Tag: Trade War

  • ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ ಆರಂಭ – ಅಮೆರಿಕ, ಚೀನಾ ನಡುವೆ ಸುಂಕ ಕದನ

    ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ ಆರಂಭ – ಅಮೆರಿಕ, ಚೀನಾ ನಡುವೆ ಸುಂಕ ಕದನ

    ವಾಷಿಂಗ್ಟನ್‌/ ಬೀಜಿಂಗ್‌: ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ (Trade War) ಈಗ ಆರಂಭವಾಗಿದೆ. ಚೀನಾದ (China) ಮೇಲೆ ವಾಣಿಜ್ಯ ಯುದ್ಧ ಸಾರಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಇದೀಗ ಆ ದೇಶದ ಉತ್ಪನ್ನಗಳ ಮೇಲಿನ ಸುಂಕದ ಪ್ರಮಾಣವನ್ನು ದಿಢೀರ್ ಎಂದು ಡಬಲ್ ಮಾಡಿದ್ದಾರೆ.

    10% ಇದ್ದ ಸುಂಕವನ್ನು 20% ಏರಿಸಿದ್ದಾರೆ. ಫೆಂಟನಿಲ್ ಡ್ರಗ್ಸ್ (Drugs) ಅಕ್ರಮ ಸಾಗಣೆ ತಡೆಯುವಲ್ಲಿ ಚೀನಾ ವಿಫಲವಾಗಿದೆ ಎಂಬ ಕಾರಣ ನೀಡಿ ಟ್ರಂಪ್ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಟ್ರಂಪ್‌

    ಅಮೆರಿಕ (USA) ಸುಂಕ ಏರಿಸಿದ ಬೆನ್ನಲ್ಲೇ ಚೀನಾ ಸಹ ಅಮೆರಿಕದ ಉತ್ಪನ್ನಗಳ ಮೇಲೆ 10% ರಿಂದ 15% ರಷ್ಟು ಸುಂಕ ವಿಧಿಸುವುದಾಗಿ ಪ್ರಕಟಿಸಿದೆ. ಇದೇ ವೇಳೆ, ಐರೋಪ್ಯ ಒಕ್ಕೂಟದ ಜೊತೆಗಿನ ಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಚೀನಾ ಮುಂದಾಗಿದೆ. ಅಮೆರಿಕದ ಏಕಪಕ್ಷೀಯ ತೀರ್ಮಾನಗಳ ವಿರುದ್ಧ ಇಯು ಜೊತೆ ಕೆಲಸ ಮಾಡಲು ಸಿದ್ಧ ಇದ್ದೇವೆ ಎಂದು ಚೀನಾ ಘೋಷಿಸಿದೆ.

    ಕೆನಡಾ, ಮೆಕ್ಸಿಕೋ ಉತ್ಪನ್ನಗಳ ಮೇಲೆ ಟ್ರಂಪ್ ವಿಧಿಸಿದ್ದ 25% ಸುಂಕ ನೀತಿ ಇಂದಿನಿಂದ ಜಾರಿಯಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಮದ್ಯ, ಹಣ್ಣು ಸೇರಿ 107 ಬಿಲಿಯನ್ ಡಾಲರ್ ಉತ್ಪನ್ನಗಳ ಮೇಲೆ ಕೆನಡಾ ಸಹ 25% ಸುಂಕ ವಿಧಿಸಿದ್ದು, ಇಂದು ಸಂಜೆಯಿಂದ ಜಾರಿಗೆ ತಂದಿದೆ.

    ಸುಂಕದ ಯುದ್ಧದ ಪರಿಣಾಮ ವಿಶ್ವ ಮಾರುಕಟ್ಟೆ ಮೇಲಾಗಿದ್ದು ಷೇರು ಮಾರುಕಟ್ಟೆ ಪತನಗೊಂಡಿದೆ. ಸುಂಕದ ಹೆಸರಿನಲ್ಲಿ ಟ್ರಂಪ್ ಚೆಲ್ಲಾಟ ಆಡುತ್ತಿದ್ದಾರೆ ಎಂದು ದಿಗ್ಗಜ ಹೂಡಿಕೆದಾರ ವಾರೆನ್ ಬಫೆಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

     

  • ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

    ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

    ಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಚೀನಾಗೆ (China) ತಲೆನೋವು ತಂದಿದೆ. ಟ್ರಂಪ್ ಮತ್ತೆ ಅಧಿಕಾರಕ್ಕೆ ಮರಳಿರುವುದು ಇಡೀ ವಿಶ್ವದಲ್ಲಿ ರಾಜಕೀಯ ಮತ್ತು ಆರ್ಥಿಕ ಸಮೀಕರಣಗಳನ್ನು ಬದಲಿಸಿದೆ. ಇತರೆ ದೇಶಗಳೊಂದಿಗಿನ ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಬದಲಾವಣೆಯ ಸುಳಿಗಾಳಿ ಬೀಸಿದೆ. ‘ಅಮೆರಿಕ ಫಸ್ಟ್’ ಎಂಬುದು ಟ್ರಂಪ್ ಪಾಲಿಸಿ. ಇದು ಆರ್ಥಿಕವಾಗಿ ಪ್ರಬಲವಾಗಿರುವ ಇತರೆ ರಾಷ್ಟ್ರಗಳಿಗೆ ಪೆಟ್ಟು ನೀಡುವುದಂತೂ ಖಂಡಿತು. ಅದಕ್ಕಾಗಿ ನೂತನ ಅಮೆರಿಕ ಅಧ್ಯಕ್ಷರು ‘ವಾಣಿಜ್ಯ ಯುದ್ಧ’ (Trade War) ಎಂಬ ‘ಟ್ರಂಪ್’ ಕಾರ್ಡ್ ಅನ್ನು ಮತ್ತೆ ಬಳಸಲು ಮುಂದಾಗಿದ್ದಾರೆ. ಈ ಹಿಂದೆ ಜಪಾನ್ ಮೇಲೆ ಈ ಅಸ್ತ್ರವನ್ನು ಅಮೆರಿಕ ಪ್ರಯೋಗಿಸಿತ್ತು. ಈಗ ಅದನ್ನು ಚೀನಾ ಮೇಲೆ ಪ್ರಯೋಗಿಸಲು ಮುಂದಾಗಿದೆ. ಜಾಗತಿಕ ಆರ್ಥಿಕತೆಯಾಗಿ ಬೆಳೆಯುತ್ತಿರುವ ಭಾರತ ಕೂಡ ಟಾರ್ಗೆಟ್ ಲಿಸ್ಟ್‌ನಲ್ಲಿದೆ ಎಂಬುದು ತಜ್ಞರ ಅಭಿಪ್ರಾಯ.

    ಪಾಶ್ಚಿಮಾತ್ಯ ನೇತೃತ್ವದ ರಾಜಕೀಯ-ಆರ್ಥಿಕ ಕ್ರಮವನ್ನು ಅನುಸರಿಸದೆಯೇ ಕೆಲವೇ ದಶಕಗಳಲ್ಲಿ ಉತ್ಪಾದನಾ ಶಕ್ತಿ ಮತ್ತು ಪ್ರಮುಖ ಜಾಗತಿಕ ರಫ್ತುದಾರನಾಗಿ ಚೀನಾ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಚೀನಾದ ಈ ಕ್ರಮವು ದೇಶದ ಕೋಟ್ಯಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿತು. ಆದಾಗ್ಯೂ, ಜಾಗತಿಕ ಪ್ರಾಬಲ್ಯಕ್ಕಾಗಿ ನಡೆಯುವ ‘ವಾಣಿಜ್ಯ ಯುದ್ಧ’ವು ಚೀನಾ ಬಾಗಿಲಿಗೆ ಬಂದು ನಿಂತಿದೆ. ಏಕೆಂದರೆ, ಮುಕ್ತ ವ್ಯಾಪಾರ ತತ್ವಗಳ ವಿರೋಧಿಯೇ ಆಗಿರುವ ಡೊನಾಲ್ಡ್ ಟ್ರಂಪ್ ಯುಎಸ್ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿದ್ದಾರೆ.

    ಅಷ್ಟಕ್ಕೂ ಏನಿದು ವಾಣಿಜ್ಯ ಯುದ್ಧ? ಈ ಅಸ್ತ್ರ ಪ್ರಯೋಗ ಯಾಕೆ? ಒಂದು ರಾಷ್ಟ್ರಕ್ಕೆ ಇದರಿಂದಾಗುವ ಅನುಕೂಲ ಅನಾನುಕೂಲಗಳೇನು? ತಿಳಿಯೋಣ ಬನ್ನಿ..

    ವಾಣಿಜ್ಯ ಯುದ್ಧ ಅಂದ್ರೇನು?
    ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ಅಥವಾ ಇತರ ದೇಶದ ಆಮದಿನ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಒಂದು ದೇಶ ಮತ್ತೊಂದು ದೇಶದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದೇ ವಾಣಿಜ್ಯ ಯುದ್ಧ.

    ವಾಣಿಜ್ಯ ಯುದ್ಧದ ಇತಿಹಾಸವೇನು?
    * ಬ್ರಿಟಿಷ್ ಸಾಮ್ರಾಜ್ಯವು ಇಂತಹ ವ್ಯಾಪಾರ ಯುದ್ಧಗಳ ಇತಿಹಾಸವನ್ನು ಹೊಂದಿದೆ. 19ನೇ ಶತಮಾನದ ಚೀನಾದೊಂದಿಗಿನ ಅಫೀಮು ಯುದ್ಧಗಳಲ್ಲಿ ಇಂತಹ ಒಂದು ಉದಾಹರಣೆ ಕಾಣಬಹುದು.
    * 1930 ರಲ್ಲಿ ಯುನೈಟೆಡ್ ಸ್ಟೇಟ್ಸ್ ಸ್ಮೂಟ್-ಹಾಲೆ ಸುಂಕ ಕಾಯ್ದೆಯನ್ನು ಜಾರಿಗೆ ತಂದಿತು. ಅಮೆರಿಕದ ರೈತರನ್ನು ಯುರೋಪಿಯನ್ ಕೃಷಿ ಉತ್ಪನ್ನಗಳಿಂದ ರಕ್ಷಿಸಲು ಸುಂಕವನ್ನು ಹೆಚ್ಚಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಹಲವಾರು ರಾಷ್ಟ್ರಗಳು ತಮ್ಮದೇ ಆದ ಹೆಚ್ಚಿನ ಸುಂಕಗಳನ್ನು ವಿಧಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಪ್ರತೀಕಾರ ತೀರಿಸಿಕೊಂಡವು. ಇದರಿಂದ ಜಾಗತಿಕ ವ್ಯಾಪಾರವು ವಿಶ್ವಾದ್ಯಂತ ಕುಸಿಯಿತು. ವಿನಾಶಕಾರಿ ವ್ಯಾಪಾರ ನೀತಿಗಳಿಂದ ಅಮೆರಿಕ ಮಹಾ ಆರ್ಥಿಕ ಕುಸಿತಕ್ಕೆ ಪ್ರವೇಶಿಸುತ್ತಿದ್ದಂತೆ, ಅಧ್ಯಕ್ಷ ರೂಸ್ವೆಲ್ಟ್ ಪರಸ್ಪರ ವ್ಯಾಪಾರ ಒಪ್ಪಂದಗಳ ಕಾಯ್ದೆ ಸೇರಿದಂತೆ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಲು ಹಲವಾರು ಕಾರ್ಯಗಳನ್ನು ಜಾರಿಗೆ ತರಲು ಪ್ರಾರಂಭಿಸಿದರು.
    * 2016 ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡೊನಾಲ್ಡ್ ಟ್ರಂಪ್ ಉಕ್ಕು ಮತ್ತು ಅಲ್ಯೂಮಿನಿಯಂನಿಂದ ಹಿಡಿದು ಸೌರ ಫಲಕಗಳ ವರೆಗೂ ಎಲ್ಲದಕ್ಕೂ ಸುಂಕ ವಿಧಿಸಿದರು. ಇದು ಯುರೋಪಿಯನ್ ಯೂನಿಯನ್ ಕೆನಡಾ, ಚೀನಾ ಮತ್ತು ಮೆಕ್ಸಿಕೊದ ಸರಕುಗಳ ಮೇಲೆ ಪರಿಣಾಮ ಬೀರಿತು. ವಾಣಿಜ್ಯ ಯುದ್ಧಕ್ಕೆ ಇಂತಹ ಹಲವಾರು ಉದಾಹರಣೆಗಳಿವೆ.

    ಜಪಾನ್ ಮೇಲೆ ವಾಣಿಜ್ಯ ಯುದ್ಧ
    ‘ಅಗ್ಗದ’ ಚೀನಿ ರಫ್ತುಗಳನ್ನು ಗುರಿಯಾಗಿಸಿ ಟ್ರಂಪ್ ಚುನಾವಣಾ ಪ್ರಚಾರ ನಡೆಸಿದ್ದರು. ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರಿಗೆ ಲಾಭವನ್ನು ತಂದುಕೊಟ್ಟಿದೆ. ಆರ್ಥಿಕ ಪ್ರಾಬಲ್ಯದ ಉದ್ದೇಶದಿಂದ ‘ಅಮೆರಿಕ ಮೊದಲು’ ಎಂಬ ಹಳೆಯ ಪ್ಲೇಕಾರ್ಡ್ ಅನ್ನೇ ಪ್ರಯೋಗಿಸಲಾಯಿತು. 1970 ರ ದಶಕದಲ್ಲಿ, ಯುಎಸ್ ಜಪಾನ್ ವಿರುದ್ಧ ಗಮನಾರ್ಹವಾದ ರೀತಿಯ ವಾಣಿಜ್ಯ ಯುದ್ಧ ನಡೆಸಿತ್ತು. ಸೋನಿ ಮತ್ತು ಟೊಯೋಟಾದಂತಹ ಬ್ರ‍್ಯಾಂಡ್‌ಗಳು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್‌ಗಳಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರಾಬಲ್ಯ ಸಾಧಿಸಿದಾಗಿನಿಂದ ‘ವಾಣಿಜ್ಯ ಯುದ್ಧ’ ಜಪಾನ್‌ಗೆ ಬೆದರಿಕೆಯಾಗಿ ಹೊರಹೊಮ್ಮಿದೆ. 2019ರ ಅವಧಿಯಲ್ಲೂ ಟ್ರಂಪ್ ಅಧ್ಯಕ್ಷರಾಗಿದ್ದಾಗ ಯೂರೋಪ್ ಮತ್ತು ಜಪಾನ್‌ನಂತಹ ಮಿತ್ರರು ತಯಾರಿಸುವ ಉಕ್ಕಿನ ಮೇಲೆ ಸುಂಕ ಹೇರಿದ್ದರು.

    ವಾಣಿಜ್ಯ ತಜ್ಞರು ಹೇಳೋದೇನು?
    ಚೀನಾ ಟ್ರಂಪ್‌ನ ಮೊದಲ ಟಾರ್ಗೆಟ್ ಆಗಬಹುದು. ಏಷ್ಯಾದಲ್ಲಿನ ತನ್ನ ಕಾರ್ಯತಂತ್ರದ ಸ್ಥಾನದಿಂದಾಗಿ ಭಾರತಕ್ಕೆ ಲಾಭವಾಗಬಹುದು ಎಂದು ಟ್ರೇಡ್ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (ಡಬ್ಲ್ಯೂಟಿಒ) ಸುಧಾರಣೆಗೆ ಸಲಹೆ ನೀಡುವುದು ಮತ್ತು ಸಕ್ರಿಯ ಪಾತ್ರವನ್ನು ವಹಿಸುವುದು ಭಾರತದ ಹಿತಾಸಕ್ತಿಯಾಗಿದೆ. ಆದರೆ, ಯುಎಸ್ ಮತ್ತು ಭಾರತ ನಿಕಟ ಪ್ರತಿಸ್ಪರ್ಧಿಗಳಾದಾಗ ಭಾರತದ ಔಷಧೀಯ ಮತ್ತು ಸೇವಾ ಕ್ಷೇತ್ರಗಳ ಮೇಲೆ ಪೆಟ್ಟು ಬೀಳುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    ಟ್ರಂಪ್ 2ನೇ ಅವಧಿಯಲ್ಲೂ ಇರುತ್ತಾ ಲೈಟ್ಹೈಸರ್ ಪಾತ್ರ?
    ಟ್ರಂಪ್‌ನ ಮೊದಲ ಆಡಳಿತದಲ್ಲಿ ರಾಬರ್ಟ್ ಲೈಟ್ಹೈಜರ್ ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ ಆಗಿದ್ದರು. ಎರಡನೇ ಅವಧಿಯಲ್ಲಿ ಇದೇ ರೀತಿಯ ಪಾತ್ರವು, ಟ್ರಂಪ್ ನೇತೃತ್ವದ ವಾಣಿಜ್ಯ ಯುದ್ಧವು ಅಮೆರಿಕಕ್ಕೆ ಉತ್ಪಾದನಾ ಉದ್ಯೋಗಗಳನ್ನು ಮರಳಿ ತರುವ ಗುರಿಯನ್ನು ಹೊಂದಿದೆ. ಹೊಸ ವ್ಯಾಪಾರದ ಆದ್ಯತೆಯಾಗಿ ಪರಿಣಮಿಸುತ್ತದೆ. ಇದರಿಂದ ಭಾರತ ಸೇರಿದಂತೆ ಎಲ್ಲಾ ದೇಶಗಳು ಅಡ್ಡಹಾಯುವ ಸಾಧ್ಯತೆಯಿದೆ. ಲೈಟ್ಹೈಜರ್‌ನ ನಾಯಕತ್ವದಲ್ಲಿ, ಭಾರತವು 2019 ರಲ್ಲಿ ತನ್ನ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್ (ಜಿಎಸ್‌ಪಿ) ಸ್ಥಾನಮಾನವನ್ನು ಕಳೆದುಕೊಂಡಿತ್ತು. ಇದು ಯುಎಸ್‌ಗೆ 5.7 ಶತಕೋಟಿ ಮೌಲ್ಯದ ಭಾರತೀಯ ರಫ್ತುಗಳ ಲಾಭವನ್ನು ತಂದುಕೊಟ್ಟಿದೆ.

    ಮುಕ್ತ ವ್ಯಾಪಾರವು ಸುಲಭವಾದ ಆಮದುಗಳನ್ನು ಸಕ್ರಿಯಗೊಳಿಸುತ್ತದೆ. ಕಾರ್ಪೊರೇಟ್ ಲಾಭಗಳನ್ನು ಹೆಚ್ಚಿಸುತ್ತದೆ. ಇದು ಅಂತಿಮವಾಗಿ ಸ್ಥಳೀಯ ಸಮುದಾಯಗಳಿಗೆ ಉದ್ಯೋಗ ನಷ್ಟದಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದು ಲೈಟ್ಹೈಜರ್ ವಾದವಾಗಿದೆ.

    ಯುಎಸ್ ಉತ್ಪಾದನಾ ಕಂಪನಿಗಳಿಗೆ ಇತರೆ ರಾಷ್ಟ್ರಗಳ ಕಂಪನಿಗಳು ‘ಅನ್ಯಾಯ’ದ ಸ್ಪರ್ಧೆ ಒಡ್ಡುವುದರ ವಿರುದ್ಧ ಸುಂಕದ ರಕ್ಷಣೆಯನ್ನು ಪಡೆಯಲು ದಶಕಗಳ ಕಾಲ ಸಹಾಯ ಮಾಡಿದ ಲೈಟ್ಹೈಜರ್, ಡಬ್ಲ್ಯೂಟಿಒ ನಿಯಮಗಳು ಯುಎಸ್‌ಗೆ ಹಾನಿಕಾರಕವಾಗಿದೆ ಎಂದು ನಂಬುತ್ತಾರೆ. ಏಕೆಂದರೆ ಡಬ್ಲ್ಯೂಟಿಒ, ಸುಂಕದ ಮೂಲಕ ತನ್ನ ಕೈಗಾರಿಕೆಗಳನ್ನು ರಕ್ಷಿಸಲು ಅಮೆರಿಕಾದ ಸಾರ್ವಭೌಮ ಹಕ್ಕನ್ನು ನಿರ್ಬಂಧಿಸಿದೆ ಎಂದು ಪ್ರತಿಪಾದಿಸಿದ್ದರು. 2019 ರಲ್ಲಿ ಅವರು, ಕೋರಮ್‌ಗೆ ಅಗತ್ಯವಾದ ನ್ಯಾಯಾಧೀಶರ ನೇಮಕಾತಿಯನ್ನು ನಿರ್ಬಂಧಿಸುವ ಮೂಲಕ ಡಬ್ಲ್ಯೂಟಿಒ ವಿವಾದ ಇತ್ಯರ್ಥ ಮಂಡಳಿಯನ್ನು ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳಿಸಿದರು. ಉನ್ನತ ವ್ಯಾಪಾರ ಸಂಸ್ಥೆಯಿಂದ ಯಾವುದೇ ಪರಿಣಾಮಗಳಿಲ್ಲದೆ ದೇಶಗಳ ಮೇಲೆ ಸುಂಕಗಳನ್ನು ವಿಧಿಸಲು ಇದು ಟ್ರಂಪ್‌ಗೆ ಅವಕಾಶ ಮಾಡಿಕೊಟ್ಟರು.

    ಜಾಗತಿಕ ಪ್ರಾಬಲ್ಯಕ್ಕಾಗಿ ಶ್ರೀಮಂತ ರಾಷ್ಟ್ರಗಳು ವಾಣಿಜ್ಯ ನಿಯಮವನ್ನು ತಮಗೆ ಬೇಕಾದಂತೆ ಬಗ್ಗಿಸುವುದು ಭಾರತದಂತಹ ಅಭಿವೃದ್ಧಿಶೀಲ ರಾಷ್ಟçಗಳಿಗೆ ಪೆಟ್ಟು ನೀಡಬಹುದು ಎಂದು ವಾಣಿಜ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಭಾರತ ಟಾರ್ಗೆಟ್ ಆಗುತ್ತಾ?
    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ (ಐಐಎಫ್‌ಟಿ) ಯ ಡಬ್ಲ್ಯುಟಿಒ ಅಧ್ಯಯನ ಕೇಂದ್ರದ ಮಾಜಿ ಮುಖ್ಯಸ್ಥ ಅಭಿಜಿತ್ ದಾಸ್, ಟ್ರಂಪ್ ಅವರ ಎರಡನೇ ಅವಧಿಯು ಡಬ್ಲ್ಯುಟಿಒ ನಿಯಮಗಳನ್ನು ಉಲ್ಲಂಘಿಸುವ ಕ್ರಮಗಳ ರಾಂಪ್-ಅಪ್ ಅನ್ನು ನೋಡಬಹುದು. ಯುಎಸ್‌ನಿಂದ ವಿಧಿಸಲಾದ ಯಾವುದೇ ಹೆಚ್ಚುವರಿ ತೆರಿಗೆಗಳಿಗೆ ಪ್ರತಿಕ್ರಿಯಿಸುವುದು ಭಾರತದ ಏಕೈಕ ಪರಿಣಾಮಕಾರಿ ವಿಧಾನವಾಗಿದೆ. ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಯುಎಸ್ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಯುಎಸ್ ಕೃಷಿ ಉತ್ಪನ್ನಗಳ ಮೇಲೆ ಸುಂಕವನ್ನು ಹೆಚ್ಚಿಸಿದಾಗ ಈ ವಿಧಾನವು ಯಶಸ್ವಿಯಾಗಿದೆ ಎಂದು ಹೇಳುತ್ತಾರೆ.

    ಚೀನಾ ವಿರುದ್ಧದ ಯುಎಸ್ ವಾಣಿಜ್ಯ ಯುದ್ಧವು, ವ್ಯಾಪಾರಕ್ಕಿಂತ ಮುಖ್ಯವಾಗಿ ಚೀನಾದ ತಾಂತ್ರಿಕ ಮತ್ತು ಹೈಟೆಕ್ ವಲಯಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಶ್ರೀಮಂತರು ಮತ್ತು ಶಕ್ತಿಶಾಲಿಗಳು ನಿಯಮಗಳನ್ನು ಉಲ್ಲಂಘಿಸಿದರೆ ಖಂಡಿತವಾಗಿಯೂ ಭಾರತಕ್ಕೆ ಪರಿಣಾಮ ಉಂಟಾಗುತ್ತವೆ. ಇಂದು, ಚೀನಾ ಗುರಿಯಾಗಿದೆ. ದಶಕಗಳ ಹಿಂದೆ ಜಪಾನ್ ಗುರಿಯಾಗಿತ್ತು. ನಾಳೆ ಭಾರತವೂ ಟಾರ್ಗೆಟ್ ಆಗಬಹುದು. ಯುಎಸ್ ಭಾರತವನ್ನು ಕೆಲವು ವಲಯಗಳಲ್ಲಿ ಸ್ಪರ್ಧಾತ್ಮಕ ಬೆದರಿಕೆ ಎಂದು ಗ್ರಹಿಸಿದೆ. ಫಾರ್ಮಾಸ್ಯುಟಿಕಲ್‌ಗಳಲ್ಲಿ ಭಾರತ ಈಗಾಗಲೇ ಅಮೆರಿಕದ ಹದ್ದಿನ ಕಣ್ಣಿಗೆ ಗುರಿಯಾಗಿದೆ ಎಂದು ದಾಸ್ ಅವರು ವಿಶ್ಲೇಷಿಸಿದ್ದಾರೆ.

    ಈಚೆಗೆ ಚೀನಾದ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ಒಮ್ಮೆ ಜಪಾನ್ ವಿರುದ್ಧ ಮಾಡಿದ ಆರೋಪಗಳಿಗೆ ಹೋಲುತ್ತವೆ. ಕಡಿಮೆ ಗುಣಮಟ್ಟದ ಸರಕುಗಳು, ಬೌದ್ಧಿಕ ಆಸ್ತಿ ಕಳ್ಳತನ, ಡಂಪಿಂಗ್.. ಈ ರೀತಿಯ ಆರೋಪಗಳು ಒಂದೇ ರೀತಿ ಇವೆ. ವ್ಯತ್ಯಾಸವೆಂದರೆ ಜಪಾನ್ ಭದ್ರತೆಗಾಗಿ ಯುಎಸ್ ಅನ್ನು ಅವಲಂಬಿಸಿದೆ. ಆದರೆ ಚೀನಾ ಮಾತ್ರ ಅದನ್ನು ಅವಲಂಬಿಸಿಲ್ಲ. ಯುಎಸ್ ತನ್ನ ಇಚ್ಛೆಗೆ ಜಪಾನ್ ಅನ್ನು ಬಗ್ಗಿಸಬಹುದು, ಆದರೆ ಚೀನಾದೊಂದಿಗೆ ಅದೇ ರೀತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ.

    ಔಷಧ ಮತ್ತು ಸೇವಾ ವಲಯ ಟಾರ್ಗೆಟ್?
    ಯುಎಸ್‌ಗೆ ಹೆಚ್ಚು ಅನುಕೂಲಕರ ಮತ್ತು ದೇಶೀಯ ಕೈಗಾರಿಕೆಗಳನ್ನು ರಕ್ಷಿಸಲು ಅಮೆರಿಕದ ಟ್ರಂಪ್ ಆಡಳಿತವು ತನ್ನ ಟ್ರೇಡ್ ಪಾಲುದಾರರ ಮೇಲೆ ಸುಂಕಗಳನ್ನು ಅಸ್ತ್ರವಾಗಿ ಪ್ರಯೋಗಿಸಿದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ (ಎಫ್‌ಐಇಒ) ಮಹಾನಿರ್ದೇಶಕ ಮತ್ತು ಸಿಇಒ ಅಜಯ್ ಸಹಾಯ್ ತಿಳಿಸಿದ್ದಾರೆ.

    ಯುಎಸ್‌ನೊಂದಿಗಿನ ಭಾರತದ ವ್ಯಾಪಾರ ಕೊರತೆಯು 2019 ರಲ್ಲಿ 25 ಶತಕೋಟಿಯಿಂದ 2023 ರ ಹೊತ್ತಿಗೆ 50 ಶತಕೋಟಿಗೆ ಹೆಚ್ಚಳವಾಗಿರುವುದು ಟ್ರಂಪ್‌ಗೆ ಇಷ್ಟವಾಗುವುದಿಲ್ಲ. ಚಿಕ್ಕ ಆರ್ಥಿಕತೆಯ ಹೊರತಾಗಿಯೂ, ಭಾರತವು ಚೀನಾದೊಂದಿಗೆ 100 ಶತಕೋಟಿ ವ್ಯಾಪಾರ ಕೊರತೆಯನ್ನು ನಿರ್ವಹಿಸುತ್ತಿದೆ. ಟ್ರಂಪ್‌ರ ಹಿಂದಿನ ಸುಂಕಗಳು ಮುಖ್ಯವಾಗಿ ಚೀನಾ, ಮೆಕ್ಸಿಕೊ, ಕೆನಡಾ ಮತ್ತು ಇಯು ಅನ್ನು ಟಾರ್ಗೆಟ್ ಮಾಡಿದ್ದು, ಭಾರತದ ಮೇಲೆ ಸೀಮಿತ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

    ವಿಶಾಲ ಸುಂಕದ ನೀತಿಯು ಔಷಧಗಳು, ಐಟಿ ಸೇವೆಗಳು, ಜವಳಿ ಮತ್ತು ಉಕ್ಕಿನಂತಹ ಎರಡೂ ದೇಶಗಳು ಪೈಪೋಟಿ ನಡೆಸುವ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತೀಯ ಸರಕುಗಳ ಶ್ರೇಣಿಯ ಮೇಲೆ ಸುಂಕಗಳನ್ನು ವಿಧಿಸಿದರೆ, ಇದು ಜವಳಿ, ಔಷಧಗಳು, ರತ್ನಗಳು, ಆಭರಣಗಳು ಮತ್ತು ಐಟಿ ಸೇವೆಗಳಂತಹ ಪ್ರಮುಖ ಕೈಗಾರಿಕೆಗಳಿಂದ ರಫ್ತುಗಳನ್ನು ಕಡಿಮೆ ಮಾಡಬಹುದು. ಏಕೆಂದರೆ ಈ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಭಾರತೀಯ ರಫ್ತಿಗೆ ಯುಎಸ್ ಪ್ರಮುಖ ತಾಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

  • ಚೀನಾಗೆ ಹೊಡೆತ ನೀಡಲು ಭಾರತದ ನಡೆಯನ್ನು ಫಾಲೋ ಮಾಡಿದ ಅಮೆರಿಕ

    ಚೀನಾಗೆ ಹೊಡೆತ ನೀಡಲು ಭಾರತದ ನಡೆಯನ್ನು ಫಾಲೋ ಮಾಡಿದ ಅಮೆರಿಕ

    ವಾಷಿಂಗ್ಟನ್‌: ಆನ್‌ಲೈನ್‌ ಶಾಪಿಂಗ್‌ ವಿಚಾರದಲ್ಲಿ ಭಾರತ ಕೈಗೊಂಡ ನಿರ್ಧಾರವನ್ನು ಅಮೆರಿಕ ಈಗ ಅನುಸರಿಸಲು ಮುಂದಾಗುತ್ತಿದೆ. ಇ–ಕಾಮರ್ಸ್‌ ತಾಣಗಳ ಮೂಲಕ ಮಾರಾಟವಾಗುವ ಚೀನಾ ಉತ್ಪನ್ನಗಳು  ‌‌ಗ್ರಾಹಕರಿಗೆ ತಿಳಿಯಲು ಉತ್ಪಾದಕ ರಾಷ್ಟ್ರದ ಹೆಸರನ್ನು ಪ್ರದರ್ಶಿಸುವಂತೆ ಕಾಯ್ದೆಗೆ ತಿದ್ದುಪಡಿ ತರಲು ಅಮೆರಿಕ ಮುಂದಾಗುತ್ತಿದೆ.

    ಉತ್ಪನ್ನಗಳು ಚೀನಾದಲ್ಲಿ ತಯಾರಾಗಿದ್ದರೆ ಆನ್‌ಲೈನ್‌ ಶಾಪಿಂಗ್‌ ತಾಣಗಳು ಆ ವಿವರವನ್ನು ಪ್ರದರ್ಶಿಸಬೇಕೆಂದು ಸೂಚಿಸುವ ಮಸೂದೆಯನ್ನು ರಿಪಬ್ಲಿಕನ್‌ ಪಕ್ಷದ ಮಹಿಳಾ ಸೆನೆಟರ್‌ ಮಾರ್ಥಾ ಮೆಕ್ಸಾಲಿ ಸಂಸತ್ತಿನಲ್ಲಿ ಮಂಡಿಸಿದ್ದಾರೆ.

    ಉತ್ಪಾದಕ ರಾಷ್ಟ್ರದ ಹೆಸರನ್ನು ತಿಳಿಸುವ ಸಂಬಂಧ 1930ರ ಸುಂಕ ಕಾಯ್ದೆಗೆ ತಿದ್ದುಪಡಿ ಮಾಡಲು ಈ ಮಸೂದೆಯನ್ನು ಮಂಡಿಸಲಾಗಿದೆ.

    ಒಂದು ಉತ್ಪನ್ನದ ಬಹುದೊಡ್ಡ ಭಾಗ ಚೀನಾದಲ್ಲಿ ತಯಾರಾಗಿದ್ದಲ್ಲಿ ಇ–ಕಾಮರ್ಸ್‌ ತಾಣಗಳು ವಿವರ ನೀಡಬೇಕು. ಅಷ್ಟೇ ಅಲ್ಲದಚೀನಾದಿಂದ ತಯಾರಿಸಲ್ಪಟ್ಟ ಉತ್ಪನ್ನ ಮತ್ತು ಅಲ್ಲಿ ಜೋಡಿಸಲ್ಪಟ್ಟ ಉತ್ಪನ್ನದ ಭಾಗಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂಬ ಅಂಶ ಮಸೂದೆಯಲ್ಲಿದೆ.

    ಅಮೆರಿಕದ ಗ್ರಾಹಕರು ನಾವು ಯಾವ ದೇಶದಿಂದ ವಸ್ತುಗಳನ್ನು ಖರೀದಿಸುತ್ತಿದ್ದೇವೆ ಎಂಬುದನ್ನು ತಿಳಿಯಬೇಕು. ವಿಶೇಷವಾಗಿ ಚೀನಾದಿಂದ ಕೊರೊನಾ ಹರಡಿದ್ದು ಎಲ್ಲರಿಗೂ ಸಮಸ್ಯೆಯಾಗಿದೆ. ಹೀಗಾಗಿ ನಮ್ಮ ಪ್ರಜೆಗಳು ಖರೀದಿಸುವ ಉತ್ಪನ್ನ ಎಲ್ಲಿ ತಯಾರಾಗುತ್ತದೆ ಎಂಬುದನ್ನು ತಿಳಿಯಲು ಅರ್ಹರಾಗಿದ್ದಾರೆ ಎಂದು ಮಾರ್ಥಾ ಮೆಕ್ಸಾಲಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಅಮೆರಿಕ ಮತ್ತು ಚೀನಾ ನಡುವೆ ಈಗಾಗಲೇ ವಾಣಿಜ್ಯ ಸಮರ ಆರಂಭಗೊಂಡಿದೆ. ಈಗ ಈ ನಿರ್ಧಾರ ಕೈಗೊಳ್ಳುವ ಮೂಲಕ ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

    ಭಾರತ ಏನು ಮಾಡಿದೆ?
    ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಸರ್ಕಾರ ಒಂದೊಂದೆ ಮಹತ್ವವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಚೀನಾಗೆ ಶಾಕ್‌ ನೀಡುತ್ತಿದೆ. ಚೀನಿ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ gem.gov.in ವೆಬ್‌ಸೈಟಿನಲ್ಲಿ ಕಡ್ಡಾಯವಾಗಿ ಉತ್ಪನ್ನ ತಯಾರದ ಮೂಲ ದೇಶದ ಹೆಸರನ್ನು ಪ್ರದರ್ಶಿಸಬೇಕೆಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ಜನರಿಗೆ ಸುಲಭವಾಗಿ ತಿಳಿಯಲು ʻಮೇಕ್‌ ಇನ್‌ ಇಂಡಿಯಾʼ ವಿಭಾಗವನ್ನು ಸೇರಿಸಬೇಕು ಎಂದು ತಿಳಿಸಿದೆ. ʻಆತ್ಮನಿರ್ಭರ್‌ ಭಾರತ್‌ʼ ಮತ್ತು ʻಮೇಕ್‌ ಇನ್‌ ಇಂಡಿಯಾʼವನ್ನು ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿತ್ತು.

     

    ಈ ನಿರ್ಧಾರದ ಬಳಿಕ ಕೇಂದ್ರ ವಾಣಿಜ್ಯ ಸಚಿವಾಲಯ, ಇ–ಕಾಮರ್ಸ್‌ ಜಾಲತಾಣಗಳು ತಮ್ಮ ಮೂಲಕ ಮಾರಾಟವಾಗುವ ವಸ್ತುಗಳು ಯಾವ ದೇಶದವು ಎಂಬುದನ್ನು ತಿಳಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಮೆಜಾನ್‌ ಕಂಪನಿಯ ಭಾರತದ ಘಟಕವು ಮಾರಾಟಕ್ಕೆ ಇಟ್ಟಿರುವ ವಸ್ತುಗಳು ಯಾವ ದೇಶದಿಂದ ಬಂದಿದೆ ಎನ್ನುವ ಮಾಹಿತಿ ನೀಡುವ ವ್ಯವಸ್ಥೆಯು ಆಗಸ್ಟ್‌ 10ರೊಳಗೆ ಜಾರಿಗೆ ಬರಬೇಕು ಎಂದು ತನ್ನ ಇ–ಮಾರುಕಟ್ಟೆ ಮೂಲಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಸೂಚನೆಯನ್ನು ನೀಡಿದೆ.

  • ಅಮೆರಿಕ ಚೀನಾ ವಾಣಿಜ್ಯ ಸಮರ – ಭಾರತಕ್ಕೆ ಲಾಭವಾದ ಲೆಕ್ಕದ ಪ್ರಮಾಣ ಹೊರಬಿತ್ತು

    ಅಮೆರಿಕ ಚೀನಾ ವಾಣಿಜ್ಯ ಸಮರ – ಭಾರತಕ್ಕೆ ಲಾಭವಾದ ಲೆಕ್ಕದ ಪ್ರಮಾಣ ಹೊರಬಿತ್ತು

    ವಿಶ್ವಸಂಸ್ಥೆ: ಚೀನಾ ನಡುವಿನ ವ್ಯಾಪಾರ ಸಮರದಿಂದ 2019ರ ಮೊದಲಾರ್ಧದಲ್ಲಿ 755 ದಶಲಕ್ಷ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಭಾರತ ಅಮೆರಿಕಕ್ಕೆ ರಫ್ತು ಮಾಡಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆ ಹೇಳಿದೆ.

    ಅಮೆರಿಕ ಚೀನಾದ ಮೇಲೆ ವಾಣಿಜ್ಯ ಸಮರ ಪ್ರಾರಂಭಿಸಿದ ಬಳಿಕ ಏನೇನು ಪರಿಣಾಮವಾಗಿದೆ ಎನ್ನುವುದರ ಬಗ್ಗೆ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿದೆ. ಎರಡು ರಾಷ್ಟ್ರಗಳ ದ್ವಿಪಕ್ಷೀಯ ವ್ಯಾಪಾರ ದಿಢೀರ್ ಕುಸಿದಿದ್ದು, ಬೇರೆ ರಾಷ್ಟ್ರಗಳಿಂದ ಆಮದು ಹೆಚ್ಚಾಗಿದೆ ಎಂದು ತಿಳಿಸಿದೆ.

    ವಾಣಿಜ್ಯ ಸಮರ ಆರಂಭಗೊಂಡ ಬಳಿಕ ತೈವಾನ್, ಮೆಕ್ಸಿಕೋ, ಯುರೋಪಿಯನ್ ದೇಶಗಳಿಂದ ಅಮೆರಿಕಕ್ಕೆ ವಸ್ತುಗಳು ರಫ್ತು ಆಗುವುದು ಹೆಚ್ಚಾಗಿದೆ. ಭಾರತ, ದಕ್ಷಿಣ ಕೊರಿಯ, ಕೆನಡಾದಿಂದ ಭಾರೀ ಪ್ರಮಾಣದಲ್ಲಿ ರಫ್ತು ಹೆಚ್ಚಾಗದೇ ಇದ್ದರೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.

    ಭಾರತದಿಂದ ಒಟ್ಟು 799 ದಶಲಕ್ಷ ಡಾಲರ್ ಮೌಲ್ಯದ ರಫ್ತಾಗಿದ್ದು ಅದರಲ್ಲೂ ಹೆಚ್ಚಾಗಿ ರಾಸಾಯನಿಕ (243 ದಶಲಕ್ಷ ಡಾಲರ್), ಲೋಹ ಮತ್ತು ಅದಿರು(243 ದಶಲಕ್ಷ ಡಾಲರ್) ಎಲೆಕ್ಟ್ರಿಕಲ್ ಯಂತ್ರೋಪಕರಣಗಳು(83 ದಶಲಕ್ಷ ಡಾಲರ್), ಇತರೇ ಯಂತ್ರೋಪಕರಣಗಳು(68 ದಶಲಕ್ಷ ಡಾಲರ್) ಜೊತೆ ಕೃಷಿ ಆಹಾರ, ಪಿಠೋಪಕರಣ, ಆಫೀಸ್ ಉಪಕರಣಗಳು, ಜವಳಿ ಮತ್ತು ಉಡುಪು, ಸಾರಿಗೆ ಉಪಕರಣಗಳು ರಫ್ತಾಗಿದೆ ಎಂದು ಅಧ್ಯಯನ ತಿಳಿಸಿದೆ.

    ಚೀನಾಕ್ಕೆ ಒಟ್ಟು 35 ಶತಕೋಟಿ ಡಾಲರ್ ರಫ್ತು ನಷ್ಟವಾಗಿದ್ದು ಇದರಲ್ಲಿ 21 ಶತಕೋಟಿ ಡಾಲರ್(ಶೇ.62) ರಫ್ತು ಉಳಿದ ರಾಷ್ಟ್ರಗಳಿಗೆ ಹಂಚಿಕೆಯಾಗಿದೆ. ಉಳಿದ 14 ಶತಕೋಟಿ ಡಾಲರ್ ಅಮೆರಿಕಕ್ಕೆ ನಷ್ಟವಾಗಿರಬಹುದು ಅಥವಾ ಅಮೆರಿಕದ ಉತ್ಪಾದಕರೇ ಈ ಜಾಗವನ್ನು ಆಕ್ರಮಿಸಿಕೊಂಡಿರಬಹುದು ಎಂದು ವರದಿ ವಿಶ್ಲೇಷಿಸಿದೆ.

    ಚೀನಾ ಮೇಲಿನ ವ್ಯಾಪಾರ ಸಮರ ಅಮೆರಿಕದ ಜನರ ಮೇಲೂ ಪರಿಣಾಮ ಬೀರಿದೆ. ಅಮೆರಿಕದ ಜನತೆ ದುಬಾರಿ ಬೆಲೆಯನ್ನು ನೀಡಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದೆ.

     

    ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲೇ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಧ್ಯಕ್ಷ ಪದವಿಗೆ ಏರಿದ ಮೇಲೆ 2018ರಲ್ಲಿ ಚೀನಾ ವಿರುದ್ಧ ವಾಣಿಜ್ಯ ಸಮರ ಆರಂಭಿಸಿದರು. ನಾವು ಅಭಿವೃದ್ಧಿ ಪಡಿಸಿದ ಸಾಫ್ಟ್ವೇರ್‌ಗಳು, ಪೇಟೆಂಟ್‌ಗಳು ಮತ್ತು ಇತರೆ ತಂತ್ರಜ್ಞಾನವನ್ನು ಚೀನಾ ಕದ್ದು ಲಾಭ ಮಾಡುತ್ತಿದೆ. ಇದಕ್ಕೆ ನಾನು ಕಡಿವಾಣ ಹಾಕುತ್ತೇನೆ ಎಂದು ಹೇಳಿದ ಟ್ರಂಪ್ 2018ರಿಂದ ಚೈನಾ ವಸ್ತುಗಳ ಮೇಲೆ ಆಮದು ಸುಂಕ ಹೇರಲು ಮುಂದಾದರು. ಇದನ್ನೂ ಓದಿ:ಅಮೆರಿಕ, ಚೀನಾ ಸಮರದಿಂದ ಭಾರತಕ್ಕೆ ಲಾಭ: ಅರುಣ್ ಜೇಟ್ಲಿ

    ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ದಿಂದ ಚೀನಾ ಉಪಯೋಗ ಪಡೆಯುತ್ತಿವೆ. ಇನ್ಮುಂದೆ ಡಬ್ಲ್ಯುಟಿಒ ಲಾಭ ಪಡೆಯಲು ಬಿಡುವುದಿಲ್ಲ ಎಂದು ಟ್ರಂಪ್ ಗುಡುಗಿದ್ದರು.

     

    ಅಮೆರಿಕ ಮೊದಲು ಎಂಬ ನಿಯಮಕ್ಕೆ ಆದ್ಯತೆ ನೀಡಿರುವ ಟ್ರಂಪ್, ಚೀನಾ ವಿಶ್ವ ವಾಣಿಜ್ಯ ಸಂಸ್ಥೆಯಿಂದ ಹಲವು ವರ್ಷಗಳಿಂದ ಸಾಕಷ್ಟು ಅನುಕೂಲ ಪಡೆದುಕೊಂಡಿವೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಇನ್ನು ಮುಂದೆ ಈ ಲಾಭವನ್ನು ಪಡೆದುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದರು.

  • ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?

    ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?

    ನವದೆಹಲಿ: ಈ ದೀಪಾವಳಿ ಸಮಯದಲ್ಲಿ 10 ಗ್ರಾಂ ಚಿನ್ನದ ಬೆಲೆ 40 ಸಾವಿರ ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ.

    ಆಗಸ್ಟ್ ಮೂರನೇ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 38 ಸಾವಿರದ ಗಡಿ ದಾಟಿದ್ದರೆ 22 ಕ್ಯಾರೆಟ್ ಚಿನ್ನದ ಬೆಲೆ 35,780 ರೂ. ಇತ್ತು. ಈ ಬೆಲೆ ಅಕ್ಟೋಬರ್ ದೀಪಾವಳಿಯ ಸಂದರ್ಭದಲ್ಲಿ 40 ಸಾವಿರ ರೂ.ಗೆ ಏರಿಕೆಯಾಗಬಹುದು ಈ ಕ್ಷೇತ್ರದಲ್ಲಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಜುಲೈ ತಿಂಗಳಿನಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 34,300 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 32,520 ರೂ. ಇತ್ತು. ಆಗಸ್ಟ್ ಮೊದಲ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 35,590 ರೂ. ಇದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 33,830 ರೂ.ಗೆ ಏರಿಕೆಯಾಗಿದೆ.

    ಬೆಲೆ ಏರಿಕೆಗೆ ಕಾರಣ ಏನು?
    ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶಗಳಾದ ಅಮೆರಿಕ, ಚೀನಾ ನಡುವೆ ವಾಣಿಜ್ಯ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಿದೆ. ಇದರ ಜೊತೆ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಚೀನಾ ಅಭಿವೃದ್ಧಿ ಶೀಲ ರಾಷ್ಟ್ರಗಳ ಹೆಸರನ್ನು ಹೇಳಿಕೊಂಡು ಲಾಭ ಪಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಚೀನಾ ನಡುವಿನ ವ್ಯಾಪಾರ ಸಮರ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು ಡಾಲರ್ ಬದಲು ಚಿನ್ನದಲ್ಲಿ ಹೂಡಿಕೆದಾರರು ಹೂಡಿಕೆ ಮಾಡುತ್ತಿದ್ದಾರೆ.

    ಎರಡನೇ ಕಾರಣ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಕಡಿತಗೊಳಿಸಿದೆ. ಭಾರತದಲ್ಲಿ ಹೇಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆಯೋ ಅದೇ ರೀತಿ ಅಮೆರಿಕದ ಫೆಡರಲ್ ರಿಸರ್ವ್ ಇದೆ. ದಶಕದ ಬಳಿಕ ಫೆಡರಲ್ ರಿಸರ್ವ್ ಬಡ್ಡಿದರವನ್ನು ಇಳಿಕೆ ಮಾಡಿದೆ. ಹಿಂದೆ ಜಾಗತಿಕ ಆರ್ಥಿಕ ಹಿಂಜರಿತವಾದಾಗ ಬಡ್ಡಿದರವನ್ನು ಇಳಿಕೆ ಮಾಡಿತ್ತು. ಮುಂದೆ ವಿಶ್ವದಲ್ಲೂ ಆರ್ಥಿಕ ಕುಸಿತವಾಗಬಹುದು ಎನ್ನುವ ಭೀತಿಯಿಂದ ಫೆಡರಲ್ ರಿಸರ್ವ್ ಬಡ್ಡಿ ದರ ಮಾಡಿರಬಹುದು ಎಂದು ಊಹಿಸಿ ಹೂಡಿಕೆದಾರರು ಚಿನ್ನದತ್ತ ಹೂಡಿಕೆ ಮಾಡುತ್ತಿದ್ದಾರೆ.

     

    ಮೂರನೇಯದಾಗಿ ಬಹಳ ಮುಖ್ಯವಾಗಿ ಅಮೆರಿಕದಲ್ಲಿ ಉತ್ಪಾದನಾ ಸೂಚ್ಯಂಕ ಇಳಿಮುಖವಾಗಿದ್ದರೆ ಚೀನಾ ಜರ್ಮನಿಯಲ್ಲಿ ಕೈಗಾರಿಕಾ ಉತ್ಪಾದನೆ ಭಾರೀ ಇಳಿಕೆ ಕಂಡಿದೆ. ಇದೆಲ್ಲದರ ಪರಿಣಾಮ ಭಾರತದ ಷೇರು ಮರುಕಟ್ಟೆಯ ಜೊತೆಗೆ ವಿಶ್ವದ ಹಲವು ದೇಶಗಳ ಮಾರುಕಟ್ಟೆ ಸೂಚ್ಯಂಕಗಳು ಕೆಲ ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಅಮೆರಿಕದ ಡೌ ಜೋನ್ಸ್, ಜಪಾನ್, ಜರ್ಮನಿ, ಯುರೋಪ್, ಏಷ್ಯಾದ ಪ್ರಮುಖ ದೇಶಗಳ ಷೇರು ಮಾರುಕಟ್ಟೆ ಭಾರೀ ಇಳಿಕೆ ಕಾಣುತ್ತಿವೆ. ಈ ಕಾರಣದ ಜೊತೆಗೆ ಇಂಟರ್‌ನ್ಯಾಷನಲ್‌ ಮಾನಿಟರಿ ಫಂಡ್ ಕೂಡ ಇತ್ತೀಚೆಗೆ ಜಾಗತಿಕ ಜಿಡಿಪಿ ದರದ ಮುನ್ನೋಟವನ್ನು ಶೇ.3.3ರಿಂದ ಶೇ.3.2ಕ್ಕೆ ತಗ್ಗಿಸಿದ್ದರಿಂದ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಹೂಡಿದ ಹಣವನ್ನು ಹಿಂಪಡೆಯುತ್ತಿದ್ದಾರೆ.

    ಬೆಲೆ ಏರಿಕೆ ಆಗುತ್ತಿದೆ ಎನ್ನುವ ಕಾರಣಕ್ಕೆ ಚಿನ್ನದ ದರ ಭಾರೀ ಏರಿಕೆಯಾಗಿಲ್ಲ. 2013ಕ್ಕೆ ಹೋಲಿಸಿದರೆ ಈಗಲೂ ಕಡಿಮೆಯೇ ಇದೆ. 2013ರಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 29,277 ರೂ. ತಲುಪಿತ್ತು. ಆದರೆ ಈಗ ಒಂದೇ ಸಮನೆ ಏರುತ್ತಿರುವುದನ್ನು ಗಮನಿಸಿದರೆ ದೀಪಾವಳಿ ವೇಳೆಗೆ 40 ಸಾವಿರ ರೂ. ಗಡಿ ದಾಟಬಹುದು ಎಂದು ಈ ಕ್ಷೇತ್ರದಲ್ಲಿರುವ ಪರಿಣಿತರು ಅಂದಾಜಿಸಿದ್ದಾರೆ.

    ಇಡೀ ವಿಶ್ವದಲ್ಲಿ ಉತ್ಪಾದನೆ ಕಡಿಮೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ. ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇದ್ದರೆ 2019ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 59 ಡಾಲರ್ ಇಳಿಕೆಯಾಗಿದೆ. ಆರ್ಥಿಕ ಬಿಕ್ಕಟ್ಟು, ಮಂದಗತಿಯಲ್ಲಿ ಪ್ರಗತಿ, ಹಣದುಬ್ಬರದ ಸಂದರ್ಭದಲ್ಲಿ ಹೂಡಿಕೆದಾರರು ಷೇರುಗಳ ಬದಲು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸೇಫ್ ಎಂದು ತಿಳಿದು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ.

    24 ಕ್ಯಾರೆಟ್ ಚಿನ್ನ Vs 22 ಕ್ಯಾರೆಟ್ ಚಿನ್ನ
    24 ಕ್ಯಾರೆಟ್ ಶುದ್ಧ ಚಿನ್ನವಾಗಿದ್ದು 22 ಕ್ಯಾರೆಟ್‍ಗೆ ಹೋಲಿಕೆ ಮಾಡಿದರೆ ಮೃದು ಇರುತ್ತದೆ ಮತ್ತು ತುಂಡಾಗುತ್ತದೆ. ಆದರೆ ಶುದ್ಧವಾಗಿರುವ ಕಾರಣ ಬೆಲೆ ದುಬಾರಿಯಾಗಿರುತ್ತದೆ. 22 ಕ್ಯಾರೆಟ್ ನಲ್ಲಿ 22 ಭಾಗ ಶುದ್ಧ ಚಿನ್ನವಾಗಿದ್ದರೆ 2 ರಷ್ಟು ಭಾಗ ತಾಮ್ರ ಅಥವಾ ಬೆಳ್ಳಿಯ ಮಿಶ್ರಣ ಮಾಡಲಾಗುತ್ತದೆ. ಹೀಗಾಗಿ ಈ ಚಿನ್ನ ಗಟ್ಟಿ ಇರುತ್ತದೆ 24 ಕ್ಯಾರೆಟ್‍ಗೆ ಹೋಲಿಸಿದರೆ ಬೆಲೆ ಕಡಿಮೆ ಇರುತ್ತದೆ.