Tag: tourism minister

  • ಪ್ರವಾಸಿ ಮಾರ್ಗದರ್ಶಿಗಳ ಅನ್ನ ಕಸಿದುಕೊಂಡ ಕೊರೊನಾ

    ಪ್ರವಾಸಿ ಮಾರ್ಗದರ್ಶಿಗಳ ಅನ್ನ ಕಸಿದುಕೊಂಡ ಕೊರೊನಾ

    ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ, ಬೇಲೂರು, ಹಳೇಬೀಡು ಸೇರಿದಂತೆ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ದೇಶ-ವಿದೇಶ, ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಪ್ರತಿನಿತ್ಯ ನೂರಾರು ಮಂದಿ ಚನ್ನಕೇಶವ ಹಾಗೂ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ದೇವಾಲಯದ ಇತಿಹಾಸದ ಬಗ್ಗೆ ತಿಳಿಸಲು ಸುಮಾರು ಮೂವತ್ತು ಮಂದಿ ಗೈಡ್‍ಗಳು ಜಿಲ್ಲೆಯಲ್ಲಿ ಪ್ರತಿನಿತ್ಯ ಕೆಲಸ ಮಾಡುತ್ತಾರೆ. ಆದರೆ ಕೊರೊನಾದಿಂದ ಪ್ರವಾಸಿಗರು ಕಡಿಮೆ ಬರುತ್ತಿದ್ದು, ಮಾರ್ಗದರ್ಶಿಗಳು ತುಂಬಾ ತೊಂದರೆಯಾಗಿದೆ. ಅಲ್ಲದೆ ಅವರಿಗೆ ತಮ್ಮ ದಿನನಿತ್ಯ ಜೀವನ ನಡೆಸಲು ಸಾಕಷ್ಟು ಕಷ್ಟವಾಗುತ್ತಿದೆ.

    ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸಿಗರು ನೀಡುವ ಅಷ್ಟೋ ಇಷ್ಟೋ ಹಣದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣ ದೇವಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದೆ. ಇದರಿಂದಾಗಿ ಮಾರ್ಗದರ್ಶಿಗಳಿಗೆ ದಿನದ ಸಂಪಾದನೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

    ಒಮ್ಮೆ ಲಾಕ್‍ಡೌನ್ ವೇಳೆ ಸರ್ಕಾರ ಐದು ಸಾವಿರ ಪರಿಹಾರ ನೀಡಿದ್ದನ್ನು ಬಿಟ್ಟರೆ ಇದುವರೆಗೂ ಇವರ ಕಷ್ಟ ಕೇಳುವವರಿಲ್ಲ. ಈ ಹಿಂದೆ ಪ್ರತಿನಿತ್ಯ ಮೂವತ್ತು ಮಂದಿ ಗೈಡ್ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದ ಪ್ರವಾಸಿಗರ ಕೊರತೆ ಎದುರಾಗಿದ್ದು, ಹದಿನೈದು ಮಂದಿಯಂತೆ ಎರಡು ಬ್ಯಾಚ್‍ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನ ಒಂದು ತಂಡ ಕೆಲಸ ಮಾಡಿದರೆ ಮಾರನೇ ದಿನ ಇನ್ನೊಂದು ಬ್ಯಾಚ್ ಕೆಲಸ ಮಾಡುತ್ತಿದೆ. ಒಬ್ಬರಿಗೆ ಆದಾಯ ಬಂದರೂ ಎಲ್ಲರೂ ಆ ಹಣವನ್ನು ಹಂಚಿಕೊಳ್ಳುತ್ತಿದ್ದಾರೆ. ಮಕ್ಕಳ ಶಾಲೆ ಫೀಸ್ ಕಟ್ಟಲು ಹಣವಿಲ್ಲದೆ ಪರದಾಡುವಂತಾಗಿದೆ ಎಂದು ಕಣ್ಣೀರುಡುತ್ತಿದ್ದಾರೆ.

    ರಾಜ್ಯದಲ್ಲಿ ಸುಮಾರು 600 ಮಂದಿ ಗೈಡ್‍ಗಳಿದ್ದು, ಅವರ ಜೀವನ ನಿರ್ವಹಣೆ ಹೇಳತೀರದಾಗಿದೆ. ಈಗಾಗಲೇ ಸರ್ಕಾರಕ್ಕೆ, ಸಂಬಂಧಪಟ್ಟ ಸಚಿವರಿಗೆ ಹತ್ತಾರು ಭಾರಿ ಮನವಿ ಸಲ್ಲಿಸಲಾಗಿದೆ. ಆದರೂ ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

    ಕುಟುಂಬ ನಿರ್ವಹಣೆಗೆ ಕೈಸಾಲ, ಬ್ಯಾಂಕ್ ಸಾಲ ಮಾಡಿದ್ದು, ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಈಗ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಪ್ರವಾಸಿಗರಿಗಾಗಿ ಕಣ್ಕಣ್ಣು ಬಿಟ್ಟು ಕಾಯುವಂತಾಗಿದೆ. ಇದು ಹೀಗಿಯೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಗೈಡ್‍ಗಳೇ ಇಲ್ಲದಂತಾಗುತ್ತಾರೆ. ಇನ್ನಾದರೂ ಸರ್ಕಾರ ಹಾಗೂ ಪ್ರವಾಸೋದ್ಯಮ ಸಚಿವರು ಇತ್ತ ಗಮನಹರಿಸಿ ಗೈಡ್‍ಗಳ ಹಿತಕಾಯಬೇಕಿದೆ.

  • ಮಡಿವಂತರೆಂದು ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೋಗೆ ದುಡ್ಡು ಸುರಿತಾರೆ: ಸಿಟಿ ರವಿ

    ಮಡಿವಂತರೆಂದು ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೋಗೆ ದುಡ್ಡು ಸುರಿತಾರೆ: ಸಿಟಿ ರವಿ

    ಉಡುಪಿ: ಕರ್ನಾಟಕದಲ್ಲಿ ಕ್ಯಾಸಿನೋ ಜೂಜು ಅಡ್ಡೆ ಆರಂಭಿಸಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿ ರಾಜ್ಯದ ಬೊಕ್ಕಸ ತುಂಬಿಸುವ ಯೋಜನೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆಯಾಗಿದೆ.

    ಕ್ಯಾಸಿನೋ ಸೆಂಟರ್ ತೆರಯಬೇಕೆಂದು ನಾನು ನೇರವಾಗಿ ಎಲ್ಲೂ ಹೇಳಿಲ್ಲ. ವಿದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೇಗಾಯಿತೆಂದು ಹೇಳಿದ್ದೇನಷ್ಟೇ ಎಂದು ಪ್ರವಾಸೋದ್ಯಮ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

    ಉಡುಪಿಯ ಕಾರ್ಕಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯೋಜನೆ ಸಿದ್ಧಪಡಿಸುವುದು ಸರ್ಕಾರದ ಕೆಲಸ. ನಾನು ಅಮೆರಿಕದಲ್ಲಿರುವ ವಾಸ್ತವಾಂಶವನ್ನಷ್ಟೇ ಹೇಳಿದ್ದೇನೆ. ಅಮೆರಿಕದಲ್ಲಿ ಸಾಕಷ್ಟು ಕ್ಯಾಸಿನೋ ಸೆಂಟರ್ ಗಳಿವೆ. ಕರ್ನಾಟಕದಿಂದ ಸಾಕಷ್ಟು ಮಂದಿ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಸಿಂಗಾಪುರ, ಶ್ರೀಲಂಕಾ ಕ್ಯಾಸಿನೋದಿಂದ ಪ್ರಸಿದ್ಧಿಯಾದ ದೇಶಗಳು. ಶ್ರೀಲಂಕಾ, ಲಾಸ್ ವೇಗಾಸ್‍ನಲ್ಲಿ ಭಾರತೀಯ ಪ್ರವಾಸಿಗರ ದಂಡೇ ಇದೆ ಎಂಬುದನ್ನು ಪ್ರಸ್ತಾವಿಸಿದ್ದೇನೆಯೇ ಹೊರತು, ಈ ಬಗ್ಗೆ ಯೋಜನೆ ಸಿದ್ಧಪಡಿಸಿಲ್ಲ ಎಂದು ಹೇಳಿದರು.

    ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಮ್ಮ ದೇಶದ ದುಡ್ಡು ವಿದೇಶಿ ಪ್ರವಾಸಿ ತಾಣಗಳಿಗೆ ಹರಿಯುತ್ತಿದೆ. ಅದನ್ನು ತಡೆಗಟ್ಟಬೇಕು. ಪ್ರವಾಸಿಗರು ವಿದೇಶಕ್ಕೆ ದುಡ್ಡು ಹರಿದರೆ ನಮ್ಮ ದೇಶಕ್ಕೆ ನಷ್ಟ. ವಿದೇಶಕ್ಕೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಪ್ರವಾಸಿ ತಾಣ ನಿರ್ಮಿಸುವ ಅಗತ್ಯವಿದೆ. ವಿದೇಶಿಗರನ್ನು ನಮ್ಮ ದೇಶಕ್ಕೆ ಸೆಳೆಯಬೇಕು, ನಮ್ಮವರಿಗೆ ಇಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗ ಸೃಷ್ಟಿಸುವ ಉದ್ದೇಶವೂ ನಮಗೆ ಇದೆ ಎಂದರು.

    ಗೋವಾ ರಾಜ್ಯ ಕ್ಲಬ್ ಹಾಗೂ ಪಬ್‍ನಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿ ಮಡಿವಂತರೆಂದು ಪ್ರದರ್ಶಿಸುವವರು ಅಲ್ಲಿ ದುಡ್ಡು ಸುರಿಯುತ್ತಿದ್ದಾರೆ. ಇದು ಕೇವಲ ಪ್ರವಾಸೋದ್ಯಮ ಇಲಾಖೆ ಯೋಜನೆ ಅಲ್ಲ. ಯೋಜನೆ ಆರಂಭಕ್ಕೆ ಮೊದಲು ಗೃಹ ಇಲಾಖೆ ಅಭಿಪ್ರಾಯ ಪಡೆದುಕೊಳ್ಳಬೇಕಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆಯಲ್ಲಿ ಹಲವಾರು ಚರ್ಚೆಯಾಗಿದೆ. ಕೃಷಿ ಟೂರಿಸಂ, ವಿಲೇಜ್ ಟೂರಿಸಂ, ರೈನ್ ಟೂರಿಸಂ, ಫುಡ್ ಟೂರಿಸಂ ಬಗ್ಗೆ ಹೇಳಿದ್ದೇನೆ. ಕೇವಲ ಕ್ಯಾಸಿನೋ ಬಗ್ಗೆ ಮಾತ್ರ ಉಲ್ಲೇಖವಾಗಿದೆ. ನಮ್ಮ ಸಂಸ್ಕೃತಿಗೆ ವಿರೋಧವಾಗುತ್ತೆ ನಿಜ. ನಮ್ಮ ದುಡ್ಡು ವಿದೇಶಕ್ಕೆ ಹರಿಯುತ್ತಿರುವುದು ಸತ್ಯ ಎಂದು ಹೇಳಿದರು.

  • ಕೇರಳ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ದೇವಾಲಯಗಳ ಅಭಿವೃದ್ಧಿ- ಸಚಿವ ಸಿಟಿ ರವಿ

    ಕೇರಳ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ದೇವಾಲಯಗಳ ಅಭಿವೃದ್ಧಿ- ಸಚಿವ ಸಿಟಿ ರವಿ

    ಹಾಸನ: ಕರ್ನಾಟಕದ ದೇವಸ್ಥಾನಗಳನ್ನು ಕೇರಳ ಹಾಗೂ ತಮಿಳುನಾಡು ಮಾದರಿಯಲ್ಲಿ ಅಭಿವೃದ್ದಿ ಮಾಡುವಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.

    ಬೇಲೂರು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಜಿಲ್ಲೆಗಳಲ್ಲಿರುವ ಪ್ರವಾಸಿ ತಾಣಗಳಿಗೆ ಶಿಘ್ರದಲ್ಲಿಯೇ ಭೇಟಿ ನೀಡುತ್ತೇನೆ. ವಿಶ್ವದ ಪ್ರವಾಸಿ ಕೇಂದ್ರವನ್ನಾಗಿ ಕರ್ನಾಟಕವನ್ನು ಬದಲಾವಣೆ ಮಾಡುತ್ತೇವೆ ಎಂದರು.

    ಇದೇ ವೇಳೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಕುರಿತು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಕೆಎಂಎಫ್ ಎಂಬುದು 80 ಲಕ್ಷ ಜನ ಜನರಿಗೆ ಉದ್ಯೋಗ ಕೊಟ್ಟಿದೆ. ಇದರ ಬಗ್ಗೆ ಹಗುರವಾಗಿ ಮಾತನಾಡಬಾರದು. ಅದು ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದರು.

    ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿ ಮಾಡಿರುವುದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ. ನಮ್ಮ ಪಾರ್ಟಿಯಲ್ಲಿ ಯಾರು ಏನು ಬೇಕಾದರೂ ಆಗಬಹುದು. ಪತ್ರಕರ್ತರಿಗೆ ಟಿಕೆಟ್ ಕೊಟ್ಟು ಸಂಸದನಾಗಿ ಗೆಲ್ಲಿಸಿರುವುದು ಇದಕ್ಕೆ ಪ್ರಮುಖ ಉದಾಹರಣೆಯಾಗಿದೆ ಎಂದರು.

    ಡಿಕೆಶಿ ಇಡಿ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನಿನಡಿಯಲ್ಲಿ ಎಲ್ಲವನ್ನೂ ಎದುರಿಸಬೇಕು ಅದು ಯಾವುದೇ ಪಕ್ಷದ ರಾಜಕಾರಣಿ ಆಗಿರಬಹುದು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿಸಿದರು.

  • ಸಿದ್ದರಾಮಯ್ಯ ಕಾಲು ಜಾರದೆ ಎಚ್ಚರದಿಂದಿರಲಿ- ಸಿ.ಟಿ ರವಿ ಟಾಂಗ್

    ಸಿದ್ದರಾಮಯ್ಯ ಕಾಲು ಜಾರದೆ ಎಚ್ಚರದಿಂದಿರಲಿ- ಸಿ.ಟಿ ರವಿ ಟಾಂಗ್

    ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕರು ಎಂದು ಅಂದುಕೊಂಡಿದ್ದೆ. ಆದರೆ ಅವರ ಪಕ್ಷದಲ್ಲಿ ಇನ್ನೂ ವಿರೋಧ ಪಕ್ಷದ ನಾಯಕರನ್ನ ನೇಮಕ ಮಾಡಿಲ್ಲ. ಸಿದ್ದರಾಮಯ್ಯ ಅವರ ಕಾಲು ಎಳೆಯೋ ಕೆಲಸ ಅವರ ಪಕ್ಷದಲ್ಲೇ ನಡೆಯುತ್ತಿದ್ದು, ಅವರು ಕಾಲು ಜಾರದೆ ಎಚ್ಚರದಿಂದ ಇರಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಧ್ಯಂತರ ಚುನಾವಣೆ ಬರುತ್ತೆ ಎಂಬ ಮಾಜಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಮೂಢನಂಬಿಕೆ ನಿಷೇಧ ಮಸೂದೆ ತರುವುದಕ್ಕೆ ಹೊರಟಿದ್ದರು. ಅವರು ಭವಿಷ್ಯ ಹೇಳೋದನ್ನ ಯಾವತ್ತಿಂದ ಶುರುಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಸರ್ಕಾರ ಇನ್ನೂ ಮೂರು ವರ್ಷ 9 ತಿಂಗಳು ಇರುತ್ತದೆ. ದೀರ್ಘಾವಧಿಯ ಯೋಜನೆಗಳನ್ನ ಜಾರಿಗೆ ತರುತ್ತೇವೆ. ಆ ಬಗ್ಗೆ ಅನುಮಾನ ಬೇಡ ಎಂದು ಭರವಸೆ ನೀಡಿದರು.

    ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕ ಅಂದುಕೊಂಡಿದ್ದೆವು. ಅವರಲ್ಲಿ ಇನ್ನೂ ಪ್ರತಿಪಕ್ಷ ನಾಯಕ ಯಾರೆಂದು ನಿರ್ಧಾರ ಆಗಿಲ್ಲ. ಕಾಂಗ್ರೆಸ್ಸಿನಲ್ಲೇ ಸಿದ್ದರಾಮಯ್ಯ ಅವರ ಕಾಲೆಳೆಯೋರು ಜಾಸ್ತಿಯಾಗಿದ್ದಾರೆ. ಸಿದ್ದರಾಮಯ್ಯ ಮೊದಲು ತಮ್ಮ ಕಾಲು ಯಾರೂ ಎಳೆಯದಂತೆ ನೋಡಿಕೊಳ್ಳಲಿ. ನಮ್ಮ ಸರ್ಕಾರ ಟೇಕಾಫ್ ಆಗಿದೆ. ನಮ್ಮ ಸರ್ಕಾರ ಕಾರ್ಯಾರಂಭ ಮಾಡಿ ತಿಂಗಳಾಗಿದೆ ಎಂದು ತಿರುಗೇಟು ನಿಡಿದೆ.

    ಇದೇ ವೇಳೆ ಚಿಕ್ಕಮಗಳೂರಿನಲ್ಲಿ ಸಿಎಂ ಕಾಟಾಚಾರದ ಪರಿಶೀಲನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಂಗಳವಾರ ಸಿಎಂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. ಕಾಟಾಚಾರದ ಭೇಟಿ ಎನ್ನುವುದು ಸುಳ್ಳು. ವಾತಾವರಣದ ಕಾರಣ ಹೆಲಿಕಾಪ್ಟರ್ ಲ್ಯಾಂಡ್ ಆಗಲು ವಿಳಂಬವಾಯಿತು ಎಂದರು.

    ಮೂಡಿಗೆರೆ ತಾಲೂಕಿನ ಮನೆಮಲೆ ಗ್ರಾಮದ ಸ್ಥಿತಿ ನೋಡಿದ್ದಾರೆ. ಅನ್ನ ಬೆಂದಿದೆಯೋ ಎಂದು ತಿಳಿಯಲು ಎಲ್ಲ ಅಕ್ಕಿಯನ್ನು ಮುಟ್ಟಿ ನೋಡಬೇಕಿಲ್ಲ. ಇನ್ನೂ ನಾಲ್ಕೈದು ಗ್ರಾಮಕ್ಕೆ ಹೋಗಬೇಕಿತ್ತು. ಆದರೆ ಸಮಯದ ಅಭಾವದಿಂದ ಹೋಗಲು ಆಗಿಲ್ಲ. ಇನ್ನುಳಿದ ಪ್ರವಾಹ ಪೀಡಿತ ಪ್ರದೇಶದ ವಿಡಿಯೋ ತೋರಿಸುತ್ತೇವೆ. ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಸಭೆ ನಡೆಯಲಿದೆ ಎಂದುಸಚಿವ ಸಿ ಟಿ ರವಿ ಸ್ಪಷ್ಟನೆ ನೀಡಿದರು.