Tag: Tourist

  • ಕೊಡಗಿನಲ್ಲಿ ಮಳೆ ನಿಂತರೂ ನಿಲ್ಲದ ಅವಾಂತರ- ಮಾಂದಲಪಟ್ಟಿ 1 ತಿಂಗಳು ಬಂದ್

    ಕೊಡಗಿನಲ್ಲಿ ಮಳೆ ನಿಂತರೂ ನಿಲ್ಲದ ಅವಾಂತರ- ಮಾಂದಲಪಟ್ಟಿ 1 ತಿಂಗಳು ಬಂದ್

    ಮಡಿಕೇರಿ: ಕೊಡಗಿನಲ್ಲಿ ಘೋಷಿಸಿದ್ದ ರೆಡ್ ಅಲರ್ಟ್ ವಾಪಸ್ ಪಡೆಯಲಾಗಿದೆ. ಆದರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮಾಂದಲಪಟ್ಟಿಯನ್ನು 1 ತಿಂಗಳುಗಳ ಕಾಲ ಬಂದ್ ಮಾಡಲಾಗುತ್ತಿದ್ದು, ಪ್ರವಾಸಿಗರು ಇಲ್ಲಿ ತೆರೆಳದಂತೆ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಸೂಚಿಸಿದ್ದಾರೆ.

    ಮಳೆಯಿಂದಾಗಿ ಮಾಂದಲಪಟ್ಟಿ ರಸ್ತೆಯಲ್ಲಿ ಸರಣಿ ಮಣ್ಣು ಕುಸಿತ ಹಿನ್ನೆಲೆ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಹೊರಡಿಸಿದ್ದಾರೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮಾಂದಲಪಟ್ಟಿ ಬಂದ್ ಮಾಡಲಾಗುತ್ತಿದೆ. ತಾಂತ್ರಿಕ ಸಮಿತಿ ವರದಿ ಆಧರಿಸಿ ಆಗಸ್ಟ್ 31ರವರೆಗೆ ಮಾಂದಲಪಟ್ಟಿ ಬಂದ್ ಮಾಡಲಾಗುತ್ತದೆ ಎಂದು ಕೊಡಗು ಡಿಸಿ ಆದೇಶಿಸಿದ್ದಾರೆ.

    ಕಳೆದ ಬಾರಿ ಮಾಂದಲಪಟ್ಟಿ ರಸ್ತೆಯಲ್ಲಿ ಗುಡ್ಡ ಕುಸಿದಿತ್ತು. ಅದರಂತೆ ಈ ಬಾರಿ ಕೂಡ ಅದೇ ಸ್ಥಳಗಳಲ್ಲಿ ಗುಡ್ಡಗಳು ಕುಸಿಯುತ್ತಿವೆ. ಈ ಮಾರ್ಗದಲ್ಲಿ ಗುಡ್ಡ ಕುಸಿದು ಮಣ್ಣು ಬಿದ್ದು, ರಸ್ತೆ ಬಂದ್ ಆಗುವ ಸಾಧ್ಯತೆ ಕೂಡ ಹೆಚ್ಚಿದೆ. ಹೀಗಾಗಿ ಮಾಂದಲಪಟ್ಟಿ ತಾಣಕ್ಕೆ ಪ್ರವಾಸಿಗರು ತೆರಳದಂತೆ ಡಿಸಿ ಸೂಚನೆ ನೀಡಿದ್ದಾರೆ.

    ಕೊಡಗಿನಲ್ಲಿ ಮಳೆ ನಿಂತರೂ ಅದರಿಂದ ಆಗುತ್ತಿರುವ ಅವಾಂತರಗಳು ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ತುಂತುರು ಮಳೆಯಾದರೂ ಕೂಡ ಜನ ಆತಂಕ ಪಡುವ ಪರಿಸ್ಥತಿ ಇದೆ.

  • ರಂಗನತಿಟ್ಟಿನಲ್ಲಿ ಬೋಟಿಂಗ್ ಸ್ಥಗಿತ – ವೀಕೆಂಡ್ ಮೂಡಿನಲ್ಲಿದ್ದ ಪ್ರವಾಸಿಗರಿಗೆ ನಿರಾಸೆ

    ರಂಗನತಿಟ್ಟಿನಲ್ಲಿ ಬೋಟಿಂಗ್ ಸ್ಥಗಿತ – ವೀಕೆಂಡ್ ಮೂಡಿನಲ್ಲಿದ್ದ ಪ್ರವಾಸಿಗರಿಗೆ ನಿರಾಸೆ

    ಮಂಡ್ಯ: ಕೆಆರ್‍ಎಸ್ ಡ್ಯಾಮ್‍ನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದ್ದು, ವೀಕೆಂಡ್ ಎಂಜಾಯ್ ಮಾಡಲು ಪಕ್ಷಿಧಾಮಕ್ಕೆ ಬಂದ ಪ್ರವಾಸಿಗರಿಗೆ ನಿರಾಸೆಯಾಗಿದೆ.

    ಕೆಆರ್‍ಎಸ್ ಡ್ಯಾಮ್‍ನಿಂದ ಶನಿವಾರದಿಂದ ಸುಮಾರು ಏಳುವರೆ ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ನದಿ ನೀರಿನ ಸೆಳೆತ ಹೆಚ್ಚಾಗಿದೆ. ಹೀಗಾಗಿ ಬೋಟಿಂಗ್ ಮಾಡುವಾಗ ನೀರಿನ ಸೆಳೆತದಿಂದ ಪ್ರವಾಸಿಗರಿಗೆ ಅಪಾಯವಾಗಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರದಿಂದಲೇ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ.

    ನದಿಯಲ್ಲಿ ನೀರಿನ ಮಟ್ಟ ಕಡಿಮೆ ಆಗುವವರೆಗೂ ಬೋಟಿಂಗ್ ಸ್ಥಗಿತಗೊಳಿಸಲು ರಂಗನತಿಟ್ಟು ಪಕ್ಷಿಧಾಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.

  • ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಕಾಫಿನಾಡಿನ ಹೊನ್ನಮ್ಮನಹಳ್ಳ ಫಾಲ್ಸ್

    ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಕಾಫಿನಾಡಿನ ಹೊನ್ನಮ್ಮನಹಳ್ಳ ಫಾಲ್ಸ್

    ಚಿಕ್ಕಮಗಳೂರು: ಕಾಫಿನಾಡಿನ ಅರಣ್ಯದೊಳಗೆ ವರ್ಷಪೂರ್ತಿ ಮೈದುಂಬಿ ಹರಿಯುವ ಹೊನ್ನಮ್ಮನಹಳ್ಳ ಫಾಲ್ಸ್ ಈಗ ಪ್ರವಾಸಿಗರ ಫೆವರೆಟ್ ತಾಣವಾಗಿದ್ದು, ದಿನೇ ದಿನೇ ಈ ಜಲಪಾತದ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

    ಚಿಕ್ಕಮಗಳೂರಿನಲ್ಲಿರುವ ಹೊನ್ನಮ್ಮನಹಳ್ಳ ಫಾಲ್ಸ್ ಈಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿಗೆ ಆಗಮಿಸೋ ಪ್ರವಾಸಿಗರು ಇಲ್ಲಿಗೂ ತಪ್ಪದೇ ಭೇಟಿ ನೀಡುತ್ತಾರೆ. ಶೋಲಾ ಅರಣ್ಯದೊಳಗೆ ವರ್ಷದ 365 ದಿನವೂ ಮೈದುಂಬಿ ಹರಿಯುವ ಜಲಪಾತದಲ್ಲಿ ಪ್ರವಾಸಿಗರು ಆಟವಾಡಿ, ಫೋಟೋ ಶೂಟ್ ಮಾಡಿಸಿಕೊಂಡು ಮುಂದೆ ಖುಷಿಯಿಂದ ಮುಂದೆ ಸಾಗುತ್ತಾರೆ.

    ಚಿಕ್ಕಮಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿ ಹೊನ್ನಮ್ಮನಹಳ್ಳ ಜಲಪಾತವಿದೆ. ಪ್ರವಾಸಿಗರು ಚಿಕ್ಕಮಗಳೂರಿನಿಂದ ಕೈಮರಕ್ಕೆ ಹೋಗಿ ಅಲ್ಲಿಂದ ದತ್ತ ಪೀಠಕ್ಕೆ ಹೋಗುವ ಮಾರ್ಗದಲ್ಲಿ ಹೊನ್ನಮ್ಮನಹಳ್ಳ ಜಲಪಾತ ಸಿಗುತ್ತದೆ. ರಸ್ತೆ ಪಕ್ಕದಲ್ಲೇ ಈ ಜಲಪಾತ ಸಿಗುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

    ಪಶ್ಚಿಮ ಘಟ್ಟಗಳ ಸಾವಿರಾರು ಗಿಡಮೂಲಿಕೆಗಳ ನಡುವೆ ಹರಿದು ಬರುವ ಈ ನೀರಿನಲ್ಲಿ ಆರೋಗ್ಯಕಾರಿ ಶಕ್ತಿ ಇದೆ ಅನ್ನೋ ನಂಬಿಕೆ ಜನರಲ್ಲಿದೆ. ಹೀಗಾಗಿ ಪ್ರವಾಸಿಗರು ಈ ನೀರಲ್ಲಿ ಸ್ನಾನ ಮಾಡಿ, ನೀರನ್ನು ಬಾಟಲಿಗಳಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಾರೆ.

    ಹೊನ್ನಮ್ಮನಹಳ್ಳ ಫಾಲ್ಸ್ ಕೇವಲ ಕಣ್ಮನ ಸೆಳೆಯುವ ಸೌಂದರ್ಯವನ್ನು ಮಾತ್ರ ಹೊಂದಿರದೆ, ಜಲಪಾತದ ನೀರಿನಲ್ಲಿ ಪ್ರಾಕೃತಿಕ ಗಿಡಮೂಲಿಕೆಗಳ ಶಕ್ತಿ ಕೂಡ ತುಂಬಿವುರುವುದು ಪ್ರವಾಸಿಗರು ಇತ್ತ ಖುಷಿಯಿಂದ ಬರಲು ಪ್ರಮುಖ ಕಾರಣವಾಗಿದೆ. ಅದರಲ್ಲು ಮಳೆಗಾಲದಲ್ಲಿ ಜಲಪಾತ ಸೌಂದರ್ಯ ವರ್ಣಿಸಲು ಪದಗಳೆ ಸಾಲದು. ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಹೊನ್ನಮ್ಮನಹಳ್ಳ ಜಲಪಾತ ಸೌಂದರ್ಯಕ್ಕೆ ಮರುಳಾಗದವರೆ ಇಲ್ಲ ಎನ್ನಬಹುದು.

  • ಪ್ರವಾಸಿಗರಿಗೆ ಸಿಹಿ ಸುದ್ದಿ – ದುಬಾರೆಯಲ್ಲಿ ರಿವರ್ ರ‌್ಯಾಫ್ಟಿಂಗ್‍ಗೆ ಅವಕಾಶ

    ಪ್ರವಾಸಿಗರಿಗೆ ಸಿಹಿ ಸುದ್ದಿ – ದುಬಾರೆಯಲ್ಲಿ ರಿವರ್ ರ‌್ಯಾಫ್ಟಿಂಗ್‍ಗೆ ಅವಕಾಶ

    ಮಡಿಕೇರಿ: ಮಳೆಗಾಲ ಬಂದರೆ ಸಾಕು ಮನಸ್ಸು ಕೊಡಗಿನತ್ತ ಸೆಳೆಯುತ್ತದೆ. ಹೀಗೆ ದಕ್ಷಿಣದ ಕಾಶ್ಮೀರಕ್ಕೆ ಹೋಗ್ತಿರೋ ಪ್ರವಾಸಿಗರಿಗೆ ಜಿಲ್ಲಾಡಳಿತ ಸಿಹಿ ಸುದ್ದಿ ಕೊಟ್ಟಿದೆ.

    ಕೊಡಗು ಅಂದ್ರೇನೆ ಮಂಜಿನ ನಗರಿ, ಅದರಲ್ಲೂ ಜುಲೈ, ಆಗಸ್ಟ್ ತಿಂಗಳು ಅಂದರೆ ಕೊಡಗಿನಲ್ಲಿ ಚಳಿ ಜಾಸ್ತಿ ಇರುತ್ತದೆ. ಇಂತಹ ವಾತಾವರಣದಲ್ಲಿ ಅಬ್ಬಿಫಾಲ್ಸ್, ರಾಜಾಸೀಟ್ ಎಂದು ಸುತ್ತಾಡುತ್ತಿದ್ದರೆ ಅದರ ಮಜಾನೇ ಬೇರೆ. ಹೀಗೆ ವಿವಿಧ ಪ್ರವಾಸಿ ತಾಣಗಳಲ್ಲಿ ದುಬಾರೆ ಸಾಕಾನೆ ಶಿಬಿರ ಕೂಡ ಒಂದಾಗಿದ್ದು ಈಗ ಇಲ್ಲಿ ರ‌್ಯಾಫ್ಟಿಂಗ್‍ ಮಾಡಲು ಅವಕಾಶ ಸಿಕ್ಕಿದೆ.

    ಇನ್ಮುಂದೆ ದುಬಾರೆಗೆ ಬರುವ ಪ್ರವಾಸಿಗರಿಗೆ ಸಂತೋಷ ನೀಡಲು ರ‌್ಯಾಫ್ಟಿಂಗ್‍ ನಡೆಸಲು ಅವಕಾಶ ಸಿಕ್ಕಿದೆ. ವಿವಿಧ ಕಾರಣಗಳಿಗೆ ಬ್ಯಾನ್ ಆಗಿದ್ದ ರ‌್ಯಾಫ್ಟಿಂಗ್‍ ಗೆ ಕೊಡಗು ಜಿಲ್ಲಾಡಳಿತ ಮತ್ತೆ ಅವಕಾಶ ನೀಡಿದೆ. ಹೀಗಾಗಿ ದುಬಾರೆಗೆ ಬರುವ ಪ್ರವಾಸಿಗರು ಸಾಕಾನೆ ಶಿಬಿರದ ಜೊತೆಗೆ ಬೋಟ್ ಏರಿ, ನೀರಿನ ಮೇಲೆ ತೇಲುತ್ತಾ ಮಳೆ ಹನಿಗಳಲ್ಲಿ ರ‌್ಯಾಫ್ಟಿಂಗ್‍ ಮಾಡುವ ಮೂಲಕ ತಮ್ಮ ಸಂತಸದ ಕ್ಷಣಗಳನ್ನು ಇಮ್ಮಡಿಗೊಳಿಸಬಹುದು.

    ರ‌್ಯಾಫ್ಟಿಂಗ್‍ ಗೆ ಅವಕಾಶ ನೀಡುತ್ತಿರುವ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ. ರ‌್ಯಾಫ್ಟಿಂಗ್‍ ನಡೆಸುವವರು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ 7 ಕಿಲೋಮೀಟರ್ ರ‌್ಯಾಫ್ಟಿಂಗ್‍ ನಡೆಸಬೇಕು. ಒಂದು ತಂಡಕ್ಕೆ 600 ರೂಪಾಯಿ ಮಾತ್ರ ಶುಲ್ಕ ಪಡೆದುಕೊಳ್ಳಬೇಕು. ಎಲ್ಲೆಲ್ಲಿ ರ‌್ಯಾಫ್ಟಿಂಗ್‍ ಸಾಗಲಿದೆಯೋ ಆ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕಣ್ಗಾವಲು ಇರಿಸಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ಕೂಡ ನೀಡಿದೆ. ಅಲ್ಲದೆ ರ‌್ಯಾಫ್ಟಿಂಗ್‍ ನಡೆಸುವವರು ಅರಣ್ಯ ಇಲಾಖೆ, ಒಳನಾಡು ಮತ್ತು ಜಲಸಾರಿಗೆ, ಅಗ್ನಿ ಶಾಮಕ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಪಡೆದು ರ‌್ಯಾಫ್ಟಿಂಗ್‍ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದ್ದಾರೆ.

  • ಕಾರಿಗೆ ಸೈಡ್ ಕೊಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಪುಂಡರ ಗೂಂಡಾಗಿರಿ

    ಕಾರಿಗೆ ಸೈಡ್ ಕೊಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಪುಂಡರ ಗೂಂಡಾಗಿರಿ

    ಶಿವಮೊಗ್ಗ: ರಸ್ತೆಯಲ್ಲಿ ಬರುತ್ತಿದ್ದಾಗ ತಮ್ಮ ಕಾರಿಗೆ ಸೈಡ್ ಕೊಡದ ಖಾಸಗಿ ಬಸ್ಸೊಂದರ ಚಾಲಕ ಹಾಗೂ ನಿರ್ವಾಹಕನ ಮೇಲೆ ಕಾರಿನಲ್ಲಿದ್ದ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೆಬ್ರಿ ಬಳಿ ನಡೆದಿದೆ.

    ಶಿವಮೊಗ್ಗದಿಂದ- ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸಿನ ನಿರ್ವಾಹಕ ಗಣೇಶ್ ಶೆಟ್ಟಿ ಹಾಗೂ ಚಾಲಕನ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ಪರಿಣಾಮ ನಿರ್ವಾಹಕ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಸ್ ಆಗುಂಬೆ ಘಾಟಿಯಲ್ಲಿ ಬರುವಾಗ ಹಿಂದೆ ಬರುತ್ತಿದ್ದ ಕಾರಿನವರು ನಿರಂತರ ಹಾರ್ನ್ ಮಾಡಿದ್ದಾರೆ. ಈ ವೇಳೆ ತಿರುವುಗಳು ಇದ್ದ ಕಾರಣ ಚಾಲಕ ವಾಹನಕ್ಕೆ ಸೈಡ್ ಕೊಟ್ಟಿರಲಿಲ್ಲ. ಅಲ್ಲದೆ ಬಸ್ ಬಾಗಿಲ ಬಳಿ ಇದ್ದ ನಿರ್ವಾಹಕ ಕಾರಿನಲ್ಲಿ ಇದ್ದವರಿಗೆ `ಸ್ವಲ್ಪ ತಾಳಿ, ಹಾರ್ನ್ ಮಾಡಬೇಡಿ’ ಎಂದಿದ್ದಾರೆ.

    ಇಷ್ಟಕ್ಕೆ ಕಾರಿನಲ್ಲಿ ಇದ್ದವರು ಕೋಪಗೋಡಿದ್ದಾರೆ. ವಾಹನ ಸೋಮೇಶ್ವರ ದಾಟಿದ ನಂತರ ಕಾಡು ಪ್ರದೇಶದಲ್ಲಿ ಬಸ್ ಅಡ್ಡ ಗಟ್ಟಿ ನಿರ್ವಾಹಕನನ್ನು ಬಸ್ಸಿನಿಂದ ಹೊರಗೆಳೆದು ಅರೆಬೆತ್ತಲೆ ಮಾಡಿ ಥಳಿಸಿದ್ದಾರೆ. ಅಲ್ಲದೆ ಬಸ್ಸಿನ ಒಳಗಡೆ ಹಲ್ಲೇ ನಡೆಸಿದ್ದಾರೆ. ಈ ಪುಂಡರ ಆರ್ಭಟಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಸುಮ್ಮನೆ ಕುಳಿತ್ತಿದ್ದರು.

    ಈ ಪುಂಡರು ಬೇರೆ ಊರಿನಿಂದ ಈ ಭಾಗಕ್ಕೆ ಪ್ರವಾಸ ಬಂದವರು ಎನ್ನಲಾಗಿದ್ದು, ಹಲ್ಲೆಯ ದೃಶ್ಯಾವಳಿಗಳು ಬಸ್ಸಿನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೈಸೂರು ಝೂ ವಿಚಾರದಲ್ಲಿ ಸಿಹಿ-ಕಹಿ ಸುದ್ದಿ

    ಮೈಸೂರು ಝೂ ವಿಚಾರದಲ್ಲಿ ಸಿಹಿ-ಕಹಿ ಸುದ್ದಿ

    ಮೈಸೂರು: ವಿಶ್ವ ವಿಖ್ಯಾತ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ವಿಚಾರದಲ್ಲಿ ಒಂದು ಸಿಹಿ ಸುದ್ದಿ ಇನ್ನೊಂದು ಕಹಿ ಸುದ್ದಿ ಇದೆ.

    ಮೈಸೂರಿನ ಚಾಮರಾಜೇಂದ್ರ ಮೃಗಾಲಯವು ಮೈಸೂರಿಗೆ ಬರುವ ಪ್ರವಾಸಿಗರಲ್ಲಿ ಕಿರಿಯರಿಂದ ಹಿರಿಯರವರಗೆ ಹಾಟ್ ಫೇವರೆಟ್ ಪ್ಲೇಸ್ ಆಗಿದೆ. ಮೃಗಾಲಯಕ್ಕೆ ದೇಶ-ವಿದೇಶದಿಂದ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈಗ ಇಲ್ಲಿಗೆ ಬರುವ ಪ್ರವಾಸಿಗರ ಜೇಬಿಗೆ ಮೃಗಾಲಯ ಪ್ರಾಧಿಕಾರ ಬರೆ ಹಾಕಿದೆ.

    ಒಂದು ವರ್ಷದ ಅಂತರಕ್ಕೆ ಮೃಗಾಲಯದ ಪ್ರವೇಶ ದರ ಡಬಲ್ ಆಗಿದೆ. ಇದು ಮೃಗಾಲಯ ವಿಚಾರದ ಕಹಿ ಸುದ್ದಿ. ಮೃಗಾಲಯದ ಹೊಸ ದರ ಪಟ್ಟಿಯ ಪ್ರಕಾರ 20 ರಿಂದ 30 ರೂ. ಪ್ರವೇಶ ದರ ಹೆಚ್ಚಳವಾಗಿದೆ. ಮೃಗಾಲಯ ಅಧಿಕಾರಿಗಳು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದು, ಸಿಬ್ಬಂದಿ ಸಂಬಳ, ಮೃಗಾಲಯ ಮೆಂಟೆನೆನ್ಸ್ ಕಾಸ್ಟ್ ಹೆಚ್ಚಾಗಿದ್ದರಿಂದ ದರ ಹೆಚ್ಚಳ ಅನಿವಾರ್ಯ ಎನ್ನುತ್ತಿದ್ದಾರೆ.

    ಒಂದೆಡೆ ದರ ಹೆಚ್ಚಳ ಪ್ರವಾಸಿಗರಿಗೆ ಕಹಿ ಸುದ್ದಿ ಆದರೆ ಸಿಹಿ ಸುದ್ದಿ ಕೂಡ ಇದೆ. ಮೃಗಾಲಯಕ್ಕೆ ಹೊಸದಾಗಿ ಗುಜರಾತ್‍ನಿಂದ 5 ಸಿಂಹಗಳು ಬರುತ್ತಿದೆ. ಗುಜರಾತ್‍ನಿಂದ ಎರಡು ಗಂಡು ಮೂರು ಹೆಣ್ಣು ಸಿಂಹಗಳನ್ನು ತರಲಾಗುತ್ತಿದೆ. ಈಗಾಗಲೇ ಎಲ್ಲಾ ಪ್ರಕ್ರಿಯೆ ಮುಗಿದಿದೆ.

    ಪ್ರವೇಶ ದರ ಪಟ್ಟಿ:
    ಹಳೆ ದರ 60 ರೂ ಇದ್ದು, ಹೊಸ ದರ 80 ರೂ. ಆಗಿದೆ. 20 ರೂ. ಹೆಚ್ಚಳ ಆಗಿದೆ. ಮಕ್ಕಳಿಗೆ ಮೊದಲಿನ ದರ 30 ಇತ್ತು. ಆದರೆ ಈಗ 40 ರೂ. ಆಗಿದ್ದು, 10 ರೂ. ಹೆಚ್ಚಳ ಆಗಿದೆ. ವಾರಂತ್ಯದಲ್ಲಿ ವಯಸ್ಕರಿಗೆ ಹಳೆ ದರ 80 ಇದ್ದು, ಹೊಸ ದರ 100 ಆಗಿದೆ. ಒಟ್ಟು 20 ರೂ. ಹೆಚ್ಚಳ ಆಗಿದೆ. ವಾರಂತ್ಯದಲ್ಲಿ ಮಕ್ಕಳಿಗಾಗಿ ಮೊದಲು 40 ರೂ. ಇತ್ತು. ಆದರೆ ಈಗ 50 ರೂ. ಆಗಿದ್ದು, 10 ರೂ. ಹೆಚ್ಚಾಗಿದೆ.

    ಬ್ಯಾಟರಿ ಚಾಲಿತ ವಾಹನ ದರ ಪಟ್ಟಿ( ವಿಕೆಂಡ್)
    ಹಳೆ ದರ 150 ಇದ್ದು, ಈಗ 180 ರೂ. ಹೆಚ್ಚಾಗಿದೆ. ವಾರಂತ್ಯದಲ್ಲಿ ಒಟ್ಟು 30 ರೂ. ಹೆಚ್ಚಾಗಿದೆ. ಬ್ಯಾಟರಿ ಚಾಲಿತ ವಾಹನ ಮಕ್ಕಳಿಗೆ ಮೊದಲು 90 ರೂ ಇದ್ದು, ಈಗ 100 ರೂ. ಆಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ತಾಜ್ ಮಹಲ್‍ನಲ್ಲಿ 3 ಗಂಟೆಗೂ ಹೆಚ್ಚಿದ್ದರೆ ಬೀಳುತ್ತೆ ದಂಡ

    ತಾಜ್ ಮಹಲ್‍ನಲ್ಲಿ 3 ಗಂಟೆಗೂ ಹೆಚ್ಚಿದ್ದರೆ ಬೀಳುತ್ತೆ ದಂಡ

    ನವದೆಹಲಿ: ಭಾರತೀಯ ಮತ್ತು ವಿದೇಶಿ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾದ ಆಗ್ರಾದ ಐತಿಹಾಸಿಕ ಸುಂದರ ತಾಜ್ ಮಹಲ್ ವೀಕ್ಷಣೆಗೆ ಇನ್ನೂ ಮುಂದೆ 3 ಗಂಟೆ ಮಾತ್ರ ಸಮಯಾವಕಾಶ ನಿಗದಿ ಪಡಿಸಲಾಗಿದೆ.

    ಹೌದು. ಸುಂದರ ತಾಜ್ ಮಹಲ್ ನೋಡಲು ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಶ್ವೇತವರ್ಣದ ಮನಮೋಹಕ ಶಿಲ್ಪಕಲೆಗೆ ಮನಸೋಲದ ಮಂದಿಯೇ ಇಲ್ಲ. ಆದರೆ ತಾಜ್ ಮಹಲ್‍ನಲ್ಲಿ ಇನ್ನು ಮುಂದೆ ಪ್ರವಾಸಿಗರು 3 ಗಂಟೆಗಳಿಗಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿದೆ. ಆಡಳಿತ ಮಂಡಳಿ ನಿಗದಿಪಡಿಸಿರುವ ಸಮಯವನ್ನೂ ಮೀರಿ ಪ್ರವಾಸಿಗರು ಇಲ್ಲಿ ಹೆಚ್ಚು ಸಮಯ ಕಳೆದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

    ತಾಜ್ ಮಹಲ್‍ಗೆ ಪ್ರವಾಸಿಗರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ ಸಮಯ ಕಳೆದವರು, ನಿರ್ಗಮನದ ವೇಳೆ ಹೆಚ್ಚುವರಿ ಹಣ ಪಾವತಿಸಬೇಕು. ಕೆಲ ಪ್ರವಾಸಿಗರು ಮುಂಜಾನೆಯಿಂದ ಸಂಜೆಯವರೆಗೂ ತಾಜ್ ಆವರಣದಲ್ಲೇ ಕಾಲ ಕಳೆಯುತ್ತಿದ್ದರು. ಇದಕ್ಕೆ ಬ್ರೇಕ್ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ.

    ಪೂರ್ವ ಮತ್ತು ಪಶ್ಚಿಮದಲ್ಲಿ ಒಟ್ಟು 7 ಪ್ರವೇಶ ದ್ವಾರಗಳು ಹಾಗೂ 5 ನಿರ್ಗಮನ ದ್ವಾರಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದೇಶಿ ಪ್ರವಾಸಿಗರಿಗಾಗಿ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಹಾಗೆಯೇ ಪ್ರವಾಸಿಗರಿಗೆ ಪ್ರವೇಶದ ವೇಳೆ ಕೇವಲ ಮೂರು ಗಂಟೆಯವರೆಗೆ ಮಾತ್ರ ಸೀಮಿತವಿರುವ ಟೋಕನ್ ನೀಡಲಾಗುತ್ತದೆ. ಒಂದು ವೇಳೆ ಪ್ರವಾಸಿಗರು ಇಲ್ಲಿ ಹೆಚ್ಚು ಸಮಯ ಕಳೆಯಬೇಕಾದರೆ ನಿರ್ಗಮನ ಕೌಂಟರ್ ನಲ್ಲಿ ಹಣ ನೀಡಿ ಟೋಕನ್ ರಿಚಾರ್ಜ್ ಮಾಡಿಸಿಕೊಳ್ಳಬೇಕು ಎಂದು ಭಾರತದ ಪುರಾತತ್ವ ಇಲಾಖೆಯ ಅಧೀಕ್ಷಕ ಬಸಂತ್ ಕುಮಾರ್ ತಿಳಿಸಿದ್ದಾರೆ.

    ಈ ನಿಯಮದಿಂದ ಪ್ರವಾಸಿಗರಿಗೆ ಬೇಸರವಾಗಿದೆ. ತಾಜ್ ಮಹಲ್‍ನಲ್ಲಿ ಸುಂದರ ಕ್ಷಣಗಳನ್ನು ಕಳೆಯಲು ಪ್ರವಾಸಿಗರು ಬಂದಿರುತ್ತಾರೆ. ಆದರೆ ಅವರ ಖುಷಿಗೆ ಇಲ್ಲಿನ ಆಡಳಿತ ಮಂಡಳಿ ಅಡ್ಡಿಯಾಗುತ್ತಿದೆ. ಈ ನಿಯಮದಿಂದ ಇನ್ನು ಮುಂದೆ ತಾಜ್ ಮಹಲ್‍ಗೆ ಬರುವ ಮುನ್ನ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರವಾಸಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಹಾಗೆಯೇ ಈ ಬಗ್ಗೆ ವಿದೇಶಿ ಪ್ರವಾಸಿಗರೊಬ್ಬರು ಪ್ರತಿಕ್ರಿಯಿಸಿ, ತಾಜ್ ಮಹಲ್ ವೀಕ್ಷಣೆಗೆ ಬರುವ ವಿದೇಶಿಗರಿಗೆ ಇತರೇ ಪ್ರವಾಸಿಗರಿಗಿಂತ 10 ಪಟ್ಟು ಹೆಚ್ಚು ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ. ಇಲ್ಲಿ ಹೆಚ್ಚು ಸಮಯ ಕಳೆಯುವುದಕ್ಕೆ ಖುಷಿಯಾಗುತ್ತೆ, ಆದರೆ ಈಗ ವೀಕ್ಷಣೆ ಸಮಯವನ್ನು ಸೀಮಿತಗೊಳಿಸಿದ್ದಾರೆ ಎಂದಿದ್ದಾರೆ.

  • ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾದ ಚಿತ್ರದುರ್ಗ ಕೋಟೆ

    ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾದ ಚಿತ್ರದುರ್ಗ ಕೋಟೆ

    ಚಿತ್ರದುರ್ಗ: ಐತಿಹಾಸಿಕ ಪ್ರವಾಸಿ ತಾಣವಾದ ಚಿತ್ರದುರ್ಗದ ಕೋಟೆಯಲ್ಲಿ ಬಿದ್ದರೆ ಸೀದಾ ಶಿವನ ಪಾದ ಗ್ಯಾರಂಟಿ ಎಂಬಂತಾಗಿದೆ. ಜಗತ್ ಪ್ರಸಿದ್ಧ ಕೋಟೆ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಪ್ರವಾಸಿ ತಾಣವೀಗ ಮೃತ್ಯುಕೂಪವಾಗಿ ಮಾರ್ಪಟ್ಟಿದೆ.

    ಹೌದು. ಲಕ್ಷಾಂತರ ಜನ ಪ್ರವಾಸಿಗರು ಬರುವ ಪ್ರಸಿದ್ಧ ಪ್ರವಾಸಿ ತಾಣವಾದ ಚಿತ್ರದುರ್ಗ ಕೋಟೆಯಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರವಿಲ್ಲ. ಅಪಾಯಕಾರಿ ಸ್ಥಳಗಳಲ್ಲಿ ಸೂಚನಾ ಫಲಕವೂ ಇಲ್ಲ. ಹೀಗೆ ಪುರಾತತ್ವ ಇಲಾಖೆ ಪ್ರಸಿದ್ಧ ಚಿತ್ರದುರ್ಗ ಕೋಟೆಯಲ್ಲಿ ನಿರ್ಲಕ್ಷ ತೋರುತ್ತಿರುವುದು ಪ್ರವಾಸಿಗರ ಕೆಂಗಣ್ಣಿಗೆ ಕಾರಣವಾಗಿದೆ.

    ಏಳುಸುತ್ತಿನ ಕೋಟೆಯೊಳಗೆ ಬಂದವರು ವಾಪಾಸ್ ಹೋಗುವುದೇ ಅನುಮಾನವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಕೋಟೆಯಲ್ಲಿನ ಅಪಾಯಕಾರಿ ಸ್ಥಳಗಳಲ್ಲಿ ಮುಂಜಾಗ್ರತಾ ಸೂಚನ ಫಲಕವಿಲ್ಲ. ನೂರಾರು ಅಡಿ ಎತ್ತರದ ತುಪ್ಪದ ಕೊಳ, ಗೋಪಾಲಸ್ವಾಮಿ ಹೊಂಡದಲ್ಲಿ ಪ್ರವಾಸಿಗರ ಜೀವಕ್ಕೆ ರಕ್ಷಣೆಯಿಲ್ಲ. ಪುರಾತತ್ವ ಇಲಾಖೆ ಪ್ರವಾಸಿಗರ ಹಣ ಮಾತ್ರ ಬೇಕು, ರಕ್ಷಣೆ ಮಾತ್ರ ಬೇಡ ಅನ್ನುತ್ತಿದೆ ಎಂದು ಇಲಾಖೆಯ ನಿರ್ಲಕ್ಷ್ಯಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಏನಾದರೂ ಅವಘಡ ಸಂಭವಿಸಿದರೆ ಪ್ರಥಮ ಚಿಕಿತ್ಸೆ ನೀಡುವುದಕ್ಕೂ ಕೋಟೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಅಹಿತಕರ ಘಟನೆಗಳು ಆದರೆ ಕೋಟೆ ಪ್ರವಾಸಿಗರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯೇ ಆಸರೆ. ಹೀಗಾಗಿ ಪ್ರವಾಸಿಗರಲ್ಲಿ ಆತಂಕ ಹೆಚ್ಚಾಗಿದೆ.

  • ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ 4 ಜೀವ ಉಳಿಸಿದ ಲೈಫ್‍ಗಾರ್ಡ್ ಸಿಬ್ಬಂದಿ

    ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ 4 ಜೀವ ಉಳಿಸಿದ ಲೈಫ್‍ಗಾರ್ಡ್ ಸಿಬ್ಬಂದಿ

    ಕಾರವಾರ: ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಪ್ರವಾಸಿಗರನ್ನ ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್‍ನಲ್ಲಿ ಈ ಘಟನೆ ನಡೆದಿದ್ದು, ಹುಸೇನ್(14), ಸಹಝಾದ್(26), ಅಬ್ದುಲ್ಲಾ(20), ಬೇಪರಿ(42) ಪ್ರವಾಸಿಗರನ್ನು ಓಂ ಬೀಚ್ ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಳಗಾವಿ ಮೂಲದ ಒಂದೇ ಕುಟುಂಬದ ಈ ನಾಲ್ವರು ನೀರುಪಾಲಾಗುತ್ತಿದ್ದದ್ದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ನೀರಿಗೆ ಹಾರಿ ಅವರನ್ನು ರಕ್ಷಿಸಿ, ಜೀವವನ್ನು ಉಳಿಸಿದ್ದಾನೆ.

    ಈ ನಾಲ್ವರು ಬೀಚ್‍ನಲ್ಲಿ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾಲಕ ಹುಸೇನ್ ಮೊದಲು ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದಾನೆ. ಬಳಿಕ ಆತನನ್ನು ರಕ್ಷಿಸಲು ತೆರಳಿದ್ದ ಮೂವರೂ ಕೂಡ ಅಲೆಗಳ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಲೈಫ್‍ಗಾರ್ಡ್ ಸಿಬ್ಬಂದಿ ಸಮುದ್ರಕ್ಕೆ ಹಾರಿ ಅವರನ್ನು ರಕ್ಷಿಸಿ, 4 ಜೀವಕ್ಕೆ ಪುನರ್ಜನ್ಮ ನೀಡಿದ್ದಾರೆ.

    ತನ್ನ ಜೀವವನ್ನು ಪಣಕ್ಕಿಟ್ಟು ಪ್ರವಾಸಿಗರ ಜೀವವನ್ನು ಉಳಿಸಿದ ಸಿಬ್ಬಂದಿಯ ಶೌರ್ಯ ಎಲ್ಲರ ಮನ ಗೆದ್ದಿದೆ.

  • ವೋಟ್ ಹಾಕದೇ ಟ್ರಿಪ್ ಬಂದೋರ್ಗೆ ಮಾಡಿದ್ರು ವ್ಯಂಗ್ಯ ಸನ್ಮಾನ!

    ವೋಟ್ ಹಾಕದೇ ಟ್ರಿಪ್ ಬಂದೋರ್ಗೆ ಮಾಡಿದ್ರು ವ್ಯಂಗ್ಯ ಸನ್ಮಾನ!

    ಚಿಕ್ಕಮಗಳೂರು: ರಣಬಿಸಿಲ ಮಧ್ಯೆಯೂ ದೇಶಾದ್ಯಂತ ಚುನಾವಣ ಕಾವು ಜೋರಾಗಿಯೇ ಇದೆ. ಆದ್ರೆ, ಚುನಾವಣೆ ಅನ್ನೋದು ಗೊತ್ತಿಲ್ಲದೆ ರಜೆ ಸಿಕ್ಕಿದೆ ಎಂದು ಪ್ರವಾಸಕ್ಕೆ ಬಂದವರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವ್ಯಂಗ್ಯ ಸನ್ಮಾನ ಮಾಡಿ ಮತದಾನದ ಅರಿವು ಮೂಡಿಸಿದ್ದಾರೆ.

    ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಚಿಕ್ಕಮಗಳೂರಿಗೆ ಬರುತ್ತಿರೋ ಪ್ರವಾಸಿಗರ ವಾಹನಗಳನ್ನ ಮಾಗಡಿ ಹ್ಯಾಂಡ್‍ಪೋಸ್ಟ್ ಬಳಿ ಅಡ್ಡಗಟ್ಟಿ ಸುಮಾರು 800-1000 ಜನರನ್ನ ಮತದಾನ ಮಾಡಿರೋ ಬಗ್ಗೆ ಕೈ ಬೆರಳು ನೋಡಿದಾಗ ಬಹುತೇಕರು ಮತದಾನವನ್ನೇ ಮಾಡಿಲ್ಲ. ಎಷ್ಟೋ ಜನಕ್ಕೆ ಇಂದು ಮತದಾನ ಅನ್ನೋದೇ ಗೊತ್ತಿಲ್ಲ. ಹೀಗೆ ಪ್ರವಾಸಕ್ಕೆ ಬಂದವರಲ್ಲಿ ವಿದ್ಯಾವಂತರು ಹಾಗೂ ಐಟಿ-ಬಿಟಿಯ ಇಂಜಿನಿಯರ್ ಗಳೇ ಹೆಚ್ಚಿದ್ದರು. ಹೀಗಾಗಿ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವ್ಯಂಗ್ಯ ಸನ್ಮಾನ ಮಾಡಿ ಮತದಾನ ಜಾಗೃತಿ ಮೂಡಿಸಿದ್ದಾರೆ.

    ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್ ಎಂದು ಸರ್ಕಾರದ ಎಲ್ಲಾ ಸೌಲಭ್ಯ ಪಡೆದುಕೊಳ್ಳೋ ಯುವಜನತೆ ಮತದಾನಕ್ಕೆ ಮಾತ್ರ ಹಿಂದೇಟು ಹಾಕಿ ಮೋಜು-ಮಸ್ತಿಗಾಗಿ ಊರೂರು ಸುತ್ತುತ್ತಿದ್ದಾರೆ. ಸೌಲಭ್ಯ ಮಾತ್ರ ಬೇಕು ಅನ್ನೋ ಪ್ರವಾಸಿಗರಿಗೆ ನಡುರಸ್ತೆಯಲ್ಲಿ ಎಲ್ಲಾ ರೀತಿಯ ಕಾರ್ಡ್ ಗಳ ಜೆರಾಕ್ಸ್ ಪ್ರತಿಗಳ ಹಾರ ಹಾಕಿ, ಶಾಲು ಹೊದಿಸಿ ವ್ಯಂಗ್ಯ ಸನ್ಮಾನ ಮಾಡುವ ಮೂಲಕ ಮತದಾನದ ಬಗ್ಗೆ ಅರಿವು ಹಾಗೂ ಅದರ ಮಹತ್ವವನ್ನು ತಿಳಿಸಲಾಗಿದೆ.