರಕ್, ಬುಲೆಟ್ ಟ್ಯಾಂಕರ್ಸ್ ಮತ್ತು ಕಂಟೈನರ್ ಲಾರಿ ಓಡಾಟವನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಮರಳು, ಮರದ ದಿಮ್ಮಿ ಸಾಗಣೆ ವಾಹನಗಳ ಸಂಚಾರವನ್ನು ಕೂಡ ನಿಷೇಧ ಮಾಡಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

    ಈ ಹಿಂದೆಯೇ ಜಿಲ್ಲೆಯಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಿಂದ ಆಗಸ್ಟ್ 10 ವರೆಗೆ ನಿಷೇಧಿಸಲಾಗಿತ್ತು. ಮರಳು, ಮರದ ದಿಮ್ಮಿ ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಈಗ ಮಳೆ ಜೋರಾದ ಹಿನ್ನೆಲೆಯಲ್ಲಿ ವಾಹನಗಳ ಓಡಾಟದ ಮೇಲಿನ ನಿಷೇಧವನ್ನು ಮುಂದುವರಿಸಲಾಗಿದೆ.

    ಕೊಡಗಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಸೋಮವಾರಪೇಟೆ ಒಂದರಲ್ಲೇ 600ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದ 5 ಟ್ರಾನ್ಸ್ ಫಾರ್ಮರ್‌ಗಳು ಹಾಗೂ ಮೂರು ಕಿಮೀ ಉದ್ದದ ವಿದ್ಯುತ್ ತಂತಿ ನಷ್ಟವಾಗಿದೆ. ಇತ್ತ ಮಹಾಮಳೆಗೆ ರೈತರ ಬೆಳೆಗಳು ಹಾನಿಯಾಗಿದ್ದು, ವಿರಾಜಪೇಟೆ ವಿಭಾಗದಲ್ಲಿ ಮೂರು ಕೋಟಿಗೂ ಅಧಿಕ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.