Tag: toxic liquor

  • ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 55 ಮಂದಿ ಸಾವು ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್‌

    ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 55 ಮಂದಿ ಸಾವು ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್‌

    ಚೆನ್ನೈ: ತಮಿಳುನಾಡಿನ (Tamil Nadu) ಕಲ್ಲಕುರಿಚಿಯಲ್ಲಿ ಕಳ್ಳಭಟ್ಟಿ (Toxic Liquor) ಸೇವಿಸಿ 55 ಮಂದಿ ದುರಂತ ಸಾವಿಗೀಡಾದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕರುಣಾಪುರಂ ಗ್ರಾಮಕ್ಕೆ ಡಿಸ್ಟಿಲ್ಡ್ ಮದ್ಯವನ್ನು ಪೂರೈಸಿದ ಆರೋಪದ ಮೇಲೆ ಚಿನ್ನದೊರೈ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳಭಟ್ಟಿ ಸೇವಿಸಿದ್ದ ಇನ್ನೂ ಅನೇಕರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಗ್ರಾಮದಲ್ಲಿ ನಿತ್ಯ ಒಂದೊಂದು ಸಾವು ವರದಿಯಾಗುತ್ತಿದೆ. ಇದನ್ನೂ ಓದಿ: ದೆಹಲಿಯಲ್ಲಿ ನೀರಿನ ಬಿಕ್ಕಟ್ಟು – 2ನೇ ದಿನಕ್ಕೆ ಕಾಲಿಟ್ಟ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

    ನಿನ್ನೆ ಸಂಜೆಯವರೆಗೂ 29 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಮೃತರ ಅಂತ್ಯಕ್ರಿಯೆ ಕೂಡ ನಡೆದಿದೆ ಜಿಲ್ಲಾಧಿಕಾರಿ ಪ್ರಶಾಂತ್ ಎಂ.ಎಸ್. ತಿಳಿಸಿದ್ದಾರೆ.

    ನ್ಯಾಯಮೂರ್ತಿ ಬಿ ಗೋಕುಲದಾಸ್ (ನಿವೃತ್ತ) ಅವರಿರುವ ಏಕವ್ಯಕ್ತಿ ಆಯೋಗವು ಘಟನೆಯ ತನಿಖೆಯನ್ನು ಪ್ರಾರಂಭಿಸಿದೆ. ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಲವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ಇದನ್ನೂ ಓದಿ: ಬೆಳಗ್ಗೆ 9:15ರೊಳಗೆ ಕಚೇರಿಗೆ ಬರದಿದ್ದರೇ ಅರ್ಧ ದಿನದ ಸಂಬಂಳ ಕಟ್ – ಕೇಂದ್ರ ಸರ್ಕಾರಿ ನೌಕರರಿಗೆ ಡಿಒಪಿಟಿ ಎಚ್ಚರಿಕೆ!

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸ್ಟಾಲಿನ್ ಅಸಮರ್ಥರು ಎಂದು ಎಐಎಡಿಎಂಕೆ ಮುಖ್ಯಸ್ಥ ಇ.ಪಳನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಕನಿಷ್ಠ ಒಂದು ಸಾವಿರ ಮದ್ಯದ ಅಂಗಡಿಗಳನ್ನು ಸರ್ಕಾರ ಮುಚ್ಚಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಒತ್ತಾಯಿಸಿದ್ದಾರೆ.

  • ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸಾವು – ಮೃತರ ಸಂಖ್ಯೆ 37ಕ್ಕೆ ಏರಿಕೆ!

    ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸಾವು – ಮೃತರ ಸಂಖ್ಯೆ 37ಕ್ಕೆ ಏರಿಕೆ!

    – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

    ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ (Kallakurichi) ಜಿಲ್ಲೆಯಲ್ಲಿ ಕಳ್ಳಭಟ್ಟಿ ಪ್ಯಾಕೆಟ್‌ ಸಾರಾಯಿ (Toxic Liquor) ಕುಡಿದು ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 65ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಗಂಭೀರವಾಗಿರುವ 18 ಮಂದಿಯನ್ನು ಪುದುಚೆರಿಯ ಜಿಪ್ಮರ್‌, 6 ಮಂದಿಯನ್ನು ಸೇಲಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳ್ಳಬಟ್ಟಿಯಲ್ಲಿ ವಿಷಕಾರಿ ಮೆಥನಾಲ್ ಇರುವಿಕೆಯು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ (FSL Test) ಖಚಿತವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಡಿಎಂಕೆ ಸರ್ಕಾರ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?

    ಸಾಂದರ್ಭಿಕ ಚಿತ್ರ

    ಮೃತಪಟ್ಟವರ ಕುಟುಂಬಸ್ಥರು ಮಾಧ್ಯಮಗಳೊಂದಿಗೆ ಅಳಲು ತೋಡಿಕೊಂಡಿದ್ದಾರೆ. ನನ್ನ ಮಗನಿಗೆ ತೀವ್ರ ಹೊಟ್ಟೆ ನೋವು ಕಂಡು ಬಂದಿತ್ತು. ಅವನಿಗೆ ಕಣ್ಣು ತೆರೆಯಲೂ ಆಗುತ್ತಿರಲಿಲ್ಲ, ಏನಾದರೂ ಹೇಳಿದರೆ ಕಿವಿಯೂ ಕೇಳಿಸುತ್ತಿರಲಿಲ್ಲ. ಆಸ್ಪತ್ರೆಗೆ ಹೋದರೆ ಮದ್ಯಪಾನ ಮಾಡಿದ್ದಾನೆಂದು ದಾಖಲಿಸಲೂ ನಿರಾಕರಿಸಿದರು. ರಾಜ್ಯ ಸರ್ಕಾರ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ದೀಪಿಕಾ ಸ್ಟೇಜ್‌ನಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌ಗೆ ಕಾಲೆಳೆದ ಬಿಗ್ ಬಿ

    ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಆಗಿರುವ ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (AnnaMalai) ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಎಐಎಡಿಎಂಕೆ ಮುಖ್ಯಸ್ಥರಾಗಿರುವ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷದ ನಾಯಕ ಪಳನಿಸ್ವಾಮಿ ಅವರು ಆಡಳಿತಾರೂಢ ಡಿಎಂಕೆ ಪಕ್ಷವನ್ನು ತರಾಟಗೆ ತೆಗೆದುಕೊಂಡಿದ್ದಾರೆ. ಕಳೆದ ಬಾರಿಯೂ ಸರ್ಕಾರ ಈ ವಿಷಕಾರಿ ಮದ್ಯವನ್ನು ಮೆಥನಾಲ್ ಎಂದಷ್ಟೇ ಕರೆದು ಕೈತೊಳೆದುಕೊಂಡಿತ್ತು. ಇದರ ಬದಲು ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ತಲಾ 10 ಲಕ್ಷ ರೂ. ಪರಿಹಾರ:
    ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ (MK Stalin) 10 ಲಕ್ಷ ರೂ. ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ ನಿವೃತ್ತ ನ್ಯಾ. ಬಿ.ಗೋಕುಲದಾಸ್ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗಕ್ಕೆ ಪ್ರಕರಣದ ತನಿಖೆಗೆ ಸೂಚಿಸಿದ್ದು, 3 ತಿಂಗಳಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್‌!

  • ನಕಲಿ ಮದ್ಯ ಸೇವಿಸಿ 42 ಮಂದಿ ಸಾವು ಪ್ರಕರಣ – ಇಬ್ಬರು SP ವರ್ಗಾವಣೆ, 6 ಪೊಲೀಸರು ಸಸ್ಪೆಂಡ್‌

    ನಕಲಿ ಮದ್ಯ ಸೇವಿಸಿ 42 ಮಂದಿ ಸಾವು ಪ್ರಕರಣ – ಇಬ್ಬರು SP ವರ್ಗಾವಣೆ, 6 ಪೊಲೀಸರು ಸಸ್ಪೆಂಡ್‌

    ಗಾಂಧೀನಗರ: ನಕಲಿ ಮದ್ಯ ಸೇವಿಸಿ 42 ಮಂದಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಟಾಡ್‌ ಮತ್ತು ಅಹಮದಾಬಾದ್‌ನ ಇಬ್ಬರು ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು, 6 ಪೊಲೀಸರನ್ನು ಗುಜರಾತ್‌ ಗೃಹ ಇಲಾಖೆ ಅಮಾನತುಗೊಳಿಸಿದೆ.

    ಬೊಟಾಡ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮಿಥೈಲ್ ಆಲ್ಕೋಹಾಲ್ ಅಥವಾ ಮೆಥನಾಲ್ ಎಂಬ ಅತ್ಯಂತ ವಿಷಕಾರಿ ಕೈಗಾರಿಕಾ ದ್ರಾವಕದೊಂದಿಗೆ ನೀರನ್ನು ಬೆರೆಸಿ ನಕಲಿ ಮದ್ಯವನ್ನು ತಯಾರಿಸಿ ಪ್ರತಿ ಪೌಚ್‌ಗೆ 20 ರೂ.ಗೆ ಗ್ರಾಮಸ್ಥರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದಿದ್ದಕ್ಕೆ ಕ್ಷಮೆ ಕೋರಿದ ಅಧೀರ್ ರಂಜನ್ ಚೌಧರಿ

    ಮಿಥೈಲ್ ಆಲ್ಕೋಹಾಲ್ ಸೇವಿಸಿ 42 ಮಂದಿ ಮೃತಪಟ್ಟಿರುವುದು ವಿಧಿವಿಜ್ಞಾನ ವರದಿಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಾವು ಬೊಟಾಡ್ ಎಸ್ಪಿ ಕರಣ್‌ರಾಜ್ ವಘೇಲಾ ಮತ್ತು ಅಹಮದಾಬಾದ್ ಎಸ್ಪಿ ವೀರೇಂದ್ರಸಿಂಗ್ ಯಾದವ್ ಅವರನ್ನು ವರ್ಗಾವಣೆ ಮಾಡಿದ್ದೇವೆ. ಇಬ್ಬರು ಡೆಪ್ಯುಟಿ ಎಸ್‌ಪಿ ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ತರಗತಿಯನ್ನೇ ಮಸಾಜ್ ಪಾರ್ಲರ್ ಮಾಡಿಕೊಂಡ ಶಿಕ್ಷಕಿ – ವಿದ್ಯಾರ್ಥಿಗೆ ಮಸಾಜ್ ಮಾಡುವಂತೆ ಒತ್ತಾಯ

    ಕರ್ತವ್ಯ ಲೋಪ ಮತ್ತು ಬದ್ಧತೆಯ ಕೊರತೆಯಿಂದಾಗಿ ಈ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಏಕೆಂದರೆ ಅವರು ತಮ್ಮ ಪ್ರದೇಶಗಳಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬೆರೆಸಿದ ಮದ್ಯದ ಸಾಗಣೆ, ಮಾರಾಟ ಮತ್ತು ಸೇವನೆಯನ್ನು ತಡೆಯಲು ವಿಫಲರಾಗಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ಹೊರಡಿಸಿದ ಅಮಾನತು ಪತ್ರಗಳಲ್ಲಿ ಉಲ್ಲೇಖಿಸಿದೆ.

    ಜುಲೈ 25 ರಂದು ಬೊಟಾಡ್ ಮತ್ತು ನೆರೆಯ ಅಹಮದಾಬಾದ್ ಜಿಲ್ಲೆಯ 42 ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಆದರೆ 97 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಷಕಾರಿ ಮದ್ಯ ಸೇವಿಸಿ ಪಂಜಾಬ್‍ನಲ್ಲಿ 86 ಮಂದಿ ಸಾವು – 13 ಮಂದಿ ಅಧಿಕಾರಿಗಳು ಅಮಾನತು

    ವಿಷಕಾರಿ ಮದ್ಯ ಸೇವಿಸಿ ಪಂಜಾಬ್‍ನಲ್ಲಿ 86 ಮಂದಿ ಸಾವು – 13 ಮಂದಿ ಅಧಿಕಾರಿಗಳು ಅಮಾನತು

    ಚಂಡೀಗಢ: ವಿಷಾಕಾರಿ ಮದ್ಯ ಸೇವನೆಯಿಂದ 86 ಜನ ಪಂಜಾಬ್‍ನಲ್ಲಿ ಮೃತಪಟ್ಟಿದ್ದು, 6 ಜನ ಪೊಲೀಸರು ಮತ್ತು 7 ಜನ ಅಬಕಾರಿ ಇಲಾಖೆ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.

    ಈ ವಿಚಾರವಾಗಿ ಮಾತನಾಡಿರುವ ಶಿರೋಮಣಿ ಅಕಾಲಿ ದಳದ ಸುಖ್ಬೀರ್ ಸಿಂಗ್ ಬಾದಲ್, ಈ ಘಟನೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಅವರ ಶಾಸಕರು ಕಾರಣ. ಕಾಂಗ್ರೆಸ್ ನಾಯಕರು ಕೂಡ ಅಕ್ರಮ ಮದ್ಯ ಮಾರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಈ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಈ ದುರಂತವು ಕಾಂಗ್ರೆಸ್ ಪಕ್ಷದ ಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಅತಿರೇಕದ ಅಕ್ರಮ ಮದ್ಯ ವ್ಯಾಪಾರವನ್ನು ಮುಕ್ತವಾಗಿ ನಡೆಸಲು ನೀಡಿದ ಪ್ರೋತ್ಸಾಹದ ಫಲವಾಗಿದೆ. ಇದು ಒಂದು ರೀತಿಯ ಕೊಲೆ. ಈ ಘಟನೆಯಲ್ಲಿ ಮಂತ್ರಿಗಳು ಮತ್ತು ಆಡಳಿತ ಪಕ್ಷದ ಶಾಸಕರು ಸೇರಿದಂತೆ ಎಲ್ಲ ತಪ್ಪಿತಸ್ಥರನ್ನು ಬಂಧಿಸಬೇಕು. ಮುಖ್ಯಮಂತ್ರಿ ಆದೇಶಿಸಿದ ಮ್ಯಾಜಿಸ್ಟೀರಿಯಲ್ ತನಿಖೆಯನ್ನು ರದ್ದುಪಡಿಸಬೇಕು. ಘಟನೆಯ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಸ್ವತಂತ್ರ ತನಿಖೆಗೆ ಮಾಡಬೇಕು ಎಂದು ಸುಖ್ಬೀರ್ ಸಿಂಗ್ ಹೇಳಿದ್ದಾರೆ.

    ಆದರೆ ಸುಖ್ಬೀರ್ ಸಿಂಗ್ ಅವರ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಈ ಘಟನೆಯಲ್ಲಿ ರಾಜಕೀಯ ಮಾಡುವುದು ಬೇಡ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈವರೆಗೆ ಘಟನೆಗೆ ಸಂಬಂಧಿಸಿದಂತೆ ಇಪ್ಪತ್ತೈದು ಜನರನ್ನು ಬಂಧಿಸಲಾಗಿದೆ. ಏಳು ಅಬಕಾರಿ ಮತ್ತು ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಹಿಂದೆ ಅಕಾಲಿ ದಳ ಮತ್ತು ಬಿಜೆಪಿ ಪಕ್ಷದ ಆಡಳಿತದಲ್ಲೂ ಇಂತಹ ಪ್ರಕರಣಗಳು ನಡೆದಿವೆ. ಗುರುದಾಸ್‍ಪುರ ಮತ್ತು ಬಟಾಲಾದಲ್ಲಿ 2012 ಮತ್ತು 2016 ರಲ್ಲಿ ಇದೇ ರೀತಿಯ ದುರಂತಗಳು ನಡೆದಿವೆ ಎಂದು ಹೇಳಿದ್ದಾರೆ.

    ಕಳೆದ ಬುಧವಾರ ಸಂಜೆಯಿಂದ ಪಂಜಾಬ್‍ನ ತಾರ್ನ್ ತರಣ್ ಜಿಲ್ಲೆಯಿಂದ 63 ಜನರು, ಅಮೃತಸರದಲ್ಲಿ 12 ಮತ್ತು 11 ಜನರು ಗುರುದಾಸ್‍ಪುರದ ಬಟಾಲಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಸಂಜೆ ಮೊದಲ ಸಾವಿನ ಪ್ರಕರಣ ಅಮೃತಸರದ ಮುಚಾಲ್ ಗ್ರಾಮದಲ್ಲಿ ವರದಿಯಾಗಿದೆ. ಶುಕ್ರವಾರ ರಾತ್ರಿಯ ವೇಳೆಗೆ 38 ಜನರು ಸಾವನ್ನಪ್ಪಿದ್ದರು. ಈ ಸಾವಿನ ಸಂಖ್ಯೆ ಶನಿವಾರ ರಾತ್ರಿಯ ವೇಳಗೆ ಮತ್ತೆ ಜಾಸ್ತಿಯಾಗಿ ಈಗ 86ಕ್ಕೆ ಬಂದು ನಿಂತಿದೆ. ಸಾವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಂಭವವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ದಿನಾರ್ ಗುಪ್ತಾ, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ನಾವು ಹಲವಾರು ದಾಳಿಯನ್ನು ನಡೆಸಿದ್ದೇವೆ. ಶುಕ್ರವಾರವೇ ಎಂಟು ಮಂದಿಯನ್ನು ಬಂಧಿಸಿದ್ದೇವೆ. ಮೂರು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಸುಮಾರು 17 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಈ ವೇಳೆ ಹಲವಾರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿದ್ದೇವೆ. ಕರ್ತವ್ಯ ಲೋಪ ತೋರಿದ ನಮ್ಮ ಇಲಾಖೆಯ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದೇವೆ ಎಂದು ಹೇಳಿದ್ದಾರೆ.

  • ಲಾಕ್‍ಡೌನ್ ಹಿನ್ನೆಲೆ: ಕಳ್ಳಬಟ್ಟಿ ತಯಾರಿಗೆ ಮುಂದಾದ ವ್ಯಕ್ತಿ ಪೊಲೀಸ್ ಬಲೆಗೆ

    ಲಾಕ್‍ಡೌನ್ ಹಿನ್ನೆಲೆ: ಕಳ್ಳಬಟ್ಟಿ ತಯಾರಿಗೆ ಮುಂದಾದ ವ್ಯಕ್ತಿ ಪೊಲೀಸ್ ಬಲೆಗೆ

    ಮಂಗಳೂರು: ಕಳ್ಳಬಟ್ಟಿ ತಯಾರಿಗೆ ಮುಂದಾದ ಓರ್ವನನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.

    ಬೆಳ್ಳಾರೆ ಕಲ್ಲೋಣಿಯ ಜನಾರ್ದನ ಮನೆಯಲ್ಲಿ ಗೇರುಹಣ್ಣಿನ ಕಳ್ಳಭಟ್ಟಿ ತಯಾರಿಸಲು ಮುಂದಾದ ವ್ಯಕ್ತಿ. ಲಾಕ್‍ಡೌನ್‍ನಿಂದಾಗಿ ಮದ್ಯದಂಗಡಿಗಳಿಗೂ ಬೀಗ ಬಿದ್ದಿದೆ. ಆದರೆ ಕೆಲವು ಕಡೆ ಕಳ್ಳಬಟ್ಟಿ, ಅಕ್ರಮ ಮದ್ಯ ಮಾಟರಾ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

    ಖಚಿತ ಮಾಹಿತಿ ಮೇರೆಗೆ ಈತನ ಆಕ್ರಮ ಮದ್ಯದ ಅಡ್ಡೆಗೆ ದಾಳಿ ಮಾಡಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಗೇರು ಹಣ್ಣಿನ ರಸ, ಗೇರುಹಣ್ಣಿನ ಸಾರಾಯಿ ಮತ್ತು ಅದಕ್ಕೆ ಸಂಬಂಧಿಸಿದಂತೆ ತಯಾರು ಮಾಡುವ ಪಾತ್ರೆಗಳನ್ನು ಪೊಲೀಸರು ವಶ ಪಡೆದುಕೊಂಡಿದ್ದಾರೆ. ಈ ಸಂಬಂಧ ಬೆಳ್ಳಾರೆ ಪೋಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

  • ಮದ್ಯದ ಬೆಲೆ ಕೇವಲ 40 ರೂ.- ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗ್ತಿತ್ತು ಎಣ್ಣೆ!

    ಮದ್ಯದ ಬೆಲೆ ಕೇವಲ 40 ರೂ.- ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗ್ತಿತ್ತು ಎಣ್ಣೆ!

    ನವದೆಹಲಿ: ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗುತ್ತಿದ್ದ ಹಾನಿಕಾರಕ ಮದ್ಯವನ್ನು ಗ್ರಾಹಕರಿಗೆ ಕೇವಲ 40 ರೂ.ಗೆ ಮಾರುತ್ತಿದ್ದ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ದೆಹಲಿಯ ರಘುಬೀರ್ ನಗರದಲ್ಲಿ ಶುಕ್ರವಾರ ಪೊಲೀಸರು ಎರಡು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಮೇಲ್ನೊಟಕ್ಕೆ ದಿನಸಿ ಅಂಗಡಿ ಅಂತ ಬೋರ್ಡ್ ಹಾಕಿಕೊಂಡು ಅಕ್ರಮವಾಗಿ ಡ್ರಮ್‍ಗಟ್ಟಲೆ ಸಾರಾಯಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ಸತ್ಯಾಂಶ ಹೊರಬಿದ್ದಿದೆ.

    ಅಂಗಡಿಯಲ್ಲಿ ಪತ್ತೆಯಾದ ಸಾರಾಯಿ ತಯಾರಿಕೆಯ ಸಾಮಾಗ್ರಿ ಪಟ್ಟಿಯಲ್ಲಿ ಈ ಮದ್ಯಕ್ಕೆ ಯಾವ್ಯಾವ ಸಾಮಾಗ್ರಿ ಬಳಕೆಯಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಆಗ ಸಾರಾಯಿ ತಯಾರಿಸಲು ಆರೋಪಿಗಳು ಹಾನಿಕಾರಕ ಸೋಪಿನ ಪುಡಿ ಹಾಗೂ ಶ್ಯಾಂಪುಗಳನ್ನು ಬಳಕೆ ಮಾಡುತ್ತಾರೆ ಎಂಬುದು ಬಯಲಾಗಿದೆ. ಅಲ್ಲದೆ ಗ್ರಾಹಕರಿಗೆ ಪ್ರತಿ ಬಾಟಲಿಗೆ ಕೇವಲ 40 ರೂ.ಗೆ ಈ ಸಾರಾಯಿಯನ್ನು ಅಂಗಡಿಯವರು ಮಾರಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಕೂಡ ಸಾಕ್ಷಿಗಳು ದೊರಕಿದೆ.

    ಆರೋಪಿಗಳಾದ ಜಿಜಾರ್ ಸಿಂಗ್ ಹಾಗೂ ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿದ್ದ ಅಕ್ರಮ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಹಿಂದೆ 2009ರಲ್ಲಿ ಇದೇ ಪ್ರದೇಶದಲ್ಲಿ ಸಾರಾಯಿ ಸೇವಿಸಿ 17ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಜಿಜಾರ್ ಸಿಂಗ್‍ನ ಮಾವನೇ ಆರೋಪಿಯಾಗಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv