Tag: Traffic Cop

  • ಪರ್ಸ್ ತೆಗೆದು ತೋರ್ಸಿ ಹಣ ಕೊಡು ಎಂದ ಪೇದೆಯನ್ನ ಮನೆಗೆ ಕಳುಹಿಸಿದ ಅಧಿಕಾರಿಗಳು

    ಪರ್ಸ್ ತೆಗೆದು ತೋರ್ಸಿ ಹಣ ಕೊಡು ಎಂದ ಪೇದೆಯನ್ನ ಮನೆಗೆ ಕಳುಹಿಸಿದ ಅಧಿಕಾರಿಗಳು

    – ಪೇದೆಗೆ ಸಾಥ್ ಕೊಟ್ಟ ಎಎಸ್‍ಐ ಸಹ ಅಮಾನತು

    ದಾವಣಗೆರೆ: ಸವಾರರಿಂದ ಹಣ ಪೀಕುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್‍ಪಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ.

    ದಾವಣಗೆರೆ ದಕ್ಷಿಣ ಸಂಚಾರಿ ಠಾಣೆಯ ಮುಖ್ಯ ಪೇದೆ ರವಿ ಹಾಗೂ ಎಎಸ್‍ಐ ಜಯಣ್ಣ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಪೇದೆ ರವಿ ಹಣ ಪಡೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಎಸ್‍ಪಿ ಹನುಮಂತರಾಯ ಅವರು, ಪೇದೆ ರವಿ ಹಾಗೂ ಇದಕ್ಕೆ ಸಹಕಾರ ನೀಡಿದ್ದ ಎಎಸ್‍ಐ ಜಯಣ್ಣ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

    ನಗರದ ಬಿ.ಪಿ. ರಸ್ತೆಯಲ್ಲಿ ಪೇದೆ ರವಿ ಸಂಚಾರ ನಿಯಮ ಉಲ್ಲಂಘಿಸಿ ಸವಾರರಿಗೆ ದಂಡ ಹಾಕದೆ, ಹಣ ಪಡೆಯುತ್ತಿದ್ದರು. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

    ಸವಾರರು ಸರ್ ನಮ್ಮ ಬಳಿ ಹಣ ಇಲ್ಲ. ಇಷ್ಟೇ ಇರೋದು ದಯವಿಟ್ಟು ತೆಗೆದುಕೊಳ್ಳಿ ಎಂದಿದ್ದರು. ಪೇದೆ ರವಿ ಮಾತ್ರ ಇಷ್ಟು ಸಾಕಾಗಲ್ಲ, ಪರ್ಸ್ ಚೆಕ್ ಮಾಡು, ತೋರಿಸು. ಹಣ ಇದೆ ಅಲ್ವಾ ಕೊಡು ಎಂದು ಪೀಡಿಸುವ ಮೂಲಕ ಸಾರ್ವಜನಿಕವಾಗಿ ಹಣ ಪಡೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಮುಖ್ಯ ಪೇದೆ ರವಿ ಪ್ರತಿನಿತ್ಯ ಇದೇ ರೀತಿ ಸವಾರರಿಂದ ಹಣ ವಸೂಲಿ ಮಾಡುತ್ತಾರೆ. ಹಣ ಪಡೆದಿದ್ದಕ್ಕೆ ಯಾವುದೇ ರಶೀದಿ ಸಹ ನೀಡಲ್ಲ. ದಂಡಕ್ಕೆ ರಶೀದಿ ಕೇಳಿದರೆ ಸಬೂಬು ಹೇಳಿ ಸವಾರರು ಕಳುಹಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಸೂಕ್ತ ದಾಖಲೆಗಳು ಇರಲಿಲ್ಲ. ಆದರೆ ಇತ್ತೀಚೆಗೆ ವೈರಲ್ ಆದ ವಿಡಿಯೋಯಿಂದ ಪೇದೆ ರವಿ ಸಿಕ್ಕಿ ಹಾಕಿಕೊಂಡಿದ್ದರು. ಬಳಿಕ ಅವರನ್ನು ವಿಚಾರಣೆ ನಡೆಸಿದಾಗ ಎಎಸ್‍ಐ ಜಯಣ್ಣ ಸಾಥ್ ನೀಡಿರುವುದು ತಿಳಿಸದು ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಎಸ್‍ಪಿ ಹನುಮಂತರಾಯ ಅವರು ಅಮಾನತು ಮಾಡಿದ್ದಾರೆ.