Tag: Tour

  • ವಿದೇಶ ಪ್ರವಾಸದಿಂದ ಚಾಲೆಂಜಿಂಗ್ ಸ್ಟಾರ್ ವಾಪಸ್- ಒಂದು ವಾರ ವಿದೇಶದಲ್ಲಿ ಏನೇನೆಲ್ಲಾ ಮಾಡಿದ್ರು ಗೊತ್ತಾ?

    ವಿದೇಶ ಪ್ರವಾಸದಿಂದ ಚಾಲೆಂಜಿಂಗ್ ಸ್ಟಾರ್ ವಾಪಸ್- ಒಂದು ವಾರ ವಿದೇಶದಲ್ಲಿ ಏನೇನೆಲ್ಲಾ ಮಾಡಿದ್ರು ಗೊತ್ತಾ?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಶೂಟಿಂಗ್‍ಗಾಗಿ ವರ್ಷಕ್ಕೆ ನಾಲ್ಕು ಬಾರಿಯಾದರೂ ವಿದೇಶಕ್ಕೆ ಹೋಗೋದು ಸಾಮಾನ್ಯ. ಈ ಹಿಂದೆ ಕೂಡ ಎಷ್ಟೋ ಬಾರಿ ಲಂಡನ್‍ಗೆ ದಾಸ ಭೇಟಿ ನೀಡಿದ್ದರು. ಆದರೆ ಈ ಬಾರಿ ಲಂಡನ್ ನಲ್ಲಿ ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್ ಪಡೆದುಕೊಂಡು ಹಾಗೇ ಟ್ರಿಪ್ ಮುಗಿಸಿಕೊಂಡು ಮರಳಿದ್ದಾರೆ.

    ದರ್ಶನ್ ಅವರ ಈ ಬಾರಿಯ ಲಂಡನ್ ಪ್ರವಾಸ ಹಿಂದಿನಂತಿರಲಿಲ್ಲ. ಒಬ್ಬ ಸಾಮಾನ್ಯ ಪ್ರವಾಸಿನಾಗಿ ಹೋಗಿದ್ದರೇ ಹೊರತು ನಟನಾಗಿ ಹೋಗಿರಲಿಲ್ಲ. ಕಳೆದ ವಾರ 18ಕ್ಕೆ ಮಗ ವಿನೀಶ್ ಹಾಗೂ ಸ್ನೇಹಿತ ಮಲ್ಲಿಕಾರ್ಜುನ್ ಜೊತೆ ಲಂಡನ್‍ಗೆ ತೆರಳಿದ್ದು, ಒಂದು ವಾರ ಯೂರೋಪ್ ಟ್ರಿಪ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ತನ್ನ ಮಗನೊಂದಿಗೆ ಅಪರೂಪದ ಪ್ರವಾಸವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಲಂಡನ್‍ನಲ್ಲಿ ವಿಶೇಷ ಕಾರ್ಯಕ್ರಮವೊಂದರಲ್ಲಿ ಸಂದರ್ಶನವನ್ನೂ ಕೊಟ್ಟು ಬಂದಿದ್ದಾರೆ.

    ಅಕ್ಟೊಬರ್ 19ಕ್ಕೆ ಪ್ರಶಸ್ತಿ ಪಡೆದಕೊಂಡು ನಂತರ ಲಂಡನ್ ಸ್ನೇಹಿತರ ಜೊತೆಗೂಡಿ ಜಾಲಿ ಟೂರ್ ಮಾಡಿದ್ದಾರೆ. ಅಲ್ಲಿನ ಕಲರ್‍ಫುಲ್ ಸ್ಥಳಗಳನ್ನು ನೋಡಿ, ಉಳಿದೆಲ್ಲ ಕೆಲಸದ ಟೆನ್ಷನ್ ಅನ್ನು ಪಕ್ಕಕ್ಕಿಟ್ಟು ಸಾದಾಸೀದಾ ತಂದೆಯಂತೆ ಮಗನಿಗೆ ಇಷ್ಟವಾದ ಊಟ ತಿಂಡಿ ಕೊಡಿಸಿ ಪ್ರವಾಸ ಮುಗಿಸಿದ್ದಾರೆ.

    ಲಂಡನ್‍ನಲ್ಲಿ ಕನ್ನಡಿಗರ ದೊಡ್ಡ ಕೂಟವೇ ಇದೆ. ಅಲ್ಲಿನ ಅಭಿಮಾನಿಗಳಿಗಾಗಿ ದಚ್ಚು ಪ್ರಖ್ಯಾತ ಬಿಬಿಸಿ ರೇಡಿಯೋ ಕಚೇರಿಗೆ ತೆರಳಿ ವಿಶೇಷ ಸಂದರ್ಶನ ನೀಡಿ ಬಂದಿದ್ದಾರೆ.

    ದರ್ಶನ್ ಸಿನಿಮಾಗಳು ಮಾತ್ರವಲ್ಲದೇ ಪ್ರಸ್ತುತ ಕನ್ನಡ ಚಿತ್ರಗಳು ಇಂಗ್ಲೆಂಡಿನಲ್ಲಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಈ ಹಿಂದೆ ತಮ್ಮ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವ ವೇಳೆ ಲಂಡನ್‍ಗೆ ಶಿವಣ್ಣ, ರಕ್ಷಿತ್ ಶೆಟ್ಟಿ, ಗಣೇಶ್ ಸೇರಿದಂತೆ ಅನೇಕ ನಟರು ಬಿಬಿಸಿಗೆ ತೆರಳಿ ಸಂದರ್ಶನ ನೀಡಿದ್ದರು. ಹಾಗೆಯೇ ದರ್ಶನ್ ಕೂಡ ಬಿಬಿಸಿ ರೇಡಿಯೋದಲ್ಲಿ ಮಾತನಾಡಿ ಬಂದಿದ್ದಾರೆ.

    ಕಳೆದ ಮಂಗಳವಾರ ಯುರೋಪ್ ಪ್ರವಾಸದಿಂದ ವಾಪಸ್ಸಾದ ದರ್ಶನ್ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ನಂತರ 28 ರಂದು ಹೈದ್ರಾಬಾದ್‍ಗೆ ತೆರಳಿ ಕುರುಕ್ಷೇತ್ರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

     

  • ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ಸರಣಿ: ಯಾವ ದಿನ ಎಲ್ಲಿ ಪಂದ್ಯ?

    ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ಸರಣಿ: ಯಾವ ದಿನ ಎಲ್ಲಿ ಪಂದ್ಯ?

    ಮುಂಬೈ: ಭಾರತ ಪ್ರವಾಸವನ್ನು ಕೈಗೊಳ್ಳಲಿರುವ ಶ್ರೀಲಂಕಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ ವಿರಾಟ್ ಪಡೆಯನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.

    ನವೆಂಬರ್ 16 ರಿಂದ ಡಿಸೆಂಬರ್ 24ರ ವರೆಗೆ ಶ್ರೀಲಂಕಾ ಭಾರತ ನೆಲದಲ್ಲಿ ಆಡಲಿದೆ. ನವೆಂಬರ್ 11 ರಿಂದ 13ರ ವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ಶ್ರೀಲಂಕಾ ಅಭ್ಯಾಸ ಪಂದ್ಯವನ್ನು ಆಡಲಿದೆ. ನವೆಂಬರ್ 16ರಿಂದ 20ರವರೆಗೆ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ.

    ಟೆಸ್ಟ್ ವೇಳಾಪಟ್ಟಿ
    ಮೊದಲ ಟೆಸ್ಟ್-ನವೆಂಬರ್ 16-20
    ಎರಡನೇ ಟೆಸ್ಟ್-ನವೆಂಬರ್ 24-28
    ಮೂರನೇ ಟೆಸ್ಟ್ ಡಿಸೆಂಬರ್ 2-6

    ಏಕದಿನ ಕ್ರಿಕೆಟ್ ವೇಳಾಪಟ್ಟಿ
    ಡಿಸೆಂಬರ್ 10 – ಧರ್ಮಶಾಲಾ
    ಡಿಸೆಂಬರ್ 13 – ಮೊಹಾಲಿ
    ಡಿಸೆಂಬರ್ 17 – ವೈಜಾಗ್

    ಟಿ-20 ವೇಳಾಪಟ್ಟಿ
    ಡಿಸೆಂಬರ್ 20 – ಕಟಕ್
    ಡೆಸಂಬರ್ 22 – ಇಂದೋರ್
    ಡಿಸೆಂಬರ್ 24 -ಮುಂಬೈ

    ಇದನ್ನೂ ಓದಿ: ಭಾರತ, ಶ್ರೀಲಂಕಾ ಟಿ-20ಯಲ್ಲಿ ಟಾಸ್ ಗೆದ್ದವರು ಯಾರು: ಈ ವಿಡಿಯೋ ನೋಡಿ

  • ಜನ ಐಸ್‍ಲ್ಯಾಂಡಿಗೆ ಪ್ರವಾಸ ಯಾಕೆ ಹೋಗ್ತಾರೆ? ಅಂಥ ವಿಶೇಷತೆ ಏನಿದೆ?

    ಜನ ಐಸ್‍ಲ್ಯಾಂಡಿಗೆ ಪ್ರವಾಸ ಯಾಕೆ ಹೋಗ್ತಾರೆ? ಅಂಥ ವಿಶೇಷತೆ ಏನಿದೆ?

    ಸುತ್ತಲು ನೀರು, ಅಷ್ಟೇ ಅಲ್ಲದೇ ಮಂಜುಗೆಡ್ಡೆ, ಇದರ ಜೊತೆ ಜ್ವಾಲಾಮುಖಿಗಳು ಒಂದೇ ಕಡೆ ಇರುವುದು ಅಪರೂಪ. ಆದರೆ ಯುರೋಪ್ ಖಂಡದಲ್ಲಿರುವ ಐಸ್‍ಲ್ಯಾಂಡ್‍ಗೆ ನೀವು ಪ್ರವಾಸ ಹೋದರೆ ನೀವು ಈ ಮೂರು ದೃಶ್ಯಗಳನ್ನು ಕಣ್ತುಂಬಿ ನೋಡಬಹುದು.

    ಯುರೋಪ್ ಖಂಡ ಮತ್ತು ಗ್ರೀನ್ ಲ್ಯಾಂಡ್ ಮಧ್ಯೆ ಇರುವ ಅಟ್ಲಾಂಟಿಕ್ ಮಹಾಸಾಗರದಲ್ಲಿ ಐಸ್‍ಲ್ಯಾಂಡ್ ದ್ವೀಪವಿದೆ. ಪ್ರಪಂಚದ 18ನೇ ದೊಡ್ಡ ದ್ವೀಪ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಐಸ್‍ಲ್ಯಾಂಡ್ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಐಸ್‍ಲ್ಯಾಂಡ್‍ನ ಜಿಡಿಪಿಯಲ್ಲಿ ಶೇ.5ರಷ್ಟು ಪಾಲನ್ನು ಪಡೆದುಕೊಂಡಿರುವುದು ಪ್ರವಾಸೋದ್ಯಮದ ಹೆಗ್ಗಳಿಕೆ.

    ಕಳೆದ 15 ವರ್ಷದಲ್ಲಿ ಪ್ರವಾಸೋದ್ಯಮ ಉದ್ಯಮ ಭಾರೀ ಬೆಳವಣಿಗೆಯಾಗಿದ್ದು ಜುಲೈ- ಸೆಪ್ಟೆಂಬರ್ ನಡುವಿನ ಬೇಸಿಗೆಯ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಐಸ್‍ಲ್ಯಾಂಡಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಐಸ್‍ಲ್ಯಾಂಡ್ ನಲ್ಲಿ ಅಂಥ ವಿಶೇಷತೆ ಏನಿದೆ? ನೀವು ಯಾಕೆ ತೆರಳಬೇಕು ಎನ್ನುವುದಕ್ಕೆ ಟಾಪ್ 10 ಕಾರಣಗಳನ್ನು ಇಲ್ಲಿ ನೀಡಲಾಗಿದೆ.

    #1. ನೀವು ಗಮನಿಸಿರಬಹುದು ಭಾರತದಲ್ಲಿ ಮಧ್ಯಾಹ್ನದ ವೇಳೆ ಸೂರ್ಯ ನಡು ನೆತ್ತಿಯಲ್ಲಿ ಇರುತ್ತಾನೆ. ಆದರೆ ಐಸ್‍ಲ್ಯಾಂಡ್‍ನಲ್ಲಿ ಸೂರ್ಯ ನಡು ನೆತ್ತಿಗೆ ಬರೋದಿಲ್ಲ. ಉತ್ತರಧ್ರುವದ ಹತ್ತಿರ ಐಸ್‍ಲ್ಯಾಂಡ್ ಇರುವ ಕಾರಣ ಅಲ್ಲಿ ಸೂರ್ಯನ ಬೆಳಕು ಅಷ್ಟಾಗಿ ಬೀಳುವುದಿಲ್ಲ. ಗರಿಷ್ಟ ಅಂದ್ರೆ ಬೆಳಗ್ಗೆ 9 ಗಂಟೆಗೆ ಭಾರತದಲ್ಲಿ ಸೂರ್ಯ ಹೇಗೆ ಕಾಣುತ್ತಾನೋ ಅದೇ ರೀತಿಯಾಗಿ ಮಧ್ಯಾಹ್ನದ ಅವಧಿಯಲ್ಲಿ ಅಲ್ಲಿ ಕಾಣುತ್ತಾನೆ.

    #2. ಬೆಂಗಳೂರು ಮಹಾನಗರದಲ್ಲಿರುವ ಜನಸಂಖ್ಯೆ ಸುಮಾರು 1 ಕೋಟಿ. ಆದರೆ ಐಸ್‍ಲ್ಯಾಂಡ್‍ನಲ್ಲಿರುವ ಒಟ್ಟು ಜನಸಂಖ್ಯೆಯೇ 3 ಲಕ್ಷ ಮಂದಿ. 39,682 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ದೇಶದ ಈ ಜನಸಂಖ್ಯೆ 2/3ರಷ್ಟು ಜನ ರಾಜಧಾನಿಯಾದ ರೆಕ್ಟವಿಕ್‍ನಲ್ಲಿ ವಾಸಿಸುತ್ತಿದ್ದಾರೆ. ಉಳಿದ ಕಡೆ ಜನಸಂಖ್ಯೆ ಹೇಗಿದೆ ಅಂದರೆ ಪೂರ್ವ ಭಾಗದಲ್ಲಿ ನೀವು ರಸ್ತೆಯಲ್ಲಿ ಸಂಚರಿಸಿದರೆ ಹಲವು ಕಿಲೋಮೀಟರ್ ದೂರಕ್ಕೆ ಒಂದೊಂದು ಮನೆ ಕಾಣಸಿಗುತ್ತದೆ. ಕೆಲವು ಕಡೆ 100 ಕಿ.ಮೀ -200 ಕಿ.ಮೀ ಅಂತರದಲ್ಲಿ ಮನೆ ಕಾಣಸಿಗುತ್ತದೆ.

    #3. ಚಳಿಗಾಲದಲ್ಲಿ ಸಂಪೂರ್ಣ ಐಸ್‍ಲ್ಯಾಂಡ್ ದೇಶವೇ ಮಂಜಿನಿಂದ ಆವೃತವಾಗಿರುತ್ತದೆ. ಅಟ್ಲಾಂಟಿಕ್ ವಲಯದಲ್ಲಿದ್ದರೂ ಕನಿಷ್ಠ ಉಷ್ಣಾಂಶ ಮೈನಸ್ 10 ಡಿಗ್ರಿಗೆ ಇಳಿಯುತ್ತದೆ. ಹತ್ತಿರದಲ್ಲೇ ಗಲ್ಫ್ ಸ್ಟ್ರೀಮ್ ಇರುವ ಕಾರಣ ಅಲ್ಲಿಯ ಬಿಸಿಗಾಳಿಯಿಂದಾಗಿ ಐಸ್‍ಲ್ಯಾಂಡ್ ಸ್ವಲ್ಪ ಬೆಚ್ಚಗೆ ಇರುತ್ತದೆ.

    #4. ಉತ್ತರದಿಂದ ಮೂಡುವ ಸೂರ್ಯನ ಬೆಳಕುಗಳನ್ನು ವೀಕ್ಷಿಸಲು ಐಸ್‍ಲ್ಯಾಂಡ್ ಹೇಳಿ ಮಾಡಿಸಿದ ಸ್ಥಳ.

    #5. ಐಸ್‍ಲ್ಯಾಂಡ್ ಅನ್ನು ನೀವು ಎರಡೂ ರೀತಿಯಲ್ಲಿ ನೋಡಬಹುದು. ಚಳಿಗಾಲದಲ್ಲಿ ಸಂಪೂರ್ಣ ಮಂಜು ಆವರಿಸಿ, ಬಹುತೇಕ ರಸ್ತೆಗಳು ಸಂರ್ಪೂಣವಾಗಿ ಬಂದ್ ಆಗಿರುತ್ತದೆ. ಬಹುತೇಕ ಜಲಪಾತಗಳು ಹೆಪ್ಪುಗಟ್ಟಿರುತ್ತವೆ. ಆದರೆ ಬೇಸಿಗೆಯಲ್ಲಿ ರಸ್ತೆಗಳು ಓಪನ್ ಆಗಿರುತ್ತದೆ. ಜೂನ್, ಜುಲೈ ಸೆಪ್ಟೆಂಬರ್ ಅವಧಿಯಲ್ಲಿ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಐಸ್‍ಲ್ಯಾಂಡ್‍ಗೆ ಭೇಟಿ ನೀಡುತ್ತಾರೆ.

    #6. ಅತಿಹೆಚ್ಚು ಗಾಳಿ ಬೀಸೋ ದೇಶಗಳ ಪಟ್ಟಿಯಲ್ಲಿ ಐಸ್‍ಲ್ಯಾಂಡಿಗೆ ವಿಶ್ವದಲ್ಲೇ ಎರಡನೇ ಸ್ಥಾನ. ಗಾಳಿ ಎಷ್ಟು ರಭಸವಾಗಿ ಬೀಸುತ್ತದೆ ಎಂದರೆ ಕೆಲವೊಮ್ಮೆ ಕಾರುಗಳನ್ನೇ ಅಲುಗಾಡಿಸಿ ಬಿಡುತ್ತದೆ. ಹೊರಗಡೆ ನಿಲ್ಲುವುದಂತೂ ಅಸಾಧ್ಯವಾದ ಮಾತು. ಕೊಠಡಿಗಳನ್ನು ಬುಕ್ ಮಾಡಿದ್ರೆ ಗಾಳಿ ಬೀಸುವ ಕಡೆ ಓಪನ್ ಮಾಡದಿರುವಂತೆ ಕಂಪೆನಿಗಳು ಪ್ರವಾಸಿಗರಿಗೆ ಸೂಚಿಸುತ್ತವೆ. ಒಂದು ವೇಳೆ ಓಪನ್ ಮಾಡಿದರೆ ಗಾಳಿಯ ರಭಸಕ್ಕೆ ಬಾಗಿಲು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಕೆಲವೊಂದು ಕಡೆಯಲ್ಲಿ ಮುರಿದು ಬಿದ್ದಿರುವ ಉದಾಹರಣೆ ಇದೆಯಂತೆ.

    #7. ಐಸ್‍ಲ್ಯಾಂಡ್ ದ್ವೀಪದೇಶವಾಗಿರುವದರಿಂದ ಸುತ್ತಲೂ ಸಮುದ್ರ ಇದೆ ಎನ್ನುವುದು ನಿಮಗೆ ತಿಳಿದಿದೆ. ಆದರೆ ಈ ಸಮುದ್ರದ ದಂಡೆಯ ಭಾರತೀಯರಿಗೆ ವಿಶೇಷವಾಗಿ ಕಂಡರೆ ಆಶ್ಚರ್ಯ ಏನಿಲ್ಲ. ಭಾರತದ ಸಮುದ್ರದಲ್ಲಿ ಬಿಳಿ ಮರಳು ಸಿಕ್ಕಿದರೆ ಅಲ್ಲಿ ಒಂದೆ ಒಂದು ಕಡೆ ಬಿಳಿ ಮರಳು ಸಿಗೋದಿಲ್ಲ. ಅಲ್ಲಿ ಕಪ್ಪು ಬಣ್ಣದ ಮರಳು ಮಾತ್ರ ಸಿಗುತ್ತದೆ. ಇದು ಅಲ್ಲಿನ ಮತ್ತೊಂದು ವಿಶೇಷತೆ.

    #8. ಕಪ್ಪು ಮರಳು ಸಮುದ್ರದ ದಂಡೆಯಲ್ಲಿ ಯಾಕೆ ಸಿಗುತ್ತೆ ಅಂತ ನೀವು ಕೇಳಬಹುದು. ಅದಕ್ಕೂ ಕಾರಣ ಇದೆ. ಅಲ್ಲಿ ಜ್ವಾಲಾಮುಖಿಗಳು ಸಾಮಾನ್ಯ. ಈ ಹಿಂದಿನ ಒಂದು ಜ್ವಾಲಾಮುಖಿ ಸುಮಾರು 1 ವರ್ಷಗಳ ಕಾಲ ಜೀವಂತವಾಗಿತ್ತು. ಜ್ವಾಲಾಮುಖಿ ಇರುವಿಕೆ ಪತ್ತೆಯಾದರೆ ಆ ಸ್ಥಳವನ್ನು ಸಂಪರ್ಕಿಸುವ ರಸ್ತೆಗಳ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಈ ವೇಳೆ ಸ್ಥಳೀಯ ಕಂಪೆನಿಗಳು ಇದನ್ನು ವೀಕ್ಷಿಸಲೆಂದೇ ಹೆಲಿಕಾಪ್ಟರ್ ಟೂರ್‍ಗಳನ್ನು ಆಯೋಜಿಸುತ್ತದೆ.

    #9 ದೇಶದ ಹೆಸರಿನಲ್ಲಿ ‘ಐಸ್’ ಇದೆ. ಹೀಗಾಗಿ ಐಸ್‍ಲ್ಯಾಂಡಿನಲ್ಲಿ ದೊಡ್ಡ ದೊಡ್ಡ ಹಿಮದ ಪರ್ವತಗಳಿರುವುದು ಇಲ್ಲಿ ಇರುವುದು ಸಾಮಾನ್ಯ. ಅದರಲ್ಲೂ ವಟನ್‍ಜೋಕುಲ್ ಹೆಸರಿನ ಗೆಡ್ಡೆ ಐಸ್‍ಲ್ಯಾಂಡ್ ಭೂಮಿಯ ಶೇ.8ರಷ್ಟು ಜಾಗದಲ್ಲಿ ಆವರಿಸಿಕೊಂಡಿದೆ. ಹಿಮದ ಗೆಡ್ಡೆಗಳಿರುವ ಪ್ರದೇಶಗಳಲ್ಲಿ ಹೋಗುವಾಗ ಜಾಗೃತೆಯಿಂದ ಇರಬೇಕಾಗುತ್ತದೆ. ಸ್ಥಳೀಯ ಗೈಡ್‍ಗಳ ಸಹಕಾರವಿಲ್ಲದೇ ಇಲ್ಲಿ ನಡೆಯಲು ಸಾಧ್ಯವೇ ಇಲ್ಲ.

    #10 ಪ್ರಾಕೃತಿಕ ಸೌಂದರ್ಯ ಹೊರತುಪಡಿಸಿ ಐಸ್‍ಲ್ಯಾಂಡಿನ ಮತ್ತೊಂದು ವಿಶೇಷ ಏನೆಂದರೆ ಅಲ್ಲಿ ಶುದ್ಧವಾದ ಗಾಳಿಯನ್ನು ಮಾರಾಟ ಮಾಡಲಾಗುತ್ತದೆ. ಹೌದು ಬಹುತೇಕ ಅಂಗಡಿಗಳು “ಫ್ರೆಶ್ ಐಸ್‍ಲ್ಯಾಂಡಿಕ್ ಮೌಂಟೇನ್ ಏರ್” ಹೆಸರಿನ್ ಸಣ್ಣ ಟಿನ್‍ನಲ್ಲಿ ಗಾಳಿಯನ್ನು ಮಾರಾಟ ಮಾಡುತ್ತಿವೆ. ಒಂದು ಟಿನ್‍ಗೆ ಭಾರತ ಬೆಲೆ 600 ರೂ. ಅಷ್ಟೇ!.

    ಐಸ್‍ಲ್ಯಾಂಡ್ ಬಗ್ಗೆ ನೀವು ಈ ಬರಹ ಓದಿ ತಿಳಿದುಕೊಂಡಾಯ್ತು. ನೀವು ಈಗ ಅಲ್ಲಿಗೆ ಪ್ರವಾಸಕ್ಕೆ ಹೋಗಬೇಕು ಎಂದರೆ ನಿಮಗೆ ಒಂದು ಸುವರ್ಣ ಅವಕಾಶವಿದೆ. wildvoyager ಸಂಸ್ಥೆಯವರು ಐಸ್‍ಲ್ಯಾಂಡ್ ಪ್ರವಾಸವನ್ನು ಆಯೋಜಿಸಿದೆ. ಈ ಪ್ರವಾಸದ ಮೊದಲ ಬ್ಯಾಚ್ ಜೂನ್ 24ಕ್ಕೆ ಐಸ್‍ಲ್ಯಾಂಡಿಗೆ ತೆರಳಲಿದೆ

    ದೆಹಲಿ ಮೂಲದ ವೈಲ್ಡ್ ಲೈಫ್ ಫೋಟೋಗ್ರಾಫಿಯಲ್ಲಿ ಆಸಕ್ತಿ ಇರುವ ಅಲಂಕಾರ್ ಚಂದ್ರ ಎಂಬವರು ಈ ಸಂಸ್ಥೆಯನ್ನು ಹುಟ್ಟಿ ಹಾಕಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್ ನಲ್ಲಿ ಇವರ ಬರಹಗಳು ಪ್ರಕಟಗೊಂಡಿದ್ದು, ಹಲವಾರು ದೇಶಗಳಿಗೆ ಈ ಸಂಸ್ಥೆಯ ಮೂಲಕ ಪ್ರವಾಸವನ್ನು ಆಯೋಜಿಸುತ್ತಾರೆ. ಸೋ ನೀವು ಐಸ್‍ಲ್ಯಾಂಡಿಗೆ ಹೋಗಬೇಕು ಎಂದು ಕನಸು ಕಾಣುತ್ತಿದ್ದರೆ ಈ ವೆಬ್‍ಸೈಟ್ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಆಸಕ್ತರು info@wildvoyager.com ಮೇಲ್ ಮಾಡುವ  ಮೂಲಕ ನೇರವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

    ಪ್ರವಾಸಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಈ ವೆಬ್‍ಸೈಟನ್ನು ಕ್ಲಿಕ್ಕಿಸಿ: https://wildvoyager.com/destinations/iceland

  • ನಾಸಾ ಪ್ರವಾಸಕ್ಕೆ ಹೋಗಲಿದ್ದಾರೆ ಮಂಡ್ಯ ವಿದ್ಯಾರ್ಥಿಗಳು

    ನಾಸಾ ಪ್ರವಾಸಕ್ಕೆ ಹೋಗಲಿದ್ದಾರೆ ಮಂಡ್ಯ ವಿದ್ಯಾರ್ಥಿಗಳು

    ಮಂಡ್ಯ: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾಕ್ಕೆ ಭೇಟಿ ನೀಡೋದೇ ಹೆಮ್ಮೆಯ ವಿಷಯ. ಅಂಥದ್ರಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ವಿಶ್ವದ ಪ್ರತಿಷ್ಠಿತ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸಕ್ಕೆ ಹೋಗಲಿದ್ದಾರೆ.

    ಹೌದು. ಮಂಡ್ಯದಲ್ಲಿರುವ ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಾಸಾ ಪ್ರವಾಸಕ್ಕೆ ತೆರಳಲಿದ್ದಾರೆ. ಶಾಲೆಯ ಎಂಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ನಾಸಾಗೆ ಕಳುಹಿಸುತ್ತಿದೆ. ವಿದ್ಯಾರ್ಥಿಗಳಾದ ಸ್ವರ್ಣ, ಚಂದನ, ವಂದನಾ, ಸಾರಿಕಾ, ಚಿದಾನಂದ, ಪ್ರಣತಿ ಆರ್. ಭಾರದ್ವಜ್, ಹರ್ಷಿತ್ ಪಿ. ಆತ್ರೇಯ, ಸೋಹನ್ ಜಿ. ನಾಯಕ್‍ನನ್ನು ನಾಸಾಕ್ಕೆ ಕರೆದುಕೊಂಡು ಹೋಗಲಾಗ್ತಿದೆ.

    ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಬಗ್ಗೆ ಅಭಿರುಚಿ ಬೆಳೆಸುವುದರ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಶಾಲೆಯ ಎಲ್ಲಾ ಮಕ್ಕಳಿಗೂ ಪೂರ್ವಭಾವಿಯಾಗಿ ಪರೀಕ್ಷೆ ಮಾಡಲಾಗಿತ್ತು. ಅದ್ರಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನ ಪ್ರವಾಸಕ್ಕಾಗಿ ಆಯ್ಕೆ ಮಾಡಲಾಗಿದೆ.

    ಇದೀಗ ಮಕ್ಕಳಿಗೆ ವೀಸಾ ಬಂದಿರೋದ್ರಿಂದ ಜುಲೈನಲ್ಲಿ ಅಮೆರಿಕಾದ ಪ್ರವಾಸ ಕೈಗೊಳ್ಳಲಾಗ್ತಿದೆ. ಇನ್ನು ವಿದ್ಯಾರ್ಥಿಗಳ ಖರ್ಚು ವೆಚ್ಚವನ್ನು ಶೇ.90ರಷ್ಟು ಶಿಕ್ಷಣ ಸಂಸ್ಥೆಯೇ ಪಾವತಿ ಮಾಡುತ್ತಿದ್ದು, ಮಕ್ಕಳ ಜೊತೆಗೆ ಶಾಲೆಯಲ್ಲಿ ಕೆಲಸ ನಿರ್ವಹಿಸುವ ಮೂವರು ಸಿಬ್ಬಂದಿ ಕೂಡ ನಾಸಾಕ್ಕೆ ಪ್ರವಾಸ ಹೋಗಲಿದ್ದಾರೆ.

    ಪ್ರವಾಸದ ಬಗ್ಗೆ ಸಾಕಷ್ಟು ಉತ್ಸುಕರಾಗಿರೋ ವಿದ್ಯಾರ್ಥಿಗಳು, ಇದೊಂದು ಉತ್ತಮ ಅವಕಾಶ. ಈ ಪ್ರವಾಸ ಮುಂದಿನ ದಿನಗಳಲ್ಲಿ ನಮಗೆ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೆ ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಅವಕಾಶ ಸಿಕ್ಕಿರೋದು ಖುಷಿ ವಿಚಾರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ರೀತಿಯ ಅವಕಾಶ ಸಿಗೋದೇ ಕಡಿಮೆ. ಎಲ್ಲ ಶಾಲೆಯಲ್ಲೂ ಈ ರೀತಿಯ ಆಯೋಜನೆಯಾದ್ರೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ನಂಬರ್ 1 ಆಗಲಿದೆ ಅಂತಾ ಸಂತಸ ವ್ಯಕ್ತಪಡಿಸ್ತಿದ್ದಾರೆ.

  • ಇಂದು ಸಿಎಂ ಸಿದ್ದರಾಮಯ್ಯ ದುಬೈಗೆ ಪ್ರಯಾಣ

    ಇಂದು ಸಿಎಂ ಸಿದ್ದರಾಮಯ್ಯ ದುಬೈಗೆ ಪ್ರಯಾಣ

    ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಅವರು ದುಬೈಗೆ ತೆರಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಏರ್‍ಪೋರ್ಟ್‍ನಿಂದ ತೆರಳಲಿದ್ದು, ಭಾನುವಾರ ಸಂಜೆ ವಾಪಸ್ ಆಗಲಿದ್ದಾರೆ. ಮೂರು ದಿನಗಳ ಕಾಲ ದುಬೈನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

    ದುಬೈಗೆ ತೆರಳಿ ಇಂದು ವಿಶ್ರಾಂತಿ ಪಡೆದು, ನಾಳೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಅಬುಧಾಬಿ ಪ್ರವಾಸ ಕೈಗೊಳ್ಳಲಿದ್ದು, ಶೇಕ್ ಜೈದಾ ಮಸೀದಿಗೆ ಭೇಟಿ ನೀಡಲಿದ್ದಾರೆ.

    ಶನಿವಾರ ಸಂಜೆ ಅಲ್ಲಿನ ಉದ್ಯಮಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯ ನಂತರ ಭಾನುವಾರ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.

     

  • ಬೆಳಗಾವಿ ಮೂಲದ 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

    ಬೆಳಗಾವಿ ಮೂಲದ 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

    ಬೆಳಗಾವಿ: ನಗರದ ಮರಾಠ ಮಂಡಳ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದಾಗ ಮಹಾರಾಷ್ಟ್ರದ ಮಾಲ್ವಾನ್ ಬೀಚ್‍ನಲ್ಲಿ ಇಂದು ಬೆಳಗ್ಗೆ ನೀರುಪಾಲಾಗಿದ್ದಾರೆ.

    ಸಂತೋಷ್, ಉಜಾಮಿಲ್, ಅನಿಕೇತ್, ಕಿರಣ್, ನಿತಿನ್, ಅನಿತಾ, ಆರತಿ ಮತ್ತು ಆಕಾಂಕ್ಷ ಮೃತ ವಿದ್ಯಾರ್ಥಿಗಳು. 40 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ನೀರು ಪಾಲಾಗುತ್ತಿದ್ದ ಅವಧೂತ್, ಮಾಯಾ ಮತ್ತು ಮಹೇಶ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಮೃತರೆಲ್ಲರೂ 22 ರಿಂದ 25 ವಯಸ್ಸಿನವರು ಎಂದು ಹೇಳಲಾಗಿದೆ.

    ಇದು ಶೈಕ್ಷಣಿಕ ಪ್ರವಾಸ ಅಲ್ಲ. ನಮ್ಮ ಕಾಲೇಜಿನಿಂದ ಯಾವುದೇ ಅನುಮತಿಯನ್ನು ಕೊಟ್ಟಿಲ್ಲ. ವಿದ್ಯಾರ್ಥಿಗಳು ಖಾಸಗಿಯಾಗಿ ಪ್ರವಾಸ ಹೋಗಿದ್ದು, ಪ್ರವಾಸಕ್ಕೆ ಹೋಗಿರುವ ವಿಷಯ ನಮಗೆ ಹಾಗು ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಿರಲಿಲ್ಲ. ಇಂದು ಬೆಳಗ್ಗೆ 11 ಗಂಟೆಯ ವೇಳೆಯಲ್ಲಿ ನಮಗೆ ವಿಷಯ ಗೊತ್ತಾಗಿದೆ ಎಂದು ಕಾಲೇಜಿನ ಉಪನ್ಯಾಸಕಿ ರಾಜಶ್ರೀ ಹಾಲ್‍ಗೇಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಆದರೆ ಪ್ರವಾಸಕ್ಕೆಂದು ಪುಣೆಗೆ ಹೋಗಬೇಕಾಗಿದ್ದವರು ಮಾರ್ಗ ಬದಲಿಸಿ ಮಾಲ್ವಾನ್‍ನ ವೈರಿ ಬೀಚ್‍ಗೆ ಹೋಗಿದ್ದಾರೆ. ವಿದ್ಯಾರ್ಥಿಗಳ ಜೊತೆ ಮಹೇಶ್ ಎಂಬ ಕಿರಿಯ ಉಪನ್ಯಾಸಕರು ಸಹ ಹೋಗಿದ್ದರು ಎಂದು ತಿಳಿದುಬಂದಿದೆ. ಆದರೆ ಕಾಲೇಜು ಆಡಳಿತ ಮಂಡಳಿ ಇದರ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ನೀಡುತ್ತಿಲ್ಲ. ಮೃತದೇಹಗಳನ್ನು ಮಾಲ್ವಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

     

    https://www.youtube.com/watch?v=bF5ytf3pHSA