Tag: tourist places

  • ಕಾರವಾರದ ಕಡಲತೀರದಲ್ಲಿ ಅಪ್ರಾಪ್ತ ಪ್ರೇಮಿಗಳ ಕಾಮಕೇಳಿ ಆಟ- ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

    ಕಾರವಾರದ ಕಡಲತೀರದಲ್ಲಿ ಅಪ್ರಾಪ್ತ ಪ್ರೇಮಿಗಳ ಕಾಮಕೇಳಿ ಆಟ- ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

    ಕಾರವಾರ: ಮೈಸೂರು ಅತ್ಯಾಚಾರ ಪ್ರಕರಣ ನಡೆದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಪ್ರವಾಸಿಗರು ಹೆಚ್ಚಾಗಿ ಬರುವ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲು ಆದೇಶ ಮಾಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಆದೇಶಕ್ಕೆ ಕಿಮ್ಮತ್ತಿಲ್ಲದಂತಾಗಿದ್ದು, ಪ್ರವಾಸಿ ಸ್ಥಳವೀಗ ಅಪ್ರಾಪ್ತರ ಅಶ್ಲೀಲದಾಟಕ್ಕೆ ತಾಣವಾಗುತ್ತಿದೆ.

    ಜಿಲ್ಲೆಯ ಕಾರವಾರದಲ್ಲಿ ಯಾರ ಭಯವೂ ಇಲ್ಲದೇ ಗಾಂಧಿ ಪಾರ್ಕ್, ಮಕ್ಕಳ ಉದ್ಯಾನವನ, ಕಡಲತೀರ ಭಾಗದ ಪ್ರದೇಶದಲ್ಲಿ ಮಳೆಯ ನಡುವೆಯೂ ಅಪ್ರಾಪ್ತ ಜೋಡಿಗಳು ಕಾಮಕೇಳಿ ಆಟದಲ್ಲಿ ತೊಡಗುತ್ತಿವೆ. ಕಾಲೇಜು, ಶಾಲೆಗೆ ಹೋಗುವ ವಿದ್ಯಾರ್ಥಿಗಳೇ ಬೆಳಗಿನಿಂದ ಸಂಜೆ ವರೆಗೆ ಅಶ್ಲೀಲವಾಗಿ ನಡೆದುಕೊಳ್ಳುತಿದ್ದು, ಯಾರ ಭಯವಿಲ್ಲದೇ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಇದರಲ್ಲಿ 18 ವರ್ಷ ಸಹ ಆಗದ ಅಪ್ರಾಪ್ತರೇ ಹೆಚ್ಚಿದ್ದಾರೆ.

    ರವೀಂದ್ರನಾಥ ಕಡಲತೀರ, ಗಾಂಧಿ ಪಾರ್ಕ್, ಮಕ್ಕಳ ಉದ್ಯಾನವನ, ರಾಕ್ ಗಾರ್ಡನ್ ಹಿಂಭಾಗ, ದಿವೇಕರ್ ಕಾಲೇಜು ಹಿಂಭಾಗದ ಸ್ಥಳ ಕಾಲೇಜು ವಿದ್ಯಾರ್ಥಿಗಳ ಕಾಮಕೇಳಿ ಆಟದ ಹಾಟ್ ಸ್ಪಾಟ್ ಆಗಿವೆ. ದೂರದಲ್ಲಿ ಜನ ಬಂದರೆ ಕೆಲವರು ಅಡಗಿ ಕುಳಿತರೆ, ಇನ್ನೂ ಕೆಲವರು ಭಯವಿಲ್ಲದೇ ತಮ್ಮ ಆಟದಲ್ಲಿ ಮಗ್ನರಾಗಿರುತ್ತಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಜಿಲ್ಲೆಯ ಗೋಕರ್ಣ, ಕುಮಟಾ, ಹೊನ್ನಾವರ ಕಡಲತೀರದಲ್ಲೂ ಸಹ ಇದೇ ದೃಶ್ಯಗಳು ಕಂಡುಬರುತ್ತವೆ. ಅಲ್ಲದೆ ಈ ಸ್ಥಳಗಳು ಮದ್ಯ ಸೇವಿಸುವವರ, ಗಾಂಜಾ ಹೊಡೆಯುವವರ ಅಡ್ಡ ಸಹ ಆಗಿವೆ. ಈ ಭಾಗಗಳಲ್ಲಿ ಸಿಸಿಟಿವಿಯಾಗಲಿ ಪೊಲೀಸರಾಗಲಿ ಇಲ್ಲದಿರುವುದು ಕೆಟ್ಟ ಕೆಲಸ ಮಾಡುವವರಿಗೆ ರತ್ನಗಂಬಳಿ ಹಾಕಿದಂತಾಗಿದೆ.

    ಕೈ ಚಲ್ಲುವ ಪೊಲೀಸರು
    ಜಿಲ್ಲಾಡಳಿತದಿಂದ ಕಡಲತೀರದ ಆಯಾಕಟ್ಟು ಪ್ರದೇಶದಲ್ಲಿ ಪ್ರವಾಸಿ ಮಿತ್ರ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸಾಲದು ಎಂಬಂತೆ ಶರಾವತಿ ಕಾರ್ಯಪಡೆ ಸಹ ಅಸ್ತಿತ್ವದಲ್ಲಿದೆ. ಆದರೆ ಇದು ನೆಪಕ್ಕೆ ಮಾತ್ರ ಎನ್ನುವಂತಾಗಿದೆ. ಜಿಲ್ಲೆಯ ಮುರಡೇಶ್ವರ, ಗೋಕರ್ಣ ಹೊರತುಪಡಿಸಿ ಉಳಿದ ಭಾಗದಲ್ಲಿ ನಿಯೋಜನೆಗೊಂಡ ಸಿಬ್ಬಂದಿ ಕಾರ್ಯ ಶೂನ್ಯವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ತೋರಿಕೆಗೆ ಪ್ರವಾಸಿ ಸ್ಥಳಗಳಲ್ಲಿ ಪೊಲೀಸರು ರೌಂಡ್ ಹೊಡೆದಿದ್ದಾರೆ. ಇದನ್ನೂ ಓದಿ: ಒಂದೇ ಗ್ರಾಮದ 51 ಜನರಿಗೆ ಕೊರೊನಾ ಪಾಸಿಟಿವ್- ಗ್ರಾಮಸ್ಥರಲ್ಲಿ ಆತಂಕ

    ಇದೀಗ ಜಿಲ್ಲೆಯ ಹಲವು ಪ್ರವಾಸಿ ಸ್ಥಳಗಳಲ್ಲಿ ಪ್ರೇಮಿಗಳ ಏಕಾಂತದಾಟ ಮುಂದುವರಿದಿದೆ. ಅಪ್ರಾಪ್ತರೇ ಹೆಚ್ಚಾಗಿ ಇರುವುದರಿಂದ ಕಾನೂನಿನಲ್ಲಿ ಶಿಕ್ಷಿಸುವ ಅವಕಾಶ ಇದೆ. ಬುದ್ಧಿ ಹೇಳಿ ಕಳುಹಿಸುವ ಕಾರ್ಯವನ್ನಾದರೂ ಮಾಡಬಹುದು. ಆದರೆ ಇದ್ಯಾವುದನ್ನೂ ನಿಯೋಜಿತ ಸಿಬ್ಬಂದಿ ಮಾಡುತ್ತಿಲ್ಲ.

    ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೇಳುವುದೇನು?
    ಮೈಸೂರಿನ ಅತ್ಯಾಚಾರ ಪ್ರಕರಣದ ನಂತರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿ ಕಾಲೇಜುಗಳಲ್ಲಿ ಹೆಣ್ಣುಮಕ್ಕಳ, ಪೋಷಕರ ಮೊಬೈಲ್ ನಂಬರ್ ಪಡೆಯಲಾಗಿದೆ. ಹೈವೇ ಪ್ಯಾಟ್ರೋಲಿಂಗ್ ಸಿಬ್ಬಂದಿ ಸಹ ಅನುಮಾನ ಬಂದವರನ್ನು ತಡೆದು ಪ್ರಶ್ನಿಸುತ್ತಾರೆ. ಶರಾವತಿ ಕಾರ್ಯಪಡೆ ಸಹ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತಿದ್ದು, ಜನರು ಹೆಚ್ಚು ತೆರಳದ ಪ್ರವಾಸಿ ಸ್ಥಳದ ಕಡೆ ಪೊಲೀಸರು ಬೀಟ್ ಮಾಡುತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಮಾಹಿತಿ ನೀಡಿದ್ದಾರೆ.

  • ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

    ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ, ಭೂಕುಸಿತ. ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಬೆಟ್ಟಗುಡ್ಡಗಳಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡಬಾರದು ಬೆಟ್ಟಗುಡ್ಡಗಳಲ್ಲಿ ರೆಸಾರ್ಟ್, ಕಟ್ಟಡ ಕಾಮಗಾರಿ ಮಾಡಬಾರದು ಎಂದು ಸರ್ಕಾರಕ್ಕೆ ವರದಿ ನೀಡಿದೆ. ಹೀಗಿದ್ದರೂ ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ಬೆಟ್ಟಗಳನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ ಮಾಡಲು ಮುಂದಾಗಿದ್ದು, ಬೆಟ್ಟದ ಕೆಳಗೆ ವಾಸ ಮಾಡುವ ಜನರಿಗೆ ಇದೀಗ ಅತಂಕ ಶುರುವಾಗಿದೆ.

    ಮಳೆಗಾಲ ಆರಂಭವಾಯಿತು ಅಂದ್ರೆ ಕೊಡಗಿನ ಜನರಿಗೆ ಅತಂಕ ಶುರುವಾಗುತ್ತದೆ. ಕಳೆದ ಮೂರು ವರ್ಷದಿಂದ ಅರಂಭವಾಗಿರುವ ಜಲಪ್ರಳಯ ಭೂಕುಸಿತ ಇಲ್ಲಿಯ ಜನರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಗಜಗಿರಿ ಬೆಟ್ಟ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಅರ್ಚಕರಾದ ನಾರಾಯಣ್ ಅಚಾರ್ ಕುಟುಂಬವೇ ಭೂ ಸಮಾಧಿಯಾಗಿದ್ದನ್ನು ಯಾರೂ ಮರೆತ್ತಿಲ್ಲ. ಹೀಗಿದ್ದರೂ ಮಂಗಳೂರು ರಸ್ತೆಗೆ ಹೊಂದಿಕೊಂಡಿರುವ ರಾಜಸೀಟ್ ವ್ಯೂವ್ ಪಾಯಿಂಟ್ ಮಾಡಲು ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಟ್ಟ ಕೊರೆಯುವ ಕಾಮಗಾರಿಯನ್ನು ತೋಟಗಾರಿಕೆ ಇಲಾಖೆ ಅರಂಭ ಮಾಡಿದೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಮುಂದುವರಿದ ಮಳೆ- ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ

    ನಾಲ್ಕು ಹಂತವಾಗಿ ಬೆಟ್ಟವನ್ನೇ ಕತ್ತರಿಸಿ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ಇದರಿಂದಾಗಿ ಬೆಟ್ಟದ ಕೆಳಗೆ ವಾಸಮಾಡುತ್ತಿರುವ ಹತ್ತಾರು ಕುಟುಂಬ ಭಯದಲ್ಲಿ ದಿನ ಕಳೆಯುತ್ತಿದೆ. ಬೆಟ್ಟ ಕುಸಿದು ಬಿದ್ದರೆ ಅಪಾಯ ಅಗುವ ಸಾಧ್ಯತೆ ಹೆಚ್ಚಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದ್ದು, ಮಡಿಕೇರಿ ನಗರದಲ್ಲಿ ಒಂದು ರಸ್ತೆ ಕೂಡ ನಡೆದಾಡಲು ಸಮರ್ಪಕವಾಗಿಲ್ಲ. ಆದರೆ ರಾಜಾಸೀಟ್ ಗುಡ್ಡದಲ್ಲಿ ಕಾಂಕ್ರಿಟ್ ರಸ್ತೆ, ಮೆಟ್ಟಿಲು, ವ್ಯೂವ್ ಪಾಯಿಂಟ್, ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳೆವಣಿಗೆಯಾಗಿದ್ದು, ಕಾಂಕ್ರಿಟ್ ಕಾಡಿನ ಮೂಲಕ ರಭಸವಾಗಿ ಹರಿಯುವ ನೀರು ಗುಡ್ಡ ಕುಸಿಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಿದೆ. ಇದನ್ನೂ ಓದಿ: ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ

    ಬೆಟ್ಟ, ಗುಡ್ಡಗಳಲ್ಲಿ ಮರ, ಗಿಡ, ಹುಲ್ಲಿದ್ದರೆ ಮಳೆಯ ನೀರಿನಿಂದ ಅಪಾಯ ಸಂಭವಿಸುವುದಿಲ್ಲ. ಆದರೆ ಅಗೆದು ಸಮತೋಲನವನ್ನು ಹದಗೆಡಿಸಿದರೆ ಕುಸಿಯುವ ಭೀತಿ ಹೆಚ್ಚಾಗಿದೆ. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಪ್ರಕೃತಿ ವರವಾಗಿ ನೀಡಿರುವ ಪ್ರವಾಸಿತಾಣಗಳನ್ನು ಕುರೂಪಗೊಳಿಸುತ್ತಿರುವುದನ್ನು ಜಿಲ್ಲಾಡಳಿತ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿಯು ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತು ಸ್ಥಳೀಯ ಸಾರ್ವಜನಿಕರು ಎಚ್ಚರಿಕೆ ನೀಡಿದ್ದು, ಕಾಮಗಾರಿ ವಿರುದ್ಧ ನ್ಯಾಯಾಲಯದ ಮೋರೆ ಹೋಗುವುದಾಗಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಮೂರು ವರ್ಷದಿಂದ ಅಗುತ್ತಿರುವ ಅನಾಹುತಗಳ ಬಗ್ಗೆ ಜಿಲ್ಲಾಡಳಿತಕ್ಕೆ ಅರಿವು ಇದ್ದರೂ ಕೂಡ ಮತ್ತೆ ಬೆಟ್ಟ ಕೊರೆದು ಕಾಮಗಾರಿ ಮಾಡುತ್ತಿದೆ. ಒಂದು ವೇಳೆ ಬೆಟ್ಟ ಕುಸಿದು ದುರಂತ ಸಂಭವಿಸಿದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ನೇರ ಹೊಣೆ ಹೋರಬೇಕು ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

  • ಪ್ರವಾಸಿಗರಿಂದ ಕೊಡಗು ಜನತೆಗೆ ಕೊರೊನಾ ಸಂಕಷ್ಟ- 15 ದಿನ ಲಾಕ್‍ಡೌನ್ ಮಾಡುವಂತೆ ವ್ಯಾಪಾರಿ ಆಗ್ರಹ

    ಪ್ರವಾಸಿಗರಿಂದ ಕೊಡಗು ಜನತೆಗೆ ಕೊರೊನಾ ಸಂಕಷ್ಟ- 15 ದಿನ ಲಾಕ್‍ಡೌನ್ ಮಾಡುವಂತೆ ವ್ಯಾಪಾರಿ ಆಗ್ರಹ

    – ದಿನೇ ದಿನೇ ಹೆಚ್ಚುತ್ತಿವೆ ಕೊರೊನಾ ಪ್ರಕರಣಗಳು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿ ದಿನ ಕೇವಲ ಎರಡು, ಮೂರು ದಾಖಲಾಗುತ್ತಿದ್ದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇದೀಗ ನಿತ್ಯ 20 ರಿಂದ 25ಕ್ಕೆ ಹೆಚ್ಚಳವಾಗಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 39 ಪ್ರಕರಣಗಳು ದಾಖಲಾಗಿವೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಜನತೆ ಒತ್ತಾಯಿಸುತ್ತಿದ್ದಾರೆ.

    ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಎಲ್ಲ ಪ್ರವಾಸಿ ತಾಣಗಳನ್ನು ಏ.20ರ ವರೆಗೆ ಬಂದ್ ಮಾಡಿ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಏಪ್ರಿಲ್ 3ರಂದು ಆದೇಶ ಹೊರಡಿಸಿದ್ದರು. ಆದರೆ ಕೊಡಗಿನ ಹೋಮ್ ಸ್ಟೇ ಮಾಲೀಕರ ಸಂಘ, ಹೊಟೇಲ್ ಹಾಗೂ ರೆಸಾರ್ಟ್ ಮಾಲೀಕರ ಸಂಘ ಸಚಿವರಿಗೆ ಒತ್ತಡ ತಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಮಾಡಿ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯುವಂತೆ ಮಾಡಿದೆ. ಹೀಗಾಗಿಯೇ ಏಪ್ರಿಲ್ 9 ರಿಂದ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಮುಕ್ತ ಮಾಡಲಾಗಿದೆ.

    ಪ್ರವಾಸಿ ತಾಣಗಳು ಮತ್ತೆ ಓಪನ್ ಆಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿಲ್ಲ. ಆದರೆ ಬರುವ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಎಷ್ಟೋ ಪ್ರವಾಸಿಗರು ಮಾಸ್ಕ್ ಧರಿಸಿರುವುದಿಲ್ಲ. ಮತ್ತೆಷ್ಟೋ ಪ್ರವಾಸಿಗರು ನಾಮಕಾವಸ್ಥೆಗೆ ಮಾಸ್ಕ್ ಧರಿಸಿರುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕವಿದೆ. ಹೀಗಾಗಿ ಜಿಲ್ಲಾಧಿಕಾರಿ ಯಾರ ಒತ್ತಾಯಕ್ಕೂ ಮಣಿಯದೆ ಜಿಲ್ಲೆಯ ಪ್ರವಾಸಿತಾಣಗಳನ್ನು ಬಂದ್ ಮಾಡಿ ಪ್ರವಾಸಿಗರು ಬರದಂತೆ ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಕೊಡಗಿನಲ್ಲಿರುವ ಐದೂವರೆ, ಆರು ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಬೆಂಗಳೂರಿನಷ್ಟೇ ಇದೆ. ಹೀಗಾಗಿ ಸದ್ಯಕ್ಕೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಾನೂ ಕೂಡ ವ್ಯಾಪಾರಿಯೇ ಆಗಿದ್ದು, ನಾನೂ ಪ್ರವಾಸಿಗರನ್ನೇ ನಂಬಿಕೊಂಡಿದ್ದೇನೆ. ಆದರೆ ನಾವು ಜೀವಂತವಾಗಿದ್ದರೆ, ಮುಂದೆ ಕೆಲಸ ಮಾಡಬಹುದು, ಸಂಪಾದಿಸಬಹುದು. ದುಡಿಮೆಗಿಂತ ಜೀವ ಮುಖ್ಯ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ 10 ರಿಂದ ಹದಿನೈದು ದಿನಗಳ ಕಾಲ ಲಾಕ್‍ಡೌನ್ ಮಾಡಿದರೂ ತಪ್ಪಿಲ್ಲ ಎಂದು ವ್ಯಾಪಾರಿ ಮಧು ಆತಂಕ ವ್ಯಕ್ತಪಡಿಸಿದ್ದಾರೆ.

  • ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ

    ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ

    ಚಿಕ್ಕಮಗಳೂರು: ದಿನೇ ದಿನೇ ಕೊರೊನಾ ಆತಂಕ ಹೆಚ್ಚುತ್ತಿದ್ದರೂ, ಇದಾವುದನ್ನೂ ಲೆಕ್ಕಿಸದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡುತ್ತಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಪ್ರವಾಸಿಗರು ಚಿಕ್ಕಮಗಳೂರು ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಎಂದು ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ.

    ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೂ ಕೊರೊನಾ ಪಾಸಿಟಿವ್ ಪ್ರಕರಣವಿಲ್ಲದ ಚಿಕ್ಕಮಗಳೂರಿನಲ್ಲಿ ಇಂದು ಸೋಂಕಿತರ ಸಂಖ್ಯೆ 70ರ ಗಡಿ ಮುಟ್ಟಿದೆ. ಬೆಂಗಳೂರಿಗೆ ಹೋಗಿ ಬರುತ್ತಿರುವ ಬಹುತೇಕರಲ್ಲಿ ಕೊರೊನಾ ಸೋಂಕು ದೃಢವಾಗುತ್ತಿದ್ದು, ಸ್ಥಳೀಯರ ಆತಂಕ ಹೆಚ್ಚಾಗಿದೆ. ಇಷ್ಟಾದರೂ ಪ್ರತಿ ದಿನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎಗ್ಗಿಲ್ಲದೆ ಪ್ರವಾಸಿಗರು ಬರುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಪ್ರವಾಸಿಗರು ಜಿಲ್ಲೆಗೆ ಬರದಂತೆ ಸರ್ಕಾರ ಎಚ್ಚರ ವಹಿಸಬೇಕೆಂದು ಸ್ಥಳೀಯರು ಗ್ರಾಮ ಪಂಚಾಯಿತಿಗಳಿಗೆ ಮನವಿ ಸಹ ಮಾಡಿದ್ದರು.

    ಜೂನ್ 28ರ ಭಾನುವಾರ ಒಂದೇ ದಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ಸಾವಿರಾರು ಪ್ರವಾಸಿಗರು ಬಂದಿದ್ದರು. ನೂರಾರು ವಾಹನಗಳು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಇದರಿಂದ ಸ್ಥಳೀಯರು ಕೂಡ ಆತಂಕಕ್ಕೀಡಾಗಿದ್ದರು. ಅಲ್ಲದೆ ಕೊರೊನಾ ಕುರಿತು ಅರಿವಿದ್ದೂ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಹಾಕುವುದನ್ನು ಮರೆತು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದರು. ಹೀಗಾಗಿ ಸ್ಥಳೀಯರು ಭಯಭೀತರಾಗಿದ್ದರು.

    ಈ ಮಧ್ಯೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡಕ್ಕೆ ಬಂದ ಪ್ರವಾಸಿಗರು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಇರುವುದನ್ನು ಕಂಡ ಸ್ಥಳಿಯರು, ತಿಳಿ ಹೇಳಿದ್ದಾರೆ. ಆಗ ಪ್ರವಾಸಿಗರು ಸ್ಥಳೀಯರ ಜೊತೆ ವಾಕ್ಸಮರಕ್ಕೆ ಇಳಿದಿದ್ದರು. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ನೀರಿನ ಬಾಟಲಿ, ಬಿಯರ್ ಬಾಟಲಿ ಎಸೆಯುತ್ತಿದರೆಂದು ಸ್ಥಳಿಯರು-ಪ್ರವಾಸಿಗರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯುತ್ತಿತ್ತು.

    ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ವರ್ತನೆ ಕಂಡ ಜಿಲ್ಲಾಡಳಿತ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ತಾತ್ಕಾಲಿಕವಾಗಿ ಪ್ರವಾಸವನ್ನು ರದ್ದುಗೊಳಿಸಿ ಎಂದು ಮನವಿ ಮಾಡಿದೆ.

  • ಉತ್ತರ ಕನ್ನಡದಲ್ಲಿ ಕೊರೊನಾ ಪತ್ತೆಗೆ ಥರ್ಮಲ್ ಸ್ಕ್ಯಾನರ್ ಬಳಕೆ- ಪರೀಕ್ಷೆ ಹೇಗೆ ಮಾಡ್ತಾರೆ?

    ಉತ್ತರ ಕನ್ನಡದಲ್ಲಿ ಕೊರೊನಾ ಪತ್ತೆಗೆ ಥರ್ಮಲ್ ಸ್ಕ್ಯಾನರ್ ಬಳಕೆ- ಪರೀಕ್ಷೆ ಹೇಗೆ ಮಾಡ್ತಾರೆ?

    ಕಾರವಾರ: ಕೊರೊನಾ ವೈರಸ್ ಆತಂಕ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಮುಂಜಾಗ್ರತಾ ಕ್ರಮ ವಹಿಸಿದೆ.

    ಜಿಲ್ಲೆಗೆ ನೆರೆಯ ಗೋವಾ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ಪ್ರವಾಸಕ್ಕೆ ಬರುತ್ತಾರೆ. ಇದರ ಜೊತೆಗೆ ಕಾರವಾರದ ವಾಣಿಜ್ಯ ಬಂದರುಗಳಿಗೆ ವಿದೇಶದ ಹಡಗುಗಳು ಬರುವುದರಿಂದ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಥರ್ಮಲ್ ಸ್ಕ್ಯಾನರ್ ಅನ್ನು ಆರೋಗ್ಯ ಇಲಾಖೆ ನೀಡಿದೆ.

    ಎಲ್ಲೆಲ್ಲಿ ಥರ್ಮಲ್ ಸ್ಕ್ಯಾನರ್?:
    ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳವಾದ ಕಾರವಾರ, ಗೋಕರ್ಣ, ಮುರುಡೇಶ್ವರ, ದಾಂಡೇಲಿ, ಶಿರಸಿ, ಮುಂಡಗೋಡಿನ ಟಿಬೆಟಿಯನ್ ಕಾಲೋನಿಗೆ ಪ್ರಥಮ ಹಂತದಲ್ಲಿ ಎಂಟು ಥರ್ಮಲ್ ಸ್ಕ್ಯಾನರ್ ಗಳನ್ನು ನೀಡಲಾಗಿದೆ. ಇನ್ನೆರೆಡು ದಿನದಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳಿಗೂ  ಥರ್ಮಲ್ ಸ್ಕ್ಯಾನರ್ ಗಳನ್ನು ಆರೋಗ್ಯ ಇಲಾಖೆ ನೀಡಲಿದೆ.

    ಏನಿದು ಥರ್ಮಲ್ ಸ್ಕ್ಯಾನರ್?:
    ಥರ್ಮಲ್ ಸ್ಕ್ಯಾನರ್ ಮನುಷ್ಯನ ದೇಹದ ತಾಪಮಾನವನ್ನು ಅಳೆಯುವ ಸಾಧನ. ಮನುಷ್ಯನ ದೇಹದ ತಾಪಮಾನ ತುಸು ಹೆಚ್ಚುಕಡಿಮೆ 98.6 ಡಿಗ್ರಿ ಫ್ಯಾರನ್‍ಹೀಟ್ ಅಥವಾ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆಗೆ ಒಳಪಟ್ಟ ವ್ಯಕ್ತಿಯ ದೇಹದ ತಾಪಮಾನ 98.6 ಡಿಗ್ರಿ ಫ್ಯಾರನ್‍ಹೀಟ್‍ಗಿಂತ ಅಧಿಕವಾಗಿದ್ದರೆ ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತದೆ.

    ಥರ್ಮಲ್ ಸ್ಕ್ಯಾನರ್ ಯಾಕೆ?
    ಕೊರೊನಾ ವೈರಸ್ ಇರುವವರಿಗೆ ಜ್ವರ, ಕೆಮ್ಮು ಪ್ರಮುಖ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ಹಲವರು ತಮಗೆ ಜ್ವರ ಇರುವ ಕುರಿತು ಮಾಹಿತಿ ಕೊಡಲು ಹಿಂಜರಿಯುತ್ತಾರೆ. ಇದಲ್ಲದೇ ಈಗಿರುವ ಹಳೆಯ ತಂತ್ರಜ್ಞಾನ ಬಳಸಿ ಸಾವಿರಾರು ಜನರನ್ನು ಪರೀಕ್ಷೆ ಮಾಡಲು ವೈದ್ಯರಿಗೆ ಕಷ್ಟಸಾಧ್ಯ. ಹೀಗಾಗಿ ತಕ್ಷಣ ಪರೀಕ್ಷಿಸಲು ಜ್ವರದ ತೀವ್ರತೆ ತಿಳಿದುಕೊಳ್ಳಲು ಥರ್ಮಲ್ ಸ್ಕ್ಯಾನರ್ ತಕ್ಷಣದಲ್ಲಿ ಉಪಯೋಗಕ್ಕೆ ಬರುತ್ತದೆ. ಈ ಕಾರಣದಿಂದ ಇದರ ಬಳಕೆ ವೈದ್ಯರಿಗೆ ರೋಗಿಯ ದೇಹಸ್ಥಿತಿ ಅರಿಯಲು ಸಹಕಾರಿಯಾಗುತ್ತದೆ.

    ಜಿಲ್ಲೆಯ ಗೋಕರ್ಣದಲ್ಲಿ ಒಂದರಲ್ಲಿಯೇ ಆರೋಗ್ಯ ಇಲಾಖೆ ಒಂದು ದಿನದಲ್ಲಿ ದೇಶ ವಿದೇಶದಿಂದ ಬಂದ ಏಳು ಸಾವಿರ ಜನರನ್ನು ಪರೀಕ್ಷೆ ಮಾಡಿತ್ತು. ಥರ್ಮಲ್ ಸ್ಕ್ಯಾನರ್ ದಿಂದಲೇ ಅತಿ ಬೇಗ ಜ್ವರ ಪತ್ತೆಹಚ್ಚುವಲ್ಲಿ ಸಹಕಾರಿಯಾಗಿತ್ತು.

    ಜಿಲ್ಲೆಯಲ್ಲಿ ಕಟ್ಟೆಚ್ಚರ ಮುಂದುವರಿಕೆ:
    ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೂ ವೈದ್ಯರ ತಂಡ ರಚಿಸಿ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹೋಟೆಲ್, ರೆಸಾರ್ಟ್ ಗಳಲ್ಲಿ ನೋಂದಾಯಿತ ಅತಿಥಿಗಳ ಮಾಹಿತಿ ಮೇಲೆ ಸರ್ವೆ ಕಾರ್ಯ ಮಾಡಲಾಗುತ್ತಿದ್ದು, ಇದರ ಜೊತೆಗೆ ವಿದೇಶಿ ಪ್ರವಾಸಿಗರ ಮಾಹಿತಿಯನ್ನು ಪೊಲೀಸ್ ಇಲಾಖೆ ಮೂಲಕ ಪಡೆದು ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

    ಜಿಲ್ಲೆಯಲ್ಲಿ ಈವರೆಗೂ ಕೊರೊನಾ ವೈರಸ್ ಸೊಂಕಿತರ ಪತ್ತೆಯಾಗಿಲ್ಲ. ಸೋಮವಾರ ಕೂಡ ವಿದೇಶಕ್ಕೆ ಹೋಗಿಬಂದ ಹಾಗೂ ವಿದೇಶಿಗರ 62 ಜನರನ್ನು ಪರೀಕ್ಷೆ ಮಾಡಲಾಗಿದೆ. ಯಾರಲ್ಲೂ ಯಾವುದೇ ತೊಂದರೆ ಇಲ್ಲ. ಆದರೂ ಜಿಲ್ಲೆಯ ಜನರು ಎಚ್ಚರಿಕೆಯಿಂದ ಇರಬೇಕು. ಸ್ವಚ್ಛತೆ ಜೊತೆಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು. ಇಲಾಖೆಯಲ್ಲಿ ವೈರಸ್‍ನೊಂದಿಗೆ ಹೋರಾಡಲು ಬೇಕಾದ ಎಲ್ಲಾ ಸಾಧನಗಳು ಇವೆ. ಮಾಸ್ಕ್, ಔಷಧಿ ಸಂಗ್ರಹವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್ ಮಾಹಿತಿ ನೀಡಿದ್ದಾರೆ.

  • ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಚಿಕ್ಕಮಗಳೂರು: ಮರಣ ಮೃದಂಗ ಬಾರಿಸುತ್ತಿರುವ ಮಂಗನಜ್ವರಕ್ಕೆ ಮಲೆನಾಡಿಗರು ತತ್ತರಿಸಿ ಹೋಗಿದ್ದು, ಈ ಕಾಯಿಲೆ ಇಲ್ಲಿಗೆ ಬರುವ ಪ್ರವಾಸಿಗರಿಗೂ ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಮಲೆನಾಡು ಹಾಗೂ ಸುತ್ತಮುತ್ತಲ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರೋ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‍ಡಿ) ವೈರಾಣುವಿನಿಂದ ಅನೇಕ ಮಂದಿ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಈ ಕಾಯಿಲೆ ಈ ಭಾಗಕ್ಕೆ ಬರುವ ಪ್ರವಾಸಿಗರಿಗೂ ತಗಲಬಾರದೆಂದು ಮುಂಜಾಗೃತೆ ಕ್ರಮವಾಗಿ ಪ್ರವಾಸಿಗರಿಗೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ನಿಷೇಧಿಸಿದೆ. ಕುದುರೆಮುಖಕ್ಕೆ ಒಳಪಡುವ ಹಲವು ಪ್ರದೇಶಗಳಲ್ಲಿ ಟ್ರಕ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಗಣನೀಯವಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ. ಪ್ರವಾಸಿಗರ ಚಾರಣಕ್ಕೆ ಅರಣ್ಯ ಇಲಾಖೆಯಿಂದ ನಿಷೇಧ ಹೇರಿದೆ. ಈ ಭಾಗದಲ್ಲಿ ಕೆ.ಎಫ್.ಡಿ ವೈರಾಣು ಪತ್ತೆ ಹಿನ್ನೆಲೆ ಕುದುರೆಮುಖ ಗಿರಿಶ್ರೇಣಿ, ಕೂಡಲ್ ಫಾಲ್ಸ್, ಕೊಡಚಾದ್ರಿ, ಕುರೆಂಜಲ್ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿಗರು ಪ್ರವೇಶಿಸಬಾರದೆಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.

    ಅಷ್ಟೇ ಅಲ್ಲದೆ ಕಾರ್ಕಳಕ್ಕೆ ಒಳಪಡುವ ಪ್ರದೇಶದಲ್ಲೂ ಟ್ರಕ್ಕಿಂಗ್ ನಿಷೇಧಿಸಲಾಗಿದೆ. ಕಾರ್ಕಳ ಹಾಗೂ ಚಿಕ್ಕಮಗಳೂರು, ಕುದುರೆಮುಖ ವ್ಯಾಪ್ತಿಯಲ್ಲಿ ಕೆಎಫ್‍ಡಿ ಭೀತಿ ಹೆಚ್ಚಾಗಿದ್ದು, ಮುಂಜಾಗೃತೆ ಕ್ರಮವಾಗಿ ಅರಣ್ಯ ಇಲಾಖೆ ಮಲೆನಾಡಿಗೆ ಬರೋ ಪ್ರವಾಸಿಗರಿಗೆ ಹಾಗೂ ಜನರಿಗೆ ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv