Tag: traders

  • ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

    ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

    ಬೆಂಗಳೂರು: ವಿಶ್ವದಲ್ಲೇ ಅತಿದೊಡ್ಡ ಆನ್‌ಲೈನ್ ಪೇಮೆಂಟ್ (Online Payment) ಕೀರ್ತಿ ಭಾರತದ್ದು. ಪ್ರಧಾನಿ ಮೋದಿ ಕನಸಿನ ಯೋಜನೆ ಡಿಜಿಟಲ್ ಇಂಡಿಯಾದ ಯುಪಿಐ (UPI) ಪೇಮೆಂಟ್‌ಗೆ ವಿಘ್ನ ಎದುರಾಗಿದೆ. ಬೇಕರಿ, ಟೀ-ಕ್ಯಾಂಡಿಮೆಂಟ್ಸ್, ತರಕಾರಿ, ಬೀಡ, ಹೂವಿನ ಅಂಗಡಿ, ಹಾಲು ಮಾರೋವ್ರು, ಡಾಬಾದವರು. ಹೀಗೆ.. ಎಲ್ಲರಿಗೂ ಯುಪಿಐ ವಹಿವಾಟು ಆಧರಿಸಿ ಲಕ್ಷಲಕ್ಷ ಟ್ಯಾಕ್ಸ್ (Tax) ಕಟ್ಟುವಂತೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

    ಈ ನೋಟಿಸ್, ಟ್ಯಾಕ್ಸ್ ಟಾರ್ಚರ್‌ಗೆ ಹೈರಾಣಾಗಿರೋ ವರ್ತಕರು, ನಮಗೆ ಯುಪಿಐ.. ಆನ್‌ಲೈನ್ ಪೇಮೆಂಟ್ ಸಹವಾಸವೇ ಬೇಡ… ಕೇವಲ ಕ್ಯಾಶ್ ಇದ್ದರೆ ಕೊಡಿ ಅಂತ ಗ್ರಾಹಕರಿಗೆ ಮನವಿ ಮಾಡ್ತಿದ್ದಾರೆ. ತಮ್ಮ ಅಂಗಡಿಗಳಿಗೆ ಅಂಟಿಸಿರೋ ಯುಪಿಐ ಕ್ಯೂಆರ್ ಕೋಡ್ ಸ್ಟಿಕ್ಕರ್‌ಗಳನ್ನು ತೆಗೆಯುತ್ತಿದ್ದಾರೆ. ಕಮ್ಮನಹಳ್ಳಿ, ಮಾರತಹಳ್ಳಿ ಭಾಗದ ಬೇಕರಿಗಳಲ್ಲಿ `ಕ್ಯಾಶ್ ಓನ್ಲಿ’ ಅಂತ ಬೋರ್ಡನ್ನೇ ಹಾಕಿಬಿಟ್ಟಿದ್ದಾರೆ. ಹೀಗಾಗಿ ಜಿಎಸ್‌ಟಿ ಟ್ಯಾಕ್ಸ್‌ ಅನ್ನು ಕಂಪ್ಲೀಟ್ ಮನ್ನಾ ಮಾಡಿ ಅಂತ ಅಂಗಡಿ ಮಾಲೀಕರು ಮನವಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ಜಿಎಸ್‌ಟಿ ಕೌನ್ಸಿಲ್, ಕೇಂದ್ರ ಸರ್ಕಾರ, ಸಿಎಂಗೂ ಕೂಡ ಪತ್ರ ಬರೆದಿದ್ದಾರೆ.

    ಇದೆಲ್ಲದರ ಮಧ್ಯೆ, ಜುಲೈ- 23ರಿಂದ 2 ದಿನಗಳ ಕಾಲ ಹಾಲು, ಸಿಗರೇಟು ಮಾರಾಟ, ಕಾಂಡಿಮೆಂಟ್ಸ್, ಬೇಕರಿ ಬಂದ್ ಮಾಡಲಿದ್ದಾರೆ. ಜುಲೈ 25 ರಂದು ರಾಜ್ಯಾದ್ಯಂತ ಅಂಗಡಿ ಬಂದ್ ಮಾಡಿ ಕುಟುಂಬ ಸಮೇತ ಪ್ರತಿಭಟನೆಗೆ ನಿರ್ಧರಿಸಿರೋ ಕಾರ್ಮಿಕ ಪರಿಷತ್ ನಂತರ ಕೋರ್ಟ್ ಮೊರೆ ಹೋಗಲೂ ಸಜ್ಜಾಗ್ತಿದೆ.

    ಯುಪಿಐ ಪೇಮೆಂಟ್ ಗೊಂದಲ ಏನು..?
    * ವಾರ್ಷಿಕವಾಗಿ 20 ಲಕ್ಷದಿಂದ 40 ಲಕ್ಷ ರೂ. ವಹಿವಾಟು ಮಾಡಿದವರಿಗೆ ನೊಟೀಸ್
    * ಬಡ್ಡಿ ಸಮೇತ 1 ಕೋಟಿಯಿಂದ ಹಿಡಿದು, 60, 30, 20 ಲಕ್ಷ ರೂ. ವರೆಗೆ ಜಿಎಸ್‌ಟಿ ಕಟ್ಟೋಕೆ ನೋಟಿಸ್
    * ಜಿಎಸ್‌ಟಿ ಕಟ್ಟದೇ ಹೋದರೆ ಅಕೌಂಟ್ ಫ್ರೀಜ್ ಮಾಡುವ ಎಚ್ಚರಿಕೆ
    * ತೆರಿಗೆ ವಿನಾಯಿತಿ ಪಡೆದ ತರಕಾರಿ, ಹಣ್ಣಿನ ಅಂಗಡಿಗೂ ಟ್ಯಾಕ್ಸ್ ನೋಟಿಸ್

    ಯಾರಿಗೆ ಟ್ಯಾಕ್ಸ್.. ಯಾರಿಗಿಲ್ಲ..?
    * ಸರಕು ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 40 ಲಕ್ಷ ರೂ. ಮೀರಿದ್ರೆ ಜಿಎಸ್‌ಟಿ ನೋಂದಣಿ ಕಡ್ಡಾಯ
    * ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 20 ಲಕ್ಷ ರೂ. ಮೀರಿದ್ರೆ ಜಿಎಸ್‌ಟಿ ನೋಂದಣಿ ಕಡ್ಡಾಯ
    * ತರಕಾರಿ, ಹಣ್ಣು ಯಾವುದೇ ತೆರಿಗೆ ವ್ಯಾಪ್ತಿಗೆ ಬರಲ್ಲ
    * ಹಾಲು, ಮೊಸರು, ಬ್ರೆಡ್‌ಗೆ ಟ್ಯಾಕ್ಸ್ ಇರಲ್ಲ
    * ಕುರುಕಲು ತಿಂಡಿಗೆ 5% ರಷ್ಟು ಟ್ಯಾಕ್ಸ್

    ಅಧಿಕಾರಿಗಳ ಎಡವಟ್ಟೇನು?
    – ವಿನಾಯಿತಿ ಇದ್ದರೂ ಹಾಲು, ತರಕಾರಿ ಅಂಗಡಿಗೂ ಟ್ಯಾಕ್ಸ್ ನೋಟಿಸ್
    – ವಿನಾಯಿತಿ ಸರಕುಗಳ ಬಿಲ್ ನೀಡಿದ್ರೆ ವಿನಾಯಿತಿ ನೀಡುವ ಸಬೂಬು
    – ಜಾಗೃತಿ ಮೂಡಿಸಿ ಜಿಎಸ್‌ಟಿ ನೋಂದಣಿ ಮಾಡಿಸದೇ ಲಕ್ಷ ಲಕ್ಷ ಟ್ಯಾಕ್ಸ್ ಕಟ್ಟುವಂತೆ ನೊಟೀಸ್
    – ಅಧಿಕಾರಿಗಳ ನೋಟಿಸ್ ಎಡವಟ್ಟಿಗೆ ಹೆದರಿದ ಸಣ್ಣ ವ್ಯಾಪಾರಿಗಳು
    – ಯುಪಿಐ ಪೇಮೆಂಟ್‌ಗೆ ನಿರಾಕರಿಸಿ, ಕ್ಯಾಶ್ ಮೊರೆ ಹೋಗಲು ಇವರೇ ಕಾರಣ

    ವರ್ತಕರ ಎಡವಟ್ಟೇನು..?
    * ವರ್ತಕರಲ್ಲಿ ಜಿಎಸ್‌ಟಿ ಅರಿವಿನ ಕೊರತೆ ಇರೋದು ನಿಜ
    * ಆದರೆ, ಜಿಎಸ್‌ಟಿ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಬೇಕಿತ್ತು
    * ಡಿಜಿಟಲ್ ಪೇಮೆಂಟ್‌ನ ಪ್ರತಿ ಮಾಹಿತಿ ಅಧಿಕಾರಿಗಳಿಗೆ ಗೊತ್ತಾಗುತ್ತೆ ಅನ್ನೋದು ಗೊತ್ತು
    * ವಾರ್ಷಿಕ ವಹಿವಾಟು ನಿಯಮಾವಳಿಗಿಂತ ಹೆಚ್ಚಿದ್ದರೂ ಜಿಎಸ್‌ಟಿ ನೋಂದಣಿ ಮಾಡಿಸಿಲ್ಲ
    * ರಿಯಾಯಿತಿ ಪಡೆಯಲು ನಮ್ಮ ಬಳಿ ಬಿಲ್‌ಗಳಿಲ್ಲ ಎನ್ನುತ್ತಿರುವ ವರ್ತಕರು

    ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌
    ಯುಪಿಐ ಪೇಮೆಂಟ್ ಗೊಂದಲದ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ ಬಳಿಕ ವಾಣಿಜ್ಯ ತೆರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಯುಪಿಐ ನಿಲ್ಲಿಸಿ ಕ್ಯಾಶ್ ರೂಪದಲ್ಲಿ ಹಣ ಸ್ವೀಕರಿಸೋದು ಗಮನಕ್ಕೆ ಬಂದಿದೆ. ವ್ಯಾಪಾರಿಗಳು ಯಾವ ರೀತಿ ವಹಿವಾಟು ನಡೆಸಿದ್ರೂ ಜಿಎಸ್‌ಟಿ ಕಾಯ್ದೆಯಡಿ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಅಂತ ಎಚ್ಚರಿಕೆ ರವಾನಿಸಿದೆ. ಅಲ್ಲದೆ, ನೋಟಿಸ್ ಕೊಟ್ಟಿರೋ ವಿಚಾರಕ್ಕೆ ಮತ್ತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನೋಟಿಸ್ ಬಂದಿರುವ ವರ್ತಕರು ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ನೀಡಿ ವಿವರಣೆ ನೀಡಬೇಕೆಂದು ತಿಳಿಸಿದೆ.

    ವಾಣಿಜ್ಯ ತೆರಿಗೆ ಇಲಾಖೆ ಹೇಳಿದ್ದೇನು..?
    * ವರ್ತಕರು ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ಜೊತೆ ವಿವರಣೆ ನೀಡಬೇಕು
    * ತೆರಿಗೆ ಇರುವ ಸರಕಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತೆ
    * ತೆರಿಗೆ ವಿನಾಯಿತಿ ಇರುವ ಸರಕು ಸೇವೆಗಳನ್ನು ಕೈಬಿಡಲಾಗುತ್ತದೆ
    * ರಾಜಿ ತೆರಿಗೆ ಪದ್ಧತಿ ಅನ್ನುವ ಉತ್ತಮ ಆಯ್ಕೆ ಇದೆ.
    * ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇರುವ ವ್ಯಾಪಾರಿಗಳು ಜಿಎಸ್‌ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು.
    * ಈ ಪದ್ಧತಿಯಡಿ ಶೇ.0.5ರಷ್ಟು ಎಸ್‌ಜಿಎಸ್‌ಟಿ (ಸ್ಟೇಟ್) ಮತ್ತು ಶೇ.0.5ರಷ್ಟು ಸಿಜಿಎಸ್‌ಟಿ (ಸೆಂಟ್ರಲ್) ಪಾವತಿಸಬೇಕು. ಒಟ್ಟು 1% ನಷ್ಟು ತೆರಿಗೆ ಇದೆ.
    * ರಾಜ್ಯದಲ್ಲಿ ಈಗಾಗಲೇ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ
    * ವಾರ್ಷಿಕ ವಹಿವಾಟು ಮಿತಿ ಮೀರಿದ್ದರೂ ನೋಂದಣಿ ಮಾಡಿಸಿಕೊಳ್ಳದ ವರ್ತಕರಿಗೆ ಮಾತ್ರ ಈಗ ನೋಟಿಸ್

  • ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    – ಹಣ್ಣು, ತರಕಾರಿ ವ್ಯಾಪಾರಿಗೆ 1 ಕೋಟಿ ರೂ. ಟ್ಯಾಕ್ಸ್‌, ನೋಟಿಸ್‌ ಕಂಡು ಹೌಹಾರಿದ ವ್ಯಕ್ತಿ

    ಬೆಂಗಳೂರು: ಬಡವರು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳೋಣ ಅಂತ ಕನಸು ಹೊಂದಿರುತ್ತಾರೆ. ಅದಕ್ಕಂತಲೇ ಬೇಕರಿ, ಕಾಂಡಿಮೆಂಟ್ಸ್, ಟೀ-ಕಾಫಿ, ತರಕಾರಿ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ಜಿಎಸ್‌ಟಿ (GST) ಗುನ್ನಾ ಕೊಟ್ಟಿದೆ.

    ಸಣ್ಣ-ಪುಟ್ಟ ಅಂಗಡಿಗಳು ಅಂದಮೇಲೆ ಅಲ್ಲಿ ಫೋನ್ ಪೇ, ಗೂಗಲ್ ಪೇ.. ಆನ್‌ಲೈನ್ ಪೇಮೆಂಟ್ ಮೋಡ್ ಇದ್ದೇ ಇರುತ್ತೆ, ವ್ಯಾಪಾರಿಗಳಿಗೂ ಆನ್‌ಲೈನ್ ಪೇಮೆಂಟ್ ಸ್ವೀಕರಿಸೋದು ಕಾಮನ್ ಆಗೋಗಿದೆ. ಆದ್ರೆ, ಅವ್ರು ಇದೆಂದೂ ಕಂಡಿರದ, ಕೇಳಿರದ ಶಾಕ್‌ಗೆ ಅಂಗಡಿ ಮಾಲೀಕರು (Traders) ಒಳಗಾಗಿದ್ದಾರೆ. ಆನ್ ಲೈನ್ ಪೇಮೆಂಟ್ ನೋಡಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 40 ರಿಂದ 60 ಲಕ್ಷ ರೂ. 1 ಕೋಟಿವರೆಗೂ ದಂಡ ವಿಧಿಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

    ವ್ಯಾಪಾರಸ್ಥರು ಗರಂ
    ಇನ್ನೂ ವಾಣಿಜ್ಯ ತೆರಿಗೆ ಇಲಾಖೆ ಕಳಿಸಿರೋ ನೋಟಿಸ್‌ಗೆ ವ್ಯಾಪಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. `ನಮ್ ಕಿಡ್ನಿ ಮಾರಿ.. ಅಂಗಡಿ ಅಡವಿಟ್ರು ಈ ದಂಡ ಕಟ್ಟೋಕೆ ಆಗಲ್ಲ’.. ಸಣ್ಣ-ಪುಟ್ಟ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ʻಪಬ್ಲಿಕ್ ಟಿವಿʼ ಬಳಿ ಅಳಲು ತೋಡಿಕೊಂಡಿದ್ದಾರೆ. ಅದರಂತೆ ರಾಜೇಂದ್ರ ಶೆಟ್ಟಿ, ಇವ್ರು ದೂರದ ಕುಂದಾಪುರದಿಂದ ಜೀವನ ಸಾಗಿಸಲು ಬೆಂಗಳೂರು ಸೇರಿ ಅನೇಕ ವರ್ಷಗಳೇ ಕಳೆದಿದೆ, ಕೆಂಗೇರಿಯಲ್ಲಿ ಕಾಂಡಿಮೆಂಟ್ಸ್ ಮಾಡಿಕೊಂಡು ಸಂಸಾರದ ಬಂಡಿದೂಡ್ತಿದ್ದಾರೆ. ಇವ್ರಿಗೆ 2021 ರಿಂದ ಇಲ್ಲಿವರೆಗೆ ಒಟ್ಟು 67 ಲಕ್ಷ ಟ್ಯಾಕ್ಸ್ ಬಾಕಿ ಇದೆ ಅಂತಾ ನೋಟಿಸ್ ನೀಡಿದ್ದಾರೆ. ಟ್ಯಾಕ್ಸ್ ಕಟ್ಟೋದಕ್ಕೆ ಹೇಗೆ ಆಗುತ್ತೆ ಬೇಕಾದ್ರೇ ನಮ್ಮನ್ನ ಸಾಯಿಸಿ ಅಂತ ಕಣ್ಣೀರಿಟ್ಟಿದ್ದಾರೆ.

    ಬನ್ನೇರುಘಟದಲ್ಲಿ ತರಕಾರಿ-ಹಣ್ಣಿನ ವ್ಯಾಪಾರಿ ವೀರಮಾದ ಮಾತನಾಡಿ, ಆನ್‌ಲೈನ್ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆ ವಾಣಿಜ್ಯ ತೆರಿಗೆ ಇಲಾಖೆಯವ್ರು ನೋಟಿಸ್ ನೀಡಿದ್ದು, ಬರೋಬ್ಬರಿ 1 ಕೋಟಿ 30 ಲಕ್ಷ ಹಣ ಕಟ್ಟುವಂತೆ ತಿಳಿಸಿದ್ದಾರೆ. ಇದರಿಂದ ಅಂಗಡಿ ಮಾಲೀಕ ಹೌಹಾರಿರಿದ್ದಾರೆ.

    ಬೇಕರಿ ವ್ಯಾಪಾರಿ ರಾಜೇಂದ್ರ ಪೂಜಾರಿ ಅನ್ನೋರು ಮಾತನಾಡಿ, ನಮಗೂ 33 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ನಾವು ಕಾಫಿ, ಟೀ-ಸಿಗರೇಟ್ ಮಾರಿಕೊಂಡಿರೋರು, ನಮ್ಮ ಅಂಗಡಿಯ ವ್ಯಾಲ್ಯೂನೇ 3 ಲಕ್ಷ ಆಗೋದಿಲ್ಲ. 33 ಲಕ್ಷ ಎಲ್ಲಿಂದ ತಂದು ಕೊಟ್ಟದಕ್ಕೆ ಆಗುತ್ತೆ? ನಾವು ಟ್ಯಾಕ್ಸ್ ಪೇ ಮಾಡೋದಕ್ಕೆ ಆಗೋಲ್ಲ, ದಯಾಮರಣ ಮಾಡಿಕೊಳ್ಳಬೇಕು ಅಷ್ಟೇ ಅಂತ ಗೋಳಾಡಿದ್ದಾರೆ.

    ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ
    ಇದೇ ವಿಚಾರವಾಗಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಿಂದ ಸ್ಪಷ್ಟೀಕರಣ ನೀಡಲಾಗಿದೆ. ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ, ವಾರ್ಷಿಕ 40 ಲಕ್ಷ ವಹಿವಾಟು ಮೀರಿದರೆ ಜಿಎಸ್‌ಟಿ ಫಿಕ್ಸ್ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೇಕರಿಗಳಲ್ಲಿ ಬ್ರೆಡ್ ಮೇಲೆ ಜಿಎಸ್‌ಟಿ ಇಲ್ಲ, ಬ್ರೆಡ್ ಹೊರತುಪಡಿಸಿ ಕುರುಕಲು ತಿಂಡಿಗಳಿಗೆ 5% ಜಿಎಸ್‌ಟಿ, ಯುಪಿಐ ಮೂಲಕ 40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿರುವ ವರ್ತಕರಿಗೆ ನೋಟಿಸ್ ನೀಡಿರೋ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

  • ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ – ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ

    ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ – ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ

    – ಪೋರ್ಟಲ್‌ನಲ್ಲಿ ದಾಸ್ತಾನು ಮಾಹಿತಿ ನಮೂದಿಸಲು ನಿರ್ದೇಶನ

    ನವದೆಹಲಿ: ಕೇಂದ್ರ ಸರ್ಕಾರ ಗೋಧಿ (Wheat) ದಾಸ್ತಾನು ಮೇಲೆ ನಿಗಾ ವಹಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವರ್ತಕರು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಗೋಧಿ ದಾಸ್ತಾನು ವಿವರ ದಾಖಲಿಸಬೇಕು ಎಂದು ಕೇಂದ್ರ ಆಹಾರ ಇಲಾಖೆ (Central Food Department) ಸೂಚನೆ ನೀಡಿದೆ.

    ದೇಶದಲ್ಲಿ ಆಹಾರ ಭದ್ರತೆ ಕಲ್ಪಿಸಲು ಮತ್ತು ಅಪಪ್ರಚಾರದ ಊಹಾಪೋಹಗಳನ್ನು ತಡೆಗಟ್ಟುವ ಸಲುವಾಗಿ ಈ ಪಾರದರ್ಶಕ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪಾರಿಗಳು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ವರ್ತಕರು ಮತ್ತು ಸಂಸ್ಕರಣಾಕಾರರು ಏಪ್ರಿಲ್‌ 1ರಿಂದ ಗೋಧಿ ದಾಸ್ತಾನು ಘೋಷಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಇದನ್ನೂ ಓದಿ: ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಮೆದುವಾಗಿಸಲು ಕೆಮಿಕಲ್ ಬಳಕೆ, ಕ್ಯಾನ್ಸರ್‌ಗೆ ಕಾರಣ!

    ಕೇಂದ್ರ ಸರ್ಕಾರ ಎಲ್ಲಾ ವರ್ಗದ ಘಟಕಗಳಿಗೆ ಗೋಧಿ ದಾಸ್ತಾನು ಮಿತಿಯನ್ನು ಇದೇ ಮಾರ್ಚ್‌ 31ಕ್ಕೆ ಅಂತ್ಯಗೊಳಿಸಲಿದ್ದು, ನಂತರ ಹೊಸದಾಗಿ ಪೋರ್ಟಲ್‌ನಲ್ಲಿ ಗೋಧಿ ದಾಸ್ತಾನು ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು. ಪೋರ್ಟಲ್‌ನಲ್ಲಿ ಇನ್ನೂ ನೋಂದಣಿ ಮಾಡಿಕೊಳ್ಳದ ಘಟಕಗಳು ತ್ವರಿತವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಶುಕ್ರವಾರ ಗೋಧಿ ದಾಸ್ತಾನು ಬಗ್ಗೆ ಮಾಹಿತಿ ದಾಖಲಿಸಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಮಹಾನಗರ ಪಾಲಿಕೆಯ ಗಾರ್ಬೇಜ್ ರೀತಿ ರಾಜ್ಯ ಸರ್ಕಾರದ ಆಡಳಿತ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಪೋರ್ಟಲ್‌: https://evegoils.nic.in/wsp/login ಈ ಪೋರ್ಟಲ್‌ ಅಲ್ಲಿ ಪ್ರಸ್ತುತ ಗೋಧಿ ದಾಸ್ತಾನು ಸ್ಥಿತಿಯನ್ನು ಘೋಷಿಸಬೇಕು ಹಾಗೂ ಮುಂದಿನ ಆದೇಶದವರೆಗೆ ಪ್ರತಿ ಶುಕ್ರವಾರ ಮಾಹಿತಿ ನವೀಕರಿಸಬೇಕು. ಎಲ್ಲಾ ಘಟಕಗಳು ಪೋರ್ಟಲ್‌ನಲ್ಲಿ ನಿಯಮಿತವಾಗಿ ಮತ್ತು ಸರಿಯಾಗಿ ದಾಸ್ತಾನು ಬಹಿರಂಗಪಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್‌

  • ಅಂತರ್ ರಾಜ್ಯ ವರ್ತಕರ ಹಾವಳಿ | ಸ್ಥಳೀಯ ವ್ಯಾಪಾರಿಗಳ ಆಕ್ರೋಶ – ಡಿ.16ಕ್ಕೆ ಬೀಳಗಿ ಬಂದ್‌ಗೆ ಕರೆ

    ಅಂತರ್ ರಾಜ್ಯ ವರ್ತಕರ ಹಾವಳಿ | ಸ್ಥಳೀಯ ವ್ಯಾಪಾರಿಗಳ ಆಕ್ರೋಶ – ಡಿ.16ಕ್ಕೆ ಬೀಳಗಿ ಬಂದ್‌ಗೆ ಕರೆ

    ಬಾಗಲಕೋಟೆ: ಅನ್ಯ ರಾಜ್ಯದ ವರ್ತಕರ  ಹಾವಳಿ ತಡೆಯಲು ಹಾಗೂ ಅವರಿಗೆ ನಿರ್ಬಂಧ ಹೇರಲು ಆಗ್ರಹಿಸಿ ಸ್ಥಳೀಯ ವ್ಯಾಪಾರಸ್ಥರು ಸೋಮವಾರ ಬಾಗಲಕೋಟೆ (Bagalkote) ಜಿಲ್ಲೆಯ ಬೀಳಗಿ (Bilagi) ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ.

    ಬೀಳಗಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ಥಳೀಯ ವ್ಯಾಪಾರಸ್ಥರು, ಬೀಳಗಿ ಪಟ್ಟಣದಲ್ಲಿ ಬೇರೆ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿ, ಎಲ್ಲ ರೀತಿಯ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳ ವ್ಯವಹಾರಕ್ಕೆ ಸಮಸ್ಯೆ ಆಗುತ್ತಿದೆ. ಬಂದ್ ಕರೆಗೆ ಸ್ಥಳೀಯ ವ್ಯಾಪಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

    ಮುಖಂಡ ಪ್ರವೀಣ್ ಗೌಡ ಪಾಟೀಲ್ ಮಾತನಾಡಿ, ಬೀಳಗಿ ಪಟ್ಟಣ ಹಿಂದುಳಿದ ತಾಲೂಕಾಗಿದ್ದು, ಪಟ್ಟಣದಲ್ಲಿ ಬಟ್ಟೆ, ಮೊಬೈಲ್ , ಹೋಟೆಲ್, ಕಿರಾಣಿ ಅಂಗಡಿ, ಹಾರ್ಡ್‌ವೇರ್‌, ಸ್ಟೀಲ್‌ ಸೇರಿದಂತೆ ಬಹುತೇಕ ಅಂಗಡಿಗಳನ್ನು ಅನ್ಯ ರಾಜ್ಯದವರೇ ಆಕ್ರಮಿಸಿದ್ದಾರೆ ಎಂದು ದೂರಿದರು.

    ರಾಜಸ್ಥಾನ (Rajasthan) ಮತ್ತು ಕೇರಳದ (Kerala) ವ್ಯಾಪಾರಿಗಳು ಇಲ್ಲಿಗೆ ಬಂದು ಅತೀ ಹೆಚ್ಚು ಬಾಡಿಗೆ ಮತ್ತು ಡೆಪಾಸಿಟ್ ನೀಡಿ ಮಳಿಗೆಗಳನ್ನು ಪಡೆಯುತ್ತಾರೆ. ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳಿಗೆ ಪೆಟ್ಟು ಬೀಳುತ್ತಿದೆ. ಅಷ್ಟೇ ಅಲ್ಲದೇ ಸ್ಥಳೀಯರು ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸೋಮವಾರ ಬೀಳಗಿ ಕ್ರಾಸ್ ನಿಂದ ಬಸವೇಶ್ವರ ವೃತ್ತದವರೆಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳ ವ್ಯಾಪಾರ ವಹಿವಾಟು ಬಂದ್ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

     

  • ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ವ್ಯಾಪಾರಸ್ಥರಿಗೆ ಶಾಕ್ – ದರ ಏರಿಕೆ ಖಂಡಿಸಿ ಅಘೋಷಿತ ಬಂದ್

    ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ವ್ಯಾಪಾರಸ್ಥರಿಗೆ ಶಾಕ್ – ದರ ಏರಿಕೆ ಖಂಡಿಸಿ ಅಘೋಷಿತ ಬಂದ್

    ಬಳ್ಳಾರಿ: ಉಚಿತ ವಿದ್ಯುತ್‌ ಘೋಷಣೆ ಬೆನ್ನಲ್ಲೇ ವಿದ್ಯುತ್‌ ದರ ಏರಿಕೆ (Eceltricity Price Hike) ಖಂಡಿಸಿ ಬಳ್ಳಾರಿಯಲ್ಲಿ ವ್ಯಾಪಾರಸ್ಥರು (Traders) ಅಘೋಷಿತ ಬಂದ್‌ ಮಾಡಿದ್ದಾರೆ.

    ರಾಜ್ಯ ಸರ್ಕಾರದಿಂದ ಷರತ್ತುಗಳೊಂದಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕಳೆದ ಮೇ 12 ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆ ಮಾಡಿದೆ. ಇದರಿಂದ ರೊಚ್ಚಿಗೆದ್ದ ವರ್ತಕರು ಬೇಕಾಬಿಟ್ಟಿ ದರ ಏರಿಕೆ ಖಂಡಿಸಿ ಅಘೋಷಿತ ಬಂದ್‌ಗೆ ಮುಂದಾಗಿದ್ದಾರೆ. ಬಳ್ಳಾರಿಯ ಕಾಳಂಮ್ಮಾ ಸ್ಟ್ರೀಟ್‌ ಸಂಪೂರ್ಣವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ವರ್ತಕರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: KERC ದರ ಏರಿಸಿದ್ದಕ್ಕೆ ವಿದ್ಯುತ್‌ ಬಿಲ್‌ ಹೆಚ್ಚಾಗಿದೆ: ಬೆಸ್ಕಾಂ ಸ್ಪಷ್ಟನೆ

    ವಿದ್ಯುತ್‌ ಬಿಲ್‌ ಏರಿಕೆ ಸಂಬಂಧ ಬೆಸ್ಕಾಂ ನಿನ್ನೆಯಷ್ಟೇ ಸ್ಪಷ್ಟನೆ ನೀಡಿತ್ತು. ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆಯೇ ಕೆಇಆರ್‌ಸಿ ಆದೇಶದ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಗ್ರಾಹಕರು ಬಳಸುವ ಮೊದಲ 100 ಯೂನಿಟ್‌ ವಿದ್ಯುತ್‌ಗೆ ಪ್ರತಿ ಯೂನಿಟ್‌ ದರ 4.75 ರೂ. ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ ಬಳಸಿದ ಅಷ್ಟೂ ಯೂನಿಟ್‌ಗೆ 2ನೇ ಶ್ರೇಣಿ ದರ ಪ್ರತಿ ಯೂನಿಟ್‌ಗೆ 7 ರೂ. ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಉಚಿತ ಬಸ್‌ ಪ್ರಯಾಣದ ಮೊದಲ ಟಿಕೆಟ್‌ ಪಡೆದ ಅದೃಷ್ಟಶಾಲಿ ಮಹಿಳೆ ಇವರೇ..!

    ಈ ಮೊದಲು ಮೂರು ಶ್ರೇಣಿ ದರಗಳಲ್ಲಿ ಸಂಗ್ರಹಿಸಲಾಗುತ್ತಿತ್ತು. ಮೊದಲ 50 ಯೂನಿಟ್ ಗೆ 4.15 ರೂ., ನಂತರದ 50 ಯೂನಿಟ್ ಗೆ 5.6 ರೂ. ಹಾಗೂ 100 ಯೂನಿಟ್ ಮೀರಿದರೆ 7.15 ರೂ. ಸಂಗ್ರಹಿಸಲಾಗುತ್ತಿತ್ತು. ಇದೀಗ ಎರಡು ಶ್ರೇಣಿ ದರಗಳಲ್ಲಿ ಸಂಗ್ರಹಿಸಲು ಕೆಇಆರ್‌ಸಿ ಮೇ 12 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದರು.

  • ಕಾಲ್ ಮಾಡಿದ್ರೆ ಮನೆ ಬಾಗಿಲಿಗೆ ತಲುಪುತ್ತೆ ದಿನಸಿ, ತರಕಾರಿ – ತುಮಕೂರು ವರ್ತಕರಿಂದ ಹೊಸ ಆಫರ್

    ಕಾಲ್ ಮಾಡಿದ್ರೆ ಮನೆ ಬಾಗಿಲಿಗೆ ತಲುಪುತ್ತೆ ದಿನಸಿ, ತರಕಾರಿ – ತುಮಕೂರು ವರ್ತಕರಿಂದ ಹೊಸ ಆಫರ್

    ತುಮಕೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅತಿವೇಗವಾಗಿ ಹರಡುತ್ತಿದೆ. ಹೀಗಾಗಿ ತುಮಕೂರಿನಲ್ಲಿ ವರ್ತಕರು ಕೊರೊನಾ ವಿರುದ್ಧ ವಿಭಿನ್ನವಾಗಿ ಹೋರಾಟಕ್ಕಿಳಿದ್ದಿದ್ದಾರೆ. ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಜನಸಂದಣಿ ತಪ್ಪಿಸಲು ವ್ಯಾಪಾರಿಗಳು ಹೊಸ ಮಾರ್ಗ ಕಂಡು ಕೊಂಡಿದ್ದಾರೆ.

    ಬೀದಿ ವ್ಯಾಪಾರಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಕೊರೊನಾ ವಿರುದ್ಧ ಹೋರಾಟಕ್ಕೆ ಇಳಿದಿದ್ದು, ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿಗಳು ಸಣ್ಣ ಸೇವೆಯನ್ನ ಆರಂಭಿಸಿದ್ದಾರೆ. ಈಗ ಪಟ್ಟಣದ ನಿವಾಸಿಗಳು ಹೂ, ಹಣ್ಣು, ತರಕಾರಿಗೋಸ್ಕರ ಯಾವ ಮಾರ್ಕೆಟ್‍ಗೂ ಹೋಗುವಾಗಿಲ್ಲ. ಹೀಗಾಗಿ ನಮಗೆ ಒಂದೇ ಒಂದು ಕಾಲ್ ಮಾಡಿದರೆ ಸಾಕು ಅವರಿಗೇನು ಬೇಕೋ ಅದನ್ನೆಲ್ಲಾ ಅವರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ ಎಂದು ರಸ್ತೆ ಬದಿ ವ್ಯಾಪಾರಿ ರಮೇಶ್ ಹೇಳಿದ್ದಾರೆ.

    ಈ ಸೇವೆಯನ್ನ ತುರುವೇಕೆರೆ ಪಟ್ಟಣದಾದ್ಯಂತ ಮಾಡುತ್ತಿದ್ದು, ಸುಮಾರು 45 ರಿಂದ 50 ವ್ಯಾಪಾರಿಗಳು ತಮ್ಮ ತಮ್ಮ ನಂಬರ್‌ಗಳನ್ನ ಸಾರ್ವಜನಿಕರಿಗೆ ಕೊಟ್ಟಿದ್ದಾರೆ. ನಂತರ ಅವರು ಕರೆದಲ್ಲಿಗೆ, ಕೇಳಿದ್ದನ್ನ ತಲುಪಿಸುತ್ತಿದ್ದಾರೆ. ಇವರು ಶಿಪ್ಪಿಂಗ್ ಚಾರ್ಜ್ ಮಾಡಲ್ಲ. ಕೇವಲ ಆ ವಸ್ತುವಿನ ಬೆಲೆ ಎಷ್ಟಿದ್ಯೋ ಅದನ್ನ ಮಾತ್ರ ಪಡೆಯುತ್ತಾರೆ ಎಂದು ಗೃಹಿಣಿ ಶಾಂತಮ್ಮ ತಿಳಿಸಿದ್ದಾರೆ.

    ಈ ಸೇವೆಯನ್ನ ಪ್ರಾರಂಭ ಮಾಡಿ ಕೇವಲ ಒಂದು ದಿನ ಆಗಿದೆ. ಆಗಲೇ ಬೀದಿಬದಿ ವ್ಯಾಪಾರಿಗಳ ಕಾರ್ಯಕ್ಕೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಕೊರೊನಾ ನಿಯಂತ್ರಣ ಮಾಡಬಹುದು. ಅಲ್ಲದೇ ಜನರೂ ಕೂಡ ಇವರಿಗೆ ಸಹಕಾರ ನೀಡಬೇಕು ಎಂದು ಮಹಿಳೆಯರು ಹೇಳಿದ್ದಾರೆ.

  • ವ್ಯಾಪಾರಿಗಳ ಕಷ್ಟ ಆಲಿಸಿ, ಚೌಕಾಸಿ ಮಾಡದೇ ರಸ್ತೆ ಬದಿ ತರಕಾರಿ ಖರೀದಿಸಿದ ಸುಧಾಮೂರ್ತಿ

    ವ್ಯಾಪಾರಿಗಳ ಕಷ್ಟ ಆಲಿಸಿ, ಚೌಕಾಸಿ ಮಾಡದೇ ರಸ್ತೆ ಬದಿ ತರಕಾರಿ ಖರೀದಿಸಿದ ಸುಧಾಮೂರ್ತಿ

    ಬಾಗಲಕೋಟೆ: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು, ವ್ಯಾಪಾರಿಗಳ ಕಷ್ಟ ಆಲಿಸಿ, ಚೌಕಾಸಿ ಮಾಡದೆ ರಸ್ತೆ ಬದಿ ತರಕಾರಿ ಖರೀದಿಸಿ ಸರಳತೆ ತೋರಿದ್ದಾರೆ.

    ಭಾನುವಾರ ಮುಂಜಾನೆ ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಬಂದ ಸುಧಾಮೂರ್ತಿ ಅವರು, ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿ ಸಾಮಾನ್ಯರಂತೆ ಕೈಯಲ್ಲಿ ಚೀಲ ಹಿಡಿದು ತರಕಾರಿ ಕೊಂಡು ಸರಳತೆ ಮೆರೆದಿದ್ದಾರೆ.

    ಸುಧಾಮೂರ್ತಿಯವರು ಜಮಖಂಡಿ ತಾಲೂಕಿನಲ್ಲಿರುವ ತಮ್ಮ ಮನೆದೇವರು ಶೂರ್ಪಾಲಿಯ ಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಜಮಖಂಡಿಗೆ ಬಂದಿದ್ದರು. ಈ ವೇಳೆ ಜಮಖಂಡಿಯ ಕುಂಚನೂರು ರಸ್ತೆಯ ಕೆಎಚ್‍ಬಿ ಕಾಲೊನಿ ದಾನಮ್ಮನ ಗುಡಿಯಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಸುಧಾಮೂರ್ತಿಯವರು ಉಳಿದುಕೊಂಡಿದ್ದರು. ಈ ವೇಳೆ ಕೃಷ್ಣಾ ನದಿ ಪ್ರವಾಹದಿಂದ ಬಳಲಿದ್ದ ರೈತರನ್ನು ಮಾತನಾಡಿಸಲು ಸ್ವತಃ ಅವರೇ ಮಾರುಕಟ್ಟೆಗೆ ಬಂದಿದ್ದರು ಎನ್ನಲಾಗಿದೆ.

    ಭಾನುವಾರ ಮುಂಜಾನೆಯೇ ಎದ್ದು, ಕೈಯಲ್ಲಿ ಚೀಲವನ್ನು ಹಿಡಿದು ತರಕಾರಿಯನ್ನು ಖರೀದಿ ಮಾಡಿದ್ದಾರೆ. ಇದರ ಜೊತೆಗೆ ಅಲ್ಲಿನ ರಸ್ತೆಬದಿಯ ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿದ್ದಾರೆ. ನಂತರ ಅವರ ಬಳಿಯೇ ಚೌಕಸಿ ಮಾಡದೆ ತರಕಾರಿಯನ್ನು ಖರೀದಿಸಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

  • ಏಕಾಏಕಿ ಬನಶಂಕರಿ ದೇಗುಲದ ಬಳಿ ಇದ್ದ ಬೀದಿ ವ್ಯಾಪಾರಿಗಳ ಎತ್ತಂಗಡಿ!

    ಏಕಾಏಕಿ ಬನಶಂಕರಿ ದೇಗುಲದ ಬಳಿ ಇದ್ದ ಬೀದಿ ವ್ಯಾಪಾರಿಗಳ ಎತ್ತಂಗಡಿ!

    ಬೆಂಗಳೂರು: ಬನಶಂಕರಿ ದೇವಾಲಯ ನಗರದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದ್ದು, ಆದರೆ ಈಗ ದೇಗುಲದ ಮುಂದೆ ಅನೇಕ ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ಪೊಲೀಸರು ಎತ್ತಂಗಡಿ ಮಾಡಿದ್ದಾರೆ.

    ಪೊಲೀಸರು ಏಕಾಏಕಿ ಎತ್ತಂಗಡಿ ಮಾಡಿದ್ದಕ್ಕೆ ರೊಚ್ಚಿಗೆದ್ದ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಎತ್ತಂಗಡಿ ಮಾಡೋವಾಗ ವ್ಯಾಪಾರಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ದೇಗುಲದ ಅಧ್ಯಕ್ಷ ವೆಂಕಟೇಶ್ ಅವರೇ ಪೊಲೀಸರಿಗೆ ಹೇಳಿ ನಮ್ಮ ಹೊಟ್ಟೆ ಮೇಲೆ ಕಲ್ಲು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೀದಿಬದಿ ವ್ಯಾಪಾರಿಗಳು ಕಿಡಿಕಾರಿದ್ದಾರೆ.

    ಬೀದಿಬದಿ ವ್ಯಾಪಾರಸ್ಥರ ಆರೋಪವನ್ನ ತಳ್ಳಿ ಹಾಕಿದ ದೇಗುಲದ ಅಧ್ಯಕ್ಷ ವೆಂಕಟೇಶ್, ದೇವಸ್ಥಾನದ ಮುಂದೆ ಮೆಟ್ರೋ ಸ್ಟೇಷನ್ ಇದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಅಲ್ಲದೇ ವ್ಯಾಪಾರಸ್ಥರಿಂದ ಸ್ಥಳೀಯ ರೌಡಿಯೊಬ್ಬ ಹಣ ವಸೂಲಿ ಮಾಡುತ್ತಿದ್ದಕ್ಕೆ ಪೊಲೀಸರು ಎತ್ತಂಗಡಿ ಮಾಡಿದ್ದು, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬನಶಂಕರಿ ದೇವಸ್ಥಾನದ ಅಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.

    ದೇಗುಲದ ಆವರಣದಿಂದ ಎತ್ತಂಗಡಿ ಮಾಡಿಸಿದ್ದಕ್ಕೆ, ಬೀದಿವ್ಯಾಪಾರಿಗಳು ದೇಗುಲ ಅಧ್ಯಕ್ಷರ ಕಾರಿಗೆ ಮುತ್ತಿಗೆ ಹಾಕಿದ್ದರು. ಸುಮಾರು 30 ವರ್ಷಗಳಿಂದ ದೇಗುಲದ ಮುಂದೆಯೇ ವ್ಯಾಪಾರ ಮಾಡುತ್ತಿದ್ದ ಅವರು ಮುಂದೆ ಎಲ್ಲಿ ವ್ಯಾಪಾರ ಮಾಡೋದು ಅಂತ ಆತಂಕಕ್ಕಿಡಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೈ ಕಾರ್ಯಕರ್ತನ ಮೇಲೆ ಹಲ್ಲೆ- ಶಿವಾಜಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

    ಕೈ ಕಾರ್ಯಕರ್ತನ ಮೇಲೆ ಹಲ್ಲೆ- ಶಿವಾಜಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

    ಬೆಂಗಳೂರು: ಕಾರ್ಯಕರ್ತನ ಮೇಲೆ ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶಿವಾಜಿನಗರದಲ್ಲಿ ನಡೆದಿದೆ.

    ಚರ್ಚ್ ರಸ್ತೆಯಲ್ಲಿ ಸಂಚಾರ ಪೊಲೀಸರು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ತೆರವು ಕಾರ್ಯ ಮಾಡುತ್ತಿದ್ದರು. ಈ ವೇಳೆ  ಆ ಏರಿಯಾದ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಆಗಮಿಸಿ ವ್ಯಾಪಾರಸ್ಥರ ಪರವಾಗಿ ಮಾತನಾಡಿದ್ದಾರೆ.

    ಈ ಸಂದರ್ಭದಲ್ಲಿ ಪರಸ್ಪರ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಸಾದಿಕ್ ಎಂಬಾತನ ಮೇಲೆ ಪೊಲೀಸರು ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ಬಳಿಕ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಶಿವಾಜಿನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರು ಸಂಚಾರ ಪೊಲೀಸರು ಗಾಯಗೊಂಡಿದ್ದು ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ್ದಾರೆ. ಸದ್ಯಕ್ಕೆ ಪೊಲೀಸ್ ಠಾಣೆಯ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=IpETJy-IqIA