Tag: TradeWar

  • ಚುನಾವಣಾ ಸಮಯದಲ್ಲೇ ಮೋದಿಗೆ ಶಾಕ್ ಕೊಟ್ಟ ಟ್ರಂಪ್!

    ಚುನಾವಣಾ ಸಮಯದಲ್ಲೇ ಮೋದಿಗೆ ಶಾಕ್ ಕೊಟ್ಟ ಟ್ರಂಪ್!

    ವಾಷಿಂಗ್ಟನ್: ಇನ್ನು ಮುಂದೆ ಆದ್ಯತೆಯ ಮೇರೆಗೆ ವಹಿವಾಟು ನಡೆಸುತ್ತೇವೆ ಎಂದು ಹೇಳುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಆರಂಭಿಸಿ, ಚುನಾವಣಾ ಸಮಯದಲ್ಲೇ ಪ್ರಧಾನಿ ಮೋದಿಗೆ ಶಾಕ್ ಕೊಟ್ಟಿದ್ದಾರೆ.

    ಪ್ರಾಶಸ್ತ್ಯಗಳ ಸಾಮಾನ್ಯ ವ್ಯವಸ್ಥೆ (ಜಿಎಸ್‍ಪಿ) ಅಡಿಯಲ್ಲಿ ಭಾರತದಿಂದ ಆಮದಾಗುವ ವಸ್ತುಗಳಿಗೆ ಅಮೆರಿಕ ತೆರಿಗೆಯಿಂದ ವಿನಾಯಿತಿ ನೀಡಿತ್ತು. ಈಗ ಭಾರತ ಮತ್ತು ಟರ್ಕಿ ದೇಶಕ್ಕೆ ನೀಡಿದ್ದ ಶೂನ್ಯ ವ್ಯಾಪಾರ ವಿನಾಯಿತಿಯನ್ನು ನಿಲ್ಲಿಸುತ್ತೇವೆ ಎಂದು ಟ್ರಂಪ್ ಗುಡುಗಿದ್ದಾರೆ.

     

    ಕಡಿಮೆ ತೆರಿಗೆ ಮತ್ತು ಮಾರುಕಟ್ಟೆ ಸ್ನೇಹಿ ಪರಿಸರವನ್ನು ಅಮೆರಿಕದ ಕಂಪನಿಗಳಿಗೆ ನೀಡುತ್ತೇವೆ ಎಂದು ಭಾರತ ಭರವಸೆ ನೀಡಿತ್ತು. ಆದರೆ ಈ ಭರವಸೆಯನ್ನು ಭಾರತ ಈಡೇರಿಸುತ್ತಿಲ್ಲ. ನಮ್ಮಿಂದ ಸಾಕಷ್ಟು ಲಾಭ ಮಾಡುಕೊಳ್ಳುತ್ತಿದೆಯಾದರೂ ನಮ್ಮ ಕಂಪನಿಯ ಉತ್ಪನ್ನಗಳಿಗೆ ಭಾರೀ ತೆರಿಗೆಯನ್ನು ವಿಧಿಸುತ್ತಿದೆ. ಅಷ್ಟೇ ಅಲ್ಲದೇ ಸುಲಭ ವ್ಯವಹಾರ ಮಾಡಲು ಪೂರಕ ವಾತಾವರಣವನ್ನು ನಿರ್ಮಿಸುತ್ತಿಲ್ಲ ಎಂದು ಎಂದು ಟ್ರಂಪ್ ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಪತ್ರ ಮುಖೇನ ಮಾತನಾಡಿದ್ದಾರೆ.

    ತನ್ನಿಂದ ಪೂರಕ ವಾಣಿಜ್ಯ ವಹಿವಾಟು ಬಯಸುವ ರಾಷ್ಟ್ರಗಳಿಂದ ಆಮದಾಗುವ ವಸ್ತುಗಳಿಗೆ ಅಮೆರಿಕ ತೆರಿಗೆ ವಿನಾಯಿತಿಯನ್ನು ನೀಡಿದೆ. ಭಾರತದ ಅಟೋ ಬಿಡಿ ಭಾಗಗಳು, ಕೈಗಾರಿಕಾ ಸಲಕರಣೆಗಳು, ಟೆಕ್ಸ್ ಟೈಲ್ ಸಾಮಾಗ್ರಿಗಳು ಸೇರಿದಂತೆ ಸುಮಾರು 2 ಸಾವಿರ ವಸ್ತುಗಳಿಗೆ ಅಮೆರಿಕ ತೆರಿಗೆ ವಿನಾಯಿತಿಯನ್ನು ನೀಡಿದೆ.

     

    ಪೂರಕ ವಾಣಿಜ್ಯ ವಹಿವಾಟು ಬಯಸುವ ರಾಷ್ಟ್ರಗಳು ತನ್ನ ದೇಶದ ಉತ್ಪನ್ನಗಳಿಗೆ ತೆರಿಗೆ ರಹಿತ, ವಿನಾಯಿತಿ ಮತ್ತು ಕೆಲ ಕ್ಷೇತ್ರಗಳಲ್ಲಿ ತೆರಿಗೆ ರಿಯಾಯಿತಿ ನೀಡಬೇಕು ಎಂದು ಅಮೆರಿಕ ಷರತ್ತು ವಿಧಿಸಿದೆ. ಆದರೆ ಭಾರತ ಮತ್ತು ಟರ್ಕಿ ವಿಚಾರದಲ್ಲಿ ಇದು ಸಾಧ್ಯವಾಗಿಲ್ಲ. ಅಮೆರಿಕ ಕಾಂಗ್ರೆಸ್ ಮಾನದಂಡಗಳನ್ನು ತಲುಪಲು ಈ ದೇಶಗಳು ವಿಫಲವಾಗಿದೆ ಎಂದು ಟ್ರಂಪ್ ದೂರಿದ್ದಾರೆ.

    ಅಮೆರಿಕದಿಂದ ಜಿಎಸ್‍ಪಿ ಅಡಿಯಲ್ಲಿ ಅತಿ ಹೆಚ್ಚು ಲಾಭವನ್ನು ಭಾರತ ಪಡೆದುಕೊಳ್ಳುತ್ತಿದೆ. ಜನವರಿಯಲ್ಲಿ ಪ್ರಕಟವಾದ ಅಮರಿಕದ ಕಾಂಗ್ರೆಸ್ ರಿಸರ್ಚ್ ಸರ್ವಿಸ್ ವರದಿಯ ಪ್ರಕಾರ 2017 ರಲ್ಲಿ ಭಾರತ 5.7 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ. ಜಿಎಸ್‍ಪಿ ಅಡಿಯಲ್ಲಿ ಅತಿ ಹೆಚ್ಚು ರಫ್ತು ಪಡೆಯುವ ರಾಷ್ಟ್ರಗಳ ಪೈಕಿ ಟರ್ಕಿ ಐದನೇಯ ಸ್ಥಾನದಲ್ಲಿದ್ದು, 2017 ರಲ್ಲಿ ಒಟ್ಟು 1.7 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ.

    ಭಾರತದ ಮೇಲೆ ಸಿಟ್ಟು ಯಾಕೆ?
    ಫ್ಲಿಪ್ ಕಾರ್ಟ್ ಕಂಪನಿಯನ್ನು ಅಮರಿಕದ ವಾಲ್‍ಮಾರ್ಟ್ ಖರೀದಿಸಿದ ಬಳಿಕ ಕೇಂದ್ರ ಸರ್ಕಾರ ಈ ಕಾಮರ್ಸ್ ವಹಿವಾಟಿನಲ್ಲಿ ಕೆಲ ನಿಯಮಗಳನ್ನು ಬಿಗಿಗೊಳಿಸಿದೆ. ಇದರಿಂದ ವಾಲ್‍ಮಾರ್ಟ್ ಗೆ ಭಾರೀ ಹೊಡೆತ ಬಿದ್ದಿದೆ. ಭಾರತದಲ್ಲಿ ಈ ಬೆಳವಣಿಗೆಯಾದ ಕೂಡಲೇ ಅಮೆರಿಕ ಭಾರತದ ಜಿಎಸ್‍ಪಿ ಬಗ್ಗೆ ಮಾತನಾಡಲು ಆರಂಭಿಸಿತು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾದ ಮೂಲಕ ರುಪೇ ಕಾರ್ಡನ್ನು ಭಾರತದಾದ್ಯಂತ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತನಗೆ ಭಾರೀ ನಷ್ಟವಾಗುತ್ತಿದೆ ಎಂದು ಮಾಸ್ಟರ್ ಕಾರ್ಡ್ ಅಮೆರಿಕ ಸರ್ಕಾರಕ್ಕೆ ದೂರು ನೀಡಿತ್ತು. ಈ ಎಲ್ಲ ಕಾರಣಗಳನ್ನು ಮುಂದಿಟ್ಟು ಟ್ರಂಪ್ ಈಗ ವ್ಯಾಪಾರ ಸಮರ ಆರಂಭಿಸಲು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಮಾಸ್ಟರ್ ಕಾರ್ಡ್ ದೂರು ನೀಡಿದ್ದು ಯಾಕೆ? ಮಾರುಕಟ್ಟೆಯಲ್ಲಿ ಹೊಡೆತ ಬಿದ್ದಿದ್ದು ಹೇಗೆ?

    ಯಾರಿಗೆ ಹೊಡೆತ ಬೀಳುತ್ತೆ?
    ಒಂದು ವೇಳೆ ಅಮೆರಿಕ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿದರೆ ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಪೆಟ್ಟು ಬೀಳಲಿದೆ. ಅದರಲ್ಲೂ ಮುಖ್ಯವಾಗಿ ಕೈಮಗ್ಗ ಮತ್ತು ಕೃಷಿ ಉತ್ಪನ್ನಗಳ ಮೇಲೆ ಹೆಚ್ಚು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv