Tag: Tourist

  • ಥೈಲ್ಯಾಂಡ್‌ ಪ್ರವಾಸ ಇನ್ನಷ್ಟು ದುಬಾರಿ – ಪ್ರವಾಸಿಗರಿಗೆ ತೆರಿಗೆ ಶಾಕ್!

    ಥೈಲ್ಯಾಂಡ್‌ ಪ್ರವಾಸ ಇನ್ನಷ್ಟು ದುಬಾರಿ – ಪ್ರವಾಸಿಗರಿಗೆ ತೆರಿಗೆ ಶಾಕ್!

    ಥೈಲ್ಯಾಂಡ್‌ ಅತ್ಯಂತ ಸುಂದರವಾದ ದೇಶ. ವಿಶ್ವದ ಅನೇಕ ಭಾಗದ ಪ್ರವಾಸಿಗರು ಇಲ್ಲಿನ ಪ್ರವಾಸಿತಾಣಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಥೈಲ್ಯಾಂಡ್‌ ಎಲ್ಲಾ ವಯೋಮಾನದವರಿಗೂ ಬಹಳ ಪ್ರಿಯವಾದ ದೇಶ ಎಂದೇ ಹೇಳಬಹುದು. ಭಾರತೀಯರಿಗೂ ಥೈಲ್ಯಾಂಡ್‌ ಅಚ್ಚುಮೆಚ್ಚಿನ ತಾಣ. ಆದರೆ ಇದೀಗ ಥೈಲ್ಯಾಂಡ್‌ ಸರ್ಕಾರ ತನ್ನ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತೆರಿಗೆ ವಿಧಿಸಲು ಮುಂದಾಗಿದೆ. ಹಾಗಿದ್ರೆ ಥೈಲ್ಯಾಂಡ್‌ ದೇಶಕ್ಕೆ ಪ್ರವಾಸ ಹೋಗಬೇಕಾದರೆ ಎಷ್ಟು ತೆರಿಗೆ ಕಟ್ಟಬೇಕು? ಭಾರತೀಯರಿಗೆ ಇದರ ಪರಿಣಾಮವೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ. 

    ವಿದೇಶಿ ಪ್ರವಾಸಿಗರಿಗೆ 300 ಬಹ್ತ್‌ ತೆರಿಗೆ:
    ಥೈಲ್ಯಾಂಡ್ ಸರ್ಕಾರವು ತನ್ನ ದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿ ಪ್ರವಾಸಿಗರ ಮೇಲೆ 300 ಬಹ್ತ್ (ಸರಿಸುಮಾರು 820 ರೂ.) ಪ್ರವಾಸೋದ್ಯಮ ತೆರಿಗೆಯನ್ನು ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ತೆರಿಗೆ ಪ್ರವಾಸೋದ್ಯಮ ಸೌಲಭ್ಯಗಳನ್ನು ಸುಧಾರಿಸಲು ಹಾಗೂ ವಿದೇಶಿ ಪ್ರವಾಸಿಗರಿಗೆ ವಿಮೆಯನ್ನು ಒದಗಿಸಲು ಬಳಸುತ್ತದೆ ಎಂದು ನೂತನ ಸಚಿವ ಅತ್ತಕೋರ್ನ್‌ ಸಿರಿಲತ್ತಾಯಕೋರ್ನ್‌ ತಿಳಿಸಿದ್ದಾರೆ.

    ಈ ಮೊದಲು ವಿಮಾನದ ಮೂಲಕ ಬರುವ ಪ್ರಯಾಣಿಕರಿಂದ 300 ಬಹ್ತ್ ಮತ್ತು ಭೂಮಿ ಅಥವಾ ಸಮುದ್ರದ ಮೂಲಕ ಬರುವವರಿಂದ 150 ಬಹ್ತ್ ವಿಧಿಸುವುದಾಗಿ ಅಲ್ಲಿನ ಸರ್ಕಾರ ಹೇಳಿತ್ತು. ಆದರೆ ಇದೀಗ ಎಲ್ಲರಿಗೂ ಒಂದೇ ತೆರಿಗೆಯನ್ನು ವಿಧಿಸಲು ಥೈಲ್ಯಾಂಡ್‌ ಸರ್ಕಾರ ನಿರ್ಧರಿಸಿದೆ. 

    ತೆರಿಗೆ ವಸೂಲಿ ಯಾವಾಗಿಂದ ಆರಂಭ?
    ವರದಿಗಳ ಪ್ರಕಾರ, ಈ ಹೊಸ ನಿಯಮವನ್ನು ನಾಲ್ಕು ತಿಂಗಳೊಳಗೆ ಪರಿಚಯಿಸಲು ಯೋಜಿಸಿದೆ. ಅಂದರೆ 2026ರ ಮೊದಲಾರ್ಧದ ವೇಳೆಗೆ ಈ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ. ಈ ಯೋಜನೆ ಜಾರಿಯಾದ ಬಳಿಕ ಥೈಲ್ಯಾಂಡ್‌ ಪ್ರವಾಸ ಕೊಂಚ ದುಬಾರಿಯಾಗಲಿದೆ. ಪ್ರವಾಸದ ವೇಳೆ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ. 

    ಈ ತೆರಿಗೆ ಜಾರಿ ಬಳಿಕ ಥೈಲ್ಯಾಂಡ್‌ಗೆ ಭೇಟಿ ನೀಡುವ ಪ್ರತಿ ವ್ಯಕ್ತಿ ಸರಿಸುಮಾರು 800-900 ರೂ. ಹೆಚ್ಚು ಪಾವತಿಸಬೇಕಾಗುತ್ತದೆ.  ಈ ಮೊತ್ತವು ಹೆಚ್ಚೇನು ದುಬಾರಿಯಲ್ಲವಾದರೂ ಬಜೆಟ್ ಸ್ನೇಹಿ ಪ್ರಯಾಣ ಮಾಡುವವರ ಮೇಲೆ ಕೊಂಚಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆಯಿದೆ. 

    ದಿಢೀರ್‌ ತೆರಿಗೆ ಏಕೆ?
    ಈ ತೆರಿಗೆ ಬಗ್ಗೆ ಮೊದಲ ಬಾರಿಗೆ 2020ರಲ್ಲಿಯೇ ಪ್ರಸ್ತಾಪಿಸಲಾಗಿತ್ತು. ಅಲ್ಲದೇ 2023ರಲ್ಲಿ ಮಂತ್ರಿಮಂಡಲದಿಂದ ಈ ತೆರಿಗೆ ಜಾರಿಗೆ ಅನುಮೋದನೆ ಕೂಡ ದೊರಕಿತ್ತು. ಆದರೆ ಅಂದಿನಿಂದ ಈ ತೆರಿಗೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಮೊದಲಿನ ಯೋಜನೆ ಪ್ರಕಾರ, ವಿಮಾನದ ಮೂಲಕ ಬರುವ ಪ್ರಯಾಣಿಕರಿಂದ 300 ಬಹ್ತ್ ಮತ್ತು ಭೂಮಿ ಅಥವಾ ಸಮುದ್ರದ ಮೂಲಕ ಬರುವವರಿಂದ 150 ಬಹ್ತ್ ವಿಧಿಸುವುದಾಗಿ ನಿರ್ಧರಿಸಲಾಗಿತ್ತು. ಆದರೆ ಈಗ ಎಲ್ಲರಿಗೂ ಸಮಾನ ತೆರಿಗೆ ವಿಧಿಸಲು ಥೈಲ್ಯಾಂಡ್‌ ಸರ್ಕಾರ ಮುಂದಾಗಿದೆ. 

    ಭಾರತೀಯರ ಮೇಲೆ ಪರಿಣಾಮ ಏನು?
    ಭಾರತವು ಈಗ ಥೈಲ್ಯಾಂಡ್‌ಗೆ ಪ್ರಮುಖ ಪ್ರವಾಸಿ ಮೂಲ ರಾಷ್ಟ್ರವಾಗಿದೆ. ಭಾರತವು ಥೈಲ್ಯಾಂಡ್‌ನ ಮೂರನೇ ಅತಿದೊಡ್ಡ ಪ್ರವಾಸಿ ಮೂಲ ದೇಶವಾಗಿದ್ದು,ಈ  ಹೊಸ ತೆರಿಗೆಯು ಗಮನಾರ್ಹ ಪರಿಣಾಮ ಬೀರಬಹುದು. ವರದಿಗಳ ಪ್ರಕಾರ, 2024ರಲ್ಲಿ ಸುಮಾರು 2.1 ಮಿಲಿಯನ್ ಭಾರತೀಯರು ಥೈಲ್ಯಾಂಡ್ ದೇಶಕ್ಕೆ ಪ್ರಯಾಣಿಸಿದ್ದಾರೆ. ಇದು 2023ಕ್ಕಿಂತ ಸುಮಾರು 30% ಹೆಚ್ಚಾಗಿದೆ.

    ಇನ್ನು ಈ ತೆರಿಗೆ ಜಾರಿ ಬಳಿಕ ಬಜೆಟ್‌ ಫ್ರೆಂಡ್ಲಿ ಪ್ರವಾಸಿಗರಿಗೆ ಇದು ಹೊರೆ ಎನಿಸುವ ಸಾಧ್ಯತೆಯಿದೆ. ಆದ್ದರಿಂದ ಈ ತೆರಿಗೆ ಜಾರಿ ಬಳಿಕ ಥೈಲ್ಯಾಂಡ್‌ ಪ್ರವಾಸ ಕೈಗೊಳ್ಳುವ ಭಾರತೀಯರ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಒಂದುವೇಳೆ ಥೈಲ್ಯಾಂಡ್‌ ಸರ್ಕಾರ ತೆರಿಗೆ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ಹಾಗೂ ಸೌಲಭ್ಯವನ್ನು ಒದಗಿಸಿದ್ದೇ ಆದಲ್ಲಿ ಥೈಲ್ಯಾಂಡ್‌ಗೆ ಇನ್ನೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವುದರಲ್ಲಿ ಅನುಮಾನವೇ ಇಲ್ಲ.

    ಯಾವ ವರ್ಷದಲ್ಲಿ ಎಷ್ಟು ಭಾರತೀಯರು ಥೈಲ್ಯಾಂಡ್‌ ಭೇಟಿ?

    2020 – 70,000 ಭಾರತೀಯರು 

    2021 – 80,000 ಭಾರತೀಯರು 

    2022 – 138,000 ಭಾರತೀಯರು

    2023 – 1,628,542 ಭಾರತೀಯರು

    2024 – 2.1 ಮಿಲಿಯನ್ ಭಾರತೀಯರು

  • ಬಾಲಕ ಪ್ರಾಣ ಕಳೆದುಕೊಂಡ್ರೂ ಬುದ್ಧಿ ಕಲಿಯದ ಪ್ರವಾಸಿಗರು – ವೀಕ್ಷಣಾ ಗೋಪುರದಿಂದ ಅಯ್ಯನಕೆರೆಗೆ ಜಿಗಿದು ಹುಚ್ಚಾಟ

    ಬಾಲಕ ಪ್ರಾಣ ಕಳೆದುಕೊಂಡ್ರೂ ಬುದ್ಧಿ ಕಲಿಯದ ಪ್ರವಾಸಿಗರು – ವೀಕ್ಷಣಾ ಗೋಪುರದಿಂದ ಅಯ್ಯನಕೆರೆಗೆ ಜಿಗಿದು ಹುಚ್ಚಾಟ

    ಚಿಕ್ಕಮಗಳೂರು: ದಸರಾ ರಜೆ ಇರುವುದರಿಂದ ಚಿಕ್ಕಮಗಳೂರಿನ (Chikkamagaluru) ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಹೀಗೆ ಬಂದ ಪ್ರವಾಸಿಗರು (Tourist) ಅಪಾಯಕಾರಿ ಸ್ಥಳಗಳಲ್ಲಿ ಹುಚ್ಚಾಟ ಮಾಡುತ್ತಿದ್ದಾರೆ.

    ಕಡೂರು (Kadur) ತಾಲೂಕಿನ ಅಯ್ಯನಕೆರೆಯ (Ayyana Kere) ವೀಕ್ಷಣಾ ಗೋಪುರದ ಮೇಲಿಂದ ಯುವಕ, ಯುವತಿಯರು, ಮಕ್ಕಳು ನೀರಿಗೆ ಜಿಗಿಯುತ್ತಿದ್ದಾರೆ. ವೇಗವಾಗಿ ಜಾರುವ ನೀರಿನಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೂ ಶುಕ್ರವಾರ (ಅ.3) ಇದೇ ಜಾಗದಲ್ಲಿ ಈಜಲು ಹೋಗಿ ಬಾಲಕ ಮೃತಪಟ್ಟಿದ್ದ. ಇಷ್ಟಾದರೂ ಪ್ರವಾಸಿಗರು ಮಾತ್ರ ಪುಂಡಾಟ ನಿಲ್ಲಿಸಿಲ್ಲ. ಇದನ್ನೂ ಓದಿ: ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು

    ಏಳು ಗುಡ್ಡದ ಮಧ್ಯೆ ಇರುವ ಅಯ್ಯನಕೆರೆ ಸುಂದರ ಪ್ರವಾಸಿ ತಾಣವೂ ಹೌದು. ಸಾಲು ಸಾಲು ರಜೆ ಇರುವುದರಿಂದ ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ಬಂದವರು ಪ್ರಕೃತಿ ಸೌಂದರ್ಯ ಸವಿಯದೇ ಪುಂಡಾಟ ಮಾಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.

    ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಯ್ಯನಕೆರೆ ಇದ್ದು, ಪೊಲೀಸರು ಪ್ರವಾಸಿಗರ ಪುಂಡಾಟದ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೆಮ್ಮಣ್ಣುಗುಂಡಿ | ಪತ್ನಿ ಜೊತೆ ಸೆಲ್ಫಿ ತೆಗೆಯಲು ಹೋಗಿ 60 ಅಡಿ ಪ್ರಪಾತಕ್ಕೆ ಬಿದ್ದು ಶಿಕ್ಷಕ ಸಾವು

  • Bannerghatta | ಸಫಾರಿಗೆ ತೆರಳಿದ್ದ ಪ್ರವಾಸಿಗ ಹೃದಯಾಘಾತಕ್ಕೆ ಬಲಿ

    Bannerghatta | ಸಫಾರಿಗೆ ತೆರಳಿದ್ದ ಪ್ರವಾಸಿಗ ಹೃದಯಾಘಾತಕ್ಕೆ ಬಲಿ

    ಆನೇಕಲ್: ಸಫಾರಿಗೆ (Safari) ಹೋಗಿದ್ದ ಪ್ರವಾಸಿಗ (Tourist) ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನದಲ್ಲಿ ನಡೆದಿದೆ.

    ಬೆಂಗಳೂರಿನ ನಾಗರಬಾವಿಯ ನಿವಾಸಿ ನಂಜಪ್ಪ (45) ಮೃತ ವ್ಯಕ್ತಿ. ಶನಿವಾರ ಸಫಾರಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಪತ್ನಿ ಇಬ್ಬರು ಮಕ್ಕಳೊಂದಿಗೆ ಸಫಾರಿ ವೀಕ್ಷಣೆ ಬಂದಿದ್ದ ವೇಳೆ ನಂಜಪ್ಪ ಸಫಾರಿ ಬಸ್ಸಿನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನೂ ಓದಿ: ಮಾನವ ಕಳ್ಳಸಾಗಣಿಕೆ ಮಾಡಿದ್ದೀಯಾ ಅಂತ ಮಹಿಳಾ ವಿಜ್ಞಾನಿಗೆ ಬೆದರಿಸಿ ಲಕ್ಷ ಲಕ್ಷ ಪೀಕಿದ ಸೈಬರ್ ವಂಚಕ

    ಝೂ ಅಂಬುಲೆನ್ಸ್ ಮೂಲಕ ನಂಜಪ್ಪರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂಜಪ್ಪ ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮನ್ ಕೀ ಬಾತ್‌ನಲ್ಲಿ ಅಕ್ಷರ ಮಾಂತ್ರಿಕ ಎಸ್‌.ಎಲ್‌ ಭೈರಪ್ಪರನ್ನ ನೆನೆದ ಮೋದಿ

  • ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

    ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

    ಚಿಕ್ಕಮಗಳೂರು: ವರ್ಷದ ಎಂಟೊಂಬತ್ತು ತಿಂಗಳು ಮಳೆ, ವರ್ಷಪೂರ್ತಿ ತಣ್ಣನೆಯ ಗಾಳಿ, ಚಳಿ ಹೀಗೆ ಅರ್ಧ ವರ್ಷ ಮಂಜಿನಿಂದಲೇ ಮುಳುಗೋ ಕಾಡಂಚಿನ ಗ್ರಾಮ (Kottigehara) ಕೊಟ್ಟಿಗೆಹಾರ. ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟಿಯಂತಹಾ ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಸಿಗುವ ಈ ಪುಟ್ಟ ಕೊಟ್ಟಿಗೆಹಾರ ಪ್ರವಾಸಿಗರ (Tourist) ಹಾಟ್‍ಸ್ಪಾಟ್ ಕೂಡ ಹೌದು. ಈ ಮಾರ್ಗದಲ್ಲಿ ಧರ್ಮಸ್ಥಳ, ಉಡುಪಿ ಹಾಗೂ ಮಂಗಳೂರಿಗೆ ಸಂಚರಿಸೋ ವಾಹನಗಳು ಇಲ್ಲೊಂದು ಸ್ಟಾಪ್ ಕೊಡದೇ ಮುಂದೆ ಹೋಗಲ್ಲ. ಈ ಮಾರ್ಗದಲ್ಲಿ ಹೋಗುವಾಗ ಹಲವು ದಶಕಗಳಿಂದಲೂ ಟೀ, ಕಾಫಿ (Coffee), ಲೆಮನ್ ಟೀ ಸವಿಯುತ್ತಿದ್ದ ಪ್ರವಾಸಿಗರು ಕೂಡ ಈಗ ಮಲೆನಾಡಿಗರ ಜೊತೆ ಬರಗಾಪಿಗೆ (Black coffee) ಫಿದಾ ಆಗಿದ್ದಾರೆ.

    ಚಾರ್ಮಾಡಿ ಘಾಟಿಯ ತಪ್ಪಲು ಅಂದ್ರೆ ಕೇಳೋದೇ ಬೇಡ. ಗಾಳಿ-ಮಳೆ-ಚಳಿಗೆ ಬರವಿಲ್ಲ. ಒಂದಕ್ಕೊಂದು ಅಂಟಿಕೊಂಡ ಚೈನ್ ಲಿಂಕ್‍ನಂತೆ ವರ್ಷಪೂರ್ತಿ ಮಲೆನಾಡಿಗರ ಜೊತೆ ಪ್ರವಾಸಿಗರನ್ನು ಗಡಗಡ ನಡುಗಿಸುತ್ತೆ. ಅದರಲ್ಲೂ ಮೇ-ಜೂನ್‍ನಿಂದ ಅಕ್ಟೋಬರ್-ನವೆಂಬರ್‌ ವರೆಗೂ ಇಲ್ಲಿನ ಗಾಳಿ-ಚಳಿ-ಮಳೆಯ ಅಬ್ಬರ ಹೇಳೋದು ಅಸಾಧ್ಯ. ಆ ಚಳಿ-ಗಾಳಿ-ಮಳೆಯನ್ನ ಪ್ರವಾಸಿಗರಿಗಿಂತ ಮಲೆನಾಡಿಗರೇ ಹೆಚ್ಚು ಪ್ರೀತಿಸ್ತಾರೆ! ಅದನ್ನು ಪ್ರಕೃತಿಯ ಜೊತೆ ಸೇರಿ ಎಂಜಾಯ್‌ ಮಾಡ್ತಾರೆ. ಅಂತಹಾ ಕಾಡಂಚಿನ ಗ್ರಾಮದಲ್ಲೀಗ ಮಲೆನಾಡಿಗರು ಹಾಲಿಲ್ಲದ ಬರಗಾಪಿಗೆ ಮನಸೋತಿದ್ದಾರೆ. ಹೋಟೇಲ್-ಕ್ಯಾಂಟೀನ್ ಬಾಗಿಲಲ್ಲಿ ಬರಗಾಪಿ ಕುಡಿಯುತ್ತಿರುವುದನ್ನ ಕಂಡು ಪ್ರವಾಸಿಗರು ಕೂಡ ಅದೇ ಬೇಕು ಅಂತಿದ್ದಾರೆ. ಆ ಸ್ವಾದವನ್ನ ಅನುಭವಿಸುತ್ತಿದ್ದಾರೆ!

    ಮೂಡಿಗೆರೆ ದಾಟಿ ಕೊಟ್ಟಿಗೆಹಾರ ಹೋಗುತ್ತಿದ್ದಂತೆ ಗಾಡಿ ಪಾರ್ಕ್ ಮಾಡುವ ಪ್ರವಾಸಿಗರು ಮೊದಲು ಕೇಳೋದು ನೀರು ದೋಸೆ. ನೆಕ್ಸ್ಟ್ ಬರಗಾಪಿ. ಇಲ್ಲಿನ ನೀರುದೋಸೆ ಕೂಡ ಅಷ್ಟೆ ಫೇಮಸ್. ಅದೇ ಸಾಲಿಗೆ ಈಗ ಬರಗಾಪಿಗೆ ಕೂಡ ಸೇರಿದೆ. ಕೊಟ್ಟಿಗೆಹಾರದಲ್ಲಿ ತಿಂಡಿ ತಿಂದು ಬರಗಾಪಿ ಕುಡಿದ ಹೋದ ಪ್ರವಾಸಿಗರು ಧರ್ಮಸ್ಥಳ-ಉಡುಪಿ-ಮಂಗಳೂರಿನಿಂದ ಹಿಂದಿರುಗುವಾಗ ಮತ್ತದೇ ನೀರುದೋಸೆ-ಬರಗಾಪಿಯನ್ನ ಮಿಸ್ ಮಾಡಿಕೊಳ್ಳಲ್ಲ. ಕೊಟ್ಟಿಗೆಹಾರ ತಪ್ಪಲಿನ ಹೋಟೆಲ್-ಕ್ಯಾಂಟೀನ್ ಮಾಲೀಕರು ಕೂಡ ಕಾಫಿ-ಟೀಗಿಂದ ಬರಗಾಪಿಯಲ್ಲೇ ಹೆಚ್ಚಾಗಿ ಲಾಭ ಕಾಣ್ತಿದ್ದಾರೆ. ಹಾಲಿನ ಟೀ-ಕಾಫಿ ಮಾಡೋದನ್ನ ಬಹುತೇಕ ಕಡಿಮೆ ಮಾಡಿದ್ದು, ಕೇಳಿದವರಿಗೆ ಮಾತ್ರ ಹಾಲಿನ ಕಾಫಿ-ಟೀ ಮಾಡಿಕೊಡ್ತಿದ್ದಾರೆ. ಈ ಬರಗಾಪಿಯ ಜಮಾನದಲ್ಲಿ ದಶಕಗಳಿಂದ ಖ್ಯಾತಿಯಾಗಿದ್ದ ಲೆಮನ್ ಟೀ ಕೂಡ ನೇಪಥ್ಯಕ್ಕೆ ಸರಿದಿದೆ.

    ವರ್ಷಪೂರ್ತಿ ಮಳೆ-ಚಳಿ-ಗಾಳಿ ಎದುರಿಸೋ ಮಲೆನಾಡಿಗರು ಶೀತದ ವಾತಾವರಣದಲ್ಲಿ ದೇಹವನ್ನ ಉಷ್ಣದಲ್ಲಿಟ್ಟುಕೊಳ್ಳಲು ಬರಗಾಪಿಯ ಮೊರೆಹೋಗಿದ್ದಾರೆ. ಕೆಲವರು ಹಾಟ್ ಡ್ರಿಂಕ್ಸ್ ಮೊರೆ ಹೋದ್ರೆ ಕುಡಿತದ ಅಭ್ಯಾಸ ಲಿಮಿಟ್ ಹಾಗೂ ಇಲ್ಲದವರು ದೇಹವನ್ನ ಬೆಚ್ಚಗೆ ಇಟ್ಟುಕೊಳ್ಳಲು ಬರಗಾಪಿಯ ದಾರಿ ಹುಡುಕಿಕೊಂಡಿದ್ದಾರೆ. ಸ್ಥಳಿಯರು ಕ್ಯಾಂಟೀನ್ ಬಾಗಿಲಿಗೆ ಬರುತ್ತಿದ್ದಂತೆ ಮಾಲೀಕ ಏನು ಬೇಕೆಂದು ಕೇಳೋದೇ ಇಲ್ಲ. ಸೀದಾ ಬಿಳಿ ಗಾಜಿನ ಲೋಟದಲ್ಲಿ ಬಿಸಿ-ಬಿಸಿಯಾಗಿ ಕಪ್ಪು ಕಾಫಿಯನ್ನ ತಂದಿಡ್ತಾನೆ. ಹಾಲಿಲ್ಲದ ಈ ಬರಗಾಪಿಯನ್ನ ಸ್ಥಳಿಯರು ಕೂಡ ಅಷ್ಟೆ ಖುಷಿಯಿಂದ ಆ ಸ್ವಾದವನ್ನ ಹೀರುತ್ತಾ ಕುಡಿಯುತ್ತಿದ್ದಾರೆ. ಮಲೆನಾಡ ಚಳಿಯಲ್ಲಿ ಬರಗಾಪಿಯ ರುಚಿ ಕಂಡಿರೋ ಕೆಲ ಪ್ರವಾಸಿಗರು ಕೂಡ ಹಾಲಿನ ಕಾಫಿ-ಟೀ ಬೇಡ. ಬರಗಾಪಿ ಕೊಡಿ ಎಂದು ಚಳಿ ಮಧ್ಯೆ ಹಾಲಿಲ್ಲದ ಬರಗಾಪಿ ಕುಡಿಯುತ್ತಾ ಎಂಜಾಯ್ ಮಾಡ್ತಿದ್ದಾರೆ.

  • ಕಾಶ್ಮೀರಕ್ಕೆ ಪ್ಲ್ಯಾನ್ ಮಾಡಿದ್ದ ಜನ ಕರ್ನಾಟಕದ ಕಾಶ್ಮೀರ ಕೊಡಗಿಗೆ ಲಗ್ಗೆ!

    ಕಾಶ್ಮೀರಕ್ಕೆ ಪ್ಲ್ಯಾನ್ ಮಾಡಿದ್ದ ಜನ ಕರ್ನಾಟಕದ ಕಾಶ್ಮೀರ ಕೊಡಗಿಗೆ ಲಗ್ಗೆ!

    ಮಡಿಕೇರಿ: ಮಕ್ಕಳಿಗೆ ಈಗಾಗಲೇ ಬೇಸಿಗೆ ರಜೆ ಅರಂಭವಾಗಿದ್ದು,‌ ಸಾವಿರಾರು ಸಂಖ್ಯೆಯ ಜನರು ತಮ್ಮ ಮಕ್ಕಳನ್ನು ಕರೆದುಕೊಂಡು ದೂರದ ಕಾಶ್ಮೀರಕ್ಕೆ ಹೋಗಬಹುದು ಎಂದು ಪ್ಲ್ಯಾನ್ ಮಾಡಿದ್ರು.‌ ಅದರೆ, ಕಳೆದ ಕೆಲವು ದಿನಗಳ ಹಿಂದೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಅಟ್ಟಹಾಸದಿಂದ ದೇಶದ ಜನರು ಭಯ ಭೀತರಾಗಿದ್ದಾರೆ. ಇದರಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಸಾವಿರಾರು ಪ್ರವಾಸಿಗರು ಕರ್ನಾಟಕದ ಕಾಶ್ಮೀರದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

    ಕಾಶ್ಮೀರದಲ್ಲಿರುವ ನೀಲಂ ಕಣಿವೆಗಳ ಸಾಲುಗಳನ್ನು ವಿಕ್ಷಣೆ ಮಾಡಲು ಪ್ರತಿ ಬೇಸಿಗೆಯಲ್ಲಿ ಸುಮಾರು ಮೂರು ಲಕ್ಷ ಪ್ರವಾಸಿಗರು ತೆರಳುತ್ತಾರೆ. ಕಾಶ್ಮೀರದ ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತಾರೆ. ಆದರೆ ಭಾರತ ಪಾಕ್ ಹಾಗೂ ಪಿಒಕೆ ಮೇಲೆ ದಾಳಿ ನಡೆಸುವ ಭೀತಿಯಿಂದಾಗಿ ಅಲ್ಲಿಂದ ಪ್ರವಾಸಿಗರು ದಿನ ನಿತ್ಯ ಜಾಗ ಖಾಲಿ ಮಾಡುತ್ತಿದ್ದಾರೆ. ಈ ನಡುವೆ ದೇಶ ವಿದೇಶದ ಜನರು ಕರ್ನಾಟಕದ ಕಾಶ್ಮೀರ ಕೊಡಗಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದರಿಂದ ಮಂಜಿನ ನಗರಿ ಮಡಿಕೇರಿಯ ವಿಶಾಲವಾದ ರಾಜಾಸೀಟ್ ಉದ್ಯಾನವನದ ತುಂಬೆಲ್ಲಾ ಜನ ತುಂಬಿ ತುಳುಕುತ್ತಿದ್ದಾರೆ.

    ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಮಡಿಕೇರಿಯ ರಸ್ತೆಗಳೆಲ್ಲಾ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿವೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಾಳಾದ ತಲಕಾವೇರಿ, ಭಾಗಮಂಡಲ, ದುಬಾರೆ, ಅಬ್ಬಿಫಾಲ್ಸ್ ಹೀಗೆ ಎಲ್ಲಾ ಪ್ರವಾಸಿತಾಣಗಳು ಸಂಪೂರ್ಣವಾಗಿ ತುಂಬಿಹೋಗಿವೆ.

    ಪ್ರವಾಸಿಗರೊಬ್ಬರು ಮಾತಾನಾಡಿ ಕಾಶ್ಮೀರಕ್ಕೆ ಹೋಗುವ ಹಂಬಲ ಈ ಬಾರಿ ಇತ್ತು ಅದರೆ ಭಯೋತ್ಪಾದಕರ ಚಟುವಟಿಕೆಯಿಂದ ಸಾಕಷ್ಟು ಭಯದ ವಾತಾವರಣ ಇತ್ತು. ಇದರಿಂದ ನಮ್ಮ ಕರ್ನಾಟಕದ ಕಾಶ್ಮೀರ ನೋಡಲು ಅಗಮಿಸಿದ್ದೇವೆ. ಕೊಡಗಿನ ಪರ್ವತ ಶ್ರೇಣಿಗಳು ತುಂಬಾ ಸುಂದರವಾಗಿವೆ. ಈ ವರ್ಷ ಕಾಶ್ಮೀರಕ್ಕೆ ಹೋಗದೇ ಇದ್ದರೂ ಮುಂದಿನ ವರ್ಷ ನಾವುಗಳು ಕಾಶ್ಮೀರಕ್ಕೆ ಹೋಗುತ್ತೇವೆ ಎಂದಿದ್ದಾರೆ.

  • ಕಾಶ್ಮೀರದಲ್ಲಿ 48 ಪ್ರವಾಸಿ ತಾಣಗಳು ಬಂದ್‌ – ಉಗ್ರರ ಸಂಭಾವ್ಯ ದಾಳಿಯ ಎಚ್ಚರಿಕೆ ಕೊಟ್ಟ ಗುಪ್ತಚರ

    ಕಾಶ್ಮೀರದಲ್ಲಿ 48 ಪ್ರವಾಸಿ ತಾಣಗಳು ಬಂದ್‌ – ಉಗ್ರರ ಸಂಭಾವ್ಯ ದಾಳಿಯ ಎಚ್ಚರಿಕೆ ಕೊಟ್ಟ ಗುಪ್ತಚರ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu & Kashmir) ಸರ್ಕಾರವು ಭದ್ರತಾ ದೃಷ್ಟಿಯಿಂದ 48 ಪ್ರವಾಸಿ ತಾಣಗಳನ್ನು ಬಂದ್‌ ಮಾಡಿದೆ.

    ಕೇಂದ್ರಾಡಳಿತ ಪ್ರದೇಶದ ರೆಸಾರ್ಟ್‌ಗಳು, ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ. ಪಹಲ್ಗಾಮ್‌ನ ಸುಂದರವಾದ ಹುಲ್ಲುಗಾವಲುಗಳಲ್ಲಿ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಭದ್ರತಾ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಪಹಲ್ಗಾಮ್ ಅಟ್ಟಹಾಸದ ಬಳಿಕ ಪಾಕ್ ಪ್ರಜೆಗಳ ಗಡೀಪಾರು – 55,000 ಮಂದಿಗಿಲ್ಲ ಗಡೀಪಾರಿನ ಆತಂಕ!

    ನೈಸರ್ಗಿಕ ಸೊಬಗಿನ ತಾಣ ಸುಂದರ ಭೂದೃಶ್ಯಗಳ ಗುರೆಜ್ ಕಣಿವೆ ಸೇರಿದಂತೆ ಒಟ್ಟು 48 ತಾಣಗಳು ಪ್ರವಾಸಿಗರಿಗೆ ತಾತ್ಕಾಲಿಕ ಬಂದ್ ಮಾಡಲಾಗಿದೆ. ಪ್ರಶಾಂತ ಕಣಿವೆಗಳು ಮತ್ತು ಸುಂದರವಾದ ಪರ್ವತಗಳಿಗೆ ಹೆಸರುವಾಸಿಯಾದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಬುಡ್ಗಾಮ್‌ನ ದೂಧ್‌ಪತ್ರಿ ಮತ್ತು ಅನಂತ್‌ನಾಗ್‌ನ ವೆರಿನಾಗ್‌ನಂತಹ ಹಲವಾರು ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ನಿಷೇಧಿಸಲಾಗಿದೆ.

    ಸ್ಥಳೀಯರಿಗೆ ಪ್ರಮುಖ ಆದಾಯದ ಮೂಲವಾದ ಕಾಶ್ಮೀರ ಪ್ರವಾಸೋದ್ಯಮದ ಬಗ್ಗೆ ಅನಿಶ್ಚಿತತೆಯ ಮಧ್ಯೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹತ್ಯಾಕಾಂಡದ ನಂತರ ಭಯಭೀತರಾದ ಪ್ರವಾಸಿಗರು ಕೇಂದ್ರಾಡಳಿತ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ, ಆದರೆ ಅನೇಕ ಪ್ರಯಾಣಿಕರು ತಮ್ಮ ಮುಂಬರುವ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ. ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್‌’ ಅಂತ ಕೂಗಿದ ಜಿಪ್‌ಲೈನ್‌ ಆಪರೇಟರ್‌

    ಕೇವಲ ಒಂದು ವಾರದ ಹಿಂದೆ, ಪಹಲ್ಗಾಮ್ ಪಟ್ಟಣವು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯಾಗಿತ್ತು. ಆದರೆ, ಈಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

  • Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ

    Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ

    ಶ್ರೀನಗರ: ಪಲಹ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿ (Pahalgam Terror Attack) ಸಂಬಂಧ ಮತ್ತೊಂದು ವೀಡಿಯೋ ರಿಲೀಸ್ ಆಗಿದ್ದು, ಸೆಲ್ಫಿ ವೀಡಿಯೋ ಮಾಡುತ್ತಾ ಜಿಪ್‌ಲೈನ್‌ನಲ್ಲಿ ತೆರಳುತ್ತಿದ್ದ ಪ್ರವಾಸಿಗರೊಬ್ಬರ (Tourist) ಮೊಬೈಲ್‌ನಲ್ಲಿ ಉಗ್ರರ ದಾಳಿಯ ಭೀಕರ ದೃಶ್ಯಗಳು ಸೆರೆಯಾಗಿವೆ.

    ಅಹಮದಾಬಾದ್‌ನ ರಿಷಿ ಭಟ್ ಅವರ ಮೊಬೈಲ್‌ನಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದೆ. ಸೆಲ್ಫಿ ವೀಡಿಯೋ ಮಾಡುತ್ತಾ ಜಿಪ್‌ಲೈನ್‌ನಲ್ಲಿ ಹೋಗುವಾಗಲೇ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದೂ ಕೇಳಿದೆ. ಆದರೆ ಪ್ರವಾಸಿಗ ರಿಷಿ ಭಟ್‌ಗೆ ಇದರ ಅರಿವೇ ಇರಲಿಲ್ಲ. ತಮಗೆ ಅರಿವೇ ಇಲ್ಲದೇ ದಾಳಿಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಭಾರತ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು, ನಮ್ಮ ಪಡೆಗಳನ್ನೂ ಬಲಪಡಿಸಿದ್ದೇವೆ: ಪಾಕ್‌ ಸಚಿವ

    ರಿಷಿ ಜಿಪ್‌ಲೈನ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಕೆಳಗಡೆ ಪ್ರವಾಸಿಗರು ಏಕಾಏಕಿ ಓಡಲು ಶುರುಮಾಡುತ್ತಾರೆ. ಬಳಿಕ ಉಗ್ರನೊಬ್ಬ ಪ್ರವಾಸಿಗನ ತಲೆಗೆ ಗುಂಡು ಹೊಡೆಯುತ್ತಾನೆ. ಆ ಪ್ರವಾಸಿಗ ಅಲ್ಲೇ ಕುಸಿದು ಬಿದ್ದು ಉಸಿರು ಚೆಲ್ಲುತ್ತಾನೆ. ಈ ವೇಳೆ ದಾಳಿಯ ಅರಿವಾಗಿ ಜಿಪ್‌ಲೈನ್‌ನಲ್ಲಿದ್ದ ರಿಷಿ ಭಟ್ 15 ಫೀಟ್ ಎತ್ತರದಿಂದ ಕೆಳಗೆ ಹಾರಿ ಪತ್ನಿ ಮತ್ತು ಮಗುವಿನೊಂದಿಗೆ ಓಡುತ್ತಾರೆ. ಇದಕ್ಕೂ ಮುನ್ನ ರಿಷಿ ಭಟ್ ಅವರ ಪತ್ನಿ ಜೊತೆ ಇನ್ನೂ ಒಂದು ದಂಪತಿ ಇದ್ದರು. ಅವರ ಬಳಿ ಬಂದ ಉಗ್ರ ಅವರ ಧರ್ಮ ಕೇಳಿ ಅವರನ್ನು ಗುಂಡಿಕ್ಕಿ ಸಾಯಿಸುತ್ತಾನೆ. ಈ ವೇಳೆ ಜಿಪ್‌ಲೈನಲ್ಲಿದ್ದ ಕಾರಣ ನಾನು ಜೀವಂತವಾಗಿ ಉಳಿದಿದ್ದೇನೆ. ನನ್ನ ಕಣ್ಣಮುಂದೆಯೇ 16ರಿಂದ 18 ಜನ ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಸಾಯಿಸುವುದನ್ನು ನೋಡಿದ್ದೇನೆ ಎಂದು ಸ್ವತಃ ರಿಷಿ ಭಟ್ ಹೇಳಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ಎಗರಿಸಿದ ಖದೀಮರು

  • ಗೋವಾದಲ್ಲಿ ಪ್ಯಾರಾಗ್ಲೈಡಿಂಗ್‌ ವೇಳೆ ದುರಂತ – ಇಬ್ಬರು ಸಾವು

    ಗೋವಾದಲ್ಲಿ ಪ್ಯಾರಾಗ್ಲೈಡಿಂಗ್‌ ವೇಳೆ ದುರಂತ – ಇಬ್ಬರು ಸಾವು

    ಪಣಜಿ: ಪ್ಯಾರಾಗ್ಲೈಡಿಂಗ್ (Paragliding) ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಪ್ರತಿಯೊಬ್ಬರ ಕನಸು, ಪ್ಯಾರಾಗ್ಲೈಡಿಂಗ್ ಸಮಯದಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಇಂತಹ ಘಟನೆಯೊಂದು ಉತ್ತರ ಗೋವಾದಲ್ಲಿ (North Goa) ನಡೆದಿದೆ.

    ಪ್ಯಾರಾಗ್ಲೈಡಿಂಗ್ ವೇಳೆ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ, ಪ್ಯಾರಾಗ್ಲೈಡಿಂಗ್ ಮಹಿಳಾ ಪ್ರವಾಸಿ ಹಾಗೂ ಇನ್‌ಸ್ಟ್ರಕ್ಟರ್ ಸಾವಗೀಡಾಗಿದ್ದಾರೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ಅಪಘಾತದಲ್ಲಿ ಪುಣೆ ನಿವಾಸಿ ಶಿವಾನಿ ಮತ್ತು ಆಕೆಯ ಇನ್‌ಸ್ಟ್ರಕ್ಟರ್ ಸುಮಲ್ ನೇಪಾಲಿ ಸಾವನ್ನಪ್ಪಿದ್ದಾರೆ. ಇನ್ನು, ಪ್ಯಾರಾಗ್ಲೈಡಿಂಗ್‌ ಸಂಸ್ಥೆಯ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: 2 ಗ್ಯಾಸ್‌ ಸಿಲಿಂಡರ್‌ ಸ್ಫೋಟ – ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ, ಧಗಧಗಿಸಿದ ಜ್ವಾಲೆ

    ದೂರಿನನ್ವಯ ‘ಪ್ಯಾರಾಗ್ಲೈಡರ್’ ಟೇಕಾಫ್ ಆದ ತಕ್ಷಣ ಕಂದಕಕ್ಕೆ ಬಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಂಪನಿ ಮಾಲೀಕ ಶೇಖರ್ ವಿರುದ್ಧ ಮಾಂಡ್ರೆಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

  • ಸ್ಕ್ಯಾನ್‌ ಮಾಡಿ, ಹಂಪಿ ಶಿಲೆಗಳ ಸಂಗಿತ ಕೇಳಿ!

    ಸ್ಕ್ಯಾನ್‌ ಮಾಡಿ, ಹಂಪಿ ಶಿಲೆಗಳ ಸಂಗಿತ ಕೇಳಿ!

    ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿಗೆ (Hampi) ಬರುವ ಪ್ರವಾಸಿಗರು ಇನ್ನು ಮುಂದೆ ಸಂಗೀತದ (Music) ಸ್ವಾದವನ್ನು ಸವಿಯಬಹುದು.

    ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವತಿಯಿಂದ ಹಂಪಿಯ ವಿಜಯ ವಿಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿ ಸಂಗೀತದ ಕಂಬಗಳಿಗೆ ಪ್ರಯೋಗಿಕವಾಗಿ ಕ್ಯೂ ಆರ್ ಕೋಡನ್ನು ಅಳವಡಿಸಲಾಗಿದ್ದು, ಪ್ರವಾಸಿಗರು (Tourist) ಸ್ಕ್ಯಾನ್ ಮಾಡುವುದರ ಮೂಲಕ ಸಂಗೀತವನ್ನು ಕೇಳುವ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ:  ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಬೀಜಗಳ ಮಾರಾಟ ಹೆಚ್ಚಳ – ರೈತರಿಗೆ ಭಾರೀ ನಷ್ಟ

    ಪ್ರವಾಸಿಗರ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಂಬಕ್ಕೆ ಕ್ಯೂ ಆರ್ ಕೋಡ್ (Q R Code) ಅಳವಡಿಸುವ ಪ್ಲಾನ್ ಮಾಡಲಾಗಿದೆ. ಆರಂಭಿಕವಾಗಿ ಪ್ರವಾಸಿಗರು ಹಾಗೂ ಸ್ಥಳೀಯರ ಸಲಹೆಯ ಮೇಲೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ಸಂಗೀತವನ್ನು ಕೇಳಲು ಅನುಕೂಲವಾಗುತ್ತದೆಯಲ್ಲದೇ ಪ್ರವಾಸಿಗರನ್ನ ಹೆಚ್ಚು ಆಕರ್ಷಿಸುತ್ತದೆ.

     

  • ದಸರಾ ಹಿನ್ನೆಲೆ ಸಾಲು ಸಾಲು ರಜೆ – ನಂದಿಬೆಟ್ಟಕ್ಕೆ ಜನರ ದಂಡು

    ದಸರಾ ಹಿನ್ನೆಲೆ ಸಾಲು ಸಾಲು ರಜೆ – ನಂದಿಬೆಟ್ಟಕ್ಕೆ ಜನರ ದಂಡು

    ಚಿಕ್ಕಬಳ್ಳಾಪುರ: ನಾಡೆನೆಲ್ಲೆಡೆ ದಸರಾ (Dasara) ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಸಾಲು ಸಾಲು ರಜಾದಿನಗಳ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳತ್ತ ಪ್ರವಾಸಿಗರ ದಂಡೇ ಹರಿದುಬಂದಿದ್ದು, ವಿಶ್ವವಿಖ್ಯಾತ ನಂದಿಗಿರಿಧಾಮ (Nandi Hills) ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಬೆಳಗಿನಿಂದಲೂ ಸರಿಸುಮಾರು 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದು. ಇನ್ನೂ ಸರದಿ ಸಾಲಿನಲ್ಲೇ ಐದಾರು ಕಿ.ಮೀ ದೂರ ವಾಹನಗಳು ನಿಂತಿವೆ.

    ನಂದಿಬೆಟ್ಟ ನೋಡಲು ಆಗಮಿಸಿರುವ ಪ್ರವಾಸಿಗರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯುವಂತಾಗಿತು. ರಾಜಧಾನಿ ಬೆಂಗಳೂರಿನ (Bengaluru) ಜನವಂತೂ ಇಂದು ಬೆಳ್ಳಂಬೆಳಗ್ಗೆ ಕಾರು ಬೈಕ್‌ಗಳ ಮೂಲಕ ಗಿರಿಧಾಮಕ್ಕೆ ಲಗ್ಗೆಯಿಟ್ಟಿದ್ದರು. ಒಂದೇ ಸಮಯದಲ್ಲಿ ಸಾವಿರಾರು ಮಂದಿ ಯುವಕ, ಯುವತಿಯರು ಗಿರಿಧಾಮಕ್ಕೆ ಲಗ್ಗೆ ಹಾಕಿದ್ದರಿಂದ ಪ್ರವಾಸಿತಾಣ ಗಿರಿಧಾಮದಲ್ಲಿ ಜನ ಜಂಗುಳಿ, ಜನಜಾತ್ರೆ ಕಂಡು ಬಂದಿತು. ಇದನ್ನೂ ಓದಿ: ಸ್ವಾತಂತ್ರ್ಯದ ಬಳಿಕ ಮಡಿಕೇರಿ ದಸರಾ ಸಾಗಿ ಬಂದ ಹಾದಿ

    ನಾಮುಂದು ತಾಮುಂದು ಅಂತಾ ಜನ ಪ್ರವೇಶ ದ್ವಾರದಲ್ಲಿ ಮುಗಿಬಿದ್ದ ದೃಶ್ಯ ಕಂಡು ಬಂದಿದೆ. ಸ್ವಲ್ಪ ತಡವಾದರೂ ಗಿರಿಧಾಮದಲ್ಲಿ ಪ್ರವೇಶ ಸಿಗುತ್ತದೋ ಇಲ್ಲವೋ ಎಂದು ಬೆಳಿಗ್ಗೆ 5 ಗಂಟೆಗೆ ಆಗಮಿಸಿ ಪ್ರಕೃತಿ ಸೊಬಗನ್ನು ಸವಿದರು. ಆದರೆ ಟ್ರಾಫಿಕ್ ಕಿರಿ ಕಿರಿಯಿಂದ ಹಲವು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು. ಇನ್ನೂ ನಂದಿಗಿರಿಧಾಮದ ರಸ್ತೆಯಲ್ಲಿ ಎಲ್ಲಿ ನೋಡಿದರೂ ಒಂದೆಡೆ ಜನ, ಮತ್ತೊಂದೆಡೆ ವಾಹನಗಳ ಸಂದಣಿ ಕಾಣಿಸಿದೆ. ಗಿರಿಧಾಮದ ಮಿರ್ಜಾ ವೃತ್ತದಿಂದ ಬೆಟ್ಟದ ಕ್ರಾಸ್‌ವರೆಗೂ ಐದಾರು ಕಿ.ಮೀ ದೂರ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ಪ್ರವಾಸಿಗರು ಕೆಲವು ಗಂಟೆಗಳ ಕಾಲ ರಸ್ತೆಯಲ್ಲಿ ಪರದಾಡುವಂತಾಗಿತ್ತು. ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ಇದು ಕೊನೆಯ ವಿಜಯದಶಮಿ: ಮಹೇಶ್ ಟೆಂಗಿನಕಾಯಿ