Tag: toy

  • ಕೊರೊನಾ ಸೋಂಕಿತ ಮಕ್ಕಳಲ್ಲಿ ನಗು ತರಿಸಿದ ಕೋವಿಡ್-19 ವೈದ್ಯ ಜಾಕಾ

    ಕೊರೊನಾ ಸೋಂಕಿತ ಮಕ್ಕಳಲ್ಲಿ ನಗು ತರಿಸಿದ ಕೋವಿಡ್-19 ವೈದ್ಯ ಜಾಕಾ

    -ವೈದ್ಯರ ಆಲೋಚನೆಗೆ ಜಿಲ್ಲಾಧಿಕಾರಿ ಪತ್ನಿ ಮತ್ತು ಎಸ್‍ಪಿ ಪತ್ನಿ ಸಾಥ್
    -ಚಿಕಿತ್ಸೆ ಜೊತೆಯಲ್ಲಿಯೇ ಮಕ್ಕಳಿಗೆ ಆಟ

    ಯಾದಗಿರಿ: ಜಿಲ್ಲೆಯಲ್ಲಿ ಸದ್ಯ ಕೊರೊನಾ ರುದ್ರ ತಾಂಡವಾಡುತ್ತಿದೆ. ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಿಗೆ ಕೋವಿಡ್ ಎಂಬ ಬೇತಾಳ ಬೆನ್ನು ಬಿದ್ದಿದ್ದಾನೆ. ಹೀಗಾಗಿ ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ 300ರ ಸಮೀಪ ಬಂದು ನಿಂತಿದೆ. ಈ 300ರಲ್ಲಿ ವೃದ್ಧರು, ಯುವಕರು, ಗರ್ಭಿಣಿ, ಬಾಣಂತಿಯರು ಹೀಗೇ ಎಲ್ಲಾ ವಯಸ್ಸಿನವರು ಇದ್ದಾರೆ. ಇದರ ಜೊತೆಗೆ ಹಾಲು ಕುಡಿಯುವ ಕಂದಮ್ಮಗಳಿಂದ 10 ವರ್ಷದ ವರೆಗಿನ ಮಕ್ಕಳು ಅತೀ ಹೆಚ್ಚಾಗಿರುವುದು, ಬಹಳಷ್ಟು ನೋವಿನ ಸಂಗತಿ.

    ಜಿಲ್ಲೆಯಲ್ಲಿ ಇದುವರೆಗೆ 55ಕ್ಕೂ ಅಧಿಕ ಮಕ್ಕಳು ಕೊರೊನಾ ಪಾಸಿಟಿವ್ ಗೆ ಒಳಗಾಗಿವೆ. ಈ ಎಲ್ಲಾ ಮಕ್ಕಳನ್ನು ಸದ್ಯ ಯಾದಗಿರಿ ನಗರದ ಹೊರ ವಲಯದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಮಕ್ಕಳು ಈ ಅವಧಿಯಲ್ಲಿ ಬಹಳಷ್ಟು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಯಾಕೆಂದರೆ ಚಿಕಿತ್ಸಾ ಅವಧಿ ದೀರ್ಘವಾಗಿದ್ದು, ಮಕ್ಕಳು ಆಟವಿಲ್ಲದೆ, ಜೊತೆಗಾರಿಲ್ಲದೆ ಕೊರಗುತ್ತಿವೆ.

    ಮಕ್ಕಳ ಈ ಪರಿಸ್ಥಿತಿ ಕಂಡ ಕೋವಿಡ್ ವಿಶೇಷ ಸೇವೆ ಸಲ್ಲಿಸುತ್ತಿರುವ ಡಾ.ವಿರೇಶ್ ಜಾಕಾ, ಒಂದು ವಿಭಿನ್ನ ಆಲೋಚನೆಯನ್ನು ಮಾಡಿ ಮಕ್ಕಳ ಮುಖದಲ್ಲಿ ನಗು ತರಸಲು ಮುಂದಾಗಿದ್ದಾರೆ. ಜಾಕಾ ತಮ್ಮ ಮನೆಯಲ್ಲಿರುವ ಆಟಿಕೆಗಳ ಜೊತೆ ಹೊಸ ಗೊಂಬೆಗಳನ್ನು ಖರೀದಿಸಿ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ನೀಡುತ್ತಿದ್ದಾರೆ. ವೈದ್ಯರ ಈ ಆಲೋಚನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಪತ್ನಿ ಡಾ.ತೇಜಾ ಮತ್ತು ಎಸ್ ಪಿ ಅವರ ಪತ್ನಿ ರುತುಜಾ ತಮ್ಮ ಮಕ್ಕಳ ಆಟಿಕೆ ಮತ್ತು ಹೊಸ ಗೊಂಬೆಗಳನ್ನು ಖರಿದೀಸಿ ಆಸ್ಪತ್ರೆಗೆ ನೀಡಿದ್ದಾರೆ.

    ಇದೇ ರೀತಿ ಯಾದಗಿರಿಯ ಹಿರಿಯ ಅಧಿಕಾರಿಗಳು, ವೈದ್ಯರು ತಮ್ಮ ಮಕ್ಕಳ ಆಟಿಕೆಗಳ ಜೊತೆ ಹೊಸ ಗೊಂಬೆಗಳನ್ನು ಕೋವಿಡ್ ನಿಂದ ಬಳಲುತ್ತಿರುವ ಮಕ್ಕಳಿಗೆ ನೀಡುತ್ತಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಜಿಲ್ಲಾಡಳಿತದ ಜೊತೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆಟಿಕೆ ಆಡಿ ವರ್ಷಕ್ಕೆ 70 ಕೋಟಿ ರೂ. ಸಂಪಾದಿಸಿದ 6ರ ಪೋರ!

    ಆಟಿಕೆ ಆಡಿ ವರ್ಷಕ್ಕೆ 70 ಕೋಟಿ ರೂ. ಸಂಪಾದಿಸಿದ 6ರ ಪೋರ!

    ವಾಷಿಂಗ್ಟನ್: ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುತ್ತಾರೆ. ಆದರೆ ಅಮೆರಿಕದ 6 ವರ್ಷದ ಬಾಲಕ ಆಟಿಕೆಗಳ ಜೊತೆ ಆಟವಾಡಿ ಸುಮಾರು 70 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.

    ಇತ್ತೀಚೆಗೆ ಫೋರ್ಬ್ಸ್ ಅತೀ ಹೆಚ್ಚು ಸಂಪಾದನೆ ಮಾಡುವ ಯೂಟ್ಯೂಬ್‍ರ್ಸ್ ಪಟ್ಟಿಯನ್ನ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಅಮೆರಿಕದ 6 ವರ್ಷದ ಬಾಲಕ ರಯಾನ್ ಹೆಸರಿದೆ. ಈತ ತನ್ನ ಆಟಿಕೆಗಳು ಮತ್ತು ಮಿಠಾಯಿಗಳ ವಿಮರ್ಶೆ ಮಾಡುವುದರ ಮೂಲಕ ಒಂದು ವರ್ಷದಲ್ಲಿ 11 ದಶಲಕ್ಷ ಡಾಲರ್ (ಅಂದಾಜು 70 ಕೋಟಿ ರೂ.) ಸಂಪಾದನೆ ಮಾಡಿದ್ದಾನೆ.

    ಫೋರ್ಬ್ಸ್ ನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ರಯಾನ್ 8 ನೇ ಸ್ಥಾನದಲ್ಲಿದ್ದಾನೆ. ಯೂಟ್ಯೂಬ್‍ನಲ್ಲಿ “ರಯಾನ್ ಟಾಯ್ಸ್ ರಿವೀವ್” ಚಾನೆಲ್ ನನ್ನು ಈತನ ಪೋಷಕರು ಆರಂಭಿಸಿದ್ದು, ಹಲವಾರು ಟಾಯ್ಸ್ ಗಳ ವಿಮರ್ಶೆ ಮಾಡಿ ಅದರ ವಿಡಿಯೋಗಳನ್ನು ಯೂಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ.

    ಈ ಬಾಲಕನಿಗೆ ಕಾರ್‍ಗಳು, ರೈಲುಗಳು, ಥಾಮಸ್ ಅಂಡ್ ಫ್ರೆಂಡ್ಸ್, ಲೀಗೋ, ಸೂಪರ್‍ಹೀರೋಸ್, ಡಿಸ್ನಿ ಆಟಿಕೆ ಇತ್ಯಾದಿಗಳನ್ನು ತುಂಬಾ ಪ್ರೀತಿಸುತ್ತಾನೆ. ಜೊತೆಗೆ ಕುಟುಂಬದ ಮೋಜು, ಸಾಹಸಗಳನ್ನು ಇಷ್ಟಪಟ್ಟಿದ್ದಾನೆ. ಅಷ್ಟೇ ಅಲ್ಲದೇ ಮಕ್ಕಳಿಗಾಗಿ ಮೋಜು ಮತ್ತು ಸುಲಭವಾದ ವಿಜ್ಞಾನ ಪ್ರಯೋಗಳನ್ನು ಮಾಡುತ್ತಾನೆ.

    ರಯಾನ್ ಪೋಷಕರು 2015 ಮಾರ್ಚ್ ನಲ್ಲಿ ಈ ಚಾನೆಲ್ ಪ್ರಾರಂಭಿಸಿದ್ದರು. ಪ್ರಾರಂಭವಾದ 4 ತಿಂಗಳಲ್ಲಿ ದೈತ್ಯ ಮೊಟ್ಟೆಯ ಜೊತೆಗೆ ಡಾಯ್ಸ್ ಡಿಸ್ನಿ ಕಾರುಗಳು ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ಡಿಸೆಂಬರ್ 2017 ಕ್ಕೆ ಸುಮಾರು 800 ಮಿಲಿಯನ್ ವೀಕ್ಷಣೆಯಾಗಿತ್ತು. ನಂತರ ಏಪ್ರಿಲ್ 2016 ರಲ್ಲಿ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ಅದು ಸುಮಾರು 100 ಕೋಟಿ ಬಾರಿ ವೀಕ್ಷಣೆಯಾಗಿದೆ.

    ರಯಾನ್ ಟಾಯ್ಸ್ ರಿವೀವ್ ಚಾನೆಲ್‍ಗೆ ಸುಮಾರು 1 ಕೋಟಿ (10 ಮಿಲಿಯನ್) ಜನರು ಸಬ್ಸ್ ಸ್ಕ್ರೈಬ್ ಆಗಿದ್ದು, ಅವನು ಅಪ್ಲೋಡ್ ಮಾಡಿದ ಡಜನ್ಸ್ ವಿಡಿಯೋಗಳನ್ನು ಸುಮಾರು 1,600 ಕೋಟಿ (16 ಬಿಲಿಯನ್) ಬಾರಿ ವೀಕ್ಷಣೆ ಮಾಡಲಾಗಿದೆ.

    ಈಗ ಮತ್ತೆ ಈ ಕುಟುಂಬ “ರಯಾನ್ ಫ್ಯಾಮಿಲಿ ರಿವೀವ್” ಎಂಬ ಎರಡನೇ ಚಾನೆಲ್ ಪ್ರಾರಂಭಿಸಿದ್ದಾರೆ. ಇದು ಕುಟುಂಬದ ಪ್ರತಿದಿನ ಸಾಹಸ ಮತ್ತು ರಯಾನ್ ಸಹೋದರಿಯರಾದ ಎಮ್ಮಾ ಮತ್ತು ಕೇಟ್ ಅವರ ಮೇಲೆ ಕೇಂದ್ರಿಕರಿಸಲಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಚಾನೆಲ್ ಸಬ್ಸ್ ಸ್ಕ್ರೈಬ್ ಮಾಡಿದ್ದಾರೆ.

  • ನಿಮ್ಮ ಮಕ್ಕಳಿಗೆ ಪ್ಯಾಕೇಜ್ಡ್ ತಿಂಡಿ ಕೊಡೋ ಮೊದಲು ಈ ಸುದ್ದಿ ಓದಿ

    ನಿಮ್ಮ ಮಕ್ಕಳಿಗೆ ಪ್ಯಾಕೇಜ್ಡ್ ತಿಂಡಿ ಕೊಡೋ ಮೊದಲು ಈ ಸುದ್ದಿ ಓದಿ

     

    ಹೈದರಾಬಾದ್: ನಿಮ್ಮ ಮಕ್ಕಳು ಅಂಗಡಿಯಿಂದ ಚಿಪ್ಸ್ ಅಥವಾ ಇತರೆ ರೀತಿಯ ಪ್ಯಾಕೇಜ್ಡ್ ತಿಂಡಿ ತಂದು ತಿನ್ನುವಾಗ ಸ್ವಲ್ಪ ಎಚ್ಚರ ವಹಿಸಿ. ಕುರುಕಲು ತಿಂಡಿ ಮಕ್ಕಳ ಆರೋಗ್ಯವನ್ನ ಹಾಳು ಮಾಡುವುದರ ಜೊತೆಗೆ ಅವರ ಪ್ರಾಣಕ್ಕೂ ಕುತ್ತು ತರಬಹುದು. ಬಾಲಕನೊಬ್ಬ ಮಕ್ಕಳ ತಿಂಡಿಯಾದ ರಿಂಗ್ಸ್ ಪ್ಯಾಕೆಟ್‍ನಲ್ಲಿದ್ದ ಆಟಿಕೆ ನುಂಗಿ ಸಾವನ್ನಪ್ಪಿರೋ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಬುಧವಾರದಂದು ನಡೆದಿದೆ.

    ಇಲ್ಲಿನ ಏಳೂರಿನ ಕುಮ್ಮಾರಾ ರೇವು ಪ್ರದೇಶದಲ್ಲಿ 4 ವರ್ಷದ ಬಾಲಕ ನಿರೀಕ್ಷಣ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಮಕ್ಕಳ ತಿಂಡಿಯಾದ ರಿಂಗ್ಸ್ ಪ್ಯಾಕೆಟ್‍ನಲ್ಲಿ ಸಾಮಾನ್ಯವಾಗಿ ಒಂದು ಚಿಕ್ಕ ಆಟಿಕೆ ಇರುತ್ತದೆ. ಇದನ್ನ ಬಾಲಕ ನುಂಗಿದ್ದಾನೆ. ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದ್ರೂ ಯಾವುದೇ ಪ್ರಯೋಜನವಾಗಿಲ್ಲ.

    ಬಾಲಕ ಆಕಸ್ಮಿಕವಾಗಿ ಆಟಿಕೆಯನ್ನ ನುಂಗಿದನೋ ಅಥವಾ ಅದು ತಿನ್ನುವ ವಸ್ತು ಎಂದುಕೊಂಡು ನುಂಗಿದನೋ ಗೊತ್ತಿಲ್ಲ.

    ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.