Tag: traffic jam

  • ಚಾರ್ಮಾಡಿ ಘಾಟಿಯಲ್ಲಿ ಫುಲ್ ಟ್ರಾಫಿಕ್- 3 ಕಿ.ಮೀ. ಸಾಲುಗಟ್ಟಿ ನಿಂತ ವಾಹನಗಳು

    ಚಾರ್ಮಾಡಿ ಘಾಟಿಯಲ್ಲಿ ಫುಲ್ ಟ್ರಾಫಿಕ್- 3 ಕಿ.ಮೀ. ಸಾಲುಗಟ್ಟಿ ನಿಂತ ವಾಹನಗಳು

    ಚಿಕ್ಕಮಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಎರಡೂ ಕಡೆಯಿಂದ ಹೊರಟ ನೂರಾರು ವಾಹನಗಳು ಗಂಟೆಗಟ್ಟಲೇ ಸುಮಾರು ಮೂರ್ನಾಲ್ಕು ಕಿ.ಮೀ. ಸಾಲುಗಟ್ಟಿ ನಿಂತು, ಟ್ರಾಫಿಕ್ ಜಾಮ್ ಆದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.

    ಎರಡು ಜಿಲ್ಲೆಯಿಂದ ಹೊರಟ ನೂರಾರು ವಾಹನಗಳಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿರಿದಾದ ರಸ್ತೆಯಲ್ಲಿ ಹೀಗೆ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿದ್ದರಿಂದ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾತ್ರದ ಲಾರಿ-ಬಸ್ಸುಗಳು ಸಂಚರಿಸಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಜಿಲ್ಲಾಡಳಿತದ ನಿರ್ಬಂಧದ ಮಧ್ಯೆಯೂ ಕಿರಿದಾದ ರಸ್ತೆಯಲ್ಲಿ ದೊಡ್ಡ ಲಾರಿ, ಬಸ್ಸುಗಳು ಸಂಚಾರ ನಡೆಸುತ್ತಿವೆ. ಹಾಗಾಗಿ, ಕೊಟ್ಟಿಗೆಹಾರದ ಆರಂಭದಿಂದ ಚಾರ್ಮಾಡಿ ಘಾಟ್‍ವರೆಗೂ ಸುಮಾರು ಮೂರ್ನಾಲ್ಕು ಕಿ.ಮೀ. ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು, ಪ್ರಯಾಣಿಕರು ಹೈರಾಣಾಗಿದ್ದಾರೆ.

    ಕಳೆದ ಏಳೆಂಟು ದಿನಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್ ರಸ್ತೆ ಸಣ್ಣದಾಗಿ ಕುಸಿದಿತ್ತು. ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಭಾರೀ ವಾಹನಗಳಿಗೆ ನಿಷೇಧ ಹೇರುವುದರ ಜೊತೆಗೆ ಸಂಜೆ 7 ರಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಇದರ ನಡುವೆ ಕೆಲ ದೊಡ್ಡ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡಿದ್ದಾರೆ.

  • 1023 ಕಾರು, 425 ಬೈಕ್, 46 ಮಿನಿ ಬಸ್- ಮುಳ್ಳಯ್ಯನಗಿರಿಯಲ್ಲಿ ಫುಲ್ ಟ್ರಾಫಿಕ್ ಜಾಮ್

    1023 ಕಾರು, 425 ಬೈಕ್, 46 ಮಿನಿ ಬಸ್- ಮುಳ್ಳಯ್ಯನಗಿರಿಯಲ್ಲಿ ಫುಲ್ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ವೀಕೆಂಡ್ ಹಿನ್ನೆಲೆ ಇಂದು ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದ ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೇವಲ ಮುಳ್ಳಯ್ಯನಗಿರಿಗಷ್ಟೇ ಸುಮಾರು ಆರು ಸಾವಿರಕ್ಕಿಂತ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು.

    1023 ಕಾರು, 425 ಬೈಕ್, 46 ಟಿಟಿ-ಮಿನಿ ಬಸ್‍ನಲ್ಲಿ ಸಾವಿರಾರು ಜನ ಮುಳ್ಳಯ್ಯಗಿರಿ ಭಾಗಕ್ಕೆ ಭೇಟಿ ನೀಡಿದ್ದರು. ಭಾರೀ ವಾಹನಗಳಿದ್ದ ಪರಿಣಾಮ ಮುಳ್ಳಯ್ಯನಗಿರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಳ್ಳಯ್ಯನಗಿರಿ ಭಾಗದಲ್ಲಿ ಇಡೀ ದಿನ ಆಗಾಗ್ಗೆ ಭಾರೀ ಮಳೆ ಸುರಿದಿದೆ. ಸಾವಿರಾರು ಪ್ರವಾಸಿಗರು ಮಳೆಯಲ್ಲಿ ಮಿಂದು ಪ್ರಕೃತಿ ಸೌಂದರ್ಯವನ್ನ ಸವಿದಿದ್ದಾರೆ.

    ಕೊರೊನಾ ಲಾಕ್‍ಡೌನ್ ಇದ್ದ ಕಾರಣ ಜಿಲ್ಲೆಯ ಪ್ರವಾಸಿ ತಾಣಗಳು, ದೇವಸ್ಥಾನಗಳು ಕಳೆದ ಎರಡ್ಮೂರು ತಿಂಗಳಿಂದ ಬಂದ್ ಆಗಿದ್ದವು. ಪ್ರವಾಸಿ ತಾಣಗಳಿಗೆ ನಿಷೇಧವಿದ್ದರೂ ದಿನನಿತ್ಯ ನೂರಾರು ಪ್ರವಾಸಿಗರು ಬಂದು, ಕೈಮರಾ ಚೆಕ್‍ಪೋಸ್ಟ್ ಸಿಬ್ಬಂದಿಗಳು ಬಿಡದಿದ್ದಾಗ ವಾಪಸ್ ಹೋಗುತ್ತಿದ್ದರು. ಹೊರ ಜಿಲ್ಲೆಗಳಿಂದಲೂ ಬಂದ ಪ್ರವಾಸಿಗರು ಗಿರಿಭಾಗದ ಬಾಗಿಲಿಗೆ ಬಂದು ಹಿಂದಿರುಗಿದ್ದರು. ಮುಳ್ಳಯ್ಯನಗಿರಿಯಲ್ಲಿ ಇಂದಿನ ಪ್ರವಾಸಿಗರನ್ನು ಕಂಡರೆ ಪ್ರವಾಸಿ ತಾಣಗಳು ಓಪನ್ ಆಗುವುದನ್ನೇ ಚಾತಕ ಪಕ್ಷಿಗಳಂತೆ ಪಕ್ಷಿಗಳಂತೆ ಕಾಯುತ್ತಿದ್ದರಾ ಎಂಬ ಅನುಮಾನ ವ್ಯಕ್ತವಾಗಿದೆ.

    ಅನ್‍ಲಾಕ್ ಬಳಿಕ ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ, ಗಾಳಿಕೆರೆ, ದೇವರಮನೆ ಗುಡ್ಡ ಭಾಗ ಸೇರಿದಂತೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ ಹಾಗೂ ಕಳಸ ಕಳಸೇಶ್ವರ ಸ್ವಾಮಿ ದೇಗುಲಕ್ಕೂ ಪ್ರವಾಸಿಗರು ಹಾಗೂ ಭಕ್ತರು ದಾಂಗುಡಿ ಇಡುತ್ತಿದ್ದಾರೆ. ಜಿಲ್ಲೆಗೆ ಈ ರೀತಿ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರೋದು ಜನರನ್ನ ಆತಂಕಕ್ಕೆ ದೂಡಿದೆ.

    ಕಳೆದೊಂದು ವಾರದಿಂದಲೂ ಜಿಲ್ಲೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇನ್ನು ವೀಕೆಂಡ್ ಹಿನ್ನೆಲೆ ಗಿರಿ ಭಾಗದ ಬಹುತೇಕ ಹೋಮ್ ಸ್ಟೇ, ರೆಸಾರ್ಟ್‍ಗಳು ಸಂಪೂರ್ಣ ಬುಕ್ ಆಗಿವೆ. ರೂಮ್ ನೀಡುವಂತೆ ಪ್ರವಾಸಿಗರು ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಮೇಲಿಂದ ಮೇಲೆ ಫೋನ್ ಮಾಡುತ್ತಿದ್ದಾರೆ. ಹೀಗೆ ಎಗ್ಗಿಲ್ಲದೆ ಬರುತ್ತಿರುವ ಪ್ರವಾಸಿಗರನ್ನ ಕಂಡು ಜಿಲ್ಲೆಯ ಜನ ಕೊರೊನಾ ಮತ್ತೆ ಹೆಚ್ಚಾಗುತ್ತಾ ಎಂಬ ಆತಂಕದಲ್ಲಿ ಬದುಕುತ್ತಿದ್ದಾರೆ.

  • ಬೆಂಗಳೂರಿನಲ್ಲಿ ವರುಣನ ಅಬ್ಬರ- ಭಾರೀ ಮಳೆಗೆ ಫುಲ್ ಟ್ರಾಫಿಕ್

    ಬೆಂಗಳೂರಿನಲ್ಲಿ ವರುಣನ ಅಬ್ಬರ- ಭಾರೀ ಮಳೆಗೆ ಫುಲ್ ಟ್ರಾಫಿಕ್

    ಬೆಂಗಳೂರು: ಸಿಲಿಕಾನ್ ಸಿಟಿಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿಯಿತು.

    ನಗರದ ಯಶವಂತಪುರ, ಶಾಂತಿನಗರ, ರಾಜಾಜಿನಗರ, ಮೆಜೆಸ್ಟಿಕ್, ಬನಶಂಕರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಮಳೆಯಿಂದ ವಾಹನ ಸವಾರರು ಕಂಗಾಲಾಗಿದ್ದು, ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಅಲ್ಲದೆ ಅಂಡರ್ ಪಾಸ್‍ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಡಿದರು.

    ದೀಢೀರ್ ಸುರಿದ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಸಂಪೂರ್ಣ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಕೆಲಸ ಮುಗಿಸಿ ಮನೆಗೆ ತೆರಳುವವವರು ಕೆಲವರು ಮಳೆಯಲ್ಲೇ ನೆನೆದರೆ, ಇನ್ನೂ ಅಂಗಡಿ ಮುಂಗಟ್ಟುಗಳ ಬಳಿ ಹಲವರು ಆಶ್ರಯ ಪಡೆದರು.

    ಆನೇಕಲ್ ತಾಲೂಕಿನಾದ್ಯಂತ ಸಹ ಮಳೆಯಾಗಿದ್ದು, ಆನೇಕಲ್ ಅತ್ತಿಬೆಲೆ ಎಲೆಕ್ಟ್ರಾನ್ ಸಿಟಿ ಬನ್ನೇರುಘಟ್ಟ ಭಾಗದಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರರು ಅಂಗಡಿ-ಮುಂಗಟ್ಟು ಮತ್ತು ಬಸ್ ನಿಲ್ದಾಣದ ಬಳಿ ಆಶ್ರಯ ಪಡೆದರು.

  • ಭಾರತ್ ಬಂದ್, ಟ್ರಾಫಿಕ್ ಜಾಮ್ – 2 ಕಿ.ಮೀ. ನಡೆದು ದೇಗುಲ ತಲುಪಿದ ವಧು

    ಭಾರತ್ ಬಂದ್, ಟ್ರಾಫಿಕ್ ಜಾಮ್ – 2 ಕಿ.ಮೀ. ನಡೆದು ದೇಗುಲ ತಲುಪಿದ ವಧು

    ಪಾಟ್ನಾ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಪರಿಣಾಮ ದೇಶದ ಬಹುತೇಕ ನಗರದಲ್ಲಿ ಅನ್ನದಾತರು ರಸ್ತೆಗೆ ಇಳಿದಿದ್ದರು. ಪ್ರತಿಭಟನೆಯಿಂದಾಗಿ ಹಲವೆಡೆ ಟ್ರಾಫಿಕ್ ಉಂಟಾಗಿದ್ದರಿಂದ ವಧು ಎರಡು ಕಿಲೋ ಮೀಟರ್ ನಡೆದುಕೊಂಡು ದೇವಸ್ಥಾನ ತಲುಪಿದ್ದಾಳೆ. ರಸ್ತೆಯಲ್ಲಿ ವಧು ಕುಟುಂಬಸ್ಥರ ಜೊತೆ ಹೋಗ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

    ಬಿಹಾರದ ಸಮಸ್ತಿಪುರದ ಪಟೇಲ್ ಮೈದಾನದ ಬಳಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಅಪಾರ ಪ್ರಮಾಣದ ಜನ ಸೇರಿದ್ದರಿಂದ ಪಟೇಲ್ ಮೈದಾನ, ಫ್ಲೈ ಓವರ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಲ ಧರಣಿ ನಿರತರು ರಸ್ತೆಯಲ್ಲಿ ಕುಳಿತಿದ್ದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು.

    ಇದೇ ಮಾರ್ಗವಾಗಿ ಮನ್ನಿಪುರ ದೇವಾಲಯಕ್ಕೆ ವಧು ಮತ್ತು ಆಕೆಯ ಕುಟುಂಬಸ್ಥರು ಹೊರಟಿದ್ದರು. ಮದುವೆ ಮುಂಚಿನ ಶಾಸ್ತ್ರ, ವಿಶೇಷ ಪೂಜೆಯನ್ನ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಆದ್ರೆ ಗಂಟೆಗಳೂ ಕಳೆದ್ರೂ ಟ್ರಾಫಿಕ್ ಕ್ಲಿಯರ್ ಆಗದ ಹಿನ್ನೆಲೆ ವಧುವಿನ ಜೊತೆ ಮೂವರು ಮಹಿಳೆಯರು ನಡೆದುಕೊಂಡು ಹೋಗಲು ತೀರ್ಮಾನಿಸಿದ್ದರು. ಅದರಂತೆ ವಾಹನದಿಂದ ಕೆಳಗಿಳಿದ ನಾಲ್ಕು ಜನರು ನಡೆದು ಹೋಗಿದ್ದಾರೆ.

    ಸುಮಾರು ಎರಡು ಕಿಲೋ ಮೀಟರ್ ನಡೆದ ಬಳಿಕ ಮಹಿಳೆಯರಿಗೆ ಆಟೋ ಸಿಕ್ಕಿದೆ. ಕೊನೆಗೆ ವಧುವನ್ನ ಆಟೋದಲ್ಲಿ ಕಳುಹಿಸಿ, ಉಳಿದವರು ನಡೆದುಕೊಡೇ ದೇವಸ್ಥಾನ ತಲುಪಿದ್ದಾರೆ.

  • ಬೆಂಗಳೂರಿನಲ್ಲಿ ನಾಳೆ ಬಾರುಕೋಲು ಚಳವಳಿ – ಎಲ್ಲೆಲ್ಲಿ ಟ್ರಾಫಿಕ್ ಜಾಮ್?

    ಬೆಂಗಳೂರಿನಲ್ಲಿ ನಾಳೆ ಬಾರುಕೋಲು ಚಳವಳಿ – ಎಲ್ಲೆಲ್ಲಿ ಟ್ರಾಫಿಕ್ ಜಾಮ್?

    ಬೆಂಗಳೂರು: ಇಂದು ಕಾವೇರಿದ್ದ ರೈತರ ಪ್ರತಿಭಟನೆ ನಾಳೆಯೂ ಬೆಂಗಳೂರಿನಲ್ಲಿ ಮುಂದುವರಿಯಲಿದೆ. ನಾಳೆ ಬೆಂಗಳೂರಿಗೆ ನೇಗಿಲ ಯೋಗಿಯ ಪ್ರತಿಭಟನೆಯ ಕಿಚ್ಚು ಬೆಂಗಳೂರಿಗೆ ತುಸು ಹೆಚ್ಚಾಗೇ ತಾಗಲಿದೆ.

    ಬುಧವಾರ 10 ಸಾವಿರ ಅನ್ನದಾತರು ಬಾರುಕೋಲು ಚಳವಳಿ ನಡೆಸಲಿದ್ದಾರೆ. ಸಿಟಿ ರೈಲ್ವೆ ನಿಲ್ದಾಣದಿಂದ ಬೃಹತ್ ರ‌್ಯಾಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಪ್ಲಾನ್ ಮಾಡಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕರವೇ ನಾರಾಯಣ ಗೌಡ ಬಣವೂ ರ‌್ಯಾಲಿ ನಡೆಸಲಿದೆ.

    ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿರುವ ನಾಳೆ ಬಾರುಕೋಲು ಚಳವಳಿಗೆ ಕಬ್ಬು ಬೆಳೆಗಾರರ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಬೆಂಬಲ ನೀಡದಿರಲು ತೀರ್ಮಾನಿಸಿದ್ದಾರೆ. ನಮಗೆ ಮಾಹಿತಿ ಇಲ್ಲ. ಯಾರು ಬೆಂಬಲ ಕೇಳಿಲ್ಲ ಎಂದಿದ್ದಾರೆ. ಯಾರು ಮಣ್ಣಿನ ಮಕ್ಕಳ ಹೋರಾಟದಿಂದ ನಾಳೆ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಂಭವ ಹೆಚ್ಚಿದೆ.

    ಎಲ್ಲೆಲ್ಲಿ ಟ್ರಾಫಿಕ್ ಜಾಮ್: ಸಿಟಿ ರೈಲ್ವೆ ಸ್ಟೇಷನ್, ಮೆಜೆಸ್ಟಿಕ್, ಗಾಂಧಿನಗರ, ಆನಂದ್‍ರಾವ್ ಸರ್ಕಲ್, ಮಲ್ಲೇಶ್ವರಂ, ಶೇಷಾದ್ರಿಪುರಂ, ಅರಮನೆ ರಸ್ತೆ, ಓಕಳೀಪುರಂ, ಕೆ.ಆರ್. ಸರ್ಕಲ್, ವಿಧಾನಸೌಧ, ರಾಜಭವನ ಆಸುಪಾಸು ಕಾರ್ಪೋರೇಷನ್ ಸುತ್ತಮುತ್ತ, ಕಬ್ಬನ್‍ಪಾರ್ಕ್ ಸುತ್ತಮುತ್ತ ಮತ್ತು ಮೈಸೂರು ಬ್ಯಾಂಕ್ ಬಳಿ ಬೆಳಗ್ಗೆ 10 ಗಂಟೆಯ ನಂತರ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿವೆ.

    ಪೊಲೀಸರ ಪ್ಲಾನ್: ರೈತರ ಪ್ರತಿಭಟನೆ ತಡೆಗೆ ಪೊಲೀಸರು ಪ್ಲಾನ್ ಸಿದ್ಧಪಡಿಸಿಕೊಂಡಿದ್ದಾರೆ. ವಿಧಾನಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಕಡೆ 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಹಾಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಮೌರ್ಯ ಸರ್ಕಲ್ ಫ್ಲೈಓವರ್, ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಪೊಲೀಸರ ಸರ್ಪಗಾವಲು ಇರಲಿದೆ. ವಿಧಾನಸೌಧದ ಸುತ್ತಮುತ್ತ ಕೂಡ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ.

  • ಉದ್ಯಾನ ನಗರಿಯಲ್ಲಿ ವರುಣನ ಅಬ್ಬರ- ವಾಹನ ಸವಾರರ ಪರದಾಟ

    ಉದ್ಯಾನ ನಗರಿಯಲ್ಲಿ ವರುಣನ ಅಬ್ಬರ- ವಾಹನ ಸವಾರರ ಪರದಾಟ

    ಬೆಂಗಳೂರು: ಉದ್ಯಾನ ನಗರಿಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ.

    ನಗರದ ಸದಾಶಿವನಗರ, ಮೇಕ್ರಿ ಸರ್ಕಲ್, ಸಂಜಯನಗರ, ಜೆ.ಸಿ.ನಗರ, ಆರ್.ಟಿ ನಗರ, ಯಶವಂತಪುರ, ನಂದಿನಿ ಲೇಔಟ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಒಂದೇ ಸಮನೆ ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರು ಪರದಾಡಿದರೆ. ಹಲವೆಡೆ ಟ್ರಾಫಿಕ್ ಜಾಮ್‍ನಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಇನ್ನೂ ಹಲವೆಡೆ ರಸ್ತೆಗಳ ಅಂಡರ್ ಪಾಸ್‍ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಹರಸಾಹಸಪಡುವಂತಾಯಿತು.

    ಆರಂಬದಲ್ಲಿ ಜಿಟಿಜಿಟಿ ಮಳೆ ಶುರುವಾಗಿದ್ದು, ನಂತರ ವೇಗ ಪಡೆದುಕೊಂಡು ಅಬ್ಬರಿಸಿ ಬೊಬ್ಬಿರಿಯಿತು. ಇದರಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿತು. ಕೆಲ ಹೊತ್ತು ವಾಹನ ಸವಾರರು ಪರದಾಡುವಂತಾಯಿತು.

    ಓಕಳಿಪುರಂ ಅಂಡರ್ ಪಾಸ್ ಬಳಿ ನಿಧಾನವಾಗಿ ನೀರು ಸಂಗ್ರವಾಗುತ್ತಿದ್ದು, ನೀರಿನಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಒಂದೆಡೆ ಮಳೆಯಲ್ಲಿ ನೆನೆಯುವ ಆತಂಕದಲ್ಲಿ ದ್ವಿಚಕ್ರ ವಾಹನ ಸವಾರರು ಸೇತುವೆ ಹಾಗೂ ಅಂಡರ್ ಪಾಸ್ ಕೆಳಗೆ ಆಶ್ರಯ ಪಡೆದರೆ, ಇನ್ನೂ ಹಲವೆಡೆ ಮಳೆಯಲ್ಲಿಯೇ ಜನ ಸಂಚರಿಸಿದರು. ಬೆಳಗ್ಗೆಯಿಂದ ಮೋಡವಿದ್ದರೂ ಮಳೆ ಸುರಿದಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನ ಪರದಾಡುವಂತಾಯಿತು.

  • ಉರುಳಿದ ಬೃಹತ್ ಮರ – ಉಡುಪಿಯಲ್ಲಿ 1 ಗಂಟೆ ಹೆದ್ದಾರಿ ಜಾಮ್

    ಉರುಳಿದ ಬೃಹತ್ ಮರ – ಉಡುಪಿಯಲ್ಲಿ 1 ಗಂಟೆ ಹೆದ್ದಾರಿ ಜಾಮ್

    ಉಡುಪಿ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಭೀಕರ ಚಂಡಮಾರುತ ಕರ್ನಾಟಕ ಕರಾವಳಿ ತೀರದಲ್ಲಿ ಭಾರಿ ಮಳೆ ಸುರಿಸಿದೆ. ಕಳೆದ ಮೂರು ದಿನಗಳಿಂದ ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 117 ಮಿಲಿ ಮೀಟರ್ ಮಳೆಯಾಗಿದೆ.

    ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 117 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು, 121 ಮಿಲಿಮೀಟರ್ ಮಳೆ ದಾಖಲಾಗಿದೆ. ಕುಂದಾಪುರ ತಾಲೂಕಿನಲ್ಲಿ 110, ಕಾರ್ಕಳದಲ್ಲಿ 110 ಮಿಲಿ ಮೀಟರ್ ಮಳೆ ಬಿದ್ದಿದೆ.

    ಈ ನಡುವೆ ಮಣಿಪಾಲ ಸಮೀಪದ ಪರ್ಕಳದಲ್ಲಿ ಮಳೆಗೆ ಭಾರೀ ಗಾತ್ರದ ಮರವೊಂದು ಧರೆಗುರುಳಿದೆ. ಸುಮಾರು ಒಂದು ಗಂಟೆ ಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ನಗರಸಭೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ಕೆಲವೆಡೆ ವಿದ್ಯುತ್ ಕಂಬಗಳಿಗೆ ಮರ ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸಮುದ್ರ ತಟದಲ್ಲಿ ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ನಾಡದೋಣಿ, ಆಳಸಮುದ್ರ ಮೀನುಗಾರರು ಕಡಲಿಗೆ ಇಳಿದಿಲ್ಲ.

  • ನೆಲಮಂಗಲ ಬಳಿ ಕಂಟೈನರ್ ಲಾರಿ ಪಲ್ಟಿ- ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ನೆಲಮಂಗಲ ಬಳಿ ಕಂಟೈನರ್ ಲಾರಿ ಪಲ್ಟಿ- ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ಬೃಹತ್ ಕಂಟೈನರ್ ಲಾರಿ ಪಲ್ಟಿಯಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಬಳಿ ನಡೆದಿದೆ.

    ನೆಲಮಂಗಲ ತಾಲೂಕಿನ ಎಡೆಹಳ್ಳಿ ಸಮೀಪ ಬೃಹತ್ ಕಂಟೈನರ್ ಲಾರಿಯೊಂದು ಪಲ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ವಾಹನ ಸವಾರರು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಸುಮಾರು 5 ಗಂಟೆ ಹೊತ್ತಿಗೆ ಕಂಟೈನರ್ ಪಲ್ಟಿಯಾಗಿದ್ದು, ಬರೋಬ್ಬರಿ 20 ನಿಮಿಷಗಳ ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು. ಇದರಿಂದಾಗಿ ನೂರಾರು ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು.

    ಕೈಗಾರಿಕಾ ಪ್ರದೇಶದಿಂದ ತುಮಕೂರು ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ಕಂಟೈನರ್ ಪಲ್ಟಿಯಾಗಿದೆ. ನಂತರ ಪೊಲೀಸರು ಆಗಮಿಸಿ ರಾಷ್ಟ್ರೀಯಲ್ಲಿ ಪಲ್ಟಿಯಾಗಿದ್ದ ಲಾರಿಯನ್ನು ಕ್ರೇನ್ ಮೂಲಕ ತೆರವುಗೊಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಹಾನಿ ಸಂಭವಿಸಿಲ್ಲ. ಲಾರಿ ಚಾಲಕ ಸಹ ಬಚಾವ್ ಆಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ- ರಾಷ್ಟ್ರೀಯ ಹೆದ್ದಾರಿ ಬಂದ್, ಟ್ರಾಫಿಕ್ ಜಾಮ್

    ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ- ರಾಷ್ಟ್ರೀಯ ಹೆದ್ದಾರಿ ಬಂದ್, ಟ್ರಾಫಿಕ್ ಜಾಮ್

    – ಮೈಸೂರಿನಲ್ಲಿ ಸಹ ಅಬ್ಬರಿಸಿದ ಮಳೆ

    ಹುಬ್ಬಳ್ಳಿ/ಮೈಸೂರು: ನಗರದಲ್ಲಿಂದು ಧಾರಾಕಾರವಾಗಿ ಮಳೆ ಸುರಿದಿದ್ದು, ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.

    ಭಾರೀ ಮಳೆಯಿಂದಾಗಿ ಹುಬ್ಬಳ್ಳಿಯ ಕುಂದಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ಸೇತುವೆ ಕಾಮಗಾರಿಯಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತು. ಮಳೆಯ ನೀರು ಹೆಚ್ಚು ಬಂದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಹುಬ್ಬಳ್ಳಿ- ಕುಂದಗೋಳ ರಸ್ತೆ ಹಾಗೂ ಹುಬ್ಬಳ್ಳಿ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಯಿತು.

    ನೂರಾರು ವಾಹನಗಳು ರಸ್ತೆಯಲ್ಲಿಯೇ ನಿಂತಿದ್ದವು. ರಸ್ತೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆದ ಬಳಿಕ ಟ್ರಾಫಿಕ್ ಜಾಮ್ ಸ್ವಲ್ಪ ತಗ್ಗಿತು. ಹೆದ್ದಾರಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವ ಪರಿಣಾಮ ಮಳೆ ನೀರಿನಿಂದ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಹೀಗಾಗಿ ಕೆಲ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಸವಾರರು ಪರದಾಡುವಂತಾಯಿತು. ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಸುರಿಯಿತು.

    ಇತ್ತ ಮೈಸೂರಿನಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು, ಸಂಜೆಯ ವೇಳೆಗೆ ದಿಢೀರ್ ಆರಂಭವಾದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಮಳೆ ನೀರು ರಸ್ತೆಗಳಲ್ಲಿ ಉಕ್ಕಿ ಹರಿಯಿತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ದಿಢೀರ್ ಮಳೆಗೆ ಮೈಸೂರು ಜನ ಹೈರಾಣಾಗಿದ್ದಾರೆ.

  • ನಂದಿಬೆಟ್ಟಕ್ಕೆ ಹೇರಿದ್ದ ನಿರ್ಬಂಧ ತೆರವು – ಇಂದು ಬೆಳಗ್ಗೆ 6 ಗಂಟೆಯಿಂದ್ಲೇ ಪ್ರವೇಶಕ್ಕೆ ಅವಕಾಶ

    ನಂದಿಬೆಟ್ಟಕ್ಕೆ ಹೇರಿದ್ದ ನಿರ್ಬಂಧ ತೆರವು – ಇಂದು ಬೆಳಗ್ಗೆ 6 ಗಂಟೆಯಿಂದ್ಲೇ ಪ್ರವೇಶಕ್ಕೆ ಅವಕಾಶ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಂದಿನಿಂದ ಬೆಳಗ್ಗೆ 6 ಗಂಟೆಯಿಂದಲೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಕೊರೊನಾ ಅನ್‍ಲಾಕ್ ಆದ ನಂತರ ಬೆಳಗ್ಗೆ 08 ಗಂಟೆಯ ನಂತರವಷ್ಟೇ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಅನುಮತಿ ಕಲ್ಪಿಸಲಾಗಿತ್ತು. ಆದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ಹೀಗಾಗಿ ಇಂದು ಬೆಳಗ್ಗೆ 06 ಗಂಟೆಯಿಂದಲೇ ನಂದಿಗಿರಿಧಾಮ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಭಾನುವಾರ ವೀಕೆಂಡ್ ಆದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಆಗಮಿಸಿದ್ದಾರೆ. ಆದರೆ ಅನ್‍ಲಾಕ್ ಆದ ಬಳಿಕ ಬೆಳಗ್ಗೆ 8 ಗಂಟೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಬೆಳ್ಳಂಬೆಳಗ್ಗ ಸೂರ್ಯೋದಯದ ಸವಿ ಸವಿಯೋಕೆ ಅಂತ ಮುಂಜಾನೆ 4-5 ಗಂಟೆಗೆ ಬಂದ ಪ್ರವಾಸಿಗರನ್ನ ಚೆಕ್ ಪೋಸ್ಟ್ ಬಳಿಯೇ ತಡೆಯಲಾಗಿತ್ತು. ಇದರಿಂದ ಕಿಲೋಮೀಟರ್‍ವರೆಗೂ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡಿದ್ದರು.

    ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ತಕ್ಷಣ ಎಚ್ಚೆತ್ತ ಇಲಾಖೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಮಯ ಬದಲಾವಣೆ ಮಾಡಿದ್ದು, ಪ್ರವಾಸಿಗರಿಗೆ ಬೆಳಗ್ಗೆ 6 ರಿಂದಲೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.