Tag: Tourist

  • ಬಿಕೋ ಅನ್ನುತ್ತಿದೆ ಮಲ್ಪೆ ಬೀಚ್

    ಬಿಕೋ ಅನ್ನುತ್ತಿದೆ ಮಲ್ಪೆ ಬೀಚ್

    – ವಾರಾಂತ್ಯದಲ್ಲಿ 10 ಸಾವಿರ, ಇಂದು 100 ಜನರೂ ಇಲ್ಲ

    ಉಡುಪಿ: ಕೊರೊನಾ ವೈರಸ್‍ಗೆ ಕರ್ನಾಟಕದ ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ವೀಕೆಂಡ್ ಬಂದರೆ ಸಾಕು ಉಡುಪಿಯ ಮಲ್ಪೆ ಬೀಚಲ್ಲಿ 10-20 ಸಾವಿರ ಪ್ರವಾಸಿಗರು ತುಂಬಿಕೊಳ್ಳುತ್ತಿದ್ದರು. ಆದರೆ ಇಂದು ಬೆರಳಣಿಕೆ ಪ್ರವಾಸಿಗರಿದ್ದಾರೆ.

    ಹೊರ ಜಿಲ್ಲೆಗಳಿಂದ ಪ್ರವಾಸಿಗರು ಮಲ್ಪೆಗೆ ಬರಲು ಹಿಂದೇಟು ಹಾಕಿದ್ದಾರೆ. ರಾಜ್ಯಾದ್ಯಂತ ಸಿಎಂ ಒಂದು ವಾರ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಜೊತೆಗೆ ಉಡುಪಿಯ ಮಣಿಪಾಲದಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆಯಾಗಿರುವ ಕಾರಣ ಬೀಚ್ ಕಡೆ ಜನ ಬರುತ್ತಿಲ್ಲ. ಕೊರೊನಾದಿಂದ ಭಾರತದ ಸೇಫೆಸ್ಟ್ ಬೀಚ್ ಬಿಕೋ ಅಂತಿದೆ.

    ಮಲ್ಪೆ ಲೈಫ್ ಗಾರ್ಡ್ ಅಚ್ಯುತ್ ಸುವರ್ಣ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವಾರಾಂತ್ಯದಲ್ಲಿ ಕನಿಷ್ಠ 10 ಸಾವಿರ ಜನ ಬರುತ್ತಾರೆ. ಆದರೆ ಇವತ್ತು ನೂರು ಜನರೂ ಬರಲಿಲ್ಲ. ಹೊರಗಿನ ಪ್ರವಾಸಿಗರು ಇಲ್ಲ. ನಮ್ಮ ಊರಿನವರೂ ಬರುತ್ತಿಲ್ಲ. ಕೊರೊನಾ ಉಂಟಾ ಇಲ್ವಾ ಗೊತ್ತಿಲ್ಲ. ಆದರೆ ಜನರಲ್ಲಿ ಭಯ ಇದೆ ಎಂದರು.

    ಬೋಟ್ ಸಿಬ್ಬಂದಿ ಸೀತಾರಾಮ ಕುಮಾರ್ ತನ್ನ ವ್ಯಾಪಾರ ಇಲ್ಲದ ದಿನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇವತ್ತು ಒಂದು ಬೋಟಿಂಗ್‍ಗೂ ವ್ಯಾಪಾರ ಆಗಿಲ್ಲ. ಪ್ರವಾಸಿಗರು ಬೋಟಿಂಗ್ ಕಡೆ ಬರುತ್ತಲೇ ಇಲ್ಲ ಎಂದರು. ಇನ್ನೂ ವ್ಯಾಪಾರ ಇಲ್ಲದೆ ಅಂಗಡಿ ಮುಂಗಟ್ಟುಗಳು ಖಾಲಿಯಾಗಿದ್ದವು.

  • ಕೊರೊನಾ ಭೀತಿ- ಹೋಟೆಲ್‍ಗೆ ಆಗಮಿಸುವ ಪ್ರವಾಸಿಗರ ಮಾಹಿತಿ ತಕ್ಷಣ ನೀಡಲು ಡಿಸಿ ಸೂಚನೆ

    ಕೊರೊನಾ ಭೀತಿ- ಹೋಟೆಲ್‍ಗೆ ಆಗಮಿಸುವ ಪ್ರವಾಸಿಗರ ಮಾಹಿತಿ ತಕ್ಷಣ ನೀಡಲು ಡಿಸಿ ಸೂಚನೆ

    ಬಳ್ಳಾರಿ: ತಮ್ಮ ಹೋಟೆಲ್‍ಗಳಿಗೆ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಹೋಟಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಕೊರೊನಾಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಹೋಟೆಲ್‍ ಮಾಲೀಕರೊಂದಿಗೆ ಡಿಸಿ ನಕುಲ್ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಅದರಲ್ಲೂ ವಿಶೇಷವಾಗಿ ಕೊರೊನಾ ಸೊಂಕು ಕಂಡುಬಂದ ದೇಶಗಳಿಂದ ಬರುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ನೀಡಲೇಬೇಕು ಎಂದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜನಸ್ಪಂದನಾ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ. ಈ ಕೇಂದ್ರದ ರೂಂ ಮೊ.ನಂ: 82778 88866 ಹಾಗೂ ದೂ: 08392-277100ಗೆ ಕರೆ ಮಾಡಬಹುದು ಮತ್ತು ವಾಟ್ಸಾಪ್ ಮಾಡಬಹುದು. 1077 ಉಚಿತ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಬಹುದು. ಈ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಲಭ್ಯವಿರುತ್ತಾರೆ. ನಮ್ಮ ಸಿಬ್ಬಂದಿ 24 ಗಂಟೆಗಳ ಕಾಲ ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಡಿಸಿ ನಕುಲ್ ತಿಳಿಸಿದರು.

    ಕೊರೊನಾ ವೈರಸ್‍ಗೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಸಭೆಯಲ್ಲಿ ವಿವರಿಸಿದ ಡಿಸಿ ನಕುಲ್ ಅವರು, ಈ ರೀತಿಯ ಲಕ್ಷಣಗಳು ಪ್ರವಾಸಿಗರಲ್ಲಿ ಕಂಡು ಬಂದಲ್ಲಿಯೂ ಸಹ ಮಾಹಿತಿ ನೀಡಿ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಭಯಬೇಡ ಜಾಗೃತಿಯಿರಲಿ ಎಂದು ಹೇಳಿದರು.

  • ಉತ್ತರ ಕರ್ನಾಟಕ ಐತಿಹಾಸಿಕ ತಾಣಗಳಿಗೆ ತಟ್ಟಿದ ಕೊರೊನಾ ವೈರಸ್

    ಉತ್ತರ ಕರ್ನಾಟಕ ಐತಿಹಾಸಿಕ ತಾಣಗಳಿಗೆ ತಟ್ಟಿದ ಕೊರೊನಾ ವೈರಸ್

    ಬಾಗಲಕೋಟೆ: ಕೊರೊನಾ ವೈರಸ್ ಭೀತಿ ಸದ್ಯ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ತಾಣಗಳಿಗೆ ತಟ್ಟಿದೆ. ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಸ್ಥಳಗಳಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.

    ಬೇಸಿಗೆ ಶುರುವಾಗುತ್ತಿದ್ದಂತೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ಕೊಡುತ್ತಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಐತಿಹಾಸಿಕ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವಂತೆ ಮಾಡಿದೆ. 2019ರ ಜನವರಿಯಲ್ಲಿ 1,406 ಜನ, ಫೆಬ್ರವರಿಯಲ್ಲಿ 1,502 ಮಂದಿ ವಿದೇಶಿಗರು ಭೇಟಿ ನೀಡಿದರು. ಆದರೆ ಸದ್ಯ ಫೆಬ್ರವರಿ ತಿಂಗಳಲ್ಲಿ 966 ವಿದೇಶಿಗರು ಭೇಟಿ ನೀಡಿದ್ದಾರೆ.

    ಅದೇ ರೀತಿ ಪಟ್ಟದಕಲ್ಲಿಗೆ ಜನವರಿಯಲ್ಲಿ 951 ಜನ, ಫೆಬ್ರವರಿಯಲ್ಲಿ 994 ಮಂದಿ. ಆದರೆ ಈ ಬಾರಿಯ ಫೆಬ್ರವರಿಯಲ್ಲಿ 543 ಜನ ವಿದೇಶಿಗರು ಭೇಟಿ ನೀಡಿದ್ದಾರೆ. ಐಹೊಳೆಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಅಂತಹ ಗಣನೀಯ ಇಳಿಕೆ ಕಂಡು ಬಂದಿಲ್ಲ ಎಂದು ಪುರತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

    ಸೋಂಕು ತಗುಲಿರುವ ದೇಶಗಳಿಂದ ಯಾವುದೇ ವಿದೇಶಿಗರು ಬಂದಿಲ್ಲವಾದರೂ, ಜಿಲ್ಲಾ ಆರೋಗ್ಯ ಇಲಾಖೆ ಐತಿಹಾಸಿಕ ತಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಬೇರೆ ದೇಶಗಳಿಂದ ಬರುವ ವಿದೇಶಿ ಪ್ರಜೆಗಳ ಮಾಹಿತಿ ಕಲೆ ಹಾಕುತ್ತಿದ್ದು, ಸೋಂಕು ಹರಡದಂತೆ ಎಚ್ಚರವಹಿಸಿದೆ. ಅಲ್ಲದೆ ಸೋಂಕು ಕಾಣಿಸಿಕೊಂಡಿರುವ ದೇಶದಿಂದ ಸದ್ಯಕ್ಕೆ ಯಾವುದೇ ಪ್ರವಾಸಿಗರು ಬಂದಿಲ್ಲ ಎಂಬುದು ಆರೋಗ್ಯ ಇಲಾಖೆ ಅಭಿಪ್ರಾಯವಾಗಿದೆ.

  • 21 ವರ್ಷಗಳ ಬಳಿಕ ಚಿಕ್ಕಮಗಳೂರಿನಲ್ಲಿ ಉತ್ಸವ

    21 ವರ್ಷಗಳ ಬಳಿಕ ಚಿಕ್ಕಮಗಳೂರಿನಲ್ಲಿ ಉತ್ಸವ

    – ವಯಸ್ಸಿನ ಭೇದವಿಲ್ಲದೆ ಕಣಕ್ಕಿಳಿದ ಕಲಿಗಳು

    ಚಿಕ್ಕಮಗಳೂರು: 21 ವರ್ಷಗಳ ಬಳಿಕ ನಡೆಯುತ್ತಿರುವ ಚಿಕ್ಕಮಗಳೂರು ಉತ್ಸವದ ಅಂಗವಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಮಲೆನಾಡಿಗರು ಎಂಜಾಯ್ ಮಾಡುತ್ತಿದ್ದಾರೆ.

    ಇದೇ ತಿಂಗಳ 28, 29 ಹಾಗೂ ಮಾರ್ಚ್ 1ರಂದು ಚಿಕ್ಕಮಗಳೂರು ಉತ್ಸವ ನಡೆಯಲಿದ್ದು, ಅದಕ್ಕಾಗಿ ಕಾಫಿನಾಡಿಗರಿಗೆ ಹತ್ತಾರು ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅಡ್ವೆಂಚರಸ್ ಗೇಮ್‍ಗಳನ್ನು ಜನ ಎಂಜಾಯ್ ಮಾಡುತ್ತಿದ್ದಾರೆ. ಹಗ್ಗದಲ್ಲಿ ಜಾರೋ ಜಿಪ್ ಲೈನ್ ಗೇಮಲ್ಲಿ ಯುವಕ-ಯುವತಿಯರು ಹೊಸ ಅನುಭವ ಪಡೆಯುತ್ತಿದ್ದಾರೆ. ದೊಡ್ಡವರಷ್ಟೇ ಅಲ್ಲದೆ ಮಕ್ಕಳು ಕೂಡ ಜಿಪ್ ಲೈನ್ ಸೇರಿದಂತೆ ಅಡ್ವೆಂಚರಸ್ ಕ್ರೀಡೆಯಲ್ಲಿ ಭಾಗಿಯಾಗಿ ಖುಷಿಪಡುತ್ತಿದ್ದಾರೆ.

    ಇದಕ್ಕೆ ಜೊತೆಗೆ ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಂತಿರುವ ನಲ್ಲೂರು ಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ಆಯೋಜಿಸಲಾಗಿತ್ತು. ಇಲ್ಲೂ ಕೂಡ ಸಾಹಸಿ ಪ್ರಿಯರು ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ನೀರಿನ ಮೇಲೆ ವಾಟರ್ ಬೈಕ್‍ಗಳಲ್ಲಿ ತೇಲ್ತ ಜಗವನ್ನೇ ಮರೆಯುತ್ತಿದ್ದಾರೆ. ಸರ್. ಇನ್ನೊಂದು ರೌಂಡ್ ಪ್ಲೀಸ್ ಎಂದು ಗೋಗರೆಯುತ್ತಿದ್ದಾರೆ. ನೀರಿನ ಮೇಲೆ ಥ್ರಿಲ್ಲಿಂಗ್ ಬೈಕ್ ರೈಡ್ ಮಾಡಿ ವಾವ್, ಸೂಪರ್ ಎಂದು ಹೇಳುತ್ತಿದ್ದಾರೆ. ಜೊತೆಗೆ ಸ್ಟ್ರೀಟ್ ಬೋಟಿಂಗ್, ಬನಾನಾ ಬೋಟ್ ರೈಡ್, ಸ್ಕಯಿಂಗ್, ವಾಟರ್ ಜಾಬ್ರಿಂಗ್ ಸೇರಿದಂತೆ ಅನೇಕ ಜಲಕ್ರೀಡೆಗಳಲ್ಲಿ ಭಾಗಿಯಾಗಿ ಹೊಸ ಅನುಭವ ಪಡೆಯುತ್ತಿದ್ದಾರೆ.

    ವಾಟರ್ ಸ್ಪೋರ್ಟ್ಸ್ ನಲ್ಲೂ ಚಿಕ್ಕ-ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕಾಫಿನಾಡಲ್ಲಿ ಇಂತಹ ಕ್ರೀಡೆಗಳು ನಡೆದದ್ದು ಇದೇ ಮೊದಲಾದ್ದರಿಂದ ದಿನಂಪ್ರತಿ ಸಾವಿರಾರು ಜನ ಪಾಲ್ಗೊಂಡು ಖುಷಿಪಡುತ್ತಿದ್ದಾರೆ. ಚಿಕ್ಕಮಗಳೂರು ಫೆಸ್ಟ್ ಅಂಗವಾಗಿ ನಡೆಯುತ್ತಿರುವ ಕುಸ್ತಿಯ ಅಖಾಡವೂ ರಂಗೇರಿತ್ತು. ಮಣ್ಣಲ್ಲಿ ಮಿಂದೆದ್ದ ಜಗಜಟ್ಟಿಗಳು ಅಖಾಡದಲ್ಲಿ ಧೂಳ್ ಎಬ್ಬಿಸಿದ್ದರು.

  • ಪ್ರವಾಸಿಗನ ವಿಕೃತಿಗೆ ರಾಜವಂಶಸ್ಥರು ಗರಂ

    ಪ್ರವಾಸಿಗನ ವಿಕೃತಿಗೆ ರಾಜವಂಶಸ್ಥರು ಗರಂ

    ಮೈಸೂರು: ಮೈಸೂರು ಅರಮನೆ ಆವರಣದಲ್ಲಿನ ಕಂಚಿನ ಸಿಂಹದ ಮೇಲೆ ಪ್ರವಾಸಿಗನೊಬ್ಬ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದಕ್ಕೆ ಪ್ರವಾಸಿಗನ ಮೇಲೆ ರಾಜವಂಶಸ್ಥರು ಗರಂ ಆಗಿದ್ದಾರೆ.

    ಕಂಚಿನ ಸಿಂಹದ ಮೇಲೆ ಕುಳಿತು ಪ್ರವಾಸಿಗ ಪ್ರಜ್ವಲ್ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಪ್ರವಾಸಿಗ ಪ್ರಜ್ವಲ್‍ನ ಈ ಪೋಸ್ಟ್ ಗೆ ರಾಜವಂಶಸ್ಥ ವರ್ಚಸ್ಸ್ ಸಿದ್ದಲಿಂಗರಾಜೇ ಅರಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್ ನಲ್ಲಿ, ಇಂತಹ ವ್ಯಕ್ತಿಗಳಿಗೆ ಪಾಠ ಕಲಿಸಬೇಕಿದೆ. ಪಾರಂಪರಿಕ ಸ್ಮಾರಕಗಳನ್ನು ಈ ರೀತಿ ಬಳಕೆ ಮಾಡಬಾರದು. ಈ ಬಗ್ಗೆ ಅರಮನೆ ಮಂಡಳಿ ಹಾಗೂ ಪೊಲೀಸರು ಪ್ರವಾಸಿಗನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕಿದೆ. ಈ ರೀತಿ ದುರ್ಬಳಕೆ ಮಾಡದಂತೆ ಅರಮನೆ ಮಂಡಳಿ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಿ ಎಂದು ತಮ್ಮ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಯುವಕನ ಪೋಸ್ಟ್ ನೋಡಿ ನೆಟ್ಟಿಗರು ಆತನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

  • ಕೊರೊನಾ ವೈರಸ್ ಎಚ್ಚರಿಕೆ – ಚೀನಾದಿಂದ ಬಂದವರಿಗೆ ಮಾಹಿತಿ ನೀಡಲು ಸೂಚನೆ

    ಕೊರೊನಾ ವೈರಸ್ ಎಚ್ಚರಿಕೆ – ಚೀನಾದಿಂದ ಬಂದವರಿಗೆ ಮಾಹಿತಿ ನೀಡಲು ಸೂಚನೆ

    ಹುಬ್ಬಳ್ಳಿ: ಜಗತ್ತನ್ನೇ ಬೆಚ್ಚಿಬಿಳಿಸುವಂತೆ ಮಾಡಿರುವ ಅಪಾಯಕಾರಿ ಕೊರೊನಾ ವೈರಸ್‍ನಿಂದ ಸಾಕಷ್ಟು ಎಚ್ಚರಿಕೆ ವಹಿಸಬೇಕಿರುವ ಕಾರಣ ಚೀನಾದಿಂದ ಬಂದ ಪ್ರಯಾಣಿಕರು ಕಡ್ಡಾಯವಾಗಿ ಕಿಮ್ಸ್ ನಲ್ಲಿ ಪರೀಕ್ಷೆಗೆ ಒಳಗಾಗಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಗರದ ವಿಮಾನ ನಿಲ್ದಾಣದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ.

    ಚೀನಾ, ಅದರಲ್ಲಿಯೂ ವಿಶೇಷವಾಗಿ ವುಹಾನ್ ನಗರದಿಂದ ಬಂದವರು ಮಾಹಿತಿ ಕೊಡಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದರೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ಮಾಹಿತಿ ನೀಡುವುದು ಕಡ್ಡಾಯ ಎಂದು ಫಲಕದಲ್ಲಿ ತಿಳಿಸಲಾಗಿದೆ. ನಿಲ್ದಾಣದಿಂದ ಹೊರಬರುವ ಪ್ರವೇಶ ದ್ವಾರದಲ್ಲಿಯೇ ಈ ಫಲಕ ಅಳವಡಿಸಲಾಗಿದ್ದು, ರೋಗದ ಲಕ್ಷಣಗಳು ಹೇಗಿರುತ್ತವೆ ಎನ್ನುವುದರ ಸಂಕೇತಗಳನ್ನು ತೋರಿಸಲಾಗಿದೆ.

    ದಿನೇದಿನೇ ಮಹಾಮಾರಿ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ 800 ಮಂದಿ ಚೀನಾದಲ್ಲಿ ಕೊರೊನಾಗೆ ಸಾವನ್ನಪ್ಪಿದ್ದರೆ ಈ ಸಂಖ್ಯೆ ಸೋಮವಾರ 908ಕ್ಕೆ ತಲುಪಿದೆ. ಭಾನುವಾರ 3 ಸಾವಿರ ಹೊಸ ಪ್ರಕರಣ ಚೀನಾದಲ್ಲಿ ದಾಖಲಾಗಿದ್ದು, ಈವರೆಗೆ ಚೀನಾದಲ್ಲಿ ಒಟ್ಟು 40 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಚೀನಾದಲ್ಲಿ ಭೀತಿ ಹೆಚ್ಚಿಸಿದ್ದು, ಈ ಬಗ್ಗೆ ಚೀನಾ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದ್ದು, ಸೋಂಕು ಹರಡದಂತೆ ನಿಗವಹಿಸುತ್ತಿದೆ.

  • ನಂದಿಗಿರಿಧಾಮಕ್ಕೆ ವಾಹನಗಳಿಗೆ ನೋ ಎಂಟ್ರಿ

    ನಂದಿಗಿರಿಧಾಮಕ್ಕೆ ವಾಹನಗಳಿಗೆ ನೋ ಎಂಟ್ರಿ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿತಾಣ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿಯ ನಂಧಿಗಿರಿಧಾಮಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ನಂದಿಬೆಟ್ಟದ ಪ್ರವೇಶದ್ವಾರದ ಟಿಕೆಟ್ ಕೌಂಟರ್ ಬಳಿಯಿಂದ ನಂದಿ ಬೆಟ್ಟದ ಮೇಲ್ಭಾಗಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ವಾರದ 5 ದಿನಗಳಲ್ಲಿ ಸಂಪೂರ್ಣವಾಗಿ ವಾಹನಗಳ ಪ್ರವೇಶವನ್ನು ನಿರ್ಬಂಧ ಮಾಡಿದ್ದು, ಶನಿವಾರ ಹಾಗೂ ಭಾನುವಾರ ಮಾತ್ರ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಲಾಗವುದು ಎಂದು ನಂದಿಗಿರಿಧಾಮದ ವಿಶೇಷಾಧಿಕಾರಿ ರಮೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ನಂದಿಬೆಟ್ಟದ ಮೇಲ್ಭಾಗದ ಪ್ರವೇಶ ದ್ವಾರದ ಟಿಕೆಟ್ ಕೌಂಟರ್ ಕೆಳಭಾಗದಲ್ಲಿ ಪಾರ್ಕಿಂಗ್ ಸೌಲಭ್ಯವಿದೆ. ಅಲ್ಲಿಯೇ ಎಲ್ಲಾ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂದಿಬೆಟ್ಟದ ಮೇಲ್ಭಾಗಕ್ಕೆ ನಡೆದುಕೊಂಡೇ ಹೋಗಬೇಕಿದೆ. ಸದ್ಯ ವಾರದ 5 ದಿನಗಳಲ್ಲಿ ಮಾತ್ರ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತಿದ್ದು, ಶನಿವಾರ ಹಾಗೂ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ಜಾಗದಲ್ಲಿ ವಾಹನಗಳ ನಿಲುಗಡೆಗೆ ಜಾಗ ಸಾಕಾಗುವುದಿಲ್ಲ. ಹೀಗಾಗಿ ನಂದಿಬೆಟ್ಟದ ಪ್ರವೇಶಕ್ಕೆ ಶನಿವಾರ-ಭಾನುವಾರ ಅನುಮತಿ ನೀಡಲಾಗುತ್ತಿದೆ.

    ನಂದಿಬೆಟ್ಟದಲ್ಲಿ ಗಾಳಿ ಕಲುಷಿತವಾಗುವುದನ್ನು ತಡೆದು ಪರಿಸರ ಮಾಲಿನ್ಯವಾಗದಂತೆ ನಂದಿಬೆಟ್ಟದ ಪ್ರಾಕೃತಿಕ ಸೌಂದರ್ಯ ಉಳಿಸಿ ಬೆಳೆಸುವ ಸಲುವಾಗಿ ಈ ಕ್ರಮ ಕೈಗೊಂಡಿದ್ದೀವಿ ಎಂದು ಅಧಿಕಾರಿಗಳು ನಂದಿಗಿರಿಧಾಮದ ಎಡಿಎಚ್‍ಒ ರವಿಕುಮಾರ್ ತಿಳಿಸಿದ್ದಾರೆ. ಸದ್ಯ ಪ್ರವೇಶದ್ವಾರದ ಬಳಿಯ ಪಾರ್ಕಿಂಗ್ ಜಾಗದವರೆಗೂ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಂದಿಬೆಟ್ಟದ ಕೆಳಭಾಗದಲ್ಲೇ ಎಂದರೆ ತಪ್ಪಲಿನ ಬುಡದಲ್ಲೇ ವಾಹನಗಳ ನಿಲುಗಡೆಗೆ ಜಾಗ ಪಡೆದಿದ್ದು ಅಲ್ಲಿಯೇ ಎಲ್ಲಾ ವಾಹನಗಳ ಪಾರ್ಕಿಂಗ್ ಅವಕಾಶ ಮಾಡಿಕೊಡಲಿದ್ದೇವೆ. ನಂತರ ಅಲ್ಲಿಂದ ಪ್ರವಾಸಿಗರು ವಿಶೇಷ ಬಸ್ ವ್ಯವಸ್ಥೆ ಅಥವಾ ಏಕೋ ವೆಹಿಕಲ್ಸ್ ಮೂಲಕ ಬೆಟ್ಟಕ್ಕೆ ಕರೆದೊಯ್ಯುವ ಕಾರ್ಯದ ಚಿಂತನೆಯನ್ನು ಸಹ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ.

    ಕೆವಲ ನಂದಿಬೆಟ್ಟದ ಮೇಲ್ಭಾಗದಲ್ಲಿನ ಗಾಂಧಿ ನಿಲಯ, ನೆಹರು ನಿಲಯ ಸೇರಿದಂತೆ ಕೆಎಸ್‍ಟಿಡಿಸಿಯಲ್ಲಿ ರೂಂಗಳನ್ನು ಕಾಯ್ದಿರಿಸಿರುವವರ ಹಾಗೂ ಅಧಿಕಾರಿಗಳ ವಾಹನಗಳಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಅವಕಾಶ ನೀಡಿ ವಿನಾಯತಿ ನೀಡಲಾಗುತ್ತಿದೆ.

    ನಂದಿಗಿರಿಧಾಮದಲ್ಲಿ ಶನಿವಾರ ಭಾನುವಾರ ಬಂತಂದ್ರೆ ಸಾವಿರಾರು ಪ್ರವಾಸಿಗರು ಆಗಮಿಸುವ ಹಿನ್ನೆಲೆ, ವಾಹನಗಳ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಉಂಟಾಗಿ ಸಾಕಷ್ಟು ಕಿರಿಕಿರಿಯಾಗುತ್ತಿತ್ತು. ಅಲ್ಲದೆ ಟೈರ್ ನಿಂದ ಬರುವ ವಾಸನೆ ಹಾಗೂ ವಾಹನಗಳು ಸೂಸುವ ಹೊಗೆಯಿಂದ ಇಡೀ ನಂದಿಬೆಟ್ಟದ ವಾತಾವರಣವೇ ಕಲ್ಮಶವಾಗಿ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿಗಳು ಉಂಟಾಗುತ್ತಿದ್ದವು. ಹೀಗಾಗಿ ಈ ಪರಿಸ್ಥಿತಿಗಳಿಗೆ ಕಡಿವಾಣ ಹಾಕಿ ನೈಜ ಗಾಳಿ ಸಿಗುವಂತೆ ಮಾಡಲು ಈ ಮೊದಲು ದ್ವಿಚಕ್ರವಾಹನಗಳಿಗೆ ಬ್ರೇಕ್ ಹಾಕಿದ್ದ ಆಧಿಕಾರಿಗಳು, ಈಗ ವಾರದ 5 ದಿನ ಎಲ್ಲಾ ವಾಹನಗಳಿಗೆ ಬ್ರೇಕ್ ಹಾಕಿ ಹೊಸ ಪ್ರಯೋಗ ಮಾಡಿದ್ದಾರೆ.

  • ಮಕರ ಸಂಕ್ರಾಂತಿ ರಜೆ ಹಿನ್ನೆಲೆ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ಮಸ್ತಿ

    ಮಕರ ಸಂಕ್ರಾಂತಿ ರಜೆ ಹಿನ್ನೆಲೆ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ಮಸ್ತಿ

    ಮಡಿಕೇರಿ: ರಜೆ ಎಂದರೆ ಕೊಡಗಿನ ಪ್ರವಾಸಿ ತಾಣಗಳು ರಂಗೇರುತ್ತವೆ. ಹಚ್ಚಹಸಿರ ಸಿರಿಯ ಬೆಟ್ಟಗುಡ್ಡಗಳ ತಪ್ಪಲಿನ ಕಾಫಿನಾಡಲ್ಲಿ ವಿಹರಿಸೋಕೆ ದೇಶದ ನಾನಾ ಭಾಗಗಳಿಂದ ಪ್ರಕೃತಿಯ ಮಡಿಲಿಗೆ ಲಗ್ಗೆಯಿಡುವ ಪ್ರವಾಸಿಗರು ದಕ್ಷಿಣದ ಕಾಶ್ಮೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಇಂದು ಮಕರ ಸಂಕ್ರಾಂತಿ ಹಬ್ಬದ ರಜೆ ಇರುವುದರಿಂದ ಮಂಗಳವಾರದಿಂದ ಕೊಡಗಿನತ್ತ ಬರುವ ಪ್ರವಾಸಿಗರ ಸಂಖ್ಯೆ ಜೋರಾಗಿದ್ದು, ಇಡೀ ಮಂಜಿನ ನಗರಿ ಪ್ರವಾಸಿಗರಿಂದ ತುಂಬಿ ಹೋಗಿದೆ. ರಾಜಾಸೀಟ್ ಅಬ್ಬೆ ಫಾಲ್ಸ್ ಗೆ ಲಗ್ಗೆಯಿಟ್ಟಿದ್ದ ಪ್ರವಾಸಿಗರು ತಂಪಾದ ಗಾಳಿಯಲ್ಲಿ ವಿಹರಿಸುತ್ತಾ ರಜೆಯ ಮಜಾ ಅನುಭವಿಸುತ್ತಿದ್ದಾರೆ.

    ಸಾಮಾನ್ಯವಾಗಿ ವೀಕೆಂಡ್‍ಗಳಲ್ಲಿ ಅತಿ ಹೆಚ್ಚು ಪ್ರವಾಸಿಗರಿಂದ ಗಿಜಿಗುಡುವ ರಾಜಾಸೀಟ್ ಅಬ್ಬೆ ಫಾಲ್ಸ್, ದುಬಾರೆ ಪ್ರವಾಸಿತಾಣಗಳಲ್ಲಿ ಪ್ರವಾಸಿಗರು ಬಂಧು-ಮಿತ್ರರು ಮನೆಗೆ ಹಬ್ಬದ ವಿಶೇಷವಾಗಿ ಬಂದಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಜನ ಜಾತ್ರೆ ಕಂಡುಬರುತ್ತಿದೆ.

    ರಜೆ ಎಂದರೆ ಕಾಫಿನಾಡಿನತ್ತ ಲಗ್ಗೆಯಿಡುವ ಪ್ರವಾಸಿಗರು ದಕ್ಷಿಣ ಕಾಶ್ಮೀರದ ಸೊಬಗನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಾರೆ. ಅದ್ರಲ್ಲೂ ಸ್ನೇಹಿತರು, ಫ್ಯಾಮಿಲಿಗಳೊಂದಿಗೆ ತಂಡೋಪತಂಡವಾಗಿ ಕೊಡಗಿಗೆ ಬರುವ ಟೂರಿಸ್ಟ್‍ಗಳು ಪ್ರಕೃತಿಯ ಮಡಿಲಲ್ಲಿ ವಿಹರಿಸುತ್ತಾ ಹಸಿರ ಸಿರಿಯನ್ನು ಸವಿಯುತ್ತಾ ಸುಂದರ ನೆನಪುಗಳೊಂದಿಗೆ ವಾಪಸ್ಸಾಗುತ್ತಾರೆ.

  • ಊಟಿಯನ್ನೇ ನಾಚಿಸುವಂತ ಬ್ಯೂಟಿ – ನಂದಿ ಬೆಟ್ಟದಲ್ಲಿ ಮಿಂದೆದ್ದ ಪ್ರವಾಸಿಗರು

    ಊಟಿಯನ್ನೇ ನಾಚಿಸುವಂತ ಬ್ಯೂಟಿ – ನಂದಿ ಬೆಟ್ಟದಲ್ಲಿ ಮಿಂದೆದ್ದ ಪ್ರವಾಸಿಗರು

    ಚಿಕ್ಕಬಳ್ಳಾಪುರ: ಪ್ರಕೃತಿಯ ಅನನ್ಯ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಂದು ಪ್ರವಾಸಿಗರು ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

    ಮುಂಜಾನೆಯ ಮಂಜು, ಬೆಟ್ಟಗಳಿಗೆ ಮುತ್ತಿಕ್ಕುವ ಬೆಳ್ಳಿ ಮೋಡಗಳ ದೃಶ್ಯ ವೈಭವಗಳ ಮಧ್ಯೆ ಮಳೆಯಲಿ ಜೊತೆಯಲಿ, ಚುಮು ಚುಮು ಚಳಿಯಲಿ ಎಂಬಂತೆ ನಂದಿಬೆಟ್ಟದಲ್ಲಿ ಓಡಾಡಿದ ಪರಿಸರ ಪ್ರೇಮಿಗಳು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೇಲಿ ಹೋದರು. ಸೋನೆಯಂತೆ ಸುರಿದ ಮುಂಜಾನೆಯ ಮಂಜು, ಆಳತ್ತರಕ್ಕೆ ಬೆಳೆದು ನಿಂತಿರುವ ಮರಗಳಿಂದ ತೊಟ್ಟಿಕ್ಕುತ್ತಿರುವ ಇಬ್ಬನಿಯ ಹನಿಗಳ ನಡುವೆ ಕಣ್ಣಾಯಿಸಿದೆಡೆಯೆಲ್ಲಾ ಹಸಿರಿನ ಕಾನನ ಬೆಟ್ಟಕ್ಕೆ ಮುತ್ತಿಕ್ಕಿ ಮುಂದೆ ಸಾಗುವ ಬೆಳ್ಳಿ ಮೋಡಗಳು. ಚುಮು ಚುಮು ಚಳಿಯ ನಡುವೆ ಆಹ್ಲಾದಕರ ತಂಗಾಳಿಯಲ್ಲಿ ಮಿಂದೆದ್ದ ಪ್ರವಾಸಿಗರು ಹೊಸ ವರ್ಷದ ಹರುಷದಲ್ಲಿ ತೇಲಾಡಿದರು.

    ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕಾಲದಲ್ಲೇ ವಿಶ್ವವಿಖ್ಯಾತಿಯನ್ನು ಪಡೆದ ಚಿಕ್ಕಬಳ್ಳಾಪುರದ ನಂದಿಗಿರಿಧಾಮ ತನ್ನ ಹಲವು ವೈಶಿಷ್ಟ್ಯಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೇವಲ ಸಿನಿಮಾಗಳಲ್ಲಿ ವೈಭವದ ದೃಶ್ಯಕಾವ್ಯಗಳನ್ನ ನೋಡಿ ಆನಂದಿಸುತ್ತಿದ್ದ ಜನರು ಹೊಸ ವರ್ಷದ ನೆಪದಲ್ಲಿ ನಂದಿಬೆಟ್ಟಕ್ಕೆ ಬಂದು ನಂದಿಬೆಟ್ಟದ ಸೊಬಗನ್ನ ಕಣ್ತುಂಬಿಕೊಂಡರು. ಕಣ್ಣಿಗೆ ಸೊಬಗಿನ ಹಬ್ಬವಾದ್ರೆ, ಮನಸ್ಸು ಮುದದಿಂದ ತುಂಬಿ ಉಲ್ಲಾಸದಲ್ಲಿ ತೇಲಾಡಿದ್ರೇ, ಪ್ರೇಮಿಗಳಂತೂ ಕಲ್ಪನಾ ಲೋಕದಲ್ಲಿ ತೇಲಿ ಹೋದರು.

    ಕರ್ನಾಟಕದ ಬಡವರ ಪಾಲಿನ ಊಟಿ ಎಂತಲೇ ಹೆಸರುವಾಸಿಯಾಗಿರುವ ನಂದಿ ಗಿರಿಧಾಮ ಅಬಾಲವೃದ್ಧರಾಗಿ ಎಲ್ಲರನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಹೊಂದಿದೆ. ಮಳೆಗಾಲ ಬಂದರೆ ಸಾಕು ಊಟಿಯನ್ನು ನಾಚಿಸುವಂತೆ ಬ್ಯೂಟಿಯಿಂದ ಕಂಗೊಳಿಸುತ್ತದೆ. ನೈಸರ್ಗಿಕ ಸೊಬಗಿನಿಂದಾಗಿ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುವ ನಂದಿ ಗಿರಿಧಾಮದ ವೈಭವ ಕಣ್ತುಂಬಿಕೊಂಡರು.

    ಹೊಸ ವರ್ಷದ ಹಿನ್ನೆಲೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಸಾವಿರಾರು ಮಂದಿ ಬಂದಿದ್ದರಿಂದ ಗಿರಿಧಾಮದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರವಾಸಿಗರ ಹಿತದೃಷ್ಟಿಯಿಂದ ನಂದಿಗಿರಿಧಾಮದ ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕೆಲ ಪುಂಡಪೋಕರಿಗಳ ಕಾಟ ತಪ್ಪಿಸೋಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

  • ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಮೈಸೂರು

    ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಮೈಸೂರು

    ಮೈಸೂರು: ಹೊಸ ವರ್ಷದ ಮೊದಲ ದಿನ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.

    ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ ಪ್ರಾಕೃತಿಕ ಉದ್ಯಾನವನ, ಚಾಮುಂಡಿ ಬೆಟ್ಟದಲ್ಲಿ ಭಾರೀ ಸಂಖ್ಯೆಯಲ್ಲಿ ಹೊಸ ವರ್ಷದ ಮೊದಲ ದಿನ ಪ್ರವಾಸಿಗರು ಸೇರಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಹಲವು ಪ್ರವಾಸಿ ಕೇಂದ್ರಗಳ ಬಳಿ ಸಹಾಯವಾಣಿ ಕೇಂದ್ರಗಳು ತೆರೆಯಲಾಗಿದೆ. ಟಿಕೆಟ್ ಕೌಂಟರ್ ಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ.

    ಮೈಸೂರು ಅರಮನೆಯಲ್ಲಿ ವಿಶೇಷ ಫಲಪುಷ್ಪ ಪ್ರದರ್ಶನ ಕೂಡ ನಡೆಯುತ್ತಿದ್ದು, ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ಮೈಸೂರು ಅರಮನೆಯಲ್ಲಿ ಇಂದು ಸಂಜೆ ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಶಬ್ದ ರಹಿತ ಸಿಡಿಮದ್ದು ಸಿಡಿತ ಕೂಡ ನಡೆಯಲಿದೆ.

    ಪ್ರವಾಸಿಗರಿಗೆ ಮೈಸೂರು ಪ್ರವಾಸ ಹೆಚ್ಚು ಖುಷಿಯಿಂದ ಕೂಡಿರಲು ಎಲ್ಲಾ ವ್ಯವಸ್ಥೆಯೂ ಮೈಸೂರಲ್ಲಿ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರು ಸಂತೋಷದಿಂದ ಮೈಸೂರ ಸವಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.