Tag: Tourist

  • ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು – ಫುಲ್ ಟ್ರಾಫಿಕ್ ಜಾಮ್

    ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು – ಫುಲ್ ಟ್ರಾಫಿಕ್ ಜಾಮ್

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡುವ ಭೀತಿಯಿಂದ ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅನ್‍ಲಾಕ್ ನಿಯಮ ಜಾರಿ ಬಳಿಕ ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದೆ. ಇದೀಗ ವಿಕೇಂಡ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಆಗಮಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು.

    ನಂದಿಗಿರಿಧಾಮದ ಸೂರ್ಯೋದಯ ಸೌಂದರ್ಯ ಸವಿಯೋಕೆ ಮುಂಜಾನೆ 4-5 ಗಂಟೆಯಿಂದಲೇ ನಂದಿಗಿರಿಧಾಮದತ್ತ ಪ್ರವಾಸಿಗರ ದಂಡೇ ಆಗಮಿಸಿದೆ. ಆದರೆ ಬೆಳಗ್ಗೆ 8 ಗಂಟೆ ನಂತರ ನಂದಿಗಿರಿಧಾಮಕ್ಕೆ ಪ್ರವಾಸಿಗರ ವಾಹನಗಳ ಪ್ರವೇಶಕ್ಕೆ ಅನುಮತಿ ಇದೆ. ಹೀಗಾಗಿ ಚೆಕ್ ಪೋಸ್ಟ್ ನಲ್ಲಿ ವಾಹನಗಳಿಗೆ ತಡೆಯೊಡ್ಡಲಾಗಿತ್ತು. ಹೀಗಾಗಿ ಚೆಕ್‍ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಸರಿಸುಮಾರು 4-5 ಕಿಲೋಮೀಟರ್ ದೂರ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. 8 ಗಂಟೆಗೆ ಚೆಕ್ ಪೋಸ್ಟ್ ಗೇಟ್ ತಡೆದಿದ್ದೆ ತಡ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಡಿದ್ದಾರೆ.

    ಮಾರ್ಚ್ 14ರಿಂದ ಲಾಕ್‍ಡೌನ್ ಆಗಿದ್ದ ನಂದಿಗಿರಿಧಾಮ ಬರೋಬ್ಬರಿ ಐದು ತಿಂಗಳ ನಂತರ ಕೆಲ ದಿನಗಳ ಹಿಂದೆಯಷ್ಟೇ ಅನ್‍ಲಾಕ್ ಆಗಿದೆ. ಹೀಗಾಗಿ ವಿಕೇಂಡ್ ದಿನದಂದು ಸಾವಿರಾರು ಮಂದಿ ನಂದಿಗಿರಿಧಾಮಕ್ಕೆ ಆಗಮಿಸಿ ಬೆಟ್ಟದ ಅನನ್ಯ ಪ್ರಾಕೃತಿಕ ಸೌಂದರ್ಯದ ಸೊಬಗನ್ನ ಸವಿಯುತ್ತಿದ್ದಾರೆ.

  • ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಕುಂದಾನಗರಿಯಲ್ಲಿರೋ ಚಿಕಲೆ ಫಾಲ್ಸ್

    ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಕುಂದಾನಗರಿಯಲ್ಲಿರೋ ಚಿಕಲೆ ಫಾಲ್ಸ್

    ಬೆಳಗಾವಿ: ಮಹಾಮಾರಿ ಕೊರೊನಾ, ಲಾಕ್‍ಡೌನ್, ಸೀಲ್‍ಡೌನ್, ಕ್ವಾರಂಟೈನ್ ಕಳೆದ ಏಳೆಂಟು ತಿಂಗಳಿಂದ ಈ ಎಲ್ಲಾ ಪದಗಳನ್ನು ಕೇಳಿ ಸುಸ್ತಾಗಿದ್ದ ಜನತೆ ಈಗ ರಿಲ್ಯಾಕ್ಸ್ ಮೂಡಿಗೆ ಬರುತ್ತಿದ್ದಾರೆ. ಪ್ರವಾಸಿತಾಣಗಳತ್ತ ಜನ ಹೆಜ್ಜೆ ಹಾಕುತ್ತಿದ್ದಾರೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಪಾತಗಳು ಹಾಲಿನ ನೊರೆಯಂತೆ ಧುಮ್ಮುಕ್ಕುತ್ತಿವೆ. ಅದರಲ್ಲೂ ಚಿಕಲೆ ಚೆಲುವೆನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

    ಒಂದೆಡೆ ಪಶ್ಚಿಮ ಘಟ್ಟ ಪ್ರದೇಶದ ಅರಣ್ಯದಲ್ಲಿ ಮಧ್ಯೆ ದಟ್ಟವಾಗಿ ಆವರಿಸಿರುವ ಮಂಜು. ಒಂದು ಕ್ಷಣ ಮಂಜು, ಮತ್ತೊಂದು ಕ್ಷಣ ಬಿಸಿಲು, ಮಳೆ, ಭೂತಾಯಿ ಮಡಿಲಿಗೆ ಮುಗಿಲು ಬಂದು ಮುತ್ತಿಕ್ಕುತ್ತಿರುವ ರಮಣೀಯ ದೃಶ್ಯ. ಮತ್ತೊಂದೆಡೆ ಸಹ್ಯಾದ್ರಿ ಬೆಟ್ಟದ ಮೇಲಿನಿಂದ ನೀರು ಹರಿದು ಹಾಲಿನ ನೊರೆಯಂತೆ ಪ್ರಪಾತಕ್ಕೆ ಧುಮ್ಮುಕ್ಕುತ್ತಿದ್ದು, ಪ್ರಕೃತಿ ಮಾತೆಯ ಈ ಚೆಲುವನ್ನು ಸವಿಯಲು ಯುವಕ-ಯುವತಿಯರ ತಂಡವೇ ಬರುತ್ತಿದೆ. ಸೆಲ್ಫಿಗೆ ಪೋಸ್ ಕೊಟ್ಟು ಮೋಜು-ಮಸ್ತಿ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕಲೆ ಫಾಲ್ಸ್ ಬಳಿ ಈ ಎಲ್ಲಾ ಕಲರ್‍ಫುಲ್ ದೃಶ್ಯಗಳು ಕಂಡು ಬಂದಿದೆ.

    ಹೌದು. ಬೆಳಗಾವಿಯಿಂದ 41 ಕಿಲೋಮೀಟರ್ ದೂರ ಇರುವ ಚಿಕಲೆ ಗ್ರಾಮದಿಂದ ಎರಡು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋದರೆ ನಮಗೆ ಈ ಚೆಲುವೆಯ ದರ್ಶನವಾಗುತ್ತೆ. ಮಲಪ್ರಭಾ ನದಿ ಉಗಮ ಸ್ಥಾನ ಕಣಕುಂಬಿ ಅರಣ್ಯ ವ್ಯಾಪ್ತಿಗೆ ಬರುವ ಈ ಚಿಕಲೆ ಚೆಲುವೆಯನ್ನು ನೋಡಲು ಎರಡು ಕಣ್ಣು ಸಾಲದು. ಬೆಟ್ಟಗಳ ಮೇಲಿಂದ ಹರಿದು ಬರುವ ನೀರು ಚಿಕಲೆ ಹೊರವಲಯದಲ್ಲಿ ಜಲಪಾತವಾಗಿ ಜಲವೈಭವವನ್ನೇ ಸೃಷ್ಟಿಸಿದ್ದು ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ.

    ಕಳೆದ ಏಳೆಂಟು ತಿಂಗಳಿಂದ ಕೊರೊನಾ ಲಾಕ್‍ಡೌನ್ ಎಂದು ಬೇಸತ್ತಿದ್ದ ಜನರು ಕುಟುಂಬ ಸಮೇತರಾಗಿ ಚಿಕಲೆ ಚೆಲುವೆಯನ್ನು ನೋಡಲು ಹೆಜ್ಜೆ ಹಾಕುತ್ತಿದ್ದಾರೆ. ತಂಡೋಪತಂಡವಾಗಿ ಚಿಕಲೆ ಗ್ರಾಮಕ್ಕೆ ಆಗಮಿಸುತ್ತಿರುವ ಯುವಕ- ಯುವತಿಯರು ಕಾಲ್ನಡಿಗೆಯಲ್ಲಿ ಪ್ರಕೃತಿಯ ಸೊಬಗನ್ನು ಎಂಜಾಯ್ ಮಾಡ್ತಾ ಫಾಲ್ಸ್ ಬಳಿ ಬಂದು ಸೆಲ್ಫಿಗೆ ಪೋಸ್ ಕೊಡ್ತಿದ್ದಾರೆ. ಮಹಾಮಾರಿ ಕೊರೊನಾ ಬಂದು ಲಾಕ್‍ಡೌನ್ ಆದ ಬಳಿಕ ಎಲ್ಲಿಯೂ ಔಟಿಂಗ್ ಹೋಗಿರಲಿಲ್ಲ. ಹೀಗಾಗಿ ಕುಟುಂಬ ಸಮೇತ ಔಟಿಂಗ್ ಹೋಗೋಣ ಅಂತ ಚಿಕಲೆ ಫಾಲ್ಸ್‍ಗೆ ಬಂದಿದ್ದೇವೆ. ಫಾಲ್ಸ್ ಸುತ್ತ ಯಾವುದೇ ಸೇಫ್ಟಿ ಇಲ್ಲ ರಸ್ತೆ ಕೂಡ ಸರಿಯಾಗಿಲ್ಲ. ಹೀಗಾಗಿ ಸ್ವಲ್ಪ ತೊಂದರೆ ಆಗುತ್ತಿದ್ದು ಅದನ್ನ ಸರಿಪಡಿಸಿ ಒಂದೊಳ್ಳೆ ಪ್ರವಾಸಿತಾಣವನ್ನಾಗಿ ಮಾಡಬೇಕು ಅಂತ ಪ್ರವಾಸಿಗರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಜಲಪಾತಗಳಲ್ಲಿ ಜಲವೈಭವವೇ ಸೃಷ್ಟಿಯಾಗಿದ್ದು ಖಾನಾಪುರ ತಾಲೂಕಿನ ಚಿಕಲೆ ಗ್ರಾಮವನ್ನು ಕರ್ನಾಟಕದ ಕಾಶ್ಮೀರ ಅಂತಾನೇ ಪ್ರವಾಸಿಗರು ಬಿರುದು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಮಹಾಮಾರಿ ಕೊರೊನಾ ಭಯ ದೂರ ಮಾಡಿಕೊಂಡು ಜನರು ಪ್ರವಾಸಿತಾಣಗಳತ್ತ ಹೆಜ್ಜೆ ಹಾಕುತ್ತಿರೋದಂತು ಸುಳ್ಳಲ್ಲ. ಕಳಸಾಬಂಡೂರಿ ಯೋಜನೆ ಕಾಮಗಾರಿ ನಡೆಯುವ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಫಾಲ್ಸ್ ಗೆ ನೀವು ಒಮ್ಮೆ ಭೇಟಿ ನೀಡಿ ಜಲಪಾತದ ವೈಭವವನ್ನ ಕಣ್ತುಂಬಿಕೊಳ್ಳಿ.

  • ಮಾಸ್ಕ್ ಧರಿಸದಿದ್ರೆ ನಂದಿಹಿಲ್ಸ್‌ಗೆ ನೋ ಎಂಟ್ರಿ

    ಮಾಸ್ಕ್ ಧರಿಸದಿದ್ರೆ ನಂದಿಹಿಲ್ಸ್‌ಗೆ ನೋ ಎಂಟ್ರಿ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಇಂದಿನಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ದೌಡಾಯಿಸಿದ್ದು, ಮಾಸ್ಕ್ ಧರಿಸದೇ ಬಂದವರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

    ಹೌದು. ಕೊರೊನಾ ಆತಂಕದಿಂದ ಮಾರ್ಚ್ 14ರಿಂದ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಬಳಿಯ ನಂದಿಗಿರಿಧಾಮದಲ್ಲಿಯೂ ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಇಂದು ಬೆಳಗ್ಗೆ 8 ಗಂಟೆಯಿಂದ ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ಮುಕ್ತ ಅವಕಾಶ ನೀಡಿದೆ.

    ಅವಕಾಶ ಕಲ್ಪಿಸಿದ ಬೆನ್ನಲ್ಲೇ ನಂದಿಗಿರಿಧಾಮದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಪ್ರವಾಸಿಗರು ಜಮಾಯಿಸಿದ್ದಾರೆ. ಕಾರು ಹಾಗೂ ಬೈಕ್ ಗಳಲ್ಲಿ ಬಂದಿರುವ ನೂರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮ ಪ್ರವೇಶಕ್ಕೆ ಕಾದಿದ್ದಾರೆ. ಆದರೆ ಮಾಸ್ಕ್ ಧರಿಸದೆ ಬಂದವರನ್ನು ಪೊಲೀಸರು ವಾಪಾಸ್ ಕಳುಹಿಸುತ್ತಿದ್ದಾರೆ.

    ಪೊಲೀಸರು ಚೆಕ್ ಪೋಸ್ಟ್ ಬಳಿಯೇ ತಪಾಸಣೆ ಮಾಡಿ ವಾಪಸ್ ಕಳುಹಿಸುತ್ತಿದ್ದಾರೆ. ನಂದಿಗಿರಿಧಾಮದ ದ್ವಾರ ಬಾಗಿಲಿನಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಈ ಮೂಲಕ ಪ್ರವಾಸಿಗರಿಗೆ ಒಳಗೆ ಹೋಗಲು ಅನುಮತಿ ನೀಡಲಾಗುತ್ತಿದೆ.

  • ಬೀಚಿನಿಂದ 2 ಕೆಜಿ ಮರಳು ಕದ್ದಿದ್ದಕ್ಕೆ ಪ್ರವಾಸಿಗನಿಗೆ 86 ಸಾವಿರ ರೂ. ದಂಡ

    ಬೀಚಿನಿಂದ 2 ಕೆಜಿ ಮರಳು ಕದ್ದಿದ್ದಕ್ಕೆ ಪ್ರವಾಸಿಗನಿಗೆ 86 ಸಾವಿರ ರೂ. ದಂಡ

    ರೋಮ್‌: ಎರಡು ಕೆಜಿ ಮರಳನ್ನು ಕದ್ದಿದ್ದಕ್ಕೆ ಫ್ರಾನ್ಸ್‌ ಪ್ರವಾಸಿಯೊಬ್ಬರಿಗೆ 890 ಪೌಂಡ್‌ (ಅಂದಾಜು 86,633 ರೂ.) ದಂಡ ವಿಧಿಸಲಾಗಿದೆ.

    ಸಾರ್ಡಿನಿಯಾ ಮೆಡಿಟರೇನಿಯನ್‌ ಸಮುದ್ರದಲ್ಲಿ ಇಟಲಿ ದೇಶಕ್ಕೆ ಸೇರಿದ್ದ ದೊಡ್ಡ ದ್ವೀಪವಾಗಿದೆ. ಪ್ರವಾಸಿಗನ ಬಳಿಯಿದ್ದ ಬ್ಯಾಗಿನಲ್ಲಿ 2 ಕೆಜಿ ತೂಕದ ಮರಳು ಇದ್ದ ಹಿನ್ನೆಲೆಯಲ್ಲಿ ದಂಡ ಹಾಕಲಾಗಿದೆ.

    ಸಾರ್ಡಿನಿಯನ್ ಅಧಿಕಾರಿಗಳು ಈ ಬೀಚ್‌ ರಕ್ಷಣೆಯ ಹೊಣೆಯನ್ನು ಹೊತ್ತಿದ್ದಾರೆ. ಇಲ್ಲಿರುವ ಬಿಳಿ ಮರಳು ವಿಶಿಷ್ಟವಾಗಿದ್ದು ಸಂರಕ್ಷಣೆ ಮಾಡಲಾಗುತ್ತಿದೆ. ಪ್ರವಾಸಿಗರು ಸ್ವಲ್ಪ ಪ್ರಮಾಣದಲ್ಲಿ ಮರಳನ್ನು ಕಳ್ಳಸಾಗಣೆ ಮಾಡಿದರೂ ಭಾರೀ ದಂಡವನ್ನು ಎದುರಿಸಬೇಕಾಗುತ್ತದೆ. ದಂಡಗಳಲ್ಲಿ ಒಂದರಿಂದ ಆರು ವರ್ಷಗಳ ಜೈಲು ಶಿಕ್ಷೆ ಸೇರಿದೆ.

    ದ್ವೀಪದಲ್ಲಿರುವ ಸುಂದರವಾದ ಕಡಲತೀರಗಳು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತವೆ. ಈ ಕಾರಣಕ್ಕೆ ಭಾರೀ ಸಂಖ್ಯೆಯ ಪ್ರವಾಸಿಗರು ಈ ದ್ವೀಪಕ್ಕೆ ಆಗಮಿಸುತ್ತಾರೆ.

    ಮರಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ವಿಧಿಸುತ್ತಿರುವುದು ಇದೇ ಮೊದಲೆನಲ್ಲ. ಕಳೆದ ವರ್ಷ ಫ್ರೆಂಚ್ ದಂಪತಿ 14 ಬಾಟಲಿಯಲ್ಲಿ ಮರಳನ್ನು ಸಂಗ್ರಹಿಸಿದ್ದರು. ಒಟ್ಟು ತೂಕ ಮಾಡುವಾಗ 40 ಕೆಜಿ ಮರಳು ಬಾಟಲಿಯಲ್ಲಿತ್ತು. ವಿಚಾರಣೆಯ ಸಂದರ್ಭದಲ್ಲಿ ನಮಗೆ ಇಲ್ಲಿ ಮರಳು ಸಂಗ್ರಹಿಸುವುದು ಅಪರಾಧ ಎಂಬ ವಿಚಾರ ಗೊತ್ತಿರಲಿಲ್ಲ ಎಂದು ತಿಳಿಸಿದ್ದರು. ಸಾರ್ಡಿನಿಯನ್ ಕಡಲತೀರಗಳಿಂದ ಮರಳು, ಬೆಣಚುಕಲ್ಲುಗಳನ್ನು ಸಾಗಿಸುವುದು ಕಾನೂನುಬಾಹಿರ ಎಂದು 2017ರಲ್ಲಿ ಘೋಷಿಸಲಾಗಿದೆ.

    ಮರಳನ್ನು ಸಾಗಾಟಕ್ಕೆ ನಿರ್ಬಂಧ ಇಟಲಿ ಮಾತ್ರ ಇಲ್ಲದೇ ಹಲವು ಕಡೆ ಜಾರಿಯಲ್ಲಿದೆ. ಹವಾಯಿಯಲ್ಲಿ ಕಡಲತೀರದಿಂದ ಮರಳನ್ನು ತೆಗೆಯುವುದು ಅಪರಾಧವಾಗಿದೆ. ಮರಳು ತೆಗೆದರೆ 1 ಲಕ್ಷ ಡಾಲರ್‌(73.24 ಲಕ್ಷ ರೂ.) ದಂಡ ವಿಧಿಸಲಾಗುತ್ತದೆ.. 1947ರ ಕರಾವಳಿ ಸಂರಕ್ಷಣಾ ಕಾಯ್ದೆಯ ಅಡಿ ಇಂಗ್ಲೆಂಡಿನಲ್ಲಿ1 ಸಾವಿರ ಪೌಂಡ್‌( ಅಂದಾಜು 97 ಸಾವಿರ ರೂ.) ದಂಡ ಹಾಕಲಾಗುತ್ತದೆ.

  • ಲಾಕ್‌ಡೌನ್‌ ಮಧ್ಯೆ ಸುತ್ತಾಟ – ಪ್ರವಾಸಿಗರ ಚಳಿ ಬಿಡಿಸಿದ ಬಣಕಲ್‌ ಪೊಲೀಸರು

    ಲಾಕ್‌ಡೌನ್‌ ಮಧ್ಯೆ ಸುತ್ತಾಟ – ಪ್ರವಾಸಿಗರ ಚಳಿ ಬಿಡಿಸಿದ ಬಣಕಲ್‌ ಪೊಲೀಸರು

    ಚಿಕ್ಕಮಗಳೂರು: ಇವತ್ತು ಲಾಕ್‍ಡೌನ್ ಅಂತ ಗೊತ್ತಿದ್ದರೂ ಸ್ನೇಹಿತರು-ಸಂಬಂಧಿಕರ ಜೊತೆ ಊರೂರು ಸುತ್ತುತ್ತಾ ಪ್ರವಾಸಕ್ಕೆ ಬಂದಿದ್ದ ಹೊರಜಿಲ್ಲೆಯ ಪ್ರವಾಸಿಗರು ಹಾಗೂ ಜನಸಾಮಾನ್ಯರಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರು ನೀರಿಳಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲಯಲ್ಲಿ ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರದಲ್ಲೂ ಅಂಗಡಿ-ಮುಂಗಟ್ಟುಗಳನ್ನ ಸಂಪೂರ್ಣ ಬಂದ್ ಮಾಡಿ ಯಾರೂ ಮನೆಯಿಂದ ಹೊರಬಂದಿರಲಿಲ್ಲ. ಬಣಕಲ್ ಪೊಲೀಸರು ಕೂಡ ಬೆಳಗ್ಗೆಯಿಂದ ಗಸ್ತು ತಿರುಗುತ್ತಿದ್ದು ಅನಾವಶ್ಯಕವಾಗಿ ರೋಡಲ್ಲಿ ತಿರುಗಾಡುತ್ತಿದ್ದವರಿಗೆ ಚಳಿ ಬಿಡಿಸಿ ಮನೆಗೆ ಕಳಿಸಿದ್ದರು.

    ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರವಾಸಿಗರು ಹಾಗೂ ಹೊರಜಿಲ್ಲೆಗೆ ಹೋಗುವವರ ಕಾಟ ಆರಂಭವಾಗಿದೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಕೊಟ್ಟಿಗೆಹಾರದಲ್ಲಿ ಪ್ರವಾಸಿಗರು ಹಾಗೂ ಬೆಂಗಳೂರು, ದಾವಣಗೆರೆ, ಮಂಗಳೂರು, ಚಿತ್ರದುರ್ಗ, ಉಡುಪಿ ಮುಂತಾದ ಭಾಗಗಳಿಂದ ಬಂದ ಜನರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ.

    ಹೊರಜಿಲ್ಲೆಗಳಿಂದ ಬಂದ ಪ್ರವಾಸಿಗರಿಗೆ ಪೊಲೀಸರು ಕೊಟ್ಟಿಗೆಹಾರದಲ್ಲಿ ಪ್ರವಾಸಿ ತಾಣಗಳ ದರ್ಶನ ಮಾಡಿಸಿದ್ದಾರೆ. ಮಂಗಳೂರು ಕಡೆಯಿಂದಲೂ ಹಲವು ವಾಹನಗಳು ಬಂದಿದ್ದು ಕೊಟ್ಟಿಗೆಹಾರ ಚೆಕ್‍ಪೋಸ್ಟ್‌ನಲ್ಲಿ ಯಾರನ್ನೂ ಬಿಡದೆ ಪೊಲೀಸರು ಅಡ್ಡಗಟ್ಟಿದ್ದರು.

    ಸುಮಾರು ಒಂದು ಗಂಟೆಯ ಬಳಿಕ ಎಲ್ಲರಿಗೂ ವಾರ್ನ್ ಮಾಡಿ ಬಿಟ್ಟಿದ್ದಾರೆ. ಆದರೆ, ಮಂಗಳೂರಿನಿಂದ ಬಂದ ಅವರಿಗೆ ಮಾರ್ಗ ಮಧ್ಯೆ ಪೊಲೀಸರು ಫೈನ್ ಹಾಕಿ ಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಬಣಕಲ್ ಪೊಲೀಸರು ಎಲ್ಲರಿಗೂ ಕಾಯಿಸಿ, ಎಚ್ಚರಿಕೆ ನೀಡಿದ್ದಾರೆ.

    ಲಾಕ್‍ಡೌನ್ ಕಾನೂನನ್ನ ಉಲ್ಲಂಘಿಸಿ ಬಂದ ನೂರಾರು ವಾಹನಗಳು ಕೊಟ್ಟಿಗೆಹಾರದಲ್ಲಿ ಸಾಲಾಗಿ ನಿಂತಿದ್ದು, ಅಗತ್ಯ ವಸ್ತುಗಳನ್ನ ಸಾಗಿಸುವ ವಾಹನಗಳ ಓಡಾಟಕ್ಕೆ ತೊಂದರೆಯೂ ಆಗಿತ್ತು. ತದನಂತರ ಬಣಕಲ್ ಪೊಲೀಸರು ಎಲ್ಲರಿಗೂ ಎಚ್ಚರಿಸಿ ಬಿಟ್ಟಿದ್ದಾರೆ.

  • ಕೊಡಗಿನಲ್ಲಿ ರೆಸಾರ್ಟ್, ಹೋಟೆಲ್ ಒಪನ್ ಮಾಡಿದ್ರು ಗ್ರಾಹಕರೇ ಇಲ್ಲ

    ಕೊಡಗಿನಲ್ಲಿ ರೆಸಾರ್ಟ್, ಹೋಟೆಲ್ ಒಪನ್ ಮಾಡಿದ್ರು ಗ್ರಾಹಕರೇ ಇಲ್ಲ

    ಮಡಿಕೇರಿ: ಕೊರೊನಾ ಹರಡುವ ಆತಂಕದಿಂದ ದೇಶವನ್ನು ಲಾಕ್‍ಡೌನ್ ಮಾಡಿದ ಎರಡೂವರೆ ತಿಂಗಳ ಬಳಿಕ ಹೋಟೆಲ್ ರೆಸಾರ್ಟ್ ಮತ್ತು ಹೋಮ್ ಸ್ಟೇಗಳಲ್ಲಿ ಕುಳಿತು ಆಹಾರ ಸೇವಿಸಲು ಮತ್ತು ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಕೊಡಗಿನ ಹೋಟೆಲ್, ರೆಸಾರ್ಟ್ ಮತ್ತು ಹೋಮ್ ಸ್ಟೇಗಳಲ್ಲಿ ಮಾತ್ರ ಗ್ರಾಹಕರೇ ಇಲ್ಲದೆ ಸಂಪೂರ್ಣ ಖಾಲಿ ಖಾಲಿಯಾಗಿವೆ.

    ಬಹುತೇಕ ಎಲ್ಲವೂ ಲಾಕ್‍ಡೌನ್ ನಿಂದ ಮುಕ್ತವಾಗಿರುವುದರಿಂದ ರೆಸ್ಟೋರೆಂಟ್ ಗಳತ್ತ ಪ್ರವಾಸಿಗರು, ಜನರು ಬರುವ ನಿರೀಕ್ಷೆ ಇತ್ತು. ಅದಕ್ಕಾಗಿಯೇ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದವು. ಹೋಟೆಲ್ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಸ್ಯಾನಿಟೈರ್ ವ್ಯವಸ್ಥೆಯನ್ನು ಮಾಡಿವೆ. ಅಲ್ಲದೆ ರಿಸೆಪ್ಷನ್ ಸ್ಥಳದಲ್ಲಿ ಕೂಡ ಸಾಮಾಜಿಕ ಅಂತ ಕಾಪಾಡುವುದಕ್ಕಾಗಿ ಮಾರ್ಕ್ ಗಳನ್ನು ಮಾಡಲಾಗಿದೆ. ಅಲ್ಲದೆ ಯಾವ ರಾಜ್ಯದಿಂದ ಬಂದಿದ್ದಾರೆ, ಅವರ ಆರೋಗ್ಯದ ಸ್ಥಿತಿ ಹೇಗಿದೆ ಎಂಬುದನ್ನೆಲ್ಲಾ ತಿಳಿದುಕೊಳ್ಳುವುದಕ್ಕಾಗಿ ಪ್ರತ್ಯೇಕವಾಗಿ ಎಲ್ಲಾ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

    ಪ್ರವಾಸಿಗರು ಮತ್ತು ಜನರೇ ಇಲ್ಲದೆ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ. ಪ್ರವಾಸಿಗರು ಅಥವಾ ಜನರು ರೆಸ್ಟೋರೆಂಟ್‍ಗಳಿಗೆ ಬರುತ್ತಾರೆಂದೇ ಆಹಾರ ಪದಾರ್ಥಗಳನ್ನು ಕೂಡ ರೆಡಿಮಾಡಿಕೊಂಡಿದ್ದವು. ಆದರೆ ಒಬ್ಬೇ ಒಬ್ಬ ಪ್ರವಾಸಿಗರು ಇತ್ತ ತಿರುಗಿ ನೋಡಿಲ್ಲ. ಅದರಲ್ಲೂ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಕೊಡಗು ಜಿಲ್ಲೆಯ ಹೋಟೆಲ್, ರೆಸಾರ್ಟ್ ಗಳು ಸಂಪೂರ್ಣ ಸ್ಥಬ್ಧವಾಗಿವೆ.

    ಒಟ್ಟಿನಲ್ಲಿ ಆರ್ಥಿಕ ಚಟುವಟಿಕೆಗೆ ಚುರುಕು ನೀಡಲು ಸರ್ಕಾರ ಬಹುತೇಕ ಲಾಕ್‍ಡೌನ್ ಫ್ರೀ ಮಾಡಿದ್ದರೂ ಜನರು ಮಾತ್ರ ಕೊರೊನಾ ಆತಂಕದಿಂದ ಹೊರಬಂದಿಲ್ಲ. ಹೀಗಾಗಿ ಕೊಡಗಿನ ಆರ್ಥಿಕ ಚಟುವಟಿಕೆ ಇನ್ನೂ ನಿದ್ರಾವಸ್ಥೆಯಲ್ಲಿದೆ ಎನ್ನುವಂತಾಗಿದೆ.

  • ಸೈಕಲ್ ಮೇಲೆ 1860 ಕಿ.ಮೀ. ಪ್ರಯಾಣ ಆರಂಭಿಸಿದ ಯುವಕರು

    ಸೈಕಲ್ ಮೇಲೆ 1860 ಕಿ.ಮೀ. ಪ್ರಯಾಣ ಆರಂಭಿಸಿದ ಯುವಕರು

    -ಆರು ರಾಜ್ಯ ದಾಟಿ ಸೇರಬೇಕಿದೆ ಗೂಡು
    -ರೈಲ್ವೇ ಟಿಕೆಟ್ ಕನ್ಫರ್ಮ್ ಆಗ್ತಿಲ್ಲ ಏನ್ ಮಾಡೋದು?

    ಚೆನ್ನೈ: ಯುವಕರಿಬ್ಬರು 1860 ಕಿಲೋ ಮೀಟರ್ ದೂರದ ಊರು ಸೇರಲು ಪ್ರಯಾಣ ಆರಂಭಿಸಿದ್ದಾರೆ. ರೈಲ್ವೇ ಟಿಕೆಟ್ ಖಚಿತವಾಗದ ಹಿನ್ನೆಲೆಯಲ್ಲಿ ಯುವಕರಿಬ್ಬರು ಸೈಕಲ್‍ನಲ್ಲಿಯೇ ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ಪಯಣ ಬೆಳೆಸಿದ್ದಾರೆ.

    ಸೋನು ಮತ್ತು ಶೈಲು ಉತ್ತರ ಪ್ರದೇಶದ ಔರಿಯಾ ಜಿಲ್ಲೆಯವರಾಗಿದ್ದು, ತಮಿಳುನಾಡಿನ ಅರ್ಕನೊಂನಲ್ಲಿ ವಾಸವಾಗಿದ್ದರು. ಅರ್ಕನೋಂನಲ್ಲಿ ಕ್ಯಾಂಡಿ ವ್ಯಾಪಾರ ಮಾಡಿಕೊಂಡಿದ್ದ ಇವರ ಬದುಕನ್ನು ಕೊರೊನಾ ಕಿತ್ತುಕೊಂಡಿತ್ತು. ಇದೀಗ ಪ್ರಯಾಣ ಆರಂಭಿಸಿರುವ ಸೋನು ಮತ್ತು ಶೈಲು ಆರು ರಾಜ್ಯಗಳನ್ನು ಪಾರು ಮಾಡಿ ಹೋಗಬೇಕಿರೋದು ದೊಡ್ಡ ಸವಾಲು ಆಗಿದೆ.

    ನಾವು ಕೆಲಸ ಆರಂಭಿಸಿದ ದಿನದಿಂದಲೂ ಸ್ವಲ್ಪ ಹಣ ಕೂಡಿಟ್ಟು ಅದರಲ್ಲಿ ಒಂದು ಭಾಗವನ್ನು ಊರಿಗೆ ಕಳಿಸ್ತಾ ಇದ್ದೀವಿ. ಲಾಕ್‍ಡೌನ್ ನಿಂದಾಗಿ ಇಷ್ಟು ದಿನ ಕೂಡಿಟ್ಟ ಹಣದಿಂದ ಜೀವನ ನಡೆಯಿತ್ತು. ಹಣ ಇಲ್ಲದಿದ್ರೆ ಈ ಊರಿನಲ್ಲಿರಲು ಆಗಲ್ಲ. ನಮ್ಮ ಟ್ರೈನ್ ಟಿಕೆಟ್ ಸಹ ಕನ್ಫರ್ಮ್ ಆಗುತ್ತಿಲ್ಲ. ವಿಧಿಯಿಲ್ಲದೇ ಗೆಳೆಯನ ಜೊತೆ ಸೇರಿ ಬ್ಯಾಗ್ ಗಳಿಗೆ ಬಟ್ಟೆ ಹಾಕಿಕೊಂಡು ಸೈಕಲ್ ಮೇಲೆಯೇ ಊರಿಗೆ ಹೊರಟಿದ್ದೇವೆ ಎಂದು ಸೋನು ಹೇಳುತ್ತಾರೆ.

    ಹೆದ್ದಾರಿಯ ಪುಟ್ಟ ಗುಡಿಸಲಿನಲ್ಲಿ ವಾಸವಾಗಿರುವ ಮಹಿಳೆ ಸುಂಕಮ್ಮ ಮಾತನಾಡಿ, ನನ್ನ ಕಣ್ಮುಂದೆ ಕಾರ್ಮಿಕರು ನಡೆದುಕೊಂಡು ಹೋಗೋದನ್ನು ನೋಡಿ ದುಃಖವಾಗುತ್ತದೆ. ಕೆಲವರು ಬಂದು ಬಾಟಲ್ ಗಳಿಗೆ ನೀರು ತುಂಬಿಕೊಡುವಂತೆ ಕೇಳುತ್ತಾರೆ. ಬಾಟಲ್ ಗಳಿಗೆ ನೀರು ತುಂಬಿ ಕೆಲವು ಬಾರಿ ಊಟ ಸಹ ನೀಡುತ್ತೇನೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

  • ಕೊರೊನಾ ಅಲರ್ಟ್ ಇದ್ರೂ ಜನ ಕ್ಯಾರೇ ಅಂತಿಲ್ಲ- ಬೀಚ್ ಸ್ನಾನಕ್ಕೆ ಪ್ರವಾಸಿಗರ ದಂಡು

    ಕೊರೊನಾ ಅಲರ್ಟ್ ಇದ್ರೂ ಜನ ಕ್ಯಾರೇ ಅಂತಿಲ್ಲ- ಬೀಚ್ ಸ್ನಾನಕ್ಕೆ ಪ್ರವಾಸಿಗರ ದಂಡು

    ಉಡುಪಿ: ರಾಜ್ಯದಲ್ಲಿ ಕೊರೊನಾ ಹಾವಳಿ ಜಾಸ್ತಿಯಾಗಿದೆ. ಜನನಿಬಿಡ ಪ್ರದೇಶದಿಂದ, ಪ್ರವಾಸಿ ತಾಣಗಳಿಂದ ಜನ ದೂರ ಇರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಪ್ರವಾಸಿಗರು ಇದಕ್ಕೆ ಕ್ಯಾರೇ ಅಂತಿಲ್ಲ.

    ಕೊರೊನಾ, ಗಿರೊನಾ ಅಂತ 24 ಗಂಟೆ ಮನೆಯೊಳಗೆ ಕೂರೊಕ್ಕಾಗುತ್ತಾ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ. ಕೊರೊನಾ ಇರಲಿ ನಾವು ಕೇರ್ ಮಾಡಲ್ಲ, ಲೈಫ್ ಎಂಜಾಯ್ ಮಾಡೋ ಟೈಮಲ್ಲಿ ಮಾಡಬೇಕು ಎಂದು ಪ್ರವಾಸಿಗರು ಮಲ್ಪೆ ಬೀಚ್ ನತ್ತ ಬರುತ್ತಿದ್ದಾರೆ.

    ರಾಜ್ಯದಲ್ಲಿ ಉರಿ ಬಿಸಿಲು ಜಾಸ್ತಿ ಆಗಿರಬೇಕಾದರೆ ಮಲ್ಪೆ ಬೀಚಿಗೆ ಬಂದು ದಿನಪೂರ್ತಿ ನೀರಲ್ಲಿ ಬಿದ್ದು ಒದ್ದಾಡಬೇಕು ಎಂದು ಪ್ಲ್ಯಾನ್ ಮಾಡ್ಕೊಂಡು ಜನ ಉಡುಪಿಗೆ ಬರುತ್ತಿದ್ದಾರೆ. ಚಿಕ್ಕಬಳ್ಳಾಪುರ, ಶಿವಮೊಗ್ಗದ ಪ್ರವಾಸಿಗರು ಉಡುಪಿಗೆ ಬಂದಿದ್ದಾರೆ. ಬಿಸಿಲ ಬೇಗೆಯನ್ನು ಕಳೆಯುವುದಕ್ಕೆ ನೂರಾರು ಪ್ರವಾಸಿಗರು ಮಲ್ಪೆ ಬೀಚಿಗೆ ಬರುತ್ತಿದ್ದು ಕೆಲ ಹೊತ್ತು ನೀರಿನಲ್ಲಿ ಇದ್ದು ದಾಹವನ್ನು ತಣಿಸಿಕೊಳ್ಳುತ್ತಿದ್ದಾರೆ.

    ಶಿವಮೊಗ್ಗ ಮೂಲದ ತೌಸಿಫ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೊರೊನಾಗೆ ನಾವು ಭಯಪಡಬಾರದು. ವೈರಸ್ ಮನುಷ್ಯನನ್ನು ನೋಡಿ ಅದು ಭಯ ಪಡಬೇಕು. ವೈರಸ್ ಇದೆ ಎಂದು ಮನೆಯಲ್ಲಿ ಕೂತರೆ 24 ಗಂಟೆ ಕೂರಬೇಕಾಗಬಹುದು ಎಂದು ಹೇಳಿದರು.

    ಮಲ್ಪೆ ಬೀಚ್ ಬಳಿಯ ಜ್ಯೂಸ್ ಅಂಗಡಿ ಮಾಲೀಕ ಉಪೇಂದ್ರ ಮಾತನಾಡಿ, ಮಾಮೂಲಿ ದಿನಗಳಲ್ಲಿ ನಮಗೆ 10 ಸಾವಿರ ರೂ. ವ್ಯಾಪಾರ ಆಗುತ್ತದೆ. ಕಳೆದ ಮೂರ್ನಾಲ್ಕು ದಿವಸಗಳಿಂದ ಒಂದರಿಂದ ಎರಡು ಸಾವಿರದಷ್ಟು ವ್ಯಾಪಾರವಾಗುತ್ತಿಲ್ಲ. ಅಂಗಡಿ ಮುಚ್ಚಿ ಮನೆಗೆ ಹೋಗುವ ಎಂದಿ ಎನಿಸುತ್ತಿದೆ. ಜಿಲ್ಲಾಡಳಿತ ಇವರಿಗೆ ಬಂದ್ ಮಾಡಬೇಕು ಎಂದು ಲಿಖಿತವಾಗಿ ನಮಗೆ ಏನೂ ಮಾಹಿತಿ ಕೊಟ್ಟಿಲ್ಲ ಎಂದರು.

    ಮಲ್ಪೆ ಬೀಚ್‍ನ ಅಮ್ಯೂಸ್ಮೆಂಟ್ ಪಾರ್ಕ್ ಗಳು ವಿವಿಧ ಗೇಮ್‍ಗಳು, ಬೀಚ್ ರೈಡಿಂಗ್, ಬೀಚ್ ಕ್ರಿಕೆಟ್, ಬೀಚ್ ಶೂಟಿಂಗ್ ಎಲ್ಲವೂ ಪ್ರವಾಸಿಗರಿಲ್ಲದೆ ಬಿಕೋ ಅನ್ನುತ್ತಿದೆ. ಆದರೆ ಸಮುದ್ರಕ್ಕೆ ಈಜಿ ಹೇಳುವವರಿಗೆ ನಾವು ತಡೆಯೊಡ್ಡಲು ಆಗುತ್ತಿಲ್ಲ. ಕಿ.ಮೀಗಟ್ಟಲೆ ಸಾಗರ ಆವರಿಸಿರುವುದರಿಂದ ಪ್ರವಾಸಿಗರು ಎಲ್ಲಾದರೂ ಹೋಗಿ ನೀರಿಗೆ ಇಳಿಯುತ್ತಿದ್ದಾರೆ ಎಂದು ಲೈಫ್ ಗಾರ್ಡ್ ಸಿಬ್ಬಂದಿ ಮಾಹಿತಿ ನೀಡಿದರು.

  • ಮುಳ್ಳಯ್ಯನಗಿರಿಗೆ ‘ಸಿಂಗಲ್ ಪರ್ಸನ್’ ಟೂರಿಸ್ಟ್ ಇಲ್ಲ- 30 ವರ್ಷದಲ್ಲಿ ಇದೇ ಮೊದ್ಲು

    ಮುಳ್ಳಯ್ಯನಗಿರಿಗೆ ‘ಸಿಂಗಲ್ ಪರ್ಸನ್’ ಟೂರಿಸ್ಟ್ ಇಲ್ಲ- 30 ವರ್ಷದಲ್ಲಿ ಇದೇ ಮೊದ್ಲು

    ಚಿಕ್ಕಮಗಳೂರು: ಕೊರೊನಾ ವೈರಸ್‍ನಿಂದ ಕಾಫಿನಾಡಿನ ಮೇಲೆ ತುಂಬಾ ಪರಿಣಾಮ ಬೀರಿದೆ. ಯಾಕೆಂದರೆ ಮೂರು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಒಬ್ಬನೇ ಒಬ್ಬ, ಸಿಂಗಲ್ ಪರ್ಸನ್ ಪ್ರವಾಸಿಗ ಸಹ ಬರಲಿಲ್ಲ.

    ಕಾಫಿನಾಡಿನ ತುಂಬು ಮುತ್ತೈದೆಯಂತಿರೋ ಹಚ್ಚ ಹಸಿರಿನ ಸೊಬಗನ್ನ ಸವಿಯಲು ಪ್ರವಾಸಿಗರಿಲ್ಲದ ದಿನ ಇರಲಿಲ್ಲ. ಯುಗಾದಿ, ದೀಪಾವಳಿ, ಕ್ರಿಸ್‍ಮಸ್, ರಂಜಾನ್ ಯಾವುದೆ ದಿನವಾದರೂ ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ಸೇರಿದಂತೆ ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಜನ ಇರುತ್ತಿದ್ದರು. ಕನಿಷ್ಠ 100 ಜನರಾದರೂ ಇರುತ್ತಿದ್ದರು. ಆದರೆ ಕೊರೊನಾದ ಕರಿನೆರಳಿಗೆ ಕರ್ನಾಟಕದ ಅತ್ಯಂತ ಎತ್ತರದ ಶಿಖರ ಎಂದೇ ಖ್ಯಾತಿಯಾಗಿರೋ ಮುಳ್ಳಯ್ಯನಗಿರಿಗೂ ಅನಾಥ ಪ್ರಜ್ಞೆ ಕಾಡುತ್ತಿದೆ.

    ಕಳೆದ ಮೂವತ್ತು ವರ್ಷದ ಇತಿಹಾಸದಲ್ಲಿ ಕಾಫಿನಾಡಿಗೆ ಇಂತಹ ಸ್ಥಿತಿ ಬಂದಿರೋದು ಇದೇ ಮೊದಲಂತೆ. ಮುಳ್ಳಯ್ಯನಗಿರಿ ಹಾಗೂ ದತ್ತಪೀಠದಲ್ಲಿ ಒಬ್ಬನೇ ಒಬ್ಬ, ಸಿಂಗಲ್ ಪರ್ಸನ್ ಪ್ರವಾಸಿಗ ಕೂಡ ಇಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರ ಏನೇ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದರು ಪ್ರವಾಸಿಗರನ್ನ ಹಿಡಿದಿಡಲು ಸಾಧ್ಯವಾಗುತ್ತಿರಲಿಲ್ಲ. ಕದ್ದು-ಮುಚ್ಚಿಯಾದರೂ ನೂರಾರು ಜನ ಗಿರಿಯಲ್ಲಿ ಇರುತ್ತಿದ್ದರು.

    ಜಿಲ್ಲಾಡಳಿತದ ಮನವಿಗೋ, ಸರ್ಕಾರದ ಆದೇಶಕ್ಕೋ ಅಥವಾ ಕೊರೊನಾ ಹುಟ್ಟಿಸಿರೋ ಆತಂಕಕ್ಕೋ ಗೊತ್ತಿಲ್ಲ ಗಿರಿಭಾಗದ ಪ್ರವಾಸಿ ತಾಣದಲ್ಲಿ ಒಬ್ಬನೇ ಒಬ್ಬ ಪ್ರವಾಸಿಗ ಇಲ್ಲ. ಪ್ರವಾಸಿ ತಾಣಗಳ ಸ್ಥಿತಿ ಹೀಗಿರೋದು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ಹೋಟೆಲ್ ಮಾಲೀಕರಿಗೆ ತುಂಬಾ ನಷ್ಟವಾಗಿದೆ.

    ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಕಾಫಿನಾಡಲ್ಲೀಗ ಪ್ರವಾಸಿಗರನ್ನ ಹುಡುಕುವಂತಾಗಿದೆ. ಪ್ರವಾಸಿ ತಾಣಗಳ ಸ್ಥಿತಿ ಹೀಗಾದ್ರೆ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆಯೂ ಕೂಡ ಇಳಿಕೆಯಾಗಿದೆ.

  • ಸರ್ಕಾರಿ ಆದೇಶದ ಮೊದಲೇ ಕೊಡಗಿನ ಹೋಂ ಸ್ಟೇ ಬಂದ್

    ಸರ್ಕಾರಿ ಆದೇಶದ ಮೊದಲೇ ಕೊಡಗಿನ ಹೋಂ ಸ್ಟೇ ಬಂದ್

    ಮಡಿಕೇರಿ: ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೊದಲೇ ಕೊಡಗಿನ ಹೋಂ ಸ್ಟೇಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದಾರೆ.

    ಹೌದು. ದಕ್ಷಿಣ ಕಾಶ್ಮೀರ, ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಇಲ್ಲಿನ ಪ್ರವಾಸಿತಾಣಗಳನ್ನು ನೋಡಲು ಎಂಜಾಯ್ ಮಾಡಲು ದೇಶ ವಿದೇಶಗಳಿಂದ ಪ್ರವಾಸಿಗರು ಕೊಡಗಿನ ಸೌಂದರ್ಯ ಸವಿಯಲು ಬರುತ್ತಿದ್ದರು. ಇದೀಗ ಕೊರೊನಾ ವೈರಸ್ ಭೀತಿ ಪ್ರವಾಸಿಗರಿಗೂ ಕಾಡುತ್ತಿದ್ದು, ಮನೆಯಿಂದ ಹೋರಗೆ ಬರಲು ಹಿಂದೆಟ್ಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರವಾಸಿಗರಿಲ್ಲದೇ ಕೊಡಗಿನ ಪ್ರವಾಸಿತಾಣಗಳು ಬಿಕೋ ಎನ್ನುತ್ತಿದೆ.

    ಈ ಹಿನ್ನೆಲೆಯಲ್ಲಿ ಹೋಂ ಸ್ಟೇ ಮಾಲೀಕರು ಸ್ವಯಂ ಪ್ರೇರಿತರಾಗಿ ಕಳೆದ 1 ವಾದದಿಂದ ಬಂದ್ ಮಾಡಿದ್ದಾರೆ. ಹೋಂ ಸ್ಟೇಗೆ ಈಗಾಗಲೇ ಬುಕ್ ಮಾಡುವವರು ಸಂಖ್ಯೆ ವಿರಳವಾಗಿದ್ದು, ಕೆಲವೇ ಕೆಲವು ಮಂದಿ ಮಾತ್ರ ಬುಕ್ಕಿಂಗ್ ಮಾಡುತ್ತಿದ್ದಾರೆ. ಆದರೆ ಈ ಬುಕ್ಕಿಂಗ್‍ಗಳನ್ನೂ ಹೋಂ ಸ್ಟೇ ಮಾಲೀಕರು ನಿರಾಕರಣೆ ಮಾಡುತ್ತಿದ್ದಾರೆ. ತಮ್ಮಗೆ ನಷ್ಟ ಆದ್ರೂ ಪರವಾಗಿಲ್ಲ ನಾಡಿನ ಜನರ ಆರೋಗ್ಯ ಮುಖ್ಯ, ಹೀಗಾಗಿ ನಾವೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತಿದ್ದೇವೆ ಎಂದು ಮಾಲೀಕರು ತಿಳಿಸಿದ್ದಾರೆ.

    ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಆದ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ನಷ್ಟ ಅನುಭವಿಸಿದ್ದೆವು. ಆದರೆ ಈ ಕೊರೊನಾ ವೈರಸ್ ಭೀತಿ ರಾಜ್ಯವನ್ನು ಕಾಡುತ್ತಿದೆ. ನಮಗೆ ನಷ್ಟ ಆದ್ರೂ ಪರವಾಗಿಲ್ಲ ಎಂದು ಕೊಡಗಿನಲ್ಲಿ ಸುಮಾರು 700ಕ್ಕೂ ಅಧಿಕ ಹೋಂ ಸ್ಟೇಗಳನ್ನು ಮಾಲೀಕರು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಂದಿನಿಂದ ಗ್ರಾಮಪಂಚಾಯ್ತಿ ಪಿಡಿಓಗಳು ಹೋಂ ಸ್ಟೇ ಮಾಲೀಕರಿಗೆ ಬಂದ್ ಮಾಡಲು ನೋಟಿಸ್ ಕೂಡ ನೀಡಲಾಗುತ್ತಿದೆ. ಇದರಿಂದ ಹೋಂ ಸ್ಟೇ ಉದ್ಯಮ ಹಾಗೂ ಸಿಬ್ಬಂದಿಗಳ ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎನ್ನಲಾಗಿದೆ.