Tag: Tourist

  • ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ: ಯೋಗೇಶ್ವರ್

    ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ: ಯೋಗೇಶ್ವರ್

    ಬೆಂಗಳೂರು: ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

    ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾದಲ್ಲಿ ಕೋನಾರ್ಕ್ ಸೂರ್ಯ ದೇವಾಲಯದ ಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆಯನ್ನು ಪ್ರವಾಸಿಗರಿಗೆ ಒದಗಿಸಿದ್ದಾರೆ. ಪ್ರವಾಸಿಗರು ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್ ನಲ್ಲಿ ಸೂರ್ಯ ದೇವಾಲಯದ ಇತಿಹಾಸವನ್ನು ಚಲನಚಿತ್ರದ ಮೂಲಕ ತೋರಿಸಲಾಗುತ್ತದೆ. ನಂತರ, ಸೂರ್ಯ ದೇವಾಲಯ ದರ್ಶನ ಮಾಡಲಾಗುತ್ತದೆ. ಅದೇ ರೀತಿ ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಇದೇ ಮಾದರಿಯಲ್ಲಿ ಬಾಹುಬಲಿಯ ಇತಿಹಾಸವನ್ನು ಹೇಳುವ ಒಂದು ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿ ಅದನ್ನು ಥಿಯೇಟರ್‍ನಲ್ಲಿ ಪ್ರದರ್ಶಿಸಲಾಗುವುದು. ನಂತರ ಪ್ರವಾಸಿಗರು ಗೋಮಟೇಶ್ವರ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೂಲಕ ಪ್ರವಾಸಿಗರಿಗೆ ಬಾಹುಬಲಿಯ ಸಂಪೂರ್ಣ ಇತಿಹಾಸದ ಮಾಹಿತಿಯನ್ನು ನೀಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

    ಮೈಸೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ ಹೈಟೆಕ್ ಹಾಥ್ ವೇ ನಿರ್ಮಾಣ:
    ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅತ್ಯಾಧುನಿಕವಾದ ಕಲೆ, ಸಾಂಸ್ಕೃತಿ, ಜಾನಪದ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಥ್ ವೇ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನಂದಿ ಬೆಟ್ಟಕ್ಕೆ ರೋಪ್ ವೇ: ಪ್ರವಾಸೋದ್ಯಮ ಇಲಾಖೆ ಸಭೆಯಲ್ಲಿ ನಿರ್ಧಾರ

    ಮೂರು ಹಂತಗಳಲ್ಲಿ ಈ ಬೃಹತ್ ಹಾಥ್ ವೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅತೀ ಶೀಘ್ರದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂದಾಜು 100.00ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

    ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಲು ಬಂಡವಾಳ ಆರ್ಕಷಿಸುವ ಸಂಬಂಧ THE INDIA EXPO-2023 ಬೃಹತ್ ಮೇಳವನ್ನು ಆಯೋಜಿಸಲು ಕಾರ್ಯೋನ್ಮಖರಾಗುವಂತೆ ಯೋಗೇಶ್ವರ್ ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿವೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿ ದೇಶ ವಿದೇಶಗಳ ಪ್ರವಾಸಿಗರು ಆಗಮಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಂತರ್ ರಾಷ್ಟ್ರೀಯ ಪ್ರವಾಸಿ ಮೇಳವನ್ನು ಏರ್ಪಡಿಸುವ ಮೂಲಕ ಬಂಡವಾಳವನ್ನು ಆಕರ್ಷಿಸಬೇಕು ಎಂದರು.

    ಇದೇ ವೇಳೆ ONE IRIS ಕಂಪನಿಯವರು ಪ್ರವಾಸೋದ್ಯಮ ಮೇಳದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

  • ಪ್ರವಾಸಿಗರೇ ಶನಿವಾರ, ಭಾನುವಾರ ನಂದಿಬೆಟ್ಟಕ್ಕೆ ಬರಬೇಡಿ

    ಪ್ರವಾಸಿಗರೇ ಶನಿವಾರ, ಭಾನುವಾರ ನಂದಿಬೆಟ್ಟಕ್ಕೆ ಬರಬೇಡಿ

    ಚಿಕ್ಕಬಳ್ಳಾಪುರ: ಕೊರೊನಾ ಮೂರನೇ ಅಲೆ ತಡೆಯುವ ಸಲುವಾಗಿ ವಿಕೇಂಡ್ ಶನಿವಾರ ಮತ್ತು ಭಾನುವಾರ ನಂದಿಬೆಟ್ಟ ಸಂಪೂರ್ಣ ಬಂದ್ ಮಾಡಲಿದ್ದು, ಪ್ರವಾಸಿಗರೇ ನಂದಿಬೆಟ್ಟಕ್ಕೆ ಬರಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ ಅವರು, ಕಳೆದ ಶನಿವಾರ ಹಾಗೂ ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದು, ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ನಂದಿಬೆಟ್ಟದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಯಿತು. ಭಾನುವಾರ 12,000 ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗಿದ್ದು, ಪ್ರವಾಸಿಗರ ದಟ್ಟಣೆ ಹೆಚ್ಚಾಗಿ ಕೊರೊನಾ ನಿಯಮಗಳನ್ನು ಪ್ರವಾಸಿಗರು ಗಾಳಿಗೆ ತೂರಿದ್ರು. ಹೀಗಾಗಿ ಪ್ರವಾಸಿಗರೇ ವಿಕೇಂಡ್ ಶನಿವಾರ-ಭಾನುವಾರ ನಂದಿಬೆಟ್ಟದತ್ತ ಬಂದು ಬೇಜಾರು ಮಾಡಿಕೊಂಡು ವಾಪಾಸ್ ಹೋಗಬೇಡಿ. ವಾರದ ಇತರ ದಿನಗಳಲ್ಲೂ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದೆ. ಆದರೆ ನಂದಿಬೆಟ್ಟದ ಮೇಲ್ಭಾಗದಲ್ಲಿ 550 ಬೈಕ್ ಹಾಗೂ 310 ಕಾರುಗಳಿಗಷ್ಟೇ ಪಾರ್ಕಿಂಗ್  ಸೌಲಭ್ಯವಿದ್ದು, ಇಷ್ಟು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ಶ್ವಾನ-ಕೋತಿಗಳ ಸ್ನೇಹಕ್ಕೆ ಪ್ರವಾಸಿಗರು ಫಿದಾ

    ನಂದಿಬೆಟ್ಟದ ತಪ್ಪಲಿನ ಕೆಳಭಾಗದ ಚೆಕ್ ಪೋಸ್ಟ್ ನಲ್ಲೇ ಟೋಕನ್ ವಿತರಣೆ ಮಾಡಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಲಾಗುವುದು. ಟೋಕನ್ ವಿತರಣೆ ಮಾಡುವ ಮೂಲಕ ವಾಹನಗಳ ದಟ್ಟಣೆ ಹಾಗೂ ಜನದಟ್ಟಣೆ ತಡೆಯುವ ಮೂಲಕ ಕೊರೊನಾ ಮೂರನೇ ಅಲೆ ತಡೆಯಲಾಗುವುದು. ಜೊತೆಗೆ ಈ ಟೋಕನ್ ವಿತರಣೆಯನ್ನು ಮುಂದಿನ ದಿನಗಳಲ್ಲಿ ಆನ್‍ಲೈನ್ ಮೂಲಕ ತಂತ್ರಜ್ಞಾನ ಬಳಸಿಕೊಂಡು ಟೋಕನ್ ನೀಡುವ ಕಾರ್ಯಕ್ಕೆ ಕೆಎಸ್‍ಟಿಡಿಸಿ ಆ್ಯಪ್ ತಯಾರಿ ಮಾಡಲಿದೆ. ಮತ್ತೊಂದೆಡೆ ಬೆಟ್ಟದ ಕೆಳಭಾಗದಲ್ಲಿ ಪಾರ್ಕಿಂಗ್ ಗೆ 7 ಎಕರೆ ಜಾಗ ಮೀಸಲಿಟ್ಟಿದ್ದು, ಅದಷ್ಟು ಬೇಗ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

  • ಬಡ-ಮಧ್ಯಮ ವರ್ಗದವರಿಗೆ ದುಬಾರಿಯಾದ ನಂದಿಬೆಟ್ಟ – ಊಟ, ತಿಂಡಿ, ಕಾಫಿ ಸೇರಿದಂತೆ ಪ್ರವೇಶ ಶುಲ್ಕವೂ ಬಲು ದುಬಾರಿ

    ಬಡ-ಮಧ್ಯಮ ವರ್ಗದವರಿಗೆ ದುಬಾರಿಯಾದ ನಂದಿಬೆಟ್ಟ – ಊಟ, ತಿಂಡಿ, ಕಾಫಿ ಸೇರಿದಂತೆ ಪ್ರವೇಶ ಶುಲ್ಕವೂ ಬಲು ದುಬಾರಿ

    – ಪ್ರವಾಸೋದ್ಯಮ ಇಲಾಖೆಯ ವಸತಿಗೃಹಗಳಲ್ಲಿ ಸಾವಿರಾರು ರೂಪಾಯಿ

    ಚಿಕ್ಕಬಳ್ಳಾಪುರ: ಬಡವರ ಪಾಲಿನ ಊಟಿ ಅಂತಲೇ ಪ್ರಖ್ಯಾತಿ. ಅದ್ರೆ ಇದೀಗೆ ಅದೇ ಬಡವರ-ಮಧ್ಯಮ ವರ್ಗದವರ ಪಾಲಿಗೆ ಚಿನ್ನದ ಮೊಟ್ಟೆ ಎಂಬಂತಾಗಿದೆ. ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಹೋಗಿ ಬರಬೇಕಾದ್ರೆ ಈಗ ನೀವು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದ್ದು, ಜೇಬು ತುಂಬಾ ದುಡ್ಡು ಇರಬೇಕು ಎಂಬಂತಾಗಿದೆ ಅಂತ ಪ್ರವಾಸಿಗರು ದೂರುತ್ತಿದ್ದಾರೆ.

    ಬೆಂಗಳೂರಿಗೆ ಸಮೀಪದಲ್ಲರುಬ ಈ ನಂದಿಗಿರಿಧಾಮ ಬೆಂಗಳೂರಿಗರ ಪಾಲಿನ ವಿಕೇಂಡ್ ಹಾಟ್ ಸ್ಪಾಟ್ ಅಂತ ಎಲ್ಲರಿಗೂ ಗೊತ್ತಿರುವ ವಿಚಾವರ. ಇನ್ನೂ ಕೊರೊನಾ ಅನ್‍ಲಾಕ್ ಆಗಿದ್ದೇ ತಡ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದುಬರ್ತಿದೆ. ಹೀಗೆ ಬಂದ ಪ್ರವಾಸಿಗರಿಗೆ ಈಗ ಜೇಬು ಸುಡುವಂತಾಗಿದೆ. ಕಾರಣ ತೋಟಗಾರಿಕಾ ಇಲಾಖೆ ಸುಪರ್ದಿಯಲ್ಲಿದ್ದ ನೆಹರು ನಿಲಯ ಸೇರಿದಂತೆ ಇತರೆ ವಸತಿಗೃಹಗಳನ್ನ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪರಿಣಾಮ ನಂದಿಗಿರಿಧಾಮದ ವಸತಿಗೃಹಗಳ ನೂತನ ದರ ಪ್ರವಾಸಿಗರ ಪಾಲಿಗೆ ದುಬಾರಿಯಾಗ್ತಿದೆ.

    ನಂದಿಬೆಟ್ಟದಲ್ಲಿ ನೀವು 1 ದಿನ ತಂಗಬೇಕಾದ್ರೆ ನೆಹರು ನಿಲಯದಲ್ಲಿ ವಿಶೇಷ ವಿವಿಐಪಿ ಸೂಟ್ ವಸತಿ ಗೃಹಗಳು, ಗಾಂಧಿ ನಿಲಯದಲ್ಲಿ ಕೆಎಸ್‍ಟಿಡಿಸಿ ವಸತಿ ಗೃಹಗಳಿವೆ. ಈಗ ಸಾಮಾನ್ಯ ವಸತಿ ಗೃಹಗಳ ಆರಂಭಿಕ ದರ 2,000 ರೂ. ವಿಐಪಿ, ವಿವಿಐಪಿ ರೂಂಗಳ ಬಾಡಿಗೆ ದರ 4,000-5,000 ರೂಪಾಯಿವರೆಗೆ ಆಗಲಿದ್ದು, ವಾರಾಂತ್ಯಗಳಲ್ಲಿ 6,000 ರೂ. ಸಹ ಇರಲಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಪಾಲಿನ ಪ್ರವಾಸಿಗರಿಗೆ ಈ ದರ ದುಬಾರಿಯಾಗಲಿದ್ದು, ಪ್ರವಾಸಿಗರ ಬೇಸರಕ್ಕೆ ಕಾರಣವಾಗ್ತಿದೆ.

    ಇನ್ನೂ ವಸತಿಗೃಹಗಳ ಪರಿ ಇದಾದ್ರೆ, ನಂದಿಗಿರಿಧಾಮಕ್ಕೆ ಬರೋ ಪ್ರವಾಸಿಗರು ಜೇಬು ತುಂಬಾ ಕಾಸಿಟ್ಟುಕೊಂಡು ಬರಬೇಕಿದೆ. ಕಾರಣ ನಂದಿಗಿರಿಧಾಮ ಎಂಟ್ರಿ ಆಗ್ತಿದ್ದಂತೆ ಪ್ರವೇಶ ಶುಲ್ಕ ತಲಾ 20 ರೂ ಆದೂ,್ರ ಬೈಕ್ ಪಾರ್ಕಿಂಗ್ ಶುಲ್ಕ, ಹೆಲ್ಮೆಟ್ ದಾಸ್ತಾನು ಶುಲ್ಕ ಅಂತ ನೂರಾರು ರೂಪಾಯಿ ಖಾಲಿ ಆಗುತ್ತೆ. ಇನ್ನೂ ಬೆಟ್ಟ ಸುತ್ತಾಡಿ ಸುಸ್ತಾಗಿದೆ ಅಂತ ಕಾಫಿ, ಟೀ, ತಿಂಡಿ, ಊಟ ಅಂತ ಹೋದ್ರೆ ಹೋಟೆಲ್ ಗಳಿಗೆ ಹೋದ್ರೆ ಅಲ್ಲೂ ದುಪ್ಪಟ್ಟು ದರ.

    ಸಾಮಾನ್ಯವಾಗಿ 10 ರೂಪಾಯಿ ಕಾಫಿ-ಟೀ ಇಲ್ಲಿ 20 ರೂಪಾಯಿ, ಇಡ್ಲಿ-ವಡೆ-80 ರೂಪಾಯಿ, ಮಸಾಲೆ ದೋಸೆ-80 ರೂಪಾಯಿ, ಉದ್ದಿನ ವಡೆ ಸಹ 80 ರೂಪಾಯಿ ಹೀಗೆ ಎಲ್ಲ ದರಗಳು ಸಹ ದುಬಾರಿ. ಇದರಿಂದ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರು ನೂರು ಅಲ್ಲ ಸಾವಿರಾರು ರೂಪಾಯಿ ಇದ್ರೇ ಮಾತ್ರ ನಂದಿಬೆಟ್ಟದತ್ತ ಬರುವಂತಾಗಿದೆ. ಹಾಗಾಗಿ ಸರ್ಕಾರ ಇಲಾಖೆ ಅದಷ್ಟು ಬಡ ಮಧ್ಯಮ ಪ್ರವಾಸಿ ಸ್ನೇಹಿ ದರ ನಿಗದಿ ಮಾಡಬೇಕು ಅಂತಾರೆ ಪ್ರವಾಸಿಗರು.

    ಓಟ್ಟಿನಲ್ಲಿ ಅಭಿವೃದ್ದಿ ಹೆಸರಲ್ಲಿ ನಂದಿಗಿರಿಧಾಮವನ್ನ ಹೈಟೆಕ್ ಮಾಡುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ವಸತಿನಿಲಯಗಳ ಅಂದ ಚೆಂದ ಹೆಚ್ಚಿಸಿದೋರ ಜೊತೆ ಜೊತೆಗೆ ಸ್ವಚ್ಚತೆಗೆ ಆದ್ಯತೆ ಕೊಡ್ತಿದೆ. ಆದ್ರೆ ಈ ವಸತಿ ನಿಲಯಗಳ ಬಾಡಿಗೆ ದರ ಜನ ಸಾಮಾನ್ಯರ ಪಾಲಿಗೆ ಕೈಗೆ ಎಟುಕುದಂತಾಗುತ್ತಿದ್ದು, ಕಣ್ಣಿಗೆ ಕಾಣೋ ನಂದಿಬೆಟ್ಟ ಬಡ ಮಧ್ಯಮದವರ ಪಾಲಿಗೆ ದೂರ ಆಗುವಂತಾಗಿದೆ.

  • ಬಿಎಸ್‍ವೈ ವಿರುದ್ಧ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ: ಸಿಪಿವೈ

    ಬಿಎಸ್‍ವೈ ವಿರುದ್ಧ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ: ಸಿಪಿವೈ

    ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ನನ್ನನ್ನು ವಿಲನ್ ಮಾಡಬೇಡಿ, ಅವರ ವಿರುದ್ಧ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಯೋಗೇಶ್ವರ್, ಬಿಎಸ್ ವೈ ಅವರು ನಮ್ಮ ನಾಯಕರು. ಅವರನ್ನು ನಾವ ಟಾರ್ಗೆಟ್ ಮಾಡಲ್ಲ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಕೆಲಸವನ್ನೂ ನಾವು ಮಾಡುತ್ತಿಲ್ಲ. ನಮ್ಮ ದೆಹಲಿ ಭೇಟಿ ವಿಚಾರ, ನಮ್ಮಲ್ಲಿ ಆಂತರಿಕ ಸಮಸ್ಯೆಗಳು ಇವೆ. ಹಾಗಾಗಿ ನಾಯಕರ ಮುಂದೆ ಹೇಳಿಕೊಳ್ಳಲು ಹೋಗುತ್ತಿದ್ದೇವೆ ವಿನಃ ಬೇರೆ ವಿಷಯವಲ್ಲ ಎಂದರು.

    ಶಾಸಕ ಯತ್ನಾಳ್ ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ವಿಚಾರವಾಗಿ, ಪ್ರವಾಸೋದ್ಯಮ ಇಲಾಖೆ ಮೂಲಕವೇ ರಾಜ್ಯದಲ್ಲಿ ನಾಲ್ಕು ಕಡೆ ತ್ರಿ ಸ್ಟಾರ್ ಹೋಟೆಲ್ ಕಟ್ಟಲು ನಿರ್ಧರಿಸಿದ್ದೇವೆ. ಹಾಗಾಗಿ ಕಲಬುರ್ಗಿಯಲ್ಲಿ ಹೋಟೆಲ್ ಆರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಸಂಬಂಧ ಭೇಟಿ ಮಾಡಿರುವೆ. ಅವರ ಕ್ಷೇತ್ರದಲ್ಲಿ ತೆರಳುವಾಗ ಭೇಟಿ ಮಾಡಿರುವೆ ಅಷ್ಟೇ ಮತ್ತೆ ಬೇರೆ ವಿಚಾರವಿಲ್ಲ. ಯತ್ನಾಳ್ ಹಾಗೂ ನಾವು ಸಮಕಾಲಿನರು ಹಾಗಾಗಿ ಅವರನ್ನು ಭೇಟಿ ಮಾಡಿದ್ದೇನೆ. ಮತ್ತ್ಯಾವ ವಿಚಾರವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟರೆ ಪರಿಹಾರ ನೀಡಿ – ಸುಪ್ರೀಂ ಮಹತ್ವದ ಆದೇಶ

    ನಾವು ಪರೀಕ್ಷೆ ಬರೆದಿದ್ದೇವೆ. ಫಲಿತಾಂಶ ಯಾವಾಗ ಬರುತ್ತೆ ಎಂದು ನೋಡೋಣ. ಪಕ್ಷದ ಹಿರಿಯರು ಯಾವಾಗ ತೀರ್ಮಾನ ಮಾಡ್ತಾರೋ ಆವಾಗ ಬರುತ್ತದೆ ಎಂದರು. ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಮೂವರಿಂದ ಅನ್ಯಾಯವಾಗಿದೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಅವರ ದೆಹಲಿ ಭೇಟಿ ವಿಷಯವೂ ನನಗೆ ಗೊತ್ತಿಲ್ಲ. ಇಲಾಖೆ ಕಾರ್ಯಕ್ರಮದ ನಿಮಿತ ನಾನು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದೇನೆ. ಸುಮ್ಮನೆ ನನ್ನ ಭೇಟಿ ವಿಚಾರ ಬೇರೆಯದಕ್ಕೆ ತಳುಕು ಹಾಕಬೇಡಿ ಎಂದು ತಿಳಿಸಿದರು.

    ದೇವಸ್ಥಾನ ಆರಂಭವಾಗದಿದ್ದರೂ ನಿಯಮ ಉಲ್ಲಂಘಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಚಾರದಲ್ಲಿ ನಾವು ಲಾಕ್‍ಡೌನ್ ಓಪನ್ ಆದ ಬಳಿಕ ಇಲ್ಲಿಗೆ ಬಂದಿದ್ದೇವೆ. ಜನರು ಯಾರೂ ಒಳ ಬಂದಿಲ್ಲ ನಾವು ಮಾತ್ರ ತೆರಳಿದ್ದು ಇಲಾಖೆ ಅಭಿವೃದ್ಧಿ ವಿಚಾರ ಚರ್ಚೆ ಮಾಡಲು ಬಂದಿದ್ದೇವೆ. ನಾವು ಯಾವ ನಿಯಮವನ್ನೂ ಉಲ್ಲಂಘನೆ ಮಾಡಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ಸಾವಿರಾರು ಕೋಟಿ ಬೇಕಾಗಿದೆ. ಅಂಜನಾದ್ರಿ ಬೆಟ್ಟವನ್ನು ಕೇವಲ ಪ್ರವಾಸೋದ್ಯಮಯೊಂದೇ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾಲ್ಕಾರು ಇಲಾಖೆ ಸಹಯೋಗದಲ್ಲಿ ನಾವು ಅಭಿವೃದ್ಧಿ ಮಾಡಬೇಕಿದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಬೇಕಾಗುತ್ತದೆ. ಇಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಈ ದೃಷ್ಟಿಯಿಂದ ನಾವು ಹಲವು ಸಚಿವರು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಅಂಜನಾದ್ರಿಯಲ್ಲಿಯೇ ಹನುಮಂತ ಜನಿಸಿದ್ದು ಎನ್ನುವುದಕ್ಕೆ ಇಲ್ಲಿ ಹಲವು ಸಾಕ್ಷಿ, ಪುರಾವೆಗಳಿವೆ. ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಸುಮ್ಮನೆ ಯಾರೋ ಹೇಳುತ್ತಾರೆ ಎಂದು ನಾವು ಸುಮ್ಮನಿರೋದಲ್ಲ. ಅಂಜನಾದ್ರಿಯಲ್ಲಿಯೇ ಹನುಮಂತ ಜನಿಸಿದ್ದು ಎನ್ನುವುದಕ್ಕೆ ಹಲವು ಸಾಕ್ಷ್ಯ ಇವೆ. ಸರ್ಕಾರದ ನಿಲುವೂ ಇದೇ ಆಗಿದೆ. ಅಂಜನಾದ್ರಿ ಮಾಸ್ಟರ್ ಪ್ಲ್ಯಾನ್ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ದವಿದೆ ಎಂದರು.

  • ಇಂದಿನಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ

    ಇಂದಿನಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಜೋಗ ಜಲಪಾತ ವೀಕ್ಷಣೆ ಪ್ರವಾಸಿಗರಿಗೆ ಅವಕಾಶ ಇರಲಿಲ್ಲ. ಎಲ್ಲಾ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ಇದೀಗ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಇಂದಿನಿಂದ ಮುಕ್ತ ಅವಕಾಶ ನೀಡಲಾಗಿದೆ.

    ಕೊರೊನಾ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಅನ್‍ಲಾಕ್ ಘೋಷಿಸಿದ್ದು, ಪ್ರವಾಸಿ ತಾಣಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಹೀಗಾಗಿಯೇ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಇಂದಿನಿಂದ ಅವಕಾಶ ಕಲ್ಪಿಸಿದ್ದು, ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಮಯಾವಕಾಶ ನಿಗದಿಪಡಿಸಲಾಗಿದೆ.

    ಈಗಾಗಲೇ ಪಶ್ಚಿಮ ಘಟ್ಟದಲ್ಲಿ ಮುಂಗಾರಿನ ಅಬ್ಬರ ಆರಂಭವಾಗಿದೆ. ಮಳೆ ಹೆಚ್ಚಿರುವ ಕಾರಣ ಶರಾವತಿ ಜೋಗದಲ್ಲಿ ಮೈದುಂಬಿಕೊಂಡು ರಾಜಾ, ರಾಣಿ, ರೋರರ್, ರಾಕೆಟ್ ಆಗಿ ಧುಮಕುವ ದೃಶ್ಯ ರಮಣೀಯವಾಗಿದೆ. ಈ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಾಗಲಿದೆ. ಕೊರೊನಾದಿಂದ ಮನೆಯಲ್ಲಿಯೇ ಲಾಕ್ ಆಗಿದ್ದವರಿಗೆ ಜೋಗದ ವೈಭೋಗ ವೀಕ್ಷಿಸಲು ಒಳ್ಳೆಯ ಅವಕಾಶ ಎನ್ನಬಹುದು. ಇದನ್ನೂ ಓದಿ: ಸರ್ವ ಋತು ಪ್ರವಾಸಿ ತಾಣವಾಗಲಿದೆ ಜೋಗ ಜಲಪಾತ’

    ಜೋಗ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗು ಸ್ಯಾನಿಟೈಸರ್ ಬಳಸುವ ಜೊತೆಗೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಿಯಮ ಪಾಲಿಸದಿದ್ದರೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

  • ತೆರೆದಿದ್ದ ನಂದಿಬೆಟ್ಟ ಕ್ಲೋಸ್

    ತೆರೆದಿದ್ದ ನಂದಿಬೆಟ್ಟ ಕ್ಲೋಸ್

    ಚಿಕ್ಕಬಳ್ಳಾಪುರ: ವೀಕೆಂಡ್ ಕರ್ಫ್ಯೂ  ನಡುವೆಯೂ ನಂದಿಗಿರಿಧಾಮಕ್ಕೆ ಬೆಳ್ಳಂ ಬೆಳಗ್ಗೆ ನೂರಾರು ಪ್ರವಾಸಿಗರ ಆಗಮನದ ವರದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಬೆನ್ನಲ್ಲೇ ಪೊಲೀಸರು ನಂದಿಗಿರಿಧಾಮ ಗೇಟ್ ಕ್ಲೋಸ್ ಮಾಡಿದ್ದಾರೆ.

    ಕಳೆದ ಸೋಮವಾರದಿಂದ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪ್ರವಾಸಿ ತಾಣಗಳನ್ನು ಅನ್‍ಲಾಕ್ ಮಾಡುವಂತೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡದಿದ್ದರೂ ಕೂಡ ಜಿಲ್ಲಾಡಳಿತ ನಂದಿಬೆಟ್ಟವನ್ನು ಅನ್‍ಲಾಕ್ ಮಾಡಿತ್ತು. ಸೋಮವಾರದಿಂದ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗುತ್ತಿದ್ದರು. ಅದೇ ರೀತಿ ಇಂದು ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಇದ್ದರೂ ಕೂಡ ಜನ ನಂದಿಬೆಟ್ಟಕ್ಕೆ ಬೆಳ್ಳಂ ಬೆಳಗ್ಗೆ ಬಂದಿದ್ದಾರೆ. ಇದನ್ನೂ ಓದಿ: ಸುಪಾರಿ ಕೊಟ್ಟು ಅಪ್ಪನನ್ನೇ ಕೊಲ್ಲಿಸಿದ ಪಾಪಿ ಮಗ

    ವೀಕೆಂಡ್ ಕರ್ಫ್ಯೂ ಇದ್ದರೂ ಕೂಡ ಕ್ಯಾರೇ ಎನ್ನದೆ ನಂದಿಗಿರಿಧಾಮಕ್ಕೆ ನೂರಾರು ಜನ ಆಗಮಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಬಂದಿದ್ದ ಪ್ರವಾಸಿಗರನ್ನು ವಾಪಸ್ ಕಳುಹಿಸಿ ಮುಖ್ಯ ಪ್ರವೇಶ ದ್ವಾರ ಬಂದ್ ಮಾಡಿದ್ದಾರೆ. ಹಾಗಾಗಿ ವೀಕೆಂಡ್‍ನಲ್ಲಿ ನಂದಿಬೆಟ್ಟಕ್ಕೆ ಎಂಟ್ರಿ ಆಗಲು ಬಂದ ಪ್ರವಾಸಿಗರು ಗೇಟ್ ನಿಂದಲೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆಗುತ್ತಿದ್ದಾರೆ.

  • ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಕಡ್ಡಾಯ

    ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಕಡ್ಡಾಯ

    ಚಿಕ್ಕಮಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 40 ಕೊರೊನಾ ಕೇಸ್‍ಗಳು ದಾಖಲಾಗಿವೆ. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಫಲಿತಾಂಶವನ್ನು ಕಡ್ಡಾಯಗೊಳಿಸಿದೆ.

    ಬೆಂಗಳೂರಿನಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ರಾಜಧಾನಿಯಿಂದ ಬರುವ ಜನರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯಮಾಡಿರುವ ಜಿಲ್ಲಾಡಳಿತ, ಪರೀಕ್ಷೆ ಮಾಡದೆ ಬಂದಿದ್ದರೆ ಅಂತವರು ತಾಲೂಕಿನ ಕೈಮರ ಚೆಕ್‍ಪೋಸ್ಟ್ ನಲ್ಲಿ ಪರೀಕ್ಷೆಗೆ ಒಳಪಟ್ಟು ಮುಂದೆ ಸಾಗಬೇಕಿದೆ. ಕೆಲ ಪ್ರವಾಸಿಗರು ಕೋವಿಡ್ ಟೆಸ್ಟ್ ಗೆ ಒಳಪಡಲು ಹಿಂದೇಟು ಹಾಕುತ್ತಿದ್ದು ಅವರನ್ನು ಅಧಿಕಾರಿಗಳು ವಾಪಸ್ ಕಳಿಸುತ್ತಿದ್ದಾರೆ.

    ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಆಗಿರುವುದರಿಂದ ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ನೂರಾರು ಪ್ರವಾಸಿಗರು ಬಂದಿದ್ದಾರೆ. ಅವರಲ್ಲಿ ಬಹುತೇಕರು ಕೋವಿಡ್ ಟೆಸ್ಟ್ ರಿಪೋರ್ಟ್ ತಂದಿಲ್ಲ. ಅವರನ್ನು ಸ್ಥಳದಲ್ಲೇ ಚೆಕ್ ಮಾಡಿ ಅಧಿಕಾರಿಗಳು ಗಿರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.

    ಶನಿವಾರ ಸುಮಾರು ಆರು ಜನರಿಗೆ ಹಾಗೂ ಭಾನುವಾರ ಇಬ್ಬರು ಪ್ರವಾಸಿಗರಿಗೆ ರ್ಯಾಪಿಡ್ ಟೆಸ್ಟ್ ವೇಳೆ ಪಾಸಿಟಿವ್ ಬಂದಿದ್ದು ಅವರನ್ನು ಪ್ರವಾಸಿ ತಾಣಕ್ಕೆ ತೆರಳಲು ಅವಕಾಶ ಕೊಡದೆ ವಾಪಸ್ ಕಳಿಸಿದ್ದಾರೆ. ಕೆಲ ಪ್ರವಾಸಿಗರು ಪರೀಕ್ಷೆಗೆ ಒಳಪಡದೆ ಆರೋಗ್ಯ ಸಿಬ್ಬಂದಿಗಳ ಜೊತೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಇಂದು ಕೂಡ 150ಕ್ಕೂ ಹೆಚ್ಚು ಕಾರುಗಳು ಜಿಲ್ಲೆಯ ಗಿರಿಭಾಗಕ್ಕೆ ಹೋಗಿವೆ. ಶನಿವಾರ ಹಾಗೂ ಭಾನುವಾರ ಎರಡು ದಿನವೂ ಕೈಮರ ಚೆಕ್‍ಪೋಸ್ಟ್ ನಲ್ಲಿ ಇರುವ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಪೊಲೀಸರು ಎಲ್ಲರನ್ನೂ ಪರೀಕ್ಷೆ ಮಾಡಿ ಗಿರಿ ಭಾಗಕ್ಕೆ ಕಳಿಸುತ್ತಿದ್ದಾರೆ. ಹೊರರಾಜ್ಯದ ಪ್ರವಾಸಿಗರು ಕೋವಿಡ್ ರಿಪೋರ್ಟ್ ಕಡ್ಡಾಯವಾಗಿದೆ. ರಿಪೋರ್ಟ್ ಇಲ್ಲದೆ ಬಂದವರಿಗೂ ಟೆಸ್ಟ್ ನಡೆಯುತ್ತಿದ್ದು ನೆಗಿಟಿವ್ ಬಂದರಷ್ಟೇ ಗಿರಿ ಭಾಗಕ್ಕೆ ಪ್ರವೇಶ ನೀಡಲಾಗುತ್ತಿದೆ. ಕೆಲ ಪಾಸಿಟಿವ್ ಬಂದ ಪ್ರವಾಸಿಗರು ಮತ್ತೆ..ಮತ್ತೆ, ಚೆಕ್ ಮಾಡುವಂತೆ ಆರೋಗ್ಯ ಸಿಬ್ಬಂದಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಆದರೆ, ಸ್ಥಳದಲ್ಲೇ ಇರುವ ಪೊಲೀಸರು ಪಾಸಿಟಿವ್ ಬಂದವರನ್ನು ವಾಪಸ್ ಕಳಿಸುವ ಕಾರ್ಯ ಮಾಡುತ್ತಿದ್ದಾರೆ.

  • ಕೊರೊನಾ ಭಯವೇ ಇಲ್ಲ – ಕೊಡಗಿನಲ್ಲಿ ಪ್ರವಾಸಿಗರಿಂದ ವೀಕೆಂಡ್ ಮಸ್ತಿ

    ಕೊರೊನಾ ಭಯವೇ ಇಲ್ಲ – ಕೊಡಗಿನಲ್ಲಿ ಪ್ರವಾಸಿಗರಿಂದ ವೀಕೆಂಡ್ ಮಸ್ತಿ

    ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಬರಬಹುದು ಎಂಬ ಆತಂಕ ಇದ್ದರೆ ಜನ ಮಾತ್ರ ಕೊರೊನಾ ಬಗ್ಗೆ ತಲೆಕಡೆಸಿಕೊಂಡಂತೆ ಕಾಣುತ್ತಿಲ್ಲ. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ವೀಕೆಂಡ್ ಬಂತೆಂದರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಜನ ಕೋವಿಡ್ ನಿಯಮಗಳನ್ನು ಸಂಪೂರ್ಣ ಮರೆತುಬಿಟ್ಟಿದ್ದಾರೆ. ಪ್ರಸಿದ್ಧ ಪ್ರವಾಸಿತಾಣ ದುಬಾರೆಯಲ್ಲಿ ಜನರು ಎಲ್ಲವನ್ನೂ ಸಂಪೂರ್ಣ ಮರೆತು ಮಾಸ್ಕ್ ಕೂಡ ಇಲ್ಲದೆ ಎಂಜಾಯ್ ಮಾಡುತ್ತಿದ್ದಾರೆ.

    ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಸಾವಿರಾರು ಪ್ರವಾಸಿಗರು ನೀರಿನಲ್ಲಿ ಇಳಿದು ರಜೆಯ ದಿನಗಳನ್ನು ಮಜಾ ಮಾಡುತ್ತಿದ್ದಾರೆ. ಪ್ರವಾಸಿ ಸ್ಥಳಗಳಲ್ಲಿ ಯಾರೋಬ್ಬರ ಮುಖದ ಮೇಲೂ ಮಾಸ್ಕ್ ಇಲ್ಲ, ಇದ್ದರೂ ಅದು ಕೇವಲ ಕುತ್ತಿಗೆ ಭಾಗಕ್ಕೆ ಹಾಕಿಕೊಂಡು ಓಡಾಡುತ್ತಿದ್ದಾರೆ. ಇನ್ನೂ ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಜೊತೆಗೆ ರ್ಯಾಫ್ಟಿಂಗ್ ಕೂಡ ನಡೆಯುತ್ತಿದ್ದು ಒಂದು ರ್ಯಾಫ್ಟ್ ಗೆ ಕನಿಷ್ಠ 12 ರಿಂದ 15 ಜನರು ಕುಳಿತು ನದಿಯಲ್ಲಿ ಸಂಚರಿಸುತ್ತಿದ್ದಾರೆ.

    ರ್ಯಾಫ್ಟ್ ನಲ್ಲಿ ಕುಳಿತುಕೊಳ್ಳುವಾಗ ಹಲವು ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರು ಒಟ್ಟೊಟ್ಟಿಗೆ ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳದೆ ಎಂಜಾಯ್ ಮಾಡುತ್ತಿದ್ದಾರೆ. ಇದು ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹರಡಲು ಮಾರ್ಗವಾಗಿ ಬಿಡುತ್ತಾ ಎನ್ನುವ ಅನುಮಾನ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ಫೆಬ್ರವರಿ ಆರಂಭದಲ್ಲಿ ಶೂನ್ಯಕ್ಕೆ ಇಳಿದಿದ್ದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಳೆದ ಒಂದು ವಾರದಿಂದ ನಿತ್ಯ ಏಳರಿಂದ ಎಂಟು ಪ್ರಕರಣಗಳು ದಾಖಲಾಗತ್ತಿದ್ದು ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

  • ಪ್ರವಾಸಿಗರ ಚೆಲ್ಲಾಟ ಪೊಲೀಸರಿಗೆ ಸಂಕಟ – ಕೊರೊನಾಗೆ ಡೋಂಟ್‍ಕೇರ್, ಬಿಂದಾಸ್ ಮಸ್ತಿ

    ಪ್ರವಾಸಿಗರ ಚೆಲ್ಲಾಟ ಪೊಲೀಸರಿಗೆ ಸಂಕಟ – ಕೊರೊನಾಗೆ ಡೋಂಟ್‍ಕೇರ್, ಬಿಂದಾಸ್ ಮಸ್ತಿ

    ಚಿಕ್ಕಬಳ್ಳಾಪುರ: ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ರಾಜಧಾನಿಗೆ ಹತ್ತಿರದಲ್ಲೇ ಇರುವ ಜಲಾಶಯವೊಂದು ಮೈಮನ ತಣಿಸುತ್ತಿದೆ. ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ಪ್ರವಾಸಿಗರು ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಕೊರೊನಾಗೆ ಅಧಿಕೃತವಾಗಿ ಇನ್ನೂ ಲಸಿಕೆ ಬಂದಿಲ್ಲ. ಆದರೆ ಜನ ಈಗಾಗಲೇ ಡೆಡ್ಲಿ ವೈರಸ್ ಅನ್ನು ಮರೆತಂತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ದ ಶ್ರೀನಿವಾಸಸಾಗರ ಜಲಾಶಯ. ಇಲ್ಲಿ ಪ್ರವಾಸಿಗರು ಬಿಂದಾಸ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಶ್ರೀನಿವಾಸ ಸಾಗರ ಜಲಾಶಯ ತುಂಬಿ ಕೋಡಿ ಹರಿಯುತ್ತಿದೆ. ಅದರಲ್ಲಿ 80 ಅಡಿ ಮೇಲಿಂದ ನೀರು ಬೀಳುವ ದೃಶ್ಯ ಮನಮೋಹಕವಾಗಿದ್ದು, ನೀರಿನ ವೈಯಾರ ನೋಡಲು ಜನಸಾಗರವೇ ಹರಿದು ಬರುತ್ತಿದೆ.

    ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಇದ್ದು ಇದ್ದು ಬೇಜಾರಾಗಿದ್ದ ಗೃಹಿಣಿಯರು, ತಾವೇನು ಕಡಿಮೆ ಅಂತ ತಮ್ಮ ಗಂಡಂದಿರರಿಗೆ ಸೆಡ್ಡು ಹೊಡೆದವರಂತೆ ಮಕ್ಕಳ ಸಮೇತ ಜಲಾಶಯ ಗೊಡೆ ಮೇಲೇರಿ ಧುಮ್ಮಿಕ್ಕುವ ನೀರಿನಲ್ಲಿ ಒದ್ದೆಯಾಗಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಇಲ್ಲಿನ ಸ್ಥಳೀಯ ಪೊಲೀಸರಿಗೆ ಪ್ರವಾಸಿಗರನ್ನು ನಿಭಾಯಿಸೋದೇ ದೊಡ್ಡ ಸವಾಲಾಗಿದೆ.

    ಒಟ್ಟಿನಲ್ಲಿ ಪೊಲೀಸರು ಎಷ್ಟೇ ಬುದ್ಧಿವಾದ ಹೇಳಿದರೂ ಪ್ರವಾಸಿಗರು ಕೇಳುವ ಪರಿಸ್ಥಿತಿಯಲ್ಲೇ ಇರಲ್ಲ. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.

  • ಯಾಕೆ ಹಾಕಬೇಕು ಮಾಸ್ಕ್? ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ಪ್ರಶ್ನೆ

    ಯಾಕೆ ಹಾಕಬೇಕು ಮಾಸ್ಕ್? ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ಪ್ರಶ್ನೆ

    ಮಡಿಕೇರಿ: ಕೋವಿಡ್ 19 ನಿಯಂತ್ರಣಕ್ಕೆ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಮಾಸ್ಕ್ ದರಿಸದೇ ಹೋದ್ರೆ 250 ರೂ. ದಂಡ ಕಟ್ಟಬೇಕು ಎಂದು ಕಟ್ಟುನಿಟ್ಟಾಗಿ ಸರ್ಕಾರ ಅದೇಶ ನೀಡಿದೆ. ಜನ ಮಾತ್ರ ಈ ಅದೇಶವನ್ನು ದಿಕ್ಕರಿಸಿ ಕೊರೊನಾ ವೈರಸ್ ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಪ್ರವಾಸಿತಾಣಗಳಲ್ಲಿ ಓಡಾಡಿಕೊಂಡಿದ್ದಾರೆ.

    ಇಂದು ಪ್ರವಾಸಿಗರ ಸಂಖ್ಯೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಮಡಿಕೇರಿ ನಗರದ ರಾಜಾಸೀಟ್ ಬಳಿ ಪ್ರವಾಸಿಗರು ಮಾಸ್ಕ್ ದರಿಸದೇ ಬರುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತಿದೆ. ಮಾಸ್ಕ್ ಯಾಕೆ ಹಾಕುವುದಿಲ್ಲ ಎಂದು ಪಬ್ಲಿಕ್ ಟಿವಿ ಕೇಳಿದ್ರೆ, ಕೆಲ ಪ್ರವಾಸಿಗರು ಮಾಸ್ಕ್ ಯಾಕೆ ಹಾಕಬೇಕು? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೊರೊನಾ ಬರುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

    ಇನ್ನು ಕೆಲವರು ಪಬ್ಲಿಕ್ ಟಿವಿ ಕ್ಯಾಮೆರಾ ಕಂಡು ಮಾಸ್ಕ್ ಹಾಕುವ ದೃಶ್ಯಗಳು ಕಂಡುಬರುತ್ತಿದೆ. ಅಲ್ಲದೇ ಹೊರ ರಾಜ್ಯದ ಹಾಗೂ ಜಿಲ್ಲೆಯಿಂದ ಅಗಮಿಸುತ್ತಿರುವ ಪ್ರವಾಸಿಗರಿಂದ ಮತ್ತೆ ಕೊಡಗಿನಲ್ಲಿ ಕೊರೊನಾ ಅರ್ಭಟ ಹೆಚ್ಚಾಗುವ ಸಾಧ್ಯತೆ ಇದೆ. ಕೊಡಗಿನ ಜನರು ಮಾಸ್ಕ್ ಹಾಕಿ ಮನೆಯಿಂದ ಹೊರಗೆ ಬರಲು ಭಯ ಪಡುವ ಪರಿಸ್ಥಿತಿ ಇರುವಾಗ ಪ್ರವಾಸಿಗರು ಮಾತ್ರ ಯಾವುದೇ ಅತಂಕ ಇಲ್ಲದೇ ಬರುತ್ತಿರುವುದರಿಂz ಜಿಲ್ಲೆಯ ಜನರು ಮತ್ತಷ್ಟು ಅತಂಕಕ್ಕೆ ಒಳಗಾಗಿದ್ದಾರೆ.