ಪಣಜಿ: ರಸ್ತೆಯ ಬದಿಯಲ್ಲಿರುವ ಮರಗಳ ಫೋಟೋವನ್ನು ನೀವು ತೆಗೆದಿರಬಹುದು. ಆದರೆ ಗೋವಾದ ಗ್ರಾಮವೊಂದರಲ್ಲಿ ರಸ್ತೆ ಬದಿಯಲ್ಲಿರುವ ತೆಂಗಿನ ಮರಗಳ ಫೋಟೋ ಕ್ಲಿಕ್ಕಿಸಬೇಕಾದರೆ 500 ರೂ. ಶುಲ್ಕ ನೀಡಬೇಕು.
ಪ್ರವಾಸಕ್ಕೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಇದು ಏನು ಎಂದು ಕೇಳಬಹುದು. ಆದರೆ ಇದು ನಿಜ. ಉತ್ತರ ಗೋವಾದಲ್ಲಿ ಒಂದು ಗ್ರಾಮವಿದೆ. ಇದು ಸ್ವಚ್ಛತೆ ಹಾಗೂ ರಸ್ತೆ ಬದಿಯಲ್ಲಿ ಸಾಲಗಿ ನೆಟ್ಟಿರುವ ತೆಂಗಿನ ಮರಗಳ ಸೌಂದರ್ಯಕ್ಕೆ ಭಾರತದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿ ಬರುವ ಪ್ರವಾಸಿಗರು ಈ ತೆಂಗಿನ ಮರಗಳ 1 ಫೋಟೋ ತೆಗೆದುಕೊಂಡರೆ 100 ರಿಂದ 500 ರೂ.ವರೆಗೆ ಶುಲ್ಕ ಕಟ್ಟಬೇಕು.

ಹೌದು. ಮಾಜಿ ರಕ್ಷಣಾ ಮಂತ್ರಿ, ದಿವಂಗತ ಮನೋಹರ್ ಪರಿಕ್ಕರ್ ಅವರ ಪೂರ್ವಜರ ಹಳ್ಳಿಯಾದ ಪರ್ರಾ ಗ್ರಾಮದಲ್ಲಿ ಫೋಟೋ ತೆಗೆದರೂ ಶುಲ್ಕ ಕಟ್ಟಬೇಕು. ಪರ್ರಾ ಗ್ರಾಮದ ರಸ್ತೆ ಅಕ್ಕಪಕ್ಕದಲ್ಲಿ ಸಾಲಾಗಿ ತೆಂಗಿನ ಮರಗಳು ಇವೆ. ಜೊತೆಗೆ ಈ ಗ್ರಾಮ ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಗೋವಾದ ಪ್ರಮುಖ ಪ್ರವಾಸಿತಾಣಗಳಲ್ಲಿ ಈ ಗ್ರಾಮವು ಒಂದಾಗಿದೆ.
ಪರ್ರಾ ಗ್ರಾಮದ ಸುಂದರ ನೋಟಕ್ಕೆ ಮನಸೋಲದವರೇ ಇಲ್ಲ. ಹಲವು ಬಾಲಿವುಡ್, ಹಾಲಿವುಡ್ ಚಿತ್ರಗಳು ಕೂಡ ಪರ್ರಾ ಗ್ರಾಮದಲ್ಲಿ ಚಿತ್ರೀಕರಣಗೊಂಡಿದೆ. ಹೀಗಾಗಿ ಪರ್ರಾ ಗ್ರಾಮ ಪಂಚಾಯ್ತಿ ಇಲ್ಲಿಗೆ ಬರುವ ಪ್ರವಾಸಿಗರಿಂದ ಸ್ವಚ್ಛತಾ ತೆರಿಗೆಯನ್ನು ಸಂಗ್ರಹಿಸುತ್ತದೆ. ಈ ಗ್ರಾಮದಲ್ಲಿ ಪ್ರವಾಸಿಗರು 1 ಫೋಟೋ ತೆಗೆದುಕೊಂಡರೆ 500 ರೂ.ವರೆಗೂ ಗ್ರಾಮ ಪಂಚಾಯ್ತಿ ಶುಲ್ಕ ನಿಗದಿಗೊಳಿಸಿದೆ.

ಜೊತೆಗೆ ಶುಲ್ಕ ಕಟ್ಟಿದ ಪ್ರವಾಸಿಗರಿಗೆ ರಶೀದಿಯನ್ನು ಕೊಡಲಾಗುತ್ತದೆ. ಅಲ್ಲದೆ ಪ್ರವಾಸಿಗರಿಗೆ ಬೇರೆ ಶುಲ್ಕ, ವಾಣಿಜ್ಯ ಚಿತ್ರೀಕರಣಕ್ಕೆ ಬೇರೆ ಶುಲ್ಕವನ್ನು ಪಂಚಾಯ್ತಿ ನಿಗದಿಗೊಳಿಸಿದೆ. ಆದರೆ ಪರ್ರಾದ ಗ್ರಾಮ ಪಂಚಾಯ್ತಿಯ ಈ ಕ್ರಮಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸೌಂದರ್ಯ ಕಣ್ತುಂಬಿಕೊಂಡು, ಆ ಕ್ಷಣವನ್ನು ಸೆರೆಹಿಡಿದುಕೊಳ್ಳಲು ಪ್ರವಾಸಿಗರು ಬಯಸುತ್ತಾರೆ. ಆದರೆ 1 ಫೋಟೋ ತೆಗೆದುಕೊಳ್ಳಲು ಇಷ್ಟೆಲ್ಲಾ ಶುಲ್ಕ ನಿಗದಿಗೊಳಿಸಿರುವುದು ಸರಿಯಲ್ಲ. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ ಎಂದು ವಿರೋಧಿಸಿದ್ದಾರೆ.

ಹಾಗೆಯೇ ಈ ಬಗ್ಗೆ ಪ್ರವಾಸಿಗರೊಬ್ಬರು ತಮ್ಮ ಸ್ನೇಹಿರೊಬ್ಬರಿಗೆ ಪರ್ರಾದಲ್ಲಿ ಫೋಟೋ ತೆಗೆದುಕೊಂಡಿದ್ದಕ್ಕೆ ಶುಲ್ಕ ವಿಧಿಸಿ, ರಶೀದಿ ಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರು ಪರ್ರಾದ ಸುಂದರ ರಸ್ತೆಯಲ್ಲಿ ಒಂದೇ ಒಂದು ಫೋಟೋ ತೆಗೆದುಕೊಂಡಿದಕ್ಕೆ ಅವರಿಂದ ಅಲ್ಲಿನ ಪಂಚಾಯ್ತಿ 500 ರೂ. ಶುಲ್ಕ ಪಡೆದಿದೆ. ಇದು ನಿಜಕ್ಕೂ ಗಂಭೀರವಾದ ವಿಚಾರ. ಈ ಕ್ರಮದಿಂದ ಪ್ರವಾಸಿಗರು ಗೋವಾಕ್ಕೆ ಬರಲು ಹಿಂದೇಟು ಹಾಕುವಂತ ಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಗೋವಾದ ಪ್ರವಾಸ ಮತ್ತು ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸ್ಯಾವಿಯೋ ಅವರು ಪ್ರತಿಕ್ರಿಯಿಸಿ, ಇದು ಪರ್ರಾ ಪಂಚಾಯ್ತಿ ಪ್ರವಾಸಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಹೀಗೆ 1 ಫೋಟೋಗೆ 500 ರೂ. ಶುಲ್ಕ ನಿಗಧಿಗೊಳಿಸಿರುವುದು ತಪ್ಪು. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ. ಈ ರೀತಿ ಶುಲ್ಕವನ್ನು ಪರ್ರಾದಲ್ಲಿ ಚಿತ್ರೀಕರಣ ಅಥವಾ ಖಾಸಗಿ ಫೋಟೋಶೂಟ್ ಮಾಡಿಸುವವರ ಬಳಿ ಪಡೆಯಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪ್ರವಾಸಿಗರ ಬಳಿ ಈ ರೀತಿ ಹಣ ಪಡೆಯುವುದು ಸುಲಿಗೆ ಮಾಡಿದ ಸಮಾನವಾಗುತ್ತೆ ಎಂದು ಕಿಡಿಕಾರಿದ್ದಾರೆ.

ಪ್ರವಾಸಿಗರ ವಿರೋಧಗಳಿಗೆ ಪರ್ರಾ ಸರ್ಪಂಚ್ ಲೋಬೋ ಅವರು ಪ್ರತಿಕ್ರಿಯಿಸಿ, ನಾವು ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದೇವೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ರಸ್ತೆಗಳಲ್ಲಿ ಕಸಗಳನ್ನು ಎಸೆಯುತ್ತಾರೆ. ಸೀನರಿ ಸುಂದರವಾಗಿದೆ ಎಂದು ರಸ್ತೆ ಮಧ್ಯೆ ವಾಹನ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಇದರಿಂದ ಟ್ರಾಫಿಕ್ ಜ್ಯಾಮ್ ಆಗುತ್ತದೆ. ಈ ಬಗ್ಗೆ ಯಾರೂ ಯೋಚನೆ ಮಾಡಲ್ಲ. ನಾವು ಶುಲ್ಕ ನಿಗಧಿಗೊಳಿಸಿರುವುದನ್ನ ವಿರೋಧಿಸುತ್ತಾರೆ. ಆದರೆ ಪ್ರವಾಸಿಗರು ಗ್ರಾಮಕ್ಕೆ ಭೇಟಿನೀಡಿ ಮಾಡುವ ತೊಂದರೆ ಬಗ್ಗೆ ಯಾರು ಮಾತನಾಡಲ್ಲ. ಅವರ ಹಾವಳಿ ನಿಯಂತ್ರಿಸಲು ನಾವು ಶುಲ್ಕ ನಿಗದಿಗೊಳಿಸಿದ್ದೇವೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.