Tag: track

  • ಅಂಗಡಿಗಳಿಗೆ ಗೂಡ್ಸ್ ರೈಲು ಡಿಕ್ಕಿ – ಕಾಂಪೌಂಡ್ ಛಿದ್ರ, 10 ಅಡಿ ದೂರ ಸರಿದ ಬುಕ್‍ಸ್ಟಾಲ್

    ಅಂಗಡಿಗಳಿಗೆ ಗೂಡ್ಸ್ ರೈಲು ಡಿಕ್ಕಿ – ಕಾಂಪೌಂಡ್ ಛಿದ್ರ, 10 ಅಡಿ ದೂರ ಸರಿದ ಬುಕ್‍ಸ್ಟಾಲ್

    ಯಾದಗಿರಿ: ಗೂಡ್ಸ್ ರೈಲೊಂದು ಹಳಿ ಬಿಟ್ಟು ಪ್ಲಾಟ್‍ಫಾರ್ಮ್ ಮೇಲೆ ಬಂದ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲು ಗುದ್ದಿದ ರಭಸಕ್ಕೆ ನಿಲ್ದಾಣದ ಕಾಂಪೌಂಡ್ ಛಿದ್ರ ಛಿದ್ರವಾಗಿದ್ದು, ಅಂಗಡಿ ಹಾಗೂ ಬುಕ್ ಸ್ಟಾಲ್‍ಗೆ ಹಾನಿಯಾಗಿದೆ.

    ರೈಲಿನಿಂದ ಗೂಡ್ಸ್ ಖಾಲಿ ಮಾಡುವಾಗ ಈ ಘಟನೆ ನಡೆದಿದೆ. ಲೊಕೋ ಪೈಲಟ್ ರೈಲನ್ನು ರಿವರ್ಸ್ ತರುತ್ತಿದ್ದಾಗ ರೈಲು ಹಳಿ ದಾಟಿ ಪ್ಲಾಟ್‍ಫಾರ್ಮ್ ಮೇಲೆ ಬಂದಿದೆ. ಹಿಂಬದಿಯಿಂದ ನಿಲ್ದಾಣದ ಕಾಂಪೌಂಡ್‍ಗೆ ಡಿಕ್ಕಿ ಹೊಡೆದು, ಬಳಿಕ ಪ್ಲಾಟ್‍ಫಾರ್ಮ್ ಮೇಲಿದ್ದ ಬುಕ್ ಸ್ಟಾಲ್‍ಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂಪೌಂಡ್ ಒಡೆದು ಬಿದ್ದಿದ್ದು, ಇದ್ದ ಸ್ಥಳದಿಂದ ಸುಮಾರು 10 ಅಡಿ ದೂರಕ್ಕೆ ಬುಕ್ ಸ್ಟಾಲ್ ಅನ್ನು ರೈಲು ತಳ್ಳಿದೆ.

    ಅದೃಷ್ಟವಶಾತ್ ಘಟನೆ ವೇಳೆ ಅಂಗಡಿಯಲ್ಲಿ ಯಾರು ಇರಲಿಲ್ಲ. ಹಾಗೂ ಪ್ರಯಾಣಿಕರು ಕೂಡ ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಸಿಗ್ನಲ್ ಹಾಗೂ ಸ್ಟಾಪ್ ಪಾಯಿಂಟ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರೈಲ್ವೇ ಹಳಿಯ ಮೇಲೆ ಪಾರ್ಟಿ – ಮೂವರ ಪ್ರಾಣವೇ ಹೋಯ್ತು!

    ರೈಲ್ವೇ ಹಳಿಯ ಮೇಲೆ ಪಾರ್ಟಿ – ಮೂವರ ಪ್ರಾಣವೇ ಹೋಯ್ತು!

    ನವದೆಹಲಿ: ಹಳಿ ಮೇಲೆ ಕುಳಿತಿದ್ದ ಮೂವರು ರೈಲಿಗೆ ಬಲಿಯಾಗಿರುವ ದುರ್ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಬೆಳಿಗ್ಗೆ ನಂಗ್ಲೋಯಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಮೂವರು ಮದ್ಯ ಸೇವನೆ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

    ಮೂವರೂ ಬೆಳಗ್ಗೆ ಸುಮಾರು 7.15 ಕ್ಕೆ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಈ ವೇಳೆ ಬಿಕಾನೆರ್-ದೆಹಲಿ ಎಕ್ಸ್ ಪ್ರೆಸ್ ರೈಲು ಬಂದಿದೆ. ಈ ಸಂದರ್ಭದಲ್ಲಿ ರೈಲು ಚಾಲಕ ಹಾರ್ನ್ ಹಾಕಿದ್ದಾನೆ. ಆದರೂ ಅವರು ಹಳಿಯಿಂದ ಕದಲದ ಕಾರಣ ಅವರ ಮೇಲೆ ರೈಲು ಸಂಚರಿಸಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ರೈಲ್ವೇ ಡಿಸಿಪಿ ದಿನೇಶ್ ಗುಪ್ತ ಅವರು ತಿಳಿಸಿದ್ದಾರೆ.

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ರೈಲ್ವೇ ರಕ್ಷಣಾ ಪಡೆ ಮತ್ತು ಸಿವಿಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯಕ್ಕೆ ಮೃತರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಈ ಕುರಿತು ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

    ವಿಜಯದಶಿಮಿ ಹಿನ್ನೆಲೆಯಲ್ಲಿ ಅಮೃತಸರದ ಜೋದಾ ಪಾಟ್ಕರ್ ನಲ್ಲಿ ರಾವಣನ ಪ್ರತಿಕೃತಿ ಸಂಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದು ಕೆಲವರು ರೈಲು ಹಳಿ ಮೇಲೆ ನಿಂತಿದ್ದರು. ಈ ವೇಳೆ ಹಳಿ ಮೇಲೆ ಜಮಾಯಿಸಿದ್ದ ಜನರ ಮೇಲೆ ಏಕಾಏಕಿ ರೈಲು ಹರಿದಿತ್ತು. ಈ ದುರಂತದಲ್ಲಿ 60ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • RTPSನಲ್ಲಿ ಹಳಿ ತಪ್ಪಿದ ಕಲ್ಲಿದ್ದಲು ತುಂಬಿದ ರೈಲು!

    RTPSನಲ್ಲಿ ಹಳಿ ತಪ್ಪಿದ ಕಲ್ಲಿದ್ದಲು ತುಂಬಿದ ರೈಲು!

    ರಾಯಚೂರು: ವಿದ್ಯುತ್ ಕೇಂದ್ರ ಆರ್ ಟಿ ಪಿಎಸ್ ನಲ್ಲಿ ಕಲ್ಲಿದ್ದಲು ತುಂಬಿದ ರೈಲು ಹಳಿ ತಪ್ಪಿದ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

    ರೈಲು ಹಳಿ ತಪ್ಪಿದ್ದರಿಂದ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಕಲ್ಲಿದ್ದಲು ತುಂಬಿದ ರೈಲಿನ ರೇಕ್ ಗಳು ನೆಲಕ್ಕೆ ಇಳಿದಿವೆ. ಮಹಾನದಿ ಕೋಲ್ ಫೀಲ್ಡ್ ನಿಂದ ಆರ್ ಟಿ ಪಿಎಸ್ ಗೆ ಕಲ್ಲಿದ್ದಲು ಸಾಗಿಸುತ್ತಿದ್ದ ವೇಳೆ ಘಟನೆ ನಡೆದಿದೆ.

    ವಿದ್ಯುತ್ ಕೇಂದ್ರದಲ್ಲಿ ಯಾವುದೇ ಅಪಾಯವಾಗಿಲ್ಲ. ಎರಡು ದಿನ ಕಾಲ ರೈಲು ಸಂಚಾರ ಮಾರ್ಗ ನಿಲುಗಡೆಯಾಗಲಿದೆ. ಕಲ್ಲಿದ್ದಲನ್ನು ನೆಲಕ್ಕೆ ಹಾಕಿ ಸಿಬ್ಬಂದಿ ಸಾಗಣೆ ಮಾಡುತ್ತಿದ್ದಾರೆ. ಕಲ್ಲಿದ್ದಲು ಸಂಗ್ರಹಣೆ ಕೊರತೆಯಾಗುವ ಹಿನ್ನೆಲೆ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

    ಇನ್ನೂ 1720 ಮೆಗಾ ವ್ಯಾಟ್ ಸಾಮಥ್ರ್ಯದ ವಿದ್ಯುತ್ ಕೇಂದ್ರದಲ್ಲಿ ಈಗ ಕೇವಲ 402 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಒಟ್ಟು ಎಂಟು ಘಟಕಗಳಲ್ಲಿ ಐದು ಮತ್ತು ಎಂಟನೆ ಘಟಕ ಮಾತ್ರ ವಿದ್ಯುತ್ ಉತ್ಪಾದಿಸುತ್ತಿವೆ. ಉಳಿದ 6 ಘಟಕಗಳ ಬೇಡಿಕೆ ಕುಸಿತ ಹಾಗೂ ತಾಂತ್ರಿಕ ಕಾರಣದಿಂದ ಕಾರ್ಯ ಸ್ಥಗಿತಗೊಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೆಟ್ರೋ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದುರಂತ, ಕ್ಷಣಾರ್ಧದಲ್ಲಿ ಪಾರಾದ ಯುವಕ – ವಿಡಿಯೋ ವೈರಲ್

    ಮೆಟ್ರೋ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದುರಂತ, ಕ್ಷಣಾರ್ಧದಲ್ಲಿ ಪಾರಾದ ಯುವಕ – ವಿಡಿಯೋ ವೈರಲ್

    ನವದೆಹಲಿ: ತುಂಬಾ ಜನರು ಅವಸರದಲ್ಲಿ ರೈಲ್ವೇ ಟ್ರ್ಯಾಕ್ ದಾಟಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ 21 ವರ್ಷದ ಯುವಕನೊಬ್ಬ ದೆಹಲಿಯ ಮೆಟ್ರೋ ಟ್ರ್ಯಾಕ್ ದಾಟುತ್ತಿದ್ದಾಗ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ದೆಹಲಿಯ ಶಾಸ್ತ್ರೀ ನಗರದಲ್ಲಿರುವ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ಸಂಭವಿಸಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳಿ ದಾಟಿದ ಯುವಕ ಮಯೂರ್ ಪಟೇಲ್ ಎಂದು ತಿಳಿದು ಬಂದಿದೆ. ಪಟೇಲ್ ಮೆಟ್ರೋ ನಿಲ್ದಾಣದಲ್ಲಿ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗಲು ಬ್ರಿಡ್ಜ್ ಬದಲು ಮೆಟ್ರೋ ಟ್ರ್ಯಾಕ್ ಹಾದು ಹೋಗಲು ಮುಂದಾಗಿದ್ದಾನೆ.

    ಇದೇ ವೇಳೆ ಹೊರಡಲು ಸಿದ್ಧವಾಗಿ ಟ್ರ್ಯಾಕ್ ಮೇಲೆ ರೈಲು ನಿಂತಿದೆ. ಆದರೆ ಪಟೇಲ್ ನಿಲುಗಡೆ ಮಾಡಿದ ರೈಲಿನ ಬಗ್ಗೆ ಹೆಚ್ಚು ಗಮನ ಕೊಡದೇ ಒಂದು ಟ್ರ್ಯಾಕ್ ದಾಟಿ ಇನ್ನೊಂದು ಟ್ರ್ಯಾಕ್ ದಾಟಿ ಮೇಲೆ ಹತ್ತಲು ಯತ್ನಿಸಿದ್ದಾನೆ. ಆಗ ನಿಧಾನವಾಗಿ ರೈಲು ಚಲಿಸಿದೆ. ಆದರೆ ಪಟೇಲ್ ಕೈ ಜಾರಿ ಆಕಸ್ಮಿಕವಾಗಿ ಕೆಳಗೆ ಜಾರಿದ್ದಾನೆ. ಸದ್ಯ ಈ ವೇಳೆ ಅದೃಷ್ಟವಶಾತ್ ರೈಲು ನಿಂತಿದೆ. ತಕ್ಷಣ ಆತ ಮುಂದೆ ನಡೆದುಕೊಂಡು ಹೋಗಿ ಮೇಲೆ ಹತ್ತಿದ್ದಾನೆ.

    ಪಟೇಲ್ ಮಾಡಿದ್ದು ಅಪರಾಧವಾಗಿದ್ದು, ಆತನನ್ನು ಬಂಧಿಸಿ ದಂಡ ವಿಧಿಸಲಾಗಿದೆ. ತದನಂತರ ವಿಚಾರಣೆ ನಡೆಸಿದಾಗ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗುವ ಮಾರ್ಗ ತಿಳಿದಿಲ್ಲದ ಕಾರಣ ಈ ರೀತಿಯಾಗಿ ಮಾಡಿರುವುದಾಗಿ ತಿಳಿಸಿದ್ದಾನೆ.

    ಅನುಮತಿ ಇಲ್ಲದಿದ್ದರೂ ಟ್ರ್ಯಾಕ್ ಹಾದು ಹೋಗಲು ಯತ್ನಿಸಿದರೆ ಅದು ಕಾನೂನು ಬಾಹಿರವಾಗಿರುತ್ತದೆ. ಅಷ್ಟೇ ಅಲ್ಲದೇ ಅವರಿಗೆ ಆರು ತಿಂಗಳುಗಳವರೆಗೆ ಜೈಲು ಶಿಕ್ಷೆ ಅಥವಾ 500 ರೂಪಾಯಿ ದಂಡ ವಿಧಿಸಬಹುದಾಗಿದೆ ಎಂದು ದೆಹಲಿ ಮೆಟ್ರೋ ಹೇಳಿದೆ.

  • ರೈಲಿನ ಕೆಳಗೆ ನುಗ್ಗಿ ಟ್ರ್ಯಾಕ್ ದಾಟ್ತೀರಾ?- ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ರೈಲಿನ ಕೆಳಗೆ ನುಗ್ಗಿ ಟ್ರ್ಯಾಕ್ ದಾಟ್ತೀರಾ?- ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಲಕ್ನೋ: ರೈಲು ನಿಲ್ದಾಣಗಳಲ್ಲಿ ಒಂದು ಪ್ಲಾಟ್‍ಫಾರ್ಮ್‍ನಿಂದ ಮತ್ತೊಂದಕ್ಕೆ ಹೋಗಲು ಬ್ರಿಡ್ಜ್ ಇರುತ್ತೆ. ಆದರೂ ಕೆಲವರು ಅವಸರದಲ್ಲಿ ಟ್ರ್ಯಾಕ್ ಮೇಲೆಯೇ ನಡೆದುಕೊಂಡು ಹೋಗಿ ದಾಟಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಟ್ರ್ಯಾಕ್ ಮೇಲೆ ರೈಲು ನಿಂತಿದ್ದರೆ ಅದರ ಕೆಳಗೆ ನುಸುಳಿ ಮತ್ತೊಂದು ಬದಿಗೆ ಹೋಗೋದನ್ನ ನೋಡಿರ್ತೀವಿ. ಹಾಗೊಂದು ವೇಳೆ ನುಗ್ಗುವಾಗ ರೈಲು ಚಲಿಸಲು ಆರಂಭಿಸಿದ್ರೆ ಹೇಗಾಗಬೇಡ? ಇಂತಹದ್ದೇ ಒಂದು ಘಟನೆ ನಡೆದಿದ್ದು, ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯ ಬಂಕಾಟಾ ರೈಲ್ವೆ ನಿಲ್ದಾಣದಲ್ಲಿ ನವೆಂಬರ್ 15ರಂದು ಈ ಘಟನೆ ನಡೆದಿದೆ. ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ರೈಲು ಹಾದು ಹೋದರೂ ಅವರಿಗೆ ಸಣ್ಣ ಪುಟ್ಟ ಗಾಯಗಳೂ ಕೂಡ ಆಗಿಲ್ಲ.

    ನಡೆದಿದ್ದೇನು?: ವ್ಯಕ್ತಿಯೊಬ್ಬರು ರೈಲು ಹಿಡಿಯಲು ಮತ್ತೊಂದು ಪ್ಲಾಟ್‍ಫಾರ್ಮ್‍ಗೆ ಹೋಗಬೇಕಿತ್ತು. ಅವರು ಫುಟ್ ಓವರ್ ಬ್ರಿಡ್ಜ್ ಬದಲು ಟ್ರ್ಯಾಕ್ ಮೇಲೆ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಸುಳಿದ್ದರು. ಆ ವ್ಯಕ್ತಿ ರೈಲಿನ ಕೆಳಗೆ ನುಗ್ಗುತ್ತಿದ್ದಂತೆ ರೈಲು ಚಲಿಸಲು ಆರಂಭಿಸಿತ್ತು.

    ಮುಂದಾಗೋ ಪರಿಣಾಮದ ಅರಿವಾಗಿ ಆ ವ್ಯಕ್ತಿ ಟ್ರ್ಯಾಕ್ ಮೇಲೆಯೇ ಮಲಗಿಕೊಂಡ್ರು. ರೈಲು ತನ್ನ ಪಾಡಿಗೆ ಟ್ರ್ಯಾಕ್ ಮೇಲೆ ಹಾದು ಹೋಯ್ತು. ರೈಲು ನಿಲ್ದಾಣದಿಂದ ಹೊರಟ ನಂತರ ಆ ವ್ಯಕ್ತಿ, ಬದುಕಿದೆ ಬಡ ಜೀವ ಅಂತ ನಿಟ್ಟುಸಿರು ಬಿಟ್ರು. ಈ ಎಲ್ಲಾ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಒಂದು ವೇಳೆ ಅವರು ಗಾಬರಿಯಿಂದ ಅತ್ತಿತ್ತ ಓಡಾಡಿದ್ರೆ ಅಥವಾ ತಲೆಯನ್ನ ಮೇಲೆ ಎತ್ತಿದ್ರೆ ಅನಾಹುತಾವಾಗುತಿತ್ತು. ಆದ್ರೆ ಟ್ರ್ಯಾಕ್ ಮೇಲೆ ಉದ್ದಕ್ಕೆ ಮಲಗಿಕೊಂಡಿದ್ರಿಂದ ಯಾವುದೇ ಸಣ್ಣ ಪುಟ್ಟ ಗಾಯಗಳೂ ಕೂಡ ಆಗದೆ ಬಚಾವಾದ್ರು.

    ಆದ್ರೆ ಎಲ್ಲರಿಗೂ ಇದೇ ರೀತಿ ಆಗುತ್ತೆ ಅಂತ ಹೇಳೋಕಾಗಲ್ಲ. ಆದ್ದರಿಂದ ಟ್ರ್ಯಾಕ್ ದಾಟೋ ಬದಲು ಬ್ರಿಡ್ಜ್ ಬಳಸೋದು ಸೂಕ್ತ.

  • ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ

    ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ

    ಭೋಪಾಲ್: ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದು, ರೈಲು ಡಿಕ್ಕಿಯಾಗಿ ಅಥವಾ ಇನ್ನೂ ಹಲವಾರು ಸಂದರ್ಭಗಳಲ್ಲಿ ವ್ಯಕ್ತಿ ಪವಾಡಸದೃಶವಾಗಿ ಬದುಕುಳಿರುವ ಬಗ್ಗೆ ಅನೇಕ ಬಾರಿ ಕೇಳಿದ್ದಿವಿ. ಹೀಗೆ ಮಧ್ಯಪ್ರದೇಶದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.

    ಭಾನುವಾರದಂದು ಇಲ್ಲಿನ ಸತ್ನಾ ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರ ಮೇಲೆ ಗೂಡ್ಸ್ ರೈಲು ಹರಿದರೂ ಅವರಿಗೆ ಸಣ್ಣ ಪುಟ್ಟ ಗಾಯಗಳೂ ಆಗದೆ ಬದುಕುಳಿದಿದ್ದಾರೆ. ಜವಹಾರ್ ನಗರದ ನಿವಾಸಿಯಾದ ವೃದ್ಧ ರಾಧೆಶ್ಯಾಮ್ ಎರಡು ಪ್ಲಾಟ್‍ಫಾರ್ಮ್‍ಗಳ ನಡುವೆ ಇದ್ದ ಟ್ರ್ಯಾಕ್‍ಗಳನ್ನ ದಾಟುತ್ತಿದ್ದರು. ಟ್ರ್ಯಾಕ್‍ನಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಗ್ಗಿ ಮತ್ತೊಂದು ಬದಿಗೆ ಹೋಗಲು ಪ್ರಯತ್ನಿಸುತ್ತಿದ್ದರು. ಈ ವೇಳೆ ರೈಲು ಚಲಿಸಲು ಶುರುವಾಗಿದೆ. ತಕ್ಷಣ ಆ ವೃದ್ಧ ಟ್ರ್ಯಾಕ್ ಮೇಲೆ ಉದ್ದಕ್ಕೆ ಮಲಗಿದ್ದಾರೆ. ರೈಲಿನ ಎಲ್ಲಾ ಬೋಗಿಗಳು ಹಾದು ಹೋಗಲು ಸುಮಾರು 3 ನಿಮಿಷ ಹಿಡಿದಿದೆ. ಅಲ್ಲಿಯತನಕ ವೃದ್ಧ ಟ್ರ್ಯಾಕ್ ಮೇಲೆಯೇ ಮಲಗಿದ್ದಾರೆ. ಒಂದು ವೇಳೆ ಅವರು ಗಾಬರಿಯಿಂದ ಅಲುಗಾಡಿದ್ದರೆ ಪ್ರಾಣವೇ ಹೋಗುವ ಸಂಭವವಿತ್ತು.

    ಈ ಘಟನೆಯನ್ನ ಪ್ರತ್ಯಕ್ಷವಾಗಿ ಕಂಡ ಕೆಲವರು ಇದನ್ನ ಮೊಬೈಲ್‍ನಲ್ಲಿ ಸರೆಹಿಡಿದಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ. ರೈಲು ಮುಂದಕ್ಕೆ ಹೋದ ನಂತರ ವ್ಯಕ್ತಿಯೊಬ್ಬರು ಟ್ರ್ಯಾಕ್ ಬಳಿ ಹೋಗಿ ವೃದ್ಧರನ್ನು ಮೇಲೆತ್ತಿ ಕೈ ಹಿಡಿದುಕೊಂಡು ಅಲ್ಲಿಂದ ಕರೆದುಕೊಂಡು ಬಂದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ವೃದ್ಧರಿಗೆ ಯಾವುದೇ ಗಾಯಗಳಾಗಿಲ್ಲ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೃದ್ಧ ರಾಧೆಶ್ಯಾಮ್, ದೇವರ ದಯದಿಂದ ನಾನು ಬದುಕುಳಿದೆ ಎಂದಿದ್ದಾರೆ.